ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ವಿನೋದಾ ತನ್ನ ಮಲಗುವ ಕೋಣೆಯ ಬಾಗಿಲು ಮುಚ್ಚಿ ಹಾಸಿಗೆಯ ಮೇಲೆ ಬಿದ್ದುಕೊಂಡಳು. ಅತ್ತುಅತ್ತು ಕಣ್ಣೀರು ಬತ್ತಿಹೋದ ಅವಳ ಕಂಗಳು ನಡುಹಗಲಿನ ಮರುಭೂಮಿಯಂತೆ ಉರಿಯುತ್ತಿದ್ದವು. ಹಗಲು ಕಳೆದು ಸಂಜೆಯ ಕತ್ತಲು ಗಾಢವಾಗತೊಡಗಿತು, ಹೊರಗೆ ತೋಟದಲ್ಲಿ ಕಾಗೆಗಳ ಕಾಂವ್ ಕಾಂವ್ ಶಬ್ದ ನಿಂತುಹೋಗಿ ಸ್ಮಶಾನಮೌನ ಆವರಿಸಿತು. ಪ್ರಶಾಂತವಾದ ಆಕಾಶದಲ್ಲಿ ಅಸಂಖ್ಯ ನಕ್ಷತ್ರಗಳು ಮಿಣುಕತೊಡಗಿದಾಗ ಅವಳಿಗೆ ತನ್ನ ತಾಯಿ ತಂದೆ ನೆನಪಾಗತೊಡಗಿದರು. ಕಣ್ಣೀರು ಒಂದೇ ಸಮನೇ ಅವಳ ಎರಡೂ ಗಲ್ಲದ ಮೇಲಿಂದ ಹರಿಯುತ್ತಿತ್ತು. ಅದೇ ರಾತ್ರಿ ವಿನೊದಾ ತನ್ನ ಪತಿಯ ಮನೆಯನ್ನು ತೊರೆದು ಹೊರಟುಹೋದಳು. ಯಾರೂ ಅವಳನ್ನು ಹುಡುಕುವ ಪ್ರಯತ್ನವನ್ನೂ ಸಹ ಮಾಡಲಿಲ್ಲ. ಆ ಸಮಯದಲ್ಲಿ “ಪ್ರಜನಾರ್ಥ ಮಹಾಭಾಗ”ವೆನ್ನುವ ಮಹಾಭಾಗ್ಯವೊಂದು ತನಗೆ ಪ್ರಾಪ್ತವಾಗಿದೆಯೆಂದು ವಿನೋದಾಗೆ ಗೊತ್ತೂ ಇರಲಿಲ್ಲ. ಅವಳ ಪತಿಗೆ ಪರಲೋಕದ ಸದ್ಗತಿ ನೀಡಬಲ್ಲ ಜೀವ ಈಗಾಗಲೇ ಅವಳ ಗರ್ಭದಲ್ಲಿ ಅವತರಿಸಿತ್ತು.
ಕಥೆ : ಪುತ್ರಯಜ್ಞ | ಮೂಲ : ರವೀಂದ್ರನಾಥ ಟ್ಯಾಗೋರ | ಕನ್ನಡಕ್ಕೆ : ರೇಣುಕಾ ನಿಡಗುಂದಿ
(ಭಾಗ 3)
ಈ ಘಟನೆಗೆ ಹತ್ತುವರ್ಷಗಳಾದವು.
ಈ ನಡುವೆ ವೈದ್ಯನಾಥರ ಸ್ಥಿತಿ ಸಂಪತ್ತು ಬಹಳಷ್ಟು ಸುಧಾರಿಸಿತ್ತು. ಈಗವರು ಹಳ್ಳಿಯನ್ನು ಬಿಟ್ಟು ಕಲಕತ್ತೆಗೆ ಬಂದು ನೆಲೆಸಿದ್ದರು. ದೊಡ್ದದಾದ ಬಂಗಲೆಯನ್ನು ಖರೀದಿಸಿ ಅದರಲ್ಲಿ ವಾಸವಿದ್ದಾರೆ. ಅವರ ಸಂಪತ್ತು ಬೆಳೆದಂತೆ ಅವರ ಸಂಪತ್ತಿನ ವಾರಸುದಾರನಿಗಾಗಿ ಅವರ ಮನಸ್ಸಿನ ವ್ಯಾಕುಲತೆಯೂ ಬೆಳೆಯುತ್ತಿತ್ತು.
ಎರಡೆರಡು ಮದುವೆಯಾದರೂ ಪುತ್ರ ಭಾಗ್ಯವಿಲ್ಲದೇ ಹೆಣ್ಣುಮಕ್ಕಳೇ ಹುಟ್ಟಿದರು. ಜ್ಯೋತಿಷಿ, ದೈವಜ್ಞರು ಮತ್ತು ಸನ್ಯಾಸಿಗಳಿಂದ ಮನೆ ತುಂಬಿಹೋಯಿತು. ಗಿಡಮೂಲಿಕೆ, ದೇಸಿಮದ್ದು, ದೃಷ್ಟಿ ನಿವಾಳಿಸೋದು, ಯಂತ್ರ ಮಂತ್ರ ತಾಯಿತ ಹಾಗೂ ಪೇಟೆಂಟ್ ಔಷಧಿಗಳ ಅಂಗಡಿಯೇ ಮನೆಯಾಯ್ತು. ಆಡಿನ ಕಾಲಿನ ಸೂಪ್ ಕುಡಿಯುವುದಕ್ಕೆಂದು ಕಾಲೀಘಾಟಿನಲ್ಲಿ ಅದೆಷ್ಟು ಆಡಿನ ಮರಿಗಳನ್ನು ಕಡಿಯಬೇಕಾಯಿತೆಂದರೆ ತೈಮೂರ್ ಲಂಗನ ಭೂತವೇನಾದರೂ ನೋಡಿದ್ದರೆ ಅದೂ ಸೋತು ಮಂಡಿಯೂರುತ್ತಿತ್ತು. ಇಷ್ಟೆಲ್ಲ ಉಪಾಯ ಮಾಡಿದರೂ ವೈದ್ಯನಾಥರ ಭವ್ಯವಾದ ಮಹಲಿನ ಒಂದು ಸಣ್ಣ ಮೂಲೆಯನ್ನು ತನ್ನದಾಗಿಸಿಕೊಳ್ಳಬಲ್ಲ ಕೆಲವೇ ಪೌಂಡು ಮಾಂಸ ಎಲಬಿನ ಒಬ್ಬ ಪುಟ್ಟ ಬಾಲಕನೂ ಹುಟ್ಟಲಿಲ್ಲ. ಅಂಥದ್ದರಲ್ಲಿ ತಾವು ಇಲ್ಲದ ಕಾಲಕ್ಕೆ ಯಾವ ಬಿಕನಾಸಿಗಳು ಬಂದು ಈ ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೋ, ಉಂಡು ಉಡಾಯಿಸುತ್ತಾರೋ ಎಂಬ ಚಿಂತೆಯಲ್ಲಿ ಅವರಿಗೆ ಊಟ ಉಡುಗೆಯಲ್ಲಿಯೂ ಯಾವ ಆಸಕ್ತಿ ಉಳಿಯಲಿಲ್ಲ.
ವೈದ್ಯನಾಥರು ಮತ್ತೊಂದು ಮದುವೆಯಾದರು. ಜಗತ್ತಿನಲ್ಲಿ ಆಸೆಯೆಂಬುದಕ್ಕೆ ಅಂತ್ಯವಿಲ್ಲ. ಹಾಗೆಯೇ ಕನ್ಯಾದಾನದ ಭಾರದಲ್ಲಿ ಬಳಲುತ್ತಿರುವ ಮನೆಗಳಲ್ಲಿ ಕನ್ಯಾಮಣಿಗಳಿಗೂ ಕೊರತೆಯಿಲ್ಲ.
ಜ್ಯೋತಿಷಿಗಳು ಜನ್ಮಕುಂಡಲಿಯನ್ನು ನೋಡಿ – “ಈ ಕನ್ಯೆಯ ಪುತ್ರ ಸ್ಥಾನದಲ್ಲಿ ಎಂಥಾ ಶುಭಯೋಗವಿದೆಯೆಂದರೆ ವೈದ್ಯನಾಥರ ಮನೆಯಲ್ಲಿ ಪುತ್ರಜನ್ಮವಾಗಲು ಸ್ವಲ್ಪವೂ ವಿಳಂಬವಾಗದು’’ ಎಂದು ಭವಿಷ್ಯ ನುಡಿದರು. ಇದಾಗಿ ಐದು ವರ್ಷಗಳೇ ಗತಿಸಿಹೋದವು ಆದರೆ ಜ್ಯೋತಿಷಿಗಳು ಫಲ ಹೇಳಿದ ಆ ಪುತ್ರಸ್ಥಾನದ ಶುಭಯೋಗ ಮಾತ್ರ ಆಲಸ್ಯದಲ್ಲಿ ಬಿದ್ದುಕೊಂಡಿತ್ತು.
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’
ನಿರಾಶೆಯಲ್ಲಿ ವೈದ್ಯನಾಥರು ಸೋತು ಸುಣ್ಣವಾದರು. ಕೊನೆಗೆ ಶಾಸ್ತ್ರಜ್ಞರು ಮಹಾಪಂಡಿತರುಗಳ ಸಲಹೆಯಂತೆ ಸಾಕಷ್ಟು ಹಣವನ್ನು ಖರ್ಚುಮಾಡಿ ಮಹಾಯಜ್ಞವನ್ನು ಆಯೋಜಿಸಿದ್ದರು. ಅದರಲ್ಲಿ ಬಹಳ ದಿನಗಳಿಂದ ನಿತ್ಯವೂ ನೂರಾರು ಬ್ರಾಹ್ಮಣರಿಗೆ ಆತಿಥ್ಯ ಸೇವೆ ನಡೆದಿತ್ತು.
ಆ ಸಮಯದಲ್ಲಿ ದೇಶದ ತುಂಬೆಲ್ಲ ಹಾಹಾಕಾರವನ್ನುಂಟು ಮಾಡಿದ್ದ ಬರಗಾಲದಿಂದಾಗಿ ಬಂಗಾಲ, ಓಡಿಸ್ಸಾ ಮತ್ತು ಬಿಹಾರ್ ರಾಜ್ಯಗಳೆಲ್ಲ ಒಣಗಿ ಅಸ್ಥಿಪಂಜರವಷ್ಟೇ ಉಳಿದಿತ್ತು. ಕಾಲುಮುರಿದುಕೊಂಡು ಬಿದ್ದ ಇಷ್ಟು ಸಂಪತ್ತನ್ನು ಉಣ್ಣುವವರಾರಿಲ್ಲದೇ ತಮ್ಮ ಸಂಪತ್ತಿನ ಬಗ್ಗೆ ವೈದ್ಯನಾಥರು ಚಿಂತಿಸುತ್ತಿದ್ದಾಗ ಇಡೀ ದೇಶದ ಜನರು ಒಪ್ಪೊತ್ತು ಕೂಳಿಲ್ಲದ ತಮ್ಮ ಖಾಲಿ ಹೊಟ್ಟೆಯ ಬಗ್ಗೆ ಚಿಂತಿಸುತ್ತಿದ್ದರು!
ಇದೇ ಸಮಯದಲ್ಲಿ ವೈದ್ಯನಾಥರ ನಾಲ್ಕನೇ ಸಹಧರ್ಮಿಣಿ ಕಳೆದ ನಾಲ್ಕು ತಿಂಗಳಿಂದ ನೂರು ಬ್ರಾಹ್ಮಣರ ಚರಣ ಜಲವನ್ನು ಕುಡಿಯುತ್ತಿದ್ದಳು. ದಿನವೂ ಬೆಳ್ಳಿಗ್ಗೆ ನೂರು ಬ್ರಾಹ್ಮಣರು ಹೊಟ್ಟೆಬಿರಿಯ ಉಂಡು ಸಂಜೆಗೆ ಮತ್ತೆ ಲಘು ಫಲಾಹಾರ ಸೇವಿಸಿ ತುಪ್ಪ- ಮೊಸರು, ಮುತ್ತಲೆಲೆ, ದೊಣ್ಣೆ, ಕುಡಿಕೆಗಳಿಂದ ರಾಶಿರಾಶಿ ಕಸವನ್ನು ಮುನಿಸಿಪಾಲ್ಟಿ ಕಸದ ತೊಟ್ಟಿಗೆ ತುಂಬತೊಡಗಿದ್ದರು. ಭೂರಿ ಭೋಜನದ ಪರಿಮಳ ಮೂಗಿಗೆ ಬಡಿದು ಆಹಾರದ ಆಸೆಯಿಂದ ಬರಪೀಡಿತ ಹಸಿದ ಜನರು ಗುಂಪುಗುಂಪಾಗಿ ಬಾಗಿಲ ಬಳಿ ಸೇರತೊಡಗಿದರು. ಅವರನ್ನು ಓಡಿಸಲೆಂದೇ ಒಬ್ಬ ದರಬಾನನನ್ನು ನಿಯುಕ್ತಿಗೊಳಿಸಬೇಕಾಯ್ತು.
ಒಂದು ದಿನ ಬೆಳಿಗ್ಗೆ ವೈದ್ಯನಾಥ್ ಬಾಬೂ ಅವರ ಅಮೃತಶಿಲೆಯ ವರಾಂಡದಲ್ಲಿ ಒಬ್ಬ ಡೊಳ್ಳುಹೊಟ್ಟೆಯ ಸನ್ಯಾಸಿ ಗಡದ್ದಾಗಿ ಕುಳಿತು ಎರಡು ಸೇರು ಮಿಷ್ಟಾನ್ನ ಮತ್ತು ಒಂದೂವರೆ ಸೇರು ಹಾಲನ್ನು ಪೊಗದಸ್ತಾಗಿ ಹೊಡೆಯುತ್ತಲಿದ್ದ. ವೈದ್ಯನಾಥ್ ಬಾಬೂಗಳು ಒಂದು ಚಾದರ ಹೊದ್ದುಕೊಂಡು, ಕೈಜೋಡಿಸಿ, ವಿನೀತ ಭಾವದಿಂದ ನೆಲದ ಮೇಲೆ ಕುಳಿತು ಭಕ್ತಿಭಾವದಿಂದ ಭೋಜನ ಮಾಡುತ್ತಿದ್ದವರ ಉಸ್ತುವಾರಿ ಮಾಡುತ್ತಿದ್ದರು. ಆಗ ಹೇಗೋ ದರಬಾನನ ಕಣ್ತಪ್ಪಿಸಿ ಒಬ್ಬ ಸಣಕಲ ಬಾಲಕನೊಂದಿಗೆ ಇನ್ನೇನು ಸತ್ತೇ ಹೋಗುವಂತಿದ್ದ ಒಬ್ಬ ಹೆಂಗಸು ಒಳನುಗ್ಗಿ ಕ್ಷೀಣವಾದ ದನಿಯಲ್ಲಿ – “ಬಾಬೂಜೀ, ತಿನ್ನಲು ಏನಾದರೂ ನೀಡಿ” ಎಂದಳು
ವೈದ್ಯನಾಥರು ಗಾಬರಿಯಿಂದ ಚೀರತೊಡಗಿದರು… ಗುರುದಯಾಲ್…ಗುರುದಯಾಲ್…….ಅವರ ಬದಲಾಗುತ್ತಿರುವ ಅವತಾರವನ್ನು ಕಂಡ ಮಹಿಳೆ ಅತ್ಯಂತ ಕರುಣೆಯಿಂದ ಆರ್ದ್ರವಾದ ಸ್ವರದಲ್ಲಿ –“ ಈ ಮಗುವಿಗೆ ಎರಡು ತುತ್ತು ಉಣ್ಣಲು ನೀಡಿ ಇವರೇ…ನನಗೇನೂ ಬೇಡ.”
ಗುರುದಯಾಲ್ ಬಂದು ತಾಯಿ ಮತ್ತು ಬಾಲಕನನ್ನು ಹೊರಗೋಡಿಸಿದ. ಹಸಿವೆಯಿಂದ ಒದ್ದಾಡುತ್ತಿದ್ದ ಆ ಬಾಲಕ ವೈದ್ಯನಾಥರ ಏಕೈಕ ಮಗನಾಗಿದ್ದ. ಆ ತಾಯಿ ವಿನೋದಾ ಆಗಿದ್ದಳು. ಒಂದು ನೂರು ದಷ್ಟಪುಷ್ಟ ಬ್ರಾಹ್ಮಣರು ಮತ್ತು ಮೂರು ಕೋಣದಂತಿದ್ದ ಸನ್ಯಾಸಿಗಳು ವೈದ್ಯನಾಥರ ಪುತ್ರಪ್ರಾಪ್ತಿಗಾಗಿ ದುರಾಸೆಯಲ್ಲಿ ಅವರಿಗೆ ಮಂಕುಬೂದಿಯೆರಚಿ ಅವರ ಅನ್ನ ಉಣ್ಣುತ್ತಲೇ ಇದ್ದರು!
(ಮುಗಿಯಿತು)
ನೆರೆನಾಡ ನುಡಿಯೊಳಗಾಡಿ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 1:53 pm, Fri, 25 March 22