R. S. Mugali Birthday : ‘ನಾಡಿಗೆ ನಾಡೇ ಉರಿಯುತ್ತಿರುವಾಗ ಎಲ್ಲಿಯ ಹಾಡುಗಾರಿಕೆ, ಬನ್ನವೇ ಅನ್ನವಾದಾಗ ಎಲ್ಲಿಯ ಬಾಜನೆ?‘

Kannada Novel : ‘ಮೂರುನಾಲ್ಕು ತಿಂಗಳಲ್ಲಿ ಪರೀಕ್ಷೆ ಕೊಡುವವನಿದ್ದನು; ಪರೀಕ್ಷೆಯಾಯಿತೆಂದರೆ ಡಾಕ್ಟರಾಗುವವನಿದ್ದನು. ಅಂತೇ ಕೇಳಿದ ಪ್ರಶ್ನೆಗೆ ಒಂದು ಮೊನೆಯಿತ್ತು. ಅದು ಅಮೃತನ ಎದೆಯಲ್ಲಿ ನಾಟಿತು; ಆದರೆ ಎದೆಗುಂದಿಸಲಿಲ್ಲ. ಅವನು ಸ್ವಲ್ಪವೂ ತಡೆಯದೆ ‘ಹೌದು ಸಿದ್ಧನಿದ್ದೇನೆ’ ಗಟ್ಟಿದನಿಯಲ್ಲಿ ಹೇಳಿದನು. ಎಲ್ಲರೂ ‘ವಾಹವ್ವಾ’ ಎಂದರು. ಒಬ್ಬಿಬ್ಬರು ಮಾತ್ರ ‘ಈ ಉತ್ಸಾಹ ಕೊನೆಬಾಳುವುದಿಲ್ಲ’ ಎಂದು ಮೋರೆ ಕಿವುಚಿದರು.

R. S. Mugali Birthday : ‘ನಾಡಿಗೆ ನಾಡೇ ಉರಿಯುತ್ತಿರುವಾಗ ಎಲ್ಲಿಯ ಹಾಡುಗಾರಿಕೆ, ಬನ್ನವೇ ಅನ್ನವಾದಾಗ ಎಲ್ಲಿಯ ಬಾಜನೆ?‘
‘ಅನ್ನ’ ಕಾದಂಬರಿಯೊಂದಿಗೆ ರಂ. ಶ್ರೀ. ಮುಗಳಿ
ಶ್ರೀದೇವಿ ಕಳಸದ | Shridevi Kalasad

|

Jul 15, 2021 | 2:40 PM

‘ತಾಯೀ, ಅನ್ನದ ಹಸಿವು ಹೆಚ್ಚಿದಂತೆ ಅಂತಃಕರಣದ ಒಡಕೂ ಹೆಚ್ಚಿದೆ. ಒಬ್ಬರೊಬ್ಬರಲ್ಲಿ ತಾಳವಿಲ್ಲ, ಮೇಳವಿಲ್ಲ. ಮನೆಗೆ ಹತ್ತಿದ ದಳ್ಳುರಿಯನ್ನು ಆರಿಸುವ ಬದಲು ನಮಗೇನು ಸಂಬಂಧವೆಂಬಂತೆ ಹಣಕೊಬ್ಬಿದ ಹಲವರು ಹಾಡುತ್ತಾರೆ, ಕುಣಿಯುತ್ತಾರೆ. ಉರಿಯೇ ಹತ್ತಿಲ್ಲವೆಂದು ಕೆಲವರು ಬುದ್ಧಿವಂತರು ವಾದಿಸುತ್ತಾರೆ. ಉರಿಗೊಂಡ ಮನೆಯಲ್ಲಿ ಕೈಗೆ ಬಂದದ್ದನ್ನು ಕೆಲವರು ದೋಚಿಕೊಳ್ಳುತ್ತಾರೆ. ಅಂಥದ್ದೇನು ದೊಡ್ಡ ಆಪತ್ತಿಯಲ್ಲ, ನಾವೆಲ್ಲಾ ನೋಡಿಕೊಳ್ಳುತ್ತೇವೆ ಎಂದು ಆಳುವ ದೊರೆಗಳು ಜರ್ಬಿನಿಂದ ಹೇಳುತ್ತಾರೆ. ಹಳ್ಳಿಯೇನು, ಪಟ್ಟಣವೇನು, ಎಲ್ಲ ಕಡೆಗೆ ಇಮ್ಮೊಗದ ನೋಟ ಕಂಡೆ. ಒಂದು ಕಡೆ ಸುಖದಲ್ಲಿ ಲೋಲಾಡುವ, ಮಿಷ್ಟಾನ್ನದಲ್ಲಿ ಮುಳುಗಿ ಏಳುವ ಜನರಿದ್ದರೆ ಇನ್ನೊಂದು ಕಡೆ ಹಸಿದು ಕಂಗೆಡುವ ಕೊಳಚೆಯಲ್ಲಿ ಮೂಡಿ ಮುಳ್ಕಾಡುವ ಜನ. ಎರಡನೆಯ ತರಹದ ಜನವೇ ಲೆಕ್ಕ ಮೀರಿದೆ.’ ರಂ. ಶ್ರೀ ಮುಗಳಿಯವರ ‘ಅನ್ನ’ ಕಾದಂಬರಿಯ ‘ಪ್ರೇರಣೆ’ಯ ಆಯ್ದ ಭಾಗ ಮತ್ತು ಕಾದಂಬರಿಯ ಒಂದು ಸನ್ನಿವೇಶ ನಿಮ್ಮ ಓದಿಗೆ.    

*

ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಗೆ ಪ್ರಸಿದ್ಧರಾದ ರಂ. ಶ್ರೀ. ಮುಗಳಿಯವರು ಕಾದಂಬರಿಕಾರರೂ, ಕವಿಗಳೂ ಆಗಿದ್ದರು ಎನ್ನುವುದು ಅನೇಕರಿಗೆ ತಿಳಿದಂತಿಲ್ಲ. 1934ರಲ್ಲಿ ಇವರು ಮೊದಲ ಕಾದಂಬರಿ ‘ಬಾಳುರಿ’ ಪ್ರಕಟಿಸಿದರು. ನಂತರ ‘ಕಾರಣಪುರುಷ’, ‘ಅನ್ನ’ ಮತ್ತು ಅಗ್ನಿವರ್ಣ’ ಎಂಬ ಕಾದಂಬರಿಗಳನ್ನು ರಚಿಸಿದರು. ‘ಅಗ್ನಿವರ್ಣ’ ಕಾದಂಬರಿಯನ್ನು ಬಿಟ್ಟರೆ ಉಳಿದ ಮೂರು ಕಾದಂಬರಿಗಳು ಸ್ವಾತಂತ್ರ್ಯಪೂರ್ವದ ಕಥನವನ್ನು ಹೇಳುವಂಥವು. ಗಾಂಧಿಯುಗದ ಅನೇಕ ತತ್ವ ಮತ್ತು ಆಶಯಗಳನ್ನು ಈ ಕಾದಂಬರಿಗಳಲ್ಲಿ ಚಿತ್ರಿಸಲಾಗಿದೆ. ‘ಅನ್ನ’ ದಲ್ಲಿ ಬಂಗಾರದ ಬರಗಾಲ ಪೀಡಿತ ಜನರ ಸ್ಥಿತಿಗೆ ಮರುಗಿ ತನ್ನ ಮತ್ತು ತನ್ನ ಕುಟುಂಬದ ಕ್ಷೇಮವನ್ನು ಬದಿಗೊತ್ತಿ ಸಮಾಜಸೇವೆ ಮಾಡಲು ಹೊರಟ ತರುಣನ ದುರಂತ ಚಿತ್ರಣವಿದೆ.  ಕನ್ನಡದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಕೌಜಲಗಿ ಹನುಮಂತರಾಯರಿಗೆ ಈ ಕೃತಿಯನ್ನು ಮುಗಳಿಯವರು ಅರ್ಪಿಸಿದ್ದಾರೆ. 1982ರಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಈ ಕಾದಂಬರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದೆ.

ಹಿರಿಯ ಸಾಹಿತಿ ಡಾ. ಬಸವರಾಜ ಕಲ್ಗುಡಿಯವರು ಈ ವಿಷಯವಾಗಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ,  ‘ನವೋದಯ ಮತ್ತು ಪ್ರಗತಿಶೀಲ ಎರಡು ಆಶಯಗಳನ್ನು ಮುಗಳಿಯವರ ಕಾದಂಬರಿಗಳು ಸಮನ್ವಯಗೊಳಿಸಿ ಚಿತ್ರಿಸುವುದನ್ನು ಇವರ ಕಾದಂಬರಿಗಳಲ್ಲಿ ಗುರುತಿಸಬಹುದು. ಕನ್ನಡದ ಓದುಗರಿಗೆ ಹೆಚ್ಚು ಪರಿಚಿತವಲ್ಲದ ಈ ಕಾದಂಬರಿಗಳು ಚಾರಿತ್ರಿಕ ಕಾರಣಕ್ಕಾಗಿಯೇ ಅತ್ಯಂತ ಪ್ರಮುಖ ಕಾದಂಬರಿಗಳೆಂದು ಗುರುತಿಸಬೇಕಾಗುತ್ತದೆ. ಈ ದೃಷ್ಟಿಯಿಂದ ‘ಅನ್ನ’ ಕಾದಂಬರಿ ಮುಗಳಿಯವರ ಅತ್ಯಂತ ಪ್ರಮುಖವಾದ ಕಾದಂಬರಿ ಎಂದು ಹೇಳಬಹುದು.’

r s mugali birthday basavaraj kalgudi

ಸಾಹಿತಿ ಬಸವರಾಜ ಕಲ್ಗುಡಿ. ರಂ.ಶ್ರೀ ಜೀವನದೃಷ್ಟಿ ಸೌಜನ್ಯ : ಕಣಜ

‘ಪ್ರೇರಣೆ’ಯ ಆಯ್ದ ಭಾಗ :

ನಾಡಿಗೆ ನಾಡೇ ಉರಿಯುತ್ತಿರುವಾಗ ಎಲ್ಲಿಯ ಹಾಡುಗಾರಿಕೆ? ಬನ್ನವೇ ಅನ್ನವಾದಾಗ ಎಲ್ಲಿಯ ಬಾಜನೆ?

ಭಾರತದೇಶದಲ್ಲೆಲ್ಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಾಳಿಯಲೆಗಳ ಮೇಲೆ ಈ ಮಾತು ಸಂಚರಿಸುತ್ತಿತ್ತು. ಯಾರದೋ ಈ ಮಾತು ಯಾರಿಗೆ ಗೊತ್ತು? ಅನೇಕರು ಇದನ್ನು ಕೇಳಿಲ್ಲ. ಕೇಳಿದ ಕೆಲವರು ನಿತ್ಯವೂ ಕೇಳುತ್ತಿಲ್ಲ. ಕೇಳಿದಾಗ ನೆನವು, ಮತ್ತೆ ಮರವು. ಅದೇ, ಮಾನಸ ಸರೋವರದ ನೆರೆಹೊರೆಯಲ್ಲಿ ಈ ಮಾತೇ ಮೈಗೊಂಡಂತೆ ತೋರುವ ಜ್ಯೋತಿರ್​ದೇಹವೊಂದು ಸುಳಿಯತ್ತಿರುವುದು. ಅವಳಾರು? ಭಾರತದ ಭಾರತಿ!

ಮತ್ತೆ ಕಾಲ ಮುಂದುವರಿಯಿತು. ಸಾಕ್ಷಿ ಭಾರತಿಯನ್ನು ನೋಡುತ್ತ ಧ್ಯಾನಾಲಯದಲ್ಲಿ ತಾನೂ ಒಂದಾದನು. ನಡುನಡುವೆ ತಾನು ಕಂಡುಕೊಂಡ ನೂರಾರು ಮಾತುಗಳನ್ನು ತಾಯಿಗೆ ಬಣ್ಣಿಸಿ ಹೇಳಬೇಕೆಂಬ ಆತುರವುಕ್ಕಿ ಬರುತ್ತಿತ್ತು. ‘ಧ್ಯಾನವನ್ನು ಹೇಗೆ ತಡೆಯಲಿ, ಏನೆಂದು ಮೊದಲು ಮಾಡಲಿ?’ ಎಂಬ ಯೋಚನೆ ಕೈಹಿಡಿಯುತ್ತಿತ್ತು. ಕೊನೆಗೊಮ್ಮೆ ಮನಸ್ಸು ಗಟ್ಟಿಮಾಡಿ ‘ತಾಯಿ, ಹೋಗಿ ಬಂದೆ’ ಎಂದನು.

ಅದೇ ನಿಮಿಷಕ್ಕೆ ಧ್ಯಾನದ ಮೇಲಟ್ಟದಿಂದ ಕೆಳಗಿಳಿದು ಸಾಕ್ಷಿಯನ್ನು ಮಾತನಾಡಿಸಬೇಕೆಂಬ ಅಪೇಕ್ಷೆ ಭಾರತೀಯಲ್ಲಿಯೂ ಮೂಡಿತು. ಜಪಮಾಲೆಯನ್ನು ತಿವುತ್ತಲೇ ‘ಎಲ್ಲಿಗೆ’ ಎಂದು ಕೇಳಿದಳು.

‘ಭಾರತದ ಹಳ್ಳಿಗಳೀಗೆ, ನಗರಗಳಿಗೆ’ಎಂದು ಉತ್ತರ ಬಂದಿತು. ‘ಸರಿ, ಏನು ಕಂಡೆ?’ ‘ಕಂಡದ್ದೆಲ್ಲವನ್ನೂ ತುಂಡು ಮಾತಿನಲ್ಲಿ ಹೇಗೆ ಹೇಳಬಲ್ಲೆ ತಾಯಿ?’ ‘ಕೆಂಡದ ರಾಶಿಯಿದ್ದರೂ ಅಡಿಯಿಲ್ಲ ಉಗುಳು, ಕಂಡುದನ್ನು ಉಸುರು.’

ಸಾಕ್ಷಿ ತನ್ನ ಕಣ್ಣುಗಳನ್ನು ಮುಚ್ಚಿ ನೆನವನ್ನು ಎಚ್ಚರಿಸಿ ಹೇಳಿದನು: ‘ದೇವಿ, ಜನಸಾಮಾನ್ಯರ ಜೀವನವು ಜರ್ಜರಿತವಾಗಿದೆ. ಅದು ಜೀವನವಲ್ಲ, ಜೀವಂತ ಮರಣ. ಹೊಟ್ಟೆಗೆ ಸಾಲದು, ಬಟ್ಟೆಗೆ ಸಾಲದು, ಅನ್ನ, ಅನ್ನವೆಂದು ಹಪಾಪಿಸುತ್ತಿದೆ ಜನ. ಅದಕ್ಕಾಗಿ ಬೇಕಾದ್ದು ಮಾಡಲು ಸಿದ್ಧವಾಗಿದೆ. ಪ್ರತಿಯೊಂದು ಮುಖವೂ ನನಗೆ ಒಳಗೊಳಗೆ ಕುದಿಯುವ ಸುಪ್ತಜ್ವಾಲಾಮುಖಿಯಂತೆ ತೋರಿತು. ಇನ್ನೊಂದು ಕ್ಷಣಕ್ಕೆ ಏನಾದೀತು ಯಾರು ಹೇಳಬಲ್ಲರು?’

‘ತಿಳಿಯಿತು. ಸಾಕ್ಷಿ, ಇದರ ಪರಿಣಾಮವನ್ನು ನಾ ಬಲ್ಲೆ ಆದರೇನು ಪ್ರಯೋಜನ?’

‘ತಾಯೀ, ಅನ್ನದ ಹಸಿವು ಹೆಚ್ಚಿದಂತೆ ಅಂತಃಕರಣದ ಒಡಕೂ ಹೆಚ್ಚಿದೆ. ಒಬ್ಬರೊಬ್ಬರಲ್ಲಿ ತಾಳವಿಲ್ಲ, ಮೇಳವಿಲ್ಲ. ಮನೆಗೆ ಹತ್ತಿದ ದಳ್ಳುರಿಯನ್ನು ಆರಿಸುವ ಬದಲು ನಮಗೇನು ಸಂಬಂಧವೆಂಬಂತೆ ಹಣಕೊಬ್ಬಿದ ಹಲವರು ಹಾಡುತ್ತಾರೆ, ಕುಣಿಯುತ್ತಾರೆ. ಉರಿಯೇ ಹತ್ತಿಲ್ಲವೆಂದು ಕೆಲವರು ಬುದ್ಧಿವಂತರು ವಾದಿಸುತ್ತಾರೆ. ಉರಿಗೊಂಡ ಮನೆಯಲ್ಲಿ ಕೈಗೆ ಬಂದದ್ದನ್ನು ಕೆಲವರು ದೋಚಿಕೊಳ್ಳುತ್ತಾರೆ. ಅಂಥದ್ದೇನು ದೊಡ್ಡ ಆಪತ್ತಿಯಲ್ಲ, ನಾವೆಲ್ಲಾ ನೋಡಿಕೊಳ್ಳುತ್ತೇವೆ ಎಂದು ಆಳುವ ದೊರೆಗಳು ಜರ್ಬಿನಿಂದ ಹೇಳುತ್ತಾರೆ. ಹಳ್ಳಿಯೇನು, ಪಟ್ಟಣವೇನು, ಎಲ್ಲ ಕಡೆಗೆ ಇಮ್ಮೊಗದ ನೋಟ ಕಂಡೆ. ಒಂದು ಕಡೆ ಸುಖದಲ್ಲಿ ಲೋಲಾಡುವ, ಮಿಷ್ಟಾನ್ನದಲ್ಲಿ ಮುಳುಗಿ ಏಳುವ ಜನರಿದ್ದರೆ ಇನ್ನೊಂದು ಕಡೆ ಹಸಿದು ಕಂಗೆಡುವ ಕೊಳಚೆಯಲ್ಲಿ ಮೂಡಿ ಮುಳ್ಕಾಡುವ ಜನ. ಎರಡನೆಯ ತರಹದ ಜನವೇ ಲೆಕ್ಕ ಮೀರಿದೆ.’

‘ಸಾಕು ಸಾಕ್ಷಿ, ಗೊತ್ತಾಯಿತು. ನಾನಿನ್ನು ಕೇಳಲಾರೆ. ನನ್ನ ನಾಡಿನ ಬದುಕನ್ನು ನೆನೆನೆನೆದು ಈಗ ಸಾಕಷ್ಟು ಎದೆ ಬೇಯುತ್ತಿದೆ. ಹೆಚ್ಚು ಬೇಯಿಸಬೇಡ.’ ಎಂದು ಭಾರತಿ ವೇಗವೇಗದಿಂದ ಜಪಮಾಲೆಯನ್ನು ಹೊರಳಿಸುತ್ತ ಮೂಗುಟ್ಟುವಳು. ಅವಳ ಮುಖವು ಉದಯಕಾಲದ ಪೂರ್ಣಚಂದ್ರನಂತೆ ಕೆಂಪೇರಿತು. ಕಂಬನಿ ಕಣ್ಣ ತುದಿಯವರೆಗೆ ಬಂದು ತಾಪದುರಿಯಲ್ಲಿ ಸುಟ್ಟುಹೋಯಿತು. ಹಣೆ ಮಧ್ಯದಲ್ಲಿ ಎರಡು ಎಳೆಮಡಿಕೆಗಳನ್ನು ತೋರಿತು. ಹಣೆಗಣ್ಣನ್ನು ತೆರೆಯುವಳೋ ಎಂಬಂತೆ ಭಾಸವಾಯಿತು.

r s mugali anna novel kalgudi

ಮುಗಳಿಯವರ ಕೃತಿಗಳು ಮತ್ತು ಅಭಿನವ ಪ್ರಕಾಶನದಿಂದ ಪ್ರಕಟವಾದ ‘ಬೇಂದ್ರೆ ಕಾವ್ಯ’

ಕಾದಂಬರಿಯ ಆಯ್ದ ಭಾಗ :

ಢಣಣಣ ಢಣ್ ಎಂದು ಸರಸರನೆ ಮುಂಬಯಿಯ ಗ್ರ್ಯಾಂಟ್ ಮೆಡಿಕಲ್ ಕಾಲೇಜಿನ ಘಂಟೆ ಹೊಡೆಯಿತು. ಅಂದಿನ ಕೊನೆಯ ತಾಸು ಮುಗಿಯಿತು ಎಂದು ಡಂಗುರ ಸಾರಿತು. ಢಣ್ ಎಂಬುದಾಗಿ ಗುಣಿಕೆಯ ಜೋರಾದ ಕಡೆಯ ಏಟು ಬಿದ್ದು ಕಾಲೇಜಿಗೂ ಘಂಟೆಗೂ ಇನ್ನು ಹತ್ತುದಿನ ಬಿಡುವೆಂದು ಕೂಗಿ ಹೇಳಿದಂತಾಯಿತು. ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಹೊರಬಿದ್ದರು. ಪ್ರೊಫೆಸರರು ಏಳುವ ಮೊದಲೇ ಒಂದು ಕಾಲು ಹೊರಗಿಟ್ಟ ಕೆಲವರು ಗುಂಪಾಗಿ ಹೊರಬಿದ್ದು ಹಾರಾಡಿದರು. ಕೇಕೆ ಹಾಕಿದರು. ಬಯಲಲ್ಲಿ ಬಂದು ಪುಸ್ತಕಗಳನ್ನೂ ವಹಿಗಳನ್ನೂ ತೂರಾಡಿದರು. ‘ಪರೀಕ್ಷೆಯ ಟರ್ಮಿದು, ಮನಗೊಟ್ಟು ಅಭ್ಯಾಸ ಮಾಡಬೇಕು, ತಮಗೂ ಕಾಲೇಜಿಗೂ ಕೀರ್ತಿ ತರಬೇಕು ಎಂದು ಮುಂತಾಗಿ ಪ್ರೊಫೆಸರರು ಮಾಡಿದ ಕಳಕಳಿಯ ಉಪದೇಶ ಗಾಳಿಯಲ್ಲಿ ಕರಗಿಹೋಯಿತು. ವೈದ್ಯಕೀಯ ವಿದ್ಯಾಲಯಗಳ್ಲಿ ಅಭ್ಯಾಸದ ಹೊರೆಯೆಂದರೆ ಹೇಳಕೂಡದಷ್ಟು. ವಿವಿಧ ವಿಷಯಗಳ ಓದು, ಲೆಕ್ಚರು, ಮೇಲೆ ಸತ್ತ ಹೆಣದ ಪೃಥಕ್ಕರಣವೋ ಜೀವಂತ ಹೆಣಗಳ ಔಷಧೋಪಚಾರವೋ ಈ ಕೆಲಸ ಬೇರೆ. ಈ ದುಡಿತದಲ್ಲಿ ನುಗ್ಗಾದ ಹುಡುಗರಿಗೆ ಹತ್ತು ದಿನದ ನಾತಾಳಿ ಸೂಟಿಯೂ ಹಿಗ್ಗಿನ ಹುತ್ತವಾಯಿತು.

ವಿದ್ಯಾರ್ಥಿಗಳು ತಮ್ಮ ವಸತಿಗೃಹದತ್ತ ನಡೆದರು ಎಲ್ಲರ ಬಾಯಲ್ಲಿ ಊರಿಗೆ ಹೊರಡುವ ಮಾತುಗಳೇ. ‘ನೀ ಯಾವಾಗ? ಯಾವ ಊರಿಗೆ?’ ಎಂಬ ಪ್ರಶ್ನೆಗಳ ಸುರಿಮಳೆಯನ್ನು ಒಬ್ಬರಮೇಲೊಬ್ಬರು ಮಾಡಿದರು. ಅಭ್ಯಾಸಕ್ಕಾಗಿ ಎಲ್ಲಿಯೂ ಹೋಗದೆ ಇಲ್ಲಿಯೇ ಇರುವೆವೆಂದು ಹಲವರು ಹೇಳಿದ್ದಕ್ಕೆ ಒಬ್ಬ ಕಿಡಿಗೇಡಿ ‘ಆಯ್ತು ಇಲ್ಲಿಯೇ ಸಾಯಿರಿ’ ಎಂದು ನಗುತ್ತಲೇ ಶಪಿಸಿದನು.

‘ಊರಿಗೆ ಹೊರಟು ಸಾಯುವುದಕ್ಕಿಂತ ಇಂದು ನೆಟ್ಟಿಗಲ್ಲವೆ?’ ಎಂದು ಹೋಗಲೊಲ್ಲದ ನೆರವಿಯಿಂದ ಉತ್ತರ ಬಂದಿತು.

‘ಓಹೋ! ಇವನೊಬ್ಬ ಮಹಾ ಪುಕ್ಕಲ’ ಎಂದ ಹೋಗಲು ಸಿದ್ಧವಾದ ಗುಂಪಿನಿಂದ ಪ್ರಶಸ್ತಿ ದೊರೆಯಿತು. ಆಗ ರೇಲ್ವೆ-ಹಳ್ಳಿಗಳ ಕಿತ್ತಾಟದ ಕಾಲವಾಗಿತ್ತು. ಪ್ರವಾಸಿಗರು ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗುತ್ತಿದ್ದರು. ಆದರೆ ಕಾಲೇಜಿನ ಯಾಂತ್ರಿಕ ದಿನಚರಿಗೆ ಬೇಸತ್ತು ಊರ ಮೋರೆಯನ್ನು ನೋಡಬೇಕೆಂದು ಹಾತೊರೆಯುವ ಹುಡುಗರಿಗೆ ಈ ಹೆದರಿಕೆ ತಾಕಲಿಲ್ಲ.

ಎಲ್ಲರೂ ತಂತಮ್ಮ ಕೋಣೆಗಳನ್ನು ತೆರೆದು ಪುಸ್ತಕವನ್ನೆಸೆದು ವೇಷ ಬದಲಿಸಿದರು. ಅಲ್ಲಲ್ಲಿ ವಸತಿಗೃಹದ ಮುಂದೆ ಸಂಜೆಯ ತಂಪುಗಾಳಿಯಲ್ಲಿ ಹರಟೆಯ ಕೂಟಗಳು ಸೇರಿದವು. ಹರಟೆಯಲ್ಲಿ ಬಾರದ ವಿಷಯವಿಲ್ಲ. ಬಯ್ಯದ ವ್ಯಕ್ತಿಯಿಲ್ಲ. ಪ್ರೊಫೆಸರರ ವಿಮರ್ಶೆಯಿಂದ ಮೊದಲಾದ ವ್ಯಕ್ತಿ ವಿಮರ್ಶೆ ಗಾಂಧಿ ನೆಹರು ಚರ್ಚಿಲ್ ರೂಜವೆಲ್ಟರವರೆಗೆ ಹೋಯಿತು. ಒಂದು ತುಸು ದೊಡ್ಡದಾದ ಗುಂಪಿನಲ್ಲಿ ವಾಸಭೆಯ ಗಂಭೀರಸ್ವರೂಪ ಬಂದಿತ್ತು. ನಡುನಡುವೆ ಉದ್ದುದ್ದಾದ ಭಾಷಣಗಳೂ ಆಗುತ್ತಿದ್ದವು. ಇವರ ಧೋರಣೆ ತಪ್ಪು, ಅವರದೇ ಯೋಗ್ಯ – ಈ ಮುಂತಾದ ರಾಜಕೀಯ ಚರ್ಚೆ ಸಾಗಿತ್ತು. ಈ ಗುಂಪಿನ ಮಧ್ಯದಲ್ಲಿ ಎಲ್ಲರಿಗೆ ಪರಿಚಿತನಾದ ಒಬ್ಬ ವಿದ್ಯಾರ್ಥಿ ರಾಷ್ಟ್ರೀಯ ವಿಚಾರಗಳನ್ನು ಮನಗಾಣುವಂತೆ ಮಂಡಿಸುತ್ತಿದ್ದನು. ಅವನು ಬರೀ ಮಾತಿನ ಮಲ್ಲನಲ್ಲವೆಂದೂ ಸಾಹಸಿಯೆಂದೂ ಎಲ್ಲರಿಗೆ ಗೊತ್ತಿತ್ತು. ಅವನ ಮಾತನ್ನೆಲ್ಲರೂ ಕಿವಿಗೊಟ್ಟು ಕೇಳುತ್ತಿದ್ದರು. ಅಷ್ಟರಲ್ಲಿ ಒಬ್ಬ ಕುಚೋದ್ಯಗಾರನು ಬಾಯಿ ಹಾಕಿ, ‘ಸರಿ, ಅಮೃತ್, ಮಾತಾಡಲಿಕ್ಕೆ ಎಲ್ಲ ಸರಿ. ದೇಶದ ಸಲುವಾಗಿ ಬೇಕಾದ ತ್ಯಾಗ ಮಾಡಲಿಕ್ಕೆ ನೀ ಸಿದ್ಧನಿರುವೆಯೇನು?’ ಎಂದು ಸವಾಲು ಹಾಕಿದನು.

ಅಮೃತನು ಏನು ಉತ್ತರ ಕೊಡುವನೆಂದು ತಿಳಿಯಲು ಎಲ್ಲರ ಕುತೂಹಲದ ಕಣ್ಣು ಅವನತ್ತ ತಿರುಗಿದವು. ಈಗವನು ಮೆಡಿಕಲ್ ಕಾಲೇಜಿನ ಕೊನೆಯ ವರ್ಷದಲ್ಲಿದ್ದು ಇನ್ನು ಮೂರುನಾಲ್ಕು ತಿಂಗಳಲ್ಲಿ ಪರೀಕ್ಷೆ ಕೊಡುವವನಿದ್ದನು; ಪರೀಕ್ಷೆಯಾಯಿತೆಂದರೆ ಡಾಕ್ಟರಾಗುವವನಿದ್ದನು. ಅಂತೇ ಕೇಳಿದ ಪ್ರಶ್ನೆಗೆ ಒಂದು ಮೊನೆಯಿತ್ತು. ಅದು ಅಮೃತನ ಎದೆಯಲ್ಲಿ ನಾಟಿತು; ಆದರೆ ಎದೆಗುಂದಿಸಲಿಲ್ಲ. ಅವನು ಸ್ವಲ್ಪವೂ ತಡೆಯದೆ ‘ಹೌದು ಸಿದ್ಧನಿದ್ದೇನೆ’ ಎಂದು ಗಟ್ಟಿದನಿಯಲ್ಲಿ ಹೇಳಿದನು. ಎಲ್ಲರೂ ಈ ಉತ್ತರವನ್ನು ಮೆಚ್ಚದರು ; ‘ವಾಹವ್ವಾ’ ಎಂದರು ಒಬ್ಬಿಬ್ಬರು ಮಾತ್ರ ‘ಈ ಉತ್ಸಾಹ ಕೊನೆಬಾಳುವುದಿಲ್ಲ’ ಎಂದು ಮೋರೆ ಕಿವುಚಿದರು. ಆ ಕುಚೋದ್ಯಗಾರನು ಅಲ್ಲಿಗೇ ಅಮೃತನನ್ನು ಬಿಡಲಿಲ್ಲ; ಮುಂದೆ ಕೇಳಿದನು ; ‘ಹಾಗಾದರೆ ಈವೊತ್ತು ರಾತ್ರಿಗಾಡಿಗೆ ಹೊರಡು ನಿನ್ನೂರಿಗೆ. ಮನೆಯವರ ಅಪ್ಪಣೆ ತಗೊಂಡು ದೇಶಕಾರ್ಯ ಮಾಡಿ ತೋರಿಸು ನೋಡೋಣ’ ಇದಕ್ಕೆ ಅಮೃತನು ಸ್ವಲ್ಪ ತಡೆದು, ‘ಈಗಲೇ ಹೊರಡಲಾರೆ; ಪರೀಕ್ಷೆ ಆಗುವವರೆಗೆ ನಾ ಪರಾಧೀನ’ ಅಂದನು.

ಕೂಡಲೇ ‘ನೋಡಿದಿರಾ ಇವನ ಸಿದ್ಧತೆ!’ ಎಂದು ಕೆಣಕಿದ ಹುಡುಗನು ಖಿಸಿಖಿಸಿ ನಕ್ಕನು. ಕೆಲವರು ತಮ್ಮ ನಗೆಗೂಡಿಸಿದರು. ಗುಂಪು ಚೆದುರಿತು; ಅಮೃತನು ಗೆಳೆಯರ ಅಣಕದಿಂದ ಖಿನ್ನನಾಗಿ ತನ್ನ ಕೋಣೆ ಸೇರಿದನು.

ಇದನ್ನೂ ಓದಿ : R. S. Mugali Birthday : ಬಿ. ಎಲ್. ರೈಸ್-ರಂ. ಶ್ರೀ. ಮುಗಳಿ ‘ಕನ್ನಡ ಸಾಹಿತ್ಯ’ ಮುಖಾಮುಖಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada