ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿದ್ದ ವ್ಯಕ್ತಿ ಇಂದು ವರ್ಷಕ್ಕೆ 150 ಕೋಟಿ ಆದಾಯದ ಒಡೆಯ

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ವರ್ಷಕ್ಕೆ 150 ಕೋಟಿ ಆದಾಯಗಳಿಸುವ ಉದ್ಯಮಿಯಾಗಿದ್ದಾನೆ ಎಂಬುದನ್ನು ಕೇಳಲು ಎಷ್ಟು ಖುಷಿ ಕೊಡುತ್ತೆ ಅಲ್ವ? ಹಾಗಾದ್ರೆ ಈ ಉದ್ಯಮಿ ಯಾರು? ಇವರು ಮಾಡುತ್ತಿರುವ ಕೆಲಸವಾದ್ರು ಏನು? ಎಂಬ ಸ್ಫೂರ್ತಿದಾಯಕ ಕಥೆ ಇಲ್ಲಿ ಓದಿ.

ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿದ್ದ ವ್ಯಕ್ತಿ ಇಂದು ವರ್ಷಕ್ಕೆ 150 ಕೋಟಿ ಆದಾಯದ ಒಡೆಯ
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ
Ayesha Banu

| Edited By: KUSHAL V

Feb 26, 2021 | 5:21 PM

ರಾಜಧಾನಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿದ್ದ ಇವರಿಗೆ ಲಾರಿ ಓಡಿಸುವುದು, ಕಾಫಿ, ಕೃಷಿ ಮತ್ತು ಡೈರಿ ಫಾರ್ಮಿಂಗ್​ನಲ್ಲಿ ಹೆಚ್ಚು ಆಸಕ್ತಿ ಇತ್ತು. ಸದ್ಯ ಇವರು ತಮ್ಮ ಆಸಕ್ತಿಯನ್ನೇ ಶಕ್ತಿ ಮಾಡಿಕೊಂಡು ವರ್ಷಕ್ಕೆ ಸುಮಾರು 150 ಕೋಟಿ ರೂ ಆದಾಯವನ್ನು ಗಳಿಸುತ್ತಿದ್ದಾರೆ. ಹಾಗಾದ್ರೆ ಯಾರು ಈ ವ್ಯಕ್ತಿ? ಈ ಮಟ್ಟಕ್ಕೆ ಏರಲು ಅವರು ಮಾಡಿದ್ದೇನು? ಎಂಬುದನ್ನು ನೋಡುವುದಾದರೆ.. ಆ ವ್ಯಕ್ತಿ ಸದ್ಯ, ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟ್​ಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ!

ಭಾರತವು ಅನೇಕ ಬಡವರನ್ನು ಶ್ರೀಮಂತರನ್ನಾಗಿಸಿದೆ. ಆ ಹಠ, ಛಲ ಭಾರತದ ಮಣ್ಣಿನ ಗುಣದಲ್ಲಿಯೇ ಇದೆ. ಈ ಪೈಕಿ ಬೆಂಗಳೂರು ಮೂಲದ ಲಾರಿ ಚಾಲಕ ಕಂ ಉದ್ಯಮಿಯಾಗಿರುವ ಜಿ.ಆರ್. ಷಣ್ಮುಗಪ್ಪ. ಇವರು ಈ ಮೊದಲು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಮುಂದೆ ಇವರು ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ಮೆಚ್ಚುಗೆಗೆ ಪಾತ್ರರಾದವರು. 2006 ರಲ್ಲಿ ಅಸ್ಸಾಂನಲ್ಲಿ ನಡೆದ ಸಮಾರಂಭವೊಂದರಲ್ಲಿ ದೇಶದ ‘ಸೃಜನಶೀಲ ನಾಯಕರು’ ಎಂದು ಅಬ್ದುಲ್ ಕಲಾಂ ಅವರು ಷಣ್ಮುಗಪ್ಪನವರನ್ನು ಶ್ಲಾಘಿಸಿದ್ದರು.

50 ಪೈಸೆ ಗಳಿಸುತ್ತಿದ್ದವ 150 ಕೋಟಿ ಆದಾಯದ ಒಡೆಯ ಷಣ್ಮುಗಪ್ಪನವರ ತಂದೆ ಬೀಡಿ ಮತ್ತು ತಂಬಾಕು ಮಾರುತ್ತಿದ್ದರು. ಏಳು ಸಹೋದರರ ಪೈಕಿ ಇವರೂ ಒಬ್ಬರು. ಷಣ್ಮುಗಪ್ಪ ಹನ್ನೆರಡನೇ ತರಗತಿಯಲ್ಲೇ ಡ್ರಾಪ್ ಔಟ್ ಆದವರು. ತುಂಬು ಕುಟುಂಬ, ಬಡತನದಲ್ಲಿ ಬೆಳೆದ ಇವರಿಗೆ ಕಷ್ಟ ಎನ್ನುವುದು ನೆಂಟನಾಗಿತ್ತು. ಆದ್ರೆ ಕಷ್ಟದ ಪರಿಸ್ಥಿತಿಯನ್ನೂ ಹೆದರಿಸಿ ಈಗ ವರ್ಷಕ್ಕೆ ಸುಮಾರು 150 ಕೋಟಿ ಗಳಿಕೆ ಹೊಂದಿರುವ ಉದ್ಯಮಿಯಾಗಿದ್ದಾರೆ. ಸ್ವಂತ ದೊಡ್ಡ ದೊಡ್ಡ ಟ್ರಕ್​ಗಳನ್ನು ಹೊಂದಿದ್ದಾರೆ. ಕಾಫಿ ವ್ಯವಹಾರವನ್ನು ನಡೆಸುತ್ತಾರೆ, ಕೃಷಿ ಮತ್ತು ಡೈರಿ ಫಾರ್ಮಿಂಗ್ ಸಹ ಮಾಡುತ್ತಾರೆ. ಇನ್ನು 2011-12ರಲ್ಲಿ ಷಣ್ಮುಗಪ್ಪ ಅವರು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ (AIMTC) ಅಧ್ಯಕ್ಷರಾದರು. ಇವರು ಆ ಅವಧಿಯಲ್ಲಿಯೇ ಸುಮಾರು ಎರಡು ಕೋಟಿ ಸಾರಿಗೆ ನೌಕರರನ್ನು ಪ್ರತಿನಿಧಿಸುತ್ತಿದ್ದರು.

ತಂದೆಗೆ ಹೊರೆ ಆಗಬಾರದೆಂದು ಮನೆ ಬಿಟ್ರು ಷಣ್ಮುಗಪ್ಪ ಅವರು ಇಂದು ಇರುವ ಆ ಸ್ಥಾನವನ್ನು ಪಡೆಯಲು ನಾಲ್ಕು ದಶಕಗಳ ಹೋರಾಟ ಮಾಡಿದ್ದಾರೆ. ತಮಿಳುನಾಡಿನ ತಿರುಪತ್ತೂರು ಪುದುಪಟ್ಟಿ ಗ್ರಾಮದಿಂದ ಬಂದ ಷಣ್ಮುಗಪ್ಪ ಅವರ ಕುಟುಂಬ ಬಹಳಷ್ಟು ಕಷ್ಟಗಳನ್ನು ಎದುರಿಸಿದೆ. ತುತ್ತು ಅನ್ನಕ್ಕಾಗಿ ಪರದಾಡಿದೆ. ಷಣ್ಮುಗಪ್ಪ ಸರ್ಕಾರಿ ಶಾಲೆಯಲ್ಲಿ ಓದಿದರು. ಆದರೆ ಹತ್ತನೇ ತರಗತಿಯಲ್ಲಿ ಫೇಲ್ ಆದರು. ಬಳಿಕ ತಂದೆಗೆ ಹೊರೆಯಾಗ ಬಾರದೆಂದು ಒಂದು ದಿನ ಅವರು ಮನೆ ಬಿಟ್ಟು ಹೊರ ನಡೆದರು. ಸುಮಾರು 30 ಕಿ.ಮೀ. ನಡೆದು ಕೃಷ್ಣಗಿರಿಗೆ ತಲುಪಿದರು. ಬಳಿಕ ಅಲ್ಲಿ ಟ್ರಕ್ ಹತ್ತಿ ಸೀದಾ ಬೆಂಗಳೂರಿಗೆ ಬಂದು ಇಳಿದರು. ಇಲ್ಲಿಂದಲೇ ಶುರುವಾಗಿದ್ದು ಅವರ ಜೀವನದ ಹೊಸ ಜರ್ನಿ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಹೊಟ್ಟೆ ತುಂಬಿಸಿಕೊಳ್ಳಲು, ಜೀವನ ಕಟ್ಟಿಕೊಳ್ಳಲು ಷಣ್ಮುಗಪ್ಪ ಜೀವನದ ಕಠಿಣ ಪ್ರಯಾಣವನ್ನು ಶುರು ಮಾಡಿದರು.

1971 ರಲ್ಲಿ ಕೂಲಿ ಕೆಲಸಗಾರನಾಗಿ, ರೈಲ್ವೆ ಸರಕುಗಳ ಅಂಗಳದಲ್ಲಿ ಗೋಣಿ ಚೀಲವನ್ನು ಸಾಗಿಸಲು ಅವರಿಗೆ ಸಿಗುತ್ತಿದ್ದದ್ದು ಕೇವಲ 50 ಪೈಸೆ ಅಥವಾ 1 ರೂಪಾಯಿ. ಕೆಲವು ದಿನಗಳ ನಂತರ, ಬೆಂಗಳೂರಿನ ಹೊರವಲಯದಲ್ಲಿರುವ ವೈಟ್‌ಫೀಲ್ಡ್‌ನಲ್ಲಿರುವ ಬ್ರೂಕ್ ಬಾಂಡ್ ಅಂಗಳದಲ್ಲಿ ಸರಕುಗಳನ್ನು ಲೋಡ್ ಮಾಡಲು ಮತ್ತು ಅನ್ ಲೋಡ್ ಮಾಡಲು ಅವರನ್ನು ಕಳುಹಿಸಲಾಯಿತು. 1972 ರಲ್ಲಿ, ಅವರು ತಮ್ಮ ಸಹೋದರರೊಂದಿಗೆ ಶಶಿಕಲಾ ಸಾರಿಗೆ ಸಂಸ್ಥೆಗೆ ಸೇರಲು ನಗರಕ್ಕೆ ಮರಳಿದರು.

ಸಾಧನೆಯತ್ತ ಮೊದಲ ಹೆಜ್ಜೆ ಇಡಲು ಸಹಾಯಕವಾಯ್ತು ಕೂಡಿಟ್ಟ ಹಣ ಷಣ್ಮುಗಪ್ಪ ತಾವು ಕೂಡಿಟ್ಟ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಮಿಲಿಟರಿ ಟ್ರಕ್ ಖರೀದಿಸುವ ನಿರ್ಧಾರ ಮಾಡಿದ್ರು. ಇದೇ ಅವರ ಸಾಧನೆಗೆ ನಾಂದಿ ಹಾಡಿದ್ದು. ಇದೇ ಮೊದಲ ಹೆಜ್ಜೆ ಇಟ್ಟು ಕೂಡಿಟ್ಟ ಸುಮಾರು 4 ಸಾವಿರ ರೂಗೆ ಸೆಕೆಂಡ್ ಹ್ಯಾಂಡ್ ಮಿಲಿಟರಿ ಟ್ರಕ್ ಖರೀದಿಸಿದರು. ಟ್ರಕ್ ರಿಪೇರಿ ಬಳಿಕ ತನ್ನ ಸಹೋದರ ಆ ಟ್ರಕ್​ಗೆ ಡ್ರೈವರ್ ಆದ್ರು. ಮತ್ತು ಷಣ್ಮುಗಪ್ಪ ಕ್ಲೀನರ್ ಆಗಿ ಟ್ರಕ್​ನಲ್ಲಿ ರೈಲ್ವೆ ಸರಕುಗಳನ್ನು ಶೆಡ್​ನಿಂದ ಲೋಡ್ ಮಾಡಲು ಪ್ರಾರಂಭಿಸಿದರು. ಬಳಿಕ ಆ ವಾಹನವನ್ನು 22 ಸಾವಿರಕ್ಕೆ ಮಾರಾಟ ಮಾಡಿ 40 ಸಾವಿರಕ್ಕೆ ಮತ್ತೊಂದು ಟ್ರಕ್ ಖರೀದಿ ಮಾಡಿದರು. ಬೆಂಗಳೂರು ಮತ್ತು ಸೇಲಂ ನಡುವೆ ಟ್ರಕ್ ಸೇವೆ ಪ್ರಾರಂಭಿಸಿದರು.

ಹೀಗೆ ದಿನ ಕಳೆದಂತೆ ಷಣ್ಮುಗಪ್ಪನವರಿಗೆ ಟ್ರಕ್ಕಿಂಗ್ ಹೆಚ್ಚು ಖುಷಿ ಕೊಡುತ್ತಿದ್ದ ಕೆಲಸವಾಯ್ತು.. ಪ್ಯಾಷನ್ ಆಗಿ ಬೆಳೆಯಿತು. ಬಳಿಕ 1976 ರಲ್ಲಿ ತಮ್ಮ ಬಳಿಯಿದ್ದ ಸುಮಾರು 1 ಲಕ್ಷ ರೂಪಾಯಿ ಉಳಿತಾಯದೊಂದಿಗೆ, ಬ್ಯಾಂಕ್ ಸಾಲದ ಸಹಾಯದಿಂದ 2 ಲಕ್ಷ ವೆಚ್ಚದ ಹೊಸ ಟ್ರಕ್ ಅನ್ನು ಖರೀದಿಸಿದರು. “ಸಂಪೂರ್ಣ ಹಣವನ್ನು ಮರುಪಾವತಿಸಿದ ನಂತರವೇ, ಮತ್ತೊಂದು ವಾಹನವನ್ನು ಖರೀದಿಸುತ್ತೇನೆ. ಏಕೆಂದರೆ ಮುಂದೆ ಅದು ನನಗೆ ಸಮಸ್ಯೆಯಾಗಬಾರದು ಎಂದು ನಾನು ನಿರ್ಧರಿಸಿದೆ. 1985 ರ ಹೊತ್ತಿಗೆ, ನಮ್ಮ ಬಳಿ ಆರು ಟ್ರಕ್‌ಗಳು ಇದ್ದವು”ಎಂದು ಷಣ್ಮುಗಪ್ಪ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಟೀ ಬ್ಲೆಂಡಿಂಗ್ ಮೂಲಕ ಮತ್ತೊಂದು ಹೆಜ್ಜೆ 1986 ರಲ್ಲಿ, ಷಣ್ಮುಗಪ್ಪ ಬ್ರೂಕ್ ಬಾಂಡ್‌ ಎಂಬ ದೈತ ಕಂಪನಿಯಲ್ಲಿ ಟೀ ಬ್ಲೆಂಡಿಂಗ್ ಪ್ರಾರಂಭಿಸಿದರು. ದಿನಕ್ಕೆ 50 ಕೆಜಿ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದ ಟೀ ಮಿಶ್ರಣ ದಿನಕ್ಕೆ 100 ಟನ್‌ಗಳಿಗೆ ಹೆಚ್ಚಿತು. ಆದಾಗ್ಯೂ, ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಅವರ ದುರದೃಷ್ಟಕ್ಕೆ ಕಾರ್ಖಾನೆಯನ್ನು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮತ್ತು ತೆರಿಗೆ ವಿನಾಯಿತಿ ಸಲುವಾಗಿ ಕಂಪನಿಯನ್ನು ಧಾರವಾಡಕ್ಕೆ ಸ್ಥಳಾಂತರಿಸಬೇಕಾಯಿತು.

ಬಳಿಕ ಬ್ರೂಕ್ ಬಾಂಡ್ 10-15 ಕೆಜಿ ಕಾಫಿಯನ್ನು ಬ್ರೂ ಕಾಫಿ ಪ್ಯಾಕೆಟ್‌ಗಳಾಗಿ ಪರಿವರ್ತಿಸುವ ಕೆಲಸ ನೀಡಿತು. ಅದರಂತೆ ಷಣ್ಮುಗಪ್ಪ ಒಡೆತನದ ಕಂಪನಿ ರೋಹಿಣಿ ಪ್ಯಾಕರ್ಸ್ (Rohini Packers) ನಿಮಿಷಕ್ಕೆ 35 ಪ್ಯಾಕೆಟ್‌ಗಳನ್ನು ತಯಾರಿಸುತ್ತಿತ್ತು. ಸದ್ಯ ಈಗ ಆ ವೇಗ ಹೆಚ್ಚಾಗಿದ್ದು ನಿಮಿಷಕ್ಕೆ 600 ಪ್ಯಾಕೆಟ್‌ಗಳನ್ನು ಪ್ಯಾಕ್ ಮಾಡುತ್ತದೆ. ಬಳಿಕ ಆ ಪ್ಯಾಕೆಟ್‌ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ. ಕೇವಲ ನಾಲ್ಕು ಉದ್ಯೋಗಿಗಳಿಂದ ಪ್ರಾರಂಭವಾದ ಬಸಾಪುರದ ಕಾಫಿ ಘಟಕದಲ್ಲಿ ಈಗ 400 ಸಿಬ್ಬಂದಿ ಇದ್ದಾರೆ.

ನಾಲ್ಕು ದಶಕಗಳ ಹಿಂದೆ, ಷಣ್ಮುಗಪ್ಪ ಅವರ ಜೇಬಿನಲ್ಲಿ ಒಂದು ಪೈಸೆಯೂ ಇರಲಿಲ್ಲ . ಆದರೆ, ಇಂದು ಅವರ ವಾರ್ಷಿಕ ಆದಾಯ 150 ಕೋಟಿ ರೂಪಾಯಿ ಮೀರಿದೆ. ಅವರು ತಮ್ಮ ಕಾಫಿ ಘಟಕಗಳಲ್ಲಿ ಸುಮಾರು 1,000 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ. “ಈ ಬೆಳವಣಿಗೆ ಅಷ್ಟು ಸಲುಭದ್ದಲ್ಲ; ಕಠಿಣ ಪರಿಶ್ರಮದ್ದಾಗಿದೆ” ಎಂದು ಕಿರುನಗೆ ಸೂಸುತ್ತಾರೆ ಷಣ್ಮುಗಪ್ಪ.

ಇದನ್ನೂ ಓದಿ: ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada