ಗಾಜನೂರಿನ ಎಲ್ಲೆಡೆ ಹರಡಿದೆ ಅಪ್ಪು ನೆನಪಿನ ಕಂಪು; ಪುನೀತ್ ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ತೆರೆದಿಟ್ಟ ಅಪ್ಪು ಕಥೆ
Puneeth Rajkumar: ಪುನೀತ್‌ಗೆ ಪುನೀತ್ ಅವರೇ ಸಾಟಿ. ಅಪ್ಪು ನಮ್ಮನ್ನು ಅಗಲಿದರು ಅವರ ನೆನಪು ಮಾತ್ರ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಂದಲ್ಲ ಒಂದು ವಿಚಾರ ಅಗಲಿದ ಪುನೀತ್ ನೆನಪನ್ನು ತರಿಸುತ್ತದೆ. ಅದರಲ್ಲೂ ತಮಿಳುನಾಡಿನ ತಾಳವಾಡಿಯ ದೊಡ್ಡ ಗಾಜನೂರು ಗ್ರಾಮದ ಪ್ರತಿ ವಸ್ತುಗಳು ಅಪ್ಪುವನ್ನು ನೆನಪಿಸುತ್ತವೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.
ಗಾಜನೂರು: ಪುನೀತ್‌ಗೆ ಪುನೀತ್ ಅವರೇ ಸಾಟಿ. ಅಪ್ಪು ನಮ್ಮನ್ನು ಅಗಲಿದರು ಅವರ ನೆನಪು ಮಾತ್ರ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಂದಲ್ಲ ಒಂದು ವಿಚಾರ ಅಗಲಿದ ಪುನೀತ್ ನೆನಪನ್ನು ತರಿಸುತ್ತದೆ. ಅದರಲ್ಲೂ ತಮಿಳುನಾಡಿನ ತಾಳವಾಡಿಯ ದೊಡ್ಡ ಗಾಜನೂರು ಗ್ರಾಮದ (Gajanuru) ಪ್ರತಿ ವಸ್ತುಗಳು, ಸ್ಥಳಗಳು ಅಪ್ಪುವನ್ನು ನೆನಪಿಸುತ್ತವೆ. ಅಲ್ಲದೇ ಪ್ರತಿಯೊಂದೂ ಅಪ್ಪುವಿನ ದಾರಿಯನ್ನು ಕಾಯುವಂತೆ ಭಾಸವಾಗುತ್ತದೆ. ಪುನೀತ್‌ಗೆ (Puneeth Rajkumar) ಪ್ರಿಯವಾದ ಜಾಗಗಳಾದ ಅಣ್ಣಾವ್ರು ಹುಟ್ಟಿದ ಹೆಂಚಿನ ಮನೆ, ಅಪ್ಪುವಿನ ಫೇವರಿಟ್ ದೊಡ್ಡಮನೆ, ದೊಡ್ಡ ಆಲದ ಮರ, ಬೀರಪ್ಪನ ಗುಡಿ, ಪಡಸಾಲೆಯಲ್ಲಿ ಪುನೀತ್ ತೆಗೆಸಿಕೊಂಡ ಫೋಟೋಗಳು.. ಇವೆಲ್ಲವೂ ಅಪ್ಪು ದಾರಿಯನ್ನು ಕಾಯುತ್ತಿವೆ. ಅಲ್ಲದೇ ಪುನೀತ್ ಹಾಗೂ ನಾಗರಾಜ್ ಅಲಿಯಾಸ್ ಕುಳ್ಳ (Kulla Nagaraj) ಅವರ ಸ್ನೇಹ, ಜೊತೆಯಾಗಿ ಕಳೆದ ಬಾಲ್ಯ, ಈ ಜೋಡಿ ಗಾಜನೂರಿನಲ್ಲಿ ಓಡಾಡಿದ ಜಾಗಗಳು.. ಹೀಗೆ ಎಲ್ಲದರಲ್ಲೂ ಪುನೀತ್ ನೆನಪಿದೆ. ಟಿವಿ9ನೊಂದಿಗೆ ನಾಗರಾಜ್ ಅಲಿಯಾಸ್ ಕುಳ್ಳ ಅವರು ಅಪ್ಪುಗೆ ಪ್ರಿಯವಾದ ಜಾಗಗಳು, ಅವರೊಂದಿಗೆ ಕಳೆದ ಕ್ಷಣಗಳು ಈ ಎಲ್ಲವನ್ನೂ ಮೆಲುಕು ಹಾಕಿದ್ದಾರೆ. ಮುಂದೆ ಓದಿ.
ಪುನೀತ್ ಹಾಗೂ ಕುಳ್ಳ ಜೋಡಿಯ ಸ್ನೇಹ: ಇಡೀ ಗಾಜನೂರಿನಲ್ಲಿ ಅಪ್ಪು ಮತ್ತು ಕುಳ್ಳನ ಜೋಡಿ ಅಂದ್ರೆ ಫುಲ್ ಫೇಮಸ್ಸು. ಹೌದು ನಾಗರಾಜ್ ಅಲಿಯಾಸ್ ಕುಳ್ಳ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರದ್ದು ಬರೋಬ್ಬರಿ 40 ವರ್ಷದ ಸ್ನೇಹ. ಸದ್ಯ ಗುಂಡ್ಲುಪೇಟೆಯಲ್ಲಿ ವಾಸವಾಗಿರುವ ನಾಗರಾಜ್‌ಗೆ 48 ವರ್ಷ. ಅಪ್ಪು 5 ವರ್ಷದ ಬಾಲಕನಾಗಿದ್ದಾಗಲಿಂದ ನಾಗರಾಜ್ ಹಾಗೂ ಅಪ್ಪು ಸ್ನೇಹಿತರಾಗಿದ್ದರು. ಮರಕೋತಿ ಆಟ, ಸೈಕಲ್ ಹೊಡೆಯೋದು, ಈಜು, ಕಣ್ಣಾ ಮುಚ್ಚಾಲೆ ಸೇರಿ ದೊಡ್ಡ ಗಾಜನೂರಿನಲ್ಲಿ ಇವರು ಆಡದ ಆಟಗಳಿಲ್ಲ; ಹೋಗದ ಜಾಗಗಳಿಲ್ಲ. ಅಪ್ಪು ನಾಗರಾಜ್ ಅಲಿಯಾಸ್ ಕುಳ್ಳ ಅವರ ಸ್ನೇಹ ಅಂತಿಂತಾ ಸ್ನೇಹವಲ್ಲ. ಸದ್ಯ ಅಪ್ಪುಗೆ 46 ವರ್ಷ ಕುಳ್ಳನಿಗೆ 48 ವರ್ಷ. ಎರಡು ವರ್ಷ ದೊಡ್ಡವನಾದರೂ ಪುನೀತ್‌ಗಿಂತ ಎತ್ತರ ಕಡಿಮೆ ಇದ್ದ ಕಾರಣ, ಅಪ್ಪು ಅವರನ್ನು ‘ಕುಳ್ಳ ಕುಳ್ಳ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಸದಾ ಜೊತೆಯಾಗಿ ಇಬ್ಬರೂ ಇರುತ್ತಿದ್ದರು. ಸ್ಟಾರ್ ಆದರೂ ಕುಳ್ಳನ ಜೊತೆ ಪುನೀತ್ ಸ್ನೇಹ ಮೊದಲಿನಂತೆ ಮುಂದುವರೆದಿತ್ತು. ಗಾಜನೂರಿಗೆ ಬಂದಾಗಲೆಲ್ಲಾ ಕುಳ್ಳ ನಾಗರಾಜ್ ಇರಲೇಬೇಕು. ಮೈಸೂರಿಗೆ ಬಂದರೂ ಕಾಲ್ ಮಾಡಿ ಪುನೀತ್ ಅವರನ್ನು ಕರೆಸಿಕೊಳ್ಳುತ್ತಿದ್ದರು. ಕುಳ್ಳ ನಾಗರಾಜ್ ಅವರಿಗೆ ಬೆಂಗಳೂರಿನಲ್ಲಿ ಅಪ್ಪು ಶಾಪಿಂಗ್ ಕೂಡ ಮಾಡಿಸಿದ್ದರು.
ಅಣ್ಣಾವ್ರು ಹುಟ್ಟಿದ ಹೆಂಚಿನ ಮನೆ: ದೊಡ್ಡ ಗಾಜನೂರು ಕರ್ನಾಟಕ ತಮಿಳು ನಾಡಿನ ಗಡಿಭಾಗದಲ್ಲಿದೆ. ತಮಿಳುನಾಡು ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರು ವಿಶ್ವದ ಗಮನಸೆಳೆದಿದೆ. ಇದಕ್ಕೆ ಕಾರಣ ಇದು ವರನಟ ಪದ್ಮಭೂಷಣ ಪದ್ಮವಿಭೂಷಣ ಡಾ ರಾಜ್‌ಕುಮಾರ್ ಹುಟ್ಟಿದ ಊರು. ಹೌದು ಪುಟ್ಟ ಗಡಿ ಗ್ರಾಮದ ಹೆಂಚಿನ ಮನೆಯಲ್ಲಿ ಮುತ್ತುರಾಜನ ಜನನವಾಗಿತ್ತು. ಇದೇ ಮನೆ ಅಪ್ಪುವಿನ ಫೇವರೇಟ್ ಸ್ಥಳ. ಈ ಮನೆ ಕಂಡರೆ ಅಪ್ಪಗೆ ಪಂಚಪ್ರಾಣ. ಯಾವಾಗ ಗಾಜನೂರಿಗೆ ಬಂದರೂ ಅಪ್ಪು ಈ ಮನೆಗೆ ಓಡೋಡಿ ಬರುತ್ತಿದ್ದರಂತೆ. ಇಲ್ಲಿನ ಪಡಶಾಲೆ ಮೇಲೆ ಕುಳಿತುಕೊಳ್ಳುವುದು, ಮನೆಯ ಒಳಗೆ ಹೊರಗೆ ಓಡಾಡುವುದು. ಮನೆಯ ಒಳಗಡೆ ಮಲಗುವುದು ಅಪ್ಪುವಿಗೆ ಸಖತ್ ಇಷ್ಟವಾಗಿತ್ತಂತೆ. ದೊಡ್ಡವರಾದ ಮೇಲೂ ಅಪ್ಪು ಈ ಮನೆಗೆ ಬರೋದನ್ನು ನಿಲ್ಲಿಸಿರಲಿಲ್ಲವಂತೆ. ಈ ಮನೆಗೆ ಬಂದರೆ ಅಪ್ಪುಗೆ ಒಂತಾರ ಖುಷಿ ಸಿಗುತ್ತಿತ್ತಂತೆ.
ದೊಡ್ಡ ಆಲದ ಮರ: ಗಾಜನೂರಿನಲ್ಲಿ ಅಪ್ಪುವಿನ ಮತ್ತೊಂದು ಫೇವರೇಟ್ ಸ್ಥಳ ಅಂದರೆ ಅದು ದೊಡ್ಡ ಆಲದ ಮರ. ದೊಡ್ಡ ಗಾಜನೂರಿನ ಹೊರವಲಯದಲ್ಲಿರುವ ದೊಡ್ಡ ಆಲದ ಮರ ಅಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಸುಮಾರು 5 ಎಕರೆ ಜಮೀನಿನ ಮಧ್ಯದಲ್ಲಿರುವ ಈ ಆಲದ ಮರವಿರುವ ಜಾಗ ಅತ್ಯಂತ ಪ್ರಶಾಂತವಾಗಿದೆ. ಇಲ್ಲಿ ಬಂದು ಕುಳಿತರೆ ಮನಸಿಗೆ ಒಂದು ರೀತಿ ಶಾಂತಿ ಸಿಗುತ್ತದೆ. ಈಗಾಗಿ ಅಪ್ಪು ಇಲ್ಲಿಗೆ ಬಂದು ಕುಳಿತು ಬಿಡುತ್ತಿದ್ದರಂತೆ. ಇನ್ನು ಅಪ್ಪು ಬಾಲಕನಾಗಿದ್ದಾಗ ಇದೇ ಒಂದು ರೀತಿ ಮನೆಯಾಗಿ ಹೋಗಿತ್ತಂತೆ. ಇಲ್ಲಿಗೆ ಬಂದು ಮರಕೋತಿಯಾಟ ಆಡೋದು ಕಣ್ಣಾ ಮುಚ್ಚಾಲೆ ಆಡೋದು ಅಪ್ಪುಗೆ ಸಖತ್ ಇಷ್ಟವಾಗಿತ್ತಂತೆ. ಇನ್ನು ಕವಿರತ್ನ ಕಾಳಿದಾಸ ಶೂಟಿಂಗ್ ಸಹಾ ಇಲ್ಲೇ ನಡೆದಿತ್ತಂತೆ. ಆಗ ಅಪ್ಪು ಆಗ ಅವರ ಸ್ನೇಹಿತ ಕುಳ್ಳ ನಾಗರಾಜ್ ಅವರಿಗೆ ಶೂಟಿಂಗ್ ನೋಡಲು ಬಿಟ್ಟಿರಲಿಲ್ಲವಂತೆ. ಆಗ ಅಣ್ಣಾವ್ರೇ ಇವರಿಬ್ಬರನ್ನು ಬಿಡಿಸಿದ್ದರಂತೆ. ಇನ್ನು ಇದು ಕೇವಲ ಅಪ್ಪುಗೆ ಮಾತ್ರವಲ್ಲ ಅಣ್ಣಾವ್ರು ಶಿವಣ್ಣ ಸೇರಿ ಅಣ್ಣಾವ್ರ ಕುಟುಂಬದ ಎಲ್ಲರಿಗೂ ಇದು ನೆಚ್ಚಿನ ತಾಣ. ಇನ್ನು ಈ ಜಾಗ ರಾಜ್ ಕುಟುಂಬಕ್ಕೆ ಬಂದ ಕಥೆಯೇ ಬಲು ರೋಚಕ. ವರನಾಟ ಡಾ ರಾಜ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ನಾಟಕ ನೋಡಿ ಪಕ್ಕದ ಗ್ರಾಮದವರು ಈ ಐದು ಎಕರೆ ಜಾಗವನ್ನು ನೀಡಿದ್ದರಂತೆ.
ಬೀರಪ್ಪನ ಗುಡಿ: ದೊಡ್ಡ ಗಾಜನೂರಿನ ಬೀರೇಶ್ವರ ದೇಗುಲ ಅಪ್ಪುವಿಗೆ ಶ್ರದ್ದಾಭಕ್ತಿಯ ತಾಣ. ಹೌದು ಬೀರಪ್ಪ ದೇವರು ಅಂದ್ರೆ ಪುನೀತ್‌ಗೆ ಎಲ್ಲಿಲ್ಲದ ಭಕ್ತಿ. ಪ್ರತಿ ಬಾರಿ ಗಾಜನೂರಿಗೆ ಬಂದಾಗಲೂ ಬೀರಪ್ಪನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿಯೇ ಹೋಗುತ್ತಿದ್ದರು. ಇನ್ನು ಬಾಲಕನಾಗಿದ್ದಾಗ ಅಪ್ಪು ಎಲ್ಲೇ ಆಟ ಆಡುತ್ತಿದ್ದರು ಏನೇ ಮಾಡುತ್ತಿದ್ದರು ಮಧ್ಯಾಹ್ನ ಮಾತ್ರ ಬೀರಪ್ಪನ ಗುಡಿಯಲ್ಲಿ ಹಾಜರಾಗುತ್ತಿದ್ದರು. ಇಲ್ಲಿ ಕೊಡುತ್ತಿದ್ದ ವಿಶೇಷ ಪ್ರಸಾದಕ್ಕಾಗಿ ಅಪ್ಪು ಓಡೋಡಿ ಬರುತ್ತಿದ್ದರು. ಈ ಪ್ರಸಾದವೇ ಅಪ್ಪುವಿನ ಊಟವಾಗಿರುತಿತ್ತು.
ಅಪ್ಪುವಿನ ಫೇವರೇಟ್ ದೊಡ್ಡ ಮನೆ: ದೊಡ್ಡ ಗಾಜನೂರಿನ ದೊಡ್ಡ ಮನೆಯಲ್ಲೇ ಅಪ್ಪು ತನ್ನ ಬಾಲ್ಯದ ಸಮಯವನ್ನು ಹೆಚ್ಚಾಗಿ ಕಳೆದಿದ್ದರು. ಸದ್ಯ ಡಾ.ರಾಜ್ ಕುಮಾರ್ ಅವರ ಸಹೋದರಿ ಹಾಗೂ ಅವರ ಮಗ ಗೋಪಾಲ್ ಈ ದೊಡ್ಡ ಮನೆಯಲ್ಲಿ ವಾಸವಾಗಿದ್ದಾರೆ. ಡಾ.ರಾಜ್ ಕುಮಾರ್ ಹಾಗೂ ಅವರ ಸಹೋದರ ಹಾಗೂ ಸಹೋದರಿಯರಿಗೆ ಒಟ್ಟು 15 ಜನ ಮಕ್ಕಳು. ಅದರಲ್ಲಿ ಪುನೀತ್ ಎಲ್ಲರಿಗಿಂತ ಕೊನೆಯವರು ಗೋಪಾಲ್ ಎಲ್ಲರಿಗಿಂತ ಹಿರಿಯರು. ತುಂಬಿದ ಕುಟುಂಬದ ಮಕ್ಕಳಲ್ಲಿ ಯಾವತ್ತೂ ಯಾವುದೇ ಭೇಧ ಭಾವ ಇರಲಿಲ್ಲ.ಅವರು ಮಕ್ಕಳು ಇವರ ಮಕ್ಕಳು ಅಣ್ಣ ತಮ್ಮ ತಂಗಿ ಮಾವ ಈ ಎಲ್ಲಾ ಸಂಬಂಧಗಳಿಗೂ ಮೀರಿದ ಸ್ನೇಹ ಈ ಮಕ್ಕಳ ಮಧ್ಯೆಯಿತ್ತು. ವಿಶಾಲವಾದ ಮನೆಯಲ್ಲಿ ಎಲ್ಲಾ ಮಕ್ಕಳು ಆಟವಾಡಿಕೊಂಡು ಇರುತ್ತಿದ್ದರು.
ಮನೆಯ ಎಲ್ಲರಿಗೂ ಅಪ್ಪುವನ್ನು ಕಂಡರೆ ವಿಶೇಷ ಅಕ್ಕರೆ. ಮನೆಯ ಮುದ್ದಿನ ಮಗುವಾಗಿದ್ದರು ಅಪ್ಪುಗೆ ನಾಟಿ ಕೋಳಿ ಸಾರು ಅಂದ್ರೆ ಪಂಚಪ್ರಾಣ. ಚಿಕ್ಕಂದಿನಿಂದಲೂ ಅಪ್ಪು ಇದನ್ನು ರೂಢಿಸಿಕೊಂಡೇ ಬಂದಿದ್ದರಂತೆ. ಬಾಲಕನಾಗಿದ್ದಾಗ ಶಿಕ್ಷಣದಿಂದ ವಂಚಿತರಾಗಿದ್ದ ಕಾರಣಕ್ಕೆ ಯಾವುದೇ ಮಗುವನ್ನು ನೋಡಿದರು ಚೆನ್ನಾಗಿ ಓದು ಎನ್ನುತ್ತಿದ್ದರಂತೆ ಅಪ್ಪು. ಅಷ್ಟೇ ಅಲ್ಲ ಓದುವ ವಿಚಾರಕ್ಕೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದರಂತೆ. ಇನ್ನು ರಾಜ್ ಕುಮಾರ್ ಅವರ ಸಹೋದರಿಗೆ ಅಪ್ಪು ಕಂಡ್ರೆ ವಿಶೇಷ ಪ್ರೀತಿ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾಗ ಅಪ್ಪುವಿಗೆ ಅಣ್ಣಾವ್ರ ಸಹೋದರಿಯೇ ತಾಯಯಾಗಿದ್ದರು. ಅತ್ಯಂತ ಪ್ರೀತಿ ಜತನದಿಂದ ಅಪ್ಪುವನ್ನು ನೋಡಿಕೊಂಡಿದ್ದರು. ಇವರಿಬ್ಬರ ಬಂಧ ಎಷ್ಟರಮಟ್ಟಿಗೆ ಇದೆಯೆಂದರೆ ಅಪ್ಪು ಸಾವನ್ನಪ್ಪಿ ಇಷ್ಟು ದಿನವಾದರೂ ಅವರಿಗೆ ಇನ್ನು ವಿಚಾರ ತಿಳಿಸಿಲ್ಲ. 91 ವರ್ಷದ ಅಜ್ಜಿಗೆ ಅಪ್ಪು ಅಕಾಲಿಕ ಮರಣದ ಸುದ್ದಿ ಕಂಟಕವಾಗುವ ಭಯ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ಅವರಿಗೆ ವಿಚಾರ ತಿಳಿಸಿಲ್ಲ.
ಗಾಜನೂರಿನ ಅಪ್ಪವಿನ ಮೊದಲ ಪೋಟೋ ಕೊನೆಯ ಪೋಟೋ ವೈರಲ್: ಅಪ್ಪು ಸಾವನ್ನಪ್ಪಿದ ನಂತರ ಅವರ ಸಾಕಷ್ಟು ಪೋಟೋಗಳು ವೈರಲ್ ಆಗಿದ್ದವು. ಅದರಲ್ಲಿ ಮೂರು ಪೋಟೋಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಆ ಪೋಟೋ ಹಿನ್ನೆಲೆ ಇಲ್ಲಿದೆ.
ಮೊದಲ ಪೋಟೋ ಗಾಜನೂರಿನ ಅಣ್ಣಾವ್ರು ಹುಟ್ಟಿದ ಮನೆಯ ಪಡಸಾಲೆಯಲ್ಲಿ ಕುಳಿತ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪಡಸಾಲೆಯಲ್ಲಿ ನಿಂತ ಅಪ್ಪು ಪೋಟೋ. ಇದು ಗಾಜನೂರಿನಲ್ಲಿ ಅಪ್ಪುವಿನ ಮೊದಲ ಪೋಟೋ.
ಎರಡನೇ ಪೋಟೋ ಗಾಜನೂರು ಅಣ್ಣವ್ರ ಮನೆಯ ಬಾಗಿಲಿನಲ್ಲಿ ನಿಂತ ಅಪ್ಪುವಿನ ಪೋಟೋ. ಇದು ಅಪ್ಪು ಸಾವನ್ನಪ್ಪುವ ಕೆಲ ದಿನಗಳ ಹಿಂದೆ ಬಂದಾಗ ತೆಗೆಸಿದ್ದ ಪೋಟೋ. ಹೆಂಚಿನ ಮನೆಯ ಬಾಗಿಲಲ್ಲಿ ನಿಂತು. ನಗುಮುಖದಲ್ಲಿ ಪೋಟೋಗೆ ಪೋಸ್ ನೀಡಿದ್ದ ಅಪ್ಪು. ಇದು ಅಪ್ಪು ಗಾಜನೂರಿನಲ್ಲಿ ತೆಗೆಸಿದ ಕೊನೆಯ ಪೋಟೋ.
ಮೂರನೆಯದು ಹಾಗೂ ಕೊನೆಯದು ಗಾಜನೂರು ಹೊರವಲಯದ ಅಣ್ಣಾವ್ರ ಜಮೀನಿನ ಮಧ್ಯದಲ್ಲಿರುವ ಆಲದ ಮರದ ಬಳಿ ಕುಳಿತ ಅಪ್ಪುವಿನ ಪೋಟೋ. ಇದು ಸಹಾ ಅಪ್ಪುವಿನ ಗಾಜನೂರಿನ ಕೊನೆಯ ಪೋಟೋ.
ಅಪ್ಪು ಚಿಕ್ಕಮ್ಮ, ಚಡ್ಡಿದೋಸ್ತ್ ಕುಳ್ಳ ನಾಗರಾಜ್ ಅವರು ಹೇಳಿದ ಅಪ್ಪು ಕಥೆ ಇಲ್ಲಿದೆ:
ಕನಸಾಗೇ ಉಳಿಯಿತು ಸ್ನೇಹಿತನಿಗೆ ಸಹಾಯ ಮಾಡುವ ಅಪ್ಪು ಕನಸು: ಅಪ್ಪು ಚಡ್ಡಿ ದೋಸ್ತ್ ಕುಳ್ಳನಿಗೆ ಸಹಾಯ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಚಾಲಕನಾಗಿದ್ದ ಕುಳ್ಳನಿಗೆ ಸ್ವಂತದ್ದೊಂದು ವಾಹನ ಕೊಡಿಸಲು ಮುಂದಾಗಿದ್ದರು. ಅದಕ್ಕಾಗಿ ಕುಳ್ಳನಿಂದಲೇ ಕೊಟೇಷನ್ ಸಹಾ ತರಿಸಿದ್ದರು. ಆ ವಾಹಕ್ಕೆ 18 ಲಕ್ಷ ಆಗುತ್ತದೆ. ಲೋನ್ ಬದಲು ಹಣ ನೀಡಿದರೆ ಇನ್ನು ಮೂರು ಲಕ್ಷ ಕಡಿಮೆಯಾಗುತ್ತದೆ ಅಂತಾ ಹೇಳಿದ್ದರು. ಇದನ್ನು ಕುಳ್ಳ ಅಪ್ಪುಗೆ ಹೇಳಿದ್ದರು. ಅದಕ್ಕೆ ಅಪ್ಪು ನಾನು ಅಕ್ಟೋಬರ್ 30ಕ್ಕೆ ಬರುತ್ತೇನೆ. (ಅಂದರೆ ಅಪ್ಪು ನಿಧನರಾದ ಮಾರನೇ ದಿನಕ್ಕೆ) ಆಗ ತೆಗೆದುಕೊಳ್ಳೋಣ ಎಂದು ಹೇಳಿದ್ದರು. ಆದರೆ ವಿಧಿ ಅದಕ್ಕೆ ಅವಕಾಶ ಮಾಡಿ ಕೊಡಲೇ ಇಲ್ಲ!
ವರದಿ: ರಾಮ್ ಟಿವಿ9 ಮೈಸೂರು
ಇದನ್ನೂ ಓದಿ:
ಪುನೀತ್ ಹೊಸ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ರಿಲೀಸ್; ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್
ಬಾಕ್ಸ್ ಆಫೀಸ್ನಲ್ಲಿ ಸ್ಟಾರ್ ಸಿನಿಮಾಗಳ ಪೈಪೋಟಿ; ಈ ವಾರ ಬಾಲಿವುಡ್ ಮಂದಿ ಎದುರು ‘ಸಖತ್’ ಮುಖಾಮುಖಿ
Published On - 9:57 am, Fri, 26 November 21