World Environment day 2022: ಬಾಲ್ಯದ ಶ್ರೀಮಂತ ನೈಸರ್ಗಿಕ ಜೀವನದ ಸವಿನೆನಪು
ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ. ಆದರೆ ಇಂದು ಪರಿಸರ ನಶಿಸುತ್ತಿದೆ. ನಾವು ಪ್ರಕೃತಿಯಿಂದ ಅನುಭವಿಸಿದ ಶ್ರೀಮಂತ ಮನರಂಜನೆಯನ್ನು, ಆರೋಗ್ಯವನ್ನು ನಮ್ಮ ಪೀಳಿಗೆಯವರೂ ಅನುಭವಿಸುವಂತಾಗಲು ನಾವು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕಿದೆ.
ಹುಟ್ಟಿದ ತಾಯಿ ಹಾಗೂ ಬೆಳೆಸಿದ ತಾಯಿ ಮನುಜ ಜೀವನದಲ್ಲಿ ಮರಯಲಾಗದ ವಸ್ತುಗಳು. ಒಬ್ಬಳು ಒಂದು ಜೀವಕ್ಕೆ ಜೀವ ಕೊಡುವಳು ಇನ್ನೊಬ್ಬಳು ತನ್ನ ಜೀವನವನ್ನೇ ಕೊಡುವಳು. ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ. ಆದರೆ ಇಂದು ಪರಿಸರ ನಶಿಸುತ್ತಿದ್ದು, ಇದರ ಜೊತೆಗೆ ಕಾಡು ಪ್ರಾಣಿಗಳು, ಪಕ್ಷಿಗಳೂ ಅಳಿವಿನಂಚಿಗೆ ಸಾಗಿದೆ. ಇಂದಿನ ಈ ಸ್ಥಿತಿಯಲ್ಲಿರುವ ನಾವು ಬಾಲ್ಯದ ಹಳ್ಳಿ ಜೀವನ ಹೇಗಿತ್ತು ಎಂದು ಹೇಳುವ ಸಣ್ಣ ಪ್ರಯತ್ನ ಮಾಡುತ್ತೇನೆ.
ಪಟ್ಟಣದ ಮಂದಿಗಿಂತ ಹಳ್ಳಿ ಮಂದಿಗೆ ಪರಿಸರ ಸ್ನೇಹ ಸ್ವಲ್ಪ ಜಾಸ್ತಿ. ವಿಮಾನ, ಬಸ್ಸು, ಕಾರುಗಳಿಗಿಂತ ಗಿಡ, ಮರ, ಪಶು, ಪಕ್ಷಿಗಳನ್ನು ನೋಡಿ ಬೆಳೆದು ದೊಡ್ಡವರಾಗುತ್ತೇವೆ. ಪೇಟೆ ಮಂದಿ ಶಾಲೆಗೆ ವ್ಯಾನ್ನಲ್ಲಿ ಹೋಗಿ ವ್ಯಾನ್ನಲ್ಲೇ ಬರುತ್ತಾರೆ. ಅವರಿಗೆ ಲೋಡ್ ಅನ್ ಲೋಡ್ ಮಾಡಿದ ಥರ ಆಗಬಹುದು. ಆದರೆ ನಾವು ಚಿಕ್ಕವರು ಇದ್ದಾಗ ನಮ್ಮ ಬೆನ್ನು ಹಿಂದಕ್ಕೆ ಬಾಗುವಂತೆ ಪುಸ್ತಕಗಳೇ ತುಂಬಿ ಸ್ಕೂಲ್ ಬ್ಯಾಗ್ ಅನ್ನು ಬೆನ್ನಿಗೆ ಹಾಕಿ ಸ್ಲಿಪ್ಪರ್ ಹಾಕಿ ಅಜ್ಜನ ಛತ್ರಿ ಹಿಡಿದುಕೊಂಡು ಅರಣ್ಯಗಳ ನಡುವೆ ಹಾದು ಹೋಗವ ರಸ್ತೆಗಳಲ್ಲಿ ಹೋಗುತ್ತೇವೆ. ಹೀಗೆ ಹೋಗುವಾಗ ಸುಮ್ಮನೇ ಹೋಗುವುದಿಲ್ಲ, ಬದಲಾಗಿ ಮರಗಳೊಂದಿಗೆ ಮಾತನಾಡುತ್ತಾ ಹೋಗುತ್ತಿದ್ದೆವು. ಇನ್ನೂ ಕೆಲವರು ಶಿಕ್ಷಕರಂತೆ ಗಿಡಮರಗಳಿಗೂ ಪಾಠ ಮಾಡುತ್ತಾ ಹೋಗುತ್ತಿದ್ದರು.
ಇದನ್ನೂ ಓದಿ: World Environment Day 2022: ಉತ್ತಮ ಪರಿಸರಕ್ಕಾಗಿ ನಮ್ಮ ಜೀವನದಲ್ಲಿ ಬದಲಾಯಿಸಿಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ
ದಾರಿಯಲ್ಲಿ ನಡೆದುಕೊಂಡು ಬರುವಾಗ ಮಾವು ಕಂಡರೆ ಸಾಕು, ಆ ಮಾವನ್ನು ಕೀಳಲು ಪಡುವ ಹರಸಾಹಸ, ಕಿತ್ತನಂತರ ಸ್ನೇಹಿತರೊಂದಿಗೆ ಒಟ್ಟುಗೂಡಿ ತಿನ್ನುವ ಮಜಾನೇ ಬೇರೆ. ಇವಿಷ್ಟು ನಮ್ಮ ದಿನದ ಆರಂಭ. ಸಂಜೆ ಶಾಲಾ ಕಾಲೇಜಿನಿಂದ ಬರುವಾಗ ಹುಣಸೆ ಮರವೇ ಟಾರ್ಗೆಟ್. ಹುಣಸೆ ಹಣ್ಣಿಗಿಂತ ಕೆಳಗೆ ನಿಂತವರ ತಲೆ ಮೇಲೆಯೇ ಕಲ್ಲುಗಳು ಬೀಳುತ್ತಿದ್ದದ್ದು ಜಾಸ್ತಿ. ಹಾಗೆ ಮುಂದಕ್ಕೆ ಸಾಗುತ್ತಾ ಗೇರುಹಣ್ಣು ತಿನ್ನುವುದು. ಅದ್ಯಾವುದು ಸಿಕ್ಕಿಲ್ಲಾ ಎಂದರೆ ಅಕೇಶಿಯ ಮರದ ಎಲೆಗಳನ್ನು ಕೊಯ್ದು ಸಮೋಸ ರೀತಿ ಮಾಡುತ್ತಾ ಬರುವುದು, ಕೆಲವೊಮ್ಮೆ ರಸ್ತೆ ಬದಿ ಬಲ್ಲೆಗಳು ತುಂಬಿವೆ ಎಂದರೆ ಗಸಗಸೆ ಗಿಡ ಇದೆ ಎಂದರ್ಥ. ಈ ಗಿಡದಿಂದ ಗಸಗಸೆ ತೆಗೆದು ಮನೆಗೆ ಕೊಂಡೊಯ್ದು ರಾತ್ರಿ ಮಲಗುವಾಗ ನೀರಿನಲ್ಲಿ ಹಾಕಿ ಬೆಳಗ್ಗೆ ಶಾಲೆಗೆ ಹೋಗುವಾಗ ನೀರಿನ ಬಾಟಲ್ಗೆ ಹಾಕಿ ಕೊಂಡೊಯುತ್ತಿದ್ದೆವು.
ಹಳ್ಳಿಗರಿಗೆ ಪ್ರಕೃತಿಯಿಂದ ಸಿಗುವ ಮನರಂಜನೆ ಅಷ್ಟೇ ಅಲ್ಲ, ಅಮ್ಮ, ಅಪ್ಪ ಕೊಡುವ ಐದು ರೂಪಾಯಿ, ಹತ್ತು ರೂಪಾಯಿ ಪಾಕೆಟ್ ಮನಿ ಬಿಟ್ಟರೆ ಹೆಚ್ಚುವರಿ ಹಣ ಅಂತ ನಮ್ಮ ಬಳಿ ಇದ್ದದ್ದು ಮರಗಳ ಎಲೆ. ಹೌದು, ದೊಡ್ಡವರು ನೈಜ ನೋಟು ಎಣಿಸುತ್ತಿದ್ದಂತೆ ನಾವು ಸಣ್ಣವರಿದ್ದಾಗ ಎಲೆಗಳನ್ನು ನೋಟು ಎಂದು ಹೇಳುತ್ತಾ ಆಡುತ್ತಿದ್ದೆವು. ಶಾಲೆಯಲ್ಲಿ ಕೊನೆಯ ಪಿರಿಯೆಡ್ ಅಂದರೆ ಆಟದ ಸಮಯ. ಆಡಿ ಸುಸ್ತಾಗಿರುತ್ತೇವೆ. ಶಾಲೆ ಬಿಟ್ಟ ನಂತರ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಬರುವಾಗ ಅಲದ ಮರದ ಅಡಿ ಕುಳಿತು ಆಯಾಸ ಕಳೆಯುವುದೇ ದೊಡ್ಡ ಸಂತೋಷದ ವಿಷಯ. ಕೆಲವೊಮ್ಮೆ ಕುಂಟೆಬಿಲ್ಲೆ ಆಡುತ್ತಾ, ಕಣ್ಣಮುಚ್ಚಾಲೆ ಆಡುತ್ತಾ ಮನೆಗೆ ಹೋಗುತ್ತಿದ್ದೆವು. ಪರೀಕ್ಷೆಗಳು ಬಂತೆಂದರೆ ಸಾಕು, ಮರದಡಿ, ಮರದ ಕೊಂಬೆ ಮೇಲೆ ಕುಳಿತು ಓದುವ ಹುಡುಗರು.
ಇದನ್ನೂ ಓದಿ: World Environment Day 2022: ವೇಮಗಲ್ ಚೆಲ್ಲಕುಟ್ಟಪ್ಪನಿಗೊಂದು ಹಸಿರು ಸಲಾಂ!
ಆದರೆ ಇಂದು ಅಂಥ ಮರಗಳೇ ನಶಿಸುತ್ತಿವೆ. ಬಗ್ಗಿದ ಬಾಳೆಗೊನೆ, ವಯಸ್ಸಾದ ಆಲದ ಮರ, ಎತ್ತರಕ್ಕೆ ಬೆಳೆದ ತೆಂಗಿನ ಮರ, ಹಾವಿನಂತಿರುವ ಬಳ್ಳಿಗಳು, ಸುಂದರ ಗರಿ ಬಿಚ್ಚಿಟ್ಟು ಕುಣಿಯುವ ನವಿಲು, ತನ್ನ ರಾಗಕ್ಕೆ ಕುಣಿಯುತ್ತಾ ಇವೆ ಎಂಬ ಭ್ರಮೆ, ಮನೆ ಬಳಿ ಇಂಪಾಗಿ ಹಾಡುತ್ತಾ ಬರುವ ಕೋಗಿಲೆ, ಹಪ್ಪಳ, ಸೆಂಡಿಗೆ, ಕೊಪ್ಪರಿಗೆಗೆ ಹೊಂಚು ಹಾಕುವ ಕಾಗೆ, ಗುಬ್ಬಚ್ಚಿ, ಕೋಳಿಗಳ ಶಬ್ದದಿಂದ ನಾವು ಎಚ್ಚರಗೊಳ್ಳುತ್ತಿದ್ದವು. ಈ ಸೌಂದರ್ಯಕ್ಕೆ ಬಣ್ಣ ತುಂಬಲು ಬರುವ ಚಿಟ್ಟೆ, ಮುಟ್ಟಿದರೆ ನಾಚುವ ನಾಚಿಕೆ ಮುಳ್ಳು, ರೈತನ ಮಿತ್ರ ಎರೆಹುಳುಗಳು, ಸಂಜೆ ಹೊತ್ತಿಗೆ ಭೇಟಿ ಆಗಲು ಬರುವ ದುಂಬಿ, ಅದೇ ಹೊತ್ತಿಗೆ ಹೊಟ್ಟೆ ತುಂಬಿಸಿ ಹಟ್ಟಿಗೆ ಮರಳುವ ದನಗಳು. ಈ ಪ್ರಕೃತಿ ನಿಯಮಗಳು ಇಂದು ಕಡಿಮೆಯಾಗಿದ್ದು, ನಮ್ಮ ಕಣ್ಣಮುಂದೆ ನೆನಾಪಾಗಿ ಉಳಿದಂತಿದೆ.
ಮುಂದಿನ ಪೀಳಿಗೆಗೆ ನಾವು ಇದನ್ನ ಕಾಲ್ಪನಿಕವಾಗಿ ಹೇಳಬೇಕೇ ಹೊರತು ಕಣ್ಣ ಮುಂದೆ ತೋರಿಸುವಲ್ಲಿ ನಾವು ಸೋತು ಹೋಗಿದ್ದೇವೆ. ಪರಿಸರ ದಿನವನ್ನು ಪುಸ್ತಕಕ್ಕೆ, ಆಚರಣೆಗೆ ಸೀಮಿತವಾಗಿರಿಸದೆ ಮುಂದಿನ ಪೀಳಿಗೆಯ ಉತ್ತಮ ನೈಸರ್ಗಿಕ ಜೀವನಕ್ಕೆ ನಾವು ಈಗಿಂದೀಗಲೇ ಕಾರ್ಯೋನ್ಮುಖರಾಗಬೇಕಿದೆ. ನಾವು ಪ್ರಕೃತಿಯಿಂದ ಅನುಭವಿಸಿದ ಶ್ರೀಮಂತ ಮನರಂಜನೆಯನ್ನು, ಆರೋಗ್ಯವನ್ನು ನಮ್ಮ ಪೀಳಿಗೆಯವರೂ ಅನುಭವಿಸುವಂತಾಗಲಿ.
ಲೇಖನ: ನಿಶಾ ಶೆಟ್ಟಿ
ಪತ್ರಿಕೋದ್ಯಮ ವಿದ್ಯಾರ್ಥಿ, ವಿವೇಕಾನಂದ ಕಾಲೇಜು ಪುತ್ತೂರು
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 pm, Sun, 5 June 22