ದಲಿತನಾದ ಕಾರಣ ನನ್ನನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಸಚಿವ ರಾಜೀನಾಮೆ
Dinesh Khatik ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವರಾಗಿದ್ದ ಖಾತಿಕ್, 100 ದಿನಗಳಿಂದ ನನಗೆ ಯಾವುದೇ ಕೆಲಸವನ್ನು ನೀಡಲಿಲ್ಲ. ನನಗೆ ನೋವಾಗಿದೆ. ಹಾಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಲಖನೌ: ನಾನು ದಲಿತ (Dalit) ಹಾಗಾಗಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿ ಉತ್ತರಪ್ರದೇಶದ ಸಚಿವರು ರಾಜೀನಾಮೆ ನೀಡಿದ್ದಾರೆ. ದಿನೇಶ್ ಖಾತಿಕ್ (Dinesh Khatik) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ಕಳಿಸಿದ್ದಾರೆ. ಮತ್ತೊಬ್ಬ ಸಚಿವ ಜಿತಿನ್ ಪ್ರಸಾದ್ ಅವರು ಕೂಡಾ ಮುಖ್ಯಮಂತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದೆಹಲಿಯಲ್ಲಿರುವ ಬಿಜೆಪಿ ನಾಯಕತ್ವವನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ . ಉತ್ತರ ಪ್ರದೇಶದಲ್ಲಿನ ಈ ರಾಜಕೀಯ ಬೆಳವಣಿಗೆ ಎರಡನೇ ಬಾರಿ ಭಾರೀ ಬಹುಮತದಿಂದ ಅಧಿಕಾರಕ್ಕೇರಿರುವ ಯೋಗಿ ಆದಿತ್ಯನಾಥ (Yogi Adityanath) ನೇತೃತ್ವದ ಸರ್ಕಾರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವರಾಗಿದ್ದ ಖಾತಿಕ್, 100 ದಿನಗಳಿಂದ ನನಗೆ ಯಾವುದೇ ಕೆಲಸವನ್ನು ನೀಡಲಿಲ್ಲ. ನನಗೆ ನೋವಾಗಿದೆ. ಹಾಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಇಲಾಖೆಯಲ್ಲಿನ ವರ್ಗಾವಣೆಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಾನೊಬ್ಬ ದಲಿತನಾಗಿರುವ ಕಾರಣ ನನಗೆ ಪ್ರಾಧಾನ್ಯ ನೀಡಿಲೇ ಇಲ್ಲ. ಸಚಿವರಾಗಿ ನನಗೆ ಯಾವುದೇ ಅಧಿಕಾರ ಇರಲಿಲ್ಲ. ನಾನು ರಾಜ್ಯದಲ್ಲಿ ಸಚಿವನಾಗಿ ಕೆಲಸ ಮಾಡುವುದು ದಲಿತ ಸಮುದಾಯಕ್ಕೆ ನಷ್ಟ. ನನ್ನನ್ನು ಯಾವುದೇ ಸಭೆಗೆ ಕರೆಯುವಿದಿಲ್ಲ, ನನ್ನ ಸಚಿವಾಲಯದ ಬಗ್ಗೆ ಏನನ್ನೂ ಹೇಳುವುದಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿ ಅವಮಾನ ಎಂದಿದ್ದಾರೆ ಖಾತಿಕ್.
ರಾಜೀನಾಮೆ ಬಗ್ಗೆ ಅವರೊಂದಿಗೆ ಮಾತನಾಡಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ. ಇತ್ತ ತಮ್ಮ ತಂಡದ ಸದಸ್ಯರೊಬ್ಬರನ್ನು ಮುಖ್ಯಮಂತ್ರಿ ತೆಗದೆದು ಹಾಕಿದ್ದಕ್ಕೆ ಜಿತಿನ್ ಪ್ರಸಾದ ಕೋಪಗೊಂಡಿದ್ದಾರೆ. ಉತ್ತರ ಪ್ರದೇಶದ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಜಿತಿನ್ ಪ್ರಸಾದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಪ್ರಸಾದ ಅವರಿಗೆ ಪಿಡಬ್ಲ್ಯುಡಿ ಇಲಾಖೆ ಜವಾಬ್ದಾರಿ ನೀಡಲಾಗಿದ್ದರೂ ಅವರ ಇಲಾಖೆ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಮುಖ್ಯಮಂತ್ರಿಗಳ ಕಚೇರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ಹಲವು ಅಧಿಕಾರಿಗಳು ವರ್ಗಕ್ಕಾಗಿ ಲಂಚ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಉತ್ತರ ಪ್ರದೇಶ ಸರ್ಕಾರ ಹಿರಿಯ 5 ಪಿಡಬ್ಲ್ಯುಡಿ ಅಧಿಕಾರಿಗಳನ್ನು ವಜಾ ಮಾಡಿತ್ತು.
ಪ್ರಸಾದ್ ಅವರ ಕಚೇರಿಯ ವಿಶೇಷ ಕರ್ತವ್ಯ ಅಧಿಕಾರಿ ಅನಿಲ್ ಕುಮಾರ್ ಪಾಂಡೆ, ಐಎಎಸ್ ಅಧಿಕಾರಿಯಾಗಿದ್ದು ಅವರ ಮೇಲೂ ಲಂಚದ ಆರೋಪವಿದೆ. ಪಾಂಡೆ ಅವರನ್ನು ವಜಾ ಮಾಡಿ ಅವರ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶಿಸಲಾಗಿದೆ. ಈ ಬಗ್ಗೆ ದೂರು ನೀಡುವುದಕ್ಕಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಪ್ರಸಾದ ಬಯಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಗ ನಾಯಕರನ್ನು ಭೇಟಿ ಮಾಡುವ ಯೋಚನೆ ಇಲ್ಲ
Everyone knows the zero-tolerance policy of PM & CM Yogi Adityanath. Under this, if there are irregularities in the dept, Govt will take concrete steps. There will be a fair probe. Action will be taken wherever there’s a disorder: UP Minister Jitin Prasada on transfer controversy pic.twitter.com/WYRxrvOYxg
— ANI (@ANI) July 20, 2022
ಅಸಮಾಧಾನದ ಪ್ರಶ್ನೆಯೇ ಇಲ್ಲ, ಯೋಗಿ ಆದಿತ್ಯ ನಾಥ ನೇತೃತ್ವದಲ್ಲಿ ಜನರ ನಿರೀಕ್ಷೆ ತಲುಪುದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ನಾಯಕತ್ವವನ್ನು ಭೇಟಿ ಮಾಡುವ ಬಗ್ಗೆ ಕೇಳಿದಾಗ ಸಮಯ ಸಿಕ್ಕಾಗ ಭೇಟಿ ಮಾಡುವೆ. ಈಗ ಭೇಟಿ ಮಾಡುವ ಯೋಚನೆ ಇಲ್ಲ ಎಂದು ಜಿತಿನ್ ಪ್ರಸಾದ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
Published On - 7:42 pm, Wed, 20 July 22