ಪ್ರಿಯ ಓದುಗರೇ,
ಕಥೆ ಧುತ್ತನೇ ಎಂದಾದರೂ ನಮ್ಮೆದುರು ತಾನೇತಾನಾಗಿ ಒಂಟಿಯಾಗಿ ಬಂದು ನಿಲ್ಲುವುದೆ? ಓದುಗರಿಗೂ ಬರೆಯುವವರಿಗೂ ನೂರಾರು ಎಳೆಗಳನ್ನು ಜೋಡಿಸಿಕೊಂಡೇ ಒಳಗಿಳಿಯುವಂಥದ್ದು. ಹಾಗಾಗಿ ಕಥೆ ಎಂದೂ ಮುಗಿಯುವುದೇ ಇಲ್ಲ. ಅದರಲ್ಲೂ ಕಣ್ಣಮುಂದೆಯೇ ಓಡಾಡುವ, ಒಡನಾಡುವ, ಹಗಲಿರುಳೂ ಕಣ್ಣಿಗಂಟಿ ಕಾಡುವ ಪಾತ್ರಗಳು ಭೂತ, ವರ್ತಮಾನ, ಭವಿಷ್ಯದ ಚಾಳೀಸು ಹಾಕಿಕೊಂಡು ನಡೆದಾಡುವಾಗ ಸುಮ್ಮನಿರುವುದು ಹೇಗೆ, ಬರೆಯುವುದು ಹೇಗೆ? ಇದು ಸವಾಲಿನ ಕೆಲಸವೇ. ಸತತ ಮೂವತ್ತು ದಿನಗಳ ಕಾಲ ‘ಕವಲಕ್ಕಿ ಮೇಲ್’ ಉತ್ತರ ಕನ್ನಡದ ಕೊರೊನಾ ಚಿತ್ರಣಗಳನ್ನು ವೈದ್ಯವೃತ್ತಿಯೊಂದಿಗೆ ನಿಭಾಯಿಸುತ್ತ ಡಾ. ಎಚ್.ಎಸ್. ಅನುಪಮಾ ಬರೆಯುತ್ತ ಹೋದರು. ಕೊರೊನಾ ಎಂಬ ಒಂದೇ ಒಂದು ವೈರಾಣುವಿನ ನೆಪದಲ್ಲಿ ‘ನಮ್ಮ ಗ್ರಾಮಭಾರತ’ದ ವಾಸ್ತವವನ್ನು ಸಚಿತ್ರವಾಗಿ ಕಟ್ಟಿಕೊಡುತ್ತ ಹೋದರು. ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಮುದಾಯಿಕ ಪ್ರಜ್ಞೆಯಿಂದ ಕೂಡಿದ ಕಥೆಗಳು ಸ್ಥಳೀಯ ಸೊಗಡಿನೊಂದಿಗೆ ಬಿಚ್ಚಿಕೊಳ್ಳುತ್ತ ಹೋದವು. ನೀವೆಲ್ಲರೂ ಅವುಗಳನ್ನು ಓದಿ ಮುಗಿಸಿದಿರಿ. ಕೆಲವರು ಪ್ರತಿಕ್ರಿಯಿಸಿದ್ದೀರಿ. ವೈದ್ಯರ ದಿನ ಪ್ರಯುಕ್ತ ಎಲ್ಲಾ ವೈದ್ಯರಿಗೂ ಧನ್ಯವಾದಗಳು.
*
ಪ್ರಾಥಮಿಕ ಅರಿವಾದರೂ ನಮ್ಮ ಜನರಿಗೆ ಬರಲಿ
ಉತ್ತರಕನ್ನಡ ಜಿಲ್ಲೆಯನ್ನು ಘಟ್ಟದ ಮೇಲೆ ಮಲೆನಾಡು ಮತ್ತು ಘಟ್ಟದ ಕೆಳಗೆ ಕರಾವಳಿ ಎಂದು ಇಬ್ಭಾಗ ಮಾಡಲಾಗಿದೆ. ನಾನು ಘಟ್ಟದ ಮೇಲಿನವಳು. ದಟ್ಟ ಕಾಡು, ಕಣಿವೆ, ಬೆಟ್ಟಗುಡ್ಡಗಳ ಸಾಲು, ನದಿಗಳು, ಕರಾವಳಿ ಇವುಗಳೆಲ್ಲದರ ಫ಼ಲವತ್ತದೆ ಇದ್ದರೂ ಈ ಜಿಲ್ಲೆ ಕಾಲಕ್ಕೆ ತಕ್ಕ ಅಭಿವೃದ್ಧಿಯನ್ನು ಕಾಣದೆ, ಕನಿಷ್ಟ ನಾಗರಿಕ ಸೌಕರ್ಯವನ್ನು ಇಂದಿಗೂ ಕಂಡಿಲ್ಲವೆಂಬುದನ್ನು ಕೋಪ ಮತ್ತು ದುಖಃದಿಂದಲೇ ಜಿಲ್ಲೆಯಾಚೆ ಇರುವ ನಾವು, ನಮ್ಮ ಜಿಲ್ಲೆಯ ಬಗೆಗೆ ಹೇಳಿಕೊಳ್ಳುತ್ತೇವೆ. ಇದಕ್ಕೆ ಸರಿಯಾಗಿ ರಾಜಕೀಯ ಪ್ರಾಬಲ್ಯ ಕೂಡ ಈ ಜಿಲ್ಲೆಗೆ ಇಲ್ಲ.
ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯೆಯಾಗಿರುವ ಡಾ. ಎಚ್. ಎಸ್. ಅನುಪಮಾ ತಮ್ಮ ಕವಲಕ್ಕಿ ಮೇಲ್ ಸಿರೀಸ್‌ನಲ್ಲಿ ವೈದ್ಯೆಯ ಕಣ್ಣಲ್ಲಿ ಕೊರೊನಾ ಚಿತ್ರಣಗಳನ್ನು ಕಟ್ಟಿಕೊಡುವುದರ ಜೊತೆಗೆ ಅಲ್ಲಿಯ ಹಲವಾರು ಸಂಗತಿಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ. ರೋಗಿಗಳನ್ನು ಪರೀಕ್ಷಿಸಿ, ಔಷಧ ಕೊಡುವ ಬರಿಯ ಡಾಕ್ಟರ್ ಆಗದೆ, ರೋಗಿಯ ರೋಗದ ಆಚೆಗೆ ತಮ್ಮ ಕಿವಿ, ಕಣ್ಣು, ಹೃದಯವನ್ನು ತೆರೆದಿಟ್ಟು ಮಮತೆಯ ‘ಅಮ್ಮ’ನಾಗುತ್ತಾರೆ. ತಾವು ಇದ್ದ ಸಮಾಜದಲ್ಲಿಯ ಎಲ್ಲ ಬಗೆಯ ಜನರನ್ನೂ ಒಳಗೊಳ್ಳುತ್ತಾರೆ. ಮೇಲ್ಜಾತಿಯವರು, ಸಮಾಜದ ಅಂಚಿನಲ್ಲಿ ಉಳಿದವರು, ದುಡಿಯುವ ಹೆಂಗಸರು, ಊರು ಬಿಟ್ಟು ಹೋದವರು – ಮತ್ತೆ ಬಂದು ಸೇರುವವರು, ಉದ್ಯೋಗ ಕಳೆದುಕೊಂಡವರು, ಪುಟಗೋಸಿ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ಇಲಾಖೆಯವರು, ಶಿಕ್ಷಕರು, ಶಾಲೆಯ ಮಕ್ಕಳು ಹೀಗೆ ಕವಲಕ್ಕಿಯೆಂಬ ಪುಟ್ಟ ಜಗತ್ತಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಇಲ್ಲಿದೆ. ಇದನ್ನು ಓದುತ್ತ ಓದುತ್ತ ಜಗತ್ತನ್ನೇ ಪೀಡಿಸುತ್ತಿರುವ ಕೊರೋನಾ ಹಿನ್ನೆಲೆಗೆ ಸರಿದು ಕವಲಕ್ಕಿಯ ಕೊರೋನಾದ ಬಗೆಗೇ ಆತಂಕವಾಗಿ ಬಿಡುತ್ತದೆ.
ಅನುಪಮಾ ಅವರ ಲವಲವಿಕೆಯ ಬರೆವಣಿಗೆ ಇದೆಲ್ಲವನ್ನೂ ಕಣ್ಣ ಮುಂದೆ ದೃಶ್ಯವಾಗಿ ಕಟ್ಟಿಕೊಡುತ್ತದೆ. ಈ ಸಾಂಕ್ರಾಮಿಕ ರೋಗದ ಪ್ರಾಥಮಿಕ ಅರಿವಾದರೂ ನನ್ನ ಜನರಿಗೆ ಬರಲಿ ಎಂದು ಬೇಡಿಕೊಳ್ಳುವಂತಾಗುತ್ತದೆ.
ರಜನಿ ಗರುಡ, ರಂಗತಜ್ಞೆ, ಧಾರವಾಡ.
*
ಮೊಬೈಲಿನಲ್ಲಿ ಓದಿದ್ದಕ್ಕೆ ಉದ್ದ ಎನ್ನಿಸಿತೆ?
ಕವಲಕ್ಕಿ ಮೇಲ್ ಅನ್ನು ಆಗಾಗ ಓದುತ್ತಿದ್ದೆ. ಇದನ್ನು ಓದುವಾಗೆಲ್ಲಾ ಟಿ.ಕೆ ದಯಾನಂದರ ರಸ್ತೆ ನಕ್ಷತ್ರ ನೆನಪಾಗುತ್ತಿತ್ತು. ಅದೂ ಇಂತಹದ್ದೇ ತಂಪು-ಬಿಸಿ ಮರಳನ್ನು ಒಟ್ಟಿಗೆ ಅಂಗೈಗೆ ಸುರಿದಂತೆ. ಮೊಬೈಲ್‌ನಲ್ಲಿ ಓದವುದಕ್ಕೋ ಏನೂ ಹೆಚ್ಚು ಬರೆದಿದ್ದಾರೆ ಎಂದು ನನಗೆ ಅನ್ನಿಸುತ್ತಿತ್ತು. ಲವಲವಿಕೆಯ ಭಾಷೆ ಈ ಕಥೆಗಳ ಜೀವಾಳ. ಕೆಲವೊಂದನ್ನು ಲಲಿತ ಪ್ರಬಂಧದಂತೆಯೂ ಓದಿಕೊಳ್ಳಬಹುದು. ಬರಹದ ಕೊನೆಯಲ್ಲಿ ಕೆಲವು ಸ್ಥಳೀಯ ಪದಗಳಿಗೆ ಅರ್ಥ ಕೊಡುತ್ತಿದ್ದುದರಿಂದ ಒಂದಷ್ಟು ಹೊಸ ಪದಗಳನ್ನು ಕಲಿತೆ. ಒಟ್ಟಾರೆಯಾಗಿ ನೋಡಿದಾಗ, ಒಬ್ಬ ಡಾಕ್ಟರ್ ಹೀಗೆ ಹತ್ತಾರು ವರ್ಷಗಳ ಕಾಲ ತನ್ನ ಬಳಿ ಬರುವ ರೋಗಿಗಳ ಜೊತೆ ಇಂಥಾ ಬಾಂಧವ್ಯ ಉಳಿಸಿಕೊಳ್ಳಬಹುದಾ ಅಚ್ಚರಿಯಾಗುತ್ತದೆ.
ಗೋವಿಂದರಾಜು ಎಂ ಕಲ್ಲೂರು, ಸಂಶೋಧನಾರ್ಥಿ, ತುಮಕೂರು ವಿಶ್ವವಿದ್ಯಾಲಯ
*
ನೈಜ ಘಟನೆಗಳ ಆಪ್ತ ನಿರೂಪಣೆ ಆರ್ದ್ರಗೊಳಿಸಿತು
ಅಜ್ಜ ಅಜ್ಜಿಯರ ಆತ್ಮೀಯತೆ, ಹುಸಿ ಜಗಳ, ಬೇರ್ಪಡುವಿಕೆ, ಮತ್ತೆ ಅಹಂ ಮರೆತು ಒಂದಾಗುವಿಕೆ – ಒಂದು ಅದ್ಭುತ ಸಂದೇಶ. ತಮ್ಮಲ್ಲಿಗೆ ಬರುವ ಗ್ರಾಹಕ (ರೋಗಿಗಳು)ರ ಕಾಯಿಲೆ ತಪಾಸಣೆ ಮತ್ತು ಔಷಧ ನೀಡುವಿಕೆಗಷ್ಟೆ ಸೀಮಿತಗೊಳ್ಳದೆ ಅವರ ಸಾಂಸಾರಿಕ ಬದುಕೂ ಕೂಡಾ ಮಾನವೀಯತೆಯ ವೈದ್ಯರ ಬದುಕಿನೊಂದಿಗೆ ಹೇಗೆ ತಾದಾತ್ಮ್ಯ ಹೊಂದಿರುತ್ತದೆ. ನೈಜ ಘಟನೆ, ಸರಳ- ಆದರೆ ಆಪ್ತ ನಿರೂಪಣೆ ಮನಕ್ಕೆ ತಟ್ಟಿದ್ದು ಮಾತ್ರ ಅಲ್ಲ ಆರ್ದ್ರಗೊಳಿಸಿತು. ಅಭಿನಂದನೆಗಳು.
ಈಗಾಗಲೇ ಹತ್ತಿರ ಹತ್ತಿರ ಎರಡು ವರ್ಷಗಳಿಂದ ಕೊರೋನಾ ಬಾಧಿಸುತ್ತಿದ್ದು, ಯಾವೆಲ್ಲ ರೀತಿಯಿಂದ ಸುರಕ್ಷಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ನಮ್ಮ ಜನಕ್ಕೆ, ಅದರಲ್ಲೂ ಮುಖ್ಯವಾಗಿ ‘ವಿದ್ಯಾವಂತ’ ಮಂದಿಗೇ ಇನ್ನೂ ಬುದ್ಧಿ ಬಂದಿಲ್ಲ ಅನ್ನುವುದೇ ದುರಂತ. ತಮ್ಮ ಪ್ರಾಣದ ಹಂಗು ತೊರೆದು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ವೈದ್ಯರು – ಇವರ ಬಗ್ಗೆ ಕೃತಜ್ಞತೆ ಸಲ್ಲಿಸುವ ಬದಲು ಎಷ್ಟೊಂದು ಕೆಟ್ಟದಾಗಿ ನಡೆದುಕೊಳ್ಳುತ್ತಾರಲ್ಲ ಅಂತ ನಮಗೇ ಮುಜುಗರವಾಗ್ತಿದೆ. ಕವಿತಾರಂತೆ ಅತ್ಯಂತ ಕಠಿಣ ಕೌಟುಂಬಿಕ ಸಮಸ್ಯೆ ಎದುರಿಸುತ್ತಲೇ ನಗುಮುಖದ ಕರ್ತವ್ಯ ನಿರ್ವಹಿಸುತ್ತಿರುವ ಈ ಎಲ್ಲ (ವೈದ್ಯಕೀಯ ಕ್ಷೇತ್ರದ ಎಲ್ಲರಿಗೂ)ರಿಗೆ ಅಭಿಮಾನಪೂರ್ವಕ ನಮನಗಳು. ಡಾ. ಕೃಷ್ಣ ಗಿಳಿಯಾರ್ ಇವರಿಗೂ ಅಭಿನಂದನೆಗಳು (ಇಲ್ಲಸ್ಟ್ರೇಷನ್ಗಳು ಮನಸೆಳೆದವು).
ಮೊನ್ನೆ ತಾನೆ ಅಜ್ಜ-ಅಜ್ಜಿ ದಂಪತಿಗಳ ಅಪೂರ್ವ ಬದುಕಿನ ಬಗ್ಗೆ ಹೇಳಿದಿರಿ. ಹಾಗೆಯೇ ಅನ್ಯೋನ್ಯವಾಗಿದ್ದು ಲೋಕಕ್ಕಾಗಿಯೇ ಬದುಕಿದ ವಿಠ್ಠಲ-ಯಮುನಾ ದಂಪತಿಗಳ ಚಿತ್ರಣ ವಿಶೇಷ ಅನುಭವ ನೀಡಿತು. ಸಾವು ಕಣ್ಣ ಮುಂದೇ ಇದ್ದರೂ ಇಬ್ಬರೂ ತೋರಿದ ಧೈರ್ಯ, ಸ್ಥಿತಪ್ರಜ್ಞತೆ ಅಸಾಧಾರಣವಾದುದು.
ಕಾಲಕ್ಕೆ ತಕ್ಕಂತೆ ಧನಾತ್ಮಕ ಬದಲಾವಣೆ/ಹೊಂದಾಣಿಕೆಗೆ ಶಂಕರಯ್ಯ ಹೊಂದಿಕೊಂಡದ್ದು ವಿಶೇಷ. ಶತಮಾನಗಳಿಂದ ನಂಬಿಕೆಗಳಿಗೆ (ಹಿಂದೂ, ಮುಸ್ಲಿಂ, ಕ್ರೈಸ್ತ… ದೇವರುಗಳು) ಎರಡು ವರ್ಷಗಳಿಂದ ಕೊರೋನಾ ಸವಾಲಾಗಿ ನಿಂತಿದ್ದರೂ, ಇನ್ನೂ ಯಾವುದೇ ವಿಮರ್ಶೆ ಮಾಡದೆ ಅವುಗಳಿಗೆ ಜೋತು ಬೀಳುವುದನ್ನು ಕಂಡಾಗ ಏನು ಹೇಳಲಿ? ನಾನು ಮಾತಾಡುತ್ತಾ ‘ಎರಡು ವರ್ಷಗಳಿಂದಲೂ ದೇವಸ್ಥಾನ, ಚರ್ಚು, ಮಸೀದಿಗಳು ಮುಚ್ಚಿದ್ದರೂ ಯಾರಿಗೆ ಏನೂ ತೊಂದರೆ ಆಗಿಲ್ವಲ್ಲಾ’ ಅನ್ನುತ್ತಿದ್ದುದನ್ನು ಶಂಕರಯ್ಯನವರ ಬಾಯಿಂದಲೂ ಕೇಳಿದಾಗ ಖುಷಿಯಾಯಿತು.
ಕೆ. ವಿ. ಶರ್ಮ ಬಾಳಿಲ, ಮಂಗಳೂರು
*
ಹಂಝನ ಕಥೆ ಮರೆಯಗಾಗದು
ಕೌಟುಂಬಿಕ ಹಿಂಸೆ ನಿಜಕ್ಕೂ ಸತ್ಯವಾದುದು. ಹೀಗೆ ಎಷ್ಟು ಮನೆಗಳಲ್ಲಿ ನಡೆದಿದೆಯೋ, ಇನ್ನೂ ನಡೆಯುತ್ತಿದೆ. ಅರಿವಿಲ್ಲದೆ ನಡೆಯುವ ಮರಣ. ಅವ್ವಿಯ ಗೋಳಾಟ ಮೌನವಾಗಿ ನನ್ನನ್ನು ತಟ್ಟಿತಿಲ್ಲಿ. ಹೂಬೆಹೂಬು ನಿರೂಪಣೆ. ಮದುವೆಯಾಗೇ ಸಿದ್ಧವೆಂದ ಗಪ್ಪತಿಯ ಮಗನ ಮೊಂಡುತನ ದಡ್ಡತನ. ಎಲ್ಲ ಘಟನೆಗಳ ಸಹಜ ನಿರೂಪಣೆ. ಸುಂದರ ಬರಹ. ಮಗಳು ಗಟ್ಟಿಗಿತ್ತಿ, ಚುರುಕು. ಬುದ್ಧಿವಂತೆ, ಓದಿದಮೇಲೆ ನೋಡದ ಅವಳನ್ನು ನೋಡಿದೆ.
ಹಂಝನ ಕತೆ ಚೆನ್ನಾಗಿದೆ. ತನಗೆ ದೃಷ್ಟಿ ಕಾಯಿಲೆ ಇದ್ದರೂ ಕಷ್ಟಕಾಲದಲ್ಲಿ ಬೇರೆಯವರಿಗೆ ನೆರವಾಗುವ ಹೃದಯವಂತ ಯುವಕ. ಹೆಮ್ಮೆ ಅನಿಸ್ತು. ಹೇಳಿದರೆ ಬಹಳ ಇದೆ. ಹೌದು. ಮಣ್ಣಿನ ಯಾವ ಗುಣ ಮುಳ್ಳನ್ನು ಹೊತ್ತು ತರುತ್ತದೆಯೋ. ತುಂಬಾ ಚೆನ್ನಾಗಿದೆ. ಮತ್ತೆಮತ್ತೆ ಓದಿದೆ. ಈ ಕೋವಿಡ್ ಎಸ್ಟು ಜನರ ನೆಮ್ಮದಿ ನಿದ್ದೆ ಊಟ ಕಸಿದು ಕೊಂಡಿದೆ. ಬದುಕು ಬಗೆಹರಿಯದ ಸಮಸ್ಯೆಗಳಿಂದ ತುಂಬಿದೆ. ಎಳೆ ಎಳೆ ಆಗಿ ಬಿಡಿಸಿರುವ ನಿಮ್ಮ ನೈಪುಣ್ಯ, ಅದ್ಭುತ ಕಲೆಗಾರಿಕೆಗೆ ನಮನ.
ಹೌದು. ಕಾಲಿನ ಬೆರಳ ಸಂದಿಯಲ್ಲಿ ಹುಳು ಆಗಿ ಒದ್ದಾಡುವ ಜೀವಗಳು ಬಲಿಯಾಗಿವೆ. ಬಡತನ ಅನಕ್ಷರತೆ ಮೌಢ್ಯ ಯಾರದೋ ಜೇಬು ತುಂಬಿಸುವ ಕೆಲಸಕ್ಕೆ ಜೀವ ತೇಯ್ದ ಜೀವಗಳು ಒದ್ದಾಡುತ್ತಿದೆ ಕರುಣೆಯಿಲ್ಲದ ಜನರ ನಡುವೆ. ವಾಸ್ತವ ಚಿತ್ರಣ. ಇಲ್ಲಿ ಉತ್ತರದಲ್ಲಿ ಶ್ರಮಜೀವಿಗಳ ಪಾಡು. ಕೂಲಿಕಾರರ ಬದುಕು ಮೂರಾಬಟ್ಟೆ. ನಮ್ಮ ಮನೆಯ ಪಕ್ಕದಲ್ಲಿ ಮನೆ ಕಟ್ಟುವ ಕೆಲಸದವರು ಮಕ್ಕಳು ಹೆಂಗಸರ ನೋಡುವಾಗೆಲ್ಲ ಮನಸು ಬಹು ಭಾರ. ಸಣ್ಣ ಸಣ್ಣ ಗುಡಿಸಲು. ಅದರ ಪಕ್ಕ ನಾಯಿಗಳು ಆಕಳು ಸಣ್ಣ ಮಕ್ಕಳು. ಹೇ ದೇವಾ! ಜೋರು ಮಳೆ ಗಾಳಿ ಗುಡುಗು ಮಿಂಚು ಗುಡಿಸಲು ಕಟ್ಟಿಕೊಂಡು ಅಡುಗೆ ಹೇಗೆ ಮಾಡ್ತಾರೋ ಏನು ತಿನ್ನುತ್ತಾರೋ ಎಲ್ಲ ದೂರದ ಬಿಹಾರ್ ರಾಜಸ್ಥಾನದಿಂದ ಬಂದವರೇ.
ಒಬ್ಬರು ಹೇಳುತ್ತಾ ಇದ್ದರು, ಊರಲ್ಲಿ ಚೆಂದ ಮನೆ ಇರ್ತದೆ ಇಲ್ಲಿ ದುಡಿಯಲು ಬಂದಾಗ ಹೀಗೆ ಇರ್ತಾರೆ. ಕೆಲಸ ಮುಗಿಸಿ ಹೋದಮೇಲೆ ಚೆನ್ನಾಗಿ ಆರಾಮಿರ್ತಾರೆ ಅಂತ. ಅದೆಂಥ ಆರಾಮೋ. ವರುಷದುದ್ದಕ್ಕೂ ಇದೇ ನೋಡುತ್ತೇನೆ. ಯಾವಾಗ ಮುಗಿಸಿ ಹೋಗುತ್ತಾರೋ? ಅವರು ಹೇಳಿದ್ದನ್ನ ಕೇಳಿ ನಾನೇ ಕಲ್ಪಿಸಿಕೊಂಡು ಸಮಾಧಾನ ಮಾಡಿಕೊಂಡೆ. ಇರಲಿ ಅಲ್ಲಿ ಹೋದಾಗ ಚೆನ್ನಾಗಿ ಮನೇಲಿ ಇರುತ್ತಾರಲ್ಲ ಅಂತ ನನ್ನ ತಾತ್ಕಾಲಿಕ ಸಮಾಧಾನ. ಒಮ್ಮೊಮ್ಮೆ ಇಡೀ ದಿನ ಅವರೆಲ್ಲರ ಚಿತ್ರಣ. ಯಾರಿಗೂ ಕಾಣದ್ದು ನನಗೆ ಕಾಣುತ್ತದೆ ಅನಿಸುತ್ತದೆ ಬೇಸರ ಆಗುತ್ತದೆ. ನಾನು ಬರೀ ದೂರ ನಿಂತು ನೋಡುತ್ತೇನೆ. ಮರುಗುತ್ತೇನೆ. ಅವರಿಗೇನೂ ಸಹಾಯ ಆಗುವುದಿಲ್ಲ ಎಂದು ಬೇಗುದಿಗೆ ಒಳಗಾಗುವೆ.
ಗೋಪಾಲ ಮಾಸ್ತರರಂಥವರ ಬದುಕು ನೂರಕ್ಕೆ ನೂರು ಸತ್ಯ. ಹಳ್ಳಿಯಲ್ಲಿ ಎಸ್ಟು ಮನೆಗಳಲ್ಲಿ ಈ ರೀತಿ ವಾತಾವರಣ ನಿರ್ಮಾಣ ಆಗಿದೆ. ಅಜ್ಜ ಅಜ್ಜಿಯರು ತಮಗೆ ತಾವೇ ಎನ್ನುತ್ತ ಬದುಕು ಸಾಗಿಸುತ್ತಿದ್ದಾರೆ. ಸಹಜ ಚಿತ್ರಣ.
ಸುಭದ್ರಾ ಹೆಗಡೆ, ಅಹಮದಾಬಾದ
*
ಪರಿಹಾರ ಬೇಡ ಅಂಥವರಿಗೆ
ಗ್ರಾಮೀಣ ಸೊಗಡಿನ ಅಚ್ಚಗನ್ನಡದಲ್ಲಿ ನಿಮ್ಮ ಬರಹ ಓದುವುದೇ ಸೊಗಸು. ನಿಮ್ಮ ಕಥೆಗಳಲ್ಲ ಬರುವಂಥ ಕೆಲ ಕೌಟುಂಬಿಕ ದೌರ್ಜನ್ಯದ ಕೇಸ್ಗಳನ್ನು ನೋಡಿದ್ದೇನೆ. ಎಷ್ಟು ಬುದ್ಧಿ ಹೇಳಿದರೂ ಅವರು ಕುಡುಕ, ಕೆಡುಕ ಗಂಡನ ಪರವೇ. ನಮ್ಮ ಮಾತು ಕಿವಿಗೆ ಹಾಕಿಕೊಳ್ಳುವುದಿಲ್ಲ. ದುಃಖ ಆದಾಗ ಹೇಳಿಕೊಂಡು ಹಗೂರಾಗ್ತಾರೆ ಅಷ್ಟೇ ಅನ್ನಿಸುತ್ತೆ. ನೀವು ಬರೆಯೋದು, ನಾವು ಓದೋದು ಇನ್ನೂ ತುಂಬಾ ಇದೆ.
ಸುಧಾ ಭಂಡಾರಿ, ಹಡಿನಬಾಳ
*
ಕೌಶಲಪೂರ್ಣ ಆಪ್ತಸಮಾಲೋಚನೆ
ಚಂಡಮಾರುತ ಹಲವರ ಬದುಕಗಳನ್ನು ಕಿತ್ತುಕೊಂಡಿದೆ. ನಿಮ್ಮ ಮಾತಿನ ಔಷಧದಿಂದ ಅಂಥೊಬ್ಬರು ಚೇತರಿಸಿಕೊಂಡರು ಎನ್ನುವುದು ಖುಷಿಯ ಸಂಗತಿ. ನಿಮ್ಮ ಆಸ್ಪತ್ರೆ ಮುಂದೆ ‘ಇಲ್ಲಿ ಮಾತಿನ ಚಿಕಿತ್ಸೆಯೂ ಉಂಟು’ ಅಂತ ಬೋರ್ಡ್ ಹಾಕಬಹುದು.
‘ಕೂತುಕೂತು ದಡ್ಡರಾಗಬಾರ್ದು ಅಂತ ಮಾರಿ ಗೋಲ್ಡ್ ಬಿಸ್ಕತ್ತಲ್ಲಿ ಇಪ್ಪತ್ನಾಲ್ಕು ತೂತು ಇದೆ; ಕರೆಂಟು ಹೋದಮೇಲೆ ಒಂದು ನಿಮಿಷ ಹದಿನಾಲ್ಕು ಸೆಕೆಂಡಿಗೆ ಫ್ಯಾನು ತಿರುಗುವುದು ನಿಲ್ಲಿಸುತ್ತೆ; ತೂತಿರುವ ಒಂದು ಚೊಂಬು ನೀರು ತುಂಬಲು ಏಳೂವರೆ ನಿಮಿಷ ಬೇಕಾಗುತ್ತೆ; ನನ್ನ ರೆಪ್ಪೆಯಲ್ಲಿ 212 ಕೂದಲಿವೆ ಅಂತೆಲ್ಲ ಹೊಸಹೊಸಾ ಸಂಶೋಧನೆ ಮಾಡ್ತಿದೀನಿ ಅಮ್ಮಾ’ ಎಂದಳು.
ಇದನ್ನು ಓದಿ ಭಾರೀ ನಗು ಬಂತು. ಆದರೆ ಅವರ ಪರಿಸ್ಥಿತಿ ಮಾತ್ರ ಕಷ್ಟವೇ. ಅದಿರಲಿ ಡಾಕ್ಟ್ರೇ, ಈ ಕಂತಿನಲ್ಲಿರುವ ಬೇರೆಬೇರೆ ಕಥೆ ಓದ್ತಾ ಅನ್ಸಿದ್ದು ನೀವು ಕೌಶಲಪೂರ್ಣ ಆಪ್ತ ಸಮಾಲೋಚಕರು ಸಹ ಎಂದು. ಅಷ್ಟೆಲ್ಲ ಒತ್ತಡದ ನಡುವೆ ಬರೆಯಲು ಹೇಗೆ ಸಮಯ ಮಾಡಿಕೊಳ್ತೀರಿ ಎಂದು ಸೋಜಿಗವಾಗುತ್ತದೆ.
ಹಂಝನ ಕತೆ ಓದಿದೆ. ಈ ಮುಂಚೆ ನೀವೇ ಬರೆದ ಹಾಗೆ ಕೊರೊನಾ ಬಂದ್ಮೆಲೆ ಏನೆಲ್ಲ ಆಗ್ತಾಯಿದೆ. ನಿಮ್ಮ ಮಾಂತ್ರಿಕ ಬರೆಹ ಓದ್ತಿದ್ರೆ ಸೋಜಿಗವಾಗುತ್ತೆ. ನೋಡುವ ಕಣ್ಣಿರಬೇಕು. ನೀವಿರುವ ಪುಟ್ಟ ಊರಿನ ಪರಿಸರದಿಂದಲೇ ಎಂಥೆಂಥಾ ಸಂಗತಿ ಆಯ್ದು ಬರೀತಿದ್ದೀರಿ! ಸೋಜಿಗವಾಗುತ್ತದೆ. ಬಹುತೇಕರು ಕ್ಷುಲ್ಲಕ ಸಂಗತಿ ಎಂದು ಕಡೆಗಾಣಿಸುವಂಥವೂ ನಿಮ್ಮ ಕಣ್ಣಿನಲ್ಲಿ ಕಥೆಗಳಾಗಿ ಅರಳುತ್ತವೆ. ಆದ್ದರಿಂದ ‘ನೋಡುವ ಕಣ್ಣುಗಳು’ ಇರಬೇಕು. ಅಂಥ ಅಂತರ್ದೃಷ್ಟಿ ನಿಮಗಿದೆ.
ಕುಮಾರ ರೈತ, ಪತ್ರಕರ್ತ, ಬೆಂಗಳೂರು
ನಿಮಗೂ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಖಂಡಿತ ಬರೆಯಬಹುದು tv9kannadadigital@gmail.com
ಇದನ್ನೂ ಓದಿ : National Doctor‘s Day 2021 : ಕವಲಕ್ಕಿ ಮೇಲ್ ; ‘ನಾನೆಂಬ ಸೂತ್ರಧಾರಿಣಿ ಇಲ್ಲದೇ ನೀವೇ ನಿಮ್ಮದನ್ನು ಹೇಳಿಕೊಳ್ಳುವ ಕಾಲವೂ ಬರಲಿದೆ‘
ಇದನ್ನೂ ಓದಿ : 30 ಕವಲಕ್ಕಿ ಮೇಲ್ಗಳನ್ನು ಇಲ್ಲಿ ಓದಬಹುದು. https://tv9kannada.com/specials
Published On - 2:34 pm, Thu, 1 July 21