ಓದು ಮಗು ಓದು: ಏನೋ ಅಸಾಮಾನ್ಯವಾದುದು ಘಟಿಸುತ್ತದೆ ಎನ್ನುವುದನ್ನು ನಾನೂ ನಂಬುತ್ತೇನೆ…

|

Updated on: Jan 15, 2021 | 3:52 PM

ಬೆಂಗಳೂರಿನ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯದಲ್ಲಿ 11ನೇ ತರಗತಿಯಲ್ಲಿ ಓದುತ್ತಿರುವ ಪ್ರತೀಕ ಪಿ. ಕುಲಕರ್ಣಿ, ‘ನನಗೆ ಶಾಲೆಯಲ್ಲಿ ಕನ್ನಡ ಕಲಿಯುವ ಅವಕಾಶ ಸಿಗದಿದ್ದರೂ ನನ್ನಜ್ಜಿ ಹಾಗೂ ಅಮ್ಮನ ಸಹಾಯದಿಂದ ಕನ್ನಡ ಓದಲು, ಬರೆಯಲು ಕಲಿತೆ. ಅದರಿಂದ ನಾನು ಎಂತಹ ಲಾಭ ಪಡೆದೆ ಎಂದರೆ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ, ಪರಿಸರದ ಕತೆಗಳು, ನೆರೆಹೊರೆಯ ಗೆಳೆಯರು ಸೇರಿದಂತೆ ಹಲವು ಕನ್ನಡ ಕೃತಿಗಳು ನನ್ನ ಅರಿವಿನ ಹರವನ್ನು ವಿಸ್ತರಿಸಿದವು.‘ ಎನ್ನುತ್ತಾನೆ.

ಓದು ಮಗು ಓದು: ಏನೋ ಅಸಾಮಾನ್ಯವಾದುದು ಘಟಿಸುತ್ತದೆ ಎನ್ನುವುದನ್ನು ನಾನೂ ನಂಬುತ್ತೇನೆ...
ಪ್ರತೀಕ ಪಿ. ಕುಲಕರ್ಣಿ ತನ್ನ ನೆಚ್ಚಿನ ಪುಸ್ತಕದೊಂದಿಗೆ
Follow us on

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com

ಬೆಂಗಳೂರಿನ ಪ್ರತೀಕ ಪಿ. ಕುಲಕರ್ಣಿ ತನಗಿಷ್ಟವಾದ ಪುಸ್ತಕಗಳ ಬಗ್ಗೆ ಬರೆಯುತ್ತಾ, ಚಿಕ್ಕಂದಿನಿಂದಲೇ ತಾನು ಪುಸ್ತಕಗಳ ಬಗ್ಗೆ ಹೇಗೆ ಆಕರ್ಷಿತನಾಗುತ್ತಾ ಹೋದೆ ಎನ್ನುವುದನ್ನೂ ಹಂಚಿಕೊಂಡಿದ್ದಾನೆ.

‘ಪುಸ್ತಕವೊಂದನ್ನು ಓದಿದಾಗ ಏನೋ ಅಸಾಮಾನ್ಯವಾದುದು ಘಟಿಸುತ್ತದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ’
–ಜೆ.ಕೆ. ರೋಲಿಂಗ್‌
ಪುಸ್ತಕದ ಜತೆಗಿನ ನನ್ನ ಸ್ನೇಹ ಹೇಗೆ ಬೆಳೆಯಿತು ಎಂಬುದನ್ನು ನಾನು ಆಗಾಗ ಅವಲೋಕಿಸುತ್ತಾ ಇರುತ್ತೇನೆ. ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನನಗೆ ‘ಮ್ಯಾಜಿಕ್‌ ಪಾಟ್‌’ ಮಕ್ಕಳ ಪತ್ರಿಕೆಯ ಪರಿಚಯವಾಯಿತು. ಅದರಲ್ಲಿರುವ ಕಥೆಗಳು, ಚಿತ್ರಗಳು, ‘ನೀವೇ ಮಾಡಿ ನೋಡಿ’ ತರಹದ ಆ್ಯಕ್ಟಿವಿಟಿಗಳು ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಆ ಓದು ಮುಂದೆ ನನ್ನನ್ನು ಹೇಗೆ ಕರೆದೊಯ್ಯಿತು ಎಂಬುದನ್ನು ನೆನಪಿಸಿಕೊಂಡರೆ ಈಗ ಅಚ್ಚರಿ ಆಗುತ್ತದೆ. ಅಮ್ಮನ ಜತೆಗೆ ಹಳೆಯ ಪುಸ್ತಕದ ಅಂಗಡಿಗಳಿಗೆ ಹೋಗುತ್ತಿದ್ದ ನಾನು, ಮಕ್ಕಳ ಸಚಿತ್ರಕಥಾ ಪುಸ್ತಕಗಳನ್ನು ಹೆಕ್ಕಿ ತರುತ್ತಿದ್ದೆ. ಹಾಗೆಯೇ ಚಿಲ್ಡ್ರನ್‌ ಬುಕ್‌ ಟ್ರಸ್ಟ್‌ನ (ಸಿಬಿಟಿ) ಪರಿಚಯವಾಗಿ, ಸಿಬಿಟಿ ಪುಸ್ತಕಮಾಲೆಯ ಹಲವು ಮಕ್ಕಳ ಕೃತಿಗಳನ್ನು ಕೊಂಡುತಂದು ಓದಿದೆ. ಮುಂದೆ ನನಗೆ ಓದಿನ ಸ್ನೇಹಿತರಾಗಿ ಸಿಕ್ಕಿದ್ದು ಆರ್‌.ಕೆ. ನಾರಾಯಣ್‌, ರಸ್ಕಿನ್‌ ಬಾಂಡ್‌, ಜಿಮ್‌ ಕಾರ್ಬೆಟ್‌, ಕೆನತ್‌ ಅಂಡರ್ಸನ್‌, ಅಗಾಥಾ ಕ್ರಿಸ್ಟಿ, ಜೆ.ಕೆ. ರೋಲಿಂಗ್‌ ಮೊದಲಾದವರ ಕೃತಿಗಳು.

ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ನನಗೆ ಶಾಲೆಯಲ್ಲಿ ಕನ್ನಡ ಕಲಿಯುವ ಅವಕಾಶ ಸಿಗದಿದ್ದರೂ ನನ್ನಜ್ಜಿ ಹಾಗೂ ಅಮ್ಮನ ಸಹಾಯದಿಂದ ಕನ್ನಡ ಓದಲು, ಬರೆಯಲು ಕಲಿತೆ. ಅದರಿಂದ ನಾನು ಎಂತಹ ಲಾಭ ಪಡೆದೆ ಎಂದರೆ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ, ಪರಿಸರದ ಕತೆಗಳು, ನೆರೆಹೊರೆಯ ಗೆಳೆಯರು ಸೇರಿದಂತೆ ಹಲವು ಕನ್ನಡ ಕೃತಿಗಳು ನನ್ನ ಅರಿವಿನ ಹರವನ್ನು ವಿಸ್ತರಿಸಿದವು.
ಪುಸ್ತಕಗಳ ಓದು ನಮ್ಮ ಶಾಲೆಯ ಶಿಕ್ಷಣಕ್ಕೆ ಪರೋಕ್ಷವಾಗಿ ನೆರವು ನೀಡುವುದು ಸುಳ್ಳಲ್ಲ. ಅಲ್ಲದೆ, ನಾವು ಓದುವ ಎಷ್ಟೋ ಪರಿಸರದ ಪಾಠಗಳು ತೇಜಸ್ವಿ ಅವರ ಪರಿಸರದ ಕತೆಗಳ ಹಿನ್ನೆಲೆಯಲ್ಲಿ ಅಚ್ಚಳಿಯದಂತೆ ಮನದಂಗಳದಲ್ಲಿ ಉಳಿದಿವೆ. ಪರಿಸರವನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ನೆರವಾಗಿವೆ.

ಪು: ಮೈ ಲೈಫ್‌
ಲೇ: ಎಪಿಜೆ ಅಬ್ದುಲ್‌ ಕಲಾಂ
ಪ್ರ: ರೂಪ
ನನ್ನ ಮೇಲೆ ಗಾಢ ಪ್ರಭಾವ ಬೀರಿದ ಕೃತಿಗಳಲ್ಲಿ ಎಪಿಜೆ ಅಬ್ದುಲ್‌ ಕಲಾಂ ಅವರ ‘ಮೈ ಲೈಫ್‌’ಗೆ ನಿಸ್ಸಂಶಯವಾಗಿ ಮೊದಲ ಸ್ಥಾನ. ಕೃತಿಯ ಪ್ರತೀ ಪುಟದಲ್ಲಿ ಕಲಾಂ ಅವರ ಧ್ವನಿಯೇ ಪ್ರತಿಧ್ವನಿಸುತ್ತದೆ. ‘ನನ್ನ ಕಥೆಯನ್ನು ಹೇಳಲಷ್ಟೇ ಈ ಕೃತಿ ಬರೆದಿಲ್ಲ. ಪ್ರತಿಯೊಬ್ಬ ಯುವ ಓದುಗನಿಗೂ ಇದು ತನ್ನದೇ ಕಥೆಯಾಗಿ ಕಾಡಬೇಕು’ ಎಂದೆನ್ನುವ ಕಲಾಂ ಅವರು, ಅವರ ಬಾಲ್ಯದ ದಿನಗಳಿಗೆ ನಮ್ಮನ್ನೂ ಕರೆದೊಯ್ಯುತ್ತಾರೆ. ರಾಮೇಶ್ವರದ ಪುಟ್ಟ ಕುಟುಂಬದಲ್ಲಿ ಜನಿಸಿ, ರಾಷ್ಟ್ರಪತಿಯಾಗುವ ಎತ್ತರಕ್ಕೆ ಬೆಳೆದ ಅವರ ಬದುಕಿನ ಯಾನ ನಮಗೆ ಹೆಜ್ಜೆಹೆಜ್ಜೆಗೂ ಪ್ರೋತ್ಸಾಹ ನೀಡುತ್ತದೆ. ಈ ಕೃತಿಯ ಪುಟಗಳನ್ನು ಯಾವಾಗ ತಿರುವಿ ಹಾಕಿದರೂ ಏನಾದರೂ ಹೊಸತು ನಮಗೆ ಹೊಳೆಯುತ್ತಲೇ ಇರುತ್ತದೆ. ದೇಶಪ್ರೇಮವೂ ಜಾಗೃತವಾಗುತ್ತದೆ.

ಪು: ಚಂದ್ರ
ಲೇ: ಕಾಮೇಶ್ವರ ವಾಲಿ
ಪ್ರ: ಯೂನಿವರ್ಸಿಟಿ ಆಫ್‌ ಷಿಕ್ಯಾಗೊ ಪ್ರೆಸ್‌
ಕಾಮೇಶ್ವರ ವಾಲಿ ಅವರ ಚಂದ್ರ (ಎಸ್‌. ಚಂದ್ರಶೇಖರ್‌ ಅವರ ಜೀವನಚರಿತ್ರೆ) ನನ್ನನ್ನು ಬಹುವಾಗಿ ಕಾಡಿದ ಮತ್ತೊಂದು ಕೃತಿ. ವಿಜ್ಞಾನ ಲೋಕದ ಮೇರು ವ್ಯಕ್ತಿತ್ವವೊಂದರ ಸರಳ ಜೀವನದ ದರ್ಶನ ನಮಗೆ ಈ ಕೃತಿಯಲ್ಲಿ ಆಗುತ್ತದೆ. ವಾಲಿ ಅವರು ಕಟ್ಟಿಕೊಟ್ಟ ತಮ್ಮ ಗುರುವಿನ ಚಿತ್ರಣ ಹೇಗಿದೆ ಎಂದರೆ ಹಿಡಿದ ಪುಸ್ತಕವನ್ನು ಕೆಳಗಿಡಲು ಮನಸ್ಸು ಬರುವುದಿಲ್ಲ. ಚಂದ್ರ ಅವರ ಬಾಲ್ಯದ ಹವ್ಯಾಸಗಳು, ಭೌತಶಾಸ್ತ್ರದಲ್ಲಿ ಅವರು ಬೆಳೆಸಿಕೊಂಡ ಅಭಿರುಚಿ, ಸಿ.ವಿ. ರಾಮನ್‌ ಜತೆಗಿನ ಅವರ ಒಡನಾಟ ಎಲ್ಲವೂ ಚಪ್ಪರಿಸಿ ಓದುವಂತಹ ವಿವರಗಳು. ಚಂದ್ರ ಅವರ ವಿಶೇಷ ಗುಣವೊಂದು ನನ್ನ ಗಮನಸೆಳೆದಿದೆ. ಅಂತಹ ಸಾಮರ್ಥ್ಯವನ್ನು ನಾವೂ ಗಳಿಸಿಕೊಳ್ಳಬೇಕು ಎನ್ನುವ ಆಸೆ ಮೂಡಿಸಿದೆ. ಅದೇನೆಂದರೆ ಪ್ರತೀ ಗಂಟೆಗೆ ನೂರು ಪುಟಗಳನ್ನು (ಮನನ ಮಾಡಿಕೊಂಡು!) ಓದುವಷ್ಟು ವಿಶೇಷ ಸಾಮರ್ಥ್ಯ ಅವರಲ್ಲಿತ್ತಂತೆ!

ದಿ ಕಾಲ್‌ ಆಫ್‌ ಮ್ಯಾನ್‌ ಈಟರ್‌
ಲೇ : ಕೆನತ್‌ ಅಂಡರ್ಸನ್‌
ಪ್ರ: ರೂಪ
ಪರಿಸರದ ವಿಷಯದಲ್ಲಿ ಆಸಕ್ತಿ ಮೂಡಲು ತೇಜಸ್ವಿ ಅವರ ಕಥೆಗಳು ಕಾರಣವಾದರೆ, ಕಾಡಿನ ಸಾಹಸವನ್ನು ಬೆರಗಿನಿಂದ ನೋಡಲು ನೆರವಿಗೆ ಬಂದಿದ್ದು ಕೆನತ್‌ ಅಂಡರ್ಸನ್‌ ಅವರ ‘ದಿ ಕಾಲ್‌ ಆಫ್‌ ದಿ ಮ್ಯಾನ್‌ ಈಟರ್‌’ ಕೃತಿ. ಭಯಾನಕ ನರಭಕ್ಷಕಗಳನ್ನು ಕೆನತ್‌ ಬೇಟೆಯಾಡಲು ರಾತ್ರಿಯಿಡೀ ಮರದ ಮೇಲಿನ ಮಚಾನದ ಮೇಲೆ ಕಾಯುತ್ತಿದ್ದ ರೀತಿ ಮೈನವಿರೇಳಿಸುತ್ತದೆ. ಆ ಕಗ್ಗತ್ತಲ ರಾತ್ರಿಗಳಲ್ಲಿ ನರಭಕ್ಷಕ ಹುಲಿ ಅಥವಾ ಚಿರತೆ ಬರುವುದನ್ನು ಕಾದು, ಹೊಡೆಯುವುದೆಂದರೆ ಸುಮ್ಮನೆ ಮಾತೇ? ರಾತ್ರಿ ಪೂರಾ ನಿದ್ದೆಗೆಡಲು ಬಕೆಟ್‌ಗಟ್ಟಲೆ ಚಹಾ ತಯಾರಿಸಿಕೊಂಡು ಮಚಾನದ ಮೇಲೆ ಇಟ್ಟುಕೊಳ್ಳುತ್ತಿದ್ದರಂತೆ. ರೋಚಕ ಘಟನೆಗಳ ಗುಚ್ಛವೇ ಅವರ ಕೃತಿಗಳಲ್ಲಿ ಸಿಕ್ಕುತ್ತದೆ.

ಗ್ರೇತಾ ಥನ್‌ಬರ್ಗ್‌
ಲೇ: ನಾಗೇಶ ಹೆಗಡೆ
ಪ್ರ: ಭೂಮಿ ಬುಕ್ಸ್‌
ನಾಗೇಶ ಹೆಗಡೆ ಅವರ ‘ಗ್ರೇತಾ ಥನ್‌ಬರ್ಗ್‌’ ನಾನು ಮೆಚ್ಚಿ ಓದಿದ ಮತ್ತೊಂದು ಅಪರೂಪದ ಪುಸ್ತಕ. ಮೂಕ ಪೃಥ್ವಿಗೆ ಮಾತುಕೊಟ್ಟ ಈ ಕಿಶೋರಿ ನಮ್ಮಂತಹ ಯುವ ಪೀಳಿಗೆಯ ಎಲ್ಲರಿಗೂ ಪ್ರೇರಣೆ. ಗ್ರೇತಾ, 15 ವರ್ಷದವಳಿದ್ದಾಗ ಭೂಮಿಯ ಆರೋಗ್ಯಕ್ಕಾಗಿ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಶಾಲಾ ಮಕ್ಕಳು ಬೀದಿಗೆ ಬಂದರು. ವಿಶ್ವಸಂಸ್ಥೆಯಲ್ಲೂ ಭಾಷಣ ಮಾಡಿದವಳು ಆಕೆ. ಇಂಥ ಸಾಧಕಿಯಲ್ಲದೆ ಬೇರೆ ಯಾರು ನಮಗೆ ಪ್ರೇರಣೆಯಾಗಲು ಸಾಧ್ಯ?

ಪು: ಕರ್ವಾಲೊ

ಲೇ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರ : ಪುಸ್ತಕ ಪ್ರಕಾಶನ
ತೇಜಸ್ವಿ ಅವರ ಕರ್ವಾಲೊ ನನ್ನನ್ನು ಕಾಡಿದ ಇನ್ನೊಂದು ಪುಸ್ತಕ. ಜೇನುತುಪ್ಪವನ್ನು ಮನೆಯಲ್ಲಿ ಪುಟ್ಟ ಬಾಟಲಿಯಲ್ಲಿ ಮಾತ್ರ ನೋಡಿದ್ದ ನನಗೆ ಅದನ್ನು ದೊಡ್ಡ ಟಿನ್‌ಗಳಲ್ಲಿ ತುಂಬಿಸಿಡುತ್ತಾರೆ ಎನ್ನುವುದು ಗೊತ್ತೇ ಇರಲಿಲ್ಲ. ಜೇನನ್ನು ಅಷ್ಟೊಂದು ಪ್ರಮಾಣದಲ್ಲಿ ಹೇಗೆ ಉತ್ಪಾದಿಸುತ್ತಾರೆ ಎನ್ನುವ ಸೋಜಿಗವೂ ನನ್ನನ್ನು ಕಾಡಿತ್ತು. ಮುಂದೊಮ್ಮೆ ಧಾರವಾಡದ ನಮ್ಮ ಸಂಬಂಧಿಗಳ ಹಿತ್ತಲಲ್ಲಿ ಜೇನುಬುಟ್ಟಿ ಇಟ್ಟು, ತುಪ್ಪ ತೆಗೆಯುವುದನ್ನು ನೋಡಿದಾಗ ಮೊದಲು ಮನಸ್ಸಿಗೆ ಹೊಳೆದಿದ್ದು ಕರ್ವಾಲೊದ ತೇಜಸ್ವಿ ಅವರ ಜೇನು ಖರೀದಿ ಪ್ರಸಂಗ. ಮಂದಣ್ಣನ ಪರಿಸರ ಜ್ಞಾನವೂ ಬೆರಗು ಮೂಡಿಸುವಂಥದ್ದು. ಹಾರುವ ಓತಿಯನ್ನು ಕಂಡ ಚಿತ್ರಣವಂತೂ ರಮಣೀಯವಾಗಿದೆ.

ಮೇಲಿನ ಈ ಕೃತಿಗಳ ಹಲವು ಧಾರೆಗಳು ಮನಸ್ಸಿನಲ್ಲಿ ಸದಾ ಪ್ರವಹಿಸುತ್ತವೆ. ಹೊಸದರತ್ತ ಗಮನಹರಿಸುವಂತೆ ಪ್ರೇರೇಪಿಸುತ್ತವೆ. ಮನಸ್ಸು ಹೊಸ ಪುಸ್ತಕಕ್ಕಾಗಿ ತಡಕಾಡುತ್ತದೆ.

ಓದು ಮಗು ಓದು: ಆನ್​ಲೈನ್​ ಶಿಕ್ಷಣ ಮತ್ತು ಸಿರಿಧಾನ್ಯ ತಿಂದ ಕೋಳಿ!