ಕಾಟನ್ ದಾರದಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ: ಬೆಳಗಾವಿ ಅಭಿಮಾನಿಯಿಂದ ವಿಶೇಷ ಉಡುಗೊರೆ ಸಿದ್ಧ
ಫೆ 27 ರಂದು ಕುಂದಾನಗರಿ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಲು ಅಭಿಮಾನಿ ಒಬ್ಬರು ವಿಶೇಷ ಉಡುಗೊರೆ ಸಿದ್ಧಪಡಿಸಿದ್ದಾರೆ.
ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ರಾಜ್ಯದ ಪ್ರಮುಖ ಮೂರು ಪಕ್ಷಗಳು ಮತದಾರರನ್ನು ಓಲೈಸಲು ಎಲ್ಲಾ ರೀತಿಯಿಂದಲೂ ಕಸರತ್ತು ಮಾಡುತ್ತಿದ್ದಾರೆ. ಇತ್ತ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಣ್ಣು ಇಟ್ಟಿದ್ದು, ಬೆಳಗಾವಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಾಳೆ (ಫೆ. 27) ಕುಂದಾನಗರಿ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ನಾಳೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ನೀಡಲು ಅಭಿಮಾನಿ ಒಬ್ಬರು ವಿಶೇಷ ಉಡುಗೊರೆ ಸಿದ್ಧಪಡಿಸಿದ್ದಾರೆ.
ಕಾಟನ್ ದಾರದಿಂದ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬೆಳಗಾವಿಯ ಟೈಲರ್ ಸಚಿನ್ ಕಾಕಡೆ ಅವರು ಕಾಟನ್ ದಾರದಿಂದ ಹನ್ನೆರಡೂವರೆ ಲಕ್ಷ ಹೊಲಿಗೆಯಿಂದ ಪ್ರಧಾನಿ ಮೋದಿ ಫೋಟೋ ತಯಾರಿಸಿದ್ದಾರೆ. ಸಚಿನ್ ಕಾಕಡೆ ನೇತೃತ್ವದಲ್ಲಿ 10 ಜನರ ತಂಡದಿಂದ, ಒಂದು ತಿಂಗಳು ಕಾಲ ಶ್ರಮವಹಿಸಿ ಈ ವಿಶೇಷ ಫೋಟೋವನ್ನು ನಿರ್ಮಾಣ ಮಾಡಲಾಗಿದೆ. ಇತ್ತೀಚಿಗೆ ಮೋದಿ ಹುಬ್ಬಳ್ಳಿಗೆ ಬಂದಾಗ ಸಚಿನ್ ಕಾಕಡೆ ಅವರು ಮೋದಿ ಜಾಕೇಟ್ ತಯಾರಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ರಮೇಶ್ ಜಾರಕಿಹೊಳಿ, ಅಭಯ ಪಾಟೀಲ್ ಮೂಲಕ ಮೋದಿ ಅವರಿಗೆ ನೀಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಳೇ ಮೈಸೂರು ಭಾಗದ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲ: ಸಿ.ಎಂ.ಇಬ್ರಾಹಿಂ ವಿವಾದಾತ್ಮಕ ಹೇಳಿಕೆ
ಒಟ್ಟು 2,250 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಿರುವ ಮೋದಿ
ನಾಳೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಮಾವೇಶದ ವೇದಿಕೆಗೆ ಆಗಮಿಸುವ ಮುನ್ನ ಚೆನ್ನಮ್ಮ ಸರ್ಕಲ್ನಿಂದ ಸುಮಾರು 10.7 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಜಿಲ್ಲೆಯ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶ ವೇದಿಕೆಗೆ ಆಗಮಿಸಲಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ. 190 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ, ನೂತನ ಕಟ್ಟಡ ನಿರ್ಮಾಣ, ಪ್ಲಾಟ್ ಫಾರಂ ನವೀಕರಣ ಮಾಡಲಾಗಿದೆ.
ಮಹನೀಯರ ಭಾವಚಿತ್ರ ಅಳವಡಿಕೆ ಮಾಡಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿದ್ದು, ಘಟಪ್ರಭಾ-ಬೆಳಗಾವಿ-ಲೋಂಡಾ ಡಬಲ್ ಲೈನ್ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. 1,120 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ, 1,132 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಮತ್ತು ಬೆಳಗಾವಿ-ಧಾರವಾಡ ರೈಲು ಮಾರ್ಗದ ಕಾಮಗಾರಿಗೆ ಸೇರಿದಂತೆ ಒಟ್ಟು 2,250 ಕೋಟಿ ವೆಚ್ಚದ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಅನ್ನೋದು ಊಹಾಪೋಹ, ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡ್ತೇನೆ: ಜಗದೀಶ್ ಶೆಟ್ಟರ್
ಭಾರಿ ಪೊಲೀಸ್ ಬಂದೋಬಸ್ತ್
ಇನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಮುನ್ನೆಚ್ಚರಿಕೆಯಿಂದ ಬೆಳಗಾವಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಈ ಕುರಿತಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾತನಾಡಿ, ಬೆಳಗಾವಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿದ್ದೇವೆ. ರೋಡ್ ಶೋ ಸ್ಥಳ, ಸಮಾವೇಶ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೆಲಿಪ್ಯಾಡ್, ವೇದಿಕೆ, ಎಂಟ್ರಿ ಗೇಟ್ ಬಳಿ ಓರ್ವ ಎಸ್‌ಪಿ, ಪಾರ್ಕಿಂಗ್, ಊಟದ ಸ್ಥಳದಲ್ಲಿ ಓರ್ವ ಎಸ್‌ಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಮೋದಿ ರೋಡ್ ಶೋ ನಡೆಸುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ನಾಳೆ ಬದಲಿ ರಸ್ತೆಗಳಲ್ಲಿ ಸಂಚರಿಸುವಂತೆ ಸಾರ್ವಜನಿಕರಿಗೆ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Sun, 26 February 23