New Book : ಅಚ್ಚಿಗೂ ಮೊದಲು : ‘ಧರ್ಮಯುದ್ಧ’ ಮೊಗಸಾಲೆಯವರ ಹೊಸ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ

Power Politics : ‘ಕಳ್ಳಬಟ್ಟಿ ತಯಾರಿ, ಕೋಳಿ ಅಂಕ, ವಾಲೆಬೆಲ್ಲದ ಪಾಕಶಾಸ್ತ್ರದಿಂದ ಹಿಡಿದು, ಹೇಗೆ ನಮ್ಮ ಅಂತರಂಗ ಶುದ್ಧಿಗೆ ಬೇಕಾದ ಧರ್ಮ, ಆಚರಣೆಯ ಪ್ರದರ್ಶನಕ್ಕಿಳಿದು ಕ್ರಮೇಣ ಪವರ್ ಪಾಲಿಟಿಕ್ಸಿಗೂ ಬಳಸಲ್ಪಡುವ ಸರಕಾಯಿತು ಎನ್ನುವುದನ್ನು ಅಷ್ಟಮಂಗಲ ಪ್ರಶ್ನೆ, ಪಂಚಾಯತನ, ಷೋಡಶೋಪಚಾರ, ಬ್ರಹ್ಮಕಲಶದ ಅರ್ಥ ಎಂದೆಲ್ಲ ವಿವರವಿವರವಾಗಿ ತೆರೆದಿಡುವ ಅದ್ಭುತವಾದ ಹರಹುವುಳ್ಳ ಒಂದು ಅನನ್ಯ ಕೃತಿಯಿದು.‘ ನರೇಂದ್ರ ಪೈ

New Book : ಅಚ್ಚಿಗೂ ಮೊದಲು : ‘ಧರ್ಮಯುದ್ಧ’ ಮೊಗಸಾಲೆಯವರ ಹೊಸ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ
ಕಾದಂಬರಿಕಾರ ಡಾ. ನಾ ಮೊಗಸಾಲೆ
Follow us
ಶ್ರೀದೇವಿ ಕಳಸದ
|

Updated on:Jul 14, 2021 | 5:55 PM

ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಧರ್ಮಯುದ್ಧ (ಕಾದಂಬರಿ) ಲೇಖಕರು : ಡಾ. ನಾ. ಮೊಗಸಾಲೆ ಪುಟ : 230 ಬೆಲೆ : ರೂ. 230 ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣ್​ಕರ್ ಪ್ರಕಾಶನ : ಮನೋಹರ ಗ್ರಂಥಮಾಲಾ, ಧಾರವಾಡ

*

ಪ್ರಸ್ತುತ ಕಾದಂಬರಿ ಅಚ್ಚಿನಮನೆಯಲ್ಲಿದ್ದು, ಆಗಸ್ಟ್ 15ರಿಂದ ಓದುಗರನ್ನು ತಲುಪಲಿದೆ. ಸಾಹಿತಿಗಳಾದ ನರೇಂದ್ರ ಪೈ ಮತ್ತು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಈ ಕಾದಂಬರಿಯ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದು ಇಲ್ಲಿದೆ.

*

ನರೇಂದ್ರ ಪೈ, ಕಥೆಗಾರರು, ವಿಮರ್ಶಕರು.  

ಬದುಕನ್ನು ಸಮಗ್ರವಾಗಿ ಗ್ರಹಿಸಿ, ಒಂದು ಪಾತ್ರವನ್ನು ಹೇಗೋ ಹಾಗೆಯೇ ಒಂದು ಊರನ್ನು ಅದರ ಸಕಲ ಚರಾಚರಾ ವ್ಯಕ್ತಿ, ವಸ್ತು, ವಿಷಯ, ವಿವರಗಳಲ್ಲಿ ಸಮೃದ್ಧಗೊಳಿಸಬಲ್ಲ ಕಲೆಗಾರಿಕೆ ಮೊಗಸಾಲೆಯವರಿಗೆ ಸಹಜವಾಗಿ ಸಿದ್ಧಿಸಿದೆ. ಅವರ ಯಾವುದೇ ಕೃತಿಯನ್ನು ಕೈಗೆತ್ತಿಕೊಂಡರೂ ಒಂದು ಅಥೆಂಟಿಕ್ ಜಗತ್ತು ತೆರೆದುಕೊಳ್ಳುವುದು ನಿಶ್ಚಿತ. ಕಾದಂಬರಿಯೊಂದು ಇಷ್ಟನ್ನೇ ಅಚ್ಚುಕಟ್ಟಾಗಿ ಮಾಡಿದರೂ ಸಾಕು, ಅದೊಂದು ಅದ್ಭುತ ಕೃತಿಯಾಗುವುದರಲ್ಲಿ ಎರಡು ಮಾತಿಲ್ಲ.

ಒಂದು ಪಂಜುರ್ಲಿ ಗುಡಿಯ ಜೀರ್ಣೋದ್ಧಾರವನ್ನೇ ವಸ್ತುವನ್ನಾಗಿಸಿಕೊಂಡು ಏನು ಮಹಾ ಸಾಧಿಸಬಹುದು ಅನಿಸಿದರೆ, ಬಹುಬೇಗ ಮೊಗಸಾಲೆಯವರು ನಮ್ಮನ್ನು ಬೆಚ್ಚಿ ಬೀಳಿಸುವಂತೆ ಆದಿಶಂಕರ, ಬಸವ, ವೈದಿಕ ಎಂದೆಲ್ಲ ಅಷ್ಟಾವಧಾನಕ್ಕೆ ಕುಳಿತವರಂತೆ ತಮ್ಮ ವಸ್ತು ಹೇಗೆ ಜಾನಪದ, ಹೇಗೆ ಸಾಂಸ್ಕೃತಿಕ, ಹೇಗೆ ಧಾರ್ಮಿಕ ಮತ್ತು ಹೇಗೆ ರಾಜಕೀಯ ಕೂಡ ಎಂದೆಲ್ಲ ಅದರ ಎಂಟೂ ಮಗ್ಗುಲುಗಳನ್ನು ಪರಿಚಯಿಸುತ್ತ ಸಾಗುತ್ತಾರೆ.

ಕಳ್ಳಬಟ್ಟಿ ತಯಾರಿ, ಕೋಳಿ ಅಂಕ, ವಾಲೆಬೆಲ್ಲದ ಪಾಕಶಾಸ್ತ್ರದಿಂದ ಹಿಡಿದು, ಹೇಗೆ ನಮ್ಮ ಅಂತರಂಗ ಶುದ್ಧಿಗೆ ಬೇಕಾದ ಧರ್ಮ, ಆಚರಣೆಯ ಪ್ರದರ್ಶನಕ್ಕಿಳಿದು ಕ್ರಮೇಣ ಪವರ್ ಪಾಲಿಟಿಕ್ಸಿಗೂ ಬಳಸಲ್ಪಡುವ ಸರಕಾಯಿತು ಎನ್ನುವುದನ್ನು ಅಷ್ಟಮಂಗಲ ಪ್ರಶ್ನೆ, ಪಂಚಾಯತನ, ಷೋಡಶೋಪಚಾರ, ಬ್ರಹ್ಮಕಲಶದ ಅರ್ಥ ಎಂದೆಲ್ಲ ವಿವರವಿವರವಾಗಿ ತೆರೆದಿಡುವ ಅದ್ಭುತವಾದ ಹರಹುವುಳ್ಳ ಒಂದು ಅನನ್ಯ ಕೃತಿಯಿದು.

ಲಕ್ಷ್ಮಿಯಂಥ ಒಂದು ಪಾತ್ರ, ಮೋಂತು ಪರ್ಬುವಿನಂಥ ಒಂದು ಪಾತ್ರ, ರಾಘುವಿನಂಥ ಒಂದು ಪಾತ್ರ ಹೇಗೆ ಕೃತಿಯ ಮೂಲ ಎಳೆಯ ಆಚೆಗೂ ಈ ಕೃತಿಯ ಧ್ವನಿಶಕ್ತಿಯನ್ನು ವಿಸ್ತರಿಸುತ್ತದೆ, ಮೊಗಸಾಲೆಯವರು ಹೇಗೆ ಅಂಥ ಯಾವತ್ತೂ ಸಾಧ್ಯತೆಗಳನ್ನು ಒಳಗುಗೊಳಿಸಿಕೊಂಡು ತಮ್ಮ ಕೃತಿಯನ್ನು ಕಟ್ಟುತ್ತಾರೆ ಎನ್ನುವುದು ಅಚ್ಚರಿ ಮೂಡಿಸುತ್ತದೆ. ಕಾದಂಬರಿಯ ಗಾತ್ರದ ಸಣ್ಣಕತೆಗಳನ್ನು ಓದಿ ಭ್ರಮನಿರಸನಗೊಂಡಿರುವ ಕನ್ನಡ ಓದುಗರಿಗೆ ಈ ಕೃತಿ ಕಾದಂಬರಿಯ ಸಂತೃಪ್ತಿ ಒದಗಿಸುವ ಚೇತೋಹಾರಿ ಕಾಣಿಕೆಯಾಗಿದೆ.

*

ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಹಿರಿಯ ಸಾಹಿತಿ ಕತೆ-ಕಾದಂಬರಿಗಳನ್ನು ಮೊಗಸಾಲೆ ಬರೆಯುತ್ತಾರೋ ಅಥವಾ ಕತೆ-ಕಾದಂಬರಿಗಳು ಮೊಗಸಾಲೆಯವರಿಂದ ಬರೆಸಿಕೊಳ್ಳುತ್ತವೆಯೋ ಎಂಬ ಸಂದೇಹ ನನಗೆ. ಇದೊಂದು ತರಹ ಉರುಳುತ್ತ ಹೋಗುವ ವಿನ್ಯಾಸ. ಅವರು ತಮ್ಮ ಕತೆ-ಕಾದಂಬರಿಗಳಲ್ಲಿ ತಲೆಮಾರುಗಳನ್ನು ಸಂದರ್ಶಿಸುತ್ತಾರೆ; ಅಲಂಘನೀಯವಾದ್ದನ್ನು ಲಂಘಿಸುತ್ತಾರೆ; ವಿಷಾದವನ್ನು ಸಂಪರ್ಕಿಸುತ್ತಾರೆ; ಏಕಾಂತವನ್ನು ಲೋಕಾಂತಗೊಳಿಸುತ್ತಾರೆ. ಕರಾವಳಿಗೆ ಸಮೀಪದ ಸ್ಥಳ ಸೀತಾಪುರ. ಅಲ್ಲಿಗೆ ತಮ್ಮ ಗದ್ಯದ ಮೂಲಕ ಗಾಂಧಿಯನ್ನು ತರಿಸಿದ/ಬರಿಸಿದ ಲೋಕಪ್ರಜ್ಞೆಯ ಗದ್ಯ ಅವರದ್ದು. ಅವರು ಬರೆಯುವ ನೆಲೆಯನ್ನು ಮೌನವಾಗಿ ಕಲ್ಪಿಸಿಕೊಂಡರೆ ತಾನುಟ್ಟ ಬಟ್ಟೆಯೊಣಗುವವರೆಗೆ ಬರೆಯುತ್ತಿದ್ದ ಗದುಗಿನ ನಾರಣಪ್ಪ ನೆನಪಾಗಬೇಕು; ವ್ಯತ್ಯಾಸವೆಂದರೆ ಮೊಗಸಾಲೆಯವರ ಬರೆಹ ಸಾಗುವುದು ಮಂದ ಬೆಳಕಿನಲ್ಲಿ; ಬೆಳಗಿನಲ್ಲಿ.

ಇದರ ಶೀರ್ಷಿಕೆ ಮುಖ್ಯವಲ್ಲ. ಹುಟ್ಟಿದ ಮಗುವಿಗೊಂದು ಹೆಸರು ಬೇಕಲ್ಲ, ಹಾಗೆ ಅವರು ಇದಕ್ಕೊಂದು ಹೆಸರನ್ನಿಟ್ಟಿದ್ದಾರೆ. ಈ ಹೆಸರಿನಡಿ ಸಾಗುವ ಕಥಾನಕ, ಸ್ಪಂದಿಸುವ ಸಮಾಜ, ಬದುಕುವ ಮಂದಿ, ಧ್ವನಿಸುವ ಅಂತರ್ಜಲ ಮುಖ್ಯ.

ಈ ಕಾದಂಬರಿಯ ಸೀತಾಪುರ ಎಲ್ಲ ಊರುಗಳ ಹಾಗೆ ಮಿನಿಭಾರತ. ಅಲ್ಲಿ ಹಾಟೆಲಿದೆ; ಬಾರ್ ಇದೆ; ಜನ ಮನ್ನಣೆ ಪಡೆದ ಹೆಗ್ಡೆಯವರಿದ್ದಾರೆ; ಎಲ್ಲರಿಗೂ ಬೇಕಾದ ಆದರೆ ಸ್ವಂತವಾಗಿ ಮಕ್ಕಳೂ ಇಲ್ಲದ, ಸ್ವಂತಕ್ಕೆ ಏನೂ ಮಾಡಿಕೊಳ್ಳದ, ಸಾತ್ವಿಕ ವೆಂಕಪ್ಪ ಮಾಸ್ಟರಿದ್ದಾರೆ. ಸೇಸಪ್ಪ, ಕಾಮತ್, ಪುರ್ಬು, ರಾಗಣ್ಣ, ಲಕ್ಷ್ಮೀ- ಇಂತಹ ಪದ್ಮಪತ್ರ ನಿರ್ಲಿಪ್ತರಿದ್ದಾರೆ. ಹಾಗೆಯೇ ಸಾರ್ವಜನಿಕ ಸ್ವತ್ತಿಗೆ ಕೈಯಿಕ್ಕುವ ದುಷ್ಟಶಕ್ತಿಗಳಿವೆ. ಪ್ರತಿಷ್ಠೆಯ ಕೋಟೆಯವರ ಹಿಂದೆ ಮಹತ್ವಾಕಾಂಕ್ಷೆಯ ಸುಕ್ಕನಿದ್ದಾನೆ. ಒಳ್ಳೆಯದೆಷ್ಟಿದೆಯೋ ಅದಕ್ಕೆ ಸವಾಲೆಸೆಯುವ ಕೇಡೂ ಇದೆ. ಸೂರಪ್ಪನ ಮನೆಯ ಬಾವಿಯಲ್ಲಿ ರಾಗಣ್ಣನ ಮೂರು ಕರಿ ಬೆಕ್ಕುಗಳು ಸತ್ತು ಬಿದ್ದಲ್ಲಿಂದ, ಅಥವಾ ಬಿದ್ದು ಸತ್ತಲ್ಲಿಂದ ಕಥೆ ಅನಾವರಣಗೊಳ್ಳುತ್ತದೆ. ಇದಕ್ಕೆ ಪರಿಹಾರವನ್ನು ನಂಬಿಕೆ ಬಯಸುತ್ತದೆ. ಆದರೆ ಈ ನಂಬಿಕೆಯನ್ನು ದುರುಪಯೋಗಪಡಿಸುವ ಧೂರ್ತರು ಇದ್ದಾರೆ. ಇಂತಹ ನಂಬಿಕೆಯನ್ನು ಶೋಷಿಸುವ ವ್ಯೂಹದ ಅಳವನ್ನು ಗಮನಿಸಿದರೆ ಮನಸ್ಸು ಬೆಚ್ಚಿ ಬೀಳುತ್ತದೆ; ಹೌಹಾರುತ್ತದೆ. ಪರಸ್ಪರರ ನಡುವೆ ಇರುವ ಅಪನಂಬಿಕೆಗಳು ಈ ನಂಬಿಕೆಯನ್ನು ಪೋಷಿಸುತ್ತವೆ. ಸಹಜ ವಿಶೇಷವೆಂದರೆ ಹೀಗೆ ಬೆಕ್ಕುಗಳು ಸತ್ತು ಪರಸ್ಪರರು ಕಾದಾಡುವುದಿಲ್ಲ.

ಕೇಳುಪಂಡಿತನೆಂಬ ಜ್ಯೋತಿಷಿ ಪರಿಹಾರದ ಸೂತ್ರಧಾರ. ಅವರು ಇದನ್ನೊಂದು ದೋಷವೆಂದು ಪರಿಗಣಿಸಿ ಇಷ್ಟಕ್ಕೇ ಬಿಟ್ಟರೆ ಮುಂದೆ ಮನುಷ್ಯಜೀವಗಳು ಬಲಿಯಾಗಬಹುದೆಂದು ಎಚ್ಚರಿಸಿ ಸುಕ್ಕನ ಸಾಕುಹಂದಿಯನ್ನು ಸೂರಪ್ಪ ಕೊಂದ ಇತಿಹಾಸವನ್ನು ಕೆದಕಿ ಅದರ ವಂಶೋಜನಾದ, ಊರಿನಲ್ಲಿ ಬಹುತೇಕ ಜೀರ್ಣವಾದ, ಪಂಜುರ್ಲಿಯ ಕೋಪವೇ ಇದಕ್ಕೆ ಕಾರಣವೆಂದು ಮತ್ತು ಅದರ ಉದ್ಧಾರವೇ ಪರಿಹಾರವೆಂದೂ ಸಲಹೆ ನೀಡುತ್ತಾರೆ. ಹೀಗೆ ಬೆಕ್ಕಿನ ಸಾವು ದೈವದ ಓಲೈಕೆಗೆ ಮುಖಮಾಡುತ್ತದೆ. ಸೂರಪ್ಪನಿಗೆ ಸಾಧ್ಯವಿಲ್ಲದ, ಸಾಧ್ಯವಾಗದ ಈ ಹರಕೆ ಸಂದಾಯಕ್ಕೆ ಊರಿನ ಆಢ್ಯರ ಪ್ರವೇಶವಾಗುತ್ತದೆ. ಬ್ರಹ್ಮಕಲಶದ ಯೋಜನೆಯು ಅಬ್ರಾಹ್ಮಣರಲ್ಲಿ ಧಾರ್ಮಿಕ ಮತ್ತು ರಾಜಕೀಯ ಹಾಗೂ ಮನುಷ್ಯನ ಮೂಲಭೂತ ಗುಣವಾದ ಲೋಭಕ್ಕೆ ಕಾರಣವೂ ಪರಿಣಾಮವೂ ಆಗುತ್ತದೆ. ಪಂಜುರ್ಲಿಗುಡ್ಡದ ಸುತ್ತಮುತ್ತ ಇರುವ ಕಾಡಿನ ನಿರ್ನಾಮವೂ ಈ ಯೋಜನೆಯಲ್ಲಡಗಿದೆ.

ಇಂತಹ ಕ್ರಿಯಾದಿ ಸಂಭ್ರಮದಲ್ಲಿ ಒಂದಿಷ್ಟೂ ನಂಬಿಕೆಯಿಲ್ಲದ ಹೆಗ್ಡೆಯವರೂ ವೆಂಕಪ್ಪ ಮಾಸ್ಟರೂ ಇದರಲ್ಲಿ ಅನಿವಾರ್ಯವಾಗಿ ಭಾಗಿಯಾಗುತ್ತಾರೆ. ಸ್ವಂತ ಅಥವಾ ಸಾಮುದಾಯಿಕ ಹೀಗೆ ಎಲ್ಲರೂ ಒಂದಿಲ್ಲೊಂದು ಪ್ರತಿಷ್ಠೆಯನ್ನು ಪಣವಾಗಿಟ್ಟೇ ಪಾಲ್ಗೊಳ್ಳುತ್ತಾರೆ. ಒಣಪ್ರತಿಷ್ಠೆಯು ಎಲ್ಲ ಹಂತದಲ್ಲೂ ಸಕ್ರಿಯವಾಗುತ್ತದೆ. ಇದೆಲ್ಲದರ ಉಪಸಂಹಾರದಂತೆ ನಡೆವ ಉತ್ಸವದಲ್ಲಿ ನೂಕುನುಗ್ಗಲು, ಗೊಂದಲ ನಿರ್ಮಾಣವಾಗಿ ಬ್ರಹ್ಮಕುಂಭವು ಬಿದ್ದು ಅದರ ನೀರು ಚೆಲ್ಲಿ ಕಾಕತಾಳೀಯವಾಗಿ ಜೇನುನೊಣಗಳು ಮುತ್ತಿ ಎಲ್ಲ ಅಯೋಮಯವಾಗುತ್ತದೆ. ಪಂಜುರ್ಲಿಗುಡ್ಡದ ನಿರ್ಮಾಣದ ನೆಪದಲ್ಲಿ ವಾಸ್ತವವಾಗಿ ಅದರ ನಿರ್ನಾಮವಾಗಿದೆ.

ಇದರ ಕಥೆಯನ್ನು ಹೇಳುವುದು ನನ್ನ ಉದ್ದೇಶವಲ್ಲ. ಕಥೆ ಹೇಳುವುದು ಮತ್ತು ಅದರಲ್ಲಿ ತಿರುವುಗಳನ್ನು ಸೃಷ್ಟಿಸುವುದು ಮೊಗಸಾಲೆಯವರಿಗೆ ಸಲೀಲಾಗಿ ಸಿದ್ಧಿಸಿದೆ. ಅವರು ಕಾದಂಬರಿಯ ತಂತ್ರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಾಗಿ ಬೆಳೆಯಬೇಕು. ಅದು ಓದುತ್ತ ಹೋದಂತೆ ಬಿಚ್ಚಿಕೊಳ್ಳಬೇಕು. ಇಲ್ಲಿ ನಂಬಿಕೆಗೆ- ಹಾಗೆನ್ನುವುದೂ ಎಷ್ಟು ಸರಿಯೋ- ಮೂಢ ನಂಬಿಕೆಗೆ ಸಹಜವಾಗಿ ಬಲಿಯಾದ ಜನರಷ್ಟೇ ಬಲಿಯಾದಂತೆ ನಟಿಸುವ ಧೂರ್ತರೂ ಇದ್ದಾರೆ. ಪುಡಿ ರಾಜಕಾರಣಿಗಳು ಮುಂದಿನ ಚುನಾವಣೆಗೆ ತಮ್ಮ ಎಲ್ಲ ಶಕ್ತಿಯನ್ನು ವ್ಯಯಮಾಡುತ್ತಿದ್ದಾರೆ. ಒಂದು ಬೆಳೆಯುತ್ತಿರುವ ಪುಟ್ಟ ಹಳ್ಳಿಯಲ್ಲಿ ‘ಧರ್ಮವನ್ನು ರಾಜಕೀಯ ಕೆಡಿಸುತ್ತದೆ, ರಾಜಕೀಯವನ್ನು ಧರ್ಮ ಕೆಡಿಸುತ್ತದೆ’ ಎಂಬ ಶಕ್ತ ನಿರೂಪಣೆಯಿದೆ. ಮೂರ್ತವಾಗಿ ನಡೆಯುವ ಕಥಾಹಂದರವೂ ಇದರ ನಡುವೆ ನಡೆಯುವ ಊರಿನ ಜನಮನದ ಗಲಾಟೆ-ಗಮ್ಮತ್ತುಗಳೂ ಬದುಕಿನ ಭಿನ್ನ ನಿಲುವುಗಳಿಗೆ ಕನ್ನಡಿ ಹಿಡಿಯುತ್ತವೆ.

ಮೂರು ಬೆಕ್ಕುಗಳು ಸತ್ತದ್ದಕ್ಕೂ ಪಂಜುರ್ಲಿಗೂ ಸಂಬಂಧವಿಲ್ಲವೆಂಬುದೂ ಅದು ಸುಕ್ಕನ ತಂತ್ರವೆಂಬುದೂ ಕತೆಯ ನಡುವಲ್ಲೇ ಓದುಗನಿಗೆ ಬಯಲಾಗುತ್ತದೆಯಾದರೂ ಅನಂತರ ನಡೆಯುವ ಎಲ್ಲ ಕೃತ್ರಿಮಗಳೂ ಧರ್ಮ-ರಾಜಕೀಯ-ಸ್ವಪ್ರತಿಷ್ಠೆಯ ಸಂಗಮವಾಗುತ್ತವೆ. ಬೆಕ್ಕುಗಳ ಸಾವಿನ ಗುಟ್ಟು ಬಯಲಾಗಿದೆ. ಕಥೆಯ ಬೆಳವಣಿಗೆಯ ದೃಷ್ಟಿಯಿಂದ ಸೂರಪ್ಪ ಮತ್ತು ರಾಗಣ್ಣ ಬಹು ಮುಖ್ಯ ದಾಳಗಳು. ವಿಷಾದದ ಒಳತೋಟಿಯ ರಾಗಣ್ಣ ತಾನೇ ಬೆಕ್ಕುಗಳನ್ನು ಸೂರಪ್ಪನ ಬಾವಿಗೆ ಹಾಕಿದ್ದನ್ನು ಕನವರಿಸಿದ್ದು ಬಹಿರಂಗವಾಗುವುದಿಲ್ಲ. ಅಲ್ಲಿಂದ ರಾಗಣ್ಣನ ಅಪರಾಧ ಪ್ರಜ್ಞೆ ಜಾಗೃತವಾಗಬೇಕಿತ್ತು. ಆದರೆ ಹಾಗಾಗುವುದಿಲ್ಲ. ಅವನ ಚರ್ಯೆ ಬದಲಾಗಿ ಒಂದು ಕಡೆ ಈ ಗುಟ್ಟು ತಿಳಿದವರು ಮತ್ತು ಇನ್ನೊಂದು ಕಡೆ ಈ ಗುಟ್ಟು ತಿಳಿಯದವರು ನಡುವೆ ಈ ಗುಟ್ಟು ತಿಳಿದೂ ತಮ್ಮ ಸ್ವಾರ್ಥಕ್ಕಾಗಿ ಪಂಜುರ್ಲಿಯ ಪೂಜೆಗೆ ಹೊರಟವರು ಹೀಗೆ ಧರ್ಮಯುದ್ಧದ ಮೂರು ಆಯಾಮಗಳನ್ನು ಕಾದಂಬರಿ ದುಡಿಸಿಕೊಂಡಿದೆ.

ಇಡೀ ಕಾದಂಬರಿಯು ಯಾವನೇ ಒಬ್ಬ ವ್ಯಕ್ತಿಯನ್ನು ತನ್ನ ನಾಯಕನೆಂದು ಒಪ್ಪಿಕೊಳ್ಳದಿರುವುದು ಇದರ ವೈಶಿಷ್ಟ್ಯ. ಊರು ನಾಯಕನೇ? ಅಲ್ಲ. ಒಂದು ರೀತಿಯಲ್ಲಿ ಪಂಜುರ್ಲಿಗುಡ್ಡ ನಾಯಕ. ಆದರೆ ನಡೆಯುವ ಘಟನಾವಳಿಗಳು ಮನುಷ್ಯ ಚರ್ಯೆಯನ್ನು ಹಿಂಬಾಲಿಸುತ್ತವೆ. ತಾತ್ವಿಕಜಿಜ್ಞಾಸೆಯೂ ಸಾಮಾಜಿಕವಾಗಿ ಅರ್ಥಹೀನವೆಂಬ ಮೌನಸಂದೇಶವಿದೆ.

ಮೊಗಸಾಲೆಯವರು ತಮ್ಮ ಹಿಂದಿನ ಕಾದಂಬರಿಗಳಿಗಿಂತ ಹೆಚ್ಚು ಜನಪ್ರೀತಿಯನ್ನು ಇಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಬೆಳೆಯುತ್ತಿರುವ ಹಳ್ಳಿಯ ಜನರ ಸಂಭಾಷಣೆ ಮತ್ತು ಸನ್ನಿವೇಶಗಳು ಜೀವಂತವಾಗಿವೆ. ಊರ ಜನರು ತೀರ ಸರಳ ವಿಚಾರಗಳಿಂದ ಅತ್ಯಂತ ಸಂಕೀರ್ಣ ವಿಚಾರಗಳನ್ನು ತಮ್ಮದೇ ರೀತಿಯಲ್ಲಿ ಮೆಲುಕು ಹಾಕುತ್ತಾರೆ. ನಾವೂ ಅಲ್ಲೆಲ್ಲೋ ಅವರ ನಡುವೆ ಕುಳಿತಂತೆ ಭಾಸವಾಗುತ್ತದೆ.

ಕೆಲವು ಪ್ರಶ್ನೆಗಳು ಉದಿಸುತ್ತವೆ: ಕಾಲದಲ್ಲಿ ಹಿಂದೆ ಓಡುವುದಕ್ಕಿಂತ ಮತ್ತು (ಕೊನೆಯ ವಿವಾದದ ಹೊರತಾಗಿಯೂ) ಸ್ವಾರ್ಥಿಗಳಿಗೆ ಗೆಲುವಾಯಿತೆಂಬ ಭಾವ ಸಾಮಾಜಿಕವಾಗಿ ಸರಿಯೇ? ಕೊನೆಗೆ ಓಡುವವರು (ಮಾಸ್ಟ್ರು, ಕಾಮತರು, ರಾಗಣ್ಣ…) ತಾತ್ವಿಕವಾಗಿ ಸಮಾರಂಭದಲ್ಲಿ ಯಾವ ರೀತಿಯಲ್ಲೂ ಭಾಗವಹಿಸದವರು. ಅಲ್ಲಿ ಉಳಿಯುವವರು ಸುಕ್ಕಣ್ಣ ಮತ್ತು ಕೋಟೆಯವರು. ಅವರು ಬಟ್ಟೆಬಿಚ್ಚಿ ಮುಸುಕು ಹಾಕಿ ಗುಡಿಯೆದುರು ಕೂರುವವರು. ಅಂದರೆ ಅವರ-ಗುಡಿಯ ಸಂಬಂಧ ಮುಂದುವರಿಯುತ್ತದೆಯೆಂಬ ಸಂಕೇತವೇ?

ಕಾದಂಬರಿಯು ಇಂತಹ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಶ್ನೆಗಳನ್ನು ಉತ್ತರಿಸುವುದು, ಸಮಸ್ಯೆಗಳನ್ನು ಬಿಡಿಸುವುದು, ಕಾದಂಬರಿಯ ಕೆಲಸವಲ್ಲ. ಸಂಕೀರ್ಣವಾದ ಜಗತ್ತಿನ ಅವಶ್ಯಕತೆಗಳನ್ನು ಶೋಧಿಸುತ್ತ ಹೀಗಾಯಿತಲ್ಲ ಎಂದುಕೊಳ್ಳುವಾಗಲೇ ಪ್ರಪಂಚವೆಂದರೆ ಹಾಗೇ; ಹೀಗೂ ಆಗುತ್ತದೆಯೆಂಬ ಒಳತೋಟಿ. ವ್ಯಾಸ-ವಾಲ್ಮೀಕಿಯರಿಂದ ಇಂದಿನವರೆಗೂ ಬರೆಹಗಾರ ಕಂಡದ್ದು ಈ ಅನೂಹ್ಯ ಸಂಗತಿಗಳನ್ನು. ಮೊಗಸಾಲೆಯವರು ಆಧುನಿಕ ಕಾಲಘಟ್ಟದಲ್ಲಿ ಸಮಾಜವು ತನ್ನೊಳಗೆ ಇಟ್ಟುಕೊಂಡ ವೈರುಧ್ಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆೆ. ಇದು ನೋಡುವುದಕ್ಕಷ್ಟೇ ಅಲ್ಲ, ಅನುಭವಿಸುವುದಕ್ಕೂ ಎಂಬ ಹಾಗೆ ಇಲ್ಲಿನ ಪಾತ್ರಗಳು ವಿಹ್ವಲತೆಯನ್ನು ತೋರುತ್ತವೆ.

ಒಂದು ಒಳ್ಳೆಯ ಕಾದಂಬರಿಯನ್ನು ಬರೆದ ಮೊಗಸಾಲೆಯವರಿಗೆ ಅಭಿನಂದನೆಗಳು.

mogasale dharmagrantha manohara granthamala

ನರೇಂದ್ರ ಪೈ ಮತ್ತು ಬಾಲಸುಬ್ರಹ್ಮಣ್ಯ ಕಂಜರ್ಪಣೆ

* ಪರಿಚಯ : ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಹಳ್ಳಿಯವರು ಡಾ. ನಾರಾಯಣ ಮೊಗಸಾಲೆ. ಆಯುರ್ವೇದ ವೈದ್ಯರಾದ ಇವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕಾಂತಾವರ ಎಂಬ ಸಣ್ಣ ಹಳ್ಳಿಯಲ್ಲಿ ಕನ್ನಡ ಸಂಘ ಹುಟ್ಟುಹಾಕಿ ನಿಯಮಿತವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇವರ ಪ್ರಕಟಿತ ಕೃತಿಗಳು : ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದು. ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ. ಮುಖಾಂತರ, ಧಾತು (ಕಾದಂಬರಿಗಳು), ಆಶಾಂಕುರ, ಹಸಿರುಬಿಸಿಲು, ಸುಂದರಿಯ ಎರಡನೇ ಅವತಾರ. ಸೀತಾಪುರದ ಕಥೆಗಳು, ಸನ್ನಿಧಿಯಲ್ಲಿ ಸೀತಾಪುರ (ಕಥಾ ಸಂಕಲನಗಳು), ಸೀತಾಪುರದಲ್ಲಿ ಕತೆಗಳೇ ಇಲ್ಲ (ಸಮಗ್ರ ಕಥಾ ಸಂಕಲನ) ಬಿಸಿಲಕೋಲು (ವ್ಯಕ್ತಿಚಿತ್ರಗಳ ಸಂಗ್ರಹ).

* (ಪ್ರತಿಗಳನ್ನು ಕಾಯ್ದಿರಿಸಲು ಸಂಪರ್ಕಿಸಿ : ರಮಾಕಾಂತ ಜೋಶಿ – 9902851833 ಮನೋಹರ ಗ್ರಂಥಮಾಲಾ)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಅಮರೇಶ ನುಗಡೋಣಿಯವರ ‘ಗೌರಿಯರು’ ಬಂದರು

Published On - 5:53 pm, Wed, 14 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ