Maharashtra Politics: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಕ್ಕೆ ಚುನಾವಣಾ ಆಯೋಗ ನೊಟೀಸ್

ಶಿವಸೇನೆ ಪಕ್ಷವನ್ನು ಯಾರು ನಿಯಂತ್ರಿಸಬೇಕು ಎಂಬ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವೆ ನಡೆಯುತ್ತಿರುವ ಮೇಲಾಟವು ಈ ಬೆಳವಣಿಗೆಯೊಂದಿಗೆ ಮತ್ತೊಂದು ಹಂತಕ್ಕೆ ತಲುಪಿದೆ.

Maharashtra Politics: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಕ್ಕೆ ಚುನಾವಣಾ ಆಯೋಗ ನೊಟೀಸ್
ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆImage Credit source: India Today
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 23, 2022 | 10:02 AM

ದೆಹಲಿ: ಬಹುಮತ ಸಾಬೀತು ಪಡಿಸಲು ಅಗತ್ಯವಿರುವ ಪೂರಕ ದಾಖಲೆಗಳನ್ನು ಆಗಸ್ಟ್ 8ರ ಒಳಗೆ ಸಲ್ಲಿಸಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ಕೇಂದ್ರ ಚುನಾವಣಾ ಆಯೋಗವು (Election Commission of India) ನೊಟೀಸ್ ನೀಡಿದೆ. ಶಿವಸೇನೆ ಪಕ್ಷವನ್ನು ಯಾರು ನಿಯಂತ್ರಿಸಬೇಕು ಎಂಬ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವೆ ನಡೆಯುತ್ತಿರುವ ಮೇಲಾಟವು ಈ ಬೆಳವಣಿಗೆಯೊಂದಿಗೆ ಮತ್ತೊಂದು ಹಂತಕ್ಕೆ ತಲುಪಿದೆ. ಪೂರಕ ದಾಖಲೆಗಳನ್ನು ಸಲ್ಲಿಸಿದ ನಂತರ ಚುನಾವಣಾ ಆಯೋಗವು ಎರಡೂ ಬಣಗಳ ವಾದವನ್ನು ಆಲಿಸಲಿದೆ.

ಶಿವಸೇನೆಯ ಮುಂಚೂಣಿ ನಾಯಕ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಬಂಡಾಯವೆದ್ದಿದ್ದ 40 ಶಾಸಕರು ನಂತರ ತಮ್ಮದು ಪ್ರತ್ಯೇಕ ಬಣ ಎಂದು ಘೋಷಿಸಿಕೊಂಡರು. ಇದೇ ಬಣವು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನೂ ರಚಿಸಿತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆದರು. ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರವೊಂದನ್ನು ಬರೆದಿದ್ದ ಶಿಂದೆ ಬಣವು, ಮಹಾರಾಷ್ಟ್ರ ವಿಧಾನಸಭೆಯ 55 ಶಿವಸೇನಾ ಶಾಸಕರ ಪೈಕಿ 40 ಮತ್ತು 18 ಲೋಕಸಭಾ ಸದಸ್ಯರ ಪೈಕಿ 12 ಮಂದಿಯ ಬೆಂಬಲ ತಮಗಿದೆ ಎಂದು ಘೋಷಿಸಿಕೊಂಡಿತ್ತು.

‘ಶಿವಸೇನೆಯು ಹೋಳಾಗಿರುವುದು ಸ್ಪಷ್ಟವಾಗಿದೆ. ಏಕನಾಥ ಶಿಂದೆ ನೇತೃತ್ವದಲ್ಲಿ ಒಂದು ಬಣ, ಉದ್ಧವ್ ಠಾಕ್ರೆ ಮತ್ತೊಂದು ಬಣ ಇದೆ. ಎರಡೂ ಬಣಗಳು ತಮ್ಮದೇ ನಿಜವಾದ ಶಿವಸೇನೆ ಎಂದು ಪಕ್ಷದ ಚಿಹ್ನೆಯ ಮೇಲೆ ಹಕ್ಕು ಮಂಡಿಸಿವೆ. ತಮ್ಮ ಬಣದ ನಾಯಕನೇ ಪಕ್ಷದ ನಾಯಕ ಎಂದು ಪ್ರತಿಪಾದಿಸಿವೆ’ ಎಂದು ಚುನಾವಣಾ ಆಯೋಗವು ನೊಟೀಸ್​ನಲ್ಲಿ ವಿವರಿಸಿದೆ.

‘ಎರಡೂ ಬಣಗಳಿಗೆ ಸೇರಿದವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಬೇಕಿದೆ. ಇಂಥ ಪ್ರಕರಣಗಳಲ್ಲಿ ಈ ಹಿಂದೆ ನಡೆಸಿದ್ದ ಪ್ರಕ್ರಿಯೆಗಳನ್ನು ಗಮನಿಸಿ, ಚುನಾವಣಾ ಆಯೋಗವು ಎರಡೂ ಬಣಗಳಿಗೆ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ದಾಖಲೆಗಳು, ಪುರಾವೆಗಳು ಮತ್ತು ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿದ ನಂತರವೇ ವಿಸ್ತೃತ ವಾದವನ್ನು ಆಲಿಸಲಾಗುವುದು’ ಎಂದು ಆಯೋಗವು ಹೇಳಿದೆ.

ಉದ್ಧವ್​ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಏಕನಾಥ್ ಶಿಂದೆ ಬಣವು ಸ್ಪೀಕರ್​ಗೆ ಮನವಿ ಮಾಡಿತ್ತು. ಆದರೆ ಜುಲೈ 11ರಂದು ಈ ಸಂಬಂಧ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್​, ಅನರ್ಹತೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಜರುಗಿಸಬಾರದು ಎಂದು ಸೂಚಿಸಿತ್ತು.

ಕಳೆದ ತಿಂಗಳು ಸ್ಪೀಕರ್​ ಆಯ್ಕೆಗಾಗಿ ನಡೆದಿದ್ದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸಬೇಕು ಎಂದು ಶಿಂದೆ ಬಣವು ಒತ್ತಾಯಿಸಿತ್ತು. ಎರಡೂ ಬಣಗಳಿಗೆ ಅಹವಾಲು ಸಲ್ಲಿಸಲು ಜುಲೈ 27ರವರೆಗೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್​ ಆಗಸ್ಟ್ 1ಕ್ಕೆ ವಿಚಾರಣೆಯ ದಿನಾಂಕ ನಿಗದಿಪಡಿಸಿದೆ.

Published On - 10:02 am, Sat, 23 July 22