ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?
ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತಿರತ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ಕೆಲ ಕಾಲ ಪತ್ರಿಕೆಯೊಂದರಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ ಮೇಘಾ ಎಲೆಗಾರ ಮುಂಡಗೋಡಿನವರು. ಸದ್ಯ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿಯ ಉದ್ಯೋಗಿ.
ನಮಸ್ಕಾರ,
ನಾನು ಓದುತ್ತಿದ್ದ ಶಾಲೆ ಗ್ರಾಮೀಣ ಭಾಗದ ಕೆಳ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದಾತ್ತ ಆಶಯವನ್ನು ಹೊತ್ತು ಪ್ರಾರಂಭಗೊಂಡ ಶಿಕ್ಷಣ ಸಂಸ್ಥೆಯಾಗಿತ್ತು. ಆರರಿಂದ ಹನ್ನೆರಡನೇ ತರಗತಿಯವರೆಗೆ ಸಂಪೂರ್ಣ ಉಚಿತವಾಗಿ ಊಟ ವಸತಿ ಸಮೇತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪೂರೈಸಲಾಗುತ್ತಿತ್ತು. ನಮ್ಮೂರಿನ ಸರಕಾರಿ ಶಾಲೆಗಳಿಗಿಂತ ಹೆಚ್ಚು ನುರಿತ, ಪದವಿಗಳನ್ನು ಪಡೆದ ದೇಶದ ನಾನಾ ಭಾಗಗಳಿಂದ ಬಂದ ಅತ್ಯುತ್ತಮ ಶಿಕ್ಷಕರಿದ್ದರು. ಎಳೆ ವಯಸ್ಸಿನಿಂದಲೇ ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೇ ನಮ್ಮೆಲ್ಲರನ್ನು ಬೆಳೆಸಲಾಗುತ್ತಿತ್ತು. ಆದರೆ ಅಂತಹ ಅದ್ಭುತ ಪರಿಸರದಲ್ಲಿಯೂ ಲಿಂಗ ತಾರತಮ್ಯ ಮಾತ್ರ ಗುಪ್ತ ಗಾಮಿನಿಯಂತೆ ಹರಿಯುತ್ತಲೇ ಇತ್ತು. ತಮ್ಮ ದಕ್ಷತೆ ಮತ್ತು ಶೈಕ್ಷಣಿಕ ಪ್ರತಿಭೆಗೆ ಹೆಸರಾದ ಪ್ರಿನ್ಸಿಪಾಲರೊಬ್ಬರಿದ್ದರು. ಅಷ್ಟು ದೊಡ್ಡ ಸಂಸ್ಥೆಯ ವಹಿವಾಟುಗಳನ್ನು ಅತ್ಯಂತ ಕಾಳಜಿಯಿಂದ ಶ್ರದ್ಧೆಯಿಂದ ನೋಡಿಕೊಳ್ಳುತ್ತಿದ್ದ ಅವರಿಗೆ ಹೆಣ್ಣುಮಕ್ಕಳ ನಡೆವಳಿಕೆ, ಬಟ್ಟೆಬರೆಯ ಕುರಿತು ವಿಪರೀತ ಅಸಹನೆ ಇದ್ದಂತೆ ಕಾಣುತ್ತಿತ್ತು. ಹುಡುಗಿ ಎರಡು ಜಡೆಯನ್ನು ಹಾಕಿಲ್ಲ, ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ, ಲಿಪ್ಬಾಮ್ ಬಳಸುತ್ತಾರೆ, ಬಿಗಿಉಡುಪು ಧರಿಸುತ್ತಾರೆ ಎಂಬ ತಕರಾರುಗಳನ್ನು ತೆಗೆದು ಅವಮಾನಿಸಲಾಗುತ್ತಿತ್ತು. ಜೀನ್ಸ್ ಧರಿಸುವುದನ್ನು ಬಿಟ್ಟುಬಿಡಿ ದುಪ್ಟಟಕ್ಕೆ ಪಿನ್ ಹಾಕಿಲ್ಲ ಎಂಬ ಕಾರಣಕ್ಕೆ ಹುಡುಗಿಯರಿಗೆ ಶಿಕ್ಷೆ ನೀಡಲಾಗುತ್ತಿತ್ತು. ತೀರಾ ಹನ್ನೆರಡು ವಯಸ್ಸಿನ ಹುಡುಗಿಯರಿಗೂ ಸಹ ಫ್ರಾಕ್‌ಗಳನ್ನು ಹಾಕದಂತೆ ನಿರ್ಬಂಧಿಸಲಾಗುತ್ತಿತ್ತು. ಪೂರಾ ಮೈಮುಚ್ಚುವಂತಹ ಚೂಡಿದಾರ್ ಮಾತ್ರ ಅಲ್ಲಿ ಒಪ್ಪಿತ ಉಡುಗೆಯಾಗಿತ್ತು.
ಹೌದು ಅವರು ಚಿಕ್ಕವರು, ಆದರೆ ಅವರಲ್ಲಿ ಕೆಲವರು ತುಂಬಾ ಮೈ ಕೈ ತುಂಬಿಕೊಂಡು ಬೆಳೆದಿದ್ದಾರೆ, ಮತ್ತೆ ಕೆಲವರು ಸಾಧಾರಣವಾಗಿದ್ದಾರೆ. ಇವರಿಗೆ ಫ್ರಾಕ್ ತೊಡಲು ಬಿಟ್ಟು, ದಪ್ಪಗಿರುವವರಿಗೆ ಚೂಡಿದಾರ್ ತೊಡಿಸಲು ಹೇಳಲಾಗುವುದಿಲ್ಲ, ಎಲ್ಲರೂ ಚೂಡಿದಾರ್ ಹಾಕಿಕೊಳ್ಳಿ ಎಂಬುದು ಪ್ರಿನ್ಸಿಪಾಲರ ತಾಕೀತು. ಒಟ್ಟಾರೆ ಬೆಳೆಯುವ ವಯಸ್ಸಿನ ಹುಡುಗಿಯರಲ್ಲಿ ತಮ್ಮ ದೇಹ ಕೆಟ್ಟದ್ದು, ಬೆಳೆಯುತ್ತಿರುವ ತಮ್ಮ ಅಂಗಾಂಗಳು ಕೆಟ್ಟ ದೃಷ್ಟಿಯನ್ನು ತಮ್ಮತ್ತ ಸೆಳೆಯುವಂತೆ ಮಾಡುವ ಅನಗತ್ಯ ಅಂಗಗಳು ಎಂಬ ಭಾವನೆಯನ್ನು ಬೆಳೆಸಲಾಗುತ್ತಿತ್ತು. ತನ್ನ ಹಾಸ್ಟೇಲಿನ ಒಳಕೋಣೆಯಲ್ಲಿ ಪೇಟಿಕೊಟು ಧರಿಸಿ ಓಡಾಡುತ್ತಿದ್ದ ಪುಟಾಣಿ ಹುಡುಗಿಯೊಬ್ಬಳನ್ನು ಹಿಡಿದೆಳೆದ ಶಿಕ್ಷಕಿಯೊಬ್ಬರು ಆಕೆಯ ಬಟ್ಟೆಯನ್ನು ಬೇರೆಲ್ಲ ಹುಡುಗಿಯರ ಮುಂದೆ ಹರಿದು ಹಾಕಿದ ಘಟನೆ ನನಗಿನ್ನೂ ಬೆಚ್ಚಿಬೀಳಿಸುತ್ತದೆ. ಆ ಶಿಕ್ಷಕಿಯ ಅಸೂಕ್ಷ್ಮತೆಯ ಕುರಿತು ಸಿಟ್ಟು, ಅಸಹ್ಯ ಒಟ್ಟಿಗೆ ಮೂಡುತ್ತದೆ. ಆ ವಯಸ್ಸಿನಲ್ಲಿ ನನ್ನನ್ನೂ ಸೇರಿದಂತೆ ನನ್ನೊಟ್ಟಿಗೆ ಬೆಳೆದ ಬಹುತೇಕ ಹುಡುಗಿಯರು ತಮ್ಮ ದೇಹದ ಕುರಿತಂತೆ Body Image Issue ನಿಂದ ಬಳಲುತ್ತಿದ್ದೇವೆ. ಇದಕ್ಕೆ ನಮಗೆ ಉತ್ತಮ ಶಿಕ್ಷಣ ನೀಡಿ ಬದುಕಿನ ದಾರಿಗೆ ಹಚ್ಚಿದ ಶಿಕ್ಷಣ ಸಂಸ್ಥೆ ಶಿಕ್ಷಕರೇ ಕಾರಣ ಎಂಬುದು ಬಹಳ ದೊಡ್ಡ ವಿಪರ್ಯಾಸ.
ಈ ಎಲ್ಲಾ ನಿಯಮಗಳು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತಾಗಿಯೇ ಮಾಡಿದ್ದು ಎಂಬ ನೆಪವನ್ನು ಒಡ್ಡಿ ಅವುಗಳು ಹೆಣ್ಣುಮಕ್ಕಳ ಮೇಲೆ ಹೇರುತ್ತಿದ್ದ ಒತ್ತಡವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳ ಕುರಿತಾದ ನಿಜವಾದ ಕಾಳಜಿಯಿದ್ದರೆ ಆರರಿಂದ ಎಂಟನೇ ಕ್ಲಾಸಿನವರೆಗೆ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದ ಹುಡುಗಿಯರು ಹತ್ತಕ್ಕೆ ಬರುತ್ತಿದ್ದಂತೆ ಯಾಕೆ ಮಂಕಾಗುತ್ತಿದ್ದಾರೆ. ಹುಡುಗರ ಫಲಿತಾಂಶ ಅದ್ಹೇಗೆ ಹುಡುಗಿಯರ ಫಲಿತಾಂಶಕ್ಕಿಂತ ಚೆನ್ನಾಗಿದೆ. ಹುಡುಗಿಯರು ಯಾಕೆ ಅನಿಯಮಿತ ಮುಟ್ಟು, ಮುಟ್ಟಿನ ನೋವಿನಿಂತ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಬೇಕಿತ್ತು. ಚೆನ್ನಾಗಿ ಓದಿ ಎಂಬ ನಿಯಮಿತ ಒತ್ತಡದ ಹೊರತಾಗಿ ಹೆಣ್ಣುಮಕ್ಕಳ ಆರೋಗ್ಯ ಅಥವಾ ಶೈಕ್ಷಣಿಕ ಪ್ರಗತಿಯ ಕುರಿತು ಯಾವುದೇ ವಿಶೇಷ ಕಾಳಜಿ ಯಾವ ಶಿಕ್ಷಕರು ಮಾಡಿದ್ದು ನನಗೆ ನೆನಪಿಲ್ಲ. ನನಗೆ ಅಚ್ಚರಿಯಾಗುತ್ತದೆ! ಈ ರೀತಿಯ ಚರ್ಚೆಗಳಿಗಿಂತ ಹುಡುಗಿಯರ ಉಡುಪು, ಮತ್ತು ಹರೆಹರೆಯದ ಸಹಜವಾದ ಲೈಂಗಿಕ ಅಭಿವ್ಯಕ್ತಿಯನ್ನು ಮಟ್ಟ ಹಾಕುವುದರಲ್ಲೇ ಕಾಲ ಕಳೆದಿದ್ದು ನನಗೆ ವ್ಯವಸ್ಥೆಯ ಸೋಲಂತೆ ಕಾಣುತ್ತದೆ. ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಾಪಕರೆಲ್ಲರೂ ಅದ್ಹೇಗೆ ಹುಡುಗಿಯರ ಉಡುಪು ಅಥವಾ ಲಿಂಗ ಸಮಾನತೆಗೆ ಕುರಿತಂತೆ ಒಂದೇ ನಿಲುವನ್ನು ಹೊಂದಿರಲು ಸಾಧ್ಯ ಎಂದು ಯೋಚಿಸಲಾರಂಭಿಸಿದಾಗ ಅಲ್ಲಿ Regressive ಮನಸ್ಥಿತಿ ಮತ್ತೆ Power Dynamics ಕಣ್ಣಿಗೆ ಕಾಣುತ್ತದೆ.
ದೇಶದ ನಾನಾ ಭಾಗದಿಂದ ಬಂದಿದ್ದ ಇತರ ಶಿಕ್ಷಕರು ನಮ್ಮ ಪ್ರಿನ್ಸಿಪಾಲರಿಗಿಂತ ವೈಚಾರಿಕವಾಗಿ, ರಾಜಕೀಯವಾಗಿ ಅತ್ಯಂತ ಭಿನ್ನ ಅಭಿಪ್ರಾಯಗಳನ್ನು, ಆದರ್ಶಗಳನ್ನು ಹೊಂದಿದ್ದವರಾಗಿದ್ದರು. ಕೇರಳದ ಕಮ್ಯೂನಿಸ್ಟ್ ಐಡಿಯಾಲಜಿಯಿಂದ ಹಿಡಿದು ಹಿಮಾಚಲದ ಗುಡ್ಡಗಾಡು ಪ್ರದೇಶಗಳಿಂದ ಬಂದ ಜನರನ್ನು ಹೊಂದಿದ ಅಧ್ಯಾಪಕವರ್ಗದಲ್ಲಿ ಯಾಕೆ ಒಬ್ಬರೂ ಸಹ ಪ್ರಿನ್ಸಿಪಾಲರು ಹೇರುತ್ತಿರುವ ನಿಯಮಗಳು ತಪ್ಪು ಎಂದು ವಿರೋಧಿಸಲಿಲ್ಲ ಎಂದು ಯೋಚಿಸಿದಾಗ ಅಧಿಕಾರ ಸ್ಥಾನದಲ್ಲಿರುವವರ ಅಪಾಯಕಾರಿ ಐಡಿಯಾಲಜಿ ಹೇಗೆ ಎಲ್ಲರ ಬಾಯಿ ಮುಚ್ಚಿಸಿಬಿಡಬಹುದು ಎಂಬುದು ಅರ್ಥವಾಯಿತು. ತಮಗಿಂತ ಹೆಚ್ಚು ಅಧಿಕಾರ ಹೊಂದಿದ ಪ್ರಿನ್ಸಿಪಾಲರಿಗೆ ನೀವು ಮಾಡುತ್ತಿರುವುದು ತಪ್ಪು ಎಂಬುದನ್ನು ಅವರ ಸಿಬ್ಬಂದಿ ಗಮನಕ್ಕೆ ತರುವುದು ಎಲ್ಲರ ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಸಾಧ್ಯವೇ ಇರಲಿಲ್ಲ. ಅಧಿಕಾರಿಯ ತಪ್ಪನ್ನು ಎತ್ತಿ ತೋರಿಸುವುದು ಇಲಿಗಳೆಲ್ಲ ಸೇರಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವಷ್ಟು ಅಪಾಯಕಾರಿ ಕೆಲಸ ಎಂಬುದೇ ಎಲ್ಲರ ನಿಲುವಾಗಿತ್ತು. ಅದೇ ಕಾರಣಕ್ಕೆ, ಅದೊಂದೇ ಕಾರಣಕ್ಕೆ ಅಧಿಕಾರ ಸ್ಥಾನದಲ್ಲಿರುವವರ ಮಾತು ನಡೆ ನುಡಿಗಳಿಗೆ ಹೆಚ್ಚಿನ ಮಹತ್ವ ಬರುವುದು.
ಅಧಿಕಾರವೆಂಬುದು ಅಪಾರ ಜವಾಬ್ದಾರಿಯಿಂದ ಬರುತ್ತದೆ, ಅಧಿಕಾರ ಸ್ಥಾನದಲ್ಲಿರುವವರ ಪ್ರತಿಯೊಂದು ಮಾತುಗಳು ಸಹ ಸಾವಿರಾರುಪಟ್ಟು ಅಧಿಕ ಪರಿಣಾಮವನ್ನು ಉಂಟುಮಾಡುತ್ತದೆ. ಈಗ ತಾನೇ ನೀವು ಮುಖ್ಯಮಂತ್ರಿ ಅಧಿಕಾರಿಕ್ಕೆ ಏರಿದ್ದೀರಿ. ಆ ಮಹಿಳೆ ತೊಟ್ಟ ರಿಪ್ಡ್ ಜೀನ್ಸ್ ಅನ್ನು ನೋಡಿ ಆಕೆಯ ಚಾರಿತ್ರ್ಯದ ಕುರಿತು ಫರ್ಮಾನು ಹೊರಡಿಸುವ ಬದಲು ನಿಮ್ಮ ರಾಜ್ಯದ ಮಹಿಳೆಯರ ಆರೋಗ್ಯ, ಶಿಕ್ಷಣ, ಸಮಾನತೆಯ ಕುರಿತು ಮಾತನಾಡಿದ್ದರೆ ಅವರಿಗೆ ಗೊತ್ತಿಲ್ಲದೆಯೇ ಸಾವಿರ ಪಟ್ಟು ಹೆಚ್ಚು ಪರಿಣಾಮ ಬೀರುತ್ತಿತ್ತು. ಅಧಿಕಾರ ಸ್ಥಾನದಲ್ಲಿರುವವರಿಗೆ We have better things to focus on ಎಂಬುದನ್ನು ಅರಿವು ಮಾಡಿಸುವವರು ಯಾರು? Who will bell the cat?
ಇದನ್ನೂ ಓದಿ : ಹರಿದ ಜೀನ್ಸ್; ಧರಿಸುವ ಮಹಿಳೆಯರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಾರೆ : ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್
Published On - 3:19 pm, Sat, 20 March 21