ಜೀವವೆಂಬ ಜಾಲದೊಳಗೆ : ಈ ಪರಾವಲಂಬಿಗರು ನಿಮ್ಮ ಮಾವಿನಮರವನೇರಿ ಕುಳಿತಿದ್ದಾರಾ? ನೋಡಿ ಒಮ್ಮೆ

ಜೀವವೆಂಬ ಜಾಲದೊಳಗೆ : ಈ ಪರಾವಲಂಬಿಗರು ನಿಮ್ಮ ಮಾವಿನಮರವನೇರಿ ಕುಳಿತಿದ್ದಾರಾ? ನೋಡಿ ಒಮ್ಮೆ
ಮರವೊಂದನ್ನು ಆವರಿಸಿಕೊಂಡ ಕಸ್ಕೂಟಾ

Loranthus : ‘ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೆ? ಇಂತಹ ನಾಣ್ನುಡಿಗಳೆಲ್ಲ ಸತ್ಯ ಎನ್ನುವುದು ಭ್ರಮೆ! ಮರಗಳಿಗೆ ಬರುವ ಕಷ್ಟಗಳ ಬಗೆಗಿನ ಕನಿಷ್ಟ ಅರಿವೂ ಇಲ್ಲದವರು ಇದನ್ನು ಹೇಳಿರಬೇಕು. ಅಷ್ಟೆಲ್ಲ ಭವ್ಯವಾಗಿ ಬೆಳೆದಿರುವ ಮಾವಿನ ಮರವನ್ನು ಪುಟಾಣಿ ಪರಾವಲಂಬಿ ಸಸ್ಯವೊಂದು ಮಲಗಿಸಿಬಿಡುತ್ತದೆ ಎಂದರೆ...’ ಸುಮಾ ಸುಧಾಕಿರಣ್

ಶ್ರೀದೇವಿ ಕಳಸದ | Shridevi Kalasad

|

Jan 28, 2022 | 1:16 PM

ಜೀವವೆಂಬ ಜಾಲದೊಳಗೆ | Jeevavemba Jaaladolage : ನಮ್ಮ ಮನೆಯ ತೋಟದಲ್ಲಿ ರಸಪೂರಿ, ತೋತಾಪುರಿ, ಸೇಲಂ ಮೊದಲಾದ ಕಸಿಹಣ್ಣಿನ ಮರಗಳಿದ್ದರೆ, ಹಿಂದಿನ ಬೆಟ್ಟದಲ್ಲಿ ಸಿಹಿಯಾದ ಕಾಡು ಹಣ್ಣಿನ ಮರಗಳಿದ್ದವು. ಊರಿನ ಮಧ್ಯದಲ್ಲೊಂದು ಪರಿಮಳಭರಿತವಾದ ಹುಳಿ ಮಾವಿನಮರ. ಮೊದಲು ಆಲೆಮನೆ ನಡೆಯುತ್ತಿದ್ದ ಜಾಗವಾದ್ದರಿಂದ ಅದಕ್ಕೆ ಆಲೆಮನೆ ಅಪ್ಪೆ ಎಂದೇ ಹೆಸರು. ಅದರ ಕಾಯಿಯ ಗೊಜ್ಜು, ಉಪ್ಪಿನಕಾಯಿಗಳನ್ನು ಮಾಡದ ಮನೆಯೆ ಊರಿನಲ್ಲಿ ಇರಲಿಲ್ಲ. ಇನ್ನೊಂದು ಗುಂಡಪ್ಪೆ ಮರ, ಅದರ ಹಣ್ಣಿನ ಸಾಸ್ವೆ, ಕಾಯಿರಸ, ಸಿಹಿಮೇಲೋಗರಗಳು ಕೂಡ ಇಂದಿಗೂ ಬಾಯಲ್ಲಿ ನೀರೂರಿಸುವಂತಹದಾಗಿವೆ. ಈ ಎಲ್ಲವೂ ಈಗ ನಮ್ಮೂರಿನ ಗತವೈಭವಗಳಾಗಿವೆ. ಏಕೆಂದರೆ ನಾನು ಮೇಲೆ ಹೇಳಿದ ಮಾವಿನ ಮರಗಳ್ಯಾವುದೂ ಈಗ ಇಲ್ಲ. ಎಲ್ಲ ಮರಗಳೂ ಇತಿಹಾಸ ಸೇರಿವೆ. ಕಾರಣ ಅವುಗಳಿಗೆ ಬಂದ ಬಂದಳಿಕೆ. ಈ ಪೈಕಿ ಮಾವಿನಮರಕ್ಕೆ ಹೆಚ್ಚಾಗಿ ದಾಳಿ ಮಾಡುವುದು ಲೊರಾಂಥಸ್ (Loranthus) ಎಂಬ ಕುಟುಂಬಕ್ಕೆ ಸೇರಿದ ಪರಾವಲಂಬಿ ಸಸ್ಯ. ಮಾವು, ಚಿಕ್ಕು, ಹಲಸು, ನೇರಳೆ ಹೀಗೆ ಅನೇಕ ಜಾತಿಯ ಮರಗಳ ಟೊಂಗೆಗಳ ಮೇಲೆ ಇವುಗಳು ಬೆಳೆಯುತ್ತವೆ. ಮಾವಿನಮರಗಳಂತೂ ಇವುಗಳ ಅತ್ಯಂತ ಪ್ರೀತಿಯ ವಾಸಸ್ಥಾನ.

ಸುಮಾ ಸುಧಾಕಿರಣ್, ಪರಿಸರ ವಿಜ್ಞಾನ ಲೇಖಕಿ (Suma Sudhakiran)

*

(ಜೀವಜಾಲ – 2)

ನಮ್ಮ ಮಲೆನಾಡಿನ ಮೂಲ ಬೆಳೆ ಅಡಿಕೆ. ಹಿಂದೆಲ್ಲ ಮನೆಗೆ ಬೇಕಾದಷ್ಟು ಭತ್ತ ಹಾಗೂ ಬೆಲ್ಲಕ್ಕಾಗಿ ಕಬ್ಬು ಬೆಳೆಯುವ ಅಭ್ಯಾಸ ನಮ್ಮ ಊರಿನಲ್ಲಿತ್ತು. ಆದರೀಗ ಅವೆಲ್ಲ ಅಷ್ಟೇನೂ ಲಾಭದಾಯಕವಲ್ಲವೆಂದೋ, ಕೆಲಸ ಕಷ್ಟಕರವೆಂದೋ, ಅಥವಾ ಅಡಕೆಗೆ ಹೆಚ್ಚಿದ ಬೆಲೆಯಿಂದಾಗಿಯೋ ಗದ್ದೆಗಳೆಲ್ಲ ಅಡಿಕೆ ತೋಟಗಳಾಗಿವೆ, ಇರಲಿ. ಹಾಗೆಯೆ ಹಿಂದೆಲ್ಲ (ಕೆಲವರು ಇಂದಿಗೂ ಬೆಳೆಯುತ್ತಿದ್ದಾರೆ) ಪೇರಲೆ, ನೇರಳೆ, ಗೇರು, ಚಿಕ್ಕು, ಹಲಸು ಮೊದಲಾದ ಹಣ್ಣಿನ ಮರಗಳು, ಮನೆಗೆ ಉಪ್ಪಿನಕಾಯಿ ಹಾಕಲೆಂದು ಒಂದು ಮಾವಿನಮರ, ತಿನ್ನಲೆಂದು ರಸಪೂರಿ, ತೋತಾಪುರಿ, ಸೇಲಂ ಮೊದಲಾದ ಮಾವಿನಮರಗಳನ್ನು ಕೂಡ ತೋಟದ ಬದಿಯಲ್ಲಿಯೋ, ಮನೆಯ ಹಿಂದಿನ ಸೊಪ್ಪಿನ ಬೆಟ್ಟಗಳಲ್ಲಿಯೋ ಬೆಳೆಸುತ್ತಿದ್ದರು.

ಹೀಗೆ ನಮ್ಮ ಮನೆಯಲ್ಲಿ ಕೂಡ ಒಂದಿಷ್ಟು ಹಣ್ಣಿನ ಮರಗಳಿದ್ದವು. ಬಾಳೆ, ಚಿಕ್ಕು, ಮಾವು ಪೇರಲೆ, ಪಪ್ಪಾಯ ಮರಗಳು ರುಚಿಕರವಾದ ಹಣ್ಣನ್ನು ಕೊಡುತ್ತಿದ್ದವು. ಇದ್ದ ನಾಲ್ಕಾರು ಮಾವಿನಮರಗಳಲ್ಲಂತೂ ಮನೆಯವರಿಗೆಲ್ಲ ತಿಂದು ಸಾಕಾಗಿ ಊರಿಗೆ ಹಂಚುವಷ್ಟು ಮಾವಿನಹಣ್ಣುಗಳು ಬಿಡುತ್ತಿದ್ದವು. ಅಷ್ಟು ಒಳ್ಳೆಯ ರಸಪೂರಿ ಹಣ್ಣುಗಳನ್ನು ನಾನು ಆಮೇಲೆ ಬೇರೆಲ್ಲೂ ತಿನ್ನಲಿಲ್ಲ. ನಮ್ಮ ಬಾಲ್ಯದಲ್ಲಿ ಈಗಿನಂತೆ ಪೇಟೆಯಿಂದ ಹಣ್ಣು ತಂದು ತಿನ್ನುವ ಅಭ್ಯಾಸ ಇರಲಿಲ್ಲ. ಅಪರೂಪಕ್ಕೆ ಪೇಟೆಗೆ ಹೋದಾಗ ಹಣ್ಣಿನ ಅಂಗಡಿಗಳಲ್ಲಿ ಚಿಕ್ಕು, ಪಪ್ಪಾಯ, ಮಾವು, ಬಾಳೆ ಮೊದಲಾದ ಹಣ್ಣುಗಳನ್ನೆಲ್ಲ ಮಾರಲು ಇಟ್ಟಿರುವುದನ್ನು ನೋಡಿ ತುಂಬಾ ಆಶ್ಚರ್ಯಪಡುತ್ತಿದ್ದೆ! ನಮ್ಮ ಮನೆಯಲ್ಲಿ ಇದ್ದ ಹಾಗೆಯೆ ಎಲ್ಲರ ಮನೆಯಲ್ಲೂ ಇವುಗಳನ್ನು ಬೆಳೆಯುತ್ತಾರೆಂದು ನಂಬಿದ್ದೆ. ಹಣ್ಣು ಕೊಳ್ಳುವುದೆಂದರೆ ಅದು ನಮ್ಮಲ್ಲಿ ಬೆಳೆಯದ ಸೇಬು, ದ್ರಾಕ್ಷಿ ಮಾತ್ರ ಎಂಬುದು ನನ್ನ ಅಭಿಪ್ರಾಯವಾಗಿತ್ತು.

ಈ ಎಲ್ಲ ಜಾತಿಯ ಹಣ್ಣಿನ ಮರಗಳಲ್ಲಿ ಮಾವಿನ ಮರಕ್ಕೆ ವಿಶಿಷ್ಟ ಸ್ಥಾನ. ಅದರಲ್ಲೂ ಅನೇಕ ವಿಧದ ಮಾವಿನ ಮರಗಳು ನಮ್ಮ ಊರಿನಲ್ಲಿದ್ದವು. ಮನೆಯ ತೋಟದಲ್ಲಿ ರಸಪೂರಿ, ತೋತಾಪುರಿ, ಸೇಲಂ ಮೊದಲಾದ ಕಸಿಹಣ್ಣಿನ ಮರಗಳಿದ್ದರೆ, ಹಿಂದಿನ ಬೆಟ್ಟದಲ್ಲಿ ಸಿಹಿಯಾದ ಕಾಡುಹಣ್ಣಿನ ಮರಗಳಿದ್ದವು. ಊರಿನ ಮಧ್ಯದಲ್ಲೊಂದು ಪರಿಮಳಭರಿತವಾದ ಹುಳಿ ಮಾವಿನ ಮರ. ಮೊದಲು ಆಲೆಮನೆ ನಡೆಯುತ್ತಿದ್ದ ಜಾಗವಾದ್ದರಿಂದ ಅದಕ್ಕೆ ಆಲೆಮನೆ ಅಪ್ಪೆ ಎಂದೇ ಹೆಸರು. ಅದರ ಕಾಯಿಯ ಗೊಜ್ಜು, ಉಪ್ಪಿನಕಾಯಿಗಳನ್ನು ಮಾಡದ ಮನೆಯೆ ಊರಿನಲ್ಲಿ ಇರಲಿಲ್ಲ. ಇನ್ನೊಂದು ಗುಂಡಪ್ಪೆ ಮರ, ಅದರ ಹಣ್ಣಿನ ಸಾಸ್ವೆ, ಕಾಯಿರಸ, ಸಿಹಿಮೇಲೋಗರಗಳು ಕೂಡ ಇಂದಿಗೂ ಬಾಯಲ್ಲಿ ನೀರೂರಿಸುವಂತಹದಾಗಿವೆ.

ಈ ಎಲ್ಲವೂ ಈಗ ನಮ್ಮೂರಿನ ಗತವೈಭವಗಳಾಗಿವೆ. ಏಕೆಂದರೆ ನಾನು ಮೇಲೆ ಹೇಳಿದ ಮಾವಿನ ಮರಗಳ್ಯಾವುದೂ ಈಗ ಇಲ್ಲ. ಎಲ್ಲ ಮರಗಳೂ ಇತಿಹಾಸ ಸೇರಿವೆ. ಕಾರಣ ಅವುಗಳಿಗೆ ಬಂದ ಬಂದಳಿಕೆ.

ಬೇರೆ ಮರಗಿಡಗಳ ಮೇಲೆ ಬೆಳೆವ ಪರಾವಲಂಬಿ ಸಸ್ಯ ಈ ಬಂದಳಿಕೆ. ಇದರಲ್ಲಿ ಸುಮಾರು 30 ಕ್ಕೂ ಹೆಚ್ಚಿನ ಜಾತಿಗಳಿವೆಯಾದರೂ, ಮಾವಿನ ಮರಕ್ಕೆ ಹೆಚ್ಚಾಗಿ ದಾಳಿ ಮಾಡುವುದು ಲೊರಾಂಥಸ್ (Loranthus) ಎಂಬ ಕುಟುಂಬಕ್ಕೆ ಸೇರಿದ ಪರಾವಲಂಬಿ ಸಸ್ಯಗಳು. ಮಾವು, ಚಿಕ್ಕು, ಹಲಸು, ನೇರಳೆ ಹೀಗೆ ಅನೇಕ ಜಾತಿಯ ಮರಗಳ ಟೊಂಗೆಗಳ ಮೇಲೆ ಇವುಗಳು ಬೆಳೆಯುತ್ತವೆ. ಮಾವಿನ ಮರಗಳಂತೂ ಇವುಗಳ ಅತ್ಯಂತ ಪ್ರೀತಿಯ ವಾಸಸ್ಥಾನ.

ಪರಾವಲಂಬಿ ಸಸ್ಯಗಳೆಂದರೆ ಸ್ವತಃ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ನಡೆಸಿ ಆಹಾರವನ್ನು ತಯಾರಿಸಿಕೊಳ್ಳದೆ, ಆಹಾರಕ್ಕಾಗಿ ಬೇರೆ ಸಸ್ಯಗಳನ್ನು ಅವಲಂಬಿಸಿರುವಂತವುಗಳು.  ಪರಾವಲಂಬಿಗಳಲ್ಲೂ ಹಲವಾರು ವಿಧಾನಗಳಿವೆ. ಕೆಲವೊಂದು ಸಸ್ಯಗಳು ಪರಾವಲಂಬಿಗಳಾದರೂ ಮೂಲ ಸಸ್ಯಕ್ಕೆ ಹೆಚ್ಚಿನ ಅಪಾಯವನ್ನು ಉಂಟುಮಾಡದೆ ಕೆಲವೇ ಅಂಶಗಳನ್ನು ಮಾತ್ರವೇ ಪಡೆದುಕೊಳ್ಳುವಂತವುಗಳು, ಕೇವಲ ಆಧಾರಕ್ಕಾಗಿ ಮಾತ್ರ ಮರಗಳನ್ನು ಆಶ್ರಯಿಸುವಂತಹ ಸಸ್ಯಗಳು ಹೀಗೆ.

ಆದರೆ ಲೊರಾಂಥಸ್, ಕಸ್ಕುಟ ಮೊದಲಾದ ಕೆಲವು ಸಸ್ಯಗಳು ಸಂಪೂರ್ಣ ಪರಾವಲಂಬಿಗಳು. ಲೊರಾಂಥಸ್ ಒಂದು ಮರದ ರೆಂಬೆಯ ಮೇಲೆ ಬೆಳೆಯಲು ಪ್ರಾರಂಭಿಸಿದರೆ, ತನ್ನ ಹೀರುಕೊಳವೆಯಂತಹ ಬೇರುಗಳನ್ನು (haustorium) ಆಶ್ರಯದಾತ ಮರದ ರೆಂಬೆಯೊಳಗೆ ತೂರಿಸಿ ಅದರಿಂದ ತನಗೆ ಅವಶ್ಯವಿರುವ ಪೋಷಕಾಂಶಗಳನ್ನು  ಪಡೆದುಕೊಳ್ಳುತ್ತದೆ. ಮೊದಮೊದಲು ಇದರಿಂದ ಮರಕ್ಕೆ ಹೆಚ್ಚಿನ ಹಾನಿಯೇನೂ ಸಂಭವಿಸುವುದಿಲ್ಲ.

Jeevavemba Jaaladolage Environmental science writer Suma Sudhakiran discussed Mango trees Cuscuta Loranthus Haustorium

ಬೇರು ತೂರಿಸಿದ  ಹಾಸ್ಟೋರಿಯಂ ಮತ್ತು ಮಾವಿನಮರಕ್ಕೆ ದಾಳಿ ಇಟ್ಟಿರುವ ಲೊರಾಂಥಸ್

ಈ ಪರಾವಲಂಬಿ ನಿಧಾನವಾಗಿ ತನ್ನ ಸಂತಾನವನ್ನು ಮರದ ಇತರೆ ರೆಂಬೆಗಳಿಗೆ ವಿಸ್ತರಿಸಿಕೊಳ್ಳತೊಡಗುತ್ತದೆ. ಸಂತಾನೋತ್ಪತ್ತಿಕ್ರಿಯೆಗಾಗಿ ಸಿಹಿಯಾದ ಮಕರಂದವಿರುವ ಹೂವನ್ನು ಬಿಡುತ್ತದೆ. ಇದು ಹೂಕುಟಿಕ(flower pecker) ಹಕ್ಕಿಗಳನ್ನು ಆಕರ್ಷಿಸಿ, ಅವುಗಳು ಮಕರಂದ ಹೀರಲು ಬಂದಾಗ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ. ನಂತರ ಹೂವುಗಳು ಪುಟ್ಟಪುಟ್ಟ ಕಾಯಿಗಳಾಗುತ್ತವೆ, ಕಾಯಿ ಹಣ್ಣಾಗುತ್ತವೆ. ಈ ಪುಟ್ಟ ಹಣ್ಣುಗಳನ್ನು ತಿನ್ನುವ ಸೂರಕ್ಕಿಗಳು ಬೀಜಗಳನ್ನು ಬೇರೆ ರೆಂಬೆಯ ಮೇಲೆ ಅಥವಾ ಮರಗಳ ಮೇಲೆ ಬೀಳಿಸುತ್ತವೆ. ಒಂದು ರೀತಿಯ ಅಂಟಿನಿಂದ ಆವೃತವಾಗಿರುವ ಈ ಬೀಜಗಳು ಅಲ್ಲಿ ಅಂಟಿಕೊಂಡು, ಸೂಕ್ತ ಸಮಯದಲ್ಲಿ ಮೊಳೆತು ಗಿಡವಾಗುತ್ತವೆ. ತಮ್ಮ ಹೀರುಕೊಳವೆಯನ್ನು ಮರದ ರೆಂಬೆಯಲ್ಲಿ ತೂರಿಸಿ ಪೋಷಕಾಂಶಗಳನ್ನು ಹೀರತೊಡಗುತ್ತವೆ. ಹೀಗೆ ಮರದ ಒಂದೊಂದೇ ರೆಂಬೆಗಳನ್ನು ಆವರಿಸಿಕೊಳ್ಳುತ್ತಾ ಸಾಗುವ ಪರಾವಲಂಬಿ ಸಸ್ಯಗಳಿಂದ ಮರಕ್ಕೆ ಪೋಷಕಾಂಶಗಳ ಕೊರತೆ ಉಂಟಾಗಿ ಅದು ನಿಧಾನವಾಗಿ ಸಾಯತೊಡಗುತ್ತದೆ. ಒಂದಿಷ್ಟು ವರ್ಷಗಳಲ್ಲಿ ವೈಭವಯುತವಾಗಿ ಬೆಳೆದಿದ್ದ ಮರ ಸೊರಗಿ ಸತ್ತುಹೋಗುತ್ತದೆ! ಅಷ್ಟರಲ್ಲಾಗಲೇ ಸುತ್ತಮುತ್ತಲಿನ ಮರಗಳಲ್ಲಿ ತನ್ನ ವಂಶದ ಬೀಜಗಳನ್ನು ಬಿತ್ತಿರುವ ಪರಾವಲಂಬಿ ಇನ್ನೊಂದು ಮರವನ್ನು ನಿಧಾನವಾಗಿ ಕೊಲ್ಲುವ ಕೆಲಸದಲ್ಲಿ ಮಗ್ನವಾಗಿರುತ್ತದೆ!

ಈ ಲೊರಾಂಥಸ್ ಕುಟುಂಬಕ್ಕೆ ಸೇರಿದ ಸಸ್ಯಗಳಲ್ಲಿ ಅನೇಕ ಔಷಧೀಯ ಗುಣಗಳು ಇವೆಯಾದ್ದರಿಂದ   ಸಾಂಪ್ರದಾಯಿಕ ಔಷಧೀಯ ಪದ್ಧತಿಯಲ್ಲಿ ಇವುಗಳನ್ನು ಉಪಯೋಗಿಸುತ್ತಾರೆ.

ಹಳೆಯ ಮರಗಳು, ಪೋಷಕಾಂಶಗಳ ಕೊರತೆಯಿಂದಿರುವ ಮರಗಳಿಗೆ ಪರಾವಂಬಿಗಳ ದಾಳಿ ಹೆಚ್ಚು ಎನ್ನುತ್ತಾರೆ. ಮೊಟ್ಟಮೊದಲು ಇದು ಕಾಣಿಸಿಕೊಳ್ಳುತ್ತಿದ್ದಂತೆಯೆ ಆ ರೆಂಬೆಯನ್ನು ಕಡಿದು ನಾಶಪಡಿಸುವುದು ಸಂಪೂರ್ಣ ಮರ, ತೋಟವನ್ನು ಕಾಪಾಡಲು ಇರುವ ಸೂಕ್ತ ಮಾರ್ಗವೆನ್ನುತ್ತಾರೆ ಅನುಭವಿಗಳು.

ನಮ್ಮ ಮನೆಯಲ್ಲಿದ್ದ ಮರಗಳು ಅತ್ಯಂತ ಎತ್ತರದಲ್ಲಿದ್ದುದರಿಂದಲೋ, ಅಥವಾ ಮನೆಯವರಿಗಿದ್ದ ಅನುಭವದ ಕೊರತೆಯಿಂದಲೋ, ಮೊದಮೊದಲು ಈ ಪರಾವಲಂಬಿಯನ್ನು ನಿರ್ಲಕ್ಷಿಸಿ ಕೊನೆಗೆ ಎಲ್ಲ ಮರಗಳನ್ನು ಕಳೆದುಕೊಳ್ಳುವಂತಾದದ್ದು ದುರಂತ.

ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೆ? ಇಂತಹ ನಾಣ್ನುಡಿಗಳು ಹೇಳುವುದೆಲ್ಲ ಸತ್ಯ ಎನ್ನುವುದು ಭ್ರಮೆ! ಮರಗಳಿಗೆ ಬರುವ ಕಷ್ಟಗಳ ಬಗೆಗಿನ ಕನಿಷ್ಟ ಅರಿವೂ ಇಲ್ಲದವರು ಇದನ್ನು ಹೇಳಿರಬೇಕು. ಅಷ್ಟೆಲ್ಲ ಭವ್ಯವಾಗಿ ಬೆಳೆದಿರುವ ಮಾವಿನ ಮರವನ್ನು ಪುಟಾಣಿ ಪರಾವಲಂಬಿ ಸಸ್ಯವೊಂದು ಮಲಗಿಸಿಬಿಡುತ್ತದೆ!

(ಮುಂದಿನ ಜೀವಜಾಲ : 11.2.2021)

ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

*

ಹಿಂದಿನ ಜೀವಜಾಲ : Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್

Follow us on

Related Stories

Most Read Stories

Click on your DTH Provider to Add TV9 Kannada