Monkey entered clinic : ಕೋತಿಯೊಂದು ತನ್ನ ಮರಿಯೊಂದಿಗೆ ಇದ್ದಕ್ಕಿದ್ದ ಹಾಗೆ ನನ್ನ ಕ್ಲಿನಿಕ್ನೊಳಗೆ ಬಂದಾಗ ಗಾಬರಿಯಾದೆ. ಮೊದಲು ಏನು ಮಾಡಬೇಕೆಂದು ತಿಳಿಯಲಿಲ್ಲ. ಅದರ ಮುಖದಲ್ಲಿ ಮಡುಗಟ್ಟಿದ್ದ ನೋವು ನನ್ನನ್ನು ಸುಮ್ಮನಿರಗೊಡಲಿಲ್ಲ.
ಬಿಹಾರದ ಡಾ. ಅಹಮ್ಮದ್ ತಾಯಿಕೋತಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ
Follow us on
Monkey Visited Clinic :ಬಿಹಾರದ ಸಾಸಾರಾಮನಲ್ಲಿ ಡಾ. ಎಸ್. ಎಮ್. ಅಹಮ್ಮದ್ ಮೆಡಿಕೋ ಕ್ಲಿನಿಕ್ ಗೆ ತಾಯಿಕೋತಿ ತನ್ನ ಮರಿಯೊಂದಿಗೆ ಬಂದಾಗ ಸಹಜವಾಗಿ ಅಚ್ಚರಿಯೂ ಗಾಬರಿಯೂ ಆಗಿದೆ. ಅಷ್ಟೊತ್ತಿಗೆ ಓಣಿಯಲ್ಲಿ ಆಡಿಕೊಂಡಿದ್ದ ಮಕ್ಕಳು, ಹುಡುಗರು ಮುಂದೇನಾಗುವುದು ಎಂದು ಮೊಬೈಲ್ನೊಂದಿಗೆ ಕ್ಲಿನಿಕ್ಗೆ ಬಂದು ನಿಂತಿದ್ದಾರೆ. ಈ ಎಲ್ಲ ಗಲಾಟೆಗೆ ಕ್ಲಿನಿಕ್ ಹೊರಗೂ ಒಳಗೂ ಹುಯಿಲೆಬ್ಬಿದೆ. ರಸ್ತೆಯಲ್ಲಿ ಗಾಡಿಗಳ ಓಡಾಟಕ್ಕೂ ತೊಂದರೆಯಾಗಿದೆ. ಇತ್ತ ಡಾಕ್ಟರ್ ಅಹಮ್ಮದ್ ಅವರಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ. ಅತ್ತ ಗಾಯಗೊಂಡ ಕೋತಿ ಕಂಕುಳಲ್ಲಿ ಮರಿಯನ್ನೆತ್ತಿಕೊಂಡು ರೋಗಿಗೆ ಮೀಸಲಾದ ಬೆಡ್ಮೇಲೆ ಗಾಬರಿಯಿಂದ, ನೋವಿನಿಂದ ಡಾಕ್ಟರ್ ಗಾಗಿ ಅತೀ ತಾಳ್ಮೆಯಿಂದಲೇ ಕಾಯುತ್ತ ಕುಳಿತಿದೆ. ತನ್ನ ಅಮ್ಮ ಎಲ್ಲಿ ಕರೆದುಕೊಂಡು ಬಂದಿದ್ದಾಳೆ? ತನ್ನ ಸುತ್ತಮುತ್ತಲಿರುವವರು ಯಾರು? ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನೆಲ್ಲ ಗಮನಿಸುತ್ತ ಅಮ್ಮನೆದೆ ಅವುಚಿಕೊಂಡು ಮರಿ ಕುಳಿತಿದೆ.
ಅಷ್ಟೊತ್ತಿಗೆ ಇದು ಊರೆಲ್ಲ ಸುದ್ದಿಯಾಗಿದೆ. ಡಾ. ಅಹಮ್ಮದ್ ಕೊನೆಗೂ ಧೈರ್ಯಮಾಡಿ ತಾಯಿಕೋತಿಯ ಗಾಯವನ್ನು ಪರೀಕ್ಷಿಸಿದ್ದಾರೆ. ಮೊದಲು ಟಿಟ್ಯಾನಸ್ ಇಂಜೆಕ್ಷನ್ ಕೊಟ್ಟು, ಮುಖಕ್ಕೆ ಆದ ಗಾಯಕ್ಕೆ ಆಯಿಂಟ್ಮೆಂಟ್ ಹಚ್ಚಿದ್ದಾರೆ. ನಂತರ ಅದು ಬೆಡ್ ಮೇಲೆ ಮಲಗಿ ಮರಿಗೆ ಹಾಲು ಕುಡಿಸಿ ಸಂತೈಸಿದೆ.
ಮುಂದೇನು? ಸುತ್ತಮುತ್ತಲಿನ ಜನರನ್ನು ನೋಡಿ ಅದಕ್ಕೆ ಆತಂಕವೂ ಎದುರಾಗಿದೆ. ಹೇಗೆ ಈ ನಾಗರಿಕ ಜಗತ್ತಿನಿಂದ ತನ್ನ ಜಗತ್ತಿಗೆ ಮರಳುವುದು ಎಂದು. ಈ ಸಂಕಟವನ್ನು ಅರ್ಥ ಮಾಡಿಕೊಂಡ ಅಹಮ್ಮದ್, ಅಲ್ಲಿದ್ದವರಿಗೆಲ್ಲ ದೂರ ಹೋಗಲು ತಿಳಿಸಿ, ತಾಯಿಕೋತಿ ಮರಿಯೊಂದಿಗೆ ಹೊರಹೋಗಲು ಅನುವು ಮಾಡಿಕೊಟ್ಟಿದ್ದಾರೆ.