ಶಿವಸೇನಾದ ನೇತೃತ್ವ ಯಾರಿಗೆ? ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯುವಂತೆ ಸುಪ್ರೀಂಗೆ ಠಾಕ್ರೆ ಬಣ ಮನವಿ
ಉದ್ಧವ್ ಠಾಕ್ರೆ ವಿರುದ್ದ ಬಂಡಾಯವೆದ್ದ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಅರ್ಜಿ ಬಗ್ಗೆ ಇನ್ನೂ ನಿರ್ಧಾರ ಬಂದಿಲ್ಲ. ಹೀಗಿರುವಾಗ ಅಲ್ಲಿಯವರೆಗೆ ಶಿವಸೇನಾದ ನೇತೃತ್ವ ಯಾರಿಗೆ ಎಂಬುದರ ಬಗ್ಗೆ ನಿರ್ಧರಿಸುವುದು ಬೇಡ ಎಂದ ಠಾಕ್ರೆ ಬಣ ಹೇಳಿದೆ.
ದೆಹಲಿ: ಶಿವಸೇನಾ (Shiv Sena) ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದಲ್ಲಿರಬೇಕೆ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ನೇತೃತ್ವದಲ್ಲಿರಬೇಕೆ ಎಂಬುದರ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯಬೇಕು ಎಂದು ಕೋರಿ ಉದ್ಧವ್ ಬಣ ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಿದೆ. ಉದ್ಧವ್ ಠಾಕ್ರೆ ವಿರುದ್ದ ಬಂಡಾಯವೆದ್ದ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಅರ್ಜಿ ಬಗ್ಗೆ ಇನ್ನೂ ನಿರ್ಧಾರ ಬಂದಿಲ್ಲ. ಹೀಗಿರುವಾಗ ಅಲ್ಲಿಯವರೆಗೆ ಶಿವಸೇನಾದ ನೇತೃತ್ವ ಯಾರಿಗೆ ಎಂಬುದರ ಬಗ್ಗೆ ನಿರ್ಧರಿಸುವುದು ಬೇಡ ಎಂದ ಠಾಕ್ರೆ ಬಣ ಹೇಳಿದೆ. ಬಿಜೆಪಿ ಸಹಕಾರದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ಶಿಂಧೆ ತಾವೇ ನಿಜವಾದ ಶಿವಸೇನಾ ಎಂದು ಹೇಳುತ್ತಿದೆ. ಶಿವಸೇನಾಕ್ಕೆ ಯಾರು ನೇತೃತ್ವ ವಹಿಸಬೇಕು ಎಂಬುದ ಬಗ್ಗೆ ನಿರ್ಧರಿಸಲು ಎರಡೂ ಬಣಗಳು ಸಾಕ್ಷ್ಯ ಮತ್ತು ಲಿಖಿತ ಹೇಳಿಕೆಯನ್ನು ಆಗಸ್ಟ್ 8ರಒಳಗೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಇದಾದ ನಂತರವೇ ಚುನಾವಣಾ ಆಯೋಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು.
ಬಂಡಾಯ ಶಿವಸೇನಾ ಶಾಸಕರ ಅನರ್ಹತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ, ಹೀಗಿರುವಾಗ ಯಾವ ಬಣ ಶಿವಸೇನಾವನ್ನು ಪ್ರತಿನಿಧಿಕರಿಸುತ್ತದೆ ಎಂಬುದರ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುವಂತಿಲ್ಲ ಎಂದು ಠಾಕ್ರೆ ಬಣ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದೆ.
55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸಂಸದರ ಪೈಕಿ 12 ಸಂಸದರ ಬೆಂಬಲ ತಮಗಿದೆ ಎಂದು ಶಿಂಧೆ ಬಣ ಹೇಳಿದೆ. ಶಿವಸೇನಾದಲ್ಲಿ ಒಡಕು ಇದೆ ಎಂಬುದು ಸ್ಪಷ್ಟ. ಇದರಲ್ಲಿ ಒಂದು ಠಾಕ್ರೆ ಬಣ ಮತ್ತೊಂದು ಶಿಂಧೆ ಬಣ. ಎರಡೂ ಬಣಗಳು ತಾನೇ ನಿಜವಾದ ಶಿವಸೇನಾ ಎಂದು ವಾದಿಸುತ್ತಿವೆ ಎಂದು ಎರಡೂ ಬಣಗಳಿಗೆ ಶನಿವಾರ ನೋಟಿಸ್ ನೀಡಿದ ಚುನಾವಣಾ ಆಯೋಗ ಹೇಳಿದೆ.
ಎರಡೂ ಬಣಗಳಿಂದ ಸಾಕ್ಷ್ಯ ದಾಖಲೆ ಮತ್ತು ಲಿಖಿತ ಹೇಳಿಕೆ ಪಡೆದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಠಾಕ್ರೆ ಬಣವನ್ನು ಅನರ್ಹಗೊಳಿಸುವಂತೆ ಶಿಂಧೆ ಬಣ ಮಹಾರಾಷ್ಟ್ರ ಸ್ಪೀಕರ್ ಗೆ ಮನವಿ ಮಾಡಿದೆ. ಆದರೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಡಿ ಎಂದು ಜುಲೈ 11ರಂದು ಸುಪ್ರೀಂಕೋರ್ಟ್ ಸ್ಪೀಕರ್ ರಾಹುಲ್ ನರ್ವೇಕರ್ ಅವರಲ್ಲಿ ಹೇಳಿದೆ.
Published On - 12:30 pm, Mon, 25 July 22