ಕಾರವಾರ, (ಜನವರಿ 15): ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri ) ಅವರು ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ (uttara kannada lok sabha) ಬಿಜೆಪಿ ಟಿಕೆಟ್ ತಮಗೆ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಈ ಬಗ್ಗೆ ಇಂದು (ಜನವರಿ 15) ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ನಮ್ಮ ಪಕ್ಷದ ನಾಯಕರು ಈಗಾಗಲೇ ತಿರ್ಮಾನಿಸಿದಾರೆ. ಆದಷ್ಟು ಬೇಗ ಪಟ್ಟಿ ಪ್ರಕಟ ಮಾಡುತ್ತಾರೆ ಕಾದು ನೋಡಿ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಟಿಕೆಟ್ ತಮಗೆ ಸಿಗಲಿದೆ ಎನ್ನುವ ಸುಳಿವು ನೀಡಿದರು,
ನಾನು ಮೋದಿಜಿ ಹಾಗೂ ಪಕ್ಷದ ಸೂಚನೆಯ ಮೆರೆಗೆ ಕೆಲಸ ಮಾಡುತ್ತಿದ್ದೇನೆ.ಪ್ರತಿದಿನ ಅಲ್ಲಿ ಇಲ್ಲಿ ಅಂತಾ ಪಕ್ಷದ ಕೆಲಸಕ್ಕಾಗಿ ಕ್ಷೇತ್ರದಾದ್ಯಂತ ಓಡಾಡುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿನೆ ಗೆಲ್ಲೋದು ಎಂದಿರುವ ಕಾಗೇರಿ, ನಮ್ಮ ಸಂಸದರು ಹೇಗೆ ಏನು ಎಂಬುವುದು ನಮ್ಮ ಕ್ಷೇತ್ರದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಜಾಸ್ತಿ ಮಾತನಾಡಲಿಕ್ಕೆ ಹೊಗುವುದಿಲ್ಲ ಎಂದು ಹೇಳಿದರು. ಇದರೊಂದಿಗೆ ನಾಲ್ಕು ವರ್ಷಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಬಗ್ಗೆ ಅನಂತ ಕುಮಾರ ಹೆಗಡೆಗೆ ಟಾಂಗ್ ಕೊಟ್ಟರು.
ಅನಂತಕುಮಾರ್ ಹೆಗಡೆ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಯಾವುದೇ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಮುಖ್ಯವಾಗಿ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜಿಲ್ಲೆಗೆ ಬಂದಿದ್ದರೂ ಸಹ ಅನಂತಕುಮಾರ್ ಹೆಗಡೆ ಮಾತ್ರ ಸುಳಿದಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೊಮ್ಮೆ ಟಿಕೆಟ್ಗಾಗಿ ಮುನ್ನಲೆಗೆ ಬಂದಿದ್ದಾರೆ.
ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಚಟುವಟಿಕೆಗಳಲ್ಲಿ ಗುರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಮತ್ತೊಂದೆಡೆ ಕಾಗೇರಿ ಟಿಕೆಟ್ಗಾಗಿ ಭಾರೀ ಕಸತ್ತು ನಡೆಸಿದ್ದಾರೆ. ಕಾಗೇರಿ ಮಾತ್ರವಲ್ಲದೇ ಹರಿಪ್ರಕಾಶ್ ಕೋಣೆಮನೆ ಸಹ ಸದ್ದಿಲ್ಲದೆ ಟಿಕೆಟ್ಗಾಗಿ ತಮ್ಮದೇ ಹಾದಿಯಲ್ಲಿ ಲಾಬಿ ನಡೆಸಿದ್ದಾರೆ.
ಆದ್ರೆ, ಮೂಲಗಳ ಪ್ರಕಾರ ಹೈಕಮಾಂಡ್ಗೆ ಹರಿಪ್ರಕಾಶ್ ಕೋಣೆಮನೆಗಿಂತ ಕಾಗೇರಿ ಮೇಲೆ ಮನಸ್ಸು ಇದೆಯಂತೆ, ಹೀಗಾಗಿ ಕೋಣೆಮನೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚನೆಗಳು ಬಂದಿವೆ ಎನ್ನಲಾಗಿದೆ. ಒಂದು ವೇಳೆ ಉತ್ತರ ಕನ್ನಡ ಟಿಕೆಟ್ ಕಾಗೇರಿಗೆ ಸಿಕ್ಕರೆ ಅನಂತಕುಮಾರ್ ಹೆಗಡೆ ಅವರ ನಡೆ ಏನು ಎನ್ನುವುದೇ ಕುತೂಹಲ ಮೂಡಿಸಿದೆ. ಬೇರೆ ರಾಜಕಾರಣಿಯಂತೆ ಅವರು ಬೇರೆ ಪಕ್ಷ ಸೇರಲ್ಲ. ಬದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ.
ಒಟ್ಟಿನಲ್ಲಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಭಾರೀ ಪೈಪೋಟಿಗಳು ನಡೆದಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Mon, 15 January 24