Autobiography: ಆಧುನಿಕ ಶಕುಂತಲಾ ಕಥನ; ಅಷ್ಟು ದೇಶಗಳನ್ನು ಸುತ್ತಲು ಧೈರ್ಯ ತುಂಬಿದ್ದೇ ನನ್ನ ಬಾಲ್ಯದ ‘ಕೆಜಿಎಫ್​ ಸಂಸ್ಕೃತಿ’

Education : ನನ್ನ ತಂದೆತಾಯಿಯ ಅಂತರ್ಜಾತಿ ವಿವಾಹ, ನಾನು ಯಾವ ಜಾತಿಯೊಂದಿಗೆ ಗುರುತಿಸಿಕೊಳ್ಳಬೇಕೆಂಬ ಅಸಹಾಯಕ ಪರಿಸ್ಥಿತಿ, ನನ್ನ ಶೂದ್ರ ಹಿನ್ನೆಲೆ ಕೀಳರಿಮೆ ಹುಟ್ಟಿಸಿತು. ಇದೇ ವಿದ್ಯಾಭ್ಯಾಸ, ವೃತ್ತಿಯಲ್ಲಿ ಸಾಧನೆ ಮಾಡಲೂ ಪ್ರೇರೇಪಿಸಿತು. ಒಮ್ಮೆ ವೃತ್ತಿಯ ಶಿಖರ ಕಂಡಮೇಲೆ ನನ್ನ ಅಧೀರತೆ, ಕೀಳರಿಮೆ ಮಾಯವಾಗತೊಡಗಿತು.

Autobiography: ಆಧುನಿಕ ಶಕುಂತಲಾ ಕಥನ; ಅಷ್ಟು ದೇಶಗಳನ್ನು ಸುತ್ತಲು ಧೈರ್ಯ ತುಂಬಿದ್ದೇ ನನ್ನ ಬಾಲ್ಯದ ‘ಕೆಜಿಎಫ್​ ಸಂಸ್ಕೃತಿ’
ಕೋಲಾರದ ಜಿಮಖಾನಾ ಕ್ಲಬ್
Follow us
|

Updated on:Jun 05, 2022 | 2:44 PM

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನನಗೆ ಆತ್ಮಚರಿತ್ರೆಗಳನ್ನು ಜೀವನ ಚರಿತ್ರೆಗಳನ್ನು ಓದುವ ಹುಚ್ಚಲ್ಲದಿದ್ದರೂ ಒಂದು ಬಗೆಯ ಒಲವು,  ಮೋಹ ಚಿಕ್ಕಂದಿನಿಂದಲೂ ಇತ್ತು. ಇಂಗ್ಲಿಷ್​ನಲ್ಲಿಯೋ, ಕನ್ನಡದಲ್ಲಿಯೋ ಮನಸು ಬಂದಾಗ ಹಗಲೂ ರಾತ್ರಿ ಓದುತ್ತಿದ್ದೆ. ನಾನು ಸುಮಾರು ವರ್ಷಗಳ ಹಿಂದೆ ಓದಿದ ಆತ್ಮಕತೆಗಳೆಲ್ಲಾ ಬ್ರಾಹ್ಮಣ ಲೇಖಕರದಾಗಿದ್ದವು. ಶಾಲೆಯಲ್ಲಿದ್ದಾಗ ಓದುತ್ತಿದ್ದ ಅನಕೃ, ತರಾಸು, ಎಂ.ಕೆ. ಇಂದಿರಾ, ಅಶ್ವಿನಿ, ತ್ರಿವೇಣಿ, ಭೈರಪ್ಪ ಮುತಾದವರ ಕಾದಂಬರಿಗಳಲ್ಲಿ ಕೇವಲ ಬ್ರಾಹ್ಮಣರ ಆಚಾರ, ವಿಚಾರ, ಸ್ನಾನ, ಸಂಧ್ಯಾವಂದನೆ, ಲೆಕ್ಕವಿಲ್ಲದಷ್ಟು ಹಬ್ಬಗಳನ್ನು ಈ ಲೇಖಕರು ಕಣ್ಣಿಗೆ ಕಟ್ಟುವಂತೆ ವಿವರಿಸುತಿದ್ದರು. ಅದು ಸಾಲದೆಬಂತೆ ಹೈಸ್ಕೂಲಿನಿಂದ ಎಂ.ಎಸ್ಸಿ ಮುಗಿಯುವವರೆಗೆ ನನ್ನ ಗೆಳತಿಯರೆಲ್ಲ ಬ್ರಾಹ್ಮಣರಾಗಿದ್ದರು. ಅದರಲ್ಲೂ ಹೈಸ್ಕೂಲಿನಿಂದ ಬಿ.ಎಸ್​ಸಿ ಕೊನೆಯವರೆಗೆ ನನ್ನ ಪ್ರಾಣಸ್ನೇಹಿತೆ ಮಾಧ್ವ ಬ್ರಾಹ್ಮಣಳಾಗಿದ್ದು, ನಾನು ಓದಿದ ಬ್ರಾಹ್ಮಣ ಸಂಸ್ಕೃತಿಯನ್ನ ಕಣ್ಣಾರೆ ಕಂಡಿದ್ದಲ್ಲದೇ ಅನುಭವಿಸಿಯೂ ಇದ್ದೆ. ಯಾಕೆಂದರೆ ನಾನು ಅವರ ಮನೆಯ ಒಬ್ಬ ಸದಸ್ಯಳೇ ಆಗಿದ್ದೆ. ನಾನೂ ಆ ಸ್ನೇಹಿತೆಯೂ ಪ್ರತಿ ಪರೀಕ್ಷೆಗೂ ಬೆಳಿಗ್ಗೆ ಹತ್ತರಿಂದ ಸಂಜೆ ಆರರವರೆಗೆ  ಓದುತ್ತಿದ್ದೆವು. ಹಾಗಾಗಿ ನನ್ನ ಊಟತಿಂಡಿ ಎಲ್ಲಾ ಅವರ ಮನೆಯಲ್ಲೇ. ಇದು ನನಗೆ ಅವರ ಬದುಕಿನ ಒಳನೋಟ ಒದಗಿಸಿತು. ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 3)

ನಾನು ನನ್ನ ಆತ್ಮಚರಿತ್ರೆಯನ್ನು ಬರೆಯಲು ಎಂದೂ ನಿಶ್ಚಯಿಸಿರಲಿಲ್ಲ. ಬರೆಯುತ್ತ ಹೋದಂತೆ ಸ್ವರತಿ, ಮುಚ್ಚುಮರೆ ಇರಬಾರದು ಎಂದು ನಿರ್ಧರಿಸಿದೆ. ನನ್ನ ತಂದೆತಾಯಿಗಳ ಅಂತರ್ಜಾತಿ ವಿವಾಹ, ನಾನು ಎರಡು ಜಾತಿಗಳೊಂದಿಗೆ ಗುರುತಿಸಿಕೊಳ್ಳಲಾರದ ಅಸಹಾಯಕ ಪರಿಸ್ಥಿತಿ, ನನ್ನ ಶೂದ್ರ ಹಿನ್ನೆಲೆ ಇವೆಲ್ಲಾ ನನ್ನಲ್ಲಿ ಒಂದು ಬಗೆಯ ಕೀಳರಿಮೆ ಹುಟ್ಟಿಸಿದ್ದವು. ಈ ಕೀಳರಿಮೆಗಳೇ ನಾನು ನನ್ನ ವಿದ್ಯಾಭ್ಯಾಸದಲ್ಲಿ, ವೃತ್ತಿಯಲ್ಲಿ ಸಾಧನೆಗಳನ್ನು ಮಾಡಲು ಪ್ರೇರೇಪಿಸಿದವು. ಒಮ್ಮೆ ವೃತ್ತಿಯ ಶಿಖರ ಕಂಡಮೇಲೆ ನನ್ನ ಅಧೀರತೆಗಳು, ಕೀಳರಿಮೆಗಳು ಮಾಯವಾಗತೊಡಗಿದವು. ಆದರೆ ಆತ್ಮಚರಿತ್ರೆಯಲ್ಲಿ ಹೆಚ್ಚು ಸಂಸ್ಕಾರಗಳಿಲ್ಲದ ಬಾಲ್ಯ ಮತ್ತೆ ನನ್ನನ್ನು ಹಿಂದಕ್ಕೆಳೆಯಿತು. ಆದರೆ ಇವೆಲ್ಲ ಬಿಸಿಲು ಬಂದ ಮೇಲೆ ಮೋಡಗಳು ಚದುರಿಕೊಳ್ಳುವಂತೆ ಗಿರೀಶ ಕಾರ್ನಾಡರ ಆತ್ಮಚರಿತ್ರೆ ಮಾಡಿತು. ಅದು ಓದಿದ ಮೇಲೆ ನನ್ನ ಹುಟ್ಟಿನ ಬಗ್ಗೆ ನನಗಿದ್ದ ಕೀಳರಿಮ, ನಿಜ ಬರೆಯಲು ಹಿಂಜರಿಯುತ್ತಿದ್ದ ನನ್ನ ಆತ್ಮಚರಿತ್ರೆಯನ್ನು ಸತ್ಯ ಮರೆಮಾಚದೆ ಆದಷ್ಟು ನೈಜವಾಗಿ ಬರೆಯಲು ಧೈರ್ಯ ಕೊಟ್ಟಿತು. ಈ ಧೈರ್ಯಕ್ಕೆ ನಾನು ಕಾರ್ನಾಡರಿಗೆ ಋಣಿ.

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ನಾನು ಹಿಂದೆ ಬರೆದಂತೆ ನನ್ನ ಬಾಲ್ಯ ಕ್ಯಾಸಂಬಳ್ಳಿ, ಕೆಜಿಎಫ್ ಮತ್ತು ಕೋಲಾರಗಳಲ್ಲಿ ಕಳೆಯಿತು. ಕ್ಯಾಸಂಬಳ್ಳಿಯ ಬದುಕು ಸುಮಾರು ಕೋಲಾರ ಜಿಲ್ಲೆಯ ಇತರೆ ಹಳ್ಳಿಗಳಿಗಿಂತಲೂ ಭಿನ್ನವಾಗಿರಲಿಲ್ಲ. ಅದರೆ ಬೇಸಿಗೆ, ದಸರಾ ಮತ್ತು ಕ್ರಿಸ್ಮಸ್ ರಜೆಗಳನ್ನು ನನ್ನ ಅಜ್ಜಿಯ ಊರಾದ ಕೆಜಿಎಫ್​ನಲ್ಲಿ ಕಳೆಯುತ್ತಿದ್ದುರಿಂದ ನನ್ನ ಸಂಸ್ಕಾರಕ್ಕೆ ಒಂದು ವಿಭಿನ್ನ ಆಯಾಮ ನನಗೆ ಗೊತ್ತಿಲ್ಲದೇಯೇ ನನಗೆ ದೊರಕಿತು. ಮುಂದೆ ನಾನು ವೃತ್ತಿ ಸಂಬಂಧವಾಗಿ ಯುರೋಪ್, ಅಮೆರಿಕವನ್ನು ಪದೇಪದೆ ಒಬ್ಬಳೇ ಸಂಚರಿಸಿದಾಗ, ವಿಖ್ಯಾತ ವಿಜ್ಞಾನಿಗಳೊಂದಿಗೆ ಸಂಭಾಷಣೆಯಲ್ಲಿ ತೊಡಗಿದಾಗ, ಲಂಡನ್, ರೋಮ್, ಪ್ಯಾರಿಸ್, ವೆನಿಸ್, ಬರ್ಲಿನ್, ಬಾನ್, ವಿಯೆನ್ನಾ, ಆಮ್ಸರ್ಡಾಮ್, ವಾರ್ಸಾ, ಲಾಸ್ ಎಂಜಲೀಸ್, ಡೇನವ್ರ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ನ್ಯೂಯಾರ್ಕ್, ವಾಷಿಂಗ್ಟನ್, ಫಿಲಡೆಲ್ಫಿಯಾ, ಬಾಲ್ಟಿಮೊರ್, ಹವಾಯಿ, ಇನ್ನೂ ಮುಂತಾದ ಜಗದ್ವಿಖ್ಯಾತ ನಗರಗಲ್ಲಿ ಒಬ್ಬಂಟಿಯಾಗಿ ಸಂಚರಿಸಿದಾಗ ನನಗೆ ಕಿಂಚಿತ್ತಾದರೂ ಕೀಳರಿಮೆ, ಭಯ, ಅನುಮಾನ, ಹೆದರಿಕೆ ಯಾವುದೂ ಇಲ್ಲದೆ ನಾನು ಇಂಥ ಪ್ರವಾಸಗಳನ್ನು ಬೆಂಗಳೂರು, ಮೈಸೂರಿಗೆ ಹೋಗಿ ಬರುವಷ್ಟೇ ಸಲೀಸಾಗಿ ಮಾಡಿದ್ದರೆ, ಆ ಧೈರ್ಯದ ಹಿಂದೆ ನಾನು ಕೆಜಿಎಫ್​ನಲ್ಲಿ ಕಳೆದ ಬಾಲ್ಯವೇ ಕಾರಣ. ಹಳೇ ಮೈಸೂರಿವರಿಗಾಗಲಿ, ಆಮೇಲೆ ಸೇರ್ಪಡೆಯಾದ ಉತ್ತರ ಕನ್ನಡ ಜನಗಳಿಗಾಗಲಿ ಕೆಜಿಎಫ್​ ಸಂಸ್ಕೃತಿ ಒಂದಿನಿತೂ ಅರ್ಥವಾಗಲ್ಲ. ಅಲ್ಲಿಯ ಇಡೀ ಜನಜೀವನ, ಊರಿನ ಬೆಳವಣಿಗೆ, ಹಬ್ಬಗಳು, ರೀತಿ ರಿವಾಜುಗಳು ಮೊದಮೊದಲು ಬ್ರಿಟಿಷರಿಂದ ಪ್ರಭಾವಗೊಂಡಿದ್ದರೆ, 1950ರ ನಂತರ ಇಡೀ ಕೆಜಿಎಫ್​ ತಮಿಳುನಾಡಿನ ಒಂದು ಭಾಗವೇನೋ ಎಂಬಂತ್ತಿತ್ತು. ಇವೆಲ್ಲ ನಿಮಗೆ ಅರ್ಥವಾಗಬೇಕಾದರೆ ಈ ನಗರದ ಹುಟ್ಟು, ಬೆಳವಣಿಗೆಗಳ ಬಗ್ಗೆ ನಿಮಗೆ ಸಂಕ್ಷಿಪ್ತವಾಗಿ ಹೇಳಬೇಕು.

ಇದನ್ನೂ ಓದಿ : ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ 

ನಾನು ಕೆಜಿಎಫ್​ನಲ್ಲಿ ಕಳೆದ ದಿನಗಳು 1947 ರಿಂದ 1954. ಆದರೆ ನೆನಪಿನಲ್ಲಿರೋದು ಕೇವಲ ನಾಲ್ಕು ವರ್ಷಗಳ ಅವಧಿ, 1950 ರಿಂದ 1954 ರವರೆಗೆ ಅಂದರೆ ನನ್ನ ಮೂರನೇ ವರ್ಷದಿಂದ 8 ನೇ ವರ್ಷದವರೆಗೆ. ನಾನು ಕುಟುಂಬದ ಮೊದಲ ಮಗುವಾಗಿದ್ದರಿಂದ, ತಂದೆಯಂತೆ ಕೆಂಪಾಗಿದ್ದಿದ್ದರಿಂದ ನನ್ನ ನಾಲ್ಕು ಚಿಕ್ಕಮ್ಮಂದಿರಿಗೆ ಮುದ್ದು. ನನ್ನನ್ನು ಎತ್ತಿಕೊಂಡು ಪೇಟೆ, ಮಾರ್ಕೆಟ್, ಅಜ್ಜಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ, ಸಿನಿಮಾ ಮಂದಿರಗಳು, ಸಂಬಂಧಿಕರ ಮನೆ ಅಂತೆಲ್ಲಾ ತಿರುಗಾಡಿಸುತಿದ್ದರು. ಈ ಸುತ್ತಾಟಗಳು ನನಗೆ ಕೆಜಿಎಫ್​ನ ಆಳವಾದ, ಸುಂದರವಾದ, ಮರೆಯಲಾಗದ ನೆನಪುಗಳನ್ನು ನನ್ನ ಮನಸ್ಸು ಮತ್ತು ಮೆದುಳಿನಲ್ಲಿ ಕ್ರೋಢೀಕರಿಸಿವೆ. ನಾನು ದೊಡ್ಡವಳಾದ ಮೇಲೆ ಈ ನಗರದ ಬಗ್ಗೆ ಓದಿ ಸಾಕಷ್ಟು ತಿಳಿದುಕೊಂಡ ಮೇಲೆ, ನನ್ನ ನೆನಪುಗಳನ್ನು ಇದರೊಂದಿಗೆ ತಾಳೆ ಹಾಕಿದಾಗ ಇದೆಂಥ ವಿಶಿಷ್ಟ, ವಿಶೇಷ, ಸುಂದರ, ಎಲ್ಲಾ ಬಗೆಯ ಅನುಕೂಲಗಳನ್ನೂ ಹೊಂದಿದ್ದ, ಆಗಿನ ಕಾಲಕ್ಕೆ ಬ್ರಿಟಿಷರ ಜೀವನ ಶೈಲಿಯನ್ನ ತನ್ನದಾಗಿಸಿಕೊಂಡಿದ್ದ ಅಪೂರ್ವ ನಗರ ಅಂತ ಈಗ ಗೊತ್ತಾಗುತ್ತಿದೆ.

Adhunika Shakuntala Kathana Autobiography Column of scientist Dr Shakuntala Sridhara

ಕೋಲಾರದ ಗಣಿಗೆ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಭೇಟಿ ಕೊಟ್ಟಾಗ

ಕೆಜಿಎಫ್ ಕೋಲಾರ ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ನೂರು ಕಿ.ಮೀ ದೂರದಲ್ಲಿದೆ. ಇಲ್ಲಿ ಸುಮಾರು ಇನ್ನೂರು ವರ್ಷಗಳಿಂದ ಚಿನ್ನದ ಗಣಿಗಾರಿಕೆ ನಡೆದುಕೊಂಡು ಬಂದಿದೆ. ನಮ್ಮ ದೇಶದ ಶೇ 90 ರಷ್ಟು ಬಂಗಾರ ಇಲ್ಲಿಯ ಗಣಿಗಳಿಂದ ಬಂದಿದೆ. ಈ ಭೂಮಿಯನ್ನು ಗಂಗರಿಂದ ಹಿಡಿದು ಚೋಳರು, ಹೊಯ್ಸಳರು, ಹೈದರಾಬಾದಿನ  ನಿಜಾಮ, ಹೈದರ್ ಅಲಿಯವರೆಗೆ ಆಳಿದ್ದಾರೆ. ನಂತರ  ಜಾನ್ ಟೈಲರ್ ಅಂಡ್ ಸನ್ಸ್  ಕಂಪನಿ ಎಂಬ ಬ್ರಿಟಿಷ್ ಸಂಸ್ಥೆಯ ಅಧೀನಕ್ಕೆ ಬಂತು. ಈ ಕಂಪನಿಯ ಎಂಜಿನಿಯರ್​ಗಳನ್ನು, ಅಧಿಕಾರಿಗಳನ್ನು ಬ್ರಿಟನ್, ಇಟಲಿ, ಜರ್ಮನಿ ದೇಶಗಳಿಂದ ಕರೆಸಿಕೊಳ್ಳಲಾಯಿತು. ಆಂಗ್ಲೋ ಇಂಡಿಯನ್ನರು ಸೂಪರ್ವೈಸರ್​ಗಳಾಗಿ ಕಾರ್ಯ ನಿರ್ವಹಿಸಿದರೆ, ಇಡೀ ಕೂಲಿ ಸಮೂಹವು ಪಕ್ಕದ ತಮಿಳುನಾಡಿನಿಂದ ಬಂದವರಾಗಿದ್ದರು. ಇದಕ್ಕೇ ಕಾರಣ ಮೂಲನಿವಾಸಿಗಳಾಗಿದ್ದ ಕನ್ನಡಿಗರು ಭೂಮಿಯ ಗರ್ಭದದೊಳಗೆ ಇಳಿದು ಕೆಲಸ ಮಾಡಲು ಹೆದರಿದ್ದರು. ಹೀಗೆ ಬಂದ ತಮಿಳು ಗಣಿಗಾರರು, ಇಲ್ಲಿಯೇ ತಳವೂರುವುದಲ್ಲದೆ, ಕೆಲಸವಿಲ್ಲದೆ ಪರದಾಡುತ್ತಿದ್ದ ತಮ್ಮ ನೆಂಟರು, ಸ್ನೇಹಿತರನ್ನೂ ಕರೆಸಿಕೊಂಡ. ಕಾಲಾನುಕಾಲಕ್ಕೆ ಕೆಜಿಎಫ್​ನಲ್ಲಿ ಬ್ರಿಟಿಷರು, ಕೆಲವು ಯುರೋಪಿಯನ್ನರು,  ಸುಮಾರು ಜನ ಆಂಗ್ಲೋ ಇಂಡಿಯನ್ನರು ಮತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ತಮಿಳುರು ಉಳಿದು, ಕನ್ನಡಿಗರು  ಅಲ್ಪ ಸಂಖ್ಯಾರಾದರು. ಕೊನೆಯದಾಗಿ ಗಣಿಗಳು ಮೈಸೂರು ಮಹಾರಾಜರ ಕೈಗೆ ಬಂದವು. ನಂತರ 1956 ರಲ್ಲಿ  ಭಾರತ ಸರ್ಕಾರ ಅವುಗಳನ್ನ ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಕೆಜಿಎಫ್​ ನೂರಾರು ಟನ್ನುಗಳಷ್ಟು ಚಿನ್ನ ಭೂಗರ್ಭದಿಂದ ಹೊರತೆಗೆದರೂ, ಅದೆಲ್ಲಾ ಇಂಗ್ಲೆಂಡಿಗೇ ಹೋಯಿತೇ ಹೊರತು ಸ್ಥಳೀಯರಿಗೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಬದಲಾಗಿ ಇಲ್ಲಿ ನೆಲೆಸಿದ್ದ ಬ್ರಿಟಿಷ್ ಮತ್ತು ಐರೋಪ್ಯ ಅಧಿಕಾರಿವರ್ಗಕ್ಕೆ ಬೇಕಾದ ಈಜುಕೊಳ, ಇಂಗ್ಲಿಷ್ ಶಾಲೆಗಳು, ಚರ್ಚುಗಳು, ಕ್ಲಬ್ಬುಗಳು, ದೋಣಿವಿಹಾರಕ್ಕೆ ಸರೋವರಗಳು, ಜಿಮಖಾನಾ ಕ್ಲಬ್ಬುಗಳು, ಆಸ್ಪತ್ರೆಗಳು, ಗಾಲ್ಫ್ ಕ್ಲಬ್, ಸ್ಕೇಟಿಂಗ್ ರಿಂಗ್,  ಎಲ್ಲಾ ಶರವೇಗದಲ್ಲಿ ಕಟ್ಟಲ್ಪಟ್ಟವು. ಐಶಾರಾಮಿ ಸವಲತ್ತುಗಳು ಸೃಷ್ಟಿಯಾದವು. ಕೆಜಿಎಫ್ ಟೋಕ್ಯೋ ನಂತರ ವಿದ್ಯುಚ್ಛಕ್ತಿ ಪಡೆದ ಏಶಿಯಾದ ಎರಡನೇ ಹಾಗೂ ಭಾರತದ ಮೊದಲನೇ ನಗರ. ವಿದ್ಯುಚ್ಛಕ್ತಿ ಪೂರೈಕೆಯ ನಂತರ ಚಿನ್ನದ ಉತ್ಪಾದನೆ ದ್ವಿಗುಣವಾಯಿತು. ಈಗ 30,000 ಗಣಿಗಾರರು ಕೆಲಸಲ್ಲಿದ್ದರು. ಪ್ರಪಂಚದ ಅತಿ ಉದ್ದದ ಪ್ಯಾಸೆಂಜರ್ ಟ್ರೈನ್ ಕೆಜಿಎಫ್​ನ ಮಾರಿಕುಪ್ಪಮ್​ನಿಂದ ಬಂಗಾರಪೇಟೆಗೆ ಓಡತೊಡಗಿತು. ಅದು ಕೆಜಿಎಫ್​ನ ಇತರ ನಾಲ್ಕು ಗಣಿಕೇಂದ್ರಗಳ ಮೂಲಕ ಹಾದು ಹೋಗುತಿತ್ತು.

ಕೆಲವು ದಶಕಗಳ ಹಿಂದೆ ಜೂಲಿ ಎಂಬ ತಮಿಳು ಚಿತ್ರ ಬಂದಿತ್ತು. ಅದರಲ್ಲಿ ಒಂದು ಆಂಗ್ಲೋ ಇಂಡಿಯನ್ ಕುಟುಂಬದ ಕಥೆಯಿತ್ತು. ಆಂಗ್ಲೋ ಇಂಡಿಯನ್​ರೆಂದರೆ ಬ್ರಿಟಿಷ್ ಮತ್ತು ಭಾರತೀಯರ ಸಂಪರ್ಕ/ಮದುವೆಗಳ ಫಲವಾಗಿ ಹುಟ್ಟಿದ ಸಂಜಾತರು. ನನ್ನನ್ನು ಕೆಜಿಎಫ್​ನಲ್ಲಿ ತುಂಬಾ ಆಕರ್ಷಸಿದ್ದು ಈ ಸಂಜಾತರು. ಅವರೆಲ್ಲ ಕ್ರೈಸ್ತರಾಗಿದ್ದು, ಮನೆಯಲ್ಲಿ ತಮಿಳು ಅಥವಾ ಇಂಗ್ಲಿಷ್ ಮಾತನಾಡುತ್ತಿದ್ದರು. ಅವರ ಉಡುಗೆ, ತೊಡುಗೆ, ಪ್ರಾರ್ಥನೆ ಎಲ್ಲಾ ಬ್ರಿಟಿಷರ ಅನುಕರಣೆಯಾಗಿತ್ತು. ಅವರೆಂದೂ ತಮ್ಮನ್ನು ಭಾರತೀಯರೆಂದು ಪರಿಗಣಿಸಲಿಲ್ಲ.    ಬ್ರಿಟಿಷರು ಹೊರಟುಹೋದ ನಂತರ ಇವರೂ ಸಹ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಿಗೆ ಅವಕಾಶ ದೊರಕುತ್ತಿದ್ದಂತೆ ಹೊರಟುಹೋದರು. ಎಲ್ಲೋ ಕೆಲವರು ಮಾತ್ರ ಕೆಜಿಎಫ್​, ಬೆಂಗಳೂರು,  ಮುಂಬೈ, ಕಲ್ಕತ್ತಾ ಮುಂತಾದ ಕಡೆ ಉಳಿದುಕೊಂಡಿದ್ದಾರೆ. ಸಣ್ಣವಯಸ್ಸಿನಲ್ಲಿ ನನಗೆ ಅವರೊಂಥರಾ ವಿಚಿತ್ರವಾಗಿ ಕಾಣಿಸುತಿದ್ದರು. ಏಕೆಂದರೆ ಅವರೇನೂ ಬ್ರಿಟಿಷರಂತೆ ಕೆಂಪಾಗಿರಲಿಲ್ಲ. ಆದರೆ ಅವರ ಹಾವಭಾವ, ಇಂಗ್ಲಿಷ್ ಉಚ್ಚಾರ, ಉಡುಗೆತೊಡುಗೆ, ಉಳಿದುಕೊಂಡಿದ್ದ ಅಧಿಕಾರದ ದರ್ಪ ಎಲ್ಲಾ ತುಂಬಾ ಅಸಹಜ, ಅಪರಿಚಿತ. ಭಾರತೀಯವಲ್ಲದ ಅವರ ಸಂಸ್ಕೃತಿ ವಿಚಿತ್ರವಾಗಿ ಕಾಣೋದು. ಈ ಆಂಗ್ಲೋ ಇಂಡಿಯನ್ನರು ಬ್ರಿಟಿಷರು ಬಿಟ್ಟು ಹೋದ ಹುದ್ದೆಗಳನ್ನು, ಬಂಗಲೆಗಳನ್ನು ಆಕ್ರಮಿಸಿಕೊಂಡು ಒಂದಷ್ಟು ಕಾಲ ತಾವೇ ಇಂಗ್ಲಿಷ್ ಸಾಹೇಬರಂತೆ ವರ್ತಿಸುತ್ತಿದ್ದರು.

ಇದನ್ನೂ ಓದಿ : ಆಧುನಿಕ ಶಕುಂತಲಾ ಕಥನ: ಗಂಡು ಹುಟ್ಟಿದ್ದರೆ ಹತ್ತು ರೂಪಾಯಿ, ಹೆಣ್ಣು ಹುಟ್ಟಿದ್ದರೆ ಐದು ರೂಪಾಯಿ

ಕೆಜಿಎಫ್ ಎಂದರೆ ನಾನು ಮರೆಯಲಾಗದ ನೆನಪೆಂದರೆ ಕ್ರಿಸ್ಮಸ್. ಈ ಕ್ರೈಸ್ತರ ಹಬ್ಬವನ್ನು ಇಲ್ಲಿ ಎಲ್ಲಾ ಮತೀಯರು ಆಚರಿಸುತಿದ್ದರು. ಇಡೀ ನಗರವೇ ಸಿಂಗಾರಗೊಂಡು ಕ್ರಿಸ್ತನ ಆಗಮನಕ್ಕೆ ಸಿದ್ದವಾಗುತ್ತಿತ್ತು. ಜಾತಿ ಬೇಧವಿಲ್ಲದೆ ಸುಮಾರು ಎಲ್ಲರೂ ಚರ್ಚಿಗೆ ಹೋಗುತಿದ್ದರು. ಕ್ರಿಶ್ಚಿಯನ್ನರ ತಿಂಡಿಗಳಾದ ಗಲಗಲ, ರೋಜ್ ಕುಕೀಸ್, ಜೊತೆಗೆ ನಮ್ಮ ತಿಂಡಿಗಳಾದ ಚಕ್ಕುಲಿ, ಕರ್ಜಿಕಾಯಿ, ಕಜ್ಜಾಯಗಳನ್ನು ಹಿಂದೂಗಳೂ ಮಾಡುತ್ತಿದ್ದರು. ಊರಿನ ಮಹಾತ್ಮಾ ಗಾಂಧಿ ಮಾರ್ಕೆಟ್ ತರಕಾರಿ, ಹೂವು, ಹಣ್ಣು ಹಂಪಲುಗಳಿಂದ ತುಂಬಿ ತುಳುಕುತ್ತಿತ್ತು. ಮೈಸೂರಿಗೆ ದಸರಾ ಹೇಗೋ ಕೆಜಿಎಫ್​ಗೆ ಕ್ರಿಸ್ಮಸ್ ಹಾಗೆ. ಮನೆಯಲ್ಲಿ ಮಾಡಿದ ತಿಂಡಿಗಳನ್ನು ಸಂಬಂಧಿಗಳಿಗೆ, ಸ್ನೇಹಿತರಿಗೆ ಮತ ಬೇಧವಿಲ್ಲದೆ ಬೇಕರಿಯಿಂದ ತಂದ ಕೇಕ್ ಜೊತೆಗೆ ವಿತರಿಸಲಾಗುತ್ತಿತ್ತು. ಇಂತಹ ಅನುಭವ ಕರ್ನಾಟಕ ಏಕೆ ಭಾರತದ ಇತರೆ ಪಟ್ಟಣಗಳಲ್ಲಿ ಕಾಣುವುದೂ ಅಪರೂಪ. ಕ್ರಿಸ್ಮಸ್​ ಅನ್ನು ಎಷ್ಟು ಶ್ರದ್ದೆಯಿಂದ ಮಾಡುತಿದ್ದರೋ ಆಯುಧ ಪೂಜೆಯನ್ನೂ ವಿಶೇಷತಃ ಗಣಿಗಳಲ್ಲಿ ಅಷ್ಟೇ ಭಕ್ತಿ, ಸಂಭ್ರಮದಿಂದ ಮಾಡುತಿದ್ದರು. ಕ್ರಿಶ್ಚಿಯನ್ನರಲ್ಲದೆ ಕೆಜಿಎಫ್​ನಲ್ಲಿ ಸುಮಾರು ಜನ ಮುಸ್ಲಿಮರಿದ್ದರು. ಅವರ ಕಸುಬಾದ ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳಲ್ಲದೆ, ಸುಮಾರು ಮುಸಲ್ಮಾನರು ಜಟಕಾಬಂಡಿಗಳನ್ನ ಓಡಿಸುತಿದ್ದರು. ಕೆಜಿಎಫ್ ದೊಡ್ಡ ನಗರವಾಗಿದ್ದು, ಯಾವುದೇ ಬಗೆಯ ಸಾರಿಗೆಯಿಲ್ಲದೇ, ಉರಿನೊಳಗೆ ದೂರ ಪ್ರಯಾಣ ಮಾಡಬೇಕಾದರೆ ಜಟಕಾ ಬಂಡಿಯೊಂದೇ ಗತಿಯಾಗಿತ್ತು.

Adhunika Shakuntala Kathana Autobiography Column of scientist Dr Shakuntala Sridhara

ಕೆಜಿಎಫ್ ಜಿಫರ್ಡ್ ಶಾಫ್ಟ್

ಬ್ರಿಟಿಷರಿದ್ದ ಭಾಗಗಳು ಅಭಿವೃದ್ಧಿಯ ಪರಕಾಷ್ಠೆ ಕಂಡಿದ್ದರೆ ಬಡ ಗಣಿಕಾರ್ಮಿಕರ ಬಾಳು ದಯನೀಯವಾಗಿತ್ತು. ಮಣ್ಣಿನ ನೆಲದ, ನಾಲ್ಕು ಗೋಡೆಗಳ ಮೇಲೆ ತಗಡು ಹೊದಿಸಿ ಮನೆ ಮಾಡಿಕೊಂಡಿದ್ದ ಕೂಲಿಗಾರರ ಬಾಳು ಪ್ರತಿನಿತ್ಯ ಸಾವು ಬದುಕಿನ ಹೋರಾಟವಾಗಿತ್ತು. ಭೂಮಿಯ ಕೆಳಗಿಂದ ಗಣಿಗಾರ ಮನೆಗೆ ಬರುವವರೆಗೆ ಯಾವ ಗ್ಯಾರಂಟಿಯೂ ಇರಲಿಲ್ಲ. ಎಲ್ಲರೂ ಕುಡುಕರಾಗಿದ್ದರು. ಕುಡಿತಕ್ಕೋಸ್ಕರ ಚಿನ್ನ ಬೆಳ್ಳಿ ಇರಲಿ, ಹಿತ್ತಾಳೆ ಪಾತ್ರೆ, ಕೊನೆಗೆ ತಮ್ಮ, ತಮ್ಮ ಹೆಂಡತಿ ಮಕ್ಕಳ ಬಟ್ಟೆಯನ್ನೂ ಮಾರ್ವಾಡಿ ಅಂಗಡಿಯಲ್ಲಿ ಅಡವಿಟ್ಟಿರುತ್ತಿದ್ದದನ್ನು ನಾನು ಚಿಕ್ಕವಯಸ್ಸಿನಲ್ಲಿಯೇ. ಚಿನ್ನವನ್ನು ಅದುರಿನಿಂದ ಬೇರ್ಪಡಿಸುವಾಗ ಮೇಲೇಳುತ್ತೀದ್ದ ಸಿಲಿಕಾನ್ ದೂಳು ಅವರನ್ನು ಸಾವಿನದವಡೆಗೆ ‘silicosis’ ಅಥವಾ ಕ್ಷಯ ರೋಗದ ಬಾಯಿಗೆ ತಳ್ಳುತ್ತಿತ್ತು. ಮೊದಮೊದಲು ಕಾರ್ಮಿಕರ ರಕ್ಷಣೆಗೆ ಯಾವ ಕಾನೂನು ಇಲ್ಲದಿದ್ದರೂ ನಾನು ಹೋಗುವ ವೇಳೆಗೆ ಕಮ್ಯುನಿಸ್ಟ್ ಪಾರ್ಟಿ ಕಾರ್ಮಿಕರಲ್ಲಿ ಬಲವಾಗಿ ಬೆರೂರಿತ್ತು ಮತ್ತೆ ಸ್ವಲ್ಪಮಟ್ಟಿಗೆ ಅವರ ಯೋಗಕ್ಷೇಮದ ಜವಾಬ್ದಾರಿ ಹೊತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ತಮಿಳರ ಸಂಸ್ಕೃತಿ ಪ್ರಜ್ಞೆ ಮೆಚ್ಚುವಂತ್ತಿತ್ತು. ಸಂಗೀತ ಕಛೇರಿಗಳು, ನೃತ್ಯ ಪ್ರದರ್ಶನಗಳು, ತಮಿಳು ನಾಟಕಗಳು ಪ್ರದರ್ಶಿತವಾಗುತಿದ್ದವು. ನನಗೆ ಈಗಲೂ ನೆನೆಪಿರುವುದು ಚೆಂಬೈ ವೈದ್ಯನಾಥ ಭಾಗವತರ್ ಎಂಬ ಮೃದಂಗ  ಮಾಂತ್ರಿಕನ ಕಛೇರಿ.

ಇದನ್ನೂ ಓದಿ : ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್​ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ

ಒಂದು ವಿಶಿಷ್ಟ ಸುದ್ದಿ ಎಂದರೆ ಅಲ್ಲಿಯವರೆಗೆ ಯಾವ ಭಾರತೀಯನನ್ನೂ ಸದಸ್ಯನನ್ನಾಗಿ ಸ್ವೀಕರಿಸದ ಕೆಜಿಎಫ್ ಜಿಮಖಾನಾ ಕ್ಲಬ್, ನಾಟಕಕಾರ ಟಿ. ಪಿ. ಕೈಲಾಸಂ ಅವರಿಗೆ ಸದಸ್ಯತ್ವ ಕೊಟ್ಟಿತು. ಬಹಳ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಕೈಲಾಸಂ ಅವರು ಗಣಿ ಕಾರ್ಮಿಕನೊಬ್ಬನ ಮಗನಾಗಿದ್ದರೂ ಐರ್ಲೆಂಡಿಗೆ ಹೋಗಿ ವಿದ್ಯಾರ್ಜನೆ ಮಾಡಿದ್ದಲ್ಲದೆ ಇಂಗ್ಲಿಷ್ ಭಾಷೆ ಅದರ ಮೇಲೆ ಅದ್ಭುತ ಹಿಡಿತ, ಇಂಗ್ಲಿಷರ ನಡಾವಳಿಗಳಿಂದಾಗಿ ಸದಸ್ಯತ್ವಕ್ಕೆ ಅರ್ಹತೆ ಒದಗಿಸಿಕೊಟ್ಟಿದ್ದವು.

ವರ್ಷಗಳುರುಳಿದಂತೆ ಚಿನ್ನ ನಿಕ್ಷೇಪಗಳು ಕಡಿಮೆಯಾಗುತ್ತಾ ಬಂದು, ಗಣಿಗಾರಿಕೆ ನಷ್ಟವನ್ನು ಅನುಭವಿಸಲಾರಂಭಿಸಿತು. ಕೊನೆಗೆ 2001ರಲ್ಲಿ ಕೆಜಿಎಫ್ ಗಣಿಗಳನ್ನು ಮುಚ್ಚಲಾಯಿತು. ಸಾವಿರಾರು ಗಣಿ ಕಾರ್ಮಿಕರು ನಿರುದ್ಯೋಗಿಗಳಾದರು. ಕೆಜಿಎಫ್​ನ ಹಣದ, ಚಿನ್ನದ ಹೊಳೆಗಳು ಬತ್ತಿ ಹೋದವು. ಗಣಿ ಧಣಿಗಳಿದ್ದ ಬಂಗಲೆಗಳು, ಅವರ ಕ್ಲಬ್ಬುಗಳು, ಪಾಳುಬಿದ್ದವು. ಬ್ರಿಟಿಷರು, ಯುರೋಪಿಯನ್ನರು, ಆಂಗ್ಲೋ ಇಂಡಿಯನ್ನರು ಕೆಜಿಎಫ್ ತೊರೆದು ಅವರವರ ದೇಶಕ್ಕೋ, ಇಲ್ಲ ಅವಕಾಶ ಅರಸಿ ಬೇರೆ ದೇಶಗಳಿಗೂ ಹೊರಟು ಹೋಗಿದ್ದಾರೆ. ಇದೀಗ ಕನ್ನಡದ ನಾಮಫಲಕ, ಭಾಷೆಯೂ ಕಾಣಸಿಗುತ್ತಿದೆ. ಒಮ್ಮೆ ಬಂಗಾರದ ಗಣಿಯಲ್ಲಿ ಕೆಲಸ ಮಾಡುತಿದ್ದ, ಆ ಕೆಲಸವನ್ನು ಒಂದು ಪ್ರತಿಷ್ಠೆ ಎಂದು ಭಾವಿಸಿದ ಗಣಿ ಕಾರ್ಮಿಕರು ನಾನು ನೋಡುತ್ತಿದ್ದ ಹಾಗೆ ಸೋತು ಸುಣ್ಣವಾಗಿದ್ದಾರೆ. ಆದರೆ ಅವರ ರಟ್ಟೆಯ ಬಲದ ಮೇಲೆ ಅವರ ಅಭಿಮಾನ ಇನ್ನೂ ಕಡಿಮೆ ಆಗಿಲ್ಲ. ಕೆಜಿಎಫ್​ನ  ಬೆಳವಣಿಗೆ, ತಲುಪಿದ ಉಚ್ರಾಯ ಸ್ಥಿತಿ ಈಗ ಒಂದು ಸುಂದರ ಮತ್ತು ದುರಂತ ಕನಸು.

ನಾನು ಕೆಜಿಎಫ್​ನಲ್ಲಿ ಹುಟ್ಟಲಿಲ್ಲ. ಆದರೆ ಅಲ್ಲಿ ಸುಮಾರು ವರ್ಷ ನನ್ನ ಬಾಲ್ಯವನ್ನು ಕಳೆದೆ. ಬೆಂಗಳೂರು ಬಿಟ್ಟರೆ ಕರ್ನಾಟಕದ ಯಾವ ಭಾಗದಲ್ಲೂ ಕಾಣದ ಅಭಿವೃದ್ಧಿ ಹೊಂದಿದ್ದ ಪ್ರದೇಶವನ್ನು ಚಿಕ್ಕಂದಿನಲ್ಲೇ ಕಂಡೆ. ವಿವಿಧ ಮತೀಯರು ಸಾಮರಸ್ಯದಿಂದ ಬದುಕಿದ್ದನ್ನು ಕಂಡೆ, ಅಲ್ಲಿದ್ದ ಇಂಗ್ಲಿಷ್ ವಾತಾವರಣ ನನ್ನಲ್ಲಿ ಅಚ್ಚು ಒತ್ತಿದವು. ಅದು ಮುಂದೆ ನನಗೆ ಪ್ರಪಂಚ ಸುತ್ತಿದಾಗ ‘At home’ ಅನ್ನೋ ಭಾವನೆಯನ್ನು ಕೊಟ್ಟಿತು. ನನ್ನ ಜನ್ಮಪ್ರಮಾಣಪತ್ರದಲ್ಲಿ ಕೆಜಿಎಫ್ ಹೆಸರಿಲ್ಲದಿದ್ದರೂ ನಾನು ಭಾಗಶಃ ಕೆಜಿಎಫ್​ನವಳು. ಈ ಅಪೂರ್ವ ನಗರದ ಬಗ್ಗೆ, ಡಾ. ಎಸ್. ಶ್ರೀಕುಮಾರ್ ಹೇಳಿದಂತೆ, ‘Where’ver we are on earth, K.G.F. is an inseparable part of our soul. We citizens of this Golden city have all reasons to be proud of, for we are the children of K.G.F, “ The land of rudeness” and our hearts always beat for it”[In: Kolar Gold Field-unfolding the untold).

(ಮುಂದಿನ ಭಾಗ : 12.6.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 2:32 pm, Sun, 5 June 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ