ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಎಚ್​ಡಿಕೆ ಖಡಕ್ ಮಾತು, ಡಿಕೆಶಿ ಮಹತ್ವದ ಸಲಹೆ

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ನವದೆಹಲಿಯಿಂದಲೇ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಎಚ್​ಡಿಕೆ ಖಡಕ್ ಮಾತು, ಡಿಕೆಶಿ ಮಹತ್ವದ ಸಲಹೆ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 09, 2024 | 7:20 PM

ನವದೆಹಲಿ, (ಜುಲೈ 09): ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಬೇಕೆಂದು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಸಂಬಂಧ ಇಂದು (ಜುಲೈ 09) ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇನ್ನು ಇದಕ್ಕೆ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹೊಸ ಸರ್ಕಾರ ರಚನೆ ಮಾಡಿದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಬೆಂಗಳೂರು ವಂಶಸ್ಥರು ನಾವು, ಅಲ್ಲಿಗೆ ಸೇರಬೇಕು. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ತುಂಬಬಹುದು ಎಂದು ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.

ನಾನು ಬೆಂಗಳೂರಿಗೆ ನಾಲ್ಕು ತಾಲೂಕುಗಳನ್ನು ಸೇರಿಸುತ್ತೇನೆ . ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು. ರಾಮನಗರ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ. ರಾಮನ ಹೆಸರು ಇರುವುದು ಒಂದು ಭಾಗ. ರಾಮನಗರಕ್ಕೆ ಅದರದ್ದೇ ಆದ ಒಂದು ಇತಿಹಾಸ ಇದೆ. ಅಲ್ಲಿ ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಗೊತ್ತಿದೆ. ಇದೆಲ್ಲ ಬಿಟ್ಟು ಅಭಿವೃದ್ಧಿ ಮಾಡುವುದು ಕಲಿಯಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದಿನ ತಂತ್ರವೇನು? ಡಿಕೆಶಿ- ಎಚ್‌ಡಿಕೆ ನಡುವೆ ಮತ್ತೊಂದು ಸಮರಕ್ಕೆ ಮುನ್ನುಡಿಯಾಗುತ್ತಾ?

ರಾಮನಗರ ನಾವು ಮಾಡಿದ್ದು ತೆಗೆಯಬೇಕು ಎನ್ನುವುದು ಅವರ ಉದ್ದೇಶ. ದೇವೇಗೌಡರು, ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಯಾವುದರ ಬೆಲೆ ಏರಿಕೆಯಾಗಿದೆ ಗೊತ್ತಿದೆ. ಹಿಂದೆ ಕನಕಪುರ ಸಾತನೂರು ಹೇಗಿತ್ತು, ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು. ಈಗ ರಾಮನಗರ ಹೆಸರು ಬದಲಾಯಿಸಿದರೂ ನಾನು ಮತ್ತೆ ಬಂದೇ ಬರ್ತಿನಿ ಆ ವಿಶ್ವಾಸ ಇದ್ದೆ ಇದೆ ಎಂದು ಖಡಕ್ ಆಗಿ ಹೇಳಿದರು.

ನಾಲ್ಕು ತಾಲೂಕು ಸೇರಿ ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಎಂದು ಇದೆಯಲ್ಲ. ಬೇರೆ ಹೆಸರು ಇಟ್ಟಿದ್ದರೆ ಆಗಿರೋದು ಆದರೆ ಅದು ಮಾಡುತ್ತಿಲ್ಲ. ಅವರು ಮಾತ್ರ ಬೆಂಗಳೂರಿನವರು ಅವರ ಸಾಧನೆ ಚಿರಾಯುವಾಗಿ ಉಳಿಯಬೇಕು. ನಾವೇನು ಸಾಧನೆ ಮಾಡಿದ್ದೇವೆ. ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತೆ ಅವರು ಹೇಳಬೇಕು ಎಂದರು.

ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರೆಯಾಗಲಿದೆ. ಹೊಸ ಪ್ರಕ್ರಿಯೆ ಶುರುವಾಗಲಿದೆ. ರಾಮನಗರ ಚನ್ನಪಟ್ಟಣ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಬಂದಿರೋದು. ನಾನು ಮೂರು ಅಥವಾ ಐದು ವರ್ಷ ಅಧಿಕಾರದಲ್ಲಿದ್ದರೆ ಅವಳಿ ನಗರ ಮಾಡಿ ಮಹನಗರ ಪಾಲಿಕೆ ಮಾಡುತ್ತಿದ್ದೆ. ಆ ಬಗ್ಗೆ ನಾನು ಚಿಂತನೆ ಮಾಡಿದ್ದೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ