Poetry ; ಅವಿತಕವಿತೆ ; ಅಮ್ಮಾ, ನನ್ನನ್ನು ತಿಂದು ಮತ್ತೊಮ್ಮೆ ಜನ್ಮನೀಡು, ಈ ಸಲ ನಿರಾಸೆಗೊಳಿಸುವುದಿಲ್ಲ

| Updated By: Digi Tech Desk

Updated on: Jan 17, 2022 | 1:45 PM

Poem : ‘ಇದು ನನ್ನ ಕವಿತೆಯ ಕಥೆ. ಕಥೆಯಾಗಲು ಹೆದರುವ, ತುಂಡುತುಂಡು ಸಾಲುಗಳ ದಾವಣಿಯ ಹಿಂದೇ ಇಣುಕುವ, ಬೆಳಕ ಕಾವಿಗೂ ನಿಲ್ಲದ, ಕತ್ತಲ ಮೌನವನೂ ಭರಿಸದ ಇವು ಇವೇ... ಕಾರಾಗೃಹದ ಗೋಡೆಗಳೇ ವಿಧಿಯಿಲ್ಲದೆ ಹೆತ್ತುಕೊಟ್ಟ ಉಸಿರಾಡುವ ಕಿಟಕಿ. ನಿರಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೀರುವ ತುಂತುರು. ಕರುಳ ಕತ್ತಲೊಳಗೆ ಚಡಪಡಿಸುವ ನಕ್ಷತ್ರ... ನನ್ನ ಕವಿತೆ... ಅವಿತ ಕವಿತೆ.’ ಮೌಲ್ಯ ಸ್ವಾಮಿ

Poetry ; ಅವಿತಕವಿತೆ ; ಅಮ್ಮಾ, ನನ್ನನ್ನು ತಿಂದು ಮತ್ತೊಮ್ಮೆ ಜನ್ಮನೀಡು, ಈ ಸಲ ನಿರಾಸೆಗೊಳಿಸುವುದಿಲ್ಲ
Follow us on

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಮೌಲ್ಯ ಸ್ವಾಮಿ (Moulya Swamy) ಎರಡನೇ ಕವನ ಸಂಕಲನ ಹೊರತರುವ ಬಗ್ಗೆ ಆಲೋಚಿಸುತ್ತಲೇ, ಒರಿಯಾ ಕವಿ ಪ್ರತಿಭಾ ಸತ್ಪತಿ (Pratibha Satpathy) ಕವಿತೆಯೊಂದನ್ನು ಅನುವಾದಿಸಿದ್ದು ಇಲ್ಲಿದೆ.     

*

ಮೌಲ್ಯ ಅವರ ಕವಿತೆಗಳನ್ನು ಸರಾಗವಾಗಿ ಓದಲಾಗುವುದೇ ಇಲ್ಲ. ಒಂದು ಸಾಲನ್ನು ಅರ್ಥೈಸಿಕೊಳ್ಳುತ್ತಲೇ ಮತ್ತೊಂದು ಸಾಲಿಗೆ ತೊಡಗಿಸಿಕೊಳ್ಳುವಾಗ ಹಿಂದಿನ ಸಾಲಿನ ಎಳೆಯನ್ನು ಬಿಡುವಂತೆಯೇ ಇಲ್ಲ. ಎಲ್ಲವನ್ನೂ ಸೇರಿಸಿ ಪೋಣಿಸಿ ನಮ್ಮೆದುರು ಚಂದದ ಬೆಳಗಿನ ಇಬ್ಬನಿಯನ್ನು ಹೊತ್ತು ಮುತ್ತಿನ ಹಾರದಂತೆ ಮಿನುಗುವ ಜೇಡನ ಬಲೆಯಂತೆ ಹರಡುತ್ತಾರೆ ಇವರು. ಒಂದೆಡೆ ಹೋಗಬೇಕಾದರೆ ಉಳಿದೆಲ್ಲ ದಾರಿಗಳ ಅರಿವಿರಬೇಕೆನ್ನುವ ಹಾಗೆ. ಹೀಗಾಗಿಯೇ ಇಲ್ಲಿನ ಕವಿತೆಗಳು ಅಂತರಂಗದೊಳಗೆ ಮಾತ್ರ ಧ್ವನಿಸುತ್ತವೆ, ಕಾಡುತ್ತವೆ. ತಕ್ಷಣಕ್ಕೆ ಬೇಕೆಂದರೆ ದಕ್ಕುವುದೇ ಇಲ್ಲ. ಅಷ್ಟೊಂದು ಸಶಕ್ತತೆ ಇಲ್ಲಿನ ಕವಿತೆಗಳದ್ದು. ಪದಗಳನ್ನು ಪೋಣಿಸಿ ಅದಕ್ಕೊಂದು ಪ್ರತಿಮಾತ್ಮಕತೆಯನ್ನು ರೂಪಿಸುವ ಶೈಲಿ ನಿಜಕ್ಕೂ ಅಮೋಘ.

ಸಿದ್ಧರಾಮ ಕೂಡ್ಲಿಗಿ, ಕವಿ

ಇವರ ಕವಿತೆಗಳು ಆತುಮವನ್ನು ತಟ್ಟಿ ಆಘಾತ ನೀಡಿ ತಲ್ಲಣಿಸಿ ತರಂಗಗಳನ್ನು ಧ್ವನಿಸುತ್ತವೆ. ಇದುವರೆಗಿನ ಕಾವ್ಯಭಾಷೆಗೆ ಮಿಗಿಲಾದ ನವಸೃಷ್ಟಿಯ ರಚನೆಯ ಅನುಭೂತಿ. ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸುವ ತಾಕತ್ತಿರುವ ಮೌಲ್ಯ ಅವರ ಕಾವ್ಯಶಕ್ತಿ ಪ್ರತಿ ಕವಿತೆಯಲ್ಲೂ ಕಂಗೆಡಿಸುತ್ತದೆ. ತಣ್ಣಗೆ ಹರಿವ ಅವರ ಕಾವ್ಯನದಿಯೇ ಆಳದ ಸಂವೇದನೆಯು ರಸಾನುಭವದಲ್ಲಿ ನಮ್ಮ ಕಣಕಣವನ್ನೂ ಸ್ಪರ್ಶಿಸುವ ಚೈತನ್ಯಶೀಲತೆಯನ್ನು ಹೊಂದಿದೆ. ಮಾನವ ಸಂಬಂಧಗಳ ಸಿಕ್ಕುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಪಾಲ್ ಕ್ಲೇ ರೇಖೆಯಲ್ಲಿರುವ ತೀವ್ರವಾದ ಓಟದ ಫೋರ್ಸ್ ಪ್ರತಿ ಪದಗಳಲ್ಲಿ ಹಾಸು ಹೊಕ್ಕಾಗಿದೆ.

ಡಾ. ಡಿ. ಎಸ್. ಚೌಗಲೆ, ಲೇಖಕ, ಅನುವಾದಕ

*

1.

ಕೋಣೆಯಿಂದ‌ ಕೋಣೆಗೆ
ಈ ಕೀವು ತುಂಬಿದ ಹೃದಯವನ್ನು
ಎಳೆದುಕೊಂದು ಹೆಜ್ಜೆ
ಸವೆಸುತ್ತಿರುವೆ
ಎಲ್ಲಿಯ ಮಳೆಗೋ
ಇಲ್ಲಿ ಹಿಗ್ಗುವ ಕಡಲೆದೆಯಂತೆ
ಗಾಯದ ಹೃದಯ ತುಂಬಿಕೊಳ್ಳುತ್ತದೆ
ಮತ್ತೆ
ಗಾಯದ ಹೃದಯದ ಹೃದಯವ

2.

ಜನತದಿಂದ ಹುಡುಕಿ
ಕಟ್ಟುಮಸ್ತಾಗಿ ಕಟ್ಟುತ್ತೇನೆ
ಯಾವ ಕಾಲಕ್ಕೂ ಸಡಿಲಗೊಂಡು
ಹರವಿಕೊಳ್ಳದಂತೆ...
ಕವಿತೆಗಳ
ಬಾಯಿಂದ ಬಾಯಿಗೆ
ನನ್ನ ಬಣ್ಣವಿಲ್ಲದ ನೆತ್ತರು
ಪ್ರಚಾರ ಗಿಟ್ಟಿಸುವಾಗ
ಬೆರಳುಗಳಿಗೆ ಹಿಗ್ಗು..

ಈ
ಮೂಳೆಗಳ ಬಂದಿಖಾನೆಯಿಂದ
ಛಂಗನೆ ಹಾರಲು ಸದಾ ಹವಣಿಸುವ
ಕಪ್ಪಗಿನ ಹಕ್ಕಿಯ ತುಟಿಯಲ್ಲಿ
ಕೆಂಪು ಕತ್ತಿ

ನರನಾಡಿಗಳ ಸುತ್ತಲೂ
ಸರ ಪಟಾಕಿ ಸುತ್ತಲಾಗಿದೆ
ನಿಡಿದಾಗಿ
ಬೂದಿಯ ಹಲುಬಿಗೆ
ಕೊರಳ ಸೆರೆ ಸ್ಥಗಿತ

ಬಾಯಿ ಬಿಟ್ಟ ಚರ್ಮದ
ತಳದಿಂದ ಸುಮ್ಮನೆ ಕವಿಯುವ ಹೊಗೆ
ಹೊಲಿಗೆ ಬಿಟ್ಟ ಗುಟ್ಟುಗಳ
ತೋರಿಸಿ ಯಾರ್ಯಾರದೋ ಕನಿಕರಕೆ
ಬೊಗಸೆ ಒಡ್ಡುತ್ತದೆ

ಅವಯವಗಳನ್ನೆಲ್ಲಾ ಸೇರಿಸಿ
ರೂಪಿತವಾಗಿರು ಈ ದೇಹದ
ಸರ್ವ ಭಾಗದಿಂದಲೂ ನಿರಂತರ ಕತ್ತಲು
ಒಸರುತ್ತದೆ
ಮೌನದ ತೇಪೆಗಳೂ ತೇವೆ ತೇವ
ಮತ್ತೆ ವಿವರಣೆ ರಾಜಿಗಳ ಸೂಜಿ ದಾರಕ್ಕೆ
ವ್ಯಸನಿಯಂತೆ ಚಡಪಡಿಸುತ್ತೇನೆ

ಈ ಕಾಯದ ಒಳಗೋಡೆಗಂಟಿದ
ಬಣ್ಣದ ಹೆಸರೇ ವಿಷಾದ
ಇದನ್ನು ಉಜ್ಜಿ ತೊಳೆಯುವ ಹಾಗಿಲ್ಲ
ತಿಕ್ಕಿ ನವೆಸಿವ ಹಾಗಿಲ್ಲ
ಇದ್ದಂತೆ ಇರಲು ಬಿಟ್ಟು
ದಿಟ್ಟಿಸಬೇಕು ಅದು ನಿರ್ದಯವಾಗಿ ದಟ್ಟವಾಗುವುದ ಸುಖಿಸುತ್ತಾ

ದೀರ್ಘಕಾಲ ಬೆಂದಷ್ಟೂ ಹದ
ಕವಿತೆಗೆ
ಚೂರಾದಷ್ಟೂ ಸದೃಢ
ಮಿತವಾದಷ್ಟೂ ಆಳ
ಅಗೆದು ಬಗೆದು ಹೂಳಲಾದ

ಶವಗಳನ್ನು ಎಬ್ಬಿಸಿ ತಂದು
ಅಲಂಕರಿಸಿ‌ ಕಾಗುಣಿತ ತಿದ್ದುತ್ತೇನೆ
ಇಷ್ಟು ಹತ್ತಿರ ನಿಂತು, ಅಷ್ಟು ದೂರ ಇಟ್ಟು
ಕಣ್ಣು ಕಿರುದು ಮಾಡಿ...ಖಾತ್ರಿಪಡಿಸಿಕೊಂದು
ಪ್ರದರ್ಶನಕ್ಕೆ ಇಡುತ್ತೇನೆ.

ಕರತಾಡನ?!

ವಿನಯದಿಂದ ಮತ್ತೆ ಮರೆಗೆ
ಸರಿಯುತ್ತೇನೆ
ಗಾಯಗಳಿಗೆ ಗಾಳಿ
ಮತ್ತಷ್ಟು ನೋಯುಸುವ ಭಯಕ್ಕೆ...

*

ಕೈಬಹದೊಂದಿಗೆ ಮೌಲ್ಯ

ಇಲ್ಲೊಂದು ಅನಂತ ಕಾರಾಗೃಹ. ಸರ್ವದಿಕ್ಕಿನಿಂದಲೂ ಕತ್ತಲು ತೆವಳುತ್ತಲೇ ಇರುತ್ತದೆ. ಕಣ್ಣು ತೆರೆದು ಅನುಭಾವಿಸೆದ್ದೆಲ್ಲವ ಕಣ್ಣು ಮುಚ್ಚಿ ರಮಿಸುವ ಸಾಹಸಕ್ಕೆ ದಿನಚರಿ ಎಂದು ಹೆಸರಿಟ್ಟಿದ್ದೇನೆ. ಈ ಕಾರಾಗೃಹದ ಪಕ್ಕೆಯಲ್ಲಿ ಅಚಾನಕ್ಕಾಗಿ ಮೂಡಿದ ಕಿಟಕಿ. ಅಲ್ಲಷ್ಟೇ ನನ್ನ ಉಸಿರು ಆಡಬಲ್ಲದು. ಹಾಡಬಲ್ಲದು. ಒಳಗೆಲ್ಲಾ ಬೆಂಕಿ ಮೊರೆತ.‌ ಮೊರೆತಕ್ಕೆ ಎಷ್ಟೆಂದು ಹೆಸರಿಡಲಿ? ಇದೆಲ್ಲಾ ಹುಚ್ಚು ಎನಿಸಿದಾಗಲೆಲ್ಲಾ ಸುಮ್ಮನೆ ಶರಣಾಗಿದ್ದೇನೆ. ಸ್ತಬ್ದವಾಗಿದ್ದೇನೆ. ನಕ್ಷತ್ರಗಳ ಉಪಸ್ಥಿತಿಯನ್ನೂ ಲೆಕ್ಕಿಸದೇ ಕತ್ತಲ ಕಣ್ಣಿಗೆ ಕಣ್ಣು ಕೊಟ್ಟು ಗಡಿಯಾರದ ಅಸಂಬದ್ಧ ಅಂಕಿಗಳನ್ನು ನಿರಂತರ ಕೊಂದಿದ್ದೇನೆ. ಮೊರೆತ ಹೆಚ್ಚಾಯಿತೇ… ವಿನಾ ಕಂದಲಿಲ್ಲ. ಅನಿರ್ಧಿಷ್ಟಾವಧಿ ಯಾತನೆಗೆ ನಾಡಿ‌ನಾಡಿಗಳೊಳಗೆ ಅಗ್ನಿ ಹರಿವು.‌ ಹಾರಬೇಕು. ರೆಕ್ಕೆಗೆ ಬಿಗಿದ ಕಬ್ಬಣದ ಗುಂಡು, ನನ್ನದೇ ಪ್ರಜ್ಞೆ. ‌ಪ್ರಜ್ಙೆ ತಪ್ಪಿರುವಾಗ?

ಈ ಮೂಳೆಗಳೊಳಗೆ ಆಷಾಢದ ಅವಸರದ ಹಠಮಾರಿ ಕತ್ತಲು ಹನಿಹನಿಯಾಗಿ ಸಂದಾಯವಾಗುತ್ತಲೇ ಇದೆ. ಬಿಡುಗಡೆಯ ಕನಸು ಕವಿತೆಯ ಲಂಗ ತೊಟ್ಟು ರಂಜಿಸಿ ಮಲಗುತ್ತದೆ. ಒಂಟಿ ರೆಂಬೆಯ ಕಸೂತಿಯ ಹೂ ದಿಂಬಿಗೆ ಒಣಗಲು ಪುರುಸೊತ್ತಿಲ್ಲ. ಅನಾಯಾಸವಾಗಿ ಕೊರಳ ಸೆರೆಯುಬ್ಬಿದಂತೆ ಚಲ್ಲಿಕೊಳ್ಳುತ್ತದೆ ಇಲ್ಲಸಲ್ಲದ ನೆಪ ಹೂಡದೆ. ನನ್ನ ಅರಿವಿನ ಆಣತಿ ಬೇಡದೆ. ಬೆರಳೊತ್ತಿ, ರಕ್ತ ಚಿಮ್ಮುವಷ್ಟು. ಶರಣಾಗತಿ ಒಂದೇ ಆಯ್ಕೆ.  ಕೈಬಿಡುವವರೆಗೂ ಇದ್ದು, ಹರಡಿದ ಅವಾಂತರವನ್ನೆಲ್ಲಾ ಬಾಚಿ ಹೂತಿಟ್ಟು ಮರೆಯುತ್ತೇನೆ. ಮನಸಾದಾಗಲೆಲ್ಲೋ ಮರೆತದ್ದು ನೆನಪಾಗಿ ಹೋಗಿ ಅಗೆದು ಬಗೆದು ಉಂಡೆಸೆದ ನೋವಿನ ಭಸ್ಮವ ಕೃಗೆತ್ತಿಕೊಂಡರೆ… ಅದೇ ಕವಿತೆಯಾಗಿ ಘಮಿಸುತ್ತಿರುತ್ತದೆ.

ಇದು ನನ್ನ ಕವಿತೆಯ ಕಥೆ. ಕಥೆಯಾಗಲು ಹೆದರುವ, ತುಂಡುತುಂಡು ಸಾಲುಗಳ ದಾವಣಿಯ ಹಿಂದೇ ಇಣುಕುವ, ಬೆಳಕ ಕಾವಿಗೂ ನಿಲ್ಲದ, ಕತ್ತಲ ಮೌನವನೂ ಭರಿಸದ ಇವು ಇವೇ… ಕಾರಾಗೃಹದ ಗೋಡೆಗಳೇ ವಿಧಿಯಿಲ್ಲದೆ ಹೆತ್ತುಕೊಟ್ಟ ಉಸಿರಾಡುವ ಕಿಟಕಿ. ನಿರಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೀರುವ ತುಂತುರು. ಕರುಳ ಕತ್ತಲೊಳಗೆ ಚಡಪಡಿಸುವ ನಕ್ಷತ್ರ… ನನ್ನ ಕವಿತೆ… ಅವಿತ ಕವಿತೆ.

*

3.

ಕೋರೈಸುವ ಹೂ ಬೆಂಕಿಯ
ಕಗ್ಗಾವಲಿನಲ್ಲಿ
ನನ್ನ ಅನಂತ ಕವಿತೆಗಳು
ಅಸುನೀಗುತ್ತಿವೆ
ಅನವರತ

ಮಿದಿಳಿಗು
ಹೃದಯಕ್ಕೂ ನಿಲ್ಲದ ಶೀತಲ ಸಮರದಲ್ಲಿ
ನಾಳೆಗಳ ಹಸಿ ಗೋಡೆಯಲ್ಲಾ ರಕ್ತಸಿಕ್ತ
ತೊನೆಯುವ ತೋರಣದ ತುದಿಯಲ್ಲಿ
ಸುಮ್ಮನೆ ಜಾರುವ ಕಣ್ಣ ಹನಿಯ ಭಾಷೆ
ಲೋಕದ ನಿಷಿದ್ಧ

4.

ಬೆಳಕಿನ ಭೂತ ಹಿಡಿದ
ಈ ಕತ್ತಲಲಿ
ನೆನೆ ಹಾಕಿರುವ
ನನ್ನ ಮೂಳೆಗಳೊಳಗೆ
ನಿರಂತರ
ಕನಸುಗಳ ಶವಯಾತ್ರೆ
ಶೋಕಗೀತೆಗಳಿಗೆ
ಒಳಗಿನ‌ ಖಾಲಿತನದಲ್ಲಿ
ಬೆಂದು ಬಲಿಯುವುದು ಈಗೀಗ
ಇನ್ನೂ
ಸಲೀಸು
*

ಒರಿಯಾ ಕವಿ ಡಾ. ಪ್ರತಿಭಾ ಸತ್ಪತಿ ಮತ್ತು ಅನುವಾದಕ  ಡಾ. ರಮಾಕಾಂತ ರಥ್

ಚರಿತ್ರೆಯಡಿ ನಿನಗೊಂದು ಜಾಗವಿರಬಹುದು ಈಗ

ಒರಿಯಾ : ಪ್ರತಿಭಾ ಸತ್ಪತಿ
ಇಂಗ್ಲಿಷ್​ : ರಮಾಕಾಂತ ರಥ

ಚರಿತ್ರೆಯಲಿ ನೀನೊಂದು ಜಾಗವ ಗಿಟ್ಟಿಸಿಕೊಂಡೆ
ಸರಿ, ಈಗ ನೀನು ಚರಿತ್ರೆಯಲ್ಲಿ ಮಾತ್ರ ಉಳಿವೆ
ಮತ್ತೆಲ್ಲೂ ಸಲ್ಲದೆಯೆ.
ಬಹುಶಃ ನಿನಗಿದು ಇನ್ನೂ ಹೊಳೆಯದಿರಬಹುದು
ಒಂದೊಮ್ಮೆ ನೀನು ಗತವ  ಹೊಕ್ಕಿಬಿಟ್ಟರೆ
ಹೊರಬರುವ ಮಾರ್ಗವಿಲ್ಲ ಅಲ್ಲಿ
ಶಾಶ್ವತವಾಗಿ ನೀನಲ್ಲೇ ಉಳಿದುಬಿಡಬಹುದು
ನನ್ನ ಹಗುರಾತಿ ಹಗುರ ಅಪ್ಪುಗೆಯಿಂದ ಬಹು ದೂರ

ನನಗೆ ನೀನೆಂದೂ ಚರಿತ್ರೆಯಾಗುವುದು ಸಮ್ಮತಿ ಇರಲಿಲ್ಲ
ಬದಲಿಗೆ ಇಲ್ಲೇ ನನ್ನ ಮಗ್ಗುಲಿನಲ್ಲಿದ್ದು
ನಕ್ಷತ್ರಗಳ ಹಾಗೆ ನಿನ್ನ ಕಣ್ಣುಗಳು ನನಗೆ ಸಾಂಗತ್ಯ ನೀಡಬೇಕಿತ್ತು
ನಡುರಾತ್ರಿಯ ನಿನ್ನ ಪಿಸುನುಡಿಗಳು ನನ್ನ ತಡವಬೇಕಿತ್ತು
ಒಂದು ತಿಳಿಯಾದ ಸಾಂತ್ವಾನದ ನುಡಿಯಂತೆ
ನಿನ್ನ ಪ್ರೇಮ ನನ್ನ ಸುತ್ತಲೂ ಲಾಸ್ಯವಾಡಬೇಕಿತ್ತು ಕುಳಿರ್ಗಾಳಿಯಂತೆ
ನನ್ನ ದೇಹದೊಳಗಿನ ವಿಶ್ವಮಯೂರದಂತೆ
ಗರಿಗೆದರಬೇಕಿತ್ತು...

ನನಗೆಂದೂ ಬೇಕಿರಲಿಲ್ಲ
ನನ್ನ ಗುಟ್ಟಿನ ಬದುಕೊಂದು ಚರಿತ್ರೆಯಾಗುವುದು

ಚರಿತ್ರೆಯ ಶಿಲೆಯಂಥ ಮೌನವನು ನಾನು ಬಲವಾಗಿ ಬಲ್ಲವಳಾಗಿದ್ದೆ
ಕಾಲನ ಕಣ್ಣಿನಲ್ಲಿದ್ದ ಕಡು ವಿಷಾದವನ್ನೂ ಅರಿತಿದ್ದೆ
ಹಾಗಾಗಿ ನನಗೆ ತಿಳಿದಿದೆ
ನಿನಗೆ ಚರಿತ್ರೆಯ ಪುಟಗಳಿಂದ ಬಿಡುಗಡೆಯಿಲ್ಲ
ನೀ ಸೇರಿಕೊಂಡಿರುವ ಆ ಕಾಲನ ಕಗ್ಗತ್ತಲ ಓಣಿಯಲ್ಲಿ
ನೀನು ಏರಿ ಬರಬಲ್ಲ ಮೆಟ್ಟಿಲುಗಳಿಲ್ಲ

ಅಲ್ಲಿ, ಯಾವ ರಸ್ತೆಯೂ ಜನನಿಬಿಡವಲ್ಲ
ಬರ್ರನೆ ಬೀಸುವ ಶೀತಲ ಮಾರುತಗಳು
ಎಂದೂ ತಟಸ್ಥಗೊಳ್ಳುವುದೇ ಇಲ್ಲ
ಎಲ್ಲೆಂದರಲ್ಲಿ ಕಡುಗತ್ತಲು ಅಲ್ಲಿ

ದೇವರೇ ಬಲ್ಲ
ನೀನದೆಷ್ಟು ಬಾರಿ ಚೆದುರಿ ಹೋಗುವೆಯೋ
ಪುನಶ್ಚೇತನಗೊಳ್ಳುವೆಯೋ
ನನ್ನ ನಿರುಪಯುಕ್ತ ಮಾಂತ್ರಿಕ ಮನೋವ್ಯಾಪಾರದಲ್ಲಿ

ಚರಿತ್ರೆ ಒಬ್ಬ ಚಕ್ರವರ್ತಿ,
ಅವಗೆ ನೀನು - ನಾನೆಂಬ ಅತಿ ಸಾಮಾನ್ಯರು ಪರಿಚಯವಿಲ್ಲ
ತನ್ನ ಶಾಶ್ವತತೆಯ ಹಮ್ಮಿನ ಅವಿವೇಕದಲ್ಲಿ
ಹೊಸಕುತ್ತಾ ಸಾಗುತ್ತಾನೆ
ಪದಗಳೇ ಇಲ್ಲದ ಭಾಷೆಯ ಆತ್ಮದ ಹಪಹಪಿಕೆಗಳನ್ನು
ಆತ್ಮದ ಹಪಹಪಿಕೆಗಳನ್ನು...

*

ಮೌಲ್ಯ ಮೊದಲ ಕವನ ಸಂಕಲನ

ಮೌಲ್ಯ ಸ್ವಾಮಿ : ಮೂಲತಃ ಮೈಸೂರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರಿಗೆ 2015ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ. ರಂಗಭೂಮಿಯಲ್ಲಿ ಆಸಕ್ತರಾಗಿರುವ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಜನಮಿತ್ರ ಕಾವ್ಯಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.  ದ್ದು, ಸಂಚಯ ಕಾವ್ಯ ಬಹುಮಾನ ಪಡೆದಿದ್ದಾರೆ. ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಮೌಲ್ಯಸ್ವಾಮಿ ಅವರ ಚೊಚ್ಚಲ ಕವನ ಸಂಕಲನ.

ಇದನ್ನೂ ಓದಿ : Poetry : ಅವಿತಕವಿತೆ : ಪಾವು ಚಟಾಕನ್ನು ಅನುವಾದಿಸಬಹುದು ಹತ್ತುಪೈಸೆಯನ್ನು ಇಂದಿಗೆ ಅನುವಾದಿಸಲಿ ಹೇಗೆ

Published On - 11:09 am, Sun, 16 January 22