ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com
ಬೆಂಗಳೂರಿನ ರಾಜಾಜಿನಗರದ ಎನ್ಪಿಎಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಅನನ್ಯ ಮೂಲೆಮನೆ ಪತ್ರ ನಿಮ್ಮ ಓದಿಗೆ.
ಹಾಯ್ ಫ್ರೆಂಡ್ಸ್,
ನಾಲ್ಕೈದು ದಿನಗಳಿಂದ ಅಮ್ಮ ನನಗೆ ಈ ವೆಬ್ಸೈಟಿನ ಲಿಂಕ್ಗಳನ್ನು ತೋರಿಸಿ ಓದು ಓದು ಅಂತಾನೇ ಇದ್ರು. ಹೋಗಮ್ಮಾ ಆನ್ಲೈನ್ ಕ್ಲಾಸ್, ಹೋಮ್ವರ್ಕ್ ಎಷ್ಟೊಂದಿದೆ ಆಮೇಲೆ ನೋಡ್ತೀನಿ ಅಂತ ಹೇಳ್ತಾನೇ ಇದ್ದೆ. ನಿನ್ನೆ ಅಂತೂ ಲಿಂಕ್ ನೋಡಿದೆ. ಆಗ ಪುಟ್ಟಪುಟ್ಟ ಮಕ್ಕಳೆಲ್ಲಾ ಬರೆದಿರೋದನ್ನು ನೋಡಿ ನನಗೂ ಹಂಚಿಕೊಳ್ಳೋದಕ್ಕೆ ಏನೆಲ್ಲಾ ವಿಷಯಗಳಿವೆ ಅನ್ನಿಸ್ತು.
ನಾನು ಪುಸ್ತಕ ಓದೋದು ಯಾವಾಗ ಕಲಿತೆ ಅಂತ ಯೋಚನೆ ಮಾಡಿದ್ರೆ ನಾನು ಮಾಂಟೆಸ್ಸರಿಯಲ್ಲಿದ್ದಾಗ. ಮನೇಲಿ ನಮ್ಮಮ್ಮ ದಿನಾ ರಾತ್ರಿ ಮಲಗುವಾಗ ಕಥೆ ಹೇಳ್ತಾ ಇದ್ರು. ಆ ಕಥೆಗಳಲ್ಲಿ ಒಂದು ಪುಟ್ಟ ಹುಡುಗಿ, ಒಂದು ದೊಡ್ಡ ಮರ, ಒಂದು ಪುಟ್ಟ ಅಳಿಲು, ಅಥ್ವಾ ಪುಟ್ಟ ನಾಯಿ ಮರಿ, ಬಣ್ಣದ ಚಿಟ್ಟೆ, ಸುಂದರ ಹೂವುಗಳು ಇರ್ತಾ ಇದ್ವು. ಇವೇ ಪಾತ್ರಗಳಿದ್ದರೂ ದಿನಾ ಕಥೆ ಹೊಸದಾಗಿರ್ತಿತ್ತು! ಮಾಂಟೆಸ್ಸರಿಯಲ್ಲಿ ನಮಗೆ ರೆಡ್ ಬುಕ್, ಬ್ಲೂಬುಕ್ ಅಂತ ಎಲ್ಲ ಬುಕ್ಸ್ ಸೆಟ್ ಇರ್ತಾ ಇತ್ತು ಕ್ಲಾಸಲ್ಲಿ. ದೊಡ್ಡ ಅಕ್ಷರಗಳು, ಬಣ್ಣ ಬಣ್ಣದ ಚಿತ್ರಗಳಿರುವ ಪುಟಾಣಿ ಪುಸ್ತಕಗಳು. ಅದ್ರಲ್ಲಿದ್ದ ಫರ್ಸ್ಟ್ 50 ಪುಸ್ತಕ ನಾನೇ ಮೊದಲು ಓದಿದ್ದು ಅಂತ ನಮ್ಮ ಮ್ಯಾಮ್ ಎಲ್ಲರ ಹತ್ರ ಚಪ್ಪಾಳೆ ತಟ್ಟಿಸಿದ್ದರು. ನಮ್ಮನೇಲಿ ನಾನು ಆಟದ ಸಾಮಾನಿಗಿಂತ ಪುಸ್ತಕದ ಮಧ್ಯನೇ ಬೆಳ್ದಿದ್ದು. ನಮ್ಮನೇಲಿ ಈಗ್ಲೂ ಎಲ್ಲಿ ನೋಡಿದ್ರೂ ಪುಸ್ತಕಗಳೇ!
ಸ್ಕೂಲಿಂದ ಬಂದ ಮೇಲೆ ನಾನು ನನ್ನ ತಾತನ ಜೊತೆ ಯಾವ್ದಾದ್ರೂ ಪುಸ್ತಕ ಹಿಡ್ಕೊಂಡು ಕೂತ್ಕೊತಾ ಇದ್ದೆ. ಅವ್ರು ಯಾವಾಗ್ಲೂ ಏನಾದ್ರೂ ಓದ್ತಾನೆ ಇರ್ತಾ ಇರ್ತಿದ್ರು. ಆಗಾಗ ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಶಾ ಅವರ ಧ್ವನಿಯಲ್ಲಿ ಕಥೆಗಳನ್ನು ಕೇಳ್ತಾ ಪುಸ್ತಕ ತಿರುವಿ ಹಾಕ್ತಾ ಇದ್ದೆ. ಸ್ಕೂಲ್ ಲೈಬ್ರರಿಯಲ್ಲಿ ಕೊಡ್ತಾ ಇದ್ದ ಬುಕ್ಸ್ ಕೂಡ ಫ್ರೆಂಡ್ಸ್ ಜೊತೆ Exchange ಮಾಡಿಕೊಂಡು ಓದ್ತಾ ಇದ್ದೆ. ಪ್ಯಾಲೆಸ್ ಗ್ರೌಂಡ್ನಲ್ಲಿ ಆಗ್ತಾ ಇದ್ದ ಪುಸ್ತಕದ ಎಕ್ಸಿಬಿಷನ್ಗಳಿಗೆ ನಮ್ಮಮ್ಮ ಕರ್ಕೊಂಡು ಹೋಗ್ತಾ ಇದ್ರು. ಅಲ್ಲಿ CBT, ಪ್ರಥಮ್ ಬುಕ್ಸ್ ಪುಸ್ತಕಗಳನ್ನೆಲ್ಲಾ ತರ್ತಿದ್ವಿ. ಆಕೃತಿ ಬುಕ್ಸ್ ಅಂತೂ ನಂಗೆ ಒಂಥರಾ ನಮ್ಮನೆ ಅನ್ನೋ ಹಾಗೆ ಅನ್ನಿಸ್ತಾ ಇತ್ತು. ಎಷ್ಟೊಂದು ಪುಸ್ತಕ ಅಲ್ಲಿ. ಗುರು ಅಂಕಲ್ ನಂಗೆ ಬೇಕಾಗಿದ್ದ ಪುಸ್ತಕಗಳ್ನ ತರ್ಸಿಕೊಡ್ತಿದ್ರು, ಈಗ್ಲೂ ತರ್ಸಿ ಕೊಡ್ತಾರೆ. ಗುರು ಅಂಕಲ್ ಗಿಫ್ಟ್ ಕೊಟ್ಟಿದ್ದ ‘Letters from a father to his daughter’ ನಂಗೆ ತುಂಬಾ ಇಷ್ಟ. ಅಮ್ಮನ ಫ್ರೆಂಡ್ ಶ್ರುತಿ ಆಂಟಿ, ‘Good night stories for rebel girls’ ಅಂತ ಒಂದು ಬುಕ್ ಕೊಟ್ಟಿದ್ರು. ಅವ್ರು ಪುಸ್ತಕ ಕೂಡ ಬರೀತಾರೆ. ಅವ್ರ ಕಥೆಗಳೂ ನಂಗೆ ತುಂಬಾ ಇಷ್ಟ.
ನನ್ನ ಹುಟ್ಟಿದ ಹಬ್ಬಕ್ಕೆ ಕೂಡ ಬುಕ್ಸ್ ಗಿಫ್ಟ್ ಸಿಕ್ತಾ ಇತ್ತು. ರಸ್ಕಿನ್ ಬಾಂಡ್ , ಸತ್ಯಜಿತ್ ರೇ, ಹ್ಯಾರಿ ಪಾಟರ್, ಜೆರೋನೀಮೋ, ಅಗಾಥ ಕ್ರಿಸ್ಟಿ , ಜಾನ್ ಗ್ರೀನ್, ತೇಜಸ್ವಿ, Biographies ಇನ್ನೂ ಅನೇಕ. ಓದೋವಾಗ ನಾನು ಒಂದು ಹೊಸ ಪ್ರಪಂಚಕ್ಕೆ ಹೋಗಿರ್ತೀನಿ. ನನ್ನ ಸುತ್ತಲಿನ ಪ್ರಪಂಚ, ಇತಿಹಾಸ, ಬೇರೆ ಬೇರೆ ದೇಶ, ಜನ ಎಲ್ಲದರ ಬಗ್ಗೆ ತಿಳ್ಕೊಳ್ಳೋಕ್ಕೆ ಸಹಾಯ ಮಾಡಿದೆ. ಪ್ರತಿ ಪುಸ್ತಕವೂ ಆ ಲೇಖಕ ಅಥವಾ ಲೇಖಕಿಯ ದೃಷ್ಟಿಕೋನವನ್ನು ಪರಿಚಯಿಸುತ್ತೆ. ಹಾಗಾಗಿ ಪುಸ್ತಕ ಓದೋದ್ರಿಂದ ನನಗೆ ಬೇರೆ ಬೇರೆ ದೃಷ್ಟಿಕೋನಗಳನ್ನು ಅರ್ಥ ಮಾಡ್ಕೊಳ್ಳೋದು, ಒಪ್ಪಿಕೊಳ್ಳೋದು ಸುಲಭ ಅನ್ನಿಸಿದೆ. ಹ್ಯಾರಿ ಪಾಟರ್ ಬುಕ್ಸ್ ಅಂತೂ ನಂಗೆ ಯಾವಾಗ ಓದಿದ್ರೂ ಬೋರ್ ಆಗೋಲ್ಲ. ಕಥೆ ಪುಸ್ತಕ ಓದದೇ ಇರೋ ಯಾರನ್ನೇ ನೋಡಿದ್ರೂ ನಂಗೆ ಅದು ಹೇಗೆ ಇವ್ರು ಪುಸ್ತಕ ಕಣ್ಣ ಮುಂದೆ ಇದ್ರೋ ಓದಲ್ಲ ಅಂತ ಆಶ್ಚರ್ಯ ಆಗುತ್ತೆ.
‘ಆಕೃತಿ’ ಗುರು ಅಂಕಲ್ ಒಂದು ಬುಕ್ suggest ಮಾಡಿದ್ರು. ಅಂಬೇಡ್ಕರ್ ಬಗ್ಗೆ Graphic Novel. ಆ ಪುಸ್ತಕ ಓದಿದಾಗ ನನಗೆ ಜಾತಿ ಪದ್ಧತಿ, ಅಸ್ಪೃಶ್ಯತೆ ಬಗ್ಗೆ ಹೆಚ್ಚು ವಿಷಯ ತಿಳೀತು. ಅಂಬೇಡ್ಕರ್ ಅವರು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಕೂಡ ತಿಳೀತು. ಈ ಪುಸ್ತಕ ಓದಿದ ಪರಿಣಾಮವೇ ನಾನು ಶಾಲೆಯಲ್ಲಿ ಮಾಡಿದ United Nations-1M1B ಪ್ರಾಜೆಕ್ಟ್. ಸಮಾಜದಲ್ಲಿರುವ ಜಾತಿ ಆಧಾರಿತ ಅಸಮಾನತೆ ಬಗ್ಗೆ ಏನಾದ್ರೂ ಮಾಡಬೇಕು ಅಂತ ಮನಸ್ಸು ಮಾಡಿ ಈ ಪ್ರಾಜೆಕ್ಟ್ಗೆ ನನ್ನ ಆಲೋಚನೆ ಅಳವಡಿಸಿದೆ. Equal Souls ಶೀರ್ಷಿಕೆಯಡಿ ತಯಾರಾದ ಈ ಪ್ರಾಜೆಕ್ಟ್ನಿಂದಾಗಿಯೇ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಜಾತಿ ಆಧಾರಿತ ಅಸಮಾನತೆ ಬಗ್ಗೆ ಮಾತನಾಡಲು ಅವಕಾಶ ಸಹ ಸಿಕ್ಕಿತ್ತು. ಈ ಪ್ರಾಜೆಕ್ಟ್ ಮೂಲಕ ಮೂವರು ದಲಿತ ಮಕ್ಕಳಿಗೆ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ಉಚಿತ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ.
ಅಪ್ಪ-ಅಮ್ಮನ ಸ್ನೇಹಿತರು, ಸಂಬಂಧಿಕರು ಅನೇಕರು ಇದಕ್ಕೆ ಸಹಾಯ ಮಾಡಿದ್ದಾರೆ. ಪುಸ್ತಕ ಓದೋದ್ರಿಂದ ಏನು ಉಪಯೋಗ ಅಂತ ಯಾರಾದ್ರೂ ಕೇಳಿದ್ರೆ ನಂಗೆ ಪುಸ್ತಕ ಓದದೇ ಇರೋದು ಹೇಗೆ ಅನ್ಸುತ್ತೆ! ಅದು ನನ್ನ ಜೀವನದ ಒಂದು ಭಾಗ. ಆದ್ರೆ ಇತ್ತೀಚೆಗೆ ಮೊಬೈಲ್ ನಿಂದಾಗಿ ಸ್ವಲ್ಪ ಓದೋದು ಕಡಿಮೆ ಆಗಿದೆ ಅನ್ನೋದು ನಿಜ. ಆದ್ರೂ ನಮ್ಮಮ್ಮ ಪುಸ್ತಕ ತರೋದು ಬಿಟ್ಟಿಲ್ಲ. ಕನ್ನಡ ಪುಸ್ತಕ ಓದಲಿ ಅಂತ ಅಮ್ಮ ಏನೆಲ್ಲಾ ಪ್ರಯತ್ನ ಮಾಡ್ತಾ ಇದ್ದಾರೆ. ಆದರೂ ನನಗೆ ಕಷ್ಟವೇ. ಪುಸ್ತಕ ಓದಲೇಬೇಕಂತಿಲ್ಲ. ಕೇಳಲೂಬಹುದು. https://kelikatheya.com/stories/ ವಸುಧೇಂದ್ರ ಅಂಕಲ್ ಅವ್ರ ಕೆಂಪು ಗಿಣಿ ನಂಗೆ ತುಂಬಾ ಇಷ್ಟ ಆಗಿತ್ತು. ಕೇಳಿ ಕಥೆಯ ಹೊಸ ಕಥೆಗಳು ಇನ್ನೂ ಕೇಳಿಲ್ಲ. ನನ್ನ ಮಾಮಾ Richard Feynman ಬಗ್ಗೆ ಏನಾದ್ರೂ ಹೇಳ್ತಾನೆ ಇರ್ತಾರೆ. Feynman ಪುಸ್ತಕಗಳು ಮನೇಲಿವೆ. ಇನ್ನೂ ಓದಿಲ್ಲ. ಈ ವರ್ಷ ಹೇಗಾದ್ರೂ ಮಾಡಿ ಓದಬೇಕು. ನೀವೂ ಕೂಡ ಓದ್ತಾ ಇರ್ರಿ.
ನಿಮ್ಮ ಪ್ರೀತಿಯ ಅನನ್ಯ
ಓದು ಮಗು ಓದು: ಏನೋ ಅಸಾಮಾನ್ಯವಾದುದು ಘಟಿಸುತ್ತದೆ ಎನ್ನುವುದನ್ನು ನಾನೂ ನಂಬುತ್ತೇನೆ…