Science: ಜೀವವೆಂಬ ಜಾಲದೊಳಗೆ : ಏನಿದು ಮ್ಯೂಸಿಲೇಜ್​ನ ಮ್ಯಾಜಿಕ್?

|

Updated on: Jun 03, 2022 | 2:44 PM

Mucilage : ‘ಕಾಮಕಸ್ತೂರಿ ಬೀಜಗಳನ್ನು ನೆನೆಸಿದಾಗ ಬೀಜದ ಸುತ್ತಲೂ ಲೋಳೆಪದರ ಉಂಟಾಗುವುದು ಏಕೆ?’ ಬೇಸಿಗೆಯ ರಜೆಯಲ್ಲಿ ಜ್ಯೂಸ್ ಮಾಡಲೆಂದು ಕಾಮಕಸ್ತೂರಿ ಬೀಜಗಳನ್ನು ನೆನೆಸಿದ ಹತ್ತನೆಯ ತರಗತಿಯ ವಿದ್ಯಾರ್ಥಿ ಸ್ಕಂದ ಮೂರ್ತಿಯ ಮನದಲ್ಲಿ ಮೂಡಿದ ಪ್ರಶ್ನೆ.

Science: ಜೀವವೆಂಬ ಜಾಲದೊಳಗೆ : ಏನಿದು ಮ್ಯೂಸಿಲೇಜ್​ನ ಮ್ಯಾಜಿಕ್?
Follow us on

ಜೀವವೆಂಬ ಜಾಲದೊಳಗೆ | Jeevavemba Jaaladolage : ಕಾಮಕಸ್ತೂರಿ, ಚಿಯಾ ಮೊದಲಾದ ಬೀಜಗಳನ್ನು ನೆನೆಸಿದಾಗ ಬೀಜಗಳು ನೆನೆದು ಉಬ್ಬುವುದರ ಜೊತೆಗೆ ಆ ಬೀಜದ ಸುತ್ತಲೂ ಪಾರದರ್ಶಕವಾದ ಲೋಳೆಯಂತಹ ಪದರವೊಂದು ಮೂಡುತ್ತದೆ. ಈ ಲೋಳೆಯಂತಹ ವಸ್ತುವಿಗೆ “ಮ್ಯೂಸಿಲೇಜ್” ಎಂದು ಹೆಸರು.
ಮ್ಯೂಸಿಲೇಜ್ ಅನೇಕ ಸಸ್ಯಗಳ ವಿವಿಧ ಭಾಗಗಳಲ್ಲಿ ಇರುತ್ತದೆ. ಅಲ್ಲದೆ ಕೆಲವೊಂದು ಸೂಕ್ಷ್ಮಜೀವಿಗಳೂ ಕೂಡ ಇದನ್ನು ಉತ್ಪಾದಿಸುತ್ತವೆ. ಜೀವಕೋಶಗಳಲ್ಲಿರುವ “ಗಾಲ್ಗಿ ಆಪರೇಟಸ್” ನಲ್ಲಿ ಮ್ಯೂಸಿಲೇಜ್ ಉತ್ಪತ್ತಿಯಾಗುತ್ತದೆ. (Polysaccharides) ಸಂಕೀರ್ಣ ಶರ್ಕರಪಿಷ್ಟಗಳಿಂದ ಈ ಮ್ಯೂಸಿಲೇಜ್ ಪದರದ ಸೃಷ್ಟಿಯಾಗುತ್ತದೆ.
ಬೀಜಗಳನ್ನು ಆವರಿಸಿರುವ ಈ ಲೋಳೆಯಂತಹ ಘನವೂ ಅಲ್ಲದ, ದ್ರವವೂ ಅಲ್ಲದ ವಸ್ತುವಿನ ಪ್ರಾಮುಖ್ಯತೆಯೇನು?
ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಪದರಕ್ಕಿರುವುದರಿಂದ ಅದು ಬೀಜಗಳ ತೇವಾಂಶವನ್ನು ರಕ್ಷಿಸುತ್ತದೆ. ನೀರು ಕಡಿಮೆ ಇರುವ ಒಣ ಹವೆಯಲ್ಲಿಯೂ ಬೀಜಗಳು ಮಣ್ಣಿನಲ್ಲಿ ಅಂಟಿಕೊಂಡು ಬಹುಬೇಗ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಈ ಲೋಳೆ ಪದರವು ತನ್ನ ಸಂಪರ್ಕಕ್ಕೆ ಬಂದ ವಸ್ತುಗಳಿಗೆ ಸ್ವಲ್ಪ ಮಟ್ಟಿಗೆ ಅಂಟಿಕೊಳ್ಳುವ ಗುಣ ಹೊಂದಿರುವುದರಿಂದ ಇದು ಪ್ರಾಣಿ ಪಕ್ಷಿಗಳ ಚರ್ಮಕ್ಕೆ ಅಂಟಿಕೊಂಡು ಬೇರೆಲ್ಲೋ ಬೀಳುತ್ತದೆ. ಅಲ್ಲಿ ಬೀಜವು ಮೊಳೆತು ಚಿಗುರಿ ಗಿಡವಾಗುತ್ತದೆ. ಹೀಗೆ ಇದು ಬೀಜಪ್ರಸರಣಕ್ಕೆ ಸಹಕಾರಿಯಾಗಿದೆ. ಬೀಜಗಳನ್ನು ತಿನ್ನುವ ಕೀಟಗಳು ಸೂಕ್ಷ್ಮಾಣುಗಳು, ಪ್ರಾಣಿ ಪಕ್ಷಿಗಳು ಈ ಬೀಜವು ಲೋಳೆ ಲೋಳೆಯಾಗಿರುವುದರಿಂದ ತಿನ್ನಲು ಇಷ್ಟಪಡುವುದಿಲ್ಲ.

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ಏನಿದು ‘ಅಂಡರ್ ಸ್ಟೋರಿ’ ರಹಸ್ಯ

ಇದನ್ನೂ ಓದಿ
Science and Environment: ಜೀವವೆಂಬ ಜಾಲದೊಳಗೆ; ಗೊತ್ತೇ ಈ ಜೈವಿಕ ಬೆಳಕಿನ ಗುಟ್ಟು?
ಜೀವವೆಂಬ ಜಾಲದೊಳಗೆ; ಪ್ರಕೃತಿ ನೀಡಿರುವ ಈ ಶ್ಯಾಂಪೂ ಸೋಪು ಕಂಡೀಷನರು
Science and Environment : ಜೀವವೆಂಬ ಜಾಲದೊಳಗೆ: ವಶೀಕರಣ ವಿದ್ಯೆ ಕಲಿಯಬೇಕೆ? ಇವರುಗಳನ್ನು ಸಂಪರ್ಕಿಸಿ
ಜೀವವೆಂಬ ಜಾಲದೊಳಗೆ : ಈ ಪರಾವಲಂಬಿಗರು ನಿಮ್ಮ ಮಾವಿನಮರವನೇರಿ ಕುಳಿತಿದ್ದಾರಾ? ನೋಡಿ ಒಮ್ಮೆ

ಹೀಗೆ ಈ ಲೋಳೆ ಪದರವು ಭಕ್ಷಕಗಳಿಂದಲೂ ಬೀಜಗಳಿಗೆ ರಕ್ಷಣೆ ಒದಗಿಸುತ್ತದೆ. ಇವುಗಳು ಮ್ಯೂಸಿಲೇಜಿನ ಮುಖ್ಯ ಕೆಲಸಗಳು. ಇದಲ್ಲದೆ ಮ್ಯೂಸಿಲೇಜ್ ಪದರದ ಇರುವಿಕೆಗೆ ಇನ್ನೂ ಅನೇಕ ಕಾರಣಗಳು ಇರಬಹುದೆಂಬ ಅಭಿಪ್ರಾಯ ವಿಜ್ಞಾನಿಗಳದ್ದು. ಕಾಮಕಸ್ತೂರಿ ಬೀಜವೊಂದೇ ಅಲ್ಲದೆ ಪ್ಯಾಷನ್ ಫ್ರೂಟ್ ಬೀಜಗಳು, ಚಿಯಾ ಬೀಜಗಳು, ಅಗಸೆ ಬೀಜಗಳು, ಮೆಂತೆ ಕಾಳು ಹೀಗೆ ಇನ್ನೂ ಅನೇಕ ಗಿಡದ ಬೀಜಗಳಲ್ಲಿ ಈ ಪದರವನ್ನು ಕಾಣಬಹುದು. ಅನೇಕ ಸಸ್ಯದ ಹೂವು, ಬೇರುಗಳು, ಕಾಂಡ ಎಲೆಗಳು ಇತ್ಯಾದಿಯಲ್ಲಿಯೂ ಈ ಮ್ಯೂಸಿಲೇಜ್ ಇರುತ್ತದೆ. ಬೆಂಡೆಕಾಯಿಯಲ್ಲಿರುವ ಲೋಳೆ, ಲೋಳೆಸರದ ಲೋಳೆ ಕೂಡಾ ಮ್ಯೂಸಿಲೇಜ್. “ವೀನಸ್ ಫ್ಲೈ ಟ್ರ್ಯಾಪ್” ನಂತಹ ಮಾಂಸಾಹಾರಿ ಸಸ್ಯಗಳು ಕೀಟಗಳನ್ನು ಹಿಡಿಯಲು ಮ್ಯೂಸಿಲೇಜ್ ಪದರವನ್ನು ಉಪಯೋಗಿಸುತ್ತವೆ.

ಇದನ್ನೂ ಓದಿ : Biodiversity: ಜೀವವೆಂಬ ಜಾಲದೊಳಗೆ: ಚಿನ್ನದ ಬಣ್ಣದ ಅಲ್ಪಾಯುಷಿ ಆಮೆಕೀಟ

ಮ್ಯೂಸಿಲೇಜ್ ಇರುವ ಬೀಜಗಳ ಸೇವನೆಯು ಮಾನವರಿಗೂ ಒಳ್ಳೆಯದೆಂದು ಸಾಬೀತಾಗಿದೆ. ದೇಹವನ್ನು ತಂಪಾಗಿಡುವಲ್ಲಿ, ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುವಲ್ಲಿ, ಮಲಬದ್ಧತೆ ನಿವಾರಿಸುವಲ್ಲಿ ಇವು ಉಪಯುಕ್ತವಾಗಿವೆ. ಇವುಗಳನ್ನು ಅನೇಕ ಔಷಧಗಳ ತಯಾರಿಯಲ್ಲಿ ಉಪಯೋಗಿಸುತ್ತಾರೆ. ಜಾರುಕಗಳು, ಅಂಟುಗಳ ತಯಾರಿಕೆಯಲ್ಲೂ ಮ್ಯೂಸಿಲೇಜ್ ಬಳಕೆ ಇದೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com