ಭಾರತ್ ಜೋಡೋ ಯಾತ್ರೆಗೆ ರೆಸ್ಟ್: ನಾಗರಹೊಳೆ ಅಭಯಾರಣ್ಯದಲ್ಲಿ ಸೋನಿಯಾ, ರಾಹುಲ್ ಸಫಾರಿ
ರಾಜಕೀಯ ಜಂಜಾಟದಿಂದ ಕೊಂಚ ಬಿಡುವು ಪಡೆದುಕೊಂಡು ತಾಯಿ ಹಾಗೂ ಪುತ್ರ ನಾಗರಹೊಳೆ ಅಭಯಾರಣ್ಯ ಸುತ್ತಾಡಿ ಪ್ರಕೃತಿಯ ಸೊಬಗನ್ನು ಸವಿದರು.
ಮೈಸೂರು: ಪುತ್ರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರಗೆ ಸಾಥ್ ನೀಡಲು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸಿದ್ದಾರೆ. ಆದ್ರೆ, ನಿತ್ಯದ ರಾಜಕೀಯ ಜಂಜಾಟದಿಂದ ದೂರವಾಗಿ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ನಾಗರಹೊಳೆ ಅಭಯಾರಣ್ಯ ಸುತ್ತಿದ್ದಾರೆ.
ದಸರಾ ಹಬ್ಬ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಅಕ್ಟೋಬರ್ 4 ಹಾಗೂ 5ರಂದು ಎರಡು ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಂದು(ಅ.04) ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ.
ಇದನ್ನೂ ಓದಿ: ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಪಂಚ್
ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಕಬಿನಿ ಬಳಿಯ ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಸೋನಿಯಾ, ರಾಹುಲ್‌ಗಾಂಧಿ ಇಂದು ಮಧ್ಯಾಹ್ನ ನಾಗರಹೊಳೆ ಅಭಯಾರಣ್ಯದಲ್ಲಿ 3 ಗಂಟೆ ಕಾಲ ಸಫಾರಿ ಮಾಡಿ ಎಂಜಾಯ್ ಮಾಡಿದರು.
ರೆಸಾರ್ಟ್ ನಿಂದ ತೆರೆದ ಸಫಾರಿ ವಾಹನದಲ್ಲೇ ಮೂರು ಗಂಟೆಗಳ ಕಾಲ ನಾಗರಹೊಳೆ ಅಭಯಾರಣ್ಯ ಸುತ್ತಾಡಿ ಪ್ರಕೃತಿಯ ಸೊಬಗನ್ನು ಸವಿದರು.
ಒಂದೆಡೆ ಅಧ್ಯಕ್ಷ ಚುನಾವಣೆ ಮತ್ತೊಂದೆಡೆ ಪಕ್ಷವನ್ನು ಮುಂದಿನ ಚುನಾವಣೆಗೆ ಶತಾಯಗತಾಯವಾಗಿ ಅಧಿಕಾರಕ್ಕೆ ತರಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾಗುತ್ತಿರುವ ಜೋಡೋ ಯಾತ್ರೆಗೆ ಸಾಥ್ ನೀಡಲು ಸೋನಿಯಾ ರಾಜ್ಯಕ್ಕೆ ಆಗಮಿಸಿದ್ದಾರೆ.
ನಾಡಿದ್ದು ಸೆಪ್ಟೆಂಬರ್ 6ರಿಂದ ಮಂಡ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಹೆಜ್ಜೆ ಹಾಕುವ ಸಾಧ್ಯತೆಗಳಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 pm, Tue, 4 October 22