ನವದೆಹಲಿ, (ಫೆಬ್ರವರಿ 02): ಕೇಂದ್ರದ ಮಧ್ಯಂತರ ಬಜೆಟ್ (Budget 2024) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್ (DK Sureseh), ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇನ್ನು ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಪ್ರತಿಕ್ರಿಯಿಸಿ, ಕನಕಪುರದ ಬಂಡೆ ಒಡೆದಷ್ಟು ಸುಲಭ ಅಲ್ಲ ದೇಶ ಒಡೆಯುವುದು ಎಂದು ಸಂಸದ ಡಿಕೆ ಸುರೇಶ್ಗೆ ಟಾಂಗ್ ಕೊಟ್ಟಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಹುಚ್ಚ ಅನ್ನಬೇಕೊ ಅರೇ ಹುಚ್ಚ ಅನ್ನಬೇಕೋ ರಾಹುಲ್ ಗಾಂಧಿ ಭಾರತ್ ಜೊಡೊ ಯಾತ್ರೆ ಮಾಡುತ್ತಿದ್ದಾನೆ, ಡಿಕೆ ಸುರೇಶ್ ಗೆ ಕನಕಪುರದ ಬಂಡೆ ಒಡೆದಷ್ಟು ಸುಲಭ ಅಲ್ಲ ದೇಶ ಒಡೆಯುವುದು. ನೂರಾರು ಜನರ ತಪ್ಪಸ್ಸಿನಿಂದ ದೇಶ ಕಟ್ಟಿದೆ. ಅದನ್ನು ಒಡೆಯುವುದು ಮೂರ್ಖತನದ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರತ್ಯೇಕ ರಾಷ್ಟ್ರ ಹೇಳಿಕೆ; ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ಗೆ ಸಂಕಷ್ಟ
ಈಗಾಗಲೇ ಕಾಂಗ್ರೆಸ್ ನಾಲ್ಕು ಭಾಗವಾಗಿ ದೇಶ ಒಡೆದಿದೆ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾಕ್ಕೆ ಒಂದು ಭಾಗ ನೀಡಿದೆ, ಈಗ ಉತ್ತರ ಭಾರತ, ದಕ್ಷಿಣ ಭಾರತ ಅಂತಾ ಒಡೆಯಲು ನಿಂತಿದ್ದಾರೆ. ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ಮೋದಿ ಸರ್ಕಾರ ಕನಿಷ್ಠ 10 ಪಟ್ಟು ಅನುದಾನ ನೀಡಿದೆ. ಹಿಂದುಳಿದ ರಾಜ್ಯಗಳಿಗೆ ಅನುದಾನ ಕೊಡಬೇಕು. ನರೇಂದ್ರ ಮೋದಿ ಕಾಲದಲ್ಲಿ ತೊಡೊ ನಡೆಯಲ್ಲ. ಜೊಡೊ ಕೆಲಸ ನಡೆಯುತ್ತದೆ ಎಂದು ಕಿಡಿಕಾರಿದರು.
ಭಾರತದ ಅಭಿವೃದ್ಧಿ ನೋಡಿ ಪಾಕಿಸ್ತಾನದ ಜನರು ಮಾತನಾಡುತ್ತಿದ್ದಾರೆ. ಡಿಕೆ ಸುರೇಶ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದನ್ನು ಉಲ್ಲಂಘಿಸಿದ್ದಾರೆ, ಹೀಗಾಗೀ ಅವರನ್ನು ಅನರ್ಹ ಮಾಡಬೇಕು. ಮುಂದೆನೂ ಸ್ಪರ್ಧೆಗೂ ಅವಕಾಶ ಕೊಡಬಾರದು. ಕರ್ನಾಟಕಕ್ಕೆ ಅನ್ಯಾಯ ಆಗಿದ್ದರೆ ಅದು ಸೋನಿಯಾ ಗಾಂಧಿಯಿಂದ. ಕಳಸಾ ಬಂಡೂರಿಗೆ ಅವಕಾಶ ಕೊಡಲ್ಲ ಅಂದಿದ್ದರು. ಅನ್ಯಾಯ ಆಗಿದ್ದರೆ ನಾವು ಹೋರಾಟಕ್ಕೆ ಬರುತ್ತೇವೆ. ನಾನು ಮಾತನಾಡಿದ್ದೆ, ನನಗೂ ನೋಟಿಸ್ ಬಂದಿವೆ ಎಂದು ಒತ್ತಾಯಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮೌನ ಆಗಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿ, ದಿನ ಮಾತನಾಡಿದ್ರೆ ಹಾದಿಬೀದಿಯಲ್ಲಿ ಮಾತನಾಡೊ ಹುಚ್ಚ ಅಂತಾರೆ ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತೇನೆ. ನಾನು ಹಾದಿಬೀದಿಯಲ್ಲೇ ಇರೋನು ಅಲ್ಲೆ ಮಾತನಾಡುತ್ತೇನೆ. ನಾನೇನು ವಿಜಯೇಂದ್ರನ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಮಾತನಾಡಲ್ಲ. ನಾನು ಯಾವ ಅರುಣ್ ಸಿಂಗ್ ಅನ್ನು ಭೇಟಿ ಮಾಡಲ್ಲ. ನಾನು ಯಾವ ಸಿಂಗ್ ಗಳನ್ನು ಭೇಟಿ ಮಾಡಲ್ಲ. ನಾನು ಅಮಿತ್ ಶಾ, ಜೆ.ಪಿ ನಡ್ಡಾ ಮಾತ್ರ ಭೇಟಿಯಾಗುವುದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ