ಏಸೊಂದು ಮುದವಿತ್ತು : ಮುಂದಿನ ಜನ್ಮ ಅಂತೊಂದಿದ್ದರೆ ಪ್ರೊಜೆಕ್ಟರ್ ಮ್ಯಾನ್ ಆಗುವೆ

‘ಕಣ್ಣಾ ಮಾವನ ಜೊತೆ ಭಾನುವಾರ ಚಿಕ್ಕಪೇಟೆಯಲ್ಲಿ ನಡೆಯುತ್ತಿದ ಸಂಡೇ ಬಜಾರ್ (ಚೋರ್ ಬಜಾರ್) ಹೋಗಿ ಹುಡುಕಿ ಚೆನ್ನಾಗಿ ಚೌಕಾಸಿ ಮಾಡಿ ಸಿನಿಮಾ ರೋಲ್ ತರಲು ಪ್ರಾರಂಭಿಸಿದೆ. ನನಗೆ ಅವರಿವರು ಕೊಡುತ್ತಿದ್ದ ಎಲ್ಲಾ ಹಣವನ್ನೂ ಒಟ್ಟುಗೂಡಿಸಿ  ಹೊಸಾ ಹೊಸಾ ಫಿಲ್ಮ್ ರೋಲ್ ತರುವುದರಲ್ಲೇ ಖರ್ಚು ಮಾಡುತ್ತಿದೆ. ನಾನು ದೊಡ್ಡವನಾದ ಮೇಲೆ ಸಿನಿಮಾ ಥಿಯೇಟರಿನಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದೆಲ್ಲಾ ಹೇಳುತ್ತಿದೆ.’ ಶ್ರೀಕಂಠ ಬಾಳಗಂಚಿ

ಏಸೊಂದು ಮುದವಿತ್ತು : ಮುಂದಿನ ಜನ್ಮ ಅಂತೊಂದಿದ್ದರೆ ಪ್ರೊಜೆಕ್ಟರ್ ಮ್ಯಾನ್ ಆಗುವೆ
ಲೇಖಕ ಶ್ರೀಕಂಠ ಬಿ. ಎಸ್.
Follow us
ಶ್ರೀದೇವಿ ಕಳಸದ
|

Updated on:May 16, 2021 | 3:54 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಶ್ರೀಕಂಠ ಬಾಳಗಂಚಿ ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿಯವರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ ಮತ್ತು ಅಂಕಣಕಾರು. ಬಾಲ್ಯದಿಂದಲೂ ಆವರಿಸಿರುವ ಪ್ರೊಜೆಕ್ಟರ್​ ಹುಚ್ಚನ್ನು ಇಲ್ಲಿ ಇಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

*

ಬೇಸಿಗೆಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದೇ ತಡಾ ಗಂಟುಮೂಟೆ ಕಟ್ಟಿಕೊಂಡು ತಾತನ ಮನೆಗೆ ಹೋಗುವುದು ನಮ್ಮ ಮನೆಯ ವಾಡಿಕೆ. ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆಯೆಂದರೆ ಅದೇ ಸಮಯದಲ್ಲಿ ಎರಡು ವಾರಗಳ ಕಾಲ ನಡೆಯುತ್ತಿದ್ದ ಊರ ಹಬ್ಬ, ಜಾತ್ರೆ, ದೇವಸ್ಥಾನದ ಮುಂದಿದ್ದ ಕಲ್ಯಾಣಿ, ಅಜ್ಜಿ ಮಾಡಿಕೊಡುತ್ತಿದ್ದ ಕೆಂಡ ರೊಟ್ಟಿ ಗಟ್ಟಿ ಚಟ್ನಿ ಮತ್ತು ಬೆಣ್ಣೆ, ತಾತನ ತೊಡೆ ಮೇಲೆ ಕುಳಿತುಕೊಂಡು ಕೇಳುತ್ತಿದ್ದ ಕಥೆಗಳಲ್ಲದೇ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ಪ್ರೊಜೆಕ್ಷನ್.

ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು ನೂರು ಕುಟುಂಬ ಇರುವಂತಹ ಸಣ್ಣ ಹಳ್ಳಿಯಾದರು, ಗುರು ವಿದ್ಯಾರಣ್ಯರು ಹುಟ್ಟಿದ ಊರು ಎಂಬ ಖ್ಯಾತಿ ಇದ್ದರೆ, ಅಷ್ಟು ಸಣ್ಣ ಹಳ್ಳಿಯಲ್ಲೇ ಸುಮಾರು ಹತ್ತು ಹದಿನೈದು ದೇವಸ್ಥಾನಗಳಿವೆ. ಗ್ರಾಮದೇವತೆ ಹೊನ್ನಾದೇವಿ ಮತ್ತು ನಮ್ಮ ಆರಾಧ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ಪ್ರಮುಖವಾದವು.

ಇಂತಹ ಐತಿಹಾಸಿಕ ಊರಿಗೆ ರಜೆ ಬಂದ ಕೂಡಲೇ ಎಲ್ಲಾ ಹುಡುಗರೂ ಬಂದು ಸೇರುತ್ತಿದ್ದೆವು.  ನಾನು ಊರಿಗೆ ಬರುತ್ತೇನೆ ಅಂತ ಕಾಗದ ಬರೆಯುತ್ತಿದ್ದಂತೆಯೇ ನಮ್ಮಜ್ಜಿ ಬಹಳ ಚುರುಕಾಗಿ ನಮ್ಮ ಅಕ್ಕಪಕ್ಕದ ಸಂಬಂಧಿಕರ ಮನೆಯವರೆಲ್ಲರಿಗೂ ಮೊದಲೇ ಹೇಳಿಕೊಟ್ಟು ದೇವಸ್ಥಾನದ ಕಲ್ಯಾಣಿ ಅಥವಾ ಕೆರೆಯಲ್ಲಿ ಹಬ್ಬದ ಸಮಯ ಬಿಟ್ಟು ಉಳಿದ ಸಮಯ ಈಜಾಡಿದರೆ ದಂಡ ಹಾಕ್ತಾರಂತೆ ಅಂತ ಹೆದರಿಸಿ ಬಿಡುತ್ತಿದ್ದರು. ಆಗೆಲ್ಲಾ ನಮಗೆ ಪಂಚಾಯ್ತಿ ಕಟ್ಟೆಯಲ್ಲಿ ನಿಂತು ದಂಡ ಹಾಕಿಸಿಕೊಳ್ಳುವುದು ಎಂದರೆ ಅವಮಾನ  ಎಂದು ತಿಳಿದಿದ್ದ ಕಾರಣ  ಬಹಳವಾಗಿ ಅಂಜುತ್ತಿದ್ದೆವು. ಬೆಳಿಗ್ಗೆ ಸ್ವಲ್ಪ ಹೊತ್ತು ದೇವಸ್ಥಾನದ ಪೂಜೆ, ಹಸುವನ್ನು  ಮೇಯಲು ಹೊಲಕ್ಕೆ ಬಿಟ್ಟು ಬಂದ ಮೇಲೆ ಸಂಜೆಯವರೆಗೂ ಬೇಸರ ಕಳೆಯಲು  ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ, ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದರೂ ನಮಗಿಂತ ಐದಾರು ವರ್ಷಗಳಷ್ಟು ದೊಡ್ಡವನಾದ ಸೋಮಶೇಖರ ನಮ್ಮೆಲ್ಲರ ಪ್ರೀತಿಯ ಸೋಮ,  ಏ ಬನ್ರೋ ನಿಮಗೆಲ್ಲಾ ಸಿನಿಮಾ ತೋರಿಸ್ತೀನಿ ಎಂದು ಹೇಳಿದಾಗ ನಮಗೆಲ್ಲಾ ಕುತೂಹಲ.

sharanu mannige

ಸೌಜನ್ಯ : ಅಂತರ್ಜಾಲ

ಅಜ್ಜೀ, ಸೋಮನ ಮನೆಗೆ ಹೋಗಿ ಆಟ ಆಡ್ಕೋಂಡ್  ಬರ್ತೀನಿ  ಎಂದಾಗ ಹೇ ಹುಷಾರು, ಕೊಳ ಮತ್ತು ಕೆರೆ ಕಡೆ ಹೋದ್ರೇ ದಂಡ ಹಾಕ್ತಾರೆ ಅಂತಾ ಗೊತ್ತಲ್ಲಾ ಎಂದು ಮತ್ತೊಮ್ಮೆ ಎಚ್ಚರಿಸಲು ಮರೆಯುತ್ತಿರಲಿಲ್ಲ. ಇಲ್ಲಾ ಅಜ್ಜೀ ಹೊರಗೆಲ್ಲೂ ಹೋಗೋದಿಲ್ಲ ಆವರ ಮನೆಯಲ್ಲೇ ಆಡಿಕೊಳ್ತೀವಿ ಎಂದು ಹೇಳಿ  ಅವರ ಮನೆಗೆ ಹೋಗುವಷ್ಟರಲ್ಲಿ ಅದಾಗಲೇ ಹತ್ತಾರು ಹುಡುಗರು ಅಲ್ಲಿ ಸೇರಿರುತ್ತಿದ್ದರು. ಇಡೀ ಮನೆಯೆಲ್ಲಾ ಕತ್ತಲೆ. ಒಂದು ಮೂಲೆಯಲ್ಲಿ ಅವರಪ್ಪನ ಪಂಚೆಯನ್ನು ಕಟ್ಟಿರುತ್ತಿದ್ದ ಸೋಮ. ಮಟಮಟ ಮಧ್ಯಾಹ್ನದ ಬಿಸಿಲು ಅವರ ಮನೆಯ ಹೆಂಚಿನ ಸಂದಿಯಲ್ಲಿ ಇಣುಕುತ್ತಿದ್ದೇ ತಡ ಅದಕ್ಕೆ ಸರಿಯಾಗಿ ಒಂದು ಕನ್ನಡಿಯನ್ನು ಹಿಡಿದು ಅದರ ಬೆಳಕು ಪರದೆಯತ್ತ ಬೀಳುವಂತೆ ಮಾಡಿ ಅದರ ಮಧ್ಯೆ ಒಂದು ಬೂದುಕನ್ನಡಿ ಹಿಡಿದು ಆ ಬೂದುಗಣ್ಣಡಿಯ ಮುಂದೆ ಸಣ್ಣದಾದ ಫಿಲ್ಮ್ ಹಿಡಿದರೆ ಅದು ಪರದೆಯ ಮೇಲೆ ದೊಡ್ಡದಾಗಿ ಮೂಡಿದ್ದೇ ತಡ ನಮಗೆಲ್ಲರಿಗೂ ಆನಂದವೋ ಆನಂದ. ಎಲ್ಲರು ಜೋರಾಗಿ  ಕೂಗುತ್ತಾ ಚಪ್ಪಾಳೆ ತಟ್ಟಿ ಹರ್ಷೋದ್ಗಾರವನ್ನು ವ್ಯಕ್ತಪಡಿಸುತ್ತಿದ್ದೆವು.

ಹೀಗೆ ನಮ್ಮ ಸೋಮ ನನಗೆ ಮೊತ್ತ ಮೊದಲ ಬಾರಿಗೆ  ಸಿನಿಮಾ ಪ್ರೊಜೆಕ್ಷನ್ ಬಗ್ಗೆ ಗೀಳು ಹತ್ತಿಸಿದ.  ಊರಿನಲ್ಲಿ ಇರುವಷ್ಟು ದಿನವೂ  ಒಬ್ಬೊಬ್ಬರ ಮನೆಯಲ್ಲಿ ಇದೇ ರೀತಿಯ ಸಿನಿಮಾ ಪ್ರೊಜೆಕ್ಷನ್ ಮುಂದುವರೆಯುತ್ತಿತ್ತು. ಮೊದಲೆಲ್ಲಾ ಸಿನಿಮಾ ಪ್ರೇಕ್ಷಕನಾಗಿ ನೋಡುತ್ತಿದ್ದ ನಾನು ನಂತರದ ದಿನಗಳಲ್ಲಿ ಕನ್ನಡಿಯಲ್ಲಿ ಬೆಳಕು ಬಿಡುವುದು ಇಲ್ಲವೇ ಬೂದುಗಾಜು  ಹಿಡಿಯುವಷ್ಟರ ಮಟ್ಟಿಗೆ ಬೆಳೆದಿದ್ದೆ. ಉಳಿದೆಲ್ಲಾ ಕೆಲಸಗಳನ್ನು ಬೇರೆಯವ ಕೈಯ್ಯಲ್ಲಿ ಮಾಡಿಸುತ್ತಿದ್ದರೂ ಫಿಲ್ಮ್ ಹಿಡಿಯುತ್ತಿದ್ದದ್ದು ಮಾತ್ರಾ Captain of the troupe ಸೋಮನೇ. ಎಷ್ಟು ಕೇಳಿದರೂ ಅದನ್ನು ಮಾತ್ರ ಅವನು ಬಿಟ್ಟು ಕೊಡುತ್ತಿರಲಿಲ್ಲವಾದ್ದರಿಂದ ಊರ ಹಬ್ಬದ ಜಾತ್ರೆ ಖರ್ಚಿಗೆ ಕೊಟ್ಟ ಹಣದಲ್ಲಿ ೫೦ ಪೈಸಾ ಕೊಟ್ಟು ಸಣ್ಣ ಬೂದುಗಾಜನ್ನು ಕೊಂಡುಕೊಂಡು ಕಡೆಗೆ ಸೋಮನನ್ನೇ ಕಾಡಿ ಬೇಡಿ ಕೆಲವು ಫಿಲ್ಮಗಳನ್ನು ಪಡೆದುಕೊಂಡು ನಮ್ಮ ಸ್ವತಃ ನಾನೇ  ನಮ್ಮ ಮನೆಯಲ್ಲಿ ಹುಡುಗರನ್ನು ಕೂಡಿ ಹಾಕಿಕೊಂಡು ಪ್ರೊಜೆಕ್ಷನ್ ಮಾಡುವಷ್ಟು ಬೆಳೆದು ಬಿಟ್ಟಿದ್ದೆ.

ಅದೇ ಸಮಯದಲ್ಲೇ ನಮ್ಮ ಊರ ಹಬ್ಬ ಮುಗಿಸಿಕೊಂಡು ತಾತಾ ಅಜ್ಜಿ ಜೊತೆ  ಕಾಶೀ, ಗಯಾ ಯಾತ್ರೆಗೆ  ಹೋಗಿದ್ದಾಗ ಕಾಶಿಯ ಮಾರುಕಟ್ಟೆಯಲ್ಲಿ  ಸಿನಿಮಾ ಪ್ರೊಜೆಕ್ಟರ್ ಒಂದನ್ನು ನೋಡಿ ಅಪ್ಪನಿಗೆ ಜೋತು ಬಿದ್ದು  ೮ ರೂಪಾಯಿಗೆ ಸಣ್ಣ ಪ್ರೊಜೆಕ್ಟರ್ ಖರೀದಿಸಿ,  ಕಾಶಿಯಲ್ಲಿ ನಾವು ಉಳಿದು ಕೊಂಡಿದ್ದ ಮನೆಯಲ್ಲಿಯೇ  ಅದನ್ನೊಮ್ಮೆ ಪರೀಕ್ಷಿಸಿಯೂ ನೋಡಿದ್ದೆ. ನನಗೋ ಬೇಗನೇ ಬೆಂಗಳೂರಿಗೆ ಬಂದು ನಮ್ಮ ಸ್ನೇಹಿರಿಗೆ ತೋರಿಸಿ ಹೀರೋ ಆಗಬೇಕು  ಎಂಬ ಹಂಬಲ.

ಬೆಂಗಳೂರಿಗೆ ಬಂದ ತಕ್ಶಣವೇ ಎಲ್ಲಾ ಗೆಳೆಯರನ್ನೂ ಕೂಡಿಸಿಕೊಂಡು  ಎಲ್ಲಾ ಬಾಗಿಲು ಕಿಟಕಿಗಳನ್ನು ಮುಚ್ಚಿ ಕತ್ತಲು ಕೋಣೆಯನ್ನು ಮಾಡಿ ಮತ್ತೆ ಅಪ್ಪನ ಪಂಚೆಯನ್ನೇ ಪರದೆಯಂತೆ ಕಟ್ಟಿ ಎಲ್ಲರಿಗೂ ಸಿನಿಮಾ ತೋರಿಸಿ ಭೇಷ್ ಎನಿಸಿಕೊಂಡಿದ್ದೆ. ಇದು ಎಲೆಕ್ಟ್ರಿಕಲ್ ಬಲ್ಚ್ ಮುಂದೆ ಬೂದು ಕನ್ನಡಿ ಜೋಡಿಸಿ ಅದರ ಮುಂದೆ ಫಿಲ್ಮ್ ಸ್ಲೈಡ್​ಗಳನ್ನು ಇಡುವ ವ್ಯವಸ್ಥೆ ಇತ್ತು. ಅರಂಭದಲ್ಲಿ ಪ್ರೊಜೆಕ್ಟರ್ ಜೊತೆ ಕೊಟ್ಟಿದ್ದ ಐದಾರು ಹಿಂದಿ ಸಿನಿಮಾದ ಸ್ಲೈಡ್ಗಳನ್ನೇ ತೋರಿಸಿ ತೋರಿಸಿ ಬೇಜಾರಾದ ನಂತರ ನಮ್ಮ ಚಿಕ್ಕಪ್ಪನ ತಮ್ಮ ಪೂರ್ಣಿಮಾ ಟಾಕೀಸಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಸಹಾಯದಿಂದ ಅವರ ಥಿಯೇಟರಿನಲ್ಲಿ ಕತ್ತರಿಸಿ ಬಿಸಾಡುತ್ತಿದ್ದ ಕನ್ನಡ, ತಮಿಳು ಸಿನಿಮಾದ ಫಿಲ್ಮ್ಗಳನ್ನು ಪಡೆದುಕೊಂಡು ನಾನೇ ಸಿಗರೇಟ್ ಪ್ಯಾಕನ್ನು ಕತ್ತರಿಸಿ ಅದರ ಮಧ್ಯೆ ಫಿಲ್ಮ್ ಇಟ್ಟು ನನ್ನದೇ ಆದ ಸ್ಲೈಡ್ ತಯಾರಿಸಿಕೊಂಡು ಹೊಸಾ ಹೊಸಾ ಚಿತ್ರಗಳನ್ನು ತೋರಿಸುತ್ತಿದ್ದೆ.

ಇದಾಗಿ ಕೆಲವು ತಿಂಗಳುಗಳ ನಂತರ ನಮ್ಮ ತಂದೆಯವರ ತಂಗಿ ಅರ್ಥಾತ್ ನಮ್ಮ ಅತ್ತೆಯ ಮನೆಗೆ ಎಂದು ಟಿ.ನರಸೀಪುರಕ್ಕೆ ಹೋಗಿದ್ದಾಗ ಅಲ್ಲಿ ನಮ್ಮತ್ತೆ ಮಗ ದತ್ತನ ಬಳಿ ಇದ್ದ ದೊಡ್ಡ ಪ್ರೊಜೆಕ್ಟರ್ ನನಗೆ ಬಹಳವಾಗಿ  ಇಷ್ಟವಾಗಿ ಹೋಯಿತು. ಅದುವರೆವಿಗೂ ನನ್ನ ಬಳಿ ಇದ್ದದ್ದು ಸ್ಟಿಲ್ ಪ್ರೊಜೆಕ್ಟರ್ ಆಗಿದ್ದರೆ ಇದು ಮೋಶನ್ ಪ್ರೊಜೆಕ್ಟರ್ ಆಗಿತ್ತು. ಇದೂ ಸಹಾ ಎಲೆಕ್ಟ್ರಿಕಲ್ ಬಲ್ಬು ಮುಂದೆ ಬೂದುಗನ್ನಡಿ ಇಟ್ಟು ಅದರ ಮುಂದೆ ಸಿನಿಮಾ ರೋಲ್ ಇಡುವಂತಹ ವ್ಯವಸ್ಥೆ ಇತ್ತು. ಮೇಲೊಂದು ರಾಟೆ ಕೆಳಗೊಂದು ರಾಟೆಯ ಮಧ್ಯೆ ಫಿಲ್ಮ್ ರೋಲ್ ಸಿಕ್ಕಿಸಿ ಒಂದು ಕೈಯಲ್ಲಿ ರಾಟೆಯನ್ನು ತಿರುಗಿಸುತ್ತಿದ್ದರೆ ಸಿನಿಮಾ ಮೋಷನ್ ಆಗುತ್ತಿತು. ಆಗಲೇ ನನಗೆ ಗೊತ್ತಾಗಿದ್ದು ಒಂದು ಚೂರು ಚಲನವಲನ ಮಾಡಿಸಲು ೨೪ ಫಿಲ್ಮ್ ರೋಲ್ ಆಗಬೇಕಿತ್ತು ಎಂದು. ಅವರ ಮನೆಯಲ್ಲಿ ಇದ್ದ ಎರಡೂ ದಿನಗಳು ಊಟ ತಿಂಡಿ ಎಲ್ಲವನ್ನೂ ಬಿಟ್ಟು ದತ್ತನ ರೂಮಿನಲ್ಲೇ ಪ್ರೊಜೆಕ್ಟರ್ ಜೊತೆಯೇ ಕಳೆದಿದ್ದೆ.

ಮತ್ತೆ ಬೆಂಗಳೂರಿಗೆ ಹಿಂದಿರುಗಿದ ನಂತರ ಆ ಬಾರಿಯ ನನ್ನ ಹುಟ್ಟಿದ ಹಬ್ಬಕ್ಕೆ ನನಗೆ ಬಟ್ಟೆ ಬೇಡ ಬೇರೆ ಯಾವುದೇ ಉಡಗೊರೆ ಬೇಡ. ನನಗೆ ದತ್ತನದೇ ರೀತಿಯ  ಮೂಷನ್ ಪ್ರೊಜೆಕ್ಟರೇ ಕೊಡಿಸಬೇಕೆಂದು ಅಮ್ಮನ ಸೆರಗು ಹಿಡಿದುಕೊಂಡು ಜಗ್ಗ ತೊಡಗಿದೆ. (ಅಪ್ಪನ ಬಗ್ಗೆ ಅತ್ಯಂತ ‘ಗೌರವ’ ಇದ್ದ ಕಾರಣ,  ಅಮ್ಮ ಬದುಕಿರುವವರೆಗೂ ನಾನು ಅಮ್ಮನ ಮಗನೇ ಅಗಿದ್ದೆ) ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ ಬೇಕಿದ್ರೇ ನಿಮ್ಮಪ್ಪನನ್ನೇ ನೀನೇ ಕೇಳು ಎಂದು ಅಮ್ಮಾ ಹೇಳಿದಾಗ, ನನಗೆ ಅದೆಲ್ಲಾ ಗೊತ್ತಿಲ್ಲಾ. ನೀವೇ  ಅಣ್ಣನಿಗೆ (ನಾವು ಅಪ್ಪನನ್ನು ಅಣ್ಣಾ ಎಂದೇ ಸಂಭೋದಿಸುತ್ತಿದ್ದೆವು) ಹೇಳಿ ಒಪ್ಪಿಸಿ ಕೊಡಿಸಬೇಕು ಎಂದು ದುಂಬಾಲು ಬಿದ್ದೆ.

Yesondu mudavittu

ಸೌಜನ್ಯ : ಅಂತರ್ಜಾಲ

ಅದೊಂದು ದಿನ ಅಮ್ಮಾ ಒಳ್ಳೆಯ ಮುಹೂರ್ತ ನೋಡಿ ರೀ, ನೋಡ್ರೀ ನಿಮ್ಮ ಮಗನ ಹುಟ್ಟು ಹಬ್ಬಕ್ಕೆ ಅದೇನೋ ಬೇಕೆಂತೆ ಎಂಬ ಪೀಠಿಕೆ ಹೇಳಿ ನನ್ನನ್ನು ಮಾತು ಮುಂದುವರೆಸಲು ಕಣ್ಸನ್ನೆ ಮಾಡಿದರು. ನಾನೋ ಅಳುಕುತ್ತಲೇ  ನನ್ನ ಮೋಷನ್ ಪ್ರೊಜೆಕ್ಟರ್ ಆಸೆ ಮುಂದಿಟ್ಟೆ. ಅದೆಲ್ಲಾ ಬೇಡ ಸುಮ್ಮನೇ ಓದು ಎಂದಾಗ. ಇಲ್ಲಾ ಅಣ್ಣಾ ನಾನು ಚೆನ್ನಾಗಿ ಓದ್ತೇನೆ ಎಂದು ಹೇಳಿ, ಅದಾದ ಮುಂದಿನ  ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮತ್ತೊಮ್ಮೆ ನೋಡಿ ಈ ಸಲಾ ಚೆನ್ನಾಗಿಯೇ ಮಾರ್ಕ್ಸ್ ತಗೊಂಡಿದ್ದೀನಿ ಈಗಲಾದರೂ ಕೊಡಿಸಿ ಎಂದು ದಂಬಾಲು ಬಿದ್ದೆ.  ಸರಿ ಎಂದು ಒಪ್ಪಿಕೊಂಡು ಅಂದಿನ ಕಾಲದಲ್ಲೇ ಸುಮಾರು ೩೦೦ ರೂಪಾಯಿಗಳಿಗೆ ಪ್ರೊಜೆಕ್ಟರ್ ಕೊಡಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು.

ಮತ್ತೆ ಗೆಳೆಯರನ್ನು ಕೂಡಿ ಹಾಕಿಕೊಂಡು ಈ ಬಾರಿ ಮೋಷನ್ ಸಿನಿಮಾ ತೋರಿಸಿದ್ದೆ. ಅದರ ಜೊತೆಗೆ ಬಂದ ಮೂರ್ನಾಲ್ಕು ರೀಲ್ಗಳನ್ನೇ ನೋಡಿ ನೋಡಿ ಬೇಸರವಾದಾಗ ನನ್ನ ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ಕಣ್ಣಾ ಮಾವನ ಜೊತೆ ಭಾನುವಾರ ಚಿಕ್ಕಪೇಟೆಯಲ್ಲಿ ನಡೆಯುತ್ತಿದ ಸಂಡೇ ಬಜಾರ್ (ಚೋರ್ ಬಜಾರ್) ಹೋಗಿ ಹುಡುಕೀ ಚೆನ್ನಾಗಿ ಚೌಕಾಸಿ ಮಾಡಿ ಸಿನಿಮಾ ರೋಲ್ ತರಲು ಪ್ರಾರಂಭಿಸಿದೆ. ನನಗೆ ಅವರಿವರು ಕೊಡುತ್ತಿದ್ದ ಎಲ್ಲಾ ಹಣವನ್ನೂ ಒಟ್ಟುಗೂಡಿಸಿ  ಹೊಸಾ ಹೊಸಾ ಫಿಲ್ಮ್ ರೋಲ್ ತರುವುದರಲ್ಲೇ ಖರ್ಚು ಮಾಡುತ್ತಿದೆ. ನಾನು ದೊಡ್ಡವನಾದ ಮೇಲೆ ಸಿನಿಮಾ ಥಿಯೇಟರಿನಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದೆಲ್ಲಾ ಹೇಳುತ್ತಿದೆ.

ಕಡೆಕಡೆಗೆ ಬಿಡುವು ಸಿಕ್ಕಾಗಲೆಲ್ಲಾ ಹುಡುಗರನ್ನು ಕೂಡಿ ಹಾಕಿಕೊಂಡು ಇದ್ದ ಸಣ್ಣ ಮನೆಯಲ್ಲೇ ಕತ್ತಲಲ್ಲಿ ಸಿನಿಮಾ ತೋರಿಸುತ್ತಿದ್ದ ಸಮಯದಲ್ಲೇ ಮನೆಯಲ್ಲಿ ಒಂದೊಂದೇ ಸಾಮಾನುಗಳು ಕಾಣದಂತೆ ಮಾಯಾವಾಗ ತೊಡಗಿದಾಗ ಅಮ್ಮಾ ಗದರಿಸತೊಡಗಿದವು. ಆರಂಭದಲ್ಲಿ ಅದನ್ನು ತಲೆಗೆ ಹಾಕಿಕೊಳ್ಳದಿದ್ದರೂ ನಂತರ ದೊಡ್ಡ ದೊಡ್ಡ ಸಾಮಾನುಗಳು ಕಾಣೆಯಾಗ ತೊಡಗಿದಾಗ ಇದ್ದವರು ಮೂರು ಕದ್ದವರು ಯಾರು ಎಂಬ ಪ್ರಶ್ನೆ ಮೂಡುವಂತಾದಾಗ ಅನಿವಾರ್ಯವಾಗಿ ನನ್ನ ಸಿನಿಮಾ ಪ್ರೊಜೆಕ್ಷನ್ ಬಿಡಬೇಕಾಯಿತು. ಅದೇ ಸಮಯದಲ್ಲೇ ನಮ್ಮ ಕಣ್ಣಾ ಮಾವ ನನಗೆ ಎಲೆಕ್ಟ್ರಾನಿಕ್ಸ್ ಮಾಡೆಲ್ ಮಾಡುವ ಗೀಳು ಹತ್ತಿಸಿದ ಪರಿಣಾಮ ಸದ್ದಿಲ್ಲದೇ ನನ್ನ ಸಿನಿಮಾ ಪ್ರೊಜೆಕ್ಟರ್ ಅಟ್ಟಕ್ಕೇರಿ ಧೂಳು ಕುಡಿಯತೊಡಗಿತು. ನಂತರದ ದಿನಗಳಲ್ಲಿ ಮನೆ ಖಾಲಿಮಾಡಿ ಬೇರೊಂದು ಮನೆಗೆ ಹೋಗುವಾಗ ನನಗೇ ಗೊತ್ತಿಲ್ಲದೇ ನನ್ನ ಪ್ರೊಜೆಕ್ಟರ್ ಗುಜರಿ ಸೇರುವ ಮುಖಾಂತರ ನಾನು ಥಿಯೇಟರ್​ನಲ್ಲಿ ಪ್ರೊಜೆಕ್ಟರ್ ಬಾಯ್ ಆಗುವ ಆಸೆ ಶಾಶ್ವತವಾಗಿ ಮುಚ್ಚಿಹೋಯಿತು.

ಈಗಲೂ ಸಹಾ ಸೋಮನನ್ನು ಭೇಟಿಯಾದಾಗ, ದತ್ತನೊಂದಿಗೆ ಮಾತನಾಡುವಾಗ ಇಲ್ಲವೇ ಸಿನಿಮಾ ನೋಡಲು ಥಿಯೇಟರ್ಗೆ ಹೋದಾಗಲೆಲ್ಲಾ ನನ್ನ ಬಾಲ್ಯದ ಸವಿಸವಿ ನೆನಪುಗಳು ನನ್ನ ಕಣ್ಣ ಮುಂದೆ ಬಂದು ಹೋಗುತ್ತದೆ.  ಇಂದು ಅದೆಷ್ಟೋ ಮೀಟಿಂಗ್ಸ್ಗಳಲ್ಲಿ ನನ್ನ ಪ್ರೆಸೆಂಟೇಷನ್ ಪ್ರೊಜೆಕ್ಟರ್ನಲ್ಲಿ ಪ್ರೊಜೆಕ್ಟ್ ಮಾಡುವಾಗ ನನಗೇ ಅರಿವಿಲ್ಲದಂತೆ ನನ್ನಳಗೇ ಹುದುಗಿ ಹೋಗಿರುವ ಪ್ರೊಜೆಕ್ಟರ್ ಮ್ಯಾನ್ ಜಾಗೃತನಾಗಿ ತುಟಿಯಮೇಲೆ ಸಣ್ಣದಾದ ನಗೆ ಚೆಲ್ಲಿಸುತ್ತಾನೆ. ಅದಕ್ಕೇ ಹೇಳುವುದು ನಾವು ಬಯಸುವುದೇ ಒಂದು ಕಡೆಗೆ ಆಗುವುದೇ ಒಂದು. ಮೇಲೆ ಕುಂತವನು ಆಡಿಸಿದಷ್ಟು ದಿನ, ಅಡುವುದಷ್ಟೇ ನಮ್ಮ ಕೆಲಸ ಅಲ್ವೇ?

ಇದನ್ನೂ ಓದಿ : ಏಸೊಂದು ಮುದವಿತ್ತು : ಮೆಜೆಸ್ಟಿಕ್​ ಎಂಬ ಆಪದ್ಬಂಧುವಿನ ಮೌನ ಮುರಿತಕ್ಕೆ ಕಾಯುತ್ತಿರುವ ಕುಸುಮಾ ಆಯರಹಳ್ಳಿ 

Published On - 3:40 pm, Sun, 16 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ