ಶಿವಮೊಗ್ಗ, ಜನವರಿ 12: ರಾಮಮಂದಿರ (Ram Mandir) ಉದ್ಘಾಟನೆ ಬಳಿಕ ಅಯೋಧ್ಯೆಗೆ (Ayodhya) ಭೇಟಿ ನೀಡುತ್ತೇನೆ. ರಾಮಮಂದಿರ ಯಾವ ರೀತಿ ನಿರ್ಮಿಸಿದ್ದಾರೆಂದು ನೋಡಿ ಬರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಮನನ್ನು ವಿರೋಧಿಸುತ್ತಿಲ್ಲ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯ ರಾಜಕೀಯ ವಿರೋಧಿಸುತ್ತಿದ್ದೇವೆ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಂದರೇ ಸುಳ್ಳು, ಸುಳ್ಳು ಅಂದರೇ ಕುಮಾರಸ್ವಾಮಿ. ಹೆಚ್ಡಿ ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು. ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮೂರು ಜನ ಉಪಮುಖ್ಯಮಂತ್ರಿಗಳ ಬಗ್ಗೆ ಪಕ್ಷದಲದಲಿ ಚರ್ಚೆ ನಡೆದಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದೇ ತಿಂಗಳು ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತದೆ. ಈ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ಚೌಧರಿ ಅವರಿಗೆ ಆಹ್ವಾನ ಬಂದಿತ್ತು. ಆದರೆ ಕಾಂಗ್ರೆಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ.
ಇದನ್ನೂ ಓದಿ: ಅಪೂರ್ಣ ರಾಮ ಮಂದಿರ ಉದ್ಘಾಟನೆ: ಮೋದಿಗೆ ಸಾಧನೆ ಮುಂದಿಟ್ಟು ಗೆಲ್ಲುವ ಆತ್ಮವಿಶ್ವಾಸ ಇಲ್ಲ ಎಂದ ಸಿದ್ದರಾಮಯ್ಯ
ವರಿಷ್ಠರ ನಿರ್ಧರಕ್ಕೆ ಬೆಂಬಲ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಜ.11) ರಂದು ಟ್ವೀಟ್ ಮಾಡಿದ್ದರು. ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌದರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ.
ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ. ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ ಎಂದು ಗುಡುಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Fri, 12 January 24