ಸಿದ್ದರಾಮಯ್ಯ ಮತ್ತೊಬ್ಬ ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಲಹರ್ ಸಿಂಗ್
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಸಭಾ ಸದಸ್ಯ ಲಹರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಯಾರನ್ನಾದರೂ ಅನುಕರಿಸುವ ಮೂಲಕ ನೀವು ಇತಿಹಾಸದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ನಿಮ್ಮ ವೈಯಕ್ತಿಕ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸದಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್ 08: ಕಾಲಾವಧಿಯ ದಾಖಲೆ ಮುರಿದ ಮಾತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತೊಬ್ಬ ದೇವರಾಜ ಅರಸು ಆಗುವುದಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ನಾಯಕತ್ವದ ಸಮಸ್ಯೆಗಳೊಂದಿಗೆ ಸೆಣೆಸುತ್ತಲೇ ಇದೆ. ಸ್ಪಷ್ಟ ಬಹುಮತದ ಹೊರತಾಗಿಯೂ ಪಕ್ಷದ ನಾಯಕತ್ವದ ಗೊಂದಲ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ರಾಜಕೀಯವಾಗಿ ಗೊಂದಲಗಳು ಉಂಟಾಗಿದ್ದು ನವೆಂಬರ್ ಕ್ರಾಂತಿ ವಿಚಾರ ಸದ್ದು ಮಾಡುತ್ತಿದೆ. ಹೀಗಾಗಿ ಈ ಕುರಿತ ಎಲ್ಲಾ ಊಹಾಪೋಹಗಳಿಗೆ ಇತಿ ಶ್ರೀ ಹಾಡುವಂತೆ ಹೈಕಮಾಂಡ್ನ್ನು ಇಬ್ಬರು ಸಚಿವರು ಆಗ್ರಹಿಸಿದ್ದಾರೆಂದು ಪತ್ರಿಕೆಗಳಲ್ಲಿ ಓದಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆಯೇ ನನಗೆ ಕನಿಕರ ಮೂಡುತ್ತದೆ. ಅದು ಹೇಗೆ ತಾನೇ ಈ ಎಲ್ಲ ಬೆಳವಣಿಗೆಗಳಿಗೆ ಪೂರ್ಣವಿರಾಮ ಹಾಕಲು ಸಾಧ್ಯ? ತನ್ನ ಸಂಪನ್ಮೂಲಕ್ಕಾಗಿ ಕರ್ನಾಟಕ ಸರ್ಕಾರವನ್ನೇ ಅದು ಅವಲಂಬಿಸಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಷ್ಟರ ಮಟ್ಟಿಗೆ ಕರ್ನಾಟಕ ಸರ್ಕಾರದ ಮೇಲೆ ಅವಲಂಬಿತವಾಗಿತ್ತು ಮತ್ತು ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹೇಗೆ ದೊಡ್ಡ ಹಗರಣಕ್ಕೆ ಅದು ಕಾರಣವಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಬಿಹಾರ ಚುನಾವಣೆಯ ಸಮಯದಲ್ಲಿ ಕೂಡ ಕಾಂಗ್ರೆಸ್ ನಾಯಕರು ಇದೇ ರೀತಿ ಅವಲಂಬನೆಯನ್ನು ತೋರಿಸುತ್ತಾರಾ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಪಕ್ಷಗಳ ಆರೋಪಕ್ಕೆ ಸಿಎಂ ಟಕ್ಕರ್: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್
2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇದೆ. ಸುಸ್ಪಷ್ಟ ಬಹುಮತವಿದ್ದರೂ ಈ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸರ್ಕಾರದಂತೆಯೇ ವರ್ತಿಸುತ್ತಿದೆ. ಇದು ರಾಜ್ಯದಲ್ಲಿ ಆಡಳಿತದ ಮೇಲೆ ಸಂಪೂರ್ಣವಾಗಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಆಡಳಿತದ ಕುಸಿತ ಎಷ್ಟಾಗಿದೆ ಎಂಬುದಕ್ಕೆ ಬೆಂಗಳೂರಿನ ರಸ್ತೆಗಳ ಸ್ಥಿತಿ ನೋಡಿದರೆ ಸಾಕು. ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜನರ ಪರಿಸ್ಥಿತಿಯೇ ಎಲ್ಲವನ್ನು ವಿವರಿಸುತ್ತಿವೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿರುವ ಪ್ರತಿಯೊಬ್ಬರೂ ನವೆಂಬರ್ ಕ್ರಾಂತಿ ಬಗ್ಗೆಯೇ ಆಲೋಚಿಸುತ್ತಿದ್ದಾರೆ ಎಂದು ಲಹರ್ ಸಿಂಗ್ ಅರೋಪಿಸಿದ್ದಾರೆ.
‘ಸರ್ಕಾರದ ಖಜಾನೆ ಖಾಲಿ’
ಗ್ಯಾರಂಟಿಗಳು ಮತ್ತು ಜಾತಿ ಸಮೀಕ್ಷೆಯಿಂದಾಗಿ ಸರ್ಕಾರದ ಖಜಾನೆ ಪೂರ್ಣ ಬರಿದಾಗಿದೆ. ಕಾಂಗ್ರೆಸ್‌ನ ಒಳಗಿನಿಂದಲೇ ಸಮೀಕ್ಷೆಗೆ ದೊಡ್ಡ ಆಕ್ಷೇಪಣೆಗಳು ಕೇಳಿ ಬರುತ್ತಿವೆ ಎನ್ನುವದು ಪತ್ರಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ನಿನ್ನೆಯಷ್ಟೇ, ವಾಲ್ಮೀಕಿ ಸಮುದಾಯದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದರೊಬ್ಬರು ನಮ್ಮ ತಟ್ಟೆಯಿಂದ ಆಹಾರ ಕದಿಯಬೇಡಿ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವ ಬಗ್ಗೆ ವರದಿಯಾಗಿದೆ. ಅಂದರೆ ಸಿದ್ದರಾಮಯ್ಯನವರು ತಮ್ಮ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಮತ್ತು ವಾಲ್ಮೀಕಿ ಸಮುದಾಯದ ಪಾಲನ್ನು ಕಡಿಮೆ ಮಾಡಲು ಪ್ರಯತ್ನಿಸಬಾರದು ಎಂಬುದು ಅವರ ಮಾತಿನ ಅರ್ಥ ಎಂದು ಲಹರ್ ಸಿಂಗ್ ಹೇಳಿದ್ದಾರೆ.
ಸಮೀಕ್ಷೆ ಬಗ್ಗೆ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯಗಳಿಂದ ಬಂದ ಪ್ರತಿಕ್ರಿಯೆ ಏನು ಎಂಬುದನ್ನು ನಾವು ಈ ಹಿಂದೆ ನೋಡಿದ್ದೇವೆ. ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಪ್ರಯತ್ನಿಸಿದಾಗ ಹೀಗಾಗುತ್ತದೆ. ಕಾಂಗ್ರೆಸ್ ಸ್ನೇಹಿತರು ಹೇಳುವಂತೆ ಸಿದ್ದರಾಮಯ್ಯ ತಮ್ಮ ಕುರ್ಚಿ ಖಾಲಿ ಮಾಡಲು ನಿರ್ಧರಿಸಿದ್ದಾರೆ. ಆದರೆ ಜನವರಿ 2026ರವರೆಗೆ ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ದೇವರಾಜ ಅರಸು ದಾಖಲೆ ಹಿಂದಿಕ್ಕಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಕೇಳಿ ನನಗೆ ಬೇಸರವಾಗಿದೆ ಎಂದಿದ್ದಾರೆ.
ಅರಸು ಹಿಂದುಳಿದ ವರ್ಗಗ ಶ್ರೇಷ್ಠ ನಾಯಕ. ಅವರ ಬದ್ಧತೆ, ದೂರದೃಷ್ಟಿ ಮತ್ತು ವಿಶಾಲ ಹೃದಯದಿಂದಾಗಿ ಹಲವು ನಾಯಕರು ರಾಜಕೀಯಕ್ಕೆ ಪ್ರವೇಶಿಸಿ ನೆಲೆ ನಿಲ್ಲಲು ಸಾಧ್ಯವಾಯಿತು. ಅರಸು ಅವರು ಕರ್ನಾಟಕದಲ್ಲಿ ದಮನಿತರನ್ನು ಒಗ್ಗೂಡಿಸಿದ್ದು ಮಾತ್ರವಲ್ಲ, ಅವರಿಗೆ ರಾಜಕೀಯ ಅಧಿಕಾರ, ಸಾಮಾಜಿಕ ಸ್ಥಾನಮಾನ ನೀಡಿದ್ದರು. ಅಧಿಕಾರದಲ್ಲಿ ಅವರ ದಾಖಲೆ ಮುರಿದ ಮಾತ್ರಕ್ಕೆ ಸಿದ್ದರಾಮಯ್ಯ ಇನ್ನೊಬ್ಬ ಅರಸು ಆಗುವುದಿಲ್ಲ. ಯಾರನ್ನಾದರೂ ಅನುಕರಿಸುವ ಮೂಲಕ ನೀವು ಇತಿಹಾಸದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ನಿಮ್ಮ ವೈಯಕ್ತಿಕ ಗೆಲುವು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸದಿರಲಿ ಎಂದು ಆಶಿಸುತ್ತೇನೆ ಎಂದು ಲಹರ್ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:31 pm, Wed, 8 October 25




