ಹಾದಿಯೇ ತೋರಿದ ಹಾದಿ : ಕೆಲಸ ಹೆಂಡತಿ ಮಕ್ಕಳು ಮನೆ ಎಂದು ಇರಬಹುದಾದ ವಯಸ್ಸಿನಲ್ಲಿ ಪರ್ವತಾರೋಹಣ ಮಾಡುವುದೆಂದರೆ! ಇದೀಗ 49 ವರ್ಷದ ಸುನೀಲ್ ನಟರಾಜ್ ಸಮುದ್ರ ಮಟ್ಟದಿಂದ ಬರೋಬ್ಬರಿ 29,029 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಅನ್ನು ಏರಿ ಇದೀಗ ಮನೆಮಾತಾಗಿದ್ಧಾರೆ. ‘ಬರುವ ಸೆಪ್ಟೆಂಬರ್ನಲ್ಲಿ ಇನ್ನೂ ಎರಡು ಪರ್ವತಗಳನ್ನು ಏರುತ್ತಿದ್ದೇನೆ. ಮುಂದಿನ ವರ್ಷ ಪುಸ್ತಕ ಬರೆಯುವ ಕನಸೂ ಇದೆ. ಹಾಗೆಯೇ ಕಾಲೇಜು, ಯೂನಿವರ್ಸಿಟಿಗಳಿಗೆ ಹೋಗಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕಿದೆ. ನಾನು ಎಲ್ಲರಿಗೂ ಹೇಳುವುದು… Take that first step, your destination will be there sometime. ಯಾರು ಏನೇ ಹೇಳಿದರೂ ನಿಮ್ಮ ಶಕ್ತಿ ಸಾಮರ್ಥ್ಯದ ಮೇಲೆ ಅನುಮಾನ ಪಡಬೇಡಿ. ನಿಮ್ಮ ಶಕ್ತಿ ನಿಮ್ಮದು. ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ಯಾರು ತುಂಬುತ್ತಾರೋ ಅವರ ಸುತ್ತ ಇರಿ. ಯಾರು ನಿಮ್ಮನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೋ ಅವರಿಂದ ದೂರವಿರಿ.’ ಎನ್ನುತ್ತಾರೆ ಅವರು. ಅವರ ಈ ಪ್ರಯಾಣ ಹೇಗಿತ್ತು ಎನ್ನುವುದನ್ನು ಅವರ ಮಾತಿನಲ್ಲೇ ಓದಿಕೊಳ್ಳಿ.
ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 22)
‘ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಮಂಗಳ, ತಂದೆ ನಟರಾಜ್. ನಮ್ಮ ತಂದೆತಾಯಿಗೆ ನಾನೊಬ್ಬನೇ ಮಗ. ನಾನು ಜಿಂದಾಲ್ ಪಬ್ಲಿಕ್ ಶಾಲೆಯಲ್ಲಿ ಹೈಸ್ಕೂಲಿನವರೆಗೆ ಓದಿದೆ. ನನ್ನ ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ನಮ್ಮ ತಂದೆ ಅಪಘಾತದಲ್ಲಿ ತೀರಿಕೊಂಡರು. ನಂತರದಲ್ಲಿ ನನ್ನನ್ನು ಸಾಕಿ ಸಲಹಿದ್ದು ನಮ್ಮ ತಾಯಿ ಮತ್ತು ತಾತ ಅಜ್ಜಿ. ನಂತರ ಮೈಸೂರಿನಲ್ಲಿದ್ದುಕೊಂಡು ಚಿಕ್ಕಪ್ಪ ಚಿಕ್ಕಮ್ಮನ ಆಶ್ರಯದಲ್ಲಿ ಪಿ.ಯು.ಸಿ. ಮುಗಿಸಿಕೊಂಡು ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1996ರಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಆಗಲೇ ಕೆಲಸಕ್ಕೆ ಸೇರಿಕೊಂಡು ನಿಧಾನವಾಗಿ ಒಳ್ಳೊಳ್ಳೆ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡೆ. ಎರಡು ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿ ಮತ್ತೆ ಭಾರತಕ್ಕೆ ಮರಳಿ ಬಂದೆ. ನಂತರ ಮದುವೆಯಾದೆ.
2007ರಲ್ಲಿ ಸದ್ಗುರುವಿನ ಅನುಯಾಯಿಯಾದೆ. ಈಶಾ ಫೌಂಡೇಶನ್ ಸೇರಿದೆ. ಒಮ್ಮೆ ಅವರೊಂದಿಗೆ 2011ರಲ್ಲಿ ಕೈಲಾಸ ಮಾನಸ ಸರೋವರಕ್ಕೆ ಹೋದೆ. ಕಾಠ್ಮಂಡುವಿನಲ್ಲಿ ಎರಡು ದಿನ ಉಳಿದುಕೊಂಡಾಗ, ಮೌಂಟೈನ್ ಫ್ಲೈಟ್ ಮೂಲಕ ಎವರೆಸ್ಟ್ ನೋಡಬಹುದು ಎಂದರು. ಮಾರನೇ ದಿನ ಬೆಳಗ್ಗೆ 6 ಗಂಟೆಗೆಲ್ಲ ವಿಮಾನ ನಿಲ್ದಾಣಕ್ಕೆ ಹೋದೆವು. ಎವರೆಸ್ಟ್ ಮೇಲೆ ತುಂಬಾ ಗಾಳಿ, ಹವಾಮಾನ ವೈಪರೀತ್ಯದಿಂದಾಗಿ ಫ್ಲೈಟ್ ಕ್ಯಾನ್ಸಲ್ ಆಗಿತ್ತು. ಆಗ ನನಗೆ ಬಂದ ಮೊದಲ ಯೋಚನೆ ಎಂದರೆ ನಾನು ಫ್ಲೈಟ್ ನಿಂದ ಯಾಕೆ ನೋಡಬೇಕು. ಎವರೆಸ್ಟ್ ಹತ್ತಿ ಅದರ ಮೇಲಿಂದಲೇ ಪ್ರಪಂಚ ನೋಡೋಣ ಎಂಬ ಆಲೋಚನೆ ಬಂತು. ಆಗ ನನಗೆ ಬಂದ ಪ್ರತಿಯೊಂದು ಆಲೋಚನೆಗಳಲ್ಲಿ, ಪದಗಳಲ್ಲಿ ತುಂಬಾ ಶಕ್ತಿ ಇತ್ತು. ನನಗೆ ಬಂದ ಆ ಆಲೋಚನೆಯ ಬಗ್ಗೆ ಯಾವತ್ತೂ ಅನುಮಾನಿಸಲಿಲ್ಲ. ಆ ಕ್ಷಣಗಳೇ ನಾನು ಮೌಂಟ್ ಎವರೆಸ್ಟ್ ಹತ್ತಲು ಸ್ಫೂರ್ತಿ.
ನಮ್ಮಲ್ಲಿ ಎಷ್ಟೋ ಜನರು ದೊಡ್ಡ ದೊಡ್ಡ ಕನಸು ಕಾಣುತ್ತೇವೆ. ಮರುಕ್ಷಣವೇ ನಕಾರಾತ್ಮಕವಾಗಿ ಯೋಚಿಸುತ್ತೇವೆ. ಆದರೆ ನಾನು ಹಾಗೆ ಮಾಡಲಿಲ್ಲ. ಸುಪ್ತಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡರೆ ಖಂಡಿತ ಯಾವುದೂ ಅಸಾಧ್ಯವಲ್ಲ. 2011ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಲು ನಿರ್ಧಾರ ಮಾಡಿದೆ. ನನಗಾಗ ಮೂವತ್ತೆಂಟು ವರ್ಷಗಳು. ನನ್ನ ಕನಸು ನನಸಾಗಲು ಹನ್ನೊಂದು ವರ್ಷಗಳಾದವು.
ಇದನ್ನೂ ಓದಿ : Woman: ಹಾದಿಯೇ ತೋರಿದ ಹಾದಿ; ಹೆಣ್ಣುಮಗು ಬೇಕು ಎಂದು ಗಂಡ ಆಪರೇಷನ್ ಮಾಡಿಸಲಿಲ್ಲ
ಈ ದೊಡ್ಡ ಕನಸಿನೊಂದಿಗೆ ಕೈಲಾಸ ಮಾನಸ ಸರೋವರ ಟ್ರಿಪ್ ಮುಗಿಸಿಕೊಂಡು ಮನೆಗೆ ಬಂದೆ. ಒಂದೆರಡು ವರ್ಷ ಮೌಂಟ್ ಎವರೆಸ್ಟ್ ಬಗ್ಗೆ ನಾನು ಯೋಚನೆ ಮಾಡಲಿಲ್ಲ. ಒಮ್ಮೆ ನಮ್ಮ ಸುಪ್ತಮನಸ್ಸಿನಲ್ಲಿ ಸ್ಟ್ರಾಂಗ್ ಆಗಿ ಕುಳಿತುಕೊಂಡರೆ ಅದು ತಂತಾನೆ ಕೆಲಸ ಮಾಡಲು ಪ್ರೆರೇಪಿಸುತ್ತಿರುತ್ತದೆ. 2013ರಲ್ಲಿ ಮೌಂಟ್ ಎವರೆಸ್ಟ್ ಶಿಖರದ ಬಗ್ಗೆ ಹುಡುಕಾಟ, ಮಾಹಿತಿ ಸಂಗ್ರಹಣೆ ಮಾಡಿದಾಗ ತಿಳಿದದ್ದು ಇದು ತುಂಬಾನೇ ಖರ್ಚುದಾಯಕ. 25 ರಿಂದ 35 ಲಕ್ಷ ಹಣ ಬೇಕಿತ್ತು. ಹಾಗಿದ್ದರೆ, ಈಗ ನಾನು ಎವರೆಸ್ಟ್ ಹತ್ತಬೇಕಾದರೆ ಮೊದಲ ಹಂತ ಏನು? ಆರೋಗ್ಯವಾಗಿರಬೇಕು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಬೇಕು. ಇದೆಲ್ಲ ಆಗಿ ಆರ್ಥಿಕವಾಗಿ ಸಬಲವಾಗಿಲ್ಲವಾದರೆ ನಿರಾಸೆಯಾಗುತ್ತದೆ ಎಂದು, ಮೊದಲು ನಾನು ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದೆ. ಆಗ ನಾನಿದ್ದದ್ದು ಮ್ಯಾನೇಜರ್ ಹಂತದಲ್ಲಿ. ನನಗೆ ಬರುತ್ತಿದ್ದ ಸಂಬಳ ಕಡಿಮೆಯಿತ್ತು. ಕುಟುಂಬ ನಿರ್ವಹಣೆಯ ಜೊತೆಗೆ ನನ್ನ ಕನಸಿಗಾಗಿ ದುಡಿಯಬೇಕಿತ್ತು. ಹಾಗಾಗಿ ಮುಂದಿನ ಹಂತಕ್ಕೆ ಹೋಗಲು ಹೆಚ್ಚಿನ ಕೌಶಲವನ್ನು ಬೆಳೆಸಿಕೊಂಡು ಕೆಲಸ ಬದಲಾಯಿಸಿದೆ. ಅಲ್ಲಿಂದ ನನ್ನ ಆದಾಯ ಹೆಚ್ಚಾಯ್ತು. ನನ್ನ ನಿವೃತ್ತಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ನನ್ನ ಉಳಿತಾಯ ಪ್ರಾರಂಭ ಮಾಡಿದೆ. ವೀಸಾಗೆ ಅರ್ಜಿ ಹಾಕಿದೆ. 2020ರ ವೇಳೆಗೆ ಆರ್ಥಿಕವಾಗಿ ಸದೃಢವಾಗಿದ್ದೆ. ಜೊತೆಗೆ ಇನ್ಶೂರೆನ್ಸ್ ಮಾಡಿಸಿದೆ.
ಆದರೆ ದರೆ ನನ್ನ ತೂಕ 95 ಕೇಜಿ ಇತ್ತು. ಟ್ರಾವೆಲ್ ಜಾಬ್ ನನ್ನದಾಗಿದ್ದರಿಂದ ದೈಹಿಕ ವ್ಯಾಯಾಮ ಮಾಡುವುದಕ್ಕೂ ಆಗುತ್ತಿರಲಿಲ್ಲ. 2018ರಿಂದ ನಿರಂತರವಾಗಿ ಆರೋಗ್ಯದ ಕಡೆಗೆ ಗಮನ ಹರಿಸಿದೆ. ಸುಮಾರು ಒಂದೂವರೆ ವರ್ಷದಲ್ಲಿ 65 ರಿಂದ 68 ಕೇಜಿಗೆ ಇಳಿದೆ. ಆಗ ಫಿಸಿಶಿಯನ್ ಸಲಹೆಯ ಮೇರೆಗೆ ಬೆಳಗ್ಗೆ ಹೊತ್ತು ಮನೆಯಲ್ಲಿ ಮಾಡಿದ ತಿಂಡಿ, ಮಧ್ಯಾಹ್ನ ಮಿತಿಯಾದ ಊಟ, ರಾತ್ರಿ ಹೊತ್ತು ಹಸಿ ತರಕಾರಿಗಳನ್ನು ತಿನ್ನುತ್ತಿದ್ದೆ. ಸ್ವಲ್ಪ ದಿನ ಕಷ್ಟವಾಯ್ತು. ದಿನಗಳೆದಂತೆ ಅಭ್ಯಾಸವಾಯ್ತು. ತುಂಬ ಜನ ಹೇಳಿದರು ರಾತ್ರಿ ಹೊತ್ತು ತರಕಾರಿ ತಿಂದ್ರೆ ಬೆಳಗ್ಗೆ ಶಕ್ತಿ ಇರುವುದಿಲ್ಲ ಅಂತ. ಅವರಿಗೆಲ್ಲ ನನ್ನ ಉತ್ತರ ರಾತ್ರಿ ತರಕಾರಿ ತಿಂದು ಬೆಳಗ್ಗೆ 40 ಕಿ.ಮೀ. ಓಡಬಲ್ಲೆ ಎಂಬುದು.
ಡಯಟ್ ಜೊತೆಗೆ ವ್ಯಾಯಾಮ, ರನ್ನಿಂಗ್, ಜಿಮ್ ಗೆ ಹೋಗಲು ಪ್ರಾರಂಭ ಮಾಡಿದೆ. ಓಡಲು ಆಗುತ್ತಿರಲಿಲ್ಲ. ದೇಹದ ತೂಕದಿಂದ ಕಾಲು ನೋವು ಬರುತ್ತಿತ್ತು. ಹಾಗಾಗಿ ಎರಡು ವರ್ಷ ರನ್ನಿಂಗ್ ಮಾಡಲಿಲ್ಲ. ಆದ್ದರಿಂದ ದೇಹದ ತೂಕ ಕಡಿಮೆ ಮಾಡಿಕೊಂಡು ರನ್ನಿಂಗ್ ಸ್ಟಾರ್ಟ್ ಮಾಡಿದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕ್ಷಮತೆ ಹೆಚ್ಚಾಯ್ತು. 2021ರಲ್ಲಿ ನನಗೆ ಕೋವಿಡ್ ಬಂದು ನನ್ನ ಟ್ರಾವೆಲ್ ಕೆಲಸ ಎಲ್ಲ ನಿಂತು ಹೋಯ್ತು. ಅದರಿಂದ ಬೇಗ ಚೇತರಿಸಿಕೊಂಡೆ. ಆ ಸಮಯದಲ್ಲಿ ನನ್ನ ದೈಹಿಕ ಕ್ಷಮತೆಯ ಬಗ್ಗೆ ಹೆಚ್ಚು ಗಮನ, ಸಮಯ ಕೊಡಲು ಸಾಧ್ಯವಾಯ್ತು. ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದೆ. ನನ್ನ 30ನೇ ವಯಸ್ಸಿನಲ್ಲೂ ಇಲ್ಲದ ಫಿಟ್ನೆಸ್ 48ರ ವಯಸ್ಸಿನಲ್ಲಿ ಇತ್ತು. 2021ರಲ್ಲಿ ಹಿಮಾಚಲ ಪ್ರದೇಶ ನೋಡಬೇಕು ಅಂತ ಮೊದಲ ಸಲ ಟ್ರೆಕ್ಕಿಂಗ್ ಹೋದೆ. ಯುವಕರ ಜೊತೆಗೆ ಹೋದರೆ ನನ್ನನ್ನು ಅವರೊಂದಿಗೆ ಹೋಲಿಸಿಕೊಳ್ಳಬಹುದು. ನನ್ನ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಹುದು ಎಂದು 24-25ರ ವಯಸ್ಸಿನವರ ಜೊತೆಗೆ ಹೋದೆ. ಆಗಲೂ ನಾನು ಅವರಿಗಿಂತಲೂ ಗಟ್ಟಿಯಾಗಿದ್ದೆ ಮತ್ತು ಸಾಮರ್ಥ್ಯವುಳ್ಳವನಾಗಿದ್ದೆ. ಆ ನಂತರ ಮಾನಸಿಕ ಆರೋಗ್ಯ ಬಲಪಡಿಸಿಕೊಳ್ಳಬೇಕಿತ್ತು. ದೈಹಿಕ ಸಾಮರ್ಥ್ಯ ಶೇ 30, ಉಳಿದ ಶೇ. 70 ನಮ್ಮ ಮನಸ್ಸಿನ ಶಕ್ತಿಗೆ ಸಂಬಂಧಿಸಿದ್ದು.
ಇದನ್ನೂ ಓದಿ : Uttara Kannada: ಹಾದಿಯೇ ತೋರಿದ ಹಾದಿ: ಹೆರಿಗೆ ಮಾಡಿಸಿದಾಗ 15 ರೂಪಾಯಿ ಕೊಡಲೂ ಹಿಂದೇಟು ಹಾಕುವವರಿದ್ದಾರೆ
ನಂತರ ಬೆಂಗಳೂರಿನ Randonars Club ಅಲ್ಲಿ ಸೈಕ್ಲಿಂಗ್ ಮಾಡಲು ಹೋಗುತ್ತಿದ್ದೆ. 600 ಕಿ.ಮೀ. ದೂರವನ್ನು 40 ಗಂಟೆಯೊಳಗೆ ಮುಗಿಸಬೇಕಿರುತ್ತದೆ. ಅದರಲ್ಲಿ ಗೆದ್ದರೆ ಮೆಡಲ್. ಇಂಥ ಇವೆಂಟ್ಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ನನಗೆ ಮಾನಸಿಕ ಸಹಿಷ್ಣುತೆ ಬೆಳೆಯಿತು. ಲಡಾಖ್ಗೆ ಹೋಗಿ ಸೋಲೋ ರೈಡ್ ಮಾಡಬೇಕು ಅಂದುಕೊಂಡೆ. ರಾಯಲ್ ಎನ್ಫೀಲ್ಡ್ನಲ್ಲಿ ನಾಲ್ಕು ದಿನಗಳಲ್ಲಿ ಸೋಲೋ ರೈಡ್ ಮುಗಿಸಿದೆ.
ಈಗ ನಾನು ಪೂರ್ತಿ ಫಿಟ್ ಆಗಿದ್ದೆ. ತದನಂತರ ಬೇಕಾಗಿದ್ದು ಪರ್ವತ ಏರುವ ಕೌಶಲಗಳು. ಬೆಟ್ಟ ಹತ್ತಲು ಹಗ್ಗ ಹೇಗೆ ಉಪಯೋಗಿಸುವುದು, ಯಾವ ಯಾವ ತರಹದ ಸಲಕರಣೆಗಳನ್ನು ಬಳಕೆ ಮಾಡಬೇಕು ಏನೂ ಗೊತ್ತಿರಲಿಲ್ಲ. ಇದನ್ನೆಲ್ಲಾ ಕಲಿಸಲು ನಮ್ಮ ದೇಶದಲ್ಲಿ ಸುಮಾರು ಸಂಸ್ಥೆಗಳಿವೆ. ಅಲ್ಲಿ ಬೇಸಿಕ್ ಕೋರ್ಸ್, ಅಡ್ವಾನ್ಸ್ ಕೋರ್ಸ್ ಮಾಡಬಹುದು. ಆದರೆ ಅದಕ್ಕೆ ವಯಸ್ಸಿನ ನಿರ್ಬಂಧವಿದೆ. ಒಂದೊಂದು ಕಾಲೇಜಿನಲ್ಲಿ 35 ವರ್ಷ. ಇನ್ನೊಂದು ಕಾಲೇಜಿನಲ್ಲಿ 40 ವರ್ಷ. ಇದು 28 ದಿನಗಳ ಕಾಲ ನಡೆಯುವ ಕೋರ್ಸ್. ಆಗ ನನಗೆ 48 ವರ್ಷವಾದ್ದರಿಂದ ಅಡ್ಮಿಶನ್ ಸಿಗಲಿಲ್ಲ. ಇದನ್ನು ಕಲಿಯದೆ ಮುಂದಕ್ಕೆ ಹೋಗುವುದು ತುಂಬ ಕಷ್ಟ. ಆಗ ನೇಪಾಳದಲ್ಲಿದ್ದ ನನ್ನ ಪರಿಚಿತರು ಲಕ್ಪಾ ಎಂಬ ಸರ್ಪವನ್ನು ಪರಿಚಯ ಮಾಡಿಕೊಟ್ಟರು. ಸರ್ಪ ಎನ್ನುವುದು ಒಂದು ಸಮುದಾಯ. ಅವರು ಪರ್ವತಾರೋಹಿಗಳು, ಮಾರ್ಗದರ್ಶಕರು. 2021 ಸೆಪ್ಟೆಂಬರ್ ನಲ್ಲಿ ನೇಪಾಳಕ್ಕೆ ಹೋಗಿ ಅವರನ್ನು ಭೇಟಿಯಾಗಿ ಒಂದು ಯೋಜನೆ ಹಾಕಿಕೊಂಡೆವು. ಈಗ ಎರಡು ಚಿಕ್ಕ ಬೆಟ್ಟಗಳನ್ನು ಹತ್ತೋಣ. ಒಂದು 6120 ಮೀ ಇರುವ ಲಬೂಚೆ, ಇನ್ನೊಂದು 7136 ಮೀ ಇರುವ ಹಿಮ್ ಲಂಗ್. ನಾನು ಯಾವ ಕ್ಲಾಸ್ ರೂಮಿನಲ್ಲಿ ಕೂರಿಸಿಕೊಂಡು ನಿಮಗೆ ಪಾಠ ಮಾಡುವುದಿಲ್ಲ. ಈ ಬೆಟ್ಟಗಳನ್ನು ಹತ್ತುವಾಗಲೇ ನಾನು ನಿಮಗೆ ತರಬೇತಿ ಕೊಡುತ್ತೇನೆ ಎಂದರು. ಒಂದು ವಾರದೊಳಗೆ ಅದೆಷ್ಟೋ ವರ್ಷಗಳಲ್ಲಿ ಆಗುವ ಅನುಭವಗಳನ್ನು ನನಗೆ ಕಲಿಸಿದರು.
ಬೆಟ್ಟದ ತುದಿಗೆ ಹೋದಾಗ ಮನಸ್ಸು ಕೆಲ ಸೆಕೆಂಡುಗಳ ಕಾಲ ಮೌನ. ಆ ಮೌನವೇ ಸ್ವರ್ಗ. ಆ ಲಬೂಚೆ ಬೆಟ್ಟ ತಾಳ್ಮೆಯನ್ನು ಕಲಿಸಿತು. ಭರವಸೆ ಹುಟ್ಟಿಸಿತು. ಈ ಬೆಟ್ಟದಿಂದ ಕೆಳಗಿಳಿದು ವಿಶ್ರಾಂತಿ ತೆಗೆದುಕೊಂಡು ನಂತರ 1, ನವೆಂಬರ್ 2021ರಲ್ಲಿ 7136 ಕಿ. ಮೀ ಇರುವ ಹಿಮ್ ಲಂಗ್ ಬೆಟ್ಟಕ್ಕೆ ಹೋದೆವು. ಇನ್ನೇನು 136 ಮೀ. ಹೋದರೆ ಬೆಟ್ಟದ ತುದಿ ತಲುಪುತ್ತಿದ್ದೆ. ಅಷ್ಟರಲ್ಲಿ ಹವಾಮಾನ -40° ಆಗಿ ಹೋಯ್ತು. ಸುಮಾರು 7000 ಮೀ. ಹತ್ತಿದ್ದೇನೆ. ಇನ್ನು 136 ಮೀ ಹೋಗಬೇಕು. ಗಾಳಿಯ ವೇಗವೂ ಹೆಚ್ಚಾಗಿದೆ, ಒಂದು ಹೆಜ್ಜೆ ನಡೆಯೋಕೆ ಆಗ್ತಿಲ್ಲ. ಹಾಕಿಕೊಂಡಿರುವ ಬಟ್ಟೆಗಳೆಲ್ಲ ತುಂಬ ತಣ್ಣಗಾಗುತ್ತಿದೆ. ಬೀಳುತ್ತಿದ್ದ ಮಂಜು ನನ್ನ ಗಡ್ಡದಲ್ಲಿ ಐಸ್ನಂತೆ ಕಟ್ಟಿಕೊಂಡು ಚುಚ್ಚುತ್ತಿತ್ತು. ಅದನ್ನು ತೆಗೆಯೋಣ ಅಂತ 10 ಸೆಕೆಂಡ್ ಮಾಸ್ಕ್ ತೆಗೆದರೆ ನಾನು ಉಸಿರಾಡಿದ್ದೆಲ್ಲ ಐಸ್ ಆಗುತ್ತಿದೆ ಅಷ್ಟು ಚಳಿ. ಗಡ್ಡ ಕೊಡವಿಕೊಂಡು ಮತ್ತೆ ಮಾಸ್ಕ್ ಹಾಕಿಕೊಳ್ಳುವಷ್ಟರಲ್ಲಿ ನನಗೆ ಮೂಗು ಇದೆಯಂತಲೇ ಫೀಲ್ ಆಗುತ್ತಿರಲಿಲ್ಲ. ಚಳಿ ಹೆಚ್ಚಾಗಿ ಉಸಿರಾಡುವುದು ಕಷ್ಟವಾಯ್ತು, ಮೈಯೆಲ್ಲ ಮರಗಟ್ಟಿ ಜೀವ ಹೋದಂತಾಗಿತ್ತು. ಇದು ನನ್ನ ಮೆಂಟರ್ ಗೆ ಗೊತ್ತಾಗಿ ಇವತ್ತು ಈ ಬೆಟ್ಟ ಹತ್ತುವುದು ಬೇಡ ಮುಂದಿನ ವರ್ಷ ಬರೋಣ ಅಂತ ಹೇಳಿದ್ರು. ಇನ್ನು 136 ಮೀ. ಹತ್ತಿದ್ದಿದ್ದರೆ ಇದನ್ನು ಹತ್ತಿದ ಮೊದಲ ಭಾರತೀಯ ನಾನೇ ಆಗುತ್ತಿದ್ದೆ. ಆಗ ನನ್ನ ಮೆಂಟರ್ ಹೇಳಿದ್ದು ಇವತ್ತು ನೀನು ಹತ್ತುತ್ತೇನೆಂದರೆ ನಿನ್ನ ಕುಟುಂಬಕ್ಕೆ ನಿನ್ನ ದೇಹದ ಒಂದು ತುಂಡು ಕೂಡಾ ಹೋಗುವುದಿಲ್ಲ. ಆದ್ದರಿಂದ ಸುಮ್ಮನೆ ಕೆಳಗೆ ಹೋಗಿಬಿಡೋಣ ಅಂದರು. ಅದೊಂದು ಮರೆಯಲಾರದ ಅನುಭವ.
ಇದನ್ನೂ ಓದಿ : Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’
ಕಡಿಮೆ ಸಮಯದಲ್ಲಿ ಹೆಚ್ಚು ಪಾಠ ಕಲಿತೆ. ಸ್ವಲ್ಪ ಟ್ರೀಟ್ಮೆಂಟ್ ತೆಗೆದುಕೊಂಡು ವಾಪಾಸ್ ಬೆಂಗಳೂರಿಗೆ ಬಂದೆ. ಹೀಗೆ ಕಷ್ಟವಾದಾಗ ನೀವು ವಾಪಾಸ್ ಬಂದುಬಿಡಬೇಕು. ಕಷ್ಟವಾದಾಗಲೂ ಹತ್ತುತ್ತೇನೆ ಅಂತ ಮುಂದೆ ಹೋದಾಗ ಪ್ರಾಣಾಪಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟೋ ಜನ ಇಲ್ಲಿ ತೀರಿಕೊಂಡವರೆಲ್ಲ ಮಾಡಿರುವ ತಪ್ಪು ಇದೇ. ಸರ್ಪಗಳು ಕೆಳಗೆ ಹೋಗೋಣ ಅಂದಾಗ ಅವರ ಮಾತನ್ನು ನಿರ್ಲಕ್ಷಿಸಿ ಮತ್ತೆ ವಾಪಾಸ್ ಬರುವಾಗ ಎಷ್ಟೋ ಜನರಿಗೆ ಆಮ್ಲಜನಕದ ತೊಂದರೆ ಆಗುತ್ತದೆ. ಜೀವ ಕಳೆದುಕೊಳ್ಳುತ್ತಾರೆ.
ಫೆಬ್ರವರಿಯಲ್ಲಿ ಲೇ ಲಡಾಖ್ ನಲ್ಲಿ ಐಸ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್ ಮಾಡಿದೆ. ಮುಂದಿನ ವರ್ಷ ನನಗೆ ಐವತ್ತು ವರ್ಷ ಆಗತ್ತೆ. ಆಗ ಎವರೆಸ್ಟ್ ಹತ್ತಬೇಕು ಎನ್ನುವ ಯೋಜನೆ ಇದ್ದದ್ದು. ಲೋತ್ಸೆ ಎಂಬ ಬೆಟ್ಟ 8536 ಮೀ. ಇದೆ. ಅದು ಪ್ರಪಂಚದಲ್ಲೇ 4ನೇ ಎತ್ತರವಾದ ಪರ್ವತ. ಈ ಬೆಟ್ಟ ಹತ್ತಬೇಕು ಅಂತ ಕಠ್ಮಂಡುವಿಗೆ ಹೋಗಿ ಅನುಮತಿ ತೆಗೆದುಕೊಂಡೆವು. ಆದರೆ ಆಗ ಹತ್ತಲಿಲ್ಲ. ಮುಂದಿನ ವರ್ಷ ಹತ್ತುತ್ತೇನೆ. ಅಲ್ಲಿ ಲುಕ್ಲ ಎಂಬ ಊರಿನಿಂದ 54 ಕಿ.ಮೀ. ನಡೆದುಕೊಂಡು ಹೋದರೆ ಎವರೆಸ್ಟ್ ಬೇಸ್ ಕ್ಯಾಂಪ್ ಸಿಗುತ್ತದೆ. ಅಲ್ಲಿಗೆ ನಡೆದುಕೊಂಡು ಹೋಗಲು 12 ದಿನಗಳು ಬೇಕು. ಫೆಬ್ರವರಿ ತಿಂಗಳಲ್ಲಿ ಯಾರೋ ಒಬ್ಬರು ಸಿಕಂದರಾಬಾದಿನವರು ಈ ಟ್ರೆಕ್ಕಿಂಗನ್ನು 4 ದಿನದಲ್ಲಿ ಮುಗಿಸಿದ್ದಾರೆ ಅಂತ ಕೇಳಿ ಆಶ್ಚರ್ಯವಾಯಿತು. 4 ದಿನ ಅಂದರೆ ತುಂಬ ಸಾಮರ್ಥ್ಯ ಬೇಕು. ನಾನು ಯಾಕೆ ಈ ಪ್ರಯತ್ನ ಮಾಡಬಾರದು ಅಂತ 3 ದಿನದಲ್ಲಿ ಮಾಡೋಣ ಎಂದುಕೊಂಡು ಹೋದೆ.
ನೇಪಾಳಕ್ಕೆ ಹೋದಮೇಲೆ 3 ದಿನ ಬೇಡ 30 ಗಂಟೆಯಲ್ಲಿ ಮಾಡಿದ್ರೆ ಹೇಗಿರತ್ತೆ ಅಂತ ಅಂದುಕೊಂಡು ಮಾರ್ಚ್ 4ನೇ ತಾರೀಖು ಕಠ್ಮಂಡುವಿಗೆ ಹೋಗಿ ಮಾರ್ಚ್ 5ಕ್ಕೆ ಲುಕ್ಲ ಸ್ಟಾರ್ಟಿಂಗ್ ಪಾಯಿಂಟ್ ರೀಚ್ ಆಗಿ ಅಲ್ಲೇ ಒಂದು ದಿನ ಉಳಿದುಕೊಂಡಾಗ 30 ಗಂಟೆ ಬದಲು ಒಂದು ದಿನದಲ್ಲಿ ಈ ಟ್ರೆಕ್ಕಿಂಗ್ ಮುಗಿಸೋಣ ಎಂದುಕೊಂಡೆ. 6ನೇ ತಾರೀಖು ಬೆಳಗ್ಗೆ ಬಿಟ್ಟು 7ನೇ ತಾರೀಖು ಬೆಳಗ್ಗೆ ಅಲ್ಲಿರಬೇಕು. ತುಂಬಾನೇ ರಿಸ್ಕ್ ಇದೆ ಎತ್ತರ ಇದೆ. ರಾತ್ರಿ ಎಲ್ಲ ನಡೆದುಕೊಂಡು ಹೋಗಬೇಕು ಅಂತ 23 ವರ್ಷದ ಮಾರ್ಗದರ್ಶಕ ತಾಶೀಪ್ರನ್ನು ಕರೆದುಕೊಂಡು ಹೋದೆ. ಮಾರ್ಚ್ 6ನೇ ತಾರೀಖು ಬೆಳಗ್ಗೆ 5 ಗಂಟೆಗೆ ಲುಕ್ಲದಿಂದ ಪ್ರಾರಂಭಿಸಿ 7ನೇ ತಾರೀಖು ಬೆಳಗ್ಗೆ 5ಗಂಟೆ 4 ನಿಮಿಷಕ್ಕೆ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಇದ್ದೆವು. ಒಟ್ಟು 24 ಗಂಟೆ 4 ನಿಮಿಷ ಸಮಯದಲ್ಲಿ ತಲುಪಿದ್ದೆ. ಇದು ಭಾರತದಲ್ಲೇ ದಾಖಲೆ. ಎವರೆಸ್ಟ್ ಏರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಕಾಟ್ಮಂಡುವಿಗೆ ಹೋದೆ. ಮೇ 16 ಬುದ್ಧ ಪೂರ್ಣಿಮೆಯ ದಿನ ಎವರೆಸ್ಟ್ ಏರೋಣ ಅಂದುಕೊಂಡಿದ್ದೆ. 12ನೇ ತಾರೀಖು ಬೆಳಗ್ಗೆ 2ಗಂಟೆಗೆ ಏರಲು ಪ್ರಾರಂಭಿಸಿ 15ನೇ ತಾರೀಖು 8ಗಂಟೆ 4 ನಿಮಿಷಕ್ಕೆ ಎವರೆಸ್ಟ್ ತುದಿಯಲ್ಲಿ ನಿಂತಿದ್ದೆ. ನಾನು ಮನೆ ಬಿಟ್ಟು ಬರುವಾಗ ವಾಪಾಸ್ ಹೋಗುತ್ತೇನೆ ಎಂಬ ಗ್ಯಾರಂಟಿ ಇರಲಿಲ್ಲ. ಆದರೂ ನನ್ನ ನಗುತ್ತ ಕಳುಹಿಸಿ ಕೊಟ್ಟ ನನ್ನ ಕುಟುಂಬದವರಿಗೊಂದು ಮೆಸೇಜ್ ರೆಕಾರ್ಡ್ ಮಾಡಿ ಕಳುಹಿಸಿದೆ. ನಂತರ ಖುಷಿಯಿಂದ ಒಂದು ಹನಿ ಕಣ್ಣೀರು ಬಂತು. ಎವರೆಸ್ಟ್ ಮೇಲೆ ಒಂದು ಬುದ್ಧನ ವಿಗ್ರಹ, ನೀಲಿ ಆಕಾಶ ನೋಡಿ ಮನಸ್ಸಿಗೆ ತುಂಬ ಸಂತೋಷವಾಯಿತು. ಇಷ್ಟೊಂದು ಜನಸಂಖ್ಯೆಯಲ್ಲಿ ಅಂದಾಜು 5500 ಜನರು ಎವರೆಸ್ಟ್ ಹತ್ತಿದ್ದಾರೆ ಅದರಲ್ಲಿ ನಾನು ಒಬ್ಬನಾಗಿದ್ದೇನೆ ಅಂತ ತುಂಬಾ ಖುಷಿಯಾಯ್ತು. ಮೂವತ್ತು ನಿಮಿಷ ಮೇಲೆ ಇದ್ದೆ.
ಇದನ್ನೂ ಓದಿ : woman: ಹಾದಿಯೇ ತೋರಿದ ಹಾದಿ; ದೊಡ್ಡ ಡಿಗ್ರಿ ದೊಡ್ಡ ಕೆಲಸ ದೊಡ್ಡ ಸಂಬಳದ ಮಹಿಳೆಯರಷ್ಟೇ ಆದರ್ಶವಲ್ಲ
ಹತ್ತುವುದು ಸ್ವಲ್ಪ ಸುಲಭ. ಇಳಿಯುವುದು ಬಲು ಕಷ್ಟ. ಏಕೆಂದರೆ ನಾವು ಮೇಲುಗಡೆ ಹೋಗುವಾಗ ಹಿಂದಿರುಗಿ ನೋಡುವುದಿಲ್ಲ. ಕೆಳಗೆ ಬರುತ್ತಾ ವಿಧಿ ಇಲ್ಲ ನಾವು ನೋಡಲೇಬೇಕು. ಇಷ್ಟು ಎತ್ತರಕ್ಕೆ ಬಂದಿದ್ದೇನೆ ಎಂದು ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಉಲ್ಬಣವಾಗುತ್ತಿತ್ತು. ಕೆಳಗೆ ನೋಡಿದರೆ ಒಂದೊಂದು ಹೆಜ್ಜೆ ಇಡಲೂ ಭಯವಾಗುತ್ತಿತ್ತು. ಇಳಿಯುವಾಗ ಒಂದು ಮೃತ ದೇಹ ಕಂಡಿತು. ಮೆಂಟರನ್ನು ವಿಚಾರಿಸಿದಾಗ 12ವರ್ಷದಿಂದ ಅದು ಅಲ್ಲೇ ಇದೆ ಹಿಮ ಕರಗಿದಾಗ ಕಾಣುತ್ತದೆ ಎಂದರು. ಮುಖ ಮುಚ್ಚಲಾಗಿತ್ತು. ಹಾಗೆ ಸ್ವಲ್ಪ ಮುಂದೆ ಹೋಗುತ್ತಾ ನಾಲ್ಕು ವರ್ಷದ ಹಿಂದೆ ಹಳ್ಳದಲ್ಲಿ ಬಿದ್ದು ತೀರಿದ ವ್ಯಕ್ತಿಯನ್ನು ಇನ್ನೂ ತೆಗೆಯಲು ಸಾಧ್ಯವಾಗಿರಲಿಲ್ಲ. ಅದನ್ನು ನೋಡಿದರೆ, ಯಾರೋ ಒಬ್ಬರು ಯೋಚಿಸುತ್ತಾ ಕುಳಿತಿದ್ಧಾರೆ ಎಂಬಂತಿತ್ತು. ಚರ್ಮ, ಕೂದಲು ಎಲ್ಲ ಕಾಣಿಸುತ್ತಿತ್ತು. ಉಸಿರು ಬಿಗಿಹಿಡಿದು ಮುಂದೆ ಬಂದೆ. ಅಂತೂ ಜೀವ ಕೈಯಲ್ಲಿ ಹಿಡಿದೇ ಎವರೆಸ್ಟ್ ನ ಪಾದ ಮುಟ್ಟಿದೆ. ಹತ್ತುವಾಗ 69ಕೆಜಿ ಇದ್ದ ನನ್ನ ದೇಹದ ತೂಕ, ನಾನು ಇಳಿಯುವ ಹೊತ್ತಿಗೆ 60 ಕೆಜಿ ಆಗಿತ್ತು. ಹೆಚ್ಚು ಊಟ ಮಾಡೋಕೆ ಆಗುತ್ತಿರಲಿಲ್ಲ. ಮುಖ ಎಲ್ಲ ಕಪ್ಪಾದಂತೆ ಆಗಿತ್ತು. ಮತ್ತೆ ಕುಟುಂಬಕ್ಕೆ ಬಂದು ಸೇರಿಕೊಂಡಾಗ ಎಲ್ಲರೂ ತುಂಬ ಪ್ರೀತಿಯಿಂದ ಸ್ವಾಗತಿಸಿದರು.
ಸುನಿಲ್ ಅವರನ್ನ ಸಂಪರ್ಕಿಸಲು : 9900164892
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 1:32 pm, Thu, 9 June 22