Sign In

By signing in or creating an account, you agree with Associated Broadcasting Company's Terms & Conditions and Privacy Policy.

World Sleep Day ; ನಿದ್ದೆ ಎಂಬ ಪದಕವಡೆ : ಯಪ್ಪಾ! ಬಸ್​ ತಂದು ಹೊಲದಾಗ ಯಾಕ್​ ನಿಲ್ಸೀರೋ?

‘ಕಂಡಕ್ಟರ್ ಟಿಕೆಟ್ ಎಂದಾಗ ಸಿಬ್ಬಂದಿ ಎಂದು ಹೇಳಿ ಐಡಿ ಕಾರ್ಡ್ ತೋರಿಸಿದೆ. ಅಕ್ಕಪಕ್ಕ ಬಸ್ ತುಂಬಾ ಗಿಜಿಗಿಜಿ, ಬರೀ ಹಳ್ಳಿಯವರೇ ತುಂಬಿದ್ದರು, ಅವರೆಲ್ಲ ಎಂತದೋ ಸಡಗರದಲ್ಲಿದ್ದರು. ನಾನು ತಲೆಕೆಡಿಸಿಕೊಳ್ಳದೆ ಅರಾಮ್ ನಿದ್ದೆ ಮಾಡಿದೆ. ಬೆಳಗಿನ ಜಾವ ಐದೂವರೆಗೆ ಕಣ್ಣು ಬಿಡ್ತೀನಿ. ಬಸ್ಸಲ್ಲಿ ಒಬ್ಬೊಬ್ಬರೂ ಇಲ್ಲ! ಯಾವುದೋ ಒಂದು ಹೊಲದ ಬಳಿ ಬಸ್ ನಿಂತಿತ್ತು. ಏನ್ರಪ್ಪ ಇಲ್ ಯಾಕೆ ನಿಲ್ಸೀರಿ ಅಂದ್ರೆ. ಮೇಡಂ ಉಕ್ಕಡಗಾತ್ರಿ ಜಾತ್ರಿ ಐತಿ, ಒಳಕ್ಕ ಬಸ್ ಹೋಗಂಗಿಲ್ಲ, ಇಲ್ಲಿಂದ ನಡದು ಹೋಗರಿ ಅಂದ್ರು.‘ ರೇಣುಕಾ ಚಿತ್ರದುರ್ಗ

World Sleep Day ; ನಿದ್ದೆ ಎಂಬ ಪದಕವಡೆ : ಯಪ್ಪಾ! ಬಸ್​ ತಂದು ಹೊಲದಾಗ ಯಾಕ್​ ನಿಲ್ಸೀರೋ?
ರೇಣುಕಾ ಚಿತ್ರದುರ್ಗ
Follow us
ಶ್ರೀದೇವಿ ಕಳಸದ
|

Updated on:Mar 19, 2021 | 6:44 PM

ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.

ಪರಿಕಲ್ಪನೆ : ಶ್ರೀದೇವಿ ಕಳಸದ

‘ಇವಳ ಆಟ ಗೊತ್ತಿರುವ ನಾನು ಮೂರು ಗಂಟೆಯಲ್ಲೇ ಕಸಬರಿಗೆ ಎತ್ತಿಕೊಂಡು ಬಿಡ್ತೀನಿ, ಕಸ ಹೊಡೆದು, ನೆಲ ತೊಳೆದು, ವಾಷಿಂಗ್ ಮಷೀನಿಗೆ ಬಟ್ಟೆ ಹಾಕಿ, ಅಡುಗೆಗೆ ಬೇಕಾದ ಮಸಾಲೆ ಅರೆಯಲು ಮಿಕ್ಸಿಯನ್ನು ರೊಂಯ್ ಅಂತ ತಿರುಗಿಸಿ ಮಧ್ಯರಾತ್ರಿಯೇ ಮನೆಯಲ್ಲಿ ದೊಂಬಿ ಎಬ್ಬಿಸಿ ಬಿಡ್ತೀನಿ’ ಅಂತಿದಾರೆ ಚಿತ್ರದುರ್ಗದ ಕೋರ್ಟ್​ನಲ್ಲಿ ಮೊದಲ ದರ್ಜೆ ಕ್ಲರ್ಕ್ ಆಗಿರುವ ಕೆಲಸ ನಿರ್ವಹಿಸುತ್ತಿರುವ ರೇಣುಕಾ ಚಿತ್ರದುರ್ಗ ಅವರು. 

ಚಿಂತೆಯೇ ನಿದ್ರೆಯ ಶತ್ರು. ನಿರುಮ್ಮಳವಾಗಿದ್ದು ಬಿಟ್ಟರೆ ಎಲ್ಲಿ ಯಾವಾಗ ಹೇಗೆ ಬೇಕಾದರೂ ನಿದ್ದೆ ಬರುತ್ತೆ. ನನ್ನ ಗೆಳೆಯನೊಬ್ಬನಿಗೆ ನಿದ್ದೆ ವಿಚಿತ್ರ ರೀತಿಯಲ್ಲಿ ಸಿಗ್ನಲ್ ಕೊಡುತ್ತಿತ್ತು. ಆತನಿಗೆ ಸಣ್ಣ ಸೌಂಡಿನ ಅಪಾನುವಾಯು (Fart) ಬಂತೆಂದರೆ ನಿದಿರೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರೆಡಿ ಇದಾಳೆ ಅಂತ ಲೆಕ್ಕ. ಫೋನಿನಲ್ಲಿ ಗಂಟೆಗಟ್ಟಲೆ ಮಾತಾಡುವ ಅವನು ಪುರುಕ್ ಅಂತ ಸಣ್ಣ ಸೌಂಡಿನ ಅಪಾನುವಾಯು ಬಂತೆಂದರೆ, ನಂಗೆ ಸಿಗ್ನಲ್ ಸಿಗ್ತಮ… ನಾ ಮಲಗಬೇಕು ಬಾಯ್ ಗುಡ್ ನೈಟ್ ಅಂದುಬಿಡೋನು, ಅದರ ನಂತರ ಲೇಯ್… ಇರೋ, ಒಂದು ಇಂಪಾರ್ಟೆಂಟ್ ವಿಷ್ಯ ಐತೆ ಅಂದ್ರೂ ಡೋಂಟ್ ಕೇರ್ ಅಂತ ಮುಲಾಜಿಲ್ಲದೆ ಕಾಲ್ ಕಟ್ ಅಷ್ಟೇ.

ಆದರೆ ನನಗೆ? ಯಾವ ಸಿಗ್ನಲ್ಲೂ ಬೇಡ. ನಾನು ಸಂತೆಯೊಳಗೂ ನಿದ್ದೆ ಮಾಡುವ ಜಾತಿಯವಳು. ಕೆಲವರಂತೂ ನನಗೆ ಅಲ್ಲಿ ನಿದ್ದೆ ಬರಲ್ಲ, ಇಲ್ಲಿ ನಿದ್ದೆ ಬರಲ್ಲ, ನಮ್ ಮನೇಲಿ ಮಾತ್ರ ನಿದ್ದೆ ಬರೋದು, ಅದೂ ನಮ್ಮ ಮನೆಯ ಆ ಕೋಣೆಯಲ್ಲಿ ಮಾತ್ರ ನಿದ್ದೆ ಬರೋದು, ಲೈಟ್ ಇರ್ಬಾರದು, ಶಬ್ಧ ಇರಬಾರದು ಹಿಂಗೆ ಏನೇನೋ ರೂಲ್ಸ್ ಹಾಕೊಂಡಿರ್ತಾರೆ, ಅದ್ರಲ್ಲಿ ಚೂರು ಎಡವಟ್ಟಾದ್ರೂ ಅವರ ನಿದ್ದೆ ಗತಿ ಗೋವಿಂದ.‌ ಆದರೆ ನನಗೆ ಹಾಗಲ್ಲ, ಎಲ್ಲೇ ಇರಲಿ, ಹೇಗೆ ಇರಲಿ ಯಾವ ಪರಿಸ್ಥಿತಿಯಲ್ಲೇ ಇರಲಿ ಒಮ್ಮೆ ಆಕಳಿಸಿದೆ ಅಂದ್ರೆ ನಿದ್ದೆ ಶುರು ಅಂತನೇ ಲೆಕ್ಕ. ಬಸ್ಸಲ್ಲಿ ಮಾಡುವ ಕೋಳಿ ನಿದ್ದೆ, ಆಫೀಸಲ್ಲಿ ಊಟದ ನಂತರ ಹಾಗೆ ಛೇರಲ್ಲಿ ಎರಡು ನಿಮಿಷ ತೂಕಡಿಸುವ ಝೂಬರಿಕೆ ನಿದ್ರೆ, ಪರ ಊರಿಗೆ ಹೋದಾಗ ಬಸ್ ಸಿಗದೆ ಬಸ್ ಸ್ಟಾಂಡಲ್ಲಿ ಕೂತು ಮಾಡುವ ಲಘು ನಿದ್ದೆ. ಟ್ರೈನಿಂಗ್, ಟೂರ್ ಹೋದಾಗ ಯಾವುದೋ ಲಾಡ್ಜಲ್ಲಿ ಗೊರಾಯಿಸುವ ಗೊರಕೆ ನಿದ್ರೆ ಹೀಗೆ ಎಲ್ಲೆಂದರಲ್ಲಿ ನನಗೆ ನಿದ್ದೆ ಬಂದು ಬಿಡುತ್ತೆ. ಈ ವಿಷಯದಲ್ಲಿ ತುಂಬಾ ಪುಣ್ಯವಂತೆ ಆದರೆ ಅದರಿಂದ ಪಜೀತಿಗಳೂ ಆಗಿವೆ.

ಹಿಂದೆ ನಾನು ಕೆಎಸ್​ಆರ್​ಟಿಸಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಹೀಗಾಯ್ತು ನೋಡಿ. ನಾನು ನಮ್ಮ ಕುಟುಂಬ ಸಮೇತ ಮೈಸೂರಿಗೆ ಹೋಗಿದ್ದೆ. ಆದರೆ ಅದೇನೋ ಎಮರ್ಜೆನ್ಸಿ ಕೆಲಸ ಅಟಕಾಯಿಸಿಕೊಂಡು ನನ್ನ ಒಂದು ದಿನದ ರಜೆ ಕ್ಯಾನ್ಸಲ್ ಮಾಡಿ ಮರುದಿನವೇ ಕರ್ತವ್ಯಕ್ಕೆ ಹಾಜರಾಗಬೇಕೆಂಬ ‌ಫೋನ್ ಕಾಲ್ ಆರ್ಡರು ಬಂತು. ಹೇಳಿ ಕೇಳೀ ಕೆಎಸ್ಸಾರ್ಟಿಸಿಲಿ ಸೂಪರ್ವೈಸರ್ ಕೆಲಸ, ಆಗಲ್ಲ ಅನ್ನುವ ಮಾತೇ ಇಲ್ಲ. GRS ಫ್ಯಾಂಟಸಿ ಪಾರ್ಕಲ್ಲಿ ಆಟ ಮುಗಿಸಿ ಸುಸ್ತಾಗಿದ್ದ ನಾನು ಅಂದು ರಾತ್ರಿ ಮೈಸೂರಿನಿಂದ ಒಬ್ಬಳೇ ಕೊಪ್ಪಳಕ್ಕೆ ತೆರಳಿದೆ.

ನನಗೆ ಕೊಪ್ಪಳಕ್ಕೆ ನೇರ ಬಸ್ ಸಿಕ್ಕಲಿಲ್ಲ. ಹರಿಹರದಿಂದ ಕೊಪ್ಪಳ ಬಸ್ ಸಿಗುತ್ತೆ ಎಂದು ಹೇಳಿದ್ದರಿಂದ ಹರಿಹರ ಬಸ್ ಹತ್ತಿದ್ದೆ. ಬಸ್ಸಲ್ಲಿ ನಿದ್ದೆ ಮಾಡುತ್ತ ಹರಿಹರದಲ್ಲಿ ಇಳಿದಾಗ ಕಲ್ಲುನೀರು ಕರಗುವ ಸಮಯ, ಬರೋಬ್ಬರಿ ಮೂರುಗಂಟೆ ಮಧ್ಯರಾತ್ರಿ. ನಿದ್ದೆಯ ಮೂಡಲ್ಲಿ ಇದ್ದ ನಾನು ಕಣ್ಣಿಗೆ ಕಂಡ ಬಸ್ ಹತ್ತಿದೆ. ಅಲ್ಲಿ ಕಂಡಕ್ಟರ್ ಬಂದು ಟಿಕೆಟ್ ಎಂದಾಗ ಸಿಬ್ಬಂದಿ ಎಂದು ಹೇಳಿ ಐಡಿ ಕಾರ್ಡ್ ತೋರಿಸಿದೆ. ತೋರಿಸಿ ಅಕ್ಕಪಕ್ಕ ನೋಡಿದಾಗ ಬಸ್ ತುಂಬಾ ಗಿಜಿಗಿಜಿ, ಬರೀ ಹಳ್ಳಿಯವರೇ ತುಂಬಿದ್ದರು, ಅವರೆಲ್ಲ ಎಂತದೋ ಸಡಗರದಲ್ಲಿದ್ದರು. ನಾನು ಗಮನಿಸಿದರೂ ತಲೆಕೆಡಿಸಿಕೊಳ್ಳದೆ ಅರಾಮ್ ನಿದ್ದೆ ಮಾಡಿದೆ. ಬೆಳಗಿನ ಜಾವ ಐದೂವರೆಗೆ ಕಣ್ಣು ಬಿಡ್ತೀನಿ. ಬಸ್ಸಲ್ಲಿ ಒಬ್ಬೊಬ್ಬರೂ ಇಲ್ಲ! ಎಲ್ಲ ಎಲ್ ಹೋದರಪ್ಪ ಅಂತ ನೋಡ್ತೀನಿ. ಯಾವುದೋ ಒಂದು ಹೊಲದ ಬಳಿ ಬಸ್ ನಿಂತಿತ್ತು. ಏನ್ರಪ್ಪ ಇಲ್ ಯಾಕೆ ನಿಲ್ಸೀರಿ ಅಂದ್ರೆ. ಮೇಡಂ ಉಕ್ಕಡಗಾತ್ರಿ ಜಾತ್ರಿ ಐತಿ, ಒಳಕ್ಕ ಬಸ್ ಹೋಗಂಗಿಲ್ಲ, ಇಲ್ಲಿಂದ ನಡದು ಹೋಗರಿ, ಅಜ್ಜಯ್ಯನ ಜಾತ್ರೆ ಇರೋದ್ರಿಂದ ಅಲ್ಲಿ ಫುಲ್ ರಶ್ ಅದಾ. ಬಸ್ ಒಳಗ ಹೋಗೂದಿಲ್ಲ ಅಂದ್ರು.

ಅಯ್ಯೋ ನಿನ್ನ ಕೊಪ್ಪಳಕ್ಕ ಕರ್ಕೊಂಡು ಹೋಗಾದು ಬಿಟ್ಟು ಇಲ್ ಯಾಕ್ ಕರ್ಕೊಂಬಂದ್ರಿ ಅಂತ ಬೈದೆ. ಮೇಡಂ ಒಂಚೂರು ಬಂದು ಬೋರ್ಡ್ ನೋಡರಿ ಅಂದ. ಬಂದು ನೋಡಿದ್ರೆ ಜಾತ್ರಾ ವಿಶೇಷ ಬೋರ್ಡ್ ಇದೆ. ನಾನು ಟಿಕೆಟ್ ತಗೊಳದೆ ಇದ್ದುದರಿಂದ ಕಂಡಕ್ಟರ್ ನನ್ನ ಊರನ್ನು ಕೇಳಿಲ್ಲ. ಕಂಡಕ್ಟರುಗಳು ಸಿಬ್ಬಂದಿಗೆ ಯಾವ್ ಊರಿಗೆ ಹೊಂಟೀರಿ ಅಂತ ಎಂದೂ ಕೇಳಲ್ಲ, ಇದರಿಂದ ಈ ಫಜೀತಿ ಸೃಷ್ಟಿ ಆಗಿತ್ತು.

ಆಗ ಕಂಡಕ್ಟರ್ ಮೇಡಂ ಹೆಂಗಿದ್ರೂ ಬಂದೀರ ಉಕ್ಕಡಗಾತ್ರಿ ಜಾತ್ರಿ ನೋಡ್ಕೊಂಡು ಹೋಗಿ ಅಂದ.. ಅಪಾ ನಾನು ಹತ್ತು ಗಂಟೆಗೆ ಡಿಪೋದಲ್ಲಿ ಇಲ್ಲ ಅಂದ್ರೆ ನನ್ನ ಜಾತ್ರೆ ಆಗುತ್ತೆ ಕಣಪ ಅಂದೆ. ಈಗ ಈ ಬಸ್ ವಾಪಾಸ್ ಹೋಗುತ್ತೆ ಬರ್ರಿ ಮೇಡಂ ಹೋಗಣ ಅಂದ. ಮತ್ತೆ ಹರಿಹರ ವಾಪಾಸ್ ಬಂದು ಅಲ್ಲಿಂದ ಕೊಪ್ಪಳ ಬಸ್ ಹತ್ತಿ ಡಿಪೋ ಮುಟ್ಟಿದಾಗ ಹನ್ನೊಂದು ಗಂಟೆ. ಡಿಪೋ ಮ್ಯಾನೇಜರ್ ಕೈಲಿ ಚೂರು ಬೈಸಿಕೊಂಡು ಕೆಲಸ ಶುರು ಹಚ್ಚಿದೆ. ನನ್ನ ನಿದ್ದೆಗಣ್ಣು ಇಷ್ಟೆಲ್ಲ ಅವಾಂತರ ಮಾಡಿಸಿತ್ತು. ಅವತ್ತಿಂದ ಈ ಬಸ್ಸು ಇಂತಾ ಊರಿಗೆ ಹೋಗುತ್ತ ಅಂತ ಯಾರನ್ನಾದರೂ ಕೇಳಿ ಕನ್ಫರ್ಮ್ ಮಾಡಿಕೊಂಡು ಹೋಗ್ತೀನಿ.

world sleep day

ಸೌಜನ್ಯ : ಅಂತರ್ಜಾಲ

ನಿದ್ರಾದೇವಿ ಚಕಾಚಕ್ ಅಂತ ಹೇಗೆ ಬರತಾಳೋ ಹಾಗೇಯೇ ಕೆಲವೊಮ್ಮೆ ಬರದೆ ಕಾಡಿಸುವುದುಂಟು. ಆಫೀಸ್ ವರ್ಕ್ ಮುಗಿಸಿ ಸುಸ್ತಾಗಿ, ಒಂಚೂರು ಅಡುಗೆ ಮಾಡಿ, ತಿಂದು, ಮುಸುರೆ ಪಾತ್ರೆ ಹಾಗೇ ಬಿಟ್ಟು ಬೇಗ ಮಲಗಿಬಿಟ್ಟರೆ ಮಧ್ಯರಾತ್ರಿ ಮೂರು ಗಂಟೆಗೆ ಟಪಕ್ ಅಂತ ಎಚ್ಚರಾಗಿ ಬಿಡುತ್ತದೆ., ಏನಂದ್ರೂ ನಿದ್ದೆ ಬರಲ್ಲ. ಈಗ ನಿದ್ದೆ ಮಾಡದಿದ್ದರೆ ಬೆಳಿಗ್ಗೆ ಬೇಗ ಎಚ್ಚರಾಗಲ್ಲ, ಎಚ್ಚರಾಗದಿದ್ದರೆ ಕೆಲಸಗಳು ಮುಗಿಯಲ್ಲ, ಕೆಲ್ಸ ಮುಗೀದಿದ್ದರೆ ಆಫೀಸಿಗೆ ಹೋಗಕಾಗಲ್ಲ ಇಂತವೆಲ್ಲ ಟೆನ್ಷನ್ ಮುತ್ತಿಬಿಟ್ಟರೆ ಬರೋ ನಿದ್ರೆನೂ ದೂರ ಹಾರಿಬಿಡತ್ತೆ. ನಿದ್ರೆ ಅನ್ನೋದು ನಮ್ಮ ಅಂಗೈಯಲ್ಲಿ ಬಚ್ಚಿಟ್ಟ ಅಕ್ಕಿ ಹಿಟ್ಟಿನ ಹಾಗೆ. ನಾವು ಅದನ್ನು ವಶ ಪಡಿಸಿಕೋಬೇಕು ಅಂತ ನಮ್ಮ ಮುಷ್ಟಿಯನ್ನು ಬಿಗಿದಷ್ಟೂ ನಮ್ಮ ಮುಷ್ಠಿಯಿಂದ ಹಿಟ್ಟಿ ಜಾರುತ್ತಲೇ ಹೋಗುತ್ತೆ. ಮುಷ್ಠಿ ಸಡಿಲ ಮಾಡಿದರೆ ಮಾತ್ರ ಹಿಟ್ಟು ಅಂಗೈಲಿ ಉಳಿಯೋದು. ಅದೇ ತರ ಮಲಗಣ ಮಲಗಣ ಅಂತ ಮನಸನ್ನು ಬೈದಷ್ಟೂ ನಿದ್ರೆ ಬರೋದೆ ಇಲ್ಲ. ಅದೇ ಸ್ವಲ್ಪ ಹೊತ್ತು ಮಲಗೋದನ್ನ ಮುಂದಕ್ಕೆ ಹಾಕಿದ್ರೆ ಮತ್ತೆ ನಿದಿರಾದೇವಿ ಚುಕ್ಕುತಟ್ಟಲು ಓಡಿ ಬರುತ್ತಾಳೆ.

ಇವಳ ಆಟ ಗೊತ್ತಿರುವ ನಾನು ಮೂರು ಗಂಟೆಯಲ್ಲೇ ಕಸಬರಿಗೆ ಎತ್ತಿಕೊಂಡು ಬಿಡ್ತೀನಿ, ಕಸ ಹೊಡೆದು, ನೆಲ ತೊಳೆದು, ವಾಷಿಂಗ್ ಮಷೀನಿಗೆ ಬಟ್ಟೆ ಹಾಕಿ, ಅಡುಗೆ ಬೇಕಾದ ಮಸಾಲೆ ಅರೆಯಲು ಮಿಕ್ಸಿಯನ್ನು ರೊಂಯ್ ಅಂತ ತಿರುಗಿಸಿ ಮಧ್ಯರಾತ್ರಿಯೇ ಮನೆಯಲ್ಲಿ ದೊಂಬಿ ಎಬ್ಬಿಸಿ ಬಿಡ್ತೀನಿ. ಮನೆಯಲ್ಲಿರುವ ಜನ ತ್ಚು ತ್ಚು ಅಂತ ಒಳಗೆ ಬೈದುಕೊಂಡರೂ ಹೊರಗೆ ಬೈಯುವ ಸಾಹಸ ಮಾಡಲ್ಲ. ಪಕ್ಕದ ಮನೆಯವರು ಮಾತ್ರ ಏನ್ರಿ ಮಧ್ಯರಾತ್ರಿ ನಿಮ್ಮನೇಲಿ ಅಷ್ಟೊಂದು ಸೌಂಡು ಅಂತ ಜಾಸೂಸಿ ಶುರು ಮಾಡಿ ಬಿಡ್ತಾರೆ. ನಾನು ಕಸ ಹೊಡೆದೆ, ಮುಸುರೆ ತಿಕ್ಕಿದೆ, ಖಾರ ರುಬ್ಬಿದೆ ಅಂತೆಲ್ಲ ನನ್ನ ಆಟಾಟೋಪ ಕೊಚ್ಚಿಕೊಂಡರೆ… ಅಷ್ಟೊತ್ತಲ್ಲ ಅಂತ ನಗ್ತಾರೆ. ಏನ್ ಮಾಡೋದು ನಮ್ ಕಷ್ಟ ನಮಗೆ.

ನಿದ್ದೆ ಬರದಿದ್ದರೆ ಖಂಡಿತಾ ಹಾಸಿಗೆ ಮೇಲೆ ಬಿದ್ದು ಉರುಳಾಡಲ್ಲ ಹತ್ತು ನಿಮ್ಷ ನೋಡ್ತೀನಿ.‌ ನಿದ್ದೆ ಹತ್ತುವ ಲಕ್ಷಣ ಇಲ್ಲ ಅಂದ್ರೆ ಸೀದಾ ಹೊರಗಡೆ ಬಂದು ಇಷ್ಟದ ಪುಸ್ತಕ ಹಿಡಿದು ನಿದ್ದೆ ಬರುವವರೆಗೆ ಓದುವುದು, ಬರೆಯುವುದು. ಇವೆರಡೂ ಆಗದಿದ್ದರೆ ಕನಿಷ್ಟ ಒಂದು ಸಿನಿಮಾ ನೋಡುವುದು. ಕೆಲವೊಮ್ಮೆ ಮೂರರಿಂದ ಬೆಳಿಗ್ಗೆ ಆರೂವರೆವರೆಗೆ ಹೀಗೆ ಎಚ್ಚರಿದ್ದು ಮತ್ತೆ ಕೆಲಸ ಶುರು ಮಾಡಿದ ದಿನಗಳೂ ಇವೆ.

ಒಟ್ಟಿನಲ್ಲಿ ನಿದಿರಾದೇವಿ ನನ್ನ ಅತ್ಯಂತ ಆಪ್ತ ಗೆಳತಿ. ಆಪ್ತ ಗೆಳತಿ ಆದ್ದರಿಂದಲೇ ಕೆಲವೊಮ್ಮೆ ತುಂಬಾ ಸಿಟ್ಟು ಮಾಡಿಕೊಂಡು ಬಿಡುತ್ತಾಳೆ. ಅವಳು ಚಂದದಿ ಬಂದು ಮಾತಾಡಿಸಿ ತಬ್ಬಿದಾಗ ತಬ್ಬಿ ನಿದ್ದೆ ಮಾಡುತ್ತಲೂ ಅವಳು ಕೋಪದಿ ನನ್ನ ದಬ್ಬಿದಾಗ ಬೇಸರಿಸಿದೆ ಎಚ್ಚರಿದ್ದು ಮತ್ತೃ ರಮಿಸಿ ಕರೆದಾಗ ಹೋಗಿ ತಬ್ಬುತ್ತಲೂ ಆರಾಮವಾಗಿ ಇದ್ದೇನೆ.

ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ : ನಿದ್ರಾಯೋಗ ಮತ್ತು ಮುಕ್ತ ವಿಶ್ವವಿದ್ಯಾಲಯದ ನಡುವಿನ ಬಿಟ್ಟಸ್ಥಳವಿದು 

Published On - 6:42 pm, Fri, 19 March 21