P. B. Sreenivas Birthday : ಜನುಮ ಜನುಮದಲ್ಲೂ ನೀವು ನಮ್ಮವರೇ…

Music : ‘ವಿಷಯ ಗೊತ್ತಿಲ್ಲದ ಆರ್. ಎನ್​. ಜಯಗೋಪಾಲ್, “ಹೀಗೆ ಒಂದು ಹಾಡಿನ ಧ್ವನಿಮುದ್ರಣ ತುರ್ತಾಗಿ ಆಗಬೇಕಿತ್ತು ಬರುತ್ತೀಯಾ” ಎಂದು ಕೇಳಿದರು. ದುಃಖದಲ್ಲಿ ಮುಳುಗಿ ಹೋಗಿದ್ದರೂ ಪಿ.ಬಿ.ಎಸ್ ಅವರಿಗೆ ತಾಯಿಯ ಮಾತು ನೆನಪಾಯಿತು. “ಈಗ ತಾನೆ ನಮ್ಮ ತಾಯಿ ತೀರಿಕೊಂಡರು. ದಹನ ಕ್ರಿಯೆ ಮುಗಿಸಿದ ನಂತರ ನೇರವಾಗಿ ಸ್ಟೂಡಿಯೋಕ್ಕೆ ಬರುತ್ತೇನೆ” ಎಂದರು.

P. B. Sreenivas Birthday : ಜನುಮ ಜನುಮದಲ್ಲೂ ನೀವು ನಮ್ಮವರೇ...
ಹಿನ್ನೆಲೆ ಗಾಯಕ ಪಿ. ಬಿ. ಶ್ರೀನಿವಾಸ್
Follow us
ಶ್ರೀದೇವಿ ಕಳಸದ
|

Updated on:Sep 22, 2021 | 3:31 PM

P. B. Sreenivas : ಪಿ.ಬಿ. ಶ್ರೀನಿವಾಸ್ ಅವರ ತಾಯಿ ಶೇಷಗಿರಿಯಮ್ಮ ತುಂಬಾ ಸುಮಧುರವಾಗಿ ಹಾಡುತ್ತಿದ್ದರು. ಗಾಯಕರಾಗಲು ಅವರಿಗೆ ತಾಯಿಯದೇ ಪ್ರೇರಣೆ. ಕಷ್ಟಕಾಲದಲ್ಲಿ ಸದಾ ಬೆಂಬಲವಾಗಿ ನಿಂತ ತಮ್ಮ ತಾಯಿ ಎಂದರೆ ಪಿ.ಬಿ.ಎಸ್ ಅವರಿಗೆ ಅಚ್ಚುಮೆಚ್ಚು. ಆಕೆ ನನ್ನ ದೇವತೆ ಎನ್ನುವಷ್ಟು ಭಾವುಕತೆ. ತಾಯಿಯವರಿಗೆ ಇದ್ದ ದೊಡ್ಡ ಆಸೆ ಎಂದರೆ ತನ್ನ ಮಗಳ ಮದುವೆ ಬಂಧು ಮಿತ್ರರು, ನೆರೆಹೊರೆಯವರು ಬೆರಗಾಗುವಂತೆ ಆದ್ದೂರಿಯಾಗಿ ನಡೆಯಬೇಕು ಎನ್ನುವುದು. ಅದರಂತೆ ಪಿ.ಬಿ.ಎಸ್ ತಮ್ಮ ತಂಗಿಯ ಮದುವೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಿದರು. ಇದರಿಂದ ಆನಂದತುದಲಿತರಾದ ಅವರ ತಾಯಿ “ತಂಗಿ ಮದುವೆ ಮಾಡಲು ಎಷ್ಟೊಂದು ಖರ್ಚು ಮಾಡಿದ್ದೀಯ. ನಿನಗೂ ಸಂಸಾರವಿದೆ. ಮಕ್ಕಳಿದ್ದಾರೆ. ಅವರ ಭವಿಷ್ಯಕ್ಕೆ ಹಣ ಬೇಕಾಗುತ್ತದೆ. ನನ್ನ ತೃಪ್ತಿಗೆ ಇಷ್ಟೊಂದು ಖರ್ಚು ಮಾಡಿದ ನೀನು ನನಗೆ ಇನ್ನೇನು ಮಾಡುವುದು ಬೇಕಾಗಿಲ್ಲ. ನಾನು ಹೋದ ಮೇಲೆ ಕೂಡ ಅಪರಕ್ಕೆ ಎಂದು ಖರ್ಚು ಮಾಡಬೇಡ ಬದಲಾಗಿ ನನ್ನ ನೆನಪಿಗೆ ಹತ್ತಾರು ಕಾಲ ಉಳಿಯುವಂತಹ ಹಾಡನ್ನು ಹಾಡು ಎಂದಿದ್ದರು.

ಹಿರಿಯ ಪತ್ರಕರ್ತರಾದ ಎನ್.ಎಸ್. ಶ್ರೀಧರ ಮೂರ್ತಿ ಅವರು, ಪಿ.ಬಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಅವರೊಂದಿಗೆ ಒಡನಾಡಿದ ಕ್ಷಣಗಳನ್ನು ಮತ್ತವರ ವೈಶಿಷ್ಟ್ಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*

ಇದು 1992ರ ನೆನಪು… ಜಿ.ವಿ.ಅತ್ರಿ ಚಿತ್ರಗೀತೆಗಳ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಪಿ.ಬಿ. ಶ್ರೀನಿವಾಸ್ ಸೇರಿದಂತೆ ಹಲವು ಪ್ರಖ್ಯಾತ ಗಾಯಕರು ಭಾಗಿಯಾಗುವವರಿದ್ದರು. ಬೆಂಗಳೂರಿನ ಚೌಡಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ. ಜನ ಕಿಕ್ಕಿರಿದು ಸೇರಿದ್ದಾರೆ. ಹಿಂದಿನ ದಿನ ರಾತ್ರಿಯಿಂದಲೇ ಪಿ.ಬಿ. ಶ್ರೀನಿವಾಸ್ ಅವರಿಗೆ ಜ್ವರ ಕಾಣಿಸಿಕೊಂಡಿತು. ನೂರರ ಆಸುಪಾಸಿನಲ್ಲೇ ಸುತ್ತುತ್ತಿದ್ದ ಜ್ವರದ ತಾಪದಿಂದ ಅವರಿಗೆ ಕಣ್ಣು ಬಿಡುವುದೂ ಕೂಡ ಕಷ್ಟವಾಗಿತ್ತು. ಇನ್ನು ಹಾಡುವುದು ದೂರದ ಮಾತಾಯಿತು. ಆದರೆ ಯಾರು ಏನು ಹೇಳಿದರೂ ಕೇಳದೆ ಪಿ.ಬಿ ತಮ್ಮ ಖಾಯಂ ತಾಣ ಮೌರ್ಯದಿಂದ ಚೌಡಯ್ಯಕ್ಕೆ ಬಂದರು. ಅಲ್ಲಿನ ಕಿರಿದಾದ ಸೈಡ್‍ವಿಂಗ್‍ನಲ್ಲಿ ಮಲಗಿಕೊಂಡೆ ಹಾಡಿಗೆ ಕಿವಿಗೊಟ್ಟರು. ರಾಜ ನನ್ನ ರಾಜಚಿತ್ರದ “ನೂರು ಕಣ್ಣು ಸಾಲದು” ಗೀತೆಯನ್ನು ಉದ್ದೇಶಿತ ಕಾರ್ಯಕ್ರಮ ಪಟ್ಟಿಯಂತೆ ಎಸ್.ಪಿ ಮತ್ತು ಪಿ.ಬಿ ಒಟ್ಟಿಗೆ ಹಾಡಬೇಕಿತ್ತು. ಎಸ್.ಪಿ ಹಾಡನ್ನು ಆರಂಭಿಸಿದರು. ಪಿ.ಬಿ ಭಾಗವನ್ನು ಅತ್ರಿ ಹಾಡಲು ಸಿದ್ದರಾಗಿದ್ದರು. ಹಾಡು ಅರ್ಧಕ್ಕೆ ಬರುತ್ತಿದ್ದಂತೆ ಪಿ.ಬಿ ಆವೇಶ ಬಂದವರಂತೆ ವೇದಿಕೆಗೆ ಹತ್ತಿರದಲ್ಲಿ ಇದ್ದ ನನ್ನ ಕೈಹಿಡಿದುಕೊಂಡೇ ನುಗ್ಗಿದರು. ಮೈಕ್ ತೆಗೆದುಕೊಂಡವರೇ,

ಜನುಮ ಜನುಮದಲ್ಲೂ ನೀನು ನನ್ನವಳೇನೆ

ಎಂದು ಹಾಡಲು ಆರಂಭಿಸಿದರು. ಆ ಕ್ಷಣದ ರೋಮಾಂಚನ ಪದಗಳಲ್ಲಿ ವಿವರಿಸಲು ಆಗುವಂತಹದಲ್ಲ. ಅಷ್ಟು ಮಧುರವಾಗಿ ಪಿ.ಬಿ ಎಂದೂ ಹಾಡಿಲ್ಲವೇನೋ ಎನ್ನುವಂತಹ ಜೇನಿನ ಹೊಳೆ ಹರಿಯುತ್ತಿತ್ತು. ಎಸ್.ಪಿ. ಅವರ ಕಣ್ಣಲ್ಲೂ ಆನಂದಭಾಷ್ಪ ಹೊಮ್ಮುತ್ತಿತ್ತು. ಹಾಡು ಮುಗಿದಾಗ ಕೇಳಿ ಬಂದ ಕರತಾಡನ ಹತ್ತು ನಿಮಿಷಗಳಾದರೂ ನಿಲ್ಲಲಿಲ್ಲ.

ಇದು ಪಿ.ಬಿ.ಶ್ರೀನಿವಾಸ್ ಅವರ ಜೊತೆಗಿನ ನನ್ನ ಮೊದಲ ಭೇಟಿ. ಅಲ್ಲಿಂದ ಮುಂದಿನ ಎರಡು ದಶಕಗಳಲ್ಲಿ ಹಲವಾರು ಗಂಟೆಗಳನ್ನು ಅವರ ಜೊತೆಗೆ ಕಳೆದಿದ್ದೇನೆ. ಆ ಮಧುರ ಸ್ಮತಿಯ ಕೆಲವು ಝಲಕ್‍ಗಳು ಇಲ್ಲಿವೆ.

* ಪಿ.ಬಿ. ಅವರು ಹಿನ್ನೆಲೆ ಗಾಯಕರಾಗಲು ಯಾರು ಕಾರಣ? ಹಲವಾರು ಕಥೆಗಳಿವೆ, ಹಲವಾರು ಹೆಸರುಗಳಿವೆ, ಆದರೆ ಯಾರಿಗೂ ಗೊತ್ತಿಲ್ಲದ ಒಂದು ಹೆಸರು ಮತ್ತು ಅದರ ಹಿನ್ನೆಲೆಯ ಕಥೆಯೊಂದನ್ನು ಪಿ.ಬಿ ನನಗೆ ಹೇಳಿದ್ದರು. ಪಿ.ಬಿ ಅವರ ತಂದೆಗೆ ಮಗ ವಕೀಲನಾಗಬೇಕು ಎಂಬ ಕನಸಿತ್ತು. ಅದಕ್ಕಾಗಿ ಎಲ್.ಎಲ್.ಬಿ ಓದಿದರು. ಅದಕ್ಕಾಗಿ ಮದರಾಸಿಗೆ ಬಂದರು. ಆಗ ಹುಟ್ಟಿಕೊಂಡಿತು ಸಂಗೀತಾಸಕ್ತ ಗೆಳೆಯರ ಬಳಗ. ಎಂ.ಎಸ್. ವಿಶ್ವನಾಥನ್, ಜಿ.ಕೆ.ವೆಂಕಟೇಶ್ ಅವರಲ್ಲಿ ಮುಖ್ಯರಾದವರು. ಈ ಮೂವರಿಗೂ ನೌಷಾದ್ ಮಾನಸಿಕ ಗುರು. ಅವಕಾಶ ಸಿಕ್ಕಾಗ ಜೆಮಿನಿ ಸ್ಟೂಡಿಯೋದಲ್ಲಿ ಸಮೂಹಗಾನದಲ್ಲಿ ಹಾಡುಗಳನ್ನು ಹೇಳುತ್ತಿದ್ದರು. ಜೆಮಿನಿ ಶಂಕರಶಾಸ್ತ್ರಿಗಳು ಅಲ್ಲಿನ ನಿರ್ವಾಹಕರು ಅವರು ಮೂವರಿಗೂ ಅವಕಾಶವನ್ನು ನೀಡಿದರು. ಅದು ಹೇರಳವಾಗಿ ತಮಿಳು ಚಿತ್ರಗಳು ಹಿಂದಿಗೆ ಡಬ್ ಆಗುತ್ತಿದ್ದ ಕಾಲ. ಹಿಂದಿಯನ್ನು ಚೆನ್ನಾಗಿ ಬಲ್ಲ ಪಿ.ಬಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಕ್ಕವು. “ಮಿಸ್ ಸಂಪತ್” ಚಿತ್ರದಲ್ಲಿ ಸಮೂಹಗಾನದಲ್ಲಿ ಪಿ.ಬಿ ಹಾಡುತ್ತಿದ್ದರು. ಆಗ ಜೆಮಿನಿ ಸ್ಟೂಡಿಯೋದ ಮಾಲೀಕರಾದ ಎಸ್.ಎಸ್. ವಾಸನ್ ಬಂದರು. ಅವರು ಪಿ.ಬಿ ಕಂಠಸಿರಿಯನ್ನು ಕೇಳಿ “ಎಂತಹ ಕಂಠ, ಹಾಡಿದರೆ ಅಲ್ಲ… ಗುನುಗಿದರೂ ಕಲ್ಲೂ ಕೂಡ ಕರಗಬೇಕು” ಎಂದರು. ತಮ್ಮ ಸ್ನೇಹಿತರಾದ ಆರ್. ನಾಗೇಂದ್ರ ರಾಯರ ಬಳಿಯೂ ಇದನ್ನು ಹೇಳಿಕೊಂಡರು. ಪ್ರತಿಭೆಯನ್ನು ಗುರುತಿಸುವಲ್ಲಿ ರಾಯರು ಸಿದ್ದಹಸ್ತರು. ತಾವು ನಿರ್ಮಿಸುತ್ತಿದ್ದ ಜಾತಕಫಲ ಚಿತ್ರದ ಕನ್ನಡ, ತಮಿಳು, ತೆಲಗು ಮೂರೂ ಅವತರಿಣಿಕೆಯಲ್ಲೂ ಪಿ.ಬಿ.ಎಸ್. ಅವರಿಗೆ ಅವಕಾಶವನ್ನು ನೀಡಿದರು. ಮುಂದೆ ನಿರ್ಮಾಣವಾಗಿದ್ದು ಇತಿಹಾಸ!

PB Sreenivas Birthday

ಮೇರುನಟ ರಾಜಕುಮಾರ ಅವರೊಂದಿಗೆ ಹಿರಿಯ ಗಾಯಕ ಪಿ. ಬಿ. ಶ್ರೀನಿವಾಸ್

ಪಿ.ಬಿ. ಶ್ರೀನಿವಾಸ್ ಅವರಿಗಿರುವ ಪದವಿಗಳ ಪಟ್ಟಿಯಲ್ಲಿ ಎಲ್.ಓ.ಎಲ್ ಎಂ ಪದವಿ ಕೂಡ ಸೇರಿದೆ. ಅದು ಯಾರೂ ಅವರಿಗೆ ಕೊಟ್ಟ ಪದವಿಯಲ್ಲ. ತಾವೇ ಸೇರಿಸಿಕೊಂಡಿದ್ದ. ಹೀಗೆದಂದರೆ “ಲವ್ವರ್ ಅಫ್ ಲಾಂಗ್ವೇಜಸ್” ಎನ್ನುತ್ತಿದ್ದರು ಪಿ.ಬಿ. ಎಂಟು ಭಾಷೆಗಳನ್ನು ಸಮರ್ಥವಾಗಿ ಮಾತನಾಡುತ್ತಿದ್ದ ಅವರಿಗೆ ಭಾಷಾಪ್ರೇಮ ಒಂದು ಕಲೆಯಾಗಿ ಒಲಿದಿತ್ತು. ಗಝಲ್ ಅವರಿಗೆ ಪ್ರಿಯವಾದ ಸಂಗೀತ ಪ್ರಕಾರ. ಆಕಾಶವಾಣಿಯಲ್ಲಿ ಉರ್ದು ವಾರ್ತೆಯನ್ನು ಕೇಳುತ್ತಾ ಅದರ ಕಡೆ ಒಲವನ್ನು ಬೆಳೆಸಿಕೊಂಡ ಅವರು ಮಿರ್ಝಾ ಗಾಲಿಬ್‍ನ ಗಜಲ್‍ಗಳನ್ನು ಕೇಳುತ್ತಾ ರಚನೆಗೂ ತೊಡಗಿದರು. ಎಂಟೂ ಭಾಷೆಗಳಲ್ಲಿ ಅವರು ಗಝಲ್‍ಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಅವರು ಬರೆದ ಗಝಲ್‍ಗಳ ಧ್ವನಿಸುರಳಿ ಕೂಡ ಬಂದಿದೆ. ಅದಕ್ಕೆ ಮಹೇಶ್ ಪ್ರೇಮಗೀತೆಗಳು ಎಂಬ ತಪ್ಪಾದ ಶೀರ್ಷಿಕೆಯನ್ನು ನೀಡಿದ್ದರು ಎಂದು ಪಿ.ಬಿ ಯಾವಾಗಲೂ ಪೇಚಾಡಿಕೊಳ್ಳುತ್ತಿದ್ದರು.

ಅವರ ಪ್ರಕಾರ “ಗಝಲ್‍ನಲ್ಲಿರುವ ಪ್ರೇಮ ಇಂದ್ರಿಯಗಮ್ಯವಾದದ್ದಲ್ಲ, ದೈವಿಕವಾದದ್ದು” ಒಂದು ಸಲ ಹೀಗಾಯಿತು; ಜೆಮಿನಿ ಗಣೇಶನ್ ಮತ್ತು ಪಿ.ಬಿ ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದರು. ಹಿಂದಿರುಗಿ ಮುಂಬೈಗೆ ಬಂದಾಗ ಆಗ ಅಲ್ಲಿ ದೂರದರ್ಶನದ ನಿರ್ದೇಶಕರಾಗಿದ್ದ ಪಿ.ಬಿ.ಕೃಷ್ಣಮೂರ್ತಿ “ಹೇಗೂ ಬಂದಿದ್ದೀರಿ ಕೆಲವು ಗಝಲ್‍ಗಳನ್ನು ಹಾಡಿಹೋಗಿ” ಎಂದರು. ಆದರೆ ಅಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದವರಿಗೆ ಪಿ.ಬಿ ಮಹತ್ವ ಗೊತ್ತಿರಲಿಲ್ಲ. ದಕ್ಷಿಣ ಭಾರತದಿಂದ ಬಂದವರು ಎಂಬ ತಾತ್ಸಾರದಿಂದ “ಏನೋ ಕೆಲವು ಲೈಟ್ ಮ್ಯೂಸಿಕ್ ಹಾಡಿ ಹೋಗಿ” ಎಂದರು. ಪಿ.ಬಿ ಪ್ರತಿಕ್ರಿಯಿಸದೆ ಸ್ಟೂಡಿಯೋಕ್ಕೆ ಹೋದವರೆ ಅವರದೇ ರಚನೆ “ರೋಜ್ ಹಂ” ಹಾಡಲು ಆರಂಭಿಸಿದರು. ಗಾಜಿನ ಬಾಗಿಲಿನಿಂದ ಆಚೆಗೆ ಕುಳಿತವರ ಬದಲಾಗುತ್ತಿದ್ದ ಮುಖಭಾವವನ್ನು ಗುರುತಿಸ ಬಹುದಾಗಿತ್ತು. ಪಿ.ಬಿ ಹೊರಬಂದ ಕೂಡಲೇ ಅವರ ಕಾಲಿಗೆ ಬಿದ್ದ ಆ ಅಧಿಕಾರಿ “ಕ್ಷಮಿಸಿ ದಕ್ಷಿಣ ಭಾರತದವರು ಇಷ್ಟು ಸೊಗಸಾಗಿ ಗಝಲ್ ಹಾಡಬಲ್ಲರು ಎಂದು ನಾವು ಊಹಿಸಿಯೂ ಇರಲಿಲ್ಲ” ಎಂದು ಇನ್ನೂ 8-10 ಗಝಲ್‍ಗಳನ್ನು ಪಿ.ಬಿಯವರಿಂದ ಹಾಡಿಸಿದರು.

* ಚಿಕ್ಕ ವಯಸ್ಸಿನಿಂದಲೂ ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಅವರ ಹಾಡುಗಳು ಎಂದರೆ ಪಂಚಪ್ರಾಣ. ಅವರ ಜೊತೆ ಯುಗಳಗೀತೆಯನ್ನು ಹಾಡುವ ಅವಕಾಶ ಸಿಕ್ಕಿದ್ದು ಪಿ.ಬಿ. ಅವರ ವೃತ್ತಿ ಜೀವನದ ರೋಮಾಂಚಕ ನೆನಪು. ಮೈಭೀ ಲಡಕೀ ಹೂಂ ಚಿತ್ರದಲ್ಲಿ ಅವರು ಲತಾ ಮಂಗೇಶ್ಕರ್ ಜೊತೆ ಯುಗಳ ಗೀತೆ ಹಾಡಿದರು. ಲತಾಜೀ ಕೂಡ ಇವರ ಗಾಯನವನ್ನು ಇಷ್ಟಪಟ್ಟಿದ್ದು ಸಹಜವಾಗೇ ಆನಂದವನ್ನು ತಂದಿತ್ತು. ಹಿಂದಿಯಲ್ಲಿಯೂ ಪಿ.ಬಿ.ಎಸ್ ಅವರಿಗೆ ಹಲವಾರು ಅವಕಾಶಗಳು ಸಿಕ್ಕಿದ್ದವು. ಗುಣಮಟ್ಟದ ಕುರಿತು ಎಂದೂ ರಾಜಿಗೆ ಸಿದ್ದರಾಗದ ಪಿ.ಬಿ.ಎಸ್. ಒಪ್ಪಿಕೊಂಡಿದ್ದಕ್ಕಿಂತ ತಿರಸ್ಕರಿಸಿದ್ದೇ ಹೆಚ್ಚು. “ಟೊಪ್ಪಿವಾಲನಿಗೆ ಅಹಂಕಾರ ಹೆಚ್ಚು” ಎಂದು ಮುಂಬೈ ಮಂದಿ ಮಾತನಾಡಿಕೊಂಡರು. ಇಂದು ಪಿ.ಬಿ.ಎಸ್.ಅವಕಾಶ ವಂಚಿತ ಎಂಬ ಮಾತುಗಳು ಬಂದಾಗ ಅವರು ಇದನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಪಿ.ಬಿ. ಶ್ರೀನಿವಾಸ್ ಅವರನ್ನು ನಾವು ಟೋಪಿ ಇಲ್ಲದೆ ನೋಡಿದ್ದೇ ಇಲ್ಲ. ಇದಕ್ಕೆ ಕಾರಣವೇನು ಎಂದು ಕೇಳಿದಾಗ ಪಿ.ಬಿ.ಎಸ್  “ವಿಶೇಷ ಕಾರಣವೇನಿಲ್ಲ ಛಳಿಗೆ ಎಂದು ಆರಂಭದಲ್ಲಿ ಟೋಪಿ ಹಾಕುತ್ತಿದ್ದೆ, ಕ್ರಮೇಣ ಅದೇ ಅಭ್ಯಾಸವಾಯಿತು. ಬಿಳಿ ಗೆರೆ ಇದ್ದ ಕಪ್ಪು ಟೋಪಿಯನ್ನು ಆರ್ಡರ್ ಮಾಡಿ ತರಿಸಲಾರಂಭಿಸಿದೆ, ಅದೇ ನನ್ನ ಗುರುತು ಕೂಡ ಆಗಿಬಿಟ್ಟಿತು.” ಎಂದಿದ್ದರು. ತಮ್ಮ ತಂದೆ ನಿಧನರಾದ ನಂತರ ಪಿ.ಬಿ.ಎಸ್. ಟೋಪಿ ಬಿಟ್ಟು ಪೇಟ ಧರಿಸಲಾರಂಭಿಸಿದರು. ಅದರಲ್ಲೂ ಮೈಸೂರು ಪೇಟ ಅವರಿಗೆ ವಿಶೇಷ ಮೆರುಗನ್ನು ನೀಡಿತ್ತು.

* ಪಿ.ಬಿ. ಶ್ರೀನಿವಾಸ್ ಅವರ ತಾಯಿ ಶೇಷಗಿರಿಯಮ್ಮ ತುಂಬಾ ಸುಮಧುರವಾಗಿ ಹಾಡುತ್ತಿದ್ದರು. ಗಾಯಕರಾಗಲು ಅವರಿಗೆ ತಾಯಿಯದೇ ಪ್ರೇರಣೆ. ಕಷ್ಟಕಾಲದಲ್ಲಿ ಸದಾ ಬೆಂಬಲವಾಗಿ ನಿಂತ ತಮ್ಮ ತಾಯಿ ಎಂದರೆ ಪಿ.ಬಿ.ಎಸ್ ಅವರಿಗೆ ಅಚ್ಚುಮೆಚ್ಚು. ಆಕೆ ನನ್ನ ದೇವತೆ ಎನ್ನುವಷ್ಟು ಭಾವುಕತೆ. ತಾಯಿಯವರಿಗೆ ಇದ್ದ ದೊಡ್ಡ ಆಸೆ ಎಂದರೆ ತನ್ನ ಮಗಳ ಮದುವೆ ಬಂಧು ಮಿತ್ರರು, ನೆರೆಹೊರೆಯವರು ಬೆರಗಾಗುವಂತೆ ಆದ್ದೂರಿಯಾಗಿ ನಡೆಯಬೇಕು ಎನ್ನುವುದು. ಅದರಂತೆ ಪಿ.ಬಿ.ಎಸ್ ತಮ್ಮ ತಂಗಿಯ ಮದುವೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಿದರು. ಇದರಿಂದ ಆನಂದತುದಲಿತರಾದ ಅವರ ತಾಯಿ “ತಂಗಿ ಮದುವೆ ಮಾಡಲು ಎಷ್ಟೊಂದು ಖರ್ಚು ಮಾಡಿದ್ದೀಯ. ನಿನಗೂ ಸಂಸಾರವಿದೆ. ಮಕ್ಕಳಿದ್ದಾರೆ. ಅವರ ಭವಿಷ್ಯಕ್ಕೆ ಹಣ ಬೇಕಾಗುತ್ತದೆ. ನನ್ನ ತೃಪ್ತಿಗೆ ಇಷ್ಟೊಂದು ಖರ್ಚು ಮಾಡಿದ ನೀನು ನನಗೆ ಇನ್ನೇನು ಮಾಡುವುದು ಬೇಕಾಗಿಲ್ಲ. ನಾನು ಹೋದ ಮೇಲೆ ಕೂಡ ಅಪರಕ್ಕೆ ಎಂದು ಖರ್ಚು ಮಾಡಬೇಡ ಬದಲಾಗಿ ನನ್ನ ನೆನಪಿಗೆ ಹತ್ತಾರು ಕಾಲ ಉಳಿಯುವಂತಹ ಹಾಡನ್ನು ಹಾಡು ಎಂದಿದ್ದರು.

ಕಾಲ ಉರಳಿ ಅಂತಹ ಸಂದರ್ಭವೂ ಬಂದಿತು. ಪಿ.ಬಿ.ಶ್ರೀನಿವಾಸ್ ಅವರ ತಾಯಿ ನಿಧನರಾಗಿ ಕುಟುಂಬವೆಲ್ಲಾ ಶೋಕದಲ್ಲಿ ಮುಳುಗಿರುವಾಗ ಗೆಳೆಯ ಆರ್.ಎನ್.ಜಯಗೋಪಾಲ್ ಅವರ ಫೋನ್ ಬಂದಿತು. ವಿಷಯ ಗೊತ್ತಿಲ್ಲದ ಅವರು “ಹೀಗೆ ಒಂದು ಹಾಡಿನ ಧ್ವನಿಮುದ್ರಣ ತುರ್ತಾಗಿ ಆಗಬೇಕಿತ್ತು ಬರುತ್ತೀಯಾ” ಎಂದು ಕೇಳಿದರು. ದುಃಖದಲ್ಲಿ ಮುಳುಗಿ ಹೋಗಿದ್ದರೂ ಪಿ.ಬಿ.ಎಸ್ ಅವರಿಗೆ ತಾಯಿಯ ಮಾತು ನೆನಪಾಯಿತು “ಈಗ ತಾನೆ ನಮ್ಮ ತಾಯಿ ತೀರಿಕೊಂಡರು. ದಹನ ಕ್ರಿಯೆ ಮುಗಿಸಿದ ನಂತರ ನೇರವಾಗಿ ಸ್ಟೂಡಿಯೋಕ್ಕೆ ಬರುತ್ತೇನೆ” ಎಂದರು. ಆಗ ಜಯಗೋಪಾಲ್ ಅಪ್ರತಿಭರಾಗಿ “ವಿಷಯ ಗೊತ್ತಿರಲಿಲ್ಲ, ಪರವಾಗಿಲ್ಲ ಬಿಡು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇನೆ” ಎಂದರೂ ಪಿ.ಬಿ ಒಪ್ಪಲಿಲ್ಲ. ಅದರಂತೆ ದಹನಕ್ರಿಯೆ ಮುಗಿಯುತ್ತಿದ್ದಂತೆ ಸ್ಟೂಡಿಯೋಕ್ಕೆ ಬಂದರು. ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಹಾಡಿದರು. ಆ ಗೀತೆಯೇ “ಸೊಸೆ ತಂದ ಸೌಭಾಗ್ಯ” ಚಿತ್ರದ ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ. ಈ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಅಕ್ಷರಶಃ ಕಣ್ಣೀರಿಡುತ್ತಿದ್ದ ಪಿ.ಬಿ.ಶ್ರೀನಿವಾಸ್ “ಅಮ್ಮನ ಆಸೆಯಂತೆ ಆ ಹಾಡು ಹತ್ತಾರು ವರ್ಷ ಉಳಿದುಕೊಂಡಿತು” ಎಂದು ಭಾವುಕರಾಗುತ್ತಿದ್ದರು.

* ಪಿ.ಬಿ.ಶ್ರೀನಿವಾಸ್ ಅವರಿಗೆ ಕಲ್ಯಾಣಿ, ಮೋಹನ, ಮತ್ತು ಅಭೇರಿ ರಾಗಗಳು ಎಂದರೆ ಬಹುಪ್ರಿಯ. ಈ ರಾಗದಲ್ಲಿ ನನಗೆ ಹಾಡಲು ತುಂಬಾ ಒಳ್ಳೆಯ ಗೀತೆಗಳು ದೊರೆತಿವೆ ಎಂದು ಅವರು ಸದಾ ಹೇಳುತ್ತಿದ್ದರು. ಕಲ್ಯಾಣಿಯಲ್ಲಿ ಅವರು ಹಾಡಿದ ಹಾಯಾಗಿದೆ (ತಾಯಿದೇವರು) ನುಡಿಮನ ಶಿವಗುಣ (ಸ್ವರ್ಣಗೌರಿ) ಕವಿಯ ಮಧುರ ಕಲ್ಪನ (ತ್ರಿವೇಣಿ) ಪ್ರಸಿದ್ದವಾದ ಗೀತೆಗಳು. ವೈಯಕ್ತಿಕವಾಗಿ ನನಗೆ ಅವರು ಕಲ್ಯಾಣಿಯಲ್ಲಿ ಹಾಡಿದ ಗೀತೆಗಳಲ್ಲಿ ತಾರೆ ಸಾವಿರ ಸೇರಿ (ಮಮತೆ) ಬಲು ಪ್ರಿಯ. ಅದರಲ್ಲಿ ಕಲ್ಯಾಣಿಯ ಸಹಜಗುಣಕ್ಕೆ ಹೊಂದದ ನಿಷಾದವನ್ನು ಅವರು ಮಧುರತೆ ಬೆರೆಸಿ ಬಳಸಿಕೊಂಡಿರುವ ಕ್ರಮ ಪ್ರಯೋಗಶೀಲವೂ ಆಗಿದೆ. ಮೋಹನದಲ್ಲಿ ಬಂದ ಅಮೋಘ ಗೀತೆಗಳಲ್ಲಿ ಬಹುಪಾಲು ಅವರು ಹಾಡಿರುವಂತಹವುಗಳೇ ಜಯತು ಜಯವಿಠಲ (ಸಂತ ತುಕಾರಾಂ), ಹರಿನಾಮವೇ ಚಂದ (ಭಕ್ತ ಕುಂಬಾರ) ನಾವಾಡುವ ನುಡಿಯೇ (ಗಂಧದ ಗುಡಿ) ಒಂದೊಂದೂ ಮೇರುಗೀತೆಗಳೇ.

ಮಂತ್ರಾಲಯ ಮಹಾತ್ಮೆ ಚಿತ್ರದ ಇಂದು ಎನಗೆ ಗೋವಿಂದ ಮೋಹನದಲ್ಲಿ ಆರಂಭವಾಗಿ ನಟಭೈರವಿಯಲ್ಲಿ ಬೆಳೆದು ರಂಜನಿಯಲ್ಲಿ ಸಂಚಾರ ಮಾಡಿ ಮತ್ತೆ ಮೋಹನವನ್ನೇ ಸೇರುವ ವಿನೂತನ ಪ್ರಯೋಗ. ಇದರಂತೆ ದೈವಿಕ ರಾಗವೆಂದೇ ಪ್ರಸಿದ್ದವಾಗಿರುವ ಅಭೇರಿಯಲ್ಲಿ ಜಗದೀಶನಾಡುವ (ಶ್ರೀರಾಮಾಂಜುನೇಯ ಯುದ್ಧ), ಒಲುಮೆಯ ಹೂವೆ (ಪುನರ್ಜನ್ಮ), ಬಾರೇ ಬಾರೇ ಚಂದದ ಚೆಲುವಿನ ತಾರೆ (ನಾಗರ ಹಾವು), ನಗುನಗುತಾ ನಲೀ ನಲೀ (ಬಂಗಾರದ ಮನುಷ್ಯ) ಮೊದಲಾದ ಸುಂದರ ಗೀತೆಗಳನ್ನು ಅವರು ಹಾಡಿದ್ದಾರೆ. ಈ ರಾಗದಲ್ಲಿನ “ಪಂಚಮ ವೇದ ಪ್ರೇಮದ ನಾದ” (ಗೆಜ್ಜೆ ಪೂಜೆ) ಗೀತೆಯಲ್ಲಿ ಚತಶ್ರುತ ಧೈವತದ ಬದಲು ಶುದ್ದ ಧೈವತವನ್ನು ಬಳಸುವ ವಿಭಿನ್ನ ಪ್ರಯೋಗವನ್ನು ವಿಜಯಭಾಸ್ಕರ್ ಮಾಡಿದ್ದಾರೆ. ಇದೇ ರಾಗದಲ್ಲಿನ ದಾರಿ ತಪ್ಪಿದ ಮಗ ಚಿತ್ರದ “ಕಣ್ಣಂಚಿನ ಈ ಮಾತಲಿ” ಗೀತೆಯಲ್ಲಿ ಪಟದೀಪ್ ರಾಗದ ಕೈಕಯಿ ನಿಷಾದದ ಪ್ರಯೋಗವಿದೆ. ಈ ವಿಜಾತಿ ಸ್ವರಪ್ರಯೋಗವನ್ನು ಪಿ.ಬಿ. ಶ್ರೀನಿವಾಸ್ ಸಹಜವೆನ್ನುವಂತೆ ಹಾಡಿದ್ದಾರೆ. ಕನ್ನಡದಲ್ಲಿ ಶುದ್ದರಾಗದ ನೆಲೆಯಲ್ಲಿ ಸಂಚಾರ ಮಾಡುವ ಗೀತೆಗಳಲ್ಲಿ ಹೆಚ್ಚಿನವು ಪಿ.ಬಿ. ಶ್ರೀನಿವಾಸ್ ಹಾಡಿರುವಂತಹವುಗಳೇ. ನಾನೇ ಎಂಬ ಭಾವ ನಾಶವಾಯಿತು (ಶಿವರಂಜಿನಿ-ದೇವರದುಡ್ಡು), ಹಾಡೊಂದ ಹಾಡುವೆ (ಮಧ್ಯಮಾವತಿ_ನಾಂದಿ), ಆಗದು ಎಂದು (ಸಿಂಧು ಭೈರವಿ-ಬಂಗಾರದ ಮನುಷ್ಯ) ತಕ್ಷಣ ನೆನಪಾಗುತ್ತಿರುವ ಉದಾಹರಣೆಗಳು.

PB Sreenivas Birthday

ಪಿ. ಬಿ. ಶ್ರೀನಿವಾಸ್

ಫೆಬ್ರವರಿ 23ರಂದು ನಿರೂಪಕಿ ಅಪರ್ಣ ಪೋನ್ ಮಾಡಿದರು. ನಾಳೆ ಪಿ.ಬಿ. ಶ್ರೀನಿವಾಸ್ ಬರುತ್ತಿದ್ದಾರೆ. ಪ್ರೆಸ್‍ಕ್ಲಬ್‍ನಲ್ಲಿ ಅವರಿಗೆ ಸನ್ಮಾನ ನಾನು ಕಾರ್ಯಕ್ರಮ ನಿರ್ವಹಣೆ ಮಾಡಬೇಕು ಅವರ ಬಗ್ಗೆ ಒಂದಿಷ್ಟು ವಿವರಗಳು ಬೇಕು ಎಂದರು. ಒಂದಿಷ್ಟು ಅವರ ಬಗ್ಗೆ ನೆನಪುಗಳನ್ನು ಹೆಕ್ಕಿಕೊಂಡೆ. ಅವತ್ತೆಲ್ಲಾ ಅವರ ಗೀತೆಗಳೇ ಕಾಡುತ್ತಿದ್ದವು. ಮರುದಿನ ಏನೋ ಅನ್ನಿಸಿದಂತೆ ಮೌರ್ಯ ಹೋಟಲ್‍ಗೆ ಪೋನ್ ಮಾಡಿ ಪಿ.ಬಿ.ಎಸ್. ಬಂದಿದ್ದಾರಾ ಎಂದು ಕೇಳಿದೆ. ನಿರೀಕ್ಷೆಯಂತೆ ಬಂದಿದ್ದರು. ಭೇಟಿ ಮಾಡಿದೆ. ಆಗಲೇ ಮೇ7ರ ಕಾರ್ಯಕ್ರಮದ ಬಗ್ಗೆ ಅವರು ಹೇಳಿದ್ದರು.  ಆದರೆ ದಿನಗಳು ಉರುಳುತ್ತಿದ್ದರೂ ಕಾರ್ಯಕ್ರಮದ ಬಗ್ಗೆ ಎಲ್ಲೂ ಮಾಹಿತಿ ಬರದಿದ್ದರಿಂದ ಏಪ್ರಿಲ್ ಆರರಂದು ಅವರಿಗೆ ಪೋನ್ ಮಾಡಿದೆ. ಮಗ ನಂದಕಿಶೋರ್ ಪೋನ್ ತೆಗೆದುಕೊಂಡವರು ಕಾರ್ಯಕ್ರಮವನ್ನು ಖಚಿತ ಪಡಿಸಿದರು. ಹತ್ತು ನಿಮಿಷಕ್ಕೆಲ್ಲಾ ಪಿ.ಬಿ.ಎಸ್ ಅವರೇ ಫೋನ್ ಮಾಡಿದರು. ಹಲವು ವಿಷಯಗಳನ್ನು ಮಾತನಾಡಿದರು. ಮುಖ್ಯವಾಗಿ ಭಾರತೀಯ ಚಿತ್ರರಂಗದ ಶತಮಾನೋತ್ಸವದ ಬಗ್ಗೆ ನಮ್ಮಲ್ಲಿ ಇತಿಹಾಸದ ಕುರಿತು ಇರುವ ಅವಜ್ಞೆಯ ಬಗ್ಗೆ, ಸಾಂಸ್ಕೃತಿಕ ಗ್ರಹಿಕೆಗಳ ಕೊರತೆಯ ಬಗ್ಗೆ, ಇವನ್ನೆಲ್ಲಾ ಲೇಖನ ಮಾಡಲೆ ಎಂದು ಕೇಳಿದೆ, ಆಯಿತು ಎಂದರು. ಅದು ಏಪ್ರಿಲ್ 11ರ ವಿಜಯವಾಣಿ ಸಂಚಿಕೆಯಲ್ಲಿ ಪ್ರಕಟವಾಯಿತು. ಅವತ್ತು ಚಾಂದ್ರಮಾನ ಯುಗಾದಿ, ಬೆಳಿಗ್ಗೆಗೇ ಲೇಖನದ ಲಿಂಕ್ ಕಳುಹಿಸಿ ನಂದಕಿಶೋರ್ ಅವರಿಗೆ ವಿಷಯ ತಿಳಿಸಿದೆ. ಸಂಜೆಗೆ ಪಿ.ಬಿ.ಎಸ್. ಪೋನ್ ಮಾಡಿದರು. ಯುಗಾದಿ ಶುಭಾಶಯ ಹೇಳಿದರು. ಹಲವು ವಿಷಯಗಳನ್ನು ಮಾತನಾಡಿದರು. “ಇಲ್ಲೆಲ್ಲಾ ಏಪ್ರಿಲ್ 14ರಂದು ಯುಗಾದಿ ಅವತ್ತು ಇನ್ನೊಮ್ಮೆ ಶುಭಾಶಯ ಹೇಳುವೆ” ಎಂದು ಜೋಕ್ ಮಾಡಿದರು.

ಅವರು ಹೇಳಿದ್ದು ತಮಾಷೆಗೆ ಎಂದು ಗೊತ್ತಿದ್ದರೂ ಏಪ್ರಿಲ್ 14ರಂದು ಅವರು ಪೋನ್ ಮಾಡಬಹುದೇನೋ ಎಂದು ಪದೇ ಪದೇ ಮೊಬೈಲ್ ನೋಡಿಕೊಳ್ಳುತ್ತಿದ್ದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವರ ಮೊಬೈಲ್‍ನಿಂದ ಫೋನ್ ಬಂದಿತು. ಅಳಿಯ ಮುರುಳಿ ಮಾತನಾಡಿ “ಮಾವ ಹೋಗಿಬಿಟ್ಟರು” ಎಂದರು. ಇದೆಂತಹ ಶಾಕ್.. ಸತ್ಯವನ್ನು ಅರಗಿಸಿಕೊಳ್ಳಲಾರದೆ ಕೆ.ಎಸ್.ಎಲ್.ಸ್ವಾಮಿಯವರಿಗೆ ಪೋನ್ ಮಾಡಿದೆ. ವಿಧಿ ನಮ್ಮ ಪ್ರಯತ್ನವನ್ನು ಸುಳ್ಳಾಗಿಸಿತ್ತು. ಪಿ.ಬಿ.ಶ್ರೀನಿವಾಸ್ ಅಮರ ಗಾನಲೋಕಕ್ಕೆ ಹೊರಟು ಬಿಟ್ಟಿದ್ದರು ಉಳಿಸಿ ಕಣ್ಣನೀರ ನಮ್ಮ ಪಾಲಿಗೆ!

ಇದನ್ನೂ ಓದಿ : P Kalinga Rao‘s Birthday : ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್!’ 

Published On - 3:19 pm, Wed, 22 September 21

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ