ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದ ಬೆಂಬಲಿಗರು, ಸಿಟ್ಟಾದ ಸಿದ್ದರಾಮಯ್ಯ: ಡಿಕೆಶಿ ಏನಂದ್ರು ನೋಡಿ!
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಶಾಸಕ ಶಿವಲಿಂಗೇಗೌಡರನ್ನು ಮಂತ್ರಿ ಮಾಡುವಂತೆ ಬೆಂಬಲಿಗರು ಕೂಗಿದರು. ಬೆಂಬಲಿಗರ ಕೂಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದರು.
ಹಾಸನ, ಜುಲೈ 26: ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದ (Karnataka Government) ವತಿಯಿಂದ ಶನಿವಾರ (ಜು.26) ಫಲಾನುಭವಿಗಳ ಸಮಾವೇಶ ನಡೆಯಿತು. ಒಟ್ಟು 600 ಕೋಟಿಗೂ ಅದಿಕ ಮೊತ್ತದ 11 ಕಾಮಗಾರಿಗಳ ಲೋಕಾರ್ಪಣೆ ಹಾಗೂ 23 ನೂತನ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು. ಈ ಫಲಾನುಭವಿಗಳ ಸಮಾವೇಶದಲ್ಲಿ ಸ್ವಾರಸ್ಯಕರ ಸಂಗತಿಯೊಂದು ನಡೆಯಿತು. ಶಾಸಕ ಶಿವಲಿಂಗೇಗೌಡ (Shivalingegowda) ಅವರನ್ನು ಮಂತ್ರಿ ಮಾಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಕ್ರೋಶಗೊಂಡರೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಶಾಸಕ ಶಿವಲಿಂಗೇಗೌಡ ಅವರನ್ನು ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಫಲಾನುಭವಿಗಳ ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, “ನಮ್ಮ ಪಕ್ಷ ಇರುವುದು ಜನರಿಗೆ ಸಹಾಯ ಮಾಡಲು. ನಾನು ಕೈ ಮುಗಿತಿನಿ ಸಿಎಂ, ಡಿಸಿಎಂ ಅವರೇ ಆದಷ್ಟು ಬೇಗ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡಿ” ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಶಾಸಕರು ಎಲ್ಲೆಡೆ ಇದ್ದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು” ಎಂದರು. ಈ ವೇಳೆ ಅಭಿಮಾನಿಗಳು, ಕೆ.ಎಂ.ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದರು. “ಮಾಡ್ತೀನಿ ಬಿಡ್ರಿ ಆಯ್ತು ಆಯ್ತು, ಅದೆಲ್ಲ ಅಂಗಡಿಯಲ್ಲಿ ಸಿಗಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಕೊನೆಗೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಆರಂಭಿಸಿದರು. ಭಾಷಣದ ಮಧ್ಯೆ ಸಿಎಂ ಸಿದ್ದರಾಮಯ್ಯ ” ಶಾಸಕ ಶಿವಲಿಂಗೇಗೌಡ ಅವರಿಗೆ ಉತ್ತಮ ಭವಿಷ್ಯವಿದೆ” ಎಂದರು. ಈ ವೇಳೆ ಶಿವಲಿಂಗೇಗೌಡ ಅವರ ಬೆಂಬಲಿಗರು ಅವರನ್ನು ಮಂತ್ರಿ ಮಾಡಿ ಎಂದು ಕೂಗಿದರು. ಆಗ, ಸಿಎಂ ಸಿದ್ದರಾಮಯ್ಯ ಅವರು ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟಾದರು. ಆದರೂ ಜನರು ಕೂಗುತ್ತಿದ್ದರಿಂದ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿ ತಮ್ಮ ಕುರ್ಚಿಯತ್ತ ಆಗಮಿಸಿದರು.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಜತೆ ಸುರ್ಜೇವಾಲ ಸಭೆ? ಸಚಿವ ರಾಜಣ್ಣ, ಜೆಡಿಎಸ್ ತೀವ್ರ ಆಕ್ಷೇಪ
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಮಾಧಾನಗೊಳಿಸಿದ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಭಾಷಣ ಮುಂದುವರಿಸಿ, “ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ. ಆದರೆ ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ” ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವರುಗಳಾದ ಜಮೀರ್ ಅಹ್ಮದ್, ಕೆ ಎನ್ ರಾಜಣ್ಣ ಮತ್ತು ಶಾಸಕ ಶಿವಲಿಂಗೇಗೌಡ ಭಾಗಿಯಾಗಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sat, 26 July 25



