New Novel : ಅಚ್ಚಿಗೂ ಮೊದಲು : ಆಶಾ ರಘು ಅವರ ಹೊಸ ಕಾದಂಬರಿ ‘ಮಾಯೆ‘ ಯ ಆಯ್ದ ಭಾಗ

Kannada Novel : ಅವಳಿಗೆ ಅರಿಶಿನ ಕುಂಕುಮವಿಟ್ಟು, ಹೂವನ್ನು ಮುಡಿಗೇರಿಸಿ ಅಕ್ಷತೆ ಹಾಕಿ ದೀಪದ ಆರತಿ ಬೆಳಗಿದರು. ದೊಡ್ಡವಳಾದಳು ಎಂದರೆ ಇದೇನೇ..? ಆರತಿ ಮುಗಿದ ನಾಲ್ಕಾರು ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ನನ್ನೊಂದಿಗೆ ಆಟವಾಡಲು, ತಿರುಗಾಡಲು ಮೊದಲು ಮಾಡಿದಳು. ಅವರಪ್ಪ ಅಮ್ಮಂದಿರ ಮಾತುಗಳನ್ನು ಲೆಕ್ಕಿಸುತ್ತಲೇ ಇರಲಿಲ್ಲ.

New Novel : ಅಚ್ಚಿಗೂ ಮೊದಲು : ಆಶಾ ರಘು ಅವರ ಹೊಸ ಕಾದಂಬರಿ ‘ಮಾಯೆ‘ ಯ ಆಯ್ದ ಭಾಗ
ಲೇಖಕಿ ಆಶಾ ರಘು

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಮಾಯೆ (ಕಾದಂಬರಿ)
ಲೇಖಕರು : ಆಶಾ ರಘು
ಪುಟ : 240
ಬೆಲೆ : ರೂ. 250
ಮುಖಪುಟ ವಿನ್ಯಾಸ : ಚಂದ್ರನಾಥ ಆಚಾರ್ಯ
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್​, ಬೆಂಗಳೂರು

ಲೇಖಕಿ ಆಶಾ ರಘು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು ಆವರ್ತ, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಚೂಡಾಮಣಿ ಹಾಗೂ ಬಂಗಾರದ ಪಂಜರ, ಗತ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅಕ್ಟೋಬರ್ 2ರಂದು ಇವರ ಹೊಸ ಕಾದಂಬರಿ ಮಾಯೆ ಬಿಡುಗಡೆಗೊಳ್ಳಲಿದೆ.

*

ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ, ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ. ಇದರ ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು ಸತ್ಯವೆಂದರೆ ಆ ಮೂರೂ ಆಸೆಗಳನ್ನು ತೊರೆದ ಜೀವಕ್ಕೆ ಆಹ್ಲಾದಕರ ಆನಂದದ ಜೊತೆಗೆ ಪಾರಮಾರ್ಥಿಕ ಸುಖವೂ ದೊರೆಯುತ್ತದೆ ಎನ್ನುವುದು. ಈ ಎರಡೂ ಸತ್ಯಗಳನ್ನು ನಿರೂಪಿಸಲೆಂದೆ ಆಶಾ ರಘು ಅವರು ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆಯೇ ಎಂಬ ಅನಿಸಿಕೆ ಓದುಗರಲ್ಲಿ ಮೂಡುವುದು ಖಂಡಿತ. ಅಷ್ಟರಮಟ್ಟಿಗೆ ಈ ಕಾದಂಬರಿಯ ರಚನೆ ಮತ್ತು ಉದ್ದೇಶ ಸಫಲಗೊಂಡಿದೆ ಎನ್ನುವುದೂ ಖಚಿತ. ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆಯುವ ಕಥಾಹಂದರವು, ಅದರ ಪಾತ್ರಗಳ ನೆನಪುಗಳ ಸರಮಾಲೆಯಾಗಿಯೇ ಓದುಗನಿಗೆ ತೆರೆದುಕೊಳ್ಳುವುದು ಈ ಕಾದಂಬರಿಯ ಒಂದು ವಿಶೇಷ. ಬಲವಂತದಲ್ಲಿ ಪ್ರೀತಿಯನ್ನು ಪಡೆಯುವ ಛಲ, ನಿಧಿಯ ಬೇಟೆ, ಆಸ್ತಿಯ ಆಸೆ, ಸಿಂಹಾಸನದ ಉತ್ತರಾಧಿಕಾರಿಯ ಜನ್ಮ ರಹತ್ಯ ಮುಂತಾದ ಹೆಗ್ಗುರುತುಗಳಿಗೆ ಓದುಗನನ್ನು ಕಟ್ಟಿಹಾಕಿ, ಆ ಹೆಗ್ಗುರುತುಗಳ ನಕ್ಷೆಯೊಳಗೆ ಕತೆಯನ್ನು ಬೆಳೆಸುತ್ತಾರೆ ಆಶಾ.
ಡಾ.ಕೆ.ಎನ್.ಗಣೇಶಯ್ಯ, ಕಾದಂಬರಿಕಾರರು 

‘ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ… ಈ ವಚನದಂತೆಯೇ, ಒಬ್ಬ ವ್ಯಕ್ತಿ ಹೊನ್ನು, ಹೆಣ್ಣು, ಮಣ್ಣುಗಳ ಆಸೆಗೆ ಬಿದ್ದು ದಕ್ಕಿಸಿಕೊಳ್ಳಲು ಹೊರಟು ಅತೀವವಾದ ಘಾಸಿಗೆ ಒಳಗಾಗಿ, ಕಡೆಗೆ ಈ ಮೂರನ್ನೂ ಪಡೆಯುವ ಹಿಂದೆ ತನಗಿದ್ದ ಅಪಾರವಾದ ಆಸೆಯೇ ಕಾರಣ ಎಂದು ಕಂಡುಕೊಳ್ಳುವಂತೆ ಕಾದಂಬರಿಯೊಂದನ್ನು ಯಾಕೆ ರಚಿಸಬಾರದು ಎನ್ನಿಸಿತು. ನಂತರ ಆ ದಿಕ್ಕಿನಲ್ಲಿಯೇ ಒಂದು ಕಲ್ಪಿತ ಕಥೆಯನ್ನು ಹೆಣೆಯತೊಡಗಿದೆ. ಕಾದಂಬರಿಯ ಕಾಲ ಸುಮಾರು ಹನ್ನೆರಡನೆಯ ಶತಮಾನ ಎಂದುಕೊಂಡೆ. ನಿಧಿಶೋಧದ ವಿಸ್ತಾರವಾದ ಕಥಾ ಎಳೆಯು ಇದ್ದುದ್ದರಿಂದ ಅದು ರಾಜಮನೆತನಗಳ ವಿವರಗಳ ಆಸರೆ ಬೇಡುತ್ತಿದ್ದರಿಂದ, ನಿಜದಲ್ಲಿ ಇದ್ದಂತಹ ಸಾಮ್ರಾಜ್ಯಗಳ ಹೆಸರುಗಳನ್ನು ತೆಗೆದುಕೊಂಡರೆ ಅಪಚಾರವಾಗಬಹುದು ಎಂದು ಮನಗಂಡು, ಪೂರಕವಾಗಿ ಕಲ್ಪಿತ ಸ್ಥಳಗಳನ್ನೂ ರಾಜಮನೆತನಗಳ ವಿವರಗಳನ್ನೂ ಸೃಷ್ಟಿಸಿದೆ. ಆದರೆ ಕಲ್ಪಿತ ಸ್ಥಳಗಳಾದರೂ, ಒಟ್ಟಾರೆ ಅದು ಕನ್ನಡ ನುಡಿಯನಾಡುವ ನಾಡು ಎಂದು ಭಾವಿಸಿದೆ. ಹೀಗೆ ಕಲ್ಪಿತ ನಕ್ಷೆಯೊಳಗೆ ಕಾದಂಬರಿಯ ಕಥೆ ಹುಟ್ಟಿತು.
ಆಶಾ ರಘು, ಕಾದಂಬರಿಕಾರರು

ಆಯ್ದ ಭಾಗ:

ಅವಳಿಗೂ ಇಂತದ್ದೇ ವಿಷಮ ಜ್ವರ ಬಂದಿತ್ತೇ ಆಗ..? ಈ ಪರಿಯಾಗಿ ಬಳಲಿಸುತ್ತಿದೆಯಲ್ಲಾ..? ಇನ್ನೂ ನಾಲ್ಕಾರು ದಿನಗಳಲ್ಲಿ ಇದರ ತಾಪ ಕಡಿಮೆ ಆಗಲಿಲ್ಲವೆಂದರೆ ನಾನೂ ಹೋಗುವುದೇ..! ಹೋಗುವುದೆಂದರೆ ಎಲ್ಲಿಗೆ..? ಅವಳಲ್ಲಿಗೆ! ಅವಳ ದಿವ್ಯ ಸನ್ನಿಧಿಗೆ! ಜಯಕೀರ್ತಿಯ ಕಣ್ಣುಗಳು ಬೇನೆಯನ್ನೂ ಮೀರಿ ಮಿನುಗಿದುವು. ಅವನ ಕಣ್ಣುಗಳ ತುಂಬ ವೈಶಾಲಿ ನಗೆಯ ಕೇಕೆ ಹಾಕುತ್ತಾ ಉಯ್ಯಾಲೆಯ ಮೇಲೆ ತೂಗಿ ತೂಗಿ ಎದೆಯ ಮಟ್ಟಕ್ಕೆ ತನ್ನ ಹಂಸಪಾದಗಳನ್ನು ತಂದು ತಾಕಿಸಿ ತಾಕಿಸಿ ಹಿಂದಕ್ಕೆ ಜಿಗಿಯುತ್ತಿದ್ದಳು. ವಾಸ್ತವದಲ್ಲಿ ತಾನಿದ್ದ ಅರಗತ್ತಲಿನ ಸಣ್ಣ ಹೆಂಚಿನ ಮನೆ ಅವನ ಪ್ರಜ್ಞೆಯಲ್ಲಿ ಅವಕಾಶವನ್ನೇ ಪಡೆದಿರಲಿಲ್ಲ. ಕಣ್ಣು ತೆರೆದಿದ್ದರೂ ಅಲ್ಲಿ ಸೂರಿನ ಜಂತೆ ಕಾಣದೆ ಅವಳೇ ಇಡಿಯಾಗಿ ಆವರಿಸಿಕೊಂಡುಬಿಟ್ಟಿದ್ದಳು.

ಒಂದು ದಿನದ್ದೇ ಅವಳದ್ದೂ ನನದೂ? ಜಯಕೀರ್ತಿಯ ಮುಖದಲ್ಲಿ ಸಣ್ಣದೊಂದು ನಗೆಯ ಅಲೆ ತೇಲಿ ಹೋಯಿತು. ಅವಳ ತೊಟ್ಟಿಲನ್ನು ತೂಗಿದ್ದೇನೆ ನಾನು! ನಾಲ್ಕೋ, ಐದೋ ವರ್ಷ ವಯಸ್ಸು ನನಗಾಗ. ಅಮೃತಶಿಲೆಯ ಗೊಂಬೆಯಂತೆ ಪಿಳಪಿಳನೆ ನೀಲಿ ಕಣ್ಣುಗಳನ್ನು ಬಿಟ್ಟುಕೊಂಡು ಮಲಗಿರುತ್ತಿದ್ದಳು ಅದರಲ್ಲಿ. ಅವರಮ್ಮ ಸುನಂದಾದೇವಿಯವರು, ‘ಜಯಾ, ನಾನು ಹೊಳೆಗೆ ಹೋಗಿ ನೀರು ತರಬೇಕು. ಸ್ವಲ್ಪ ತೊಟ್ಟಿಲನ್ನು ಆಡಿಸುತ್ತಿರು’ ಎನ್ನುವರು. ತೊಟ್ಟಿಲನ್ನು ತೂಗುತ್ತಾ, ಹಾಡುತ್ತಾ, ಕುಣಿಯುತ್ತಾ ನನಗೆ ಹಸಿವೆಯೇ ಆಗುತ್ತಿರಲಿಲ್ಲ. ಅವರ ಮನೆಗೂ ನಮ್ಮ ಮನೆಗೂ ನಡುವೆ ಇದ್ದದ್ದು ಒಂದೇ ಗೋಡೆಯಲ್ಲವೇ? ನಾನು ನಮ್ಮ ಮನೆಯಲ್ಲಿ ಕೂತು ತುತ್ತು ಬಾಯಿಗೆ ಇಡುತ್ತಿದ್ದರೂ ಪಕ್ಕದ ಮನೆಯಿಂದ ಅವಳು ಅಳುವ ಸದ್ದು ಕೇಳಿಸುತ್ತಿತ್ತು. ಒಡನೆಯೇ ಓಡಿ ಸರಕ್ಕನೆ ಅವಳ ಮುಂದೆ ನಿಂತು ಮುಖವನ್ನು ಕೋತಿಯ ಮೂತಿಯಂತೆಯೋ, ಕೋಡಂಗಿಯ ಮೂತಿಯಂತೆಯೋ ಮಾಡಿ, ಬಾಯಲ್ಲಿ ವಿಚಿತ್ರ ಶಬ್ದ ಹೊರಡಿಸಿ ನಗಿಸಿಬಿಡುತ್ತಿದ್ದೆ. ಕಿಕ್ಕಿಕ್ಕೀ ಕ್ಕಿಕ್ಕೀ ಲಿಲ್ಲಿಲ್ಲಿಲ್ಲೀ.. ಕಿಕ್ಕಿಕ್ಕೀ ಕ್ಕಿಕ್ಕೀ ಲಿಲ್ಲಿಲ್ಲಿಲ್ಲೀ.. ಅವಳು ಎಳೆ ಕೂಸಾಗಿದ್ದಾಗ ನಗುತ್ತಿದ್ದುದೇ ಚಂದ!

ಎಷ್ಟೋ ಬಾರಿ ನನ್ನಮ್ಮ ಅವಳಿಗೂ ನನಗೂ ಒಟ್ಟಿಗೆ ತಿನ್ನಿಸಿ ದ್ದೂರಿ… ದ್ದೂರಿ.. ಹಾಡಿದ್ದಿದೆ. ಎದುರುಬದುರು ಕೂರಿಸಿ ಢೀಢೀಢೀಡೀ ಡಿಕ್ಕಿ ಹೊಡೆಸಿದ್ದಿದೆ. ವಾತ್ಸಲ್ಯದ ಮೂರ್ತಿಯವಳು… ಇಳಾದೇವಿ! ಅವಳೊಂದು ವೇಳೆ ಜೊತೆಗೇ ಇರುತ್ತಿದ್ದರೆ ನಾನು ಈ ಸ್ಥಿತಿಯನ್ನು ತಲುಪಲು ಖಂಡಿತಾ ಬಿಡುತ್ತಿರಲಿಲ್ಲ. ಜಯಕೀರ್ತಿ ಒಮ್ಮೆ ತಡೆದು ಚಿಂತಿಸಿದ. ಹೌದೇ? ಎನ್ನುವ ಪ್ರಶ್ನೆ ಕೆಲಕಾಲ ಬುದ್ಧಿಯನ್ನು ಹಾಗೇ ಆವರಿಸಿ ನಿಂತುಬಿಟ್ಟಿತು. ಇಲ್ಲ.., ಅವಳು ದೂರದಲ್ಲಿದ್ದುಕೊಂಡು ನನ್ನ ಆಗುಹೋಗುಗಳನ್ನು ಕೇವಲ ಗಮನಿಸದೆ, ಹತ್ತಿರವೇ ಉಳಿದಿದ್ದರೂ ನಾನೀ ಸ್ಥಿತಿಯನ್ನು ತಲುಪಿಯೇ ತೀರುತ್ತಿದ್ದೆ. ಮನುಷ್ಯನ ಆಸೆಯ ಮುಂದೆ ಯಾವುದಿದೆ? ಅವಳು ಜೊತೆಗಿದ್ದಿದ್ದರೆ… ಹೆಚ್ಚೆಂದರೆ ಕಾಲಕಾಲಕ್ಕೆ ವಿವೇಕ ಹೇಳುತ್ತಿದ್ದಳು. ಮುಗ್ಗರಿಸಿದಾಗ ತಲೆದಡವಿ ಕಣ್ಣೀರು ಸುರಿಸುತ್ತಿದ್ದಳು… ಎನ್ನುವ ಉತ್ತರ ಗೋಚರಿಸಿದ ಬೆನ್ನಿಗೇ, ಹಾಗೆ ಹೇಳುತ್ತಿದ್ದಾಗಲೂ ನಾನೆಲ್ಲಿ ಕಿವಿಗೊಟ್ಟು ಕೇಳುವ ಪುಣ್ಯಕ್ಕೆ ಹೋದೆ..? ಅವಳು ಬುದ್ಧಿ ಹೇಳುವ ಅವಕಾಶವನ್ನೂ ತ್ಯಜಿಸಿ, ನನ್ನಿಂದ ದೂರವೇ ಇದ್ದಳಲ್ಲ..? ಎನ್ನುವ ವಾಸ್ತವ ಸತ್ಯವನ್ನು ನೆನೆದು ನಿಟ್ಟುಸಿರುಬಿಟ್ಟ.

Acchigoo modhalu asha raghu books

ಆಶಾ ರಘು ಅವರ ಪುಸ್ತಕಗಳು

ಹೆಣ್ಣುಮಕ್ಕಳಿಲ್ಲದ ಅಮ್ಮ ತಾನು ಬೆಳೆಸಿದ ಸ್ಪಟಿಕ ಗಿಡದಿಂದ ಹೂಗಳನ್ನು ಕೊಯ್ದು ಮಾಲೆ ಕಟ್ಟಿ ವೈಶಾಲಿಯ ಹೆರಳಿಗೆ ಮುಡಿಸಿ ಸಂತೋಷಪಡುತ್ತಿದ್ದಳು. ಅವರಮ್ಮ ನನ್ನೊಂದಿಗೆ ಅವಳನ್ನೂ ಗುರುಮಠಕ್ಕೆ ಕಳಿಸಿಕೊಡುತ್ತಿದ್ದಳು. ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲದಿದ್ದರೂ ನಾನು ಅವಳನ್ನು ಕರೆದೊಯ್ಯುತ್ತಿದ್ದೆ. ಬರೀ ಗಂಡುಹುಡುಗರ ನಡುವೆ ಅವಳೊಬ್ಬಳೇ ಹುಡುಗಿ ಆದ ಕಾರಣಕ್ಕೆ ಅವಳೇನೂ ಅಷ್ಟೊಂದು ಮುಜುಗರ ಪಟ್ಟುಕೊಂಡಿದ್ದಿಲ್ಲ. ಗುರು ಸಾಲ್ವಮುನಿಗಳೂ ಅಷ್ಟೇ… ನಾಲ್ಕಾರು ದಿನ ಏನೂ ಆಕ್ಷೇಪಿಸದೆ ಅವಳಿಗೂ ಪಾಠ ಹೇಳಿಕೊಡುತ್ತಿದ್ದರು. ಹುಡುಗರು ‘ನಿನ್ನ ತಂಗಿಯೇನೋ ಜಯ?’ ಎಂದು ಕೇಳುತ್ತಿದ್ದರು. ನಾನಾಗ, ‘ಇಲ್ಲ… ನನ್ನ ಅತ್ತೆಯ ಮಗಳು’ ಎನ್ನುತ್ತಿದ್ದೆ. ನಾನು ಅವಳ ಅಮ್ಮನನ್ನು ಅತ್ತೆ ಎಂದೇ ಕರೆಯುತ್ತಿದ್ದುದು. ಅವಳೊಂದಿಗೆ ಯಾವ ಹುಡುಗರಿಗೂ ಚೇಷ್ಟೆ ಮಾಡುವ ಧೈರ್ಯ ಇರಲಿಲ್ಲ. ಹಾಗೆ ಮಾಡಿದ ಒಬ್ಬ ಹುಡುಗನ ಬೆನ್ನ ಮೇಲೆ ಕೂತು ಮುಖವನ್ನು ನೆಲಕ್ಕೆ ಹೊಡೆಯಿಸಿ ಹಲ್ಲು ಮುರಿದಿದ್ದೆ! ಅದಕ್ಕೇ ಎಲ್ಲರೂ ನನ್ನನ್ನು ಕಂಡರೆ ಹೆದರುತ್ತಿದ್ದರು. ಕೆಲದಿನಗಳಷ್ಟೇ… ವೈಶಾಲಿ ನನ್ನೊಂದಿಗೆ ಗುರುಮಠಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಳು. ಗುರುಗಳೇ ಕರೆತರಬೇಡ ಎಂದರೋ, ಅವಳೇ ಬರುವುದಿಲ್ಲವೆಂದು ಕೂತಳೋ ನೆನಪಿಲ್ಲ.

ನಮ್ಮ ಮನೆಯ ಪೂರ್ವದಿಕ್ಕಿಗೆ ಒಂದು ಬೆಟ್ಟವಿದ್ದಿತು. ಬೆಟ್ಟದ ಕೆಳಗೆ ಒಂದು ಕೊಳ… ಆ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಒಂದು ಕಾಡು ಜಾತಿಯ ದೊಡ್ಡ ವೃಕ್ಷವಿದ್ದಿತು. ಚೈತ್ರ ಮಾಸದಲ್ಲಿ ಅದರ ತುಂಬಾ ಹಳದಿ ಬಣ್ಣದ ಸಣ್ಣಸಣ್ಣ ಹೂವುಗಳು ಬಿಡುತ್ತಿದ್ದುವು. ಅವಳನ್ನು ಆ ಮರದ ಕೆಳಗೆ ನಿಲ್ಲಿಸಿ, ನಾನು ಮರವೇರಿ ರೆಂಬೆಗಳನ್ನು ಅಲುಗಾಡಿಸಿ ಅವಳ ಮೇಲೆ ಪುಷ್ಪವೃಷ್ಟಿ ಆಗುವಂತೆ ಮಾಡುತ್ತಿದ್ದೆ. ಬೆಟ್ಟದ ಮೇಲೊಂದು ಭೈರವಿಯ ಸಣ್ಣ ಗುಡಿ ಇದ್ದಿತು. ಅಲ್ಲಿ ಗುಡಿ ಇರುವುದೇ ನೆಪವಾಗಿ ಇಬ್ಬರೂ ಆಗಾಗ ಬೆಟ್ಟವನ್ನು ಏರಿ ಇಳಿಯುತ್ತಿದ್ದೆವು. ಕೊಳದ ದಡದಲ್ಲಿ ಅವಳನ್ನು ಕೂರಿಸಿ, ಅವಳ ಕೈಯಿಗೆ ನನ್ನ ಮೇಲಂಗಿಯನ್ನು ಬಿಚ್ಚಿ ಕೊಟ್ಟು ಕೊಳಕ್ಕೆ ಹಾರಿದೆನೆಂದರೆ ಕಾಲದ ಪರಿವೆಯಿಲ್ಲದೆ ಈಜುತ್ತಿದ್ದೆ. ಅವಳು ಕುಳಿತಲ್ಲೇ ದಡದ ತೇವದ ನೆಲದ ಮೇಲೆ ಒಣಕಡ್ಡಿಯಲ್ಲಿ ಚಿತ್ತಾರ ಬಿಡಿಸುತ್ತಾ ಸಮಯ ಕಳೆಯುತ್ತಿದ್ದಳು. ಒಮ್ಮೆ ಈಜು ಕಲಿಸುವುದಾಗಿ ಹೇಳಿ ನೀರಿಗಿಳಿಸಿಕೊಂಡು ಅವಳನ್ನು ಬಿಗಿದಪ್ಪಿಕೊಂಡೇ ಬಿಟ್ಟಿದ್ದೆನಲ್ಲಾ..!? ಅವಳು ಕೊಂಚವೂ ಪ್ರತಿಭಟಿಸದೆ ತಲೆಯನ್ನು ಬಾಗಿಸಿ ನಾಚುತ್ತ ನಿಧಾನವಾಗಿ ತೋಳಬಂಧನದಿಂದ ಬಿಡಿಸಿಕೊಂಡು ಎರಡು ಹೆಜ್ಜೆ ಹಿಂದಕ್ಕೆ ಹಾಕಿ ದೂರ ಸರಿದು, ನಂತರ ಓಡಿ ಮರೆಯಾಗಿದ್ದಳು. ಮನೆಗೆ ಬಂದ ಮೇಲೂ ಆ ದಿನವೆಲ್ಲಾ ಕಣ್ಣಿಗೆ ನೇರವಾಗಿ ಕಾಣಿಸಿಕೊಳ್ಳದೆ ಮರೆಯಾಗಿಯೇ ಉಳಿದಿದ್ದಳು. ಎಷ್ಟು ವಯಸ್ಸು ನನಗಾಗ..? ನನಗೆ ಹದಿಮೂರು… ವೈಶಾಲಿಗೆ ಎಂಟೋ ಒಂಭತ್ತೋ..!

Acchigoo Modhalu asha raghu sl bhairappa

ಪ್ರಸಿದ್ಧ ಸಾಹಿತಿ ಎಸ್.ಎಲ್. ಭೈರಪ್ಪನವರೊಂದಿಗೆ ಆಶಾ ರಘು

ಒಂದು ದಿನ ಬೆಳಗ್ಗೆ ನಿತ್ಯದಂತೆ ವೈಶಾಲಿಯನ್ನು ಕಾಣಲು ಅವಳ ಮನೆಗೆ ಹೋದೆ. ಬಾಗಿಲಲ್ಲೇ ತಡೆದು ನಿಲ್ಲಿಸಿದ ಅವರಪ್ಪ, ‘ಈ ದಿನ ಅವಳು ಆಡೋಕ್ಕೆ ಬರೋಲ್ಲ’ ಎಂದರು. ನಾನು ಚಕಿತನಾಗಿ ‘ಯಾಕೆ?’ ಎಂದು ಕೇಳಿದೆ. ‘ಅವಳಿಗೆ ಹುಷಾರಿಲ್ಲ., ಈ ದಿನವಲ್ಲ.. ಇನ್ಯಾವತ್ತೂ ನಿನ್ನೊಂದಿಗೆ ಆಟವಾಡೋಕ್ಕೆ ಬರೋಲ್ಲ’ ಎಂದರು ಅವರಮ್ಮ. ನನಗೆ ಆಘಾತವಾಯಿತು. ಪುನಃ ಆಕ್ಷೇಪಿಸುವ ದನಿಯಲ್ಲಿ ‘ಯಾಕೆ?’ ಎಂದೆ. ‘ನಿಮ್ಮಮ್ಮನಲ್ಲಿ ಹೋಗಿ ಕೇಳು.. ಹೇಳ್ತಾರೆ’ ಎಂದು ಅವರಮ್ಮ ನಕ್ಕು, ತಲೆ ನೇವರಿಸಿ ಕಳಿಸಿದರು. ನಾನು ಒಡನೆಯೇ ಮನೆಗೆ ಬಂದು ಅಮ್ಮನಲ್ಲಿ ಕೇಳಿದೆ. ನಮ್ಮಮ್ಮನೂ ಅವರಮ್ಮನಂತೆಯೇ ತಲೆನೇವರಿಸಿ, ‘ಅವಳು ಈಗ ದೊಡ್ಡವಳಾಗಿದಾಳೆ. ಅದಕ್ಕೇ ನಿನ್ನ ಜೊತೆ ಆಟವಾಡೋಕ್ಕೆ ಬರೋಲ್ಲ’ ಎಂದಳು. ನನಗೆ ರೇಗಿತು.. ‘ಒಂದೇ ದಿನದಲ್ಲಿ ಅವಳು ದೊಡ್ಡವಳಾದದ್ದು ಹ್ಯಾಗೆ?’ ಎಂದು ಕೇಳಿದೆ. ಅದಕ್ಕೆ ಅಮ್ಮ ಹೊಟ್ಟೆ ಹುಣ್ಣಾಗುವಂತೆ ನಕ್ಕಳೇ ಹೊರತು ಉತ್ತರ ಹೇಳಲಿಲ್ಲ.

ದಿನವೂ ಹೀಗೆಯೇ.. ನನ್ನ ಪ್ರಶ್ನೆ ನನ್ನ ಬಾಯಲ್ಲಿಯೇ ಉಳಿಯುತ್ತಿತ್ತು. ಅಮ್ಮ, ‘ನೀನು ದೊಡ್ಡವನಾದ ಮೇಲೆ, ನಿನಗೊಬ್ಬಳು ಹೆಂಡತಿ ಬರ್ತಾಳಲ್ಲ ಪಕ್ಕಕ್ಕೆ.. ಆಗ ಎಲ್ಲಾ ನಿನಗೇ ತಿಳಿಯುತ್ತೆ’ ಎನ್ನುತ್ತಿದ್ದಳಷ್ಟೆ! ಭರ್ತಿ ಎರಡು ವಾರಗಳು ಅವಳನ್ನು ಕಾಣದೆ ಹಲುಬಿದ ಮೇಲೆ ಒಂದು ಸಂಜೆ ಅವರ ಮನೆಯಲ್ಲಿ ದೊಡ್ಡ ಹೆಂಗಸರ ಕೂಟವೇ ಸೇರಿತ್ತು.. ಅಮ್ಮ ನನ್ನನ್ನು ಆ ಸಂಜೆ ಅವಳ ಮನೆಗೆ ಕರೆದೊಯ್ದರು. ರೇಷಿಮೆ ಸೀರೆ, ಮೊಗ್ಗಿನ ಜಡೆ, ಅರಿಶಿನ, ಕುಂಕುಮಗಳಿಂದ ಅಲಂಕೃತಗೊಂಡ ವೈಶಾಲಿ ಅಗ್ರಭಾಗದಲ್ಲಿ ಮಣೆಯ ಮೇಲೆ ಕುಳಿತು ಕಂಗೊಳಿಸುತ್ತಿದ್ದಳು! ನನ್ನನ್ನು ವಾರೆಗಣ್ಣಿನಿಂದ ನೋಡಿ ನಾಚಿ ತಲೆತಗ್ಗಿಸಿದಳು. ಹೆಂಗಳೆಯರು ಅವಳಿಗೆ ಅರಿಶಿನ ಕುಂಕುಮವಿಟ್ಟು, ಹೂವನ್ನು ಮುಡಿಗೇರಿಸಿ ಅಕ್ಷತೆ ಹಾಕಿ ಆಶೀರ್ವದಿಸಿ, ದೀಪದ ಆರತಿ ಬೆಳಗಿದರು. ದೊಡ್ಡವಳಾದಳು ಎಂದರೆ ಇದೇನೇ..? ಅಂತ ನನಗೆ ಆಗ..! ಆರತಿ ಮುಗಿದ ನಾಲ್ಕಾರು ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ನನ್ನೊಂದಿಗೆ ಆಟವಾಡಲು, ತಿರುಗಾಡಲು ಮೊದಲು ಮಾಡಿದಳು. ಅವರಪ್ಪ ಅಮ್ಮಂದಿರ ಮಾತುಗಳನ್ನು ಲೆಕ್ಕಿಸುತ್ತಲೇ ಇರಲಿಲ್ಲ.

ಆ ನನ್ನ ದಾಯಾದಿಗಳು.. ಅವರು ಕೆಡಕು ಮಾಡಿದರೂ ಒಮ್ಮೊಮ್ಮೆ ಅದು ಒಳಿತಾಗಿಯೇ ಪರಿಣಮಿಸುತ್ತದೆ. ದಾಯಾದಿ ಎಂದ ಕೂಡಲೇ ಗತಿಸಿದ ದೊಡ್ಡಪ್ಪನ ಮುಖವೇ ಕಣ್ಣ ಮುಂದೆ ಬರಬೇಕೇ..? ಇಲ್ಲ., ಕೆಲಕಾಲ ನನ್ನ ಮೈನಸ್ಸುಗಳನ್ನು ಆವರಿಸಿ ಆಳುವವಳು ವೈಶಾಲಿಯೇ.. ಎಂದರೆ ಊಹೂಂ..! ನಿಂತ ಮೂತ್ರದಲ್ಲಿಯೂ ಮೀನಿಗೆ ಗಾಳ ಹಾಕುವ ಆ ಹೀನಸುಳಿಯ ದೊಡ್ಡಪ್ಪ ಮೇರಕಯ್ಯನೇ ಪ್ರೇತದಂತೆ ಆವರಿಸಿಕೊಂಡು.. ಛೇ..! ಕೆಲಕಾಲ ಯೋಚನೆಯ ಲಹರಿ ಸ್ಥಗಿತಗೊಂಡಿತು. ಜಯಕೀರ್ತಿ ನಿಧಾನವಾಗಿ ಎಡಮಗ್ಗುಲಿಗೆ ಹೊರಳಿ ಮಲಗಿಕೊಂಡ.

(ಕಾದಂಬರಿಯ ಖರೀದಿಗೆ ಸಂಪರ್ಕಿಸಿ : 99459 39436) 

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ಸು. ರುದ್ರಮೂರ್ತಿ ಶಾಸ್ತ್ರಿಯವರ ‘ಅಕ್ಕಮಹಾದೇವಿ’ ಕಾದಂಬರಿ ವಾರಾಂತ್ಯದಲ್ಲಿ ಬಿಡುಗಡೆ

Read Full Article

Click on your DTH Provider to Add TV9 Kannada