ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ

ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ನಿನ್ನೆ ಬೆಳಗ್ಗೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಇದೀಗ ರಾಜೀನಾಮೆ ವಾಪಸ್​ ಪಡೆದುಕೊಂಡಿದ್ದಾರೆ. ಸಭೆ ಮೇಲೆ ಸಭೆ, ಮನವೊಲಿಸುವ ಪ್ರಯತ್ನದ ಬಳಿಕ ಇದೀಗ ಈ ನಿರ್ಧಾರಕೈಗೊಳ್ಳಲಾಗಿದೆ. ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್​ ಪಡೆದುಕೊಂಡಿರುವ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ
ರಾಮಲಿಂಗಾರೆಡ್ಡಿ
Edited By:

Updated on: Jun 06, 2026 | 5:15 PM

ಬೆಂಗಳೂರು, ಜೂನ್​​ 06: ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ರಾಮಲಿಂಗಾರೆಡ್ಡಿ (RamalingaReddy) ಸಚಿವ ಸ್ಥಾನಕ್ಕೆ ರಾಜೀನಾಮೆ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಸಾಲು ಸಾಲು ಸಭೆಗಳ ಬಳಿಕ ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಅಲ್ಲಿಗೆ ಸಿಎಂ ಡಿಕೆ ಶಿವಕುಮಾರ್​ (DK Shivakumar) ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಾಂಶಗಳು

  • ರಾಮಲಿಂಗಾರೆಡ್ಡಿ ಮನವೊಲಿಕೆ ಯಶಸ್ವಿ
  • ರಾಜೀನಾಮೆ ವಾಪಸ್ ಪಡೆದುಕೊಂಡ ರಾಮಲಿಂಗಾರೆಡ್ಡಿ
  • ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ
  • ಹೆಚ್ಚುವರಿ ಖಾತೆ ನೀಡುವುದಾಗಿ ಹೈಕಮಾಂಡ್ ಭರವಸೆ

ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಿಷ್ಟು

ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿ ಮತ್ತು ಕೃಷ್ಣ ಭೈರೇಗೌಡ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಚರ್ಚೆ ಮಾಡಿದ್ದಾರೆ. ಸುಮಾರು 1 ಗಂಟೆ ಕಾಲ ಸಮಾಲೋಚನೆ ಮಾಡಲಾಗಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದಾರೆ. ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಇಲ್ಲ: ಕಡ್ಡಿ ಮುಂರಿದಂತೆ ಹೇಳಿದ ಹೈಕಮಾಂಡ್

ರಾಮಲಿಂಗಾರೆಡ್ಡಿ ಪಕ್ಷದ ಹಿರಿಯ ನಾಯಕರು. ಹಲವು ಸಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಕಾಂಗ್ರೆಸ್​​ ಆಸ್ತಿ. ಅವರು ರಾಜೀನಾಮೆ ನೀಡಿದ ಬಳಿಕ ನಾವು ಮಾತಾಡಿದ್ದೇವೆ. ಸ್ವಲ್ಪ ತಪ್ಪು ತಿಳುವಳಿಕೆ ಆಗಿತ್ತು. ಇದೀಗ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ಸುರ್ಜೇವಾಲ ವಾಗ್ದಳಿ 

ಇನ್ನು ಬಿಜೆಪಿ ವಿರುದ್ಧ ಕಿಡಿಕಾರಿದ ಸುರ್ಜೇವಾಲ, ರಾಮಲಿಂಗಾರೆಡ್ಡಿ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ. ಸಚಿವರಾಗಿ ರಾಮಲಿಂಗಾರೆಡ್ಡಿ ಮುಂದುವರಿಯುತ್ತಿರುವ ವಿಚಾರ ಬಿಜೆಪಿಗೆ ಇದು ಶಾಕ್ ಆಗಬಹುದು. ಬಿಜೆಪಿಯವರು ದೊಡ್ಡ ಬಂಡಾಯ ಆಗಬಹುದೆಂದು ಅಂದುಕೊಂಡಿದ್ದರು. ಅಧಿಕಾರ ಹಂಚಿಕೆಯನ್ನು ಯಾವುದೇ ಅಡೆತಡೆ ಇಲ್ಲದೇ ಮಾಡಲಾಗಿದೆ. ಜನತಾ ನ್ಯಾಯಾಲಯದಲ್ಲಿ ಬಿಜೆಪಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಗ್ಯಾರಂಟಿಗಳ ಮೂಲಕ ಕರ್ನಾಟಕದ ಜನರಿಗೆ ಅನುಕೂಲ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಹೆಚ್ಚುವರಿ ಖಾತೆ ಭರವಸೆ ನೀಡಿದ ಹೈಕಮಾಂಡ್

ಇನ್ನು ರಾಮಲಿಂಗಾರೆಡ್ಡಿಗೆ ಹೆಚ್ಚುವರಿ ಖಾತೆ ನೀಡುವುದಾಗಿ ಹೈಕಮಾಂಡ್ ಭರವಸೆ ಬೆನ್ನಲ್ಲೇ ರಾಜೀನಾಮೆ ವಾಪಸ್‌ಗೆ ತೀರ್ಮಾನಿಸಲಾಗಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಇಂದೇ ಅಧಿಕೃತವಾಗಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:33 pm, Sat, 6 June 26

Anil Kalkere
Follow Us