ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಬ್ಲ್ಯಾಕ್‌ಮೇಲರ್" ಎಂದು ಕರೆದಿದ್ದಕ್ಕೆ ಟಿ.ಜೆ. ಅಬ್ರಹಾಂ ಅವರನ್ನು ಅವರು ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದ ಅಬ್ರಹಾಂ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಬ್ಲ್ಯಾಕ್‌ಮೇಲರ್ ಎಂದು ಕರೆದಿದ್ದರು.
ಬೆಂಗಳೂರು, ಅಕ್ಟೋಬರ್ 30: ತಮ್ಮನ್ನು ಬೆದರಿಕೆ ಹಕುವವನು (ಬ್ಲ್ಯಾಕ್‌ಮೇಲರ್) ಅಂತ ಕರೆದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ವಕೀಲ, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ (TJ Abraham) ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅವರಿಗೆ ಮನವಿ ಮಾಡಿದ್ದ ಅರ್ಜಿದಾರರಲ್ಲಿ ಟಿಜೆ ಅಬ್ರಹಾಂ ಸಹ ಒಬ್ಬರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿಜೆ ಅಬ್ರಾಹಾಂ, ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್‌ಮೇಲರ್ ಎಂದು ಕರೆದಿದ್ದೀರಿ. ಹೀಗಾಗಿ ನಿಮ್ಮ ವಿರುದ್ಧ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಟಿಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ರಾಜ್ಯಪಾಲರು ಜುಲೈ 26ರಂದು ಮುಖ್ಯಮಂತ್ರಿಗೆ ನೋಟಿಸ್ ಜಾರಿ ಮಾಡಿದ್ದರು. ನಿಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಏಳು ದಿನಗಳೊಳಗೆ ಉತ್ತರ ನೀಡುವಂತೆ ರಾಜ್ಯಪಾಲರು ಹೇಳಿದ್ದರು.
ಈ ವಿಚಾರವಾಗಿ ಆಗಸ್ಟ್ 2ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಜೆ.ಅಬ್ರಹಾಂ ಅವರ ಪೂರ್ವಾಪರ ನೋಡಿದರೆ ಅವರೊಬ್ಬ ಬ್ಲ್ಯಾಕ್‌ಮೇಲರ್. ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳುವುದು ಕಾನೂನು ಬಾಹಿರ. ಈ ರೀತಿ ಹಲವರ ವಿರುದ್ಧ ದೂರು ನೀಡುತ್ತಿದ್ದಾರೆ. ನಾನು ಅಂತಹ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಟಿಜೆ ಅಬ್ರಾಹಂ, ಸಿದ್ದರಾಮಯ್ಯ ಅವರ ಹೇಳಿಕೆಯಿಂದ ನನಗೆ ನೋವಾಗಿದೆ ಮತ್ತು ಮಾನಹಾನಿಯಾಗಿದೆ. ನನ್ನನ್ನು ಬ್ಲ್ಯಾಕ್‌ಮೇಲರ್ ಎಂದು ಕರೆದಿದ್ದಕ್ಕಾಗಿ ಲೀಗಲ್ ನೋಟಿಸ್ ನೀಡುತ್ತೇನೆ ಎಂದಿದ್ದರು.
ಇದನ್ನೂ ಓದಿ: ಅ.28ರಂದು ಮುಡಾ ಕೇಸ್ಗೆ ಹೊಸ ರೂಪ: ಹೊಸ ಬಾಂಬ್ ಸಿಡಿಸಿದ ದೂರುದಾರ ಅಬ್ರಾಹಂ!
ಸಿದ್ದರಾಮಯ್ಯ ಅವರೇ ನಿಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುಬೇಕು. ಈ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮತ್ತು ಸಾರ್ವಜನಿಕ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾನು ನಿಮ್ಮ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊದಕ್ಕಮೆ ದಾಖಲಿಸುತ್ತೇನೆ ಎಂದು ತಿಳಿಸಿದ್ದರು.
ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಮುಡಾ ಹಗರಣ ತನಿಖೆಯನ್ನು ಮೈಸೂರಿನ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸುತ್ತಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ