ಬೆಂಗಳೂರಿಗೆ ಬರುವಂತೆ ಕಾಂಗ್ರೆಸ್ ಶಾಸಕರಿಗೆ, ಪರಿಷತ್ ಸದಸ್ಯರಿಗೆ ಸೂಚಿಸಿದ ಸಿದ್ದರಾಮಯ್ಯ, ಏನು ವಿಶೇಷ?
ಕಾಂಗ್ರೆಸ್ ನಾಯಕರು ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಇದರ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಪಕ್ಷದ ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಬೆಂಗಳೂರು: ಮುಂದಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆ ಹೊರಟ್ಟಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಹೌದು…ಎಐಸಿಸಿ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಬೆಂಗಳೂರಿಗೆ ಬರುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.
ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅ. 16 ಸಂಜೆಯೊಳಗೆ ಬೆಂಗಳೂರಿಗೆ ಬರುವಂತೆ ಸಂದೇಶ ರವಾನಿಸಿದ್ದಾರೆ.
ಜಾರಕಿಹೊಳಿ ಬುಟ್ಟಿಗೆ ಕೈ ಹಾಕಿದ ಎಚ್ಡಿಕೆ, ಮತ್ತೆ ರಾಜಕೀಯ ಧೃವೀಕರಣಕ್ಕೆ ಸಾಕ್ಷಿಯಾಗತ್ತಾ ರಾಜ್ಯ ರಾಜಕಾರಣ?
ತೀವ್ರ ಕುತೂಹಲ ಮೂಡಿಸಿರುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿತರೂರ್ ನಡುವೆ ಹಣಾಹಣಿ ಏರ್ಪಟ್ಟಿದೆ. ಇದೇ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಯಾರು ಗೆಲ್ಲಲ್ಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಪರ ಮತಯಾಚನೆ ಪ್ರಾರಂಭಿಸಿದ್ದಾರೆ. ಮಾಜಿ ಸಚಿವ ಕೃಷ್ಣಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ, ಶಾಸಕರಾದ ಹ್ಯಾರಿಸ್, ಬೈರತಿ ಸುರೇಶ್, ಯು.ಬಿ.ವೆಂಕಟೇಶ್, ಶಿವಣ್ಣ ನೇತೃತ್ವದ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಪರ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದ 479 ಪಿಸಿಸಿ ಪ್ರತಿನಿಧಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ 15 ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕುವ ಅರ್ಹತೆ ಹೊಂದಿದ್ದಾರೆ. ಇವರೆಲ್ಲರೂ ಖರ್ಗೆ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಪ್ರಚಾರ ನಿಯೋಗ ಮನವಿ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಇನ್ ಚಾರ್ಜ್ ಸೆಕ್ರೆಟರಿ, ಜಂಟಿ ಕಾರ್ಯದರ್ಶಿ, ಪ್ರದೇಶ ಕಮಿಟಿ ಅಧ್ಯಕ್ಷಕರು, ಕಾಂಗ್ರೆಸ್ ಲೆಜಿಸ್ಲೇಟೀವ್ ಪಾರ್ಟಿ , ಪ್ರಮುಖ ಜವಾಬ್ದಾರಿ ಹೊತ್ತಿರುವ ಪಕ್ಷದ ನಾಯಕರು ಅಭ್ಯರ್ಥಿಗಳ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆಪ್ರಚಾರ ಮಾಡಬೇಕು ಎಂದಿದ್ದರೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಪ್ರಚಾರದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.
22 ವರ್ಷ ಹಿಂದೆ ನಡೆದಿತ್ತು ‘ಕೈ’ ಅಧ್ಯಕ್ಷ ಚುನಾವಣೆ
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ 2000ರಲ್ಲಿ ಸ್ಪರ್ಧೆ ನಡೆದಿತ್ತು. ಅದಾದ ನಂತರ ಅವಿರೋಧ ಆಯ್ಕೆಗಳೇ ನಡೆದುಕೊಂಡು ಬಂದಿವೆ. 2000ರಲ್ಲಿ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಹಿರಿಯ ನಾಯಕ ಜಿತೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು. ಅರ್ಹ 7,542 ಮತಗಳ ಪೈಕಿ ಜಿತೇಂದ್ರ ಪ್ರಸಾದ್ ಕೇವಲ 94 ಮತ ಪಡೆದರೆ ಸೋನಿಯಾ ಗಾಂಧಿ 7,448 ಮತ (ಶೇ.98.75ರಷ್ಟು) ಪಡೆದು ಗೆಲ್ಲುವ ಮೂಲಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈಗ 22 ವರ್ಷ ಬಳಿಕ ಮತ್ತೆ ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿದ್ದು, ಯಾರು ಎಐಸಿಸಿ ಬಾಸ್ ಆಗಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.