Telangana: ಇಂದು ತೆಲಂಗಾಣ ಸಿಎಂ ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಘೋಷಣೆ
ಮೂಲಗಳ ಪ್ರಕಾರ, ಇದೀಗ ಅಸ್ತಿತ್ವದಲ್ಲಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷವನ್ನೇ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗುವುದು.
ಹೈದರಾಬಾದ್: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತೆಲಂಗಾಣದ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (KCR) ಇಂದು ಹೊಸ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ. ಇಂದು (ಅ. 5) ಮಧ್ಯಾಹ್ನ 1.19 ಗಂಟೆಗೆ ಕೆಸಿಆರ್ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಇದಕ್ಕಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮೂಲಕ ಜನರಿಗೆ ತಮ್ಮ ನೂತನ ಪಕ್ಷದ ಅಜೆಂಡಾವನ್ನು ಸಿಎಂ ಕೆಸಿಆರ್ ತಿಳಿಸಲಿದ್ದಾರೆ.
- ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಕೆಳಕ್ಕುರುಳಿಸಬೇಕು ಎಂದು ಪಣ ತೊಟ್ಟಿರುವ ಕೆಸಿಆರ್ ವಿಜಯದಶಮಿಯಾದ ಇಂದು ಹೊಸ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ.
- ಮೂಲಗಳ ಪ್ರಕಾರ, ಇದೀಗ ಅಸ್ತಿತ್ವದಲ್ಲಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷವನ್ನೇ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗುವುದು. ಈ ಪಕ್ಷದ ಹೆಸರು ಮಾತ್ರ ಬದಲಾಗಲಿದ್ದು, ಚಿಹ್ನೆ ಹಾಗೂ ಧ್ವಜ ಬದಲಾಗುವುದಿಲ್ಲ.
- 2024ರ ಲೋಕಸಭೆ ಚುನಾವಣೆಗೆ ಕೆಸಿಆರ್ ಅವರ ಹೊಸ ಪಕ್ಷವು ಹಲವು ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಟಿಆರ್‌ಎಸ್ ಮೂಲಗಳು ತಿಳಿಸಿವೆ. ಹೊಸ ಪಕ್ಷ ಘೋಷಣೆಗೂ ಮುನ್ನ ಇಂದು ಬೆಳಿಗ್ಗೆ 11 ಗಂಟೆಗೆ ಟಿಆರ್‌ಎಸ್ ಸಾಮಾನ್ಯ ಸಭೆಯು ನಡೆಯಲಿದೆ.
- ಹೊಸ ಪಕ್ಷದ ಪ್ರಾರಂಭಕ್ಕೆ ಇಂದು ಮಧ್ಯಾಹ್ನ 1.19ಕ್ಕೆ ಶುಭ ಮುಹೂರ್ತವನ್ನು ನಿಗದಿಪಡಿಸಲಾಗಿದೆ. ಹೊಸ ಪಕ್ಷವನ್ನು ಭಾರತೀಯ ರಾಷ್ಟ್ರ ಸಮಿತಿ ಎಂದು ಕರೆಯುವ ಸಾಧ್ಯತೆಯಿದೆ.
- ಭಾನುವಾರ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ಎಲ್ಲಾ 33 ಜಿಲ್ಲಾಧ್ಯಕ್ಷರೊಂದಿಗೆ ಉಪಾಹಾರ ಕೂಟವನ್ನು ನಡೆಸಿದರು. ಈ ವೇಳೆ ಕೆಸಿಆರ್ ರಾಷ್ಟ್ರೀಯ ಪಕ್ಷ ಆರಂಭಿಸುವ ಮಾರ್ಗಸೂಚಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
- ವಿವಿಧ ವೇದಿಕೆಗಳಲ್ಲಿ ಸಿಎಂ ಕೆಸಿಆರ್ ಅವರು “ಶೀಘ್ರದಲ್ಲೇ, ರಾಷ್ಟ್ರೀಯ ಪಕ್ಷದ ರಚನೆ ಮತ್ತು ಅದರ ನೀತಿಗಳ ರಚನೆ ನಡೆಯಲಿದೆ” ಎಂದು ಪುನರುಚ್ಚರಿಸಿದ್ದರು. ಇದೀಗ ಅವರು ಬಿಜೆಪಿಯೊಂದಿಗೆ ನೇರ ಹೋರಾಟಕ್ಕೆ ಸಜ್ಜಾಗಿದ್ದಾರೆ.
- ಈ ಬಗ್ಗೆ ಬಿಜೆಪಿ ತೆಲಂಗಾಣ ವಕ್ತಾರ ಎನ್‌ವಿ ಸುಭಾಷ್ ಮಾತನಾಡಿ, ರಾಷ್ಟ್ರ ರಾಜಕಾರಣಕ್ಕೆ ಮುನ್ನುಗ್ಗುತ್ತಿರುವುದು ಕೆಸಿಆರ್ ಅವರ ಸರ್ಕಾರದ ವೈಫಲ್ಯಗಳನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ. ಹೊಸ ಪಕ್ಷಕ್ಕಾಗಿ 100 ಕೋಟಿ ರೂ. ಮೌಲ್ಯದ 12 ಆಸನಗಳ ವಿಮಾನವನ್ನು ಖರೀದಿಸಲಾಗಿದೆ. ಇದು ಸಾರ್ವಜನಿಕರ ಹಣವನ್ನು ಹೇಗೆ ದೋಚಲಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಇದನ್ನು ಬಿಜೆಪಿ ಸಹಿಸುವುದಿಲ್ಲ,” ಎಂದು ಹೇಳಿದ್ದಾರೆ.
- ನವೆಂಬರ್ 4ರಂದು ನಡೆಯಲಿರುವ ಮುನುಗೋಡು ಉಪಚುನಾವಣೆಯು ಕೆಸಿಆರ್ ಅವರ ಹೊಸ ಪಕ್ಷದ ಅಡಿಯಲ್ಲಿ ಹೋರಾಡಬೇಕಾದ ಮೊದಲ ಚುನಾವಣೆಯಾಗಿದೆ.
- ಕೆಸಿಆರ್ ಅವರ ಹೊಸ ಪಕ್ಷವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಹಾಗೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
- ಹೈದರಾಬಾದ್‌ನಲ್ಲಿ ನಡೆಯಲಿರುವ ಸಭೆಯ ನಂತರ ಕೆಸಿಆರ್ ತಮ್ಮ ಪಕ್ಷದ ಕಾರ್ಯಸೂಚಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಸಂಸತ್ತಿನ ಮತ್ತು ವಿಧಾನಸಭೆಯ ಚುನಾಯಿತ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲಾ ಪರಿಷತ್ತಿನ ಅಧ್ಯಕ್ಷರು, ಮೇಯರ್‌ಗಳು ಮತ್ತು ಪುರಸಭೆಯ ಅಧ್ಯಕ್ಷರು ಸೇರಿ 283 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.