ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 125ರ ಹರೆಯ!
ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 125ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್.
ಪರಿಕಲ್ಪನೆ : ಶ್ರೀದೇವಿ ಕಳಸದ
ಅಮೆರಿಕದಲ್ಲಿರುವ ಲೇಖಕಿ ಮೀರಾ ಪಿ. ಆರ್. ಭಾವಾನುಭಾವದೊಲವಿನ ಕವಿ ಬೇಂದ್ರೆಯ ಬಗ್ಗೆ ಬರೆದಿರುವುದು ಇಲ್ಲಿದೆ.
‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ’ ಎಂದು ಹೇಳುತ್ತಲೇ ಬರೆದ ಬೇದ್ರೆಯವರ ಕಾವ್ಯಲೋಕದಲ್ಲಿ ಏಕಕಾಲಕ್ಕೆ ಸರಳ ಸುಂದರವಾದದ್ದು ಹೇಗೋ ಹಾಗೆಯೇ ನಿಗೂಢವೂ ಅನೂಹ್ಯವೂ ಆದ ಲೆಕ್ಕವಿಲ್ಲದಷ್ಟು ರಚನೆಗಳಿವೆ. ಬರೆಯುವುದು ಅರಿಯುವ ಮಾರ್ಗವೇ ಆಗಿದ್ದ ಬೇಂದ್ರೆಯವರು, ಈ ಅರಿಯುವ ಮಾರ್ಗವನ್ನು ನಿರಂತರವಾಗಿ ಪ್ರಯೋಗಕ್ಕೊಳಪಡಿಸಿದ್ದಾರೆ. ಅವರಲ್ಲಿ ಕಾಣುವ ಈ ಪ್ರಯೋಗಶೀಲತೆ ಅವರ ಕಾವ್ಯವನ್ನು ತೀರಾ ಸಂಕೀರ್ಣಗೊಳಿಸಿರುವುದೂ ಉಂಟು. ಹಾಗೆ ನೋಡಿದರೆ ಈ ಸಂಕೀರ್ಣತೆ ಕವಿಯದ್ದಲ್ಲ, ಕಾವ್ಯದ್ದೂ ಅಲ್ಲ, ಕಾವ್ಯ ವ್ಯಾಸಂಗದ ವಿವಿಧ ಘಟ್ಟಗಳಲ್ಲಿ ನಿಂತು ತಮತಮಗೆ ಕಾಣಿಸುವಷ್ಟು ಬಗೆಯಿಂದ ಕಾವ್ಯಾಸ್ವಾದನೆಗೆ ತೊಡಗಿರುವ ಕಾವ್ಯಾಸಕ್ತರದ್ದು ಮಾತ್ರ. ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲವಾದರೂ ಅದಕ್ಕೆ ಹೆದರಿ ದೂರ ಉಳಿಯಲು ಸಾಧ್ಯವಾಗದಂತೆ ಅವರ ಕಾವ್ಯದ ಸೊಗಸು ಯಾವತ್ತೂ ನನ್ನನ್ನು ಸೆಳೆದಿದೆ. ಮೇಲ್ನೋಟಕ್ಕೆ ಸುಲಭಗ್ರಾಹ್ಯವಾಗಿ ಕಾಣುವಂತ ಕವಿತೆಗಳೂ ಕೊಡ ಒದುಗರ ಅನುಭವ, ಸಾಮರ್ಥ್ಯಗಳಿಗನುಸಾರವಾಗಿ ಅರ್ಥವಿಸ್ತಾರ ಪಡೆದುಕೊಳ್ಳುತ್ತವೆ. ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಅನುಭವಗಳ ನೆಲೆಗಟ್ಟಿನಲ್ಲಿ ನಿಂತು ಬೇಂದ್ರೆಯವರ ಕಾವ್ಯದೆಡೆ ಮರಳಿ ಹೊರಳಿ ನೋಡುವ ಹೊತ್ತಿನಲ್ಲಿ, ಅದು ಪ್ರತಿ ಬಾರಿಯೂ ಹೊಸದೊಂದೇ ಬಗೆಯಲ್ಲಿ ಕಾಣುತ್ತಾ ನಿತ್ಯನೂತನವಾಗುತ್ತಿದೆ. ಜೀವಂತ ಕಾವ್ಯ ಇರುವುದೇ ಹೀಗಾದ್ದರಿಂದ ಇದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ.
`ನಾದಲೀಲೆ‘ ಸಂಕಲನದ ‘ಅಷ್ಟು ಪ್ರೀತಿ ಇಷ್ಟು ಪ್ರೀತಿ’ ಕವಿತೆಯಲ್ಲಿ ಬೇಂದ್ರೆ ಹೇಳುತ್ತಾರೆ,
ಎಷ್ಟೆಯಿರಲಿ ಅಷ್ಟೆ ಮಿಗಿಲು
ತಮ್ಮ ಕಿರಣ ತಮಗೆ ಹಗಲು
ಉಳಿದ ಬೆಳಕು ಕತ್ತಲು
ಬಿಟ್ಟಲ್ಲಿಯೆ ಬೀಡು ಮತ್ತೆ
ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು
ಈ ನಾಲ್ಕು ಸಾಲಿನಲ್ಲಿ ಹೇಳಿರುವುದು ಕಾವ್ಯ ಗ್ರಹಿಕೆಗೂ ಹೊಂದುತ್ತದೆ. ನಮಗೆ ಕಾಣದ ಬೆಳಕು ನಮ್ಮ ಪಾಲಿಗೆ ಕತ್ತಲೇ. ಕಾಣ್ಕೆ ವಿಸ್ತಾರವಾದಷ್ಟೂ ಬೆಳಕೂ ವಿಸ್ತರಿಸುವ ಸಾಧ್ಯತೆಯಿರುವುದರಿಂದಲೇ ಬೇಂದ್ರೆಯವರ ಕಾವ್ಯದ ಕಡೆಗೆ ಮನಸ್ಸು ಮತ್ತೆ ಮತ್ತೆ ಹೊರಳುತ್ತಾ ಕಂಡಿದ್ದನ್ನೇ ಮತ್ತೆ ಮತ್ತೆ ಹೊಸ ಅನುಭವ ವಿಸ್ತಾರದ ಹಿನ್ನೆಲೆಯಲ್ಲಿ, ಹೊಸ ಬೆಳಕಿನಲ್ಲಿ ಕಂಡುಕೊಳ್ಳುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.
ಈ ಹಿನ್ನೆಲೆಯಲ್ಲಿ ಕವಿಯ ನೆನಪಿಗೆ ಗೌರವ ಸಲ್ಲಿಸುವ ಈ ಹೊತ್ತಿನಲ್ಲಿ, ನನ್ನ ಇದುವರೆಗಿನ ಓದಿನಲ್ಲಿ ಅಲ್ಲಲ್ಲಿ ಸುಳಿದು, ಏನನ್ನೋ ಹೊಳೆಸಿ ಮತ್ತಿನ್ನೇನನ್ನೋ ಉಳಿಸಿ ಹೋದ ಈ ಹೊತ್ತಿಗೆ ನೆನಪಾಗುತ್ತಿರುವ ಕೆಲವು ಸಾಲುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಕವಿದಿನದ ಈ ಸಮಯಕ್ಕಾಗಿ ಬರೆದ ಈ ಮಾತುಗಳು ಕೇವಲ ಈ ಹೊತ್ತಿನದ್ದು ಮಾತ್ರ, ನಾಳೆಗೆ ಇವೇ ಸಾಲುಗಳು ನನ್ನಲ್ಲಿ ಇನ್ನೊಂದೇ ಮಾತು ಮೂಡಿಸಬಲ್ಲದು ಎಂಬುದಷ್ಟೇ ಸತ್ಯ.
ಬೇದ್ರೆಯವರ ಕವಿತೆಗಳಲ್ಲಿ ಕಾಣುವ ಒಲವಿನ ನೂರೆಂಟು ಮುಖಗಳ ಚೆಲುವು ನೋಡಿದಷ್ಟೂ ತೀರದಂತವು. ವಾತ್ಸಲ್ಯ, ಪ್ರಣಯ, ಪ್ರೇಮ, ಕಾಮ, ಕಡೆಗೆ ಅನುಭಾವದಲ್ಲೂ ಈ ಒಲುಮೆಯ ಒರತೆಯೊಂದು ಕವಿಯೆದೆಯಲ್ಲಿ ಹಚ್ಚಗೆ ಹರಿಯುತ್ತಿರುವುದುಂಟು. ಇದರ ಕುರಿತು ನನಗೆ ಸದಾ ಕುತೂಹಲವಿದೆ. ಒಲವನ್ನು ಎಷ್ಟೆಲ್ಲಾ ಬಗೆಯಲ್ಲಿ ಅವರು ಧ್ಯಾನಿಸಿದ ಕುರಿತೇ ಬರೆಯಬೇಕೆನ್ನಿಸಿದೆ. ಹಾಗೆ ಒಲವಿನ ಕುರಿತು ಬರೆಯುತ್ತಿರುವಾಗಲೇ ಈ ನೆಲಕ್ಕಂಟಿಯೇ ಮತ್ತೆ ಇನ್ನೊಂದೆಡೆಗೆ ಕಣ್ಣ ಹೊರಳಿಸುತ್ತ ಧ್ಯಾನಿಸುವ ಕವಿಮನದ ಈ ಹಿಂದೆ ಬೇರೊಂದೇ ಸಂದರ್ಭದಲ್ಲಿ ನಾನು ಬರೆದಿದ್ದ ‘ಜೋಗಿ’ ಕವಿತೆಯ ಕೆಲವು ಮಾತುಗಳನ್ನು ನೆನಪಿಸಿದೆ. ಆ ಕೆಲವು ಸಾಲುಗಳನ್ನೂ ಕಡೆಯಲ್ಲಿ ಹಂಚಿಕೊಂಡಿದ್ದೇನೆ.
‘ಅಂಬಿಕಾತನಯ‘ನೆಂದೇ ತನ್ನನ್ನು ಕರೆದುಕೊಂಡ ಕವಿ ತಾನು ಐದು ಐದೆಯರ ಮಗ ಎಂದು ಹೇಳಿಕೊಳ್ಲುತ್ತಾರೆ. ವಿಶ್ವಮಾತೆ, ಭೂಮಿ ತಾಯಿ, ಭರತ ಮಾತೆ, ಕನ್ನಡ ಮಾತೆ ಮತ್ತು ತನಗೆ ಜನ್ಮಕೊಟ್ಟ ತಾಯಿ ಈ ಐವರ ಪಂಚಪ್ರಾಣಗಳಾಗಿ ಈ ಜೀವ ದೇಹದವನು ತಾನು ಎನ್ನುತ್ತಾರೆ. ಭೂಮಿತಾಯಿಯ ಕುರಿತು ಅವರು ಬರೆದ ಈ ಸಾಲುಗಳಲ್ಲಿ ನೆಲವನ್ನು ತಾಯಿಯೆಂದು ಕರೆದು, ತಾಯಿಯಿಂದ ಪಡೆದ ಅಥವಾ ಬಯಸುವ ಪೊರೆಯುವ ಭಾವವನ್ನು ಭೂಮಿತಾಯಿಯೂ ಕೊಡಬಲ್ಲಳು ಎಂದಿದ್ದಾರೆ. ಭೂಮಿಯನ್ನು ತಾಯಿಯೆಂದು ಕರೆಯುವುದು ಹೊಸತಲ್ಲ. ಆದರೆ ಅದನ್ನು ಅವರು ಶಬ್ದಗಳಲ್ಲಿ ಒಡಮೂಡಿಸಿರುವ ಪರಿ ಅನನ್ಯ.
ಮೈ ತುಂಬ ಬಾಯಿ ನೀನು
ತುಟಿ ಮುದ್ದು ನನ್ನ ಪಾಲು
ಎದೆಯೆಲ್ಲ ಮೊಲೆಯು ನೀನು
ಮೈ ತುಂಬ ನನಗೆ ಹಾಲು
ಕಂಡಲ್ಲಿ ನಿನ್ನ ಮುಖವು
ಕಣ್ತುಂಬ ನನಗೆ ಸುಖವು
ನೆಲದುದ್ದ ತೊಡೆಯು ನಿನಗೆ
ಮನಸಾರೆ ನಿದ್ದೆ ನನಗೆ
‘ಭೂಮಿತಾಯಿ‘(ನಮನ)
ಮಗುವಾಗಿ ತಾಯಿಯನ್ನು ಕುರಿತು ಹೀಗೆ ಬರೆದವರು, ತಾವೇ ಮಗುವಿನ ಚಿನ್ನಾಟವನ್ನು ನೋಡುತ್ತಾ ವಾತ್ಸಲ್ಯ ಭಾವ ತುಂಬಿ ಬರೆದ ಸಾಲುಗಳು ಹೀಗಿವೆ,
ಇದಾವ ಹಾಡು
ಇದಾವ ತಾಲ?
ಇದಾವ ರಾಗ
ನನ್ನ ಪುಟ್ಟ ಪುರಂದರ ವಿಠಲಾ
‘ತಿಲ್ಲಾಣ‘ (ಕರುಳಿನ ವಚನ-ಉಯ್ಯಾಲೆ)
ಈ ಕರುಳಿನ ವಚನ ಮುಗುವಿನ ಮುದ್ದಿನಾಟದಲ್ಲಿ ಮುದಗೊಳ್ಳುತ್ತಾ ಅಲ್ಲಿಯೇ ನಿಂತು ಬಿಡುವುದಿಲ್ಲ. ಮಗುವಿನ ಒಡನಾಟ ಕವಿಯ ಎದೆಯಲ್ಲಿ ಈ ಬದುಕಿನ ತಿರುವುಗಳಲ್ಲಿ ಹೀಗೆ ನಮ್ಮದಾಗುವ ಹಲವು ಸಂಬಂಧಗಳ ಕುರಿತು ಹೀಗೂ ಅನ್ನಿಸುವಂತೆ ಮಾಡಿದೆ.
ಸಂಸಾರವೆಂಬ ಕಡಲ ಉಕ್ಕಿನ
ತೆರೆಗಳ ತೆಕ್ಕೆಯಲಿ ಕೂಡಿ ಬಂದ
ಮರದ ತುಂಡುಗಳಂತಿರಬಹುದೇ-
ನೀನು ನನ್ನ ಪಡೆದುದು,
ನಾನು ನಿನ್ನ ಹಡೆದುದು?
‘ಹಂಗು‘ (ಉಯ್ಯಾಲೆ)
ವಾತ್ಸಲ್ಯದೊಡನಾಟ ಕವಿಯಲ್ಲಿ ಭಾವವನ್ನಷ್ಟೇ ಉದ್ದೀಪಿಸುತ್ತಿಲ್ಲ, ಪ್ರಶ್ನೆಗಳನ್ನೂ ಹುಟ್ಟುಹಾಕಿದೆ, ಬದುಕಿನ ಕುರಿತ ಜಿಜ್ಞಾಸೆಯನ್ನೂ ಹುಟ್ಟಿಸಿದೆ.
ಅವರ ‘ತೇಲಾಡುವಾಗ’ ಕವಿತೆಯ ಸಾಲುಗಳಲ್ಲೂ ಹೀಗೆಯೇ ಒಲವಲ್ಲಿ ಮೈಮರೆತಾಗ ಮೂಡಿದ ಭಾವವನ್ನು ಕುರಿತಷ್ಟೇ ಅಲ್ಲದೆ ಅದರಾಚೆಗೆ ಕಾವ್ಯಕ್ರಿಯೆಯ ಸೃಜಜನಾತ್ಮಕತೆಯ ಕುರಿತೂ ಹೇಳಿದಂತಿದೆ.
ನೂರಾಡಿ ಏನು ಫಲವು
ತಾರಾಡುವಾಗ ಒಲವು
ಕಿವಿಗಿಳಿದು ಬರಲು ಹಾಡು
ಸವಿಗಾಗ ಯಾವುದೀಡು
ನಮ್ಮಿಂದ ಹರಿದು ಚಿಂತಿ
ಜುಮ್ಮೆನ್ನುತಾವ ತಂತಿ
ಮುಳುಗುವುವು ವಾದಗೀದ
ತುಳುಕಾಡಿ ಏಕನಾದ
(ತೇಲಾಡುವಾಗ)
‘ಮಾರಿ ಚೆಂದಕೆ ಮರುಳರಾಗಿ ನೆಚ್ಚಿ ಮೆಚ್ಚಿ ಕೂಡಿದ್ದೇವ, ಬೇರೆ ಇಲ್ಲಾ ಇದ್ದರೆ ಶಿವನೆ ಬಲ್ಲ‘ (‘ಪೋರಿ-ಪೋರಾ‘) ಎಂದು ಹಾಗೇ ಸುಮ್ಮನೆ ಮೂಡಿಬಿಡುವ ಒಲವಿನ ಕುರಿತು ಹಾಡುತ್ತಲೇ ಅದರ ಆಳವನ್ನು ಕವಿ ಮನಗಾಣಿಸುತ್ತಾರೆ. ಕವಿಯು ಕಟ್ಟಿ ಕೊಡುವ ಪ್ರಣಯದ ಉನ್ಮತ್ತ ಚಿತ್ರಗಳಲ್ಲೂ ಒಲವೆಂದರೆ ಕೊಟ್ಟು ಪಡೆಯುವ ಎದೆಯ ಭಾವವೇ ಹೊರತು ಒಮ್ಮುಖವಾದುದಲ್ಲ.
ಮನದ ಚಿತ್ರಗಳೆ ಮೈಯ ತಾಳಿದೊಲು
ಗೆಳತಿ ಗೆಳೆಯರಾಗಿ
ಕಾಮ ಬಿಲ್ಲಿಗೆ ಬಾಣ ಹೂಡಿದೊಲು
ಕಂಗಳೆಸೆಯುತಿಹವು
ತೋಳು ತೋಳಿನಲಿ ಕಸೆಯ ಮಾಡಿದೊಲು
ಎದೆಯ ಬೆಸೆಯುತಿಹವು
‘ಕಲ್ಪವೃಕ್ಶ ವೃಂದಾವನಂಗಳಲಿ‘
ಈ ಪ್ರೀತಿಯಾದರೋ ಅಷ್ಟು ಸುಲಭವಾಗಿ ಅರಿಯುವಂಥದ್ದೂ ಅಲ್ಲ, ಅನುಭವಿಸುವಂಥದೂ ಅಲ್ಲ.
ಅಗಲಿದಾಗ ತಿನ್ನುವುದು ಸ್ನೇಹವೆನ್ನುವರು ಜೀವವನ್ನು
ಕೂಡಿದೊಡೆ ಅದೆ ಸೂರೆ ಮಾಡುವುದು ಪ್ರೇಮವನ್ನು
(ಮೇಘದೂತ)
ವಿರಹದಲ್ಲಿ ಜೀವವನ್ನು ಸುಡುವ ಈ ಪ್ರೇಮ, ಹತ್ತಿರವಾದಾಗ ತನ್ನನ್ನೇ ಕೊಂದುಕೊಳ್ಳುವ ಚೋದ್ಯವೂ ಇದೆ. ಕಡೆಗೊಮ್ಮೆ ಈ ಒಲವೆಂಬ ಭಾವವೇ ಒಂದು ಮಾರ್ಗವೂ ಆಗಿ ಮನದಾಚೆಗಿನದೇನನ್ನೋ ಹೊಳೆಯಿಸುವ ಬೆಳಕೂ ಆಗಬಹುದು!
ತನ್ನ ಕಿಚ್ಚಿನೊಳೆ ಬೆಂಕಿ ಸುಟ್ಟು ಬೆಳಕಾಗಿ ಮಿಂಚಬಹುದು
ಮೂಲ ಕಾಮದಲಿ ವಿರಹ ಬೆಳೆದು ಸುಪ್ರೇಮವರಳಬಹುದು
ಅನ್ನಪ್ರಾಣಗಳ ಮಿಥುನದಂತೆ ಮೈಯೆರಡು ಕಲೆತು ಬೆರೆತು
ಮನದ ಕಾವಿನಲಿ ಕಾಮನಾಗಿ ಮನದಾಚಿಗೇನೋ ಅರಿತು
ಚಿತ್ತದಲಿ ನಿಷ್ಕಾಮಮತಿಯು ರಸಪಾಕವಾಗಿ ನಿಂತು
ಧಾರೆಗೆಡದೆ ಭಗವಂತನಲ್ಲಿ ಚಿರಭಕ್ತಿಯಾಗಿ ಬಂತು
ಭಿನ್ನದೇಹದಲಿ ಏಕಜೀವ ಕಾಣುವರು ಕರಗಿ ಮಾಗಿ
ಯಾರೊ ಮೋಹದಲಿ, ಯಾರೊ ಊಹೆಯಲಿ, ಯಾರೊ ಯೋಗಿಯಾಗಿ…
(ಮೇಘದೂತ)
ಯಾಕೆಂದರೆ ಪ್ರೇಮವೆನ್ನುವ ಈ ಭಾವ ಸೃಷ್ಟಿಶೀಲತೆಯ ಮೂಲದ್ರವ್ಯ. ಈ ಲೋಕವ್ಯಾಪಾರದಲ್ಲಿ ಪ್ರಣಯವು ಕಾಲವನ್ನೂ ಮೀರಿ ಎಲ್ಲೆಡೆಯೂ ಪ್ರಕಟಗೊಳ್ಳುತ್ತಲೇ ಇದೆ.
ಉತ್ತರ ಧೃವದಿಂ ದಕ್ಷಿಣ ಧೃವಕೂ
ಚುಂಬಕಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲು ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
‘ಅನಂತ ಪ್ರಣಯ‘
ಬೇಂದ್ರೆಯಂಥಾ ಚಿತ್ರಕ ಕವಿ ಮೂಡಿಸಿರುವ ಅನೇಕ ಚಿತ್ರಗಳಲ್ಲಿ ಪ್ರಣಯ ಪ್ರೇಮ ಕಾಮಗಳೆಲ್ಲವೂ ಅದು ಇರುವಷ್ಟೇ ಸ್ವಚ್ಚಂದವಾಗಿ ತೆರೆದುಕೊಂಡಿದೆ. ಇಂದ್ರಿಯಾನುಭದ ಮೂಲಕವೇ ನಮ್ಮಲ್ಲಿ ಮೊಳೆತು ಮಾಗುವ ಒಲವು ಕಡೆಗೊಮ್ಮೆ ಮೈಮನದಾಚೆಗೂ ಹೊರಳಿ ಇನ್ನೊಂದೇ ಬೆಳಕನ್ನು ಹೊಳೆಸುತ್ತಾ ಸೃಷ್ಟಿಶೀಲತೆಯ ವಿಶ್ವರೂಪವನ್ನೇ ಪರಿಚಯಿಸುತ್ತದೆ. ಭಾವಕ್ಕೂ ಅನುಭಾವಕ್ಕೂ ಸೇತುವೆ ಕಟ್ಟುತ್ತಲೇ ಶಬ್ದದಾಟವಾಡುವ ಬೇಂದ್ರೆಯವರು ಈ ಚುಂಬಕ ಗಾಳಿಯಲ್ಲೇ ನಮ್ಮನ್ನೂ ತೇಲಿಸುವ ಸೊಗಸು ಅವರ ಕಾವ್ಯವನ್ನು ಸವಿದವರಿಗಷ್ಟೇ ಸಿಗುವ ಭಾಗ್ಯ. ಇನ್ನು ಅನುಭಾವವನ್ನೇ ಕೇಂದ್ರವಾಗಿರಿಸಿಕೊಂಡ ಅವರ ಕಾವ್ಯದಲ್ಲೂ ಮತ್ತೆ ಮತ್ತೆ ಅವರು ಆ ಲೋಕಕ್ಕೂ ಈ ಲೋಕಕ್ಕೂ ಜೀಕಿ ಜಿಗಿದು ಆಡಿದ ಆಟದಂತೆ ಕಂಡಿದೆ. ಸಧ್ಯಕ್ಕೆ ನನಗೆ ನೆನಪಾಗುತ್ತಿರುವ ಅವರ ‘ಜೋಗಿ‘(ಗಂಗಾವತರಣ) ಕವಿತೆ ಇದಕ್ಕೊಂದು ಉದಾಹರಣೆಯಾಗಬಹುದೇನೋ. ಈ ಕವಿತೆಯಲ್ಲಿ ಕವಿ ಹೊಕ್ಕುವ ಕಾಡು ಮತ್ತು ಅಲ್ಲಿ ಅವರು ಅನುಭವಿಸುವ ಭಯ, ಸಂಶಯಗಳು ಆಧ್ಯಾತ್ಮದ ಹಾದಿಯಲ್ಲಿ ಸಾಧಕನಿಗೆ ಎದುರಾಗುವ ತೊಡರುಗಳ ರೂಪಕವಾಗಿಯೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದು ‘ತಪ್ಪಿ ಹೊಕ್ಕರ ದಿಕ್ಕು ತಪ್ಪತಾರ‘ ಅನಿಸುವ ಜಾಗ. ಅಂತಲ್ಲಿ ಹೊಕ್ಕಿದ್ದಾರೆ ಕವಿ.
‘ಜೋಗಿ’ ಕವಿತೆಯಲ್ಲಿನ ಕಾಳರಾತ್ರಿಯಲ್ಲಿ ಭಯ ಸಂಶಯಗಳಷ್ಟೇ ಅಲ್ಲ, ಅದರ ಜೊತೆಗೇ ಆ ಕತ್ತಲಿಗೆ ಮನೋಹರವಾದ ಸೆಳೆತವೊಂದಿದೆ. ಇಲ್ಲಿ ತಾರ ಪಂಚಮದಲ್ಲಿ ಕೂಗುವ ಕೋಗಿಲೆಯ ಸ್ವರ ಕೇಳುತ್ತಲೇ ಅದನ್ನು ಹಿಂಬಾಲಿಸಿ, ಆ ಸ್ವರವೇ ಒಂದು ಕಾಡುವ ಗೀಳಾಗಿ, ಮತ್ತೆ ಮತ್ತೆ ಎಲ್ಲೆಲ್ಲೂ ಅದೇ ಕೇಳಿಸಿ ಕಡೆಗೊಮ್ಮೆ ಕನಸಿನಲ್ಲಿಯೂ ಆ ಕೋಗಿಲೆಯ ಸ್ವರವೇ ಕರೆದಂತಾಗಿ ತಾನೇ ಮಾಮರವಾಗಿಬಿಡುವೆನೇನೋ ಅನಿಸಿದ ವೇಳೆ ಜೋಗಿಯೊಬ್ಬ(ವಿಮರ್ಶಕರ ದೃಷ್ಟಿಯಲ್ಲಿ, ಅಧ್ಯಾತ್ಮ ಸಾಧನೆಯಲ್ಲಿ ಬಂದೊದಗುವ ಗುರು) ಬಂದು ಕವಿಯನ್ನು ಎಚ್ಚರಿಸಿ ಕಾಪಾಡುತ್ತನೆ.
ಎಚ್ಚರಾದ ಮೇಲೂ
ಯಾವ ಸ್ವರಾ? ಇದು ಯಾವ ಕೋಗಿಲಾ? ಯಾವ ಮರವೋ ಏನೋ
ಯಾಕ ಹೀಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ?
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕ
ಬಿಸಿಲು ಕುಣಿದು ಬೆವತದ ಈಗ ಬಂದದ ಮಳಿಯ ಹದಕ.
ಎನ್ನುತ್ತಾ ಕವಿಮನಸು ಅದನ್ನು ಧ್ಯಾನಿಸುತ್ತಲೇ ಉಳಿಯುತ್ತದೆ. ಈ ಕವಿತೆಯಲ್ಲಿ ಕವಿಯಾಗಿ ಕಳೆದು ಹೋಗುವವರು ಯಾರು ಮತ್ತು ಜೋಗಿಯಾಗಿ ಬಂದು ಕಾಪಾಡುವವರ್ಯಾರು ಎಂಬ ಪ್ರಶ್ನೆ ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಅನುದಿನದ ಬೇಂದ್ರೆ ಬದುಕು ಒದಗಿಸುವ ಎಲ್ಲ ನೋಟಗಳೂ ಅಂಬಿಕಾನಯದತ್ತನ ಧ್ಯಾನದಲ್ಲಿ ಅರಿವಾಗಿ ಮೈದಳೆಯುವಂತೆ, ಈ ಅರಿವಿನ ಒಳಸುಳಿಗಳಲ್ಲಿ ಸಿಲುಕಿ ತಾನೇ ಇಲ್ಲವಾಗುವ ಸಮಾಧಿ ಸ್ಥಿತಿಯಿಂದ ಅಂಬಿಕಾತನಯದತ್ತನನ್ನು ಅನುದಿನದ ಬದುಕಿನ ಬೇಂದ್ರೆಯೇ ಮತ್ತೆ ಮತ್ತೆ ಹೊರಗೆಳೆಯುತ್ತಾ ಉಳಿಸಿಕೊಂಡಿರಬಹುದು ಎಂಬ ಅನುಮಾನ ನನ್ನದು. ಹೀಗಾಗಿಯೇ ಬೇಂದ್ರೆಯವರು ಇರುವಷ್ಟು ಕಾಲವೂ ಅಷ್ಟು ಜೀವಂತವಾಗಿ, ಆಪ್ತವಾಗಿ ಬದುಕಿನೊಳಗಾಡುತ್ತಾ ಅರಿಯತ್ತಾ ಇರುವುದು ಸಾಧ್ಯವಾಗಿರಬೇಕು.
ಹತ್ತರೀ ಸಾಧನಕೇರಿ ಬಸ್ : ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು…
Published On - 8:09 pm, Sun, 31 January 21