Karnataka Cabinet expansion: ಎಸ್ ಎಸ್ ಮಲ್ಲಿಕಾರ್ಜುನ್ ರಾಜಕೀಯಕ್ಕೆ ಅನಿರೀಕ್ಷಿತ ಆಗಮನ, ನಾಲ್ಕನೇ ಬಾರಿಗೆ ಒಲಿದು ಬಂದ ಸಚಿವ ಸ್ಥಾನ
ರಾಜಕೀಯಕ್ಕೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕಿರಿಯ ಪುತ್ರನಾಗಿರುವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇದೀಗ ಸಚಿವ ಸ್ಥಾನ ಒದಗಿ ಬಂದಿದೆ. ಇವರ ಶಿಕ್ಷಣ, ರಾಜಕೀಯ ಜೀವನದ ಕುರಿತು ಮಾಹಿತಿ ಇಲ್ಲಿದೆ ನೋಡಿ.
ದಾವಣಗೆರೆ: ಕಾಂಗ್ರೆಸ್ಸಿನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕಿರಿಯ ಪುತ್ರನಾಗಿರುವ ಎಸ್ ಎಸ್ ಮಲ್ಲಿಕಾರ್ಜುನ್ (S S Mallikarjun) ಅವರಿಗೆ ಇದೀಗ ಸಚಿವ ಸ್ಥಾನ ಒದಗಿ ಬಂದಿದೆ. ಅದರಂತೆ ಇಂದು ಪ್ರಮಾಣ ವಚನ ಮಾಡಿದರು. 1967 22 ಸಪ್ಟಂಬರ್ನಲ್ಲಿ ದಾವಣಗೆರೆಯಲ್ಲಿ ಜನಿಸಿದ ಇವರು ಬಿಕಾಂ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಕೈಗಾರಿಕೋದ್ಯಮಿ, ಸಕ್ಕರೆ ಕಾರ್ಖಾನೆ, ರೈಸ್ ಮಿಲ್ ಮಾಲೀಕರಾಗಿರುವ ಮಲ್ಲಿಕಾರ್ಜುನ್ ಎಸ್ ಎಸ್ ಮೆಡಿಕಲ್ ಕಾಲೇಜ್ ಚೇರಮನ್ ಆಗಿದ್ದಾರೆ. ಇನ್ನು ಇವರು 1998ರಲ್ಲಿ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. ಹೌದು ತಂದೆ ಶಾಮನೂರು ಶಿವಶಂಕರಪ್ಪ ಲೋಕ ಸಭೆಗೆ ಆಯ್ಕೆಯಾದ ಹಿನ್ನೆಲೆ ಉಪ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾದರು.
ವಿವಿಧ ಇಲಾಖೆಯಲ್ಲಿ ಸಚಿವರಾಗಿ ಸೇವೆ
ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಐದು ವರ್ಷ ಯುವ ಜನ ಸೇವೆ ಕ್ರೀಡಾ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಬಳಿಕ ಮೂರು ಸಲ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಮತ್ತೆ ಬಳಿಕ 2013 ರಲ್ಲಿ ಮೂರನೇ ಸಲ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕೆ ಹಾಗೂ ಸಕ್ಕರೆ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಬಳಿಕ 2018ರಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ ವಿರುದ್ಧ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಕೇವಲ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೀಗ 2023ರಲ್ಲಿ ಮತ್ತೆ ವಿಧಾನಸಭೆಗೆ ನಾಲ್ಕನೇ ಸಲ ಆಯ್ಕೆಯಾಗುವ ಮೂಲಕ ಮತ್ತೆ ಸಚಿವ ಸ್ಥಾನದ ಭಾಗ್ಯ ಒದಗಿ ಬಂದಿದೆ.
ಇದನ್ನೂ ಓದಿ:ಸಚಿವ ಸಂಪುಟದಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಸಿಎಂ ಸಿದ್ದರಾಮಯ್ಯ
ಕುಟುಂಬ
ಕಾಂಗ್ರೆಸ್ಸಿನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕಿರಿಯ ಪುತ್ರನಾಗಿರುವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಂದೆ ಲೋಕಸಭೆಗೆ ಸ್ಪರ್ಧಿಸಿದ್ದ ಕಾರಣಕ್ಕೆ ರಾಜಕೀಯಕ್ಕೆ ಧುಮುಕಿದರು. ಸಾಧು ವೀರಶೈವ ಲಿಂಗಾಯತರಾಗಿರುವ ಇವರು ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನ ವರಿಸಿದರು. ಇವರಿಗೆ ಇಬ್ಬರು ಪುತ್ರರಾದ ಸಮರ್ಥ ಹಾಗೂ ಶಿವು ಇದ್ದು, ಓರ್ವ ಪುತ್ರಿ ಪ್ರತಿಕ್ಷಾ ಎಂಬ ಮಗಳಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Sat, 27 May 23