Weird News: ಈ ಹಳ್ಳಿಯಲ್ಲಿನ ರೈತರು ಕೃಷಿಗೆ ಬಳಸ್ತಾರೆ ಬುಲೆಟ್ಪ್ರೂಫ್ ಟ್ರ್ಯಾಕ್ಟರ್
ಬುಲೆಟ್ಪ್ರೂಫ್ ಕಾರಿನ ಬಗ್ಗೆ ನೀವು ಕೇಳಿರಬಹುದು. ಆದರೆ ಹರ್ಯಾಣ- ಉತ್ತರಪ್ರದೇಶ ಗಡಿಯಲ್ಲಿ ಇರುವ ಈ ಹಳ್ಳಿಯಲ್ಲಿ ರೈತರು ಬುಲೆಟ್ಪ್ರೂಫ್ ಟ್ರ್ಯಾಕ್ಟರ್ ಬಳಸ್ತಾರೆ. ಪವರ್ ಸ್ಟೇರಿಂಗ್, ಕ್ಯಾಮೆರಾ ಅಳವಡಿಕೆ ಮಾಡಿಕೊಂಡಿರ್ತಾರೆ, ಇದ್ಯಾಕೆ ಹೀಗೆ ಗೊತ್ತಾ?
ಈ ಹಳ್ಳಿಯ ಬಗ್ಗೆ ನಿಮಗೆ ಹೇಳಿದರೆ ಬಹಳ ಆಶ್ಚರ್ಯ ಪಡ್ತೀರಿ. ಅದರಲ್ಲೂ ಈ ಹಳ್ಳಿ ಭಾರತದಲ್ಲೇ ಇದೆ ಅಂದರಂತೂ ಕೇಳಬೇಕಾ? ಈ ಹಳ್ಳಿಯಲ್ಲಿ ರೈತರು ಕೃಷಿಗಾಗಿ ಬಳಸುವ ಟ್ರ್ಯಾಕ್ಟರ್ಗಳು ಬುಲೆಟ್ಪ್ರೂಫ್. ಹರ್ಯಾಣ ಮತ್ತು ಉತ್ತರಪ್ರದೇಶದ ಗಡಿ ಭಾಗದಲ್ಲಿ ಈ ಹಳ್ಳಿ ಇದೆ. ತಮ್ಮ ಸುರಕ್ಷತೆಗಾಗಿ ರೈತರು ಈ ಟ್ರ್ಯಾಕ್ಟರ್ಗಳನ್ನು ಬಳಸ್ತಾರೆ. ಜತೆಗೆ ಇವುಗಳಿಗೆ ಕ್ಯಾಮೆರಾ ಅಳವಡಿಸಲಾಗಿರುತ್ತೆ. ಹಾಗಂತ ಈ ಟ್ರ್ಯಾಕ್ಟರ್ಗಳು ಮತ್ತೇನೋ ವಿಶಿಷ್ಟ ಅಂತೇನಲ್ಲ. ಫೋರ್ ಸ್ಟ್ರೋಕ್, ಡೈರೆಕ್ಟ್ ಇಂಜೆಕ್ಷನ್, ಡೀಸೆಲ್ ಎಂಜಿನ್. ಆದರೆ ಇವುಗಳ ವೇಗ ಮಾತ್ರ ಮಾಮೂಲಿ ಟ್ರ್ಯಾಕ್ಟರ್ಗಳಿಗಿಂತ ಎರಡು ಪಟ್ಟು ಹೆಚ್ಚು. ಪವರ್ ಸ್ಟೇರಿಂಗ್, ಡಿಸ್ಕ್ ಬ್ರೇಕ್, ದೂರದಿಂದ ಬರುವವರು ಸಹ ಕಾಣಬೇಕು ಎಂದು ಟೆಲಿಸ್ಕೋಪಿಕ್ ಲೆನ್ಸ್ ಅಳವಡಿಸಲಾಗಿರುತ್ತದೆ.
ಹರ್ಯಾಣ ಮತ್ತು ಉತ್ತರಪ್ರದೇಶ ಗಡಿಯಲ್ಲಿ ಈ ಹಳ್ಳಿ ಇರುವುದರಿಂದ ಕೃಷಿ ಭೂಮಿ ಮೇಲೆ ಎರಡೂ ರಾಜ್ಯದವರು ತಮ್ಮ ಹಕ್ಕಿದೆ ಎಂದು ಸಾಧಿಸುತ್ತಾರೆ. ಈ ಕಾರಣಕ್ಕೆ ರೈತರ ಮಧ್ಯೆ ತಿಕ್ಕಾಟ ಏರ್ಪಡುತ್ತದೆ. ಭತ್ತ ಬೆಳೆಯುವ ಹಾಗೂ ಕೊಯ್ಲಾಗುವ ಸಂದರ್ಭದಲ್ಲಿ ಈ ತಿಕ್ಕಾಟವು ಹಿಂಸಾಚಾರಕ್ಕೆ ತಿರುಗುತ್ತದೆ. ರೈತರು ಪರಸ್ಪರರ ಮೇಲೆ ಕತ್ತಿ, ಲಾಠಿ, ಚಾಕು ಮತ್ತು ಎಷ್ಟೋ ಸಲ ಬಂದೂಕಿನಿಂದ ದಾಳಿ ಮಾಡಿಕೊಳ್ಳುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಬುಲೆಟ್ಪ್ರೂಫ್ ಟ್ರ್ಯಾಕ್ಟರ್ಗಳನ್ನು ಬಳಸ್ತಾರೆ.
ವರದಿಗಳು ಹೇಳುವಂತೆ, ಗಡಿ ಭಾಗದಲ್ಲಿ ನಾಲ್ಕು ಹಳ್ಳಿಗಳಿದ್ದು, 450 ಎಕರೆ ಕೃಷಿಭೂಮಿ ಇದೆ. ಕೇಂದ್ರ ಸರ್ಕಾರವು 1974ರಲ್ಲಿ ಈ ವ್ಯಾಜ್ಯವನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸಿದೆ. ಆದರೆ ಏನೂ ಪ್ರಯೋಜನ ಆಗಿಲ್ಲ. ಕೃಷಿ ಭೂಮಿಯ ಮೇಲಿನ ಹಿಡಿತಕ್ಕಾಗಿ ಇವತ್ತಿಗೂ ಇಲ್ಲಿನ ರೈತರು ಹಾವು- ಮುಂಗುಸಿ ರೀತಿಯಲ್ಲಿ ಜಗಳ ಆಡುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಈ ಕಚ್ಚಾಟ ನಡೆಯುತ್ತಲೇ ಇದೆ. ಇನ್ನೆಷ್ಟು ಸಮಯ ಇದು ಮುಂದುವರಿಯುತ್ತದೋ? ಅಂದ ಹಾಗೆ ಬುಲೆಟ್ಪ್ರೂಫ್ ಟ್ರ್ಯಾಕ್ಟರ್ ಬೆಲೆ ಎಷ್ಟು ಗೊತ್ತಾ? 5 ಲಕ್ಷ ರೂಪಾಯಿ ಆಗುತ್ತದಂತೆ.