ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ಗಾಗಿ ಒಂದು ಲಕ್ಷ ಹಣ ಕೊಟ್ಟಿದ್ದೇವೆ: ಕಾಂಗ್ರೆಸ್ ಮುಖಂಡ
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡ್ತಾರೆಂಬ ವಿಶ್ವಾವಿತ್ತು. ಕೊನೆ ಕ್ಷಣದಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದರು. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚಿಸದೆ ನಿರ್ಧಾರ ಕೈಗೊಂಡರು. ಕಾರ್ಯಕರ್ತರು, ಸ್ಥಳೀಯರು ಗುಲಾಮರು ಅಂದುಕೊಂಡಿದ್ದೀರಾ? ಎಂದು ಕಾಂಗ್ರೆಸ್ ಮುಖಂಡ ಹೆಚ್.ಎನ್.ರವೀಂದ್ರ ಪ್ರಶ್ನಿಸಿದರು
ಮಂಡ್ಯ, ಮಾರ್ಚ್ 06: ಕಾಂಗ್ರೆಸ್ನಲ್ಲಿ (Congress) ಟಿಕೆಟ್ ಪಡೆಯಲು ದುಡ್ಡೆ ಮಾನದಂಡ. ಹಣ ಇದ್ದವರನ್ನು ಪಕ್ಷಕ್ಕೆ ಕೆರದುಕೊಂಡು ಬರುತ್ತಾರೆ. ವಿಧಾನಸಭೆ ಚುನಾವಣೆ (Vidhan Sabha Election) ವೇಳೆ ಆಕಾಂಕ್ಷಿತರೆಲ್ಲ ಟಿಕೆಟ್ಗಾಗಿ ಒಂದು ಲಕ್ಷ ಹಣ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಡಾ.ಹೆಚ್.ಎನ್.ರವೀಂದ್ರ (HN Ravindra) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ, ನಾನು ಸ್ಪರ್ಧಿಸಿದ್ದರೂ ಚಲುವರಾಯಸ್ವಾಮಿ ಗೆಲ್ಲಲು ಬಿಡಲ್ಲ ಅಂತ ಹೇಳಿದ್ದೆ. ನನ್ನ ಮತ್ತೊಬ್ಬ ಆಕಾಂಕ್ಷಿಗೆ ನೀನೆ ನಿಲ್ಲು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ವೇಳೆ ಸಚಿವ ಚಲುವರಾಯಸ್ವಾಮಿ ನನ್ನ ವಿರುದ್ಧ ಒಬ್ಬರನ್ನ ಎತ್ತಿ ಕಟ್ಟಿದ್ದರು. ಗಣಿಗ ರವಿಕುಮಾರ್ ಟಿಕೆಟ್ ವಿಚಾರವಾಗಿ ಚಲುವರಾಯಸ್ವಾಮಿಗೆ ಬೈದಿದ್ದೆ. ಇದರಿಂದ ನನ್ನ ಹಾಗೂ ಚಲುವರಾಯಸ್ವಾಮಿ ನಡುವೆ ಮನಸ್ತಾಪ ಕೂಡ ಆಗಿತ್ತು, ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸಿದರು. ಸರ್ಕಾರ ರಚನೆಯಾಗಿ ಚಲುವರಾಯಸ್ವಾಮಿ ಮಂತ್ರಿಯಾದರು. ಅವರು ನನಗೆ ಕರೆ ಮಾಡಿ ಎಲ್ಲಾ ಬಿಟ್ಟು ಕೆಲಸ ಮಾಡೋಣ ಅಂತ ಹೇಳಿದರು. ಲೋಕಸಭೆ ಚುನಾವಣೆಗೆ ಚಲುವರಾಯಸ್ವಾಮಿ ನನ್ನ ಹೆಸರು ಸೂಚಿಸಿದ್ದರು. ಆದರೆ ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು ಮಾನದಂಡ ಅಂದರೆ ಅದು ಹಣ. ಏಳು ಜನ ಶಾಸಕರು ಇದ್ದಾರೆ, ದುಡ್ಡು ಇರುವವರು ಗೆದ್ದೇ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ ಎಂದು ಹೇಳಿದರು.
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾನೆ, ಇವಾಗ ಕಾಂಗ್ರೆಸ್ಗೆ ಕರೆದುಕೊಂಡು ಬರುತ್ತಿದ್ದೀರಿ. ಸ್ಥಳೀಯ ಕಾರ್ಯಕರ್ತರಿಗೆ ಚ…ಯಲ್ಲಿ ಹೊಡೆದ ಹಾಗೆ ಆಗಲ್ವಾ? ಪಕ್ಷದ ಚೌಕಟ್ಟು ನನ್ನಂತವರಿಗೆ ಹೊಂದಲ್ಲ ಹಾಗಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೆಚ್ಎನ್ ರವೀಂದ್ರ ರಾಜೀನಾಮೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನನ್ನ ಮೇಲೆ ನಂಬಿಕೆಯಿಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಿದ್ದರು. ಆದರೆ ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ವಾತಾವರಣ ಕಲುಷಿತವಾಗಿದೆ. ಹಾಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ. ಕೆಪಿಸಿಸಿಯ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡ್ತಾರೆಂಬ ವಿಶ್ವಾವಿತ್ತು. ಕೊನೆ ಕ್ಷಣದಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದರು. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚಿಸದೆ ನಿರ್ಧಾರ ಕೈಗೊಂಡರು. ಕಾರ್ಯಕರ್ತರು, ಸ್ಥಳೀಯರು ಗುಲಾಮರು ಅಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.
ಪಕ್ಷದ ಸೂಚನೆ ಮೇರೆಗೆ ದರ್ಶನ್ ಪುಟ್ಟಣ್ಣಯ್ಯ ಪರ ಕೆಲಸ ಮಾಡಿದ್ದೆ. ಗೆದ್ದ ನಂತರ ನಿಮ್ಮಿಂದ ಅಪ್ಪಾಜಿ ಗೌರವ ಉಳಿಯಿತು ಎಂದು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸಿ ಗೆದ್ದಿದರು. ನಮ್ಮ ಸ್ಟಾರ್ಗಳು ನಿಮಗೆ ಅಭಿಮಾನಿಗಳಾಗಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ನನಗೆ (ರವೀಂದ್ರ) ಹೇಳಿದರು. ನಿಮ್ಮನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ನಾನು ರಾಕ್ಲೈನ್ ಅಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ