ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com
ಹಾಗಿದ್ದರೆ ಅಮೆರಿಕದಲ್ಲಿ ಪರಿಸ್ಥಿತಿ ಹೇಗಿದೆ? ಒಳರೋಗ ತಜ್ಞರಾಗಿರುವ ಡಾ. ರಾಮಪ್ರಸಾದ್ ಕೊಣನೂರ್ ಅವರು, ಕೊರೋನಾದಿಂದಾಗಿ ಹೇಗೆ ಅಚಾನಕ್ಕಾದ ಏರುಪೇರುಗಳಿಗೆ ಸಿಕ್ಕಿಹಾಕಿಕೊಳ್ಳಬೇಕಾಯಿತು, ಅದರಿಂದ ಯಾವೆಲ್ಲ ಘಟನೆಗಳಿಗೆ ಸಾಕ್ಷಿಯಾಗಬೇಕಾಯಿತು, ಕುಸಿಯುತ್ತಿರುವ ಮನಸ್ಸಿಗೆ ಹೇಗೆಲ್ಲ ಶಕ್ತಿ ತಂದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬುದರ ಸ್ಥೂಲಚಿತ್ರಣ ಕಟ್ಟಿಕೊಟ್ಟಿದ್ದಾರೆ.
*
2019ರ ಡಿಸೆಂಬರ್ ಮೊದಲ ವಾರ ನಾನೊಬ್ಬನೇ ಭಾರತಕ್ಕೆ ಹೋಗಿ ಬಂದೆ. ಇದ್ದ ಎರಡು ವಾರದಲ್ಲಿ ನನ್ನ ತಂಗಿ, ಅಪ್ಪನಿಗೆ ಎಂಬತ್ತು ತುಂಬಿದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹರಿಹರಪುರದ ಮಠದಲ್ಲಿ ಶಾಂತಿ ಹೋಮಗಳನ್ನು ಮೊದಲೇ ನಿಗದಿಪಡಿಸಿದ್ದಳು. ಮನೆಮಂದಿಯ ಜೊತೆ ಸಂತೋಷದಿಂದ ಕಲೆತು ಅಲ್ಲಿಂದ ಮುಂದೆ ಬೆಂಗಳೂರು ತಲುಪಿ ನನ್ನ ಮಡದಿಯ ಅಜ್ಜಿ ಮತ್ತು ನಮ್ಮತ್ತೆಯವರ ಜೊತೆ ಒಂದೆರಡು ದಿನಗಳನ್ನು ಕಳೆದು ದೇವಸ್ಥಾನಗಳನ್ನು ಸುತ್ತಿ ಮುಂದೆ ಗೋವಾ ತಲುಪಿದ್ದೆ. ನನ್ನ ಕಾಲೇಜು ಸಹಪಾಠಿಗಳ ಸಮಾಗಮ ಗೋವಾದಲ್ಲಿ ಭರ್ಜರಿಯಾಗಿಯೇ ಇತ್ತು. ಏನು ಸಂತೋಷ, ಏನು ನಗು!
ಹೀಗೆ ರಜೆ ಕಳೆದು, ಅಮೆರಿಕ ತಲುಪಿದ ನನಗೆ ಮುಂದಿನ ದಿನಗಳು ಇಷ್ಟು ಕ್ಲಿಷ್ಟವಾಗುತ್ತವೆ ಎಂಬ ಪರಿವೆಯೂ ಇರಲಿಲ್ಲ. ಮಾರ್ಚ್ ಒಂದನೇ ತಾರೀಖು ನ್ಯೂಯಾರ್ಕ್ ನಗರದಲ್ಲಿ ಮೊದಲ ಕೊರೋನ ಕೇಸ್ ಪತ್ತೆಯಾಯಿತು. ನಾನಿರುವ ಪಿಯೋರಿಯಾ ಇಲಿನಾಯ್ಗೆ ಕೊರೋನ ತಲುಪಲು ಮೇ ತಿಂಗಳು ಬೇಕಾಯಿತು. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಆಸ್ಪತ್ರೆಯ ರೋಗಿಗಳ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿಬಿಟ್ಟಿತು. ಆಸ್ಪತ್ರೆಗೆ ಇದರಿಂದ ಆರ್ಥಿಕವಾಗಿ ಪೆಟ್ಟುಬಿದ್ದಿತು. ಆಗ ಶುರುವಾದದ್ದು Furlough (ತಾತ್ಕಾಲಿಕವಾಗಿ ಕೆಲಸಕ್ಕೆ ಬರದಂತೆ ಪತ್ರ ಕಳಿಸುತ್ತಾರೆ ಮತ್ತು ಸಂಬಳ ಕೊಡುವುದಿಲ್ಲ). ಈ ಅಭದ್ರತೆ ಹೀಗೆಯೇ ಇರುತ್ತದೆಯೇ, ಕೆಲಸ ಕಳೆದುಕೊಳ್ಳಬೇಕಾಗುತ್ತದೆಯೇ, ಮುಂದಿನ ಯೋಜನೆ ಏನು? ಹೀಗೆ ಹತ್ತು ಹಲವಾರು ಯೋಚನೆಗಳು ತಲೆಗೆ ಬಂದವು.
ಜೂನ್ ಕೊನೆಯಿಂದ ಕೊರೋನಾ ರೋಗಿಗಳ ಸಂಖ್ಯೆ ಮಿತಿಮೀರಿ ಬೆಳೆಯುತ್ತ ಹೋಯಿತು. ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗ ಸ್ಥಗಿತಗೊಂಡವು. ಇಲ್ಲಿಯ ಯಾವುದೇ ಆಸ್ಪತ್ರೆಯ ಆರ್ಥಿಕ ವ್ಯವಸ್ಥೆ ನಿಲ್ಲುವುದೇ ಶಸ್ತ್ರಚಿಕಿತ್ಸೆಗಳ ಮೇಲೆ. ಶಸ್ತ್ರಚಿಕಿತ್ಸೆ ನಿಂತರೆ ಕೆಲಸಗಾರರಿಗೆ ಸಂಬಳದ ಮೇಲೆ ಹೊಡೆತ. ಈ ದ್ವಂದ್ವದಲ್ಲೇ ಕೆಲಸ ಮುಂದುವರೆಯಿತು. ನನ್ನ ಸಹ ಕೆಲಸಗಾರರು ಒಬ್ಬೊಬ್ಬರೇ ಕೊರೋನಾ ಸೋಂಕಿಗೆ ಸಿಲುಕುತ್ತ ಬಂದರು. ಮೊದಲಲ್ಲಿ ಕೊರೋನಾ ಬಂದಾಗ ಕಡ್ಡಾಯ ಮೂರು ವಾರಗಳ ಕಾಲ ಆಸ್ಪತ್ರೆಗೆ ಬರುವ ಹಾಗಿರಲಿಲ್ಲ. ಅವರ ಕೆಲಸದ ಜವಾಬ್ದಾರಿ ಉಳಿದವರು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಯಿತು. ನಿರಂತರ ಕೆಲಸ ಶಕ್ತಿ ಕುಂದಿಸುತ್ತದೆ.
ನಾನು ಮತ್ತು ನನ್ನ ಪತ್ನಿ ಅರುಣ ಇಬ್ಬರೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಿನ್ನೆಲೆಯುಳ್ಳವರಾಗಿದ್ದರಿಂದ ಮಗನಿಗಾಗಿ ಒಬ್ಬರಾದರೂ ಮನೆಯಲ್ಲಿ ಉಳಿಯುವ ನಿರ್ಧಾರ ಮಾಡಬೇಕಾಯಿತು. ಸೋಂಕಿನ ಭಯ ಹಾಗಿತ್ತು ಉಳಿಯುತ್ತೇವೆಯೋ ಇಲ್ಲವೋ ಎಂದು (ಈಗಲೂ ಅದೇ ಭಯ ಅನ್ನಿ). ಕೊನೆಗೆ ಅರುಣಳನ್ನು ಕಾಡಿಬೇಡಿ ಕೆಲಸಕ್ಕೆ ಹೋಗಬೇಡವೆಂದು ಒಪ್ಪಿಸಬೇಕಾಯಿತು.
ಕೋವಿಡ್ ರೋಗಿಗಳ ಶುಶ್ರೂಷೆ ಸುಲಭವಲ್ಲ. ಮೊದಲಿಗೆ ನಿಮ್ಮನ್ನು ನೀವು ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳಬೇಕು. N95 ಮಾಸ್ಕ್ ಹಾಕಿ ಉಸಿರಾಡುವುದು ಯಾವ ಪಾಪಿಗೂ ಬೇಡ. ಅದು ಮೂಗು ಮತ್ತು ಗಡ್ಡವನ್ನು ಸಂಪೂರ್ಣ ಸೀಲ್ ಮಾಡಿಬಿಟ್ಟಿರುತ್ತದೆ. ಇಂಗಾಲದ ಗಾಳಿ ಒಳಗೆಳೆದು ಎಳೆದು ತಲೆ ನೋವು ಮತ್ತು ಮನಸ್ಸನ್ನು ಮಬ್ಬು ಮಾಡಿಬಿಡುತ್ತದೆ. ಈ ಮದ್ಯೆ ಬೇರೆಯವರ ಕರೆ ಬಂದಾಗ ಹೇಗೋ ಮೊಬೈಲ್ ತೆಗೆದುಕೊಂಡು ಹೊಸ ರೋಗಿಗಳ ಅಡ್ಮಿಷನ್ ಮಾಡುತ್ತಿರಬೇಕಾಗುತ್ತದೆ. ಈ ಕಷ್ಟ ಒಳಗಿದ್ದವನಿಗೆ ಮಾತ್ರ ಅರಿವಾಗಲು ಸಾಧ್ಯ. ಒಮ್ಮೆ ತಪ್ಪಿ ನನ್ನ ಕೆನ್ನೆಗೆ ಕೈ ತಗುಲಿ ಬಿಟ್ಟಿತು. ಕೆನ್ನೆಗೆ ಬ್ಲೀಚ್ ಹಾಕಿ ತೊಳೆದುಬಿಟ್ಟೆ!
ನರ್ಸ್ ಮತ್ತು ಇತರೆ ವಾರ್ಡ್ ಪರಿಚಾರಕರ ಕೆಲಸವೂ ಸುಲಭವಲ್ಲ. ರೋಗಿಯ ಕೋಣೆ ಸ್ವಚ್ಛಗೊಳಿಸುತ್ತಲೇ ಇರಬೇಕು. ಬಹಳ ವಯಸ್ಸಾದವರ ಮಲಮೂತ್ರ ತೆಗೆಯುತ್ತಿರಬೇಕು. ಒಮ್ಮೆ ಯೋಚಿಸಿ, ಈ ಸೋಂಕಿನ ಸಮಯದಲ್ಲಿ ಈ ಕೆಲಸಗಳನ್ನು ಮಾಡುವ ವಾರ್ಡ್ ಪರಿಚಾರಕರ ಪರಿಸ್ಥಿತಿ ಹೇಗಿರಬಹುದು ಎಂದು. ಅಡಿಯಿಂದ ಮುಡಿಯವರೆಗೆ ಮೈ ಎಲ್ಲವನ್ನೂ ಮುಚ್ಚಿಕೊಂಡಿರುವ ನಮ್ಮೆಲ್ಲರಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಕುಡಿಯಲು ಸಹ ಆಗದಿದ್ದ ಪರಿಸ್ಥಿತಿ. ಹೊಟ್ಟೆಯ ವಿಚಾರ ಬಿಡಿ, ಸಮಯಕ್ಕೆ ಸರಿಯಾಗಿ ಶೌಚ ಉಪಯೋಗಿಸಲು ಆಗದಿರುವ ಸ್ಥಿತಿ.
ಇದು ಒಂದೆರಡು ದಿನದ ಮಾತಾ? ನಿರಂತರ ವರ್ಷದ ಮೇಲೆ ಹೀಗೆ ಜೀವನ ನಡೆದಾಗ, ಸುಸ್ತು ಮತ್ತು ನಿದ್ದೆಯಿಲ್ಲದೆ ಮನುಷ್ಯನ ಮನಸ್ಸು ಮತ್ತು ಶಕ್ತಿ ಕುಗ್ಗುವುದು ಆರೋಗ್ಯ ಕ್ಷೇತ್ರದವರಿಗೆ ಸಾಮಾನ್ಯ. ಇದನ್ನು Pandemic fatigue ಎನ್ನುತ್ತೇವೆ. ಕಾಣದ ಹಾಗೆ ಶೌಚಾಲಯದಲ್ಲಿ ಕಣ್ಣೀರು ಒರೆಸಿಕೊಂಡುಬಂದು ನಾಟಕೀಯ ನಗುಮುಖ ಹೊತ್ತು ಕೆಲಸ ಮಾಡುತ್ತಿರಬೇಕಷ್ಟೆ. ಸ್ವತಃ ನಾನು ತಮಾಷೆಯ ಮನುಷ್ಯನಾದ್ದರಿಂದ ಎಲ್ಲದರಲ್ಲೂ ನಗು ಹುಡುಕಲು ನೋಡುತ್ತೇನೆ, ಇದು ನನಗೆ ಬಹಳವೇ ಸಹಾಯ ಮಾಡಿದೆ.
ಕೋವಿಡ್ ರೋಗಿಗಳ ಆರೋಗ್ಯ ಹಠಾತ್ ಕುಸಿಯುವುದು ಸಾಮಾನ್ಯ. ಹೆಚ್ಚು ಆಮ್ಲಜನಕ ಬೇಕಾದಾಗ ಅಥವಾ ವೆಂಟಿಲೇಟರ್ ಬೇಕಾದಾಗ ICU ಗೆ ಸ್ಥಳಾಂತರಿಸಬೇಕಾಗುತ್ತದೆ. ಇಲ್ಲವೇ ಇವರಿಗೆ ಸ್ಟ್ರೋಕ್ ಅಥವಾ ಹೃದಯಾಘಾತ ಅಚಾನಕ್ಕಾಗಿ ಆಗುತ್ತದೆ. ಒಳರೋಗಿ ತಜ್ಞನಾದ ನನಗೆ ಇಂತಹ ಸನ್ನಿವೇಶಗಳು ಎದುರಾಗುವುದು ಅತಿಹೆಚ್ಚು. ಕೆಲವು ಘಟನೆಗಳು ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತದೆ. ವರ್ಷದಿಂದ ಅಮ್ಮನನ್ನು ನೋಡಲಾಗದ ಮಗ ಹೊರದೇಶದಿಂದ ಬಂದವ ಎರಡು ಗಂಟೆ ಅಮ್ಮನ ಜೊತೆ ಕಳೆದು ಹೆಂಡತಿ ಮಗಳನ್ನು ನೋಡಲು ನೂರು ಮೈಲು ದೂರವಿರುವ ಊರಿಗೆ ಹೋಗಿದ್ದರು. ಪ್ರಯಾಣದಲ್ಲಿ ಕೋವಿಡ್ ಸೋಂಕಿತನಾದ ಆತ ತಾಯಿಗೂ ಆ ಎರಡು ಗಂಟೆಯಲ್ಲಿ ಅದನ್ನು ತಲುಪಿಸಿದ್ದರು. ಅಮ್ಮ ಮತ್ತು ಮಗ ಮುಂದಿನ ಹತ್ತು ದಿನಗಳಲ್ಲಿ ಇಲ್ಲವಾದರು.
ಇನ್ನೊಂದು ಪ್ರಕರಣದಲ್ಲಿ ಏರ್ಪೈಲಟ್ ಆದ ಆತ ಮಲಗಿ ಎದ್ದಾಗ ತನ್ನೆರಡು ಕಾಲಿನ ಸ್ವಾಧೀನ ಕಳೆದುಕೊಂಡಿದ್ದರು. ಕೆಮ್ಮಿಲ್ಲ, ನೆಗಡಿಯಿಲ್ಲ ಜ್ವರವೂ ಇಲ್ಲ. ಪರೀಕ್ಷಿಸಿದಾಗ ಪಾಸಿಟಿವ್ ಎಂದು ತಿಳಿದುಬಂತು. ಬೆನ್ನು ಹುರಿಯ ದ್ರವದ ಪರೀಕ್ಷೆ, MRI ಗಳಲ್ಲಿ ಆತನಿಗೆ Transverse Myelitis ಎಂಬ ರೋಗ ಬಂದಿರುವುದು ತಿಳಿಯಿತು. ಪ್ರಪಂಚದಲ್ಲೆಲ್ಲ ಹುಡುಕಿದರೂ ಬೆರಳೆಣಿಕೆಯಷ್ಟು ಜನರಿಗಿರುವ ಈ ಕಾಯಿಲೆಯನ್ನು ಕೋವಿಡ್ ಈತನಿಗೆ ಕೊಟ್ಟಿತು. ಸಣ್ಣ ವಯಸ್ಸು, ಕೇವಲ ಮೂವತ್ತು. ಇತ್ತ ಅವನ ಮನೆಯವರೆಲ್ಲರೂ ಕೋವಿಡ್ಗೆ ತುತ್ತಾಗಿದ್ದರು. ಆಮ್ಲಜನಕದ ಲೆವೆಲ್ ಕಮ್ಮಿ ಇದ್ದಿದ್ದರಿಂದ ಅಡ್ಮಿಟ್ ಆಗುವಂತೆ ಹೇಳಿದೆ. ಸ್ಟಿರಾಯ್ಡ್ ಮತ್ತು ರೆಂಡೆಸಿವಿರ್ ಕೊಡುತ್ತಿದ್ದರೂ ಎರಡು ಲೀಟರ್ ಆಮ್ಲಜನಕದ ಮೇಲೆ ಉಸಿರಾಡುತ್ತಿದ್ದ ಈತ ಕಣ್ಣ ಮುಂದೆಯೇ ಕುಸಿದು ಐವತ್ತು ಲೀಟರ್ಗೆ ಅವಲಂಬಿಸಿದ. ತಕ್ಷಣ ICU ಗೆ ಸಾಗಿಸುತ್ತ ಆತನ ಇಪ್ಪತ್ತರ ಮಡದಿಗೆ ಫೋನಾಯಿಸಿದಾಗ ಆಕೆಗೆ ಅಳಲು ಕೂಡ ಶಕ್ತಿ ಇಲ್ಲದ್ದು ಫೋನಿನಲ್ಲಿ ಗೊತ್ತಾಗುತ್ತಿತ್ತು. ಇನ್ನೆರಡು ದಿನಗಳಲ್ಲಿ ಆತ ಇಲ್ಲವಾದ. ಈ ವರ್ಷದಲ್ಲಿ ನನ್ನ ಕೆಲವು ಹೈಸ್ಕೂಲ್ ಸಹಪಾಠಿಗಳನ್ನು ಮತ್ತು ಕಾಲೇಜು ಸಹಪಾಠಿಗಳನ್ನು ಕಳೆದುಕೊಂಡೆ. ಮಧ್ಯ ವಯಸ್ಸಿನ ದೊಡ್ಡಮ್ಮನ ಮಗ ಚೆನ್ನಾಗಿದ್ದವ ಹೋಗಿಬಿಟ್ಟ. ಇನ್ನೇನೇನು ಕಾದಿದೆಯೋ ನೋಡಬೇಕಷ್ಟೆ.
ಮನೆಗೆ ಬಂದಾಗ ಸ್ನೇಹಿತರು, ಬಂಧುಗಳು ಮತ್ತು ಫೇಸ್ಬುಕ್ ವಲಯದ ಪರಿಚಿತರು ಬಹಳಷ್ಟು ಪ್ರಶ್ನೆಗಳನ್ನು ಕೇಳಿರುತ್ತಾರೆ, ಅದಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು ಉತ್ತರಿಸಲು ಪ್ರಯತ್ನಿಸುತ್ತಿದ್ದೇನೆ. ಇತ್ತೀಚಿಗೆ ವೈದ್ಯರಾದ ಗುರುಪ್ರಸಾದ್ ಕಾಗಿನೆಲೆಯವರು ಭಾರತದ ವೈದ್ಯರ ಭಾರ ಸ್ವಲ್ಪ ಕಮ್ಮಿ ಮಾಡುವ ನಿಟ್ಟಿನಲ್ಲಿ ಫೇಸ್ಬುಕ್ನಲ್ಲಿ Covid-19 Outreach Program ಎಂಬ ಒಂದು ವೇದಿಕೆ ಹಾಕಿಕೊಟ್ಟಿದ್ದಾರೆ ಅದರಲ್ಲಿ ನನಗೆ ತಿಳಿದ ಮಟ್ಟಿಗೆ ನಮ್ಮ ಜನರಿಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನ ಪಡುತ್ತಿದ್ದೇನೆ. ಮಧ್ಯೆ ಸಮಯ ಸಿಕ್ಕಾಗ ನನ್ನ ದೀರ್ಘ ನಡಿಗೆ ನಿಲ್ಲಿಸಿಲ್ಲ. ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿಲ್ಲ. ಎಲ್ಲಕಿಂತ ಮುಖ್ಯವಾಗಿ ಮಲೆಯಾಳಂ ಸಿನಿಮಾದ ದಾಸನಾಗಿಬಿಟ್ಟಿದ್ದೇನೆ. ಮಲಯಾಳಂ ನಟರಷ್ಟು ನೈಜ ನಟನೆ ಇತರರಿಂದ ಅಸಾಧ್ಯ ಎಂದು ನನಗೆ ನಾನೇ ಮಾಡಿಕೊಂಡ ತೀರ್ಮಾನ.
ಬೆಳಗ್ಗೆ ಸೋತ ಮುಖ ಹಾಕಿಕೊಂಡು ಆಸ್ಪತ್ರೆಗೆ ಹೊರಡುವ ನನಗೆ, ನನ್ನ ಮಡದಿ ಹೇಳುವ ಮಾತು, ‘ರೀ ಎಷ್ಟು ಜನರಿಗೆ ಈ ಕೆಲಸ ಮಾಡಲು ಸಾಧ್ಯ ಹೇಳಿ? ನಗುತ್ತ ಹೋಗಿ. ನಿಮ್ಮ ಜೀವನಕ್ಕೊಂದು ಗುರಿಯನ್ನು ಆ ದೇವರು ಕೊಟ್ಟಿದ್ದಾನೆ. ಇದು ಪುಣ್ಯದ ಕೆಲಸ ಎಲ್ಲರಿಗೂ ಈ ಅವಕಾಶ ಸಿಗಲ್ಲ, ಹೋಗಿ ಬನ್ನಿ ಎಂದಾಗ ಕಳೆದು ಹೋದ ಶಕ್ತಿ ಮತ್ತೆ ಲಭಿಸಿದಂತೆ ಆಗುತ್ತದೆ.
ಇದನ್ನೂ ಓದಿ : Health Workers : ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಕೊಡಗಿನ ಶವಾಗಾರದ ಈ ಸಹಾಯಕರಿಬ್ಬರು ವರ್ಷದಿಂದ ಮನೆಗೇ ಹೋಗಿಲ್ಲ!
Published On - 5:25 pm, Sun, 9 May 21