ಏಸೊಂದು ಮುದವಿತ್ತು : ಮೆಜೆಸ್ಟಿಕ್​ ಎಂಬ ಆಪದ್ಬಂಧುವಿನ ಮೌನ ಮುರಿತಕ್ಕೆ ಕಾಯುತ್ತಿರುವ ಕುಸುಮಾ ಆಯರಹಳ್ಳಿ

‘ಪ್ರಿಯ ಮೆಜೆಸ್ಟಿಕ್, ಇಷ್ಟು ವರ್ಷಗಳಾದ ಮೇಲೆ ಹಾಗೆ ಪ್ಲಾಟ್ಫಾರ್ಮಿನಲ್ಲಿ ಜನರ ನಡುವೆ ನುಗ್ಗಿ ಬಸ್ಸು ಹಿಡಿಯುವುದರೊಂದಿಗೆ ಬದುಕಿನಲ್ಲೂ ಎಲ್ಲ ತರದ ಜನರ ನಡುವೆ ಹೊಡೆದಾಡಿ, ಕಾದು ನನ್ನ ಆಯ್ಕೆಯ ಬಸ್ಸನ್ನೇ ಏರುವ ಪಾಠ ಕಲಿಸಿದೆ ನೀನು ಅನಿಸುತ್ತದೆ. ಲ್ಯಾಪ್​ಟಾಪು ಬಟ್ಟೆಗಳನ್ನೆಲ್ಲ ತುರುಕಿದ ಏರ್ಬ್ಯಾಗು ಬೆನ್ನಿಗೇರಿಸಿ, ಭಾರಕ್ಕೆ ತುಸುವೇ ಬಗ್ಗಿ, ಜನರು ಬಸ್ಸುಗಳ ನಡುವೆ ನುಸುಳಿ ಓಡುತ್ತಿರುವ ನನ್ನದೇ ಚಿತ್ರ ಕಣ್ಣ ಮುಂದೆ ಬಂದು, ಅವತ್ತು ಓಡಿದ್ದಕ್ಕೇ ಇವತ್ತು ಸ್ವಲ್ಪ ಕುಳಿತುಕೊಳ್ಳಲು ಸಾಧ್ಯವಾಗಿದೆ ಅನಿಸುತ್ತದೆ.‘ ಪಿ. ಕುಸುಮಾ ಆಯರಹಳ್ಳಿ

ಏಸೊಂದು ಮುದವಿತ್ತು : ಮೆಜೆಸ್ಟಿಕ್​ ಎಂಬ ಆಪದ್ಬಂಧುವಿನ ಮೌನ ಮುರಿತಕ್ಕೆ ಕಾಯುತ್ತಿರುವ ಕುಸುಮಾ ಆಯರಹಳ್ಳಿ
ಲೇಖಕಿ ಪಿ. ಕುಸುಮಾ ಆಯರಹಳ್ಳಿ
Follow us
ಶ್ರೀದೇವಿ ಕಳಸದ
|

Updated on:May 14, 2021 | 3:27 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

* ಲೇಖಕಿ, ಅಂಕಣಕಾರ್ತಿ ಪಿ. ಕುಸುಮಾ ಆಯರಹಳ್ಳಿ ಹುಟ್ಟಿದ್ದು ಮೈಸೂರು ಹತ್ತಿರದ ಆಯರಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ. ಶಾಲೆ ಚಾಮರಾಜನಗರದ ಸಂತೆಮರಹಳ್ಳಿ ಎಂಬ ಅಜ್ಜಿಯೂರಲ್ಲಿ. ಕಾಲೇಜು ಮೈಸೂರಿನಲ್ಲಿ. ಮಾಡಿದ ಮೂರು ಡಿಗ್ರಿಗಳು ಬರೀ ಸರ್ಟಿಫಿಕೇಟುಗಳಾಗಿ ಉಳಿದು, ಬದುಕಿಗೆ ಒಲಿದದ್ದು ಬೇರೆಯೇ ದಾರಿ ಎನ್ನುತ್ತಾರೆ. ಆಕಾಶವಾಣಿಯೊಂದಿಗೆ ಆರಂಭವಾದ ಮಾಧ್ಯಮದ ನಂಟು ಇವರನ್ನು ಟಿವಿ, ಸಿನೆಮಾ ಲೋಕಕ್ಕೆ ಕರೆತಂದಿತು. ಟಿ, ಎನ್ ಸೀತಾರಾಮ್, ಕಾಸರವಳ್ಳಿ ದಂಪತಿ, ಪಿ. ಶೇಷಾದ್ರಿ, ಲಿಂಗದೇವರು, ನಾಗೇಂದ್ರ ಷಾ ಮುಂತಾದ ನಿರ್ದೇಶಕರೊಂದಿಗೆ ಹತ್ತಾರು ವರ್ಷಳಿಂದ ಧಾರಾವಾಹಿಗಳ ಬರವಣಿಗೆ ಮಾಡಿ, ಸುದ್ದಿಮಾಧ್ಯಮದಲ್ಲೂ ಒಂದೆರಡು ವರ್ಷ ಕೆಲಸ ಮಾಡಿ ಈಗ ಹುಟ್ಟಿದೂರಿಗೆ ಮರಳಿ ತೋಟದಲ್ಲಿ ವಾಸವಾಗಿದ್ದಾರೆ. “ಯೋಳ್ತೀನ್ ಕೇಳಿ” ಪ್ರಕಟಿತ ಪುಸ್ತಕ. ಈಗಿಲ್ಲಿ ಬಣಗುಡುತ್ತಿರುವ ಬೆಂಗಳೂರನ್ನು ನೆನೆದು ಅದರ ಹೃದಯ ಭಾಗ ಮೆಜೆಸ್ಟಿಕ್ಕಿಗೆ ಒಂದು ಪತ್ರ ಬರೆದಿದ್ದಾರೆ.

* ಪ್ರಿಯ ಬೆಂಗಳೂರು,

ಪುಟ್ಟ ಮಕ್ಕಳಿಬ್ಬರನ್ನೂ ತಟ್ಟಿ ಮಲಗಿಸಿ, ತೋಳಮೇಲಿನ ತಲೆಯನ್ನು ಮೆಲ್ಲಗೇ ಕೆಳಗಿಳಿಸಿ ಬಂದು ಕಂಪ್ಯೂಟರಿನ ಮುಂದೆ ಕೂತೆ. ಪತ್ರಿಕಾ ಸಂಪಾದಕರೊಬ್ಬರು ಕೇಳಿದ್ದಕ್ಕೆ ಯಾವತ್ತೋ ಮಾಡಿಟ್ಟುಕೊಂಡ ನೋಟ್ಸೊಂದನ್ನು ಕತೆಯಾಗಿಸುವ ಸಲುವಾಗಿ ವರ್ಡ್ ಫೈಲು ತೆರೆಯುವುದರಲ್ಲಿದ್ದೆ. ಕತೆಯೊಳಗಿನ ಹುಡುಗ ಮೆಜೆಸ್ಟಿಕ್ಕಿನಲ್ಲಿದ್ದ. ರೈಲ್ವೆ ಸ್ಟೇಷನ್ನಿನ ಕಡೆ ಹೋಗುವುದರಲ್ಲಿದ್ದ. ಅಷ್ಟೇ. ಅಲ್ಲಿಗೆ ಕತೆ ನಿಂತುಹೋಯ್ತು. ಮೆಜೆಸ್ಟಿಕ್ಕಿನ ಚಿತ್ರದ ಹಿಂದೆಯೇ ಧುಳಧುಳನೆ ಹಾದ ನೆನಪುಗಳು ಕತೆಯ ಮೇಲೆ ಪಾರುಪತ್ಯ ಸಾಧಿಸಿ ಕುಣಿಯತೊಡಗಿದವು.

ಈ ಮೆಜೆಸ್ಟಿಕ್ ಬಸ್ಟ್ಯಾಂಡಿನ ಬಗ್ಗೆ ಮೋಹ ಹುಟ್ಟಿಕೊಂಡದ್ದು ರವಿಬೆಳಗೆರೆ ಹಾಯ್ ಬೆಂಗಳೂರಿನಲ್ಲಿ ಬರೆಯುತ್ತಿದ್ದ ಬರಹಗಳ ಮೂಲಕ. ನಿಜದಲ್ಲಿ ಒಮ್ಮೆಯೂ ನೋಡದ ಮೆಜೆಸ್ಟಿಕ್ಕನ್ನು, ಬೆಂಗಳೂರನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಜೀವನದ ಯಾವುದೋ ತಿರುವು ಅಚಾನಕ್ಕಾಗಿ ನನ್ನನ್ನು ಬೆಂಗಳೂರಿಗೂ ಅಫ್ಕೋರ್ಸ್ ಮೆಜೆಸ್ಟಿಕ್ಕಿಗೂ ತಂದು ನಿಲ್ಲಿಸಿತ್ತು. ಮೆಜೆಸ್ಟಿಕ್ ಮೂಲಕ ವರ್ಷಗಟ್ಟಲೆ ಓಡಾಡುತ್ತಾ ಬೆಳಗೆರೆಯ ಬರಹದಲ್ಲಿ ಕಂಡ ಮೆಜೆಸ್ಟಿಕ್ ನನ್ನದೂ ಆಗಿತ್ತು .

Yesondu mudavittu

ಲೇಖಕ ರವಿ ಬೆಳಗೆರೆಯವರೊಂದಿಗೆ ಕುಸುಮಾ

ಬಸವೇಶ್ವರನಗರದಿಂದ ಮೆಜೆಸ್ಟಿಕ್ಕಿನಲ್ಲಿ ಇಳಿದು, ಬನಶಂಕರಿಯ ಬಸ್ಸು ಹತ್ತುತ್ತಾ ಮತ್ತೆ ವಾಪಾಸು ಬನಶಂಕರಿ ಯಿಂದ ಮೆಜೆಸ್ಟಿಕ್ಕು ಬಸವೇಶ್ವರನಗರ. ದಿನವೂ ಎರಡೆರಡು ಬಸ್ಸು ಹತ್ತಿ, ಇಳಿಯುತ್ತಾ ಸಾಕಾಗಿಹೋಗುತ್ತಿತ್ತು. ಬಸವೇಶ್ವರನಗರದಿಂದ ಚಾಮರಾಜಪೇಟೆ ಹಾದು ಸೀದಾ ಬನಶಂಕರಿಗೆ ಹೋಗುವ ಬಸ್ಸು ಒಂದೋ ಎರಡೋ… ಅದು ಸಿಕ್ಕ ದಿನ ಅಬ್ಬಾ! ಮೆಜೆಸ್ಟಿಕ್ ಗೋಜು ತಪ್ಪಿತು ಎಂಬ ಖುಷಿ. ನಂತರ ಒಟ್ಟೊಟ್ಟಿಗೇ ನಾಲ್ಕಾರು ಕೆಲಸ ಮಾಡುತ್ತಿದ್ದರಿಂದ ವಾಸದ ಬಸವೇಶ್ವರನಗರ, ಧಾರಾವಾಹಿಯ ಜಯನಗರ, ಆಕಾಶವಾಣಿಯ ಇಂಡಿಯನ್ ಎಕ್ಸ್​ಪ್ರೆಸ್ಸು, ದೂರದ ದೂರದರ್ಶನ ಎಲ್ಲ ಕಡೆಯ ಓಡಾಟಕ್ಕೂ ಮೆಜೆಸ್ಟಿಕ್ಕೇ  ಕೇಂದ್ರಬಿಂದು.  ದಿನದಿನವೂ ಹೊಸಬರು ಬರುವ, ಹೋಗುವ ಮೆಜೆಸ್ಟಿಕ್ಕಿನಲ್ಲಿ ಪ್ಲಾಟ್ಫಾರ್ಮಿನ ನಂಬರುಗಳಿಗಾಗಿ ಎಡತಾಕುವ ಜನರಿಗೆ ಆ ಕಡೆ ಹೋಗಿ, 12 ನೇ ನಂಬರಾ ಈ ಕಡೆ ಇದೆ ನೋಡಿ ಅಂತ ಹೇಳುವಷ್ಟು ಮೆಜೆಸ್ಟಿಕ್ ಅಡಿಅಡಿಯೂ ಚಿರಪರಿಚಿತವಾಗಿ ಹೋಗಿತ್ತು. ಮದುವೆಯಾಗಿ ಬನಶಂಕರಿಯಲ್ಲೇ ಮನೆಯಾದ ಮೇಲೆ ಮೆಜೆಸ್ಟಿಕ್ ಊರಿಗೆ ಹೋಗುವಾಗ ಮಾತ್ರ ಭೇಟಿಯಾಗುವ ಹಾಗಾಯ್ತು. ಮಗ ಹುಟ್ಟಿದ ಮೇಲಂತೂ ಲಗೇಜು ಹೆಚ್ಚಿ, ಆಟೋ ಏರಿ ಸೀದಾ ರೈಲ್ವೇ ಸ್ಟೇಷನ್ನಿಗೆ ಹೋಗುವುದು ಅಭ್ಯಾಸವಾಗಿ ಮೆಜೆಸ್ಟಿಕ್ ನಿತ್ಯಭೇಟಿಯಿರದೇ ಅಪರೂಪವೇ ಆಯ್ತು. ಬೆಂಗಳೂರು ಬಿಟ್ಟ ನಂತರ ಕೆಲಸ, ಕಾರ್ಯಕ್ರಮ ಅಂತ ಆಗೀಗ ಹೋದರೂ ಓಲಾ, ಊಬರ್ಗಳ ಓಡಾಟದಿಂದ ಮೆಜೆಸ್ಟಿಕ್ ಅಪರೂಪದಲ್ಲಿ ಅಪರೂಪವಾಗಿಹೋಯ್ತು.

ಇಂತಹ ಮೆಜೆಸ್ಟಿಕ್, ಇಷ್ಟು ವರುಷಗಳ ನಂತರ ನಡುರಾತ್ರಿ ಥಟ್ಟಂತ ನೆನಪಾಗಿ ತೋಟದ ಮನೆಯೊಳಗೆ ಕೂತವಳನ್ನು ಹನ್ನೆರಡನೇ ನಂಬರಿನ ಫ್ಲಾಟ್ಫಾರ್ಮಿನಲ್ಲಿ ನಿಲ್ಲಿಸಿ, ಜನರ ನಡುವೆ ಕುತ್ತಿಗೆ ಕೊಂಕಿಸಿ ಬಂತಾ 95ನೇ ನಂಬರಿನ ಬಸ್ಸು? ಅಂತ ನೋಡುವಂತೆ ಮಾಡಿ ನೆನಪಿನಂಗಳಕ್ಕೆ ನೂಕಿದೆ. ಈಗ, ಈ ನಡುರಾತ್ರಿಯ ಈ ಕ್ಷಣ ಯಾರಿರಬಹುದು ಅಲ್ಲಿ, ಈ ಕೋವಿಡ್ ಟೈಮಿನಲ್ಲಿ? ಎಲ್ಲ ಬೆಂಚುಗಳೂ ಖಾಲಿ, ಎಲ್ಲ ಪ್ಲಾಟ್ಫಾರ್ಮುಗಳೂ.  ಇದ್ದರೂ ಇರಬಹುದೇ ದಿಕ್ಕಿಲ್ಲದವರು? ಮಲಗಲು ಮತ್ತೆಲ್ಲೂ ತಾವಿಲ್ಲದವರು. ಎಷ್ಟೊಂದು ಕಟ್ಟಡಗಳ ನಡುವೆಯೂ ಸಣ್ಣ ಸೂರಿಲ್ಲದವರು. ಅವರೇನೋ ಇರಬಹುದು. ಆದರೆ ಪೋಲೀಸರು? ಎಬ್ಬಿಸಿ ಬಾರಿಸುತ್ತಿರಬಹುದು ಹತ್ತೋ ಹನ್ನೊಂದೋ ಮತ್ತೊಂದೋ ಪ್ಲಾಟ್ಫಾಮಿನಲ್ಲಿ. ಕಂಡಕಂಡವರೆಲ್ಲ ಕೋವಿಡ್ ಕವಿದವರೇ ಖಾಕಿಯ ಪಾಲಿಗೀಗ.

Yesondu mudavittu

ನಿರ್ದೇಶಕ ಟಿ. ಎನ್​. ಸೀತಾರಾಮ್ ಅವರೊಂದಿಗೆ ಕುಸುಮಾ

ಮೆಜೆಸ್ಟಿಕ್ಕಿನ ಮೂಲಕವೇ ಬೆಂಗಳೂರಿನ ಬಾಗಿಲ ತೆರೆದುಕೊಂಡವರು ನನಗೂ ಹಿಂದೆ, ಈಗ, ಮುಂದೆ ಅದೆಷ್ಟು ಜನವೋ. ನನ್ನಂತೆ ಮರಳಿ ಹೋದವರೂ ಉಂಟು ಅದೇ ಮೆಜೆಸ್ಟಿಕ್ಕು ಹಾದು. ಮೆಜೆಸ್ಟಿಕ್ಕೊಂದು ಚಿಲಕವಿಲ್ಲದ ಬಾಗಿಲು. ದಿನ ದಿನವೂ ಗಂಟುಮೂಟೆ ಹೊತ್ತು ಬರುವವರೆಷ್ಟು, ಹೋಗುವವರೆಷ್ಟು ಲೆಕ್ಕ ಗೊತ್ತೇನು? ಅಂತ ಉದ್ಯೋಗ ಅರಸಿ ಬರುವ ಗ್ರಾಮೀಣರ ಸಂಖ್ಯೆ ಏರುತ್ತಲೇ ಇರುವ ಬಗ್ಗೆ ಲೇಖನದಲ್ಲಿ ಪ್ರಶ್ನೆ ಚುಚ್ಚುತ್ತಿದ್ದೆ. ಈಗ ಹಾಗೆ ಕೇಳುವ ಹಾಗೇ ಇಲ್ಲ. ಎಲ್ಲರದೂ ವಿರುದ್ಧ ದಿಕ್ಕಿನ ಪಯಣ. ಕಿಕ್ಕಿರಿದೇ ಅಭ್ಯಾಸವಿರುವ ಮೆಜೆಸ್ಟಿಕ್ಕು, ಸೋಷಿಯಲ್ ಡಿಸ್ಟೆನ್ಸಿನ ಹೊಚ್ಚ ಹೊಸಾ ಪಾಠಕ್ಕೆ ತಲೆಕೆರೆದುಕೊಳ್ಳುತ್ತಿರಬಹುದು. ನಿಂತಿರಬಹುದು ವೈಭವ ಕಳೆದುಕೊಂಡ ಹಾಳು ಸಾಮ್ರಾಜ್ಯದ ಹಾಗೆ. ಗೋಳುಗಳಿಗೂ ಲೆಕ್ಕವಿಲ್ಲ. ಹೊಸ ಕನಸು ಹೊತ್ತು ಬಸ್ಸತ್ತಿ ಬಂದವರಿಗೆಲ್ಲ ಮಾತಿಲ್ಲದೇ ವೆಲ್ಕಮ್ ಸ್ಪೀಚು ಮಾಡುತ್ತಿದ್ದ ಮೆಜೆಸ್ಟಿಕ್, ಕೊರೋನ ಅಂತ ದಿನವೂ ನಿರಾಶೆಯ ಮೂಟೆ ಹೊತ್ತು ಹೊರಡುವವರಿಗೆ “ಬೈ” ಅನ್ನಲೂ ಕೈ ಬಾರದೇ, “ಮತ್ತೆ ಬನ್ನಿ” ಅಂತ ಕರೆಯಲೂ ಬಾಯ್ಬಾರದೇ ನಿಂತಿರಬಹುದೇ ನಿಟ್ಟುಸಿರಾಗಿ.

ಮೆಜೆಸ್ಟಿಕ್, ಮೆಟ್ರೋ ರೈಲಿನ ಸಲುವಾಗಿ ನಿನ್ನನ್ನು ಬದಲಿಸಿದಾಗ “ಈ ಬೆಂಗಳೂರಿನಲ್ಲಿ ಯಾವ ಜಾಗವನ್ನಾದರೂ ಬದಲಿಸಿಬಿಡುತ್ತಾರಪ್ಪ. ಮೈಸೂರಿನಲ್ಲಿ ಹಾಗಲ್ಲ, ಕೆಲವು ಜಾಗಗಳನ್ನು ಮುಟ್ಟುವ ಹಾಗೇ ಇಲ್ಲ ಯಥಾವತ್ ಕಾಪಾಡಬೇಕು. ಈ ಮೆಜೆಸ್ಟಿಕ್ಕನ್ಯಾಕೆ ಬದಲಿಸಬೇಕು?” ಅಂತ ಕರಪರ ಪೇಚಿಕೊಳ್ಳುತ್ತಿದ್ದೆ/ತ್ತಿರುತ್ತೇನೆ. ಈ ಪೇಚಾಟಕ್ಕೆ ಈವರೆಗೂ ಸಿಗದ ಕಾರಣ ಇವತ್ತು ಸಿಕ್ಕಿತು ನೋಡು. ನನ್ನ ಬಾಲ್ಯದ ಅಜ್ಜಿ ಮನೆಯನ್ನು ಒಡೆದಾಗ ನನಗಾದ ತಳಮಳವಿದೆಯಲ್ಲ, ಅದೇ ಬಗೆಯದ್ದು ಇದು. ನಾನು ಯಾವಾಗ ಬಂದರೂ ನೀನು ಹಾಗೆಯೇ ಇರಬೇಕು. ನನ್ನ ಜೊತೆಯಲ್ಲಿದ್ದ ಹಾಗೆ, ನನ್ನ ನೆನಪಿನಲ್ಲಿರುವ ಹಾಗೆ ಅನಿಸಿದ್ದಿರಬೇಕು. ನಿನ್ನ ಸ್ವರೂಪ ಬದಲಿಸುವಾಗ ನಿನ್ನ ಹಳೆಯ ರೂಪದೊಂದಿಗಿನ ನನ್ನ ಒಡನಾಟವನ್ನು, ಅದರ ನೆನಪುಗಳನ್ನು ಕದಲಿಸಿದಂತೆನಿಸಿರಬೇಕು. ಅಂತಲೇ “ಮೆಜೆಸ್ಟಿಕ್ಕಿಗೇ ಕೈ ಹಾಕಿಬಿಡ್ತಾರಪ್ಪ” ಅನ್ನೋದನ್ನು “ಹೃದಯಕ್ಕೇ ಕೈ ಹಾಕಿಬಿಡ್ತಾರಪ್ಪ” ಅನ್ನೋ ಧಾಟಿಯಲ್ಲಿ ಹೇಳುತ್ತಾ ಹಳಹಳಿಸುತ್ತಿದ್ದೆ. ನಿನಗಾದರೂ ನನ್ನ ಹಾಗೇ ಅನಿಸಿತಾ, ಹೊಸ ಸಿಂಗಾರವೇ ಖುಷಿಯೋ? ಖುಷಿಯೇ ನಿನಗೆ ಗೊತ್ತು ಬಿಡು. ಗಟ್ಟಿಮುಟ್ಟಾಗಿದ್ದು, ಥಳಥಳಾಂತ ಹೊಳೆಯುತ್ತಾ ಲಕ್ಷ ಲಕ್ಷ ಜನರಿಗೆ ವೆಲ್ಕಮ್ ಹೇಳಬೇಕಲ್ಲ ನೀನು.

Yesondu mudavittu

ನಿರ್ದೇಶಕ ನಾಗೇಂದ್ರ ಶಾ ಅವರೊಂದಿಗೆ ಕುಸುಮಾ

ಮೆಜೆಸ್ಟಿಕ್, ನಿನ್ನನ್ನು ಅದೆಷ್ಟು ಸಲ ಬೈಕೊಂಡಿದ್ದೀನೋ, ನಿಂತ ಕಡೆಯಿಂದ ನಿನ್ನಲ್ಲಿಗೂ, ಅಲ್ಲಿಂದ ಹೋಗುವ ಕಡೆಗೂ ಬಸ್ಸು ತಡವಾದಾಗ. ಕಿಕ್ಕಿರಿದು ನಿಲ್ಲಲೂ ಆಗದಷ್ಟು ಜನ ತುಂಬಿದ್ದಾಗ, ಬಸ್ಚಾರ್ಜು ಕಳೆದು, ಪ್ಲಾಟ್ಫಾರ್ಮಿನ ನಂದಿನಿ ಡೈರಿಯಲ್ಲಿ ಎರಡೆರಡು ಫ್ಲೇವರ್ಡ್ ಮಿಲ್ಕ್ ತೆಗೆದುಕೊಳ್ಳಲು ದುಡ್ಡಿಲ್ಲದಿದ್ದಾಗ, ಮೈಸೂರು ಬ್ಯಾಂಕಿನವರೆಗೂ ಬಂದ ಬಸ್ಸು ಪ್ಲಾಟ್​ಫಾರ್ಮಿಗೆ ಬಂದು ನಿಲ್ಲಲು ಗಂಟಾನುಗಟ್ಟಲೆ ಸತಾಯಿಸಿದಾಗ, ನಿನ್ನ ಇರಿಕಿರಿಯಿಂದಾಗೇ ರೈಲು ತಪ್ಪಿಹೋದಾಗ, ಲಗೇಜು ಹಿಡಿದು ರೈಲ್ವೆ ಸ್ಟೇಷನ್ನಿಗೆ ಹೋಗಲು ಮೇಲೆ ಹತ್ತಲಾರದ ಸಂಕಟಕ್ಕೆ, ಒಂಬತ್ತನೇ ಪ್ಲಾಟ್​ಫಾರ್ಮಿಗೆ ಓಡುವಾಗ… ಅದು ಅಷ್ಟು ದೂರದಲ್ಲಿದೆಯಲ್ಲಪ್ಪ ಅನಿಸಿದಾಗ. ಆದರೆ ಮೆಜೆಸ್ಟಿಕ್, ಇಷ್ಟು ವರ್ಷಗಳಾದ ಮೇಲೆ ಹಾಗೆ ಪ್ಲಾಟ್ಫಾರ್ಮಿನಲ್ಲಿ ಜನರ ನಡುವೆ ನುಗ್ಗಿ ಬಸ್ಸು ಹಿಡಿಯುವುದರೊಂದಿಗೆ ಬದುಕಿನಲ್ಲೂ ಎಲ್ಲ ತರದ ಜನರ ನಡುವೆ ಹೊಡೆದಾಡಿ, ಕಾದು ನನ್ನ ಆಯ್ಕೆಯ ಬಸ್ಸನ್ನೇ ಏರುವ ಪಾಠ ಕಲಿಸಿದೆ ನೀನು ಅನಿಸುತ್ತದೆ. ಲ್ಯಾಪ್​ಟಾಪು ಬಟ್ಟೆಗಳನ್ನೆಲ್ಲ ತುರುಕಿದ ಏರ್ಬ್ಯಾಗು ಬೆನ್ನಿಗೇರಿಸಿ, ಭಾರಕ್ಕೆ ತುಸುವೇ ಬಗ್ಗಿ, ಜನರು ಬಸ್ಸುಗಳ ನಡುವೆ  ನುಸುಳಿ ನುಸುಳಿ ಓಡುತ್ತಿರುವ ನನ್ನದೇ ಚಿತ್ರ ಕಣ್ಣ ಮುಂದೆ ಬಂದು, ಅವತ್ತು ಓಡಿದ್ದಕ್ಕೇ ಇವತ್ತು ಸ್ವಲ್ಪ ಕುಳಿತುಕೊಳ್ಳಲು ಸಾಧ್ಯವಾಗಿದೆ ಅನಿಸುತ್ತದೆ.

ನಿನ್ನ ಒಡನಾಟದಲ್ಲಿ ದಿನವೂ ಕಂಡ ಅಪರಿಚಿತ ಮುಖಗಳೆಷ್ಟೋ. ಬಸ್ಸಿನೊಳಗೆ, ಹೊರಗೆ, ನಿಂತ ಬಸ್ಟಾಪುಗಳಲಿ, ಕೂತೆದ್ದ ಸೀಟುಗಳ ಪಕ್ಕದಲ್ಲಿ. ಇಳಿದು ನಡೆಯುವ ದಾರಿಯಲ್ಲಿ. ಸೆಕೆಂಡುಗಳಲ್ಲಿ ಎದುರಾದ ಎಷ್ಟೊಂದು ಕಣ್ಣುಗಳು! ಯಾರನ್ನಾದರೂ ನೋಡುವ, ಮಾತಾಡುವ ವ್ಯವಧಾನವಾದರೂ ಇತ್ತಾ ಆಗ? ಬರೀ ಓಡು, ಓಡು, ಓಡು. ಈಗ ನನಗೂ ಸಮಾಧಾನವಿದೆ. ಕೋವಿಡ್ ನಿನಗೂ ಪುರುಸೊತ್ತು ಕೊಟ್ಟಿದೆ. ಕೂತು ಮಾತಾಡೋಣವೆಂದರೆ ನನ್ನ ನಿನ್ನ ನಡುವೆ ನೂರಾರು ಕಿಲೋಮೀಟರುಗಳ ಅಂತರ. ಅಪರೂಪಕ್ಕೆ ಸದ್ದುಗದ್ದಲವಿಲ್ಲದೇ ಕೂತಿದ್ದೀಯಲ್ಲ. ಎಷ್ಟು ದೂರದ ಮಾತೂ ಕೇಳೀತು. ಹೃದಯದ ಮಾತಿಗೆ ದೂರವೇ ಇಲ್ಲ. ನಿನಗೂ ಗೊತ್ತಲ್ಲ.

Yesondu mudavittu

ಅವತ್ತು ಓಡಿದ್ದಕ್ಕೇ ಇವತ್ತು ತೋಟದಮನೆಯಲ್ಲಿ ಮನೆಯವರೆಲ್ಲ ಕುಳಿತುಕೊಳ್ಳಲು ಸಾಧ್ಯವಾಗಿದೆ ಅನಿಸುತ್ತದೆ

ಪ್ರಿಯ ಬೆಂಗಳೂರು, ಯಾರಾದರೂ ನಿನ್ನ ಹೃದಯವೆಲ್ಲಿದೆ ಅಂತ ಕೇಳಿದರೆ ಮಹಾನಗರದ ಚಿತ್ರ ಬರೆದು ಅದಕ್ಕೆ ದೇಹಾಕೃತಿ ಕೊಟ್ಟು ಹೃದಯದ ಜಾಗಕ್ಕೆ ಹೊಂದುವ ಯಾವ ಏರಿಯಾವನ್ನಾದರೂ ಗುರುತಿಸಿ ಇದು ಹೃದಯಭಾಗ ಅನ್ನಬಹುದು ಜಾಣರು. ನಿಜ ಹೇಳು ಬೆಂಗಳೂರೇ ಯಾವುದು ನಿನ್ನ ಹೃದಯ ಅಂತ ಕೇಳಿದರೆ ಎದೆಮುಟ್ಟಿಕೊಂಡು ನೀನು ಹೇಳಬಹುದಾದ ಹೆಸರು ಮೆಜೆಸ್ಟಿಕ್! ಅಲ್ಲಿ ಯಾವಾಗಲೂ ಲಬ್ ಡಬ್ ಸದ್ದು ಚಲಾವಣೆಯಲ್ಲಿರಲಿ. ಕೋವಿಡ್ ಕಳೆಯಲಿ. ಕರ್ರೋಪರ್ರೋ ಅಂತ ಕಿವಿಗಡುಚಿಕ್ಕಲಿ ಬಸ್ಸುಗಳ ಹಾರ್ನು, ಜನ ಗಿಜಗಿಜಗಿಜಾಂತ ಓಡಾಡಲಿ ಪಾದರಸದ ಬೊಂಬೆಗಳ ಹಾಗೆ, ಬಂದಿಳಿಯಲಿ ಕನಸುಗಳ ಮೂಟೆ. ಚಾಲ್ತಿಯಲ್ಲಿರಲಿ ನಿನ್ನ ವೆಲ್ಕಮ್ ಸ್ಪೀಚು. ಮಜೆಸ್ಟಿಕ್ ಯಾವತ್ತೂ ಮೌನವಾಗದಿರಲಿ.

ಇದನ್ನೂ ಓದಿ :ಏಸೊಂದು ಮುದವಿತ್ತು : ಸ್ಥಿರವಾಣಿ ಜಂಗಮವಾಣಿಗಳ ನಡುವಿನೆಳೆಯಲ್ಲಿ ಜೀಕುತ್ತಿರುವ ರೇಣುಕಾ ಮಂಜುನಾಥ

Published On - 3:21 pm, Fri, 14 May 21

ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್