New Novel : ಅಚ್ಚಿಗೂ ಮೊದಲು ; ಸು. ರುದ್ರಮೂರ್ತಿ ಶಾಸ್ತ್ರಿಯವರ ‘ಅಕ್ಕಮಹಾದೇವಿ’ ಕಾದಂಬರಿ ವಾರಾಂತ್ಯದಲ್ಲಿ ಬಿಡುಗಡೆ

Akkamahadevi : ‘‘ಮದುವೆ! ಸಾವ ಕೆಡುವ ಈ ಭವಿಯೊಂದಿಗೆ ನನ್ನ ಮದುವೆಯೇ? ಚೆನ್ನಮಲ್ಲಿಕಾರ್ಜುನಾ, ನೋಡಿದೆಯಾ! ನಿನಗೆ ಮೀಸಲಾದವಳನ್ನು ಈ ಪಾಪಿ ರಾಜ ಬಯಸುತ್ತಿದ್ದಾನೆ’’ ಎಂದು ಮಹಾದೇವಿ ಮನಸ್ಸಿನಲ್ಲೇ ಮೊರೆಯಿಟ್ಟಳು.

New Novel : ಅಚ್ಚಿಗೂ ಮೊದಲು ; ಸು. ರುದ್ರಮೂರ್ತಿ ಶಾಸ್ತ್ರಿಯವರ ‘ಅಕ್ಕಮಹಾದೇವಿ’ ಕಾದಂಬರಿ ವಾರಾಂತ್ಯದಲ್ಲಿ ಬಿಡುಗಡೆ
ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ
Follow us
ಶ್ರೀದೇವಿ ಕಳಸದ
|

Updated on: Sep 23, 2021 | 3:05 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಅಕ್ಕಮಹಾದೇವಿ (ಕಾದಂಬರಿ) ಲೇಖಕರು : ಸು. ರುದ್ರಮೂರ್ತಿ ಶಾಸ್ತ್ರಿ ಪುಟ : 144 ಬೆಲೆ : ರೂ. 150 ಮುಖಪುಟವಿನ್ಯಾಸ : ಡಿ. ಕೆ. ರಮೇಶ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

*

ಸು. ರುದ್ರಮೂರ್ತಿ ಶಾಸ್ತ್ರಿ ಅವರು ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಚಲನಚಿತ್ರ ಪ್ರಿಯರಿಗೆ ಇವರ ಹೆಸರು ಚಿರಪರಿಚಿತ. ಅವರ ಕಾದಂಬರಿ ‘ಕುಮಾರರಾಮ’ ಚಲನಚಿತ್ರವಾಗಿದೆ. ಚಾಣಕ್ಯ, ಗೌತಮ ಬುದ್ಧ, ಭೀಷ್ಮ, ಅಶೋಕ, ಔರಂಗಜೇಬ, ಊರ್ಮಿಳೆ ಸೇರಿದಂತೆ 150ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 16 ಕವನ ಸಂಕಲನಗಳೂ ಸೇರಿವೆ. 100ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. 10 ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ಹಲವಾರು ಟಿವಿ ಧಾರವಾಹಿಗಳಿಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಭಾನುವಾರ ಇವರ ಎರಡನೇ ಕಾದಂಬರಿ ಅಕ್ಕಮಹಾದೇವಿ ಇದೇ ಭಾನುವಾರ (ಸೆ.26) ಆನ್​ಲೈನ್​ ಮೂಲಕ ಬಿಡುಗಡೆಗೊಳ್ಳುತ್ತಿದೆ.

*

ನಮ್ಮ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ, ಇಡೀ ಭಾರತ ದೇಶದಲ್ಲಿ ಕೂಡ ಅಕ್ಕಮಹಾದೇವಿಯವರಂಥ ಮಹಾವಿರಾಗಿಣಿ ಇನ್ನೊಬ್ಬರಿಲ್ಲ. ಹನ್ನೆರಡನೇ ಶತಮಾನದಷ್ಟು ಹಿಂದೆಯೇ, ಒಂದು ಹೆಣ್ಣಾಗಿ, ದಿಟ್ಟ ನಿರ್ಧಾರ ತೆಗೆದುಕೊಂಡು, ಲೌಕಿಕವಾದ ಎಲ್ಲ ಭೋಗಗಳನ್ನು ತೊರೆದು, ವೈರಾಗ್ಯದ ಹಾದಿಯಲ್ಲಿ ನಡೆದು, ಉತ್ತುಂಗಕ್ಕೇರಿದ ಮಹಾವ್ಯಕ್ತಿ ಅಕ್ಕಮಹಾದೇವಿ. ಅಷ್ಟು ಮಾತ್ರವಲ್ಲದೆ ನೂರಾರು ಸುಂದರ ವಚನಗಳನ್ನು ರಚಿಸಿ, ಕನ್ನಡದ ಮೊಟ್ಟಮೊದಲ ಕವಯಿತ್ರಿಯೆಂಬ ಅಭಿದಾನಕ್ಕೂ ಪಾತ್ರಳಾದ ಅಕ್ಕಮಹಾದೇವಿ ನಮ್ಮ ಕನ್ನಡದ ಹೆಮ್ಮೆ. ಅಂಥ ಮಹಾ ವ್ಯಕ್ತಿಯ ಪರಿಚಯವನ್ನು ನವಪೀಳಿಗೆಗೆ ಮಾಡಿಕೊಡುವ ಒಂದು ಸರಳ ಪ್ರಯತ್ನ ಇದು. ಪ್ರಕಾಶ ಕಂಬತ್ತಳ್ಳಿ, ಪ್ರಕಾಶಕರು, ಅಂಕಿತ ಪುಸ್ತಕ

*

(ಆಯ್ದ ಭಾಗ)

ಬೆಳಿಗ್ಗೆ ಸೂರ್ಯೋದಯವಾದ ನಂತರ ಸುಮತಿ, ನಿರ್ಮಲ ಮತ್ತು ಮಹಾದೇವಿ ತಮ್ಮ ನಿತ್ಯದ ಸ್ನಾನ, ಪೂಜಾದಿಗಳನ್ನು ಪೂರೈಸಿದ್ದರು. ಸುಮತಿ ಮತ್ತು ಮಹಾದೇವಿ ಅಡಿಗೆ ಮನೆಯಲ್ಲಿ ಉಪಾಹಾರ ಸಿದ್ಧಪಡಿಸುವುದರಲ್ಲಿ ತೊಡಗಿದ್ದರು. ನಡುಮನೆಯಲ್ಲಿ ಕುಳಿತಿದ್ದ ನಿರ್ಮಲ, ಮಹಾಬಲಯ್ಯ ತಮ್ಮ ಮನೆಯ ಕಡೆಗೇ ಬರುತ್ತಿರುವುದನ್ನು ಕಂಡು ದಿಗ್ಗನೆ ಮೇಲೆದ್ದು ‘‘ಸುಮತೀ, ಮಂತ್ರಿಗಳು ಬರುತ್ತಿದ್ದಾರೆ!’’ ಎಂದ.

ಸುಮತಿ ಅಡಿಗೆ ಮನೆಯಿಂದ ಬರುತ್ತಾ ‘‘ಏನು! ಮಂತ್ರಿಗಳೆ? ಅವರಿಗೆ ನಮ್ಮ ಮನೆಯಲ್ಲೇನು ಕೆಲಸ?’’ ಎನ್ನುವಷ್ಟರಲ್ಲಿ ಮಹಾಬಲಯ್ಯ ಒಳಗೆ ಬಂದಾಗಿತ್ತು. ಅವನು ಕಸಿವಿಸಿಯಲ್ಲಿದ್ದ, ಇವರು ಕುತೂಹಲದಲ್ಲಿದ್ದರು.

‘‘ಮಂತ್ರಿಗಳಿಗೆ ಸ್ವಾಗತ, ಬಡವರ ಮನೆಗೆ ಭಾಗ್ಯ ಬಂದಂತಾಯಿತು’’ ಎಂದು ಔಪಚಾರಿಕವಾಗಿ ಸ್ವಾಗತಿಸಿ ನಿರ್ಮಲ ಪೀಠ ತೋರಿಸಿದ.

‘‘ನಾನು ಹೇಳುವ ವಿಷಯವನ್ನು ಕೇಳಿದ ಮೇಲೆ, ನೀವು ಈ ಮಾತನ್ನು ಹೇಳುತ್ತೀರೋ ಇಲ್ಲವೋ ಸಂದೇಹಾಸ್ಪದ’’ ಎನ್ನುತ್ತ ಮಹಾಬಲಯ್ಯ ಕುಳಿತುಕೊಂಡ.

‘‘ಅದೆಲ್ಲ ಆಮೇಲಾಗಲಿ, ಮೊದಲು ಬಾಯಾರಿಕೆಗೆ ಏನಾದರೂ ತೆಗೆದುಕೊಳ್ಳಿ’’ ಎಂದಳು ಸುಮತಿ.

‘‘ಬಾಯಾರಿಕೆಯೇಕೆ? ಮಂತ್ರಿಗಳು ಉಪಾಹಾರವನ್ನೇ ಮಾಡಲಿ, ಸಿದ್ಧ ವಾಗಿದೆಯಲ್ಲ?’’ ಎಂದ ನಿರ್ಮಲ.

‘‘ಅದೆಲ್ಲ ಏನೂ ಬೇಡ, ನೀವೂ ಕುಳಿತುಕೊಳ್ಳಿ’’ ಎಂದ ಮಹಾಬಲಯ್ಯ. ನಿರ್ಮಲ ಮತ್ತು ಸುಮತಿ ಮುಖ ಮುಖ ನೋಡಿಕೊಂಡು ಕುಳಿತುಕೊಂಡರು. ಅವರಿಗೆ ಏನೂ ಅರ್ಥವಾಗಲಿಲ್ಲ. ಏಕೆಂದರೆ ಮಂತ್ರಿ ತಮ್ಮ ಮನೆಗೆ ಬರುವ ಯಾವ ಕಾರಣವೂ ಇರಲಿಲ್ಲ. ಜೊತೆಗೆ ಮಂತ್ರಿಯ ಮುಖ ನೋಡಿದರೆ ಯಾವುದೋ ಪ್ರಮುಖ ವಿಷಯವೇ ಇರಬೇಕೆಂಬ ಸಂದೇಹ ಬಂತು. ಅದು ಯಾವ ವಿಷಯವಾಗಿರಬಹುದೆಂಬ ಕುತೂಹಲವೂ ಇತ್ತು, ಭಯವೂ ಇತ್ತು.

ಕೆಲವು ಕ್ಷಣಗಳ ನಂತರ ನಿರ್ಮಲ ‘‘ನಿಮ್ಮ ಬಿಗಿದ ಮುಖವನ್ನು ನೋಡಿದರೆ ನನ್ನಲ್ಲಿ ಆತಂಕವುಂಟಾಗುತ್ತಿದೆ. ಅದೇನೆಂದು ಹೇಳಿ’’ ಎಂದ.

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.

ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. ಕೆಲವು ಕ್ಷಣ ಮಾತುಗಳನ್ನು ಜೋಡಿಸಿಕೊಂಡು ಅವನು ನಿಧಾನವಾಗಿ ‘‘ಮೊದಲು ನೀವು ನನ್ನನ್ನು ತಪ್ಪು ತಿಳಿಯಬಾರದೆಂದು ಕೇಳಿಕೊಳ್ಳುತ್ತೇನೆ’’ ಎಂದು ನಿರ್ಮಲನ ಕೈ ಹಿಡಿದುಕೊಂಡ.

‘‘ಅಂಥ ಯಾವ ಮಾತಿದೆ ಮಂತ್ರಿಗಳೆ? ಸಂಕೋಚವಿಲ್ಲದೆ ಹೇಳಿ’’ ಎಂದ ನಿರ್ಮಲ.

ಮಹಾಬಲಯ್ಯ ಹೇಳಿದ, ‘‘ನಿರ್ಮಲ, ನೀವು ನನ್ನ ಪರಿಚಿತರು, ಆಪ್ತರು. ನಿಮ್ಮ ಸಾತ್ವಿಕ ಸ್ವಭಾವ, ಧರ್ಮನಿಷ್ಠೆ, ಎಲ್ಲರೊಂದಿಗೆ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳುವ ಗುಣ, ಎಲ್ಲ ನನಗೆ ಗೊತ್ತಿದೆ. ಈ ಊರಿನ ಜನ ನಿಮ್ಮನ್ನು ಎಷ್ಟು ಗೌರವಿಸುತ್ತಾರೆಂಬುದೂ ಗೊತ್ತಿದೆ.’’

‘‘ಅದೆಲ್ಲ ಇರಲಿ ಮಂತ್ರಿಗಳೆ, ಈಗ ನೀವು ಬಂದ ಕಾರಣವೇನೆಂದು ಸುತ್ತಿ ಬಳಸದೆ ನೇರವಾಗಿ ಹೇಳಿ’’ ಎಂದು ನಿರ್ಮಲ ಅವಸರಪಡಿಸಿದ.

‘‘ನಿನ್ನೆ ನಮ್ಮ ರಾಜ ಕೌಶಿಕ ನಿಮ್ಮ ಮನೆಯ ಮುಂದಿನಿಂದಲೇ ವೈಹಾಳಿ ಹೋದದ್ದು ನಿಮಗೂ ಗೊತ್ತಿದೆ.’’

‘‘ಗೊತ್ತಿದೆ ಮಂತ್ರಿಗಳೆ’’ ಸುಮತಿ ಹೇಳಿದಳು, ‘‘ನಮ್ಮ ಬೀದಿಯ ಜನರೆಲ್ಲ ಸಂಭ್ರಮದಿಂದ ಆ ಮೆರವಣಿಗೆಯನ್ನು ನೋಡಿದರು.’’

‘‘ಆ ನೋಟಕರಲ್ಲಿ ನಿಮ್ಮ ಮಗಳು ಮಹಾದೇವಿಯೂ ಇದ್ದಳಲ್ಲವೆ?’’

‘‘ಹೌದು, ನಮ್ಮ ಮಗಳು ತನ್ನ ಗೆಳತಿಯರೊಂದಿಗೆ ಮೆರವಣಿಗೆ ನೋಡಿದಳು. ಅದು ಅಪರಾಧವಾಯಿತೇ? ಅದಕ್ಕೆ ಶಿಕ್ಷೆ ಕೊಡುತ್ತೀರೇನು?’’

‘‘ಅದು ಅಪರಾಧವೇ ಅಲ್ಲದ ಮೇಲೆ ಶಿಕ್ಷೆ ಕೊಡುವುದು ಹೇಗೆ? ಆದರೆ ಬಹುಶಃ ಅದರಿಂದ ರಾಜ ಅಪರಾಧ ಮಾಡುವಂತಾಯಿತು.’’

‘‘ಏನು, ರಾಜನ ಅಪರಾಧವೇ? ಅದೇನು ಮಂತ್ರಿಗಳೆ?’’ ಸ್ವಲ್ಪ ಗೊಂದಲಗೊಂಡು ನಿರ್ಮಲ ಕೇಳಿದ.

‘‘ಆ ಸಂದರ್ಭದಲ್ಲಿ ನಮ್ಮ ರಾಜನ ದೃಷ್ಟಿಯೋ, ವಕ್ರದೃಷ್ಟಿಯೋ ನಿಮ್ಮ ಮಗಳು ಮಹಾದೇವಿಯ ಮೇಲೆ ಬಿತ್ತು.’’

‘‘ಅಂದರೆ, ಅದರ ಅರ್ಥವೇನು ಮಂತ್ರಿಗಳೆ?’’ ನಿರ್ಮಲ ಸ್ವಲ್ಪ ಅಸಮಾಧಾನ ದಿಂದಲೇ ಕೇಳಿದ.

‘‘ನಿರ್ಮಲ’’ ಮಹಾಬಲಯ್ಯ ತಡೆದು ತಡೆದು ಹೇಳಿದ, ‘‘ನಿಜವಾದ ಸಂಗತಿ ಯೆಂದರೆ, ನಿಮ್ಮ ಮಗಳ ಸೌಂದರ್ಯ ಕೌಶಿಕನನ್ನು ಆಕರ್ಷಿಸಿದೆ.’’

akkamahadevi

ಸೌಜನ್ಯ : ಅಂತರ್ಜಾಲ

ಆ ಮಾತು ಕಿವಿಗೆ ಬೀಳುತ್ತಿದ್ದಂತೆ ಮಹಾದೇವಿ ಕೋಪದಿಂದ ಕುದಿದಳು. ‘‘ಛೆ, ನಾನು ಆ ಮೆರವಣಿಗೆ ನೋಡಲು ಹೋಗಲೇಬಾರದಿತ್ತು’’ ಎಂದುಕೊಂಡಳು.

ಮಂತ್ರಿಯ ಮಾತಿನಿಂದ ನಿರ್ಮಲ, ಸುಮತಿ ಇಬ್ಬರಿಗೂ ಕೋಪ ಬಂತು. ತಕ್ಷಣ ಏನು ಪ್ರತ್ಯುತ್ತರ ಕೊಡಬೇಕೆಂದು ಅವರು ಯೋಚಿಸುವಂತಾಯಿತು. ಇಂಥ ಪ್ರಸಂಗ ಬರುವುದೆಂದು ಅವರು ಕಲ್ಪನೆಯನ್ನೂ ಮಾಡುವಂತಿರಲಿಲ್ಲ.

ಕೆಲವು ಕ್ಷಣಗಳ ನಂತರ ಸುಮತಿ ಕೋಪದಿಂದಲೇ ಹೇಳಿದಳು, ‘‘ನಿಮ್ಮ ಮಾತಿನ ಅರ್ಥವೇನು ಮಂತ್ರಿಗಳೆ? ಹೆಣ್ಣು ಮಕ್ಕಳು ನಿಮ್ಮ ರಾಜನ ಕಣ್ಣಿಗೆ ಬೀಳಲೇಬಾರದೆ? ರಾಜ ಬರುತ್ತಾನೆಂದರೆ, ಎಲ್ಲ ಮನೆಯಲ್ಲಿ ಅಡಗಿಕೊಳ್ಳಬೇಕೆ? ರಾಜನಾದವನಿಗೆ ತಾರತಮ್ಯ ಜ್ಞಾನವಿರಬೇಕು. ಪ್ರಜೆಗಳ ದೃಷ್ಟಿಯಲ್ಲಿ ತನ್ನ ವರ್ತನೆ ಹಾಸ್ಯಾಸ್ಪದವಾಗದಂತೆ ನಡೆದು ಕೊಳ್ಳಬೇಕು. ಅವನು ತನ್ನ ಪ್ರಜೆಗಳನ್ನು ಗೌರವದಿಂದ ಕಾಣಬೇಕು. ಗೌರವಸ್ಥ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವ ಇವನೆಂಥ ರಾಜ!’’

‘‘ಸುಮತಿ ಸ್ವಲ್ಪ ಸುಮ್ಮನಿರು’’ ನಿರ್ಮಲ ತಡೆದ, ‘‘ಮಂತ್ರಿಗಳೆ, ನೀವು ಹೇಳಲು ಬಂದದ್ದು ಇಷ್ಟೇ ವಿಷಯವೇ?’’

‘‘ಇಷ್ಟೇ ವಿಷಯವಾದರೂ, ಈ ವಿಷಯದ ಮುಂದಿನ ಭಾಗವನ್ನೂ ಹೇಳಬೇಕಲ್ಲ.’’

‘‘ಅದನ್ನೂ ಹೇಳಿಬಿಡಿ. ಇಷ್ಟು ಕೇಳಿದ ಮೇಲೆ ಅದನ್ನೂ ಕೇಳಿಬಿಡುತ್ತೇವೆ’’ ಎಂದ ನಿರ್ಮಲ.

‘‘ನಮ್ಮ ರಾಜ ನಿಮ್ಮ ಮಗಳನ್ನು ಮದುವೆಯಾಗಲು ಬಯಸುತ್ತಾನೆ’’ ಎಂದು ಮಹಾಬಲಯ್ಯ ಧೈರ್ಯವಹಿಸಿ ಹೇಳಿಬಿಟ್ಟ.

‘‘ಮದುವೆ! ಸಾವ ಕೆಡುವ ಈ ಭವಿಯೊಂದಿಗೆ ನನ್ನ ಮದುವೆಯೇ? ಚೆನ್ನಮಲ್ಲಿಕಾರ್ಜುನಾ! ನೋಡಿದೆಯಾ! ನಿನಗೆ ಮೀಸಲಾದವಳನ್ನು ಈ ಪಾಪಿ ರಾಜ ಬಯಸುತ್ತಿದ್ದಾನೆ’’ ಎಂದು ಮಹಾದೇವಿ ಮನಸ್ಸಿನಲ್ಲೇ ಮೊರೆಯಿಟ್ಟಳು.

‘‘ಅವನು ಬಯಸಿದನೆಂದು ನಾವು ಕುಣಿಯುತ್ತಾ ನಮ್ಮ ಮಗಳನ್ನು ಅವನಿಗೆ ಧಾರೆಯೆರೆದು ಕೊಡಬೇಕೆ?’’ ಸುಮತಿಯ ಕೋಪ ಕಡಿಮೆಯಾಗಲಿಲ್ಲ.

‘‘ಇದು ಉದ್ಧಟತನವಲ್ಲವೆ ಮಂತ್ರಿಗಳೇ?’’ ಕೋಪವನ್ನು ಅಡಗಿಸಿಕೊಂಡು ಸ್ವಲ್ಪ ಸಮಾಧಾನದಿಂದಲೇ ನಿರ್ಮಲ ಕೇಳಿದ, ‘‘ಇದು ರಾಜನಾದವನ ನಿರಂಕುಶ ವರ್ತನೆ ಯಲ್ಲವೆ?’’

‘‘ನೀವು ಹೀಗೆ ಹೇಳುತ್ತೀರಿ’’ ಮಹಾಬಲಯ್ಯಾ ಹೇಳಿದ, ‘‘ಆದರೆ ಅವನು, ತಾನು ಅವಿವಾಹಿತನಾಗಿದ್ದೇನೆ, ಮಹಾದೇವಿಯನ್ನು ಮದುವೆ ಮಾಡಿಕೊಳ್ಳುವುದರಲ್ಲಿ ಯಾವ ಅಭ್ಯಂತರವೂ ಇಲ್ಲ ಎಂದು ಯೋಚಿಸುತ್ತಾನೆ.’’

( ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ಅಂಕಿತ ಪುಸ್ತಕ )

ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು : ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಇಂದಿನಿಂದ ಓದುಗರಿಗೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ