ಪುನೀತ್ ಹೊಸ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ರಿಲೀಸ್; ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್
Puneeth Rajkumar | Prabhu Deva: ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್, ಪ್ರಭುದೇವ, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಕೆಲಸ ನಡೆಯುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಆ ಚಿತ್ರಗಳು ತೆರೆ ಕಾಣುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಪುನೀತ್ ನಟಿಸುತ್ತಿದ್ದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಎಂಬುದು ಸಮಾಧಾನಕರ ಸಂಗತಿ. ಆ ಪೈಕಿ ‘ಜೇಮ್ಸ್’ ಸಿನಿಮಾ ರಿಲೀಸ್ ಆಗುವುದು ಖಚಿತ ಎಂಬುದು ಈಗಾಗಲೇ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅಪ್ಪು ಜತೆ ಪ್ರಭುದೇವ (Prabhu Deva) ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿರುವ ‘ಲಕ್ಕಿ ಮ್ಯಾನ್’ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಆ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ‘ಲಕ್ಕಿ ಮ್ಯಾನ್’ (Lucky Man Movie)ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಪರ್ಸಾ ಪಿಕ್ಚರ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್ ಕೆಲಸಗಳು ಸಾಧು ಕೋಕಿಲ ಅವರ ಸ್ಟುಡಿಯೋದಲ್ಲಿ ನಡೆಯುತ್ತಿವೆ. ‘ಲಕ್ಕಿ ಮ್ಯಾನ್’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್ಕುಮಾರ್ ಅವರ ಮೇಲೆ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡುವಂತಾಗಿದೆ. ಇದೇ ಮೊದಲ ಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ ಎಂಬುದು ಗಮನಾರ್ಹ ಅಂಶ.
‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಜೀವ ಶಂಕರ್ ಅವರ ಛಾಯಾಗ್ರಹಣ, ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಧನಂಜಯ ರಂಜನ್ ಹಾಡುಗಳನ್ನು ಬರೆದಿದ್ದಾರೆ. ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ ಅವರ ಸಂಭಾಷಣೆ, ಶೃಂಗೇರಿ ಸುರೇಶ್ ಅವರ ಸಹ-ನಿರ್ದೇಶನ ಈ ಚಿತ್ರಕ್ಕಿದೆ. ಮೋಹನ್ ಬಿ. ಕೆ. ಅವರು ಕಲಾ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಅಂಬರೀಷ್ ಫ್ಯಾನ್ಸ್ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?
ದೇವರಿಗೆ ಮುಡಿ ಕೊಟ್ಟು, ಪುನೀತ್ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ