National Mango Day 2022: ಇಂದು ರಾಷ್ಟ್ರೀಯ ಮಾವು ದಿನ, ಹಣ್ಣುಗಳ ರಾಜನ ಬಗ್ಗೆ ಒಂದಿಷ್ಟು ಅರಿಯೋಣ ಬನ್ನಿ
ಮಾವಿನಹಣ್ಣಿನ ಜನಪ್ರಿಯತೆಗೆ ಮನ್ನಣೆ ನೀಡಲೆಂದು ಪ್ರತಿವರ್ಷ ಜುಲೈ 22ನೇ ತಾರೀಖಿನಿಂದು ‘ರಾಷ್ಟ್ರೀಯ ಮಾವು ದಿನ’ ಆಚರಿಸಲಾಗುತ್ತಿದೆ.
ಮಾವನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಸಿಹಿ, ಹುಳಿ ಹದವಾಗಿ ಬೆರೆತ ಹಣ್ಣು ನಮ್ಮ ದೇಶದ ಜನಪ್ರಿಯ ಫಲವೂ ಹೌದು. ವಿಟಮಿನ್ ಎ, ಸಿ ಮತ್ತು ಡಿ ಸಮೃದ್ಧವಾಗಿರುವ ಮಾವಿನಹಣ್ಣು ಜಗತ್ತಿನ ಹಲವು ದೇಶಗಳಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಭಾರತದಲ್ಲಿ ಮಾವಿನ ನೂರಕ್ಕೂ ಹೆಚ್ಚು ವಿಧದ ತಳಿಗಳು ಚಾಲ್ತಿಯಲ್ಲಿವೆ. ವಿವಿಧ ಬಣ್ಣ, ಆಕಾರ ಮತ್ತು ಗಾತ್ರದಲ್ಲಿ ಮಾವಿನಹಣ್ಣು ಲಭ್ಯವಿದೆ. ಈ ಪೈಕಿ ಆಲ್ಫಾನ್ಸೊ, ಬಾದಾಮಿ, ಸಕ್ಕರೆಗುತ್ತಿ, ಮಲ್ಲಿಕಾ, ಮಾಲ್ಡಾ, ಬಲಿಯಾ, ಆಮ್ರಪಾಲಿ, ಹಿಮಸಾಗರ್, ಫಾಝಿಯಾ, ಗೆಲ್ಚಿಯಾ, ನಿಗರಿನ್ ಖೇರಿಯಾ, ರುಚಿಕಾ, ಚೋರಸ್ಯಾ, ಧಮನ್, ಧೂನ್ ಮತ್ತು ಶಮಸಿ ತಳಿಗಳು ಹೆಚ್ಚು ಜನಪ್ರಿಯವಾಗಿವೆ.
ಮಾವಿನಹಣ್ಣಿನ ಜನಪ್ರಿಯತೆಗೆ ಮನ್ನಣೆ ನೀಡಲೆಂದು ಪ್ರತಿವರ್ಷ ಜುಲೈ 22ನೇ ತಾರೀಖಿನಿಂದು ‘ರಾಷ್ಟ್ರೀಯ ಮಾವು ದಿನ’ ಆಚರಿಸಲಾಗುತ್ತಿದೆ. ಮಾವಿನ ಇತಿಹಾಸ ಮೆಲುಕು ಹಾಕುತ್ತಾ, ಮಾವು ಆಸ್ವಾದಿಸುವ ಬಗೆಬಗೆ ವಿಧಾನಗಳನ್ನು ನೆನಪಿಸಿಕೊಂಡು ಸಂಭ್ರಮಿಸುವುದು ಈ ದಿನದ ವಿಶೇಷ.
ಇತಿಹಾಸ ಮತ್ತು ಪ್ರಾಮುಖ್ಯತೆ
ಭಾರತದಲ್ಲಿ ಸುಮಾರು 5,000 ವರ್ಷಗಳಿಂದಲೂ ಮಾವಿನಹಣ್ಣು ಬಳಕೆಯಲ್ಲಿದೆ. ಇಂಗ್ಲಿಷಿನ ಮ್ಯಾಂಗೊ (Mango) ಎನ್ನುವ ಪದಕ್ಕೆ ಮಲಯಾಳಂನ ಮನ್ನ (Manna) ಎನ್ನುವ ಪದದಿಂದ ನಿಷ್ಪನ್ನಗೊಂಡಿದೆ. ಬಹುತೇಕ ಇಂಗ್ಲಿಷ್ ಮತ್ತು ಸ್ಪೇನಿಶ್ ಭಾಷಿಕ ದೇಶಗಳಲ್ಲಿ ಇದೇ ಪದವು ಚಾಲ್ತಿಯಲ್ಲಿದೆ. ಪೋರ್ಚುಗಿಸರು ಕ್ರಿಶ 1498ರಲ್ಲಿ ಕೇರಳಕ್ಕೆ ಬಂದ ನಂತರ ‘ಮಂಗ’ ಎಂದು ಮಾವಿನಹಣ್ಣನ್ನು ಗುರುತಿಸಲು ಆರಂಭಿಸಿದರು.
ದಕ್ಷಿಣಾರ್ಧಗೋಳದಲ್ಲಿ ಕ್ರಿಶ 1700ನೇ ಇಸವಿಯವರೆಗೂ ಮಾವಿನಹಣ್ಣಿನ ಗಿಡಗಳನ್ನು ನೆಡಲು ಸಾಧ್ಯವಾಗಿರಲಿಲ್ಲ. ಬೀಜಗಳ ಸಾಗಣೆಯ ಸಮಸ್ಯೆ ಇದಕ್ಕೆ ಮುಖ್ಯ ಕಾರಣ. ಇದರ ಜೊತೆಗೆ ಮಾವು ಬಯಸುವಂಥ ವಾತಾವರಣವೂ ಬಹುತೇಕ ದೇಶಗಳಲ್ಲಿ ಇರಲಿಲ್ಲ. 18ನೇ ಶತಮಾನದಲ್ಲಿ ಮೊದಲ ಬಾರಿಗೆ ಬ್ರೆಜಿಲ್ನಲ್ಲಿ ಮಾವಿನಗಿಡ ನೆಡಲಾಯಿತು. ಮಂಜು ಬೀಳದ ವಾತಾವರಣವಿರುವ ಪ್ರದೇಶದಲ್ಲಿ ಮಾವಿನ ಬೆಳೆ ಬೆಳೆಯಲು ರೈತರು ಆರಂಭಿಸಿದರು.
ಮಾವಿನ ಬಗ್ಗೆ ಆಸಕ್ತಿಕರ ವಿಷಯಗಳು
- ಕರ್ನಾಟಕದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಸ್ವಾದಿಷ್ಟ ಮಾವಿನಹಣ್ಣಿಗೆ ಹೆಸರುವಾಸಿ.
- ಭಾರತದಲ್ಲಿ ಪ್ರತಿವರ್ಷ ಸುಮಾರು 2 ಕೋಟಿ ಟನ್ಗಳಷ್ಟು ಮಾವಿನಹಣ್ಣು ಬೆಳೆಯುತ್ತಾರೆ.
- ಮಾವಿನಮರಗಳು 100 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲವು.
- ಬುಟ್ಟಿತುಂಬ ಮಾವಿನಹಣ್ಣು ಕೊಡುವುದನ್ನು ಉತ್ತಮ ಉಡುಗೊರೆ ಎಂದೇ ಭಾರತೀಯರು ಭಾವಿಸುತ್ತಾರೆ.
- ಮಾವಿನಹಣ್ಣಿನಲ್ಲಿ 20ಕ್ಕೂ ಹೆಚ್ಚು ವಿಟಮಿನ್ ಮತ್ತು ಖನಿಜಗಳು ಇವೆ. ಹೀಗಾಗಿಯೇ ಮಾವಿನಹಣ್ಣಿಗೆ ‘ಅತ್ಯುತ್ತಮ ಆಹಾರ’ (ಸೂಪರ್ಫುಡ್) ಎನ್ನುವ ಗೌರವವಿದೆ.
- ಅಮೆರಿಕದಲ್ಲಿಯೂ ಮಾವು ಜನಪ್ರಿಯ ಹಣ್ಣು. ಮೆಕ್ಸಿಕೊ, ಗ್ವಾಟೆಮಾಲಾ, ಪೆರು, ಈಕ್ವೆಡಾರ್, ಬ್ರೆಜಿಲ್ ಮತ್ತು ಹೈತಿ ದೇಶಗಳಿಂದ ಅಮೆರಿಕಕ್ಕೆ ಮಾವಿನಹಣ್ಣು ಸರಬರಾಜಾಗುತ್ತದೆ. ಕೆನಡಾ, ಜಮೈಕಾ, ಫಿಲಿಪ್ಪೈನ್ಸ್ ಮತ್ತು ಅಮೆರಿಕದಲ್ಲಿ ಮಾವಿನಹಣ್ಣಿನ ಗೌರವಾರ್ಥ ವಿಶೇಷ ಸಂಭ್ರಮಾಚಾರಣೆಗಳು ನಡೆಯುತ್ತವೆ.
- ವಿಶ್ವದಲ್ಲಿ ಭಾರತದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಚೀನಾ ಮತ್ತು ಥಾಯ್ಲೆಂಡ್ ನಂತರದ ಸ್ಥಾನದಲ್ಲಿವೆ.
ಮೋದಿಗೂ ಮೆಚ್ಚು
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮಾವು ಅಚ್ಚುಮೆಚ್ಚಿನ ಹಣ್ಣು. ಈ ವಿಷಯವನ್ನು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ನನಗೆ ಮಾವಿನಹಣ್ಣು ಎಂದರೆ ತುಂಬಾ ಇಷ್ಟ. ಗುಜರಾತ್ನಲ್ಲಿ ಮಾವಿನಹಣ್ಣಿನ ಪರಂಪರೆಯೇ ಇದೆ. ಬಾಲ್ಯದಲ್ಲಿ ಮಾವಿನಹಣ್ಣು ಖರೀದಿಸಿ ತಿನ್ನುವ ಆರ್ಥಿಕ ಚೈತನ್ಯ ನನಗೆ ಇರಲಿಲ್ಲ. ಹೀಗಾಗಿ ಮರಗಳಿಂದ ನೇರವಾಗಿ ಕಿತ್ತುಕೊಂಡು ತಿನ್ನುತ್ತಿದ್ದೆ ಎಂದು ಮೋದಿ ಅವರ ಒಮ್ಮೆ ನೆನಪಿಸಿಕೊಂಡಿದ್ದರು.
Published On - 10:40 am, Fri, 22 July 22