ಪರಿಷತ್ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಿಜೆಪಿ ಬಂಡಾಯ ಅಭ್ಯರ್ಥಿ
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ನಾರಾಯಣಸ್ವಾಮಿ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿ ರಂಗನಾಥ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಉಭಯ ಪಕ್ಷಗಳ ನಾಯಕರ ಮನವೊಲಿಕೆ ಯಶಸ್ವಿಯಾಗಿದೆ.
ಬೆಂಗಳೂರು, (ಫೆಬ್ರವರಿ 02): ಇದೇ ಫೆಬ್ರವರಿ 16ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ನಾರಾಯಣಸ್ವಾಮಿ ಅವರು ಇದೀಗ ತಮ್ಮ ನಾಪಮತ್ರ ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ನಾರಾಯಣಸ್ವಾಮಿ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಇದೀಗ ನಾರಾಯಣಸ್ವಾಮಿ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿಯಾಗಿರುವ ರಂಗನಾಥ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.
ನಾರಾಯಣಸ್ವಾಮಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಬಿಜೆಪಿ, ಜೆಡಿಎಸ್ನ ರಂಗನಾಥ್ ಅವರಿಗೆ ಬೆಂಬಲ ಘೋಷಿಸಿತ್ತು. ಇದರಿಂದ ನಾರಾಯಣಸ್ವಾಮಿ ಅಸಮಾಧಾನಗೊಂಡು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಇದೀಗ ಬಿಜೆಪಿ ನಾಯಕರ ಮನವೊಲಿಕೆ ನಾರಾಯಣಸ್ವಾಮಿ ಮಣೆದು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿ ನಾಮಪತ್ರ ವಾಪಸ್ ಪಡೆಯುತ್ತೇನೆ. ಮೂರು ದಶಕದಿಂದ ಭಾರತೀಯ ಜನತಾ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಬಿಟ್ಟುಕೊಡಲ್ಲ. ಪುಟ್ಟಣ್ಣ ಕುತಂತ್ರ ಎಲ್ಲಾ ಶಿಕ್ಷಕರಿಗೂ ಗೊತ್ತಿದೆ. ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೆ. ಆದ್ರೆ, ಇದೀಗ ನಾಮಪತ್ರ ವಾಪಸ್ ಪಡೆದು ಎ.ಪಿ.ರಂಗನಾಥ್ಗೆ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.