Poetry: ಅವಿತಕವಿತೆ; ತೂತು ಬಿದ್ದ ಬ್ಯಾಗಿನಲ್ಲಿ ಮೇಲೂ ಕೆಳಗೂ ಸೋರುತ್ತಿರುವ ಅಕ್ಷರವ
Poem : ‘ಹಾಲುಗೆನ್ನೆಯ ಹುಡುಗ ಜಗದ ದಂದುಗದಲ್ಲಿ ಕಳೆದರೂ ಅವನ ಈ ಮುಖಗಳು ಮಾತ್ರ ಮತ್ತೆಮತ್ತೆ ಎದುರಾಗುವುದು ಈ ನೆಲದ ವಾಸ್ತವ. ನನ್ನ ಸಾಕ್ಷಾತ್ಕಾರವನ್ನು ಅನ್ಯದ ಮೂಲಕವೂ ಮಾಡಿಕೊಳ್ಳುವ ಈ ಕಾವ್ಯಪ್ರಜ್ಞೆಗೆ ಸಮೂಹದ ಚಹರೆಗಳಿವೆ.’ ಡಾ. ಗೀತಾ ವಸಂತ
AvithaKavithe | ಅವಿತಕವಿತೆ : ಬದುಕಿನ ವಾಸ್ತವಗಳು ಅನುಭವಕ್ಕೆ ಬಂದಾಗ ಕನಸು ಕಲ್ಪನೆಗಳು ಬಣ್ಣ ಕಳೆದುಕೊಂಡು ಬೋರಾಲಾಗಿ ಬಿದ್ದು ತೀವ್ರವಾದ ವಿಷಾದ ಆವರಿಸುತ್ತಿತ್ತು. ಇಂಥವುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ತೀವ್ರ ಪೈಪೋಟಿಗಿಳಿದ ಕಾಲವೊಂದಿತ್ತು. ಈಗಲೂ ಅವುಗಳನ್ನೇ ಎದುರು ಹಾಕಿಕೊಳ್ಳುತ್ತಲೇ ಇರುತ್ತೇನೆ. ವ್ಯತ್ಯಾಸವೆಂದರೆ ಈಗ ನನ್ನೊಳಗೆ ನಾನೇ ಜಗಳಕ್ಕಿಳಿಯುತ್ತೇನೆ. ಈ ಆಂತರಿಕ ಬೇಗುದಿ ಉಂಟು ಮಾಡುವ ಸಂಘರ್ಷ ಅಂತಿಂಥದ್ದಲ್ಲ. ವಿಷಾದ, ವಿರಸ, ಸಿಟ್ಟು ಎಲ್ಲ ಮುಗಿದಾದ ಮೇಲೆ ವಿನೋದವೂ ಮೂಡಿಸಿದ್ದುಂಟು! ಹೀಗೆ ಕವಿತೆಗಳಲ್ಲಿ ತೊದಲುತ್ತಲೇ ಈಗೀಗ ಕಥೆಗಳಲ್ಲಿ ಧ್ವನಿಸಿ ಹಗುರಾಗುತ್ತ ಸಾಗುತ್ತಿದ್ದೇನೆ. ನನ್ನ ಸಂಕಟಗಳನ್ನು, ವೇದನೆಗಳನ್ನು, ವಿನೋದಗಳನ್ನು ಕೇಳಲು ಅನುಭವಿಸಲು ಕಥೆಗಳು ಸಜ್ಜಾಗಿರುವಂತೆ ಕಾಣುತ್ತಿರುತ್ತದೆ. ಹಾಗಾಗಿ ಕಥೆಗಳೊಂದಿಗೆ ಹೆಚ್ಚು ಅನುಸಂಧಾನದಲ್ಲಿ ತೊಡಗಿರುವೆ. ಈಗ ಸಮಾಜದ ಎಲ್ಲ ಕ್ರೋಧಗಳ ಪಾತ್ರಗಳೂ ನನ್ನೊಳಗೇ ಆಡುತ್ತಿವೆ. ಇಲ್ಲವೆ ಅವು ಆಡಿಸಿದಂತೆ ನಾನು ಬರೆಯುತ್ತಿದ್ದೇನೆ. ಕಥೆಗಳ ಮಧ್ಯೆ ಮೂಡಿದ ಒಂದು ಕವಿತೆ ಇಲ್ಲಿದೆ. ಗುರುಪ್ರಸಾದ್ ಕಂಟಲಗೆರೆ (Guruprasad Kantalagere)
ಆಗಾಗ ಸಿಗುವ ನನ್ನದೇ ಮುಖಗಳು ನಾನು ನನ್ನನೇ ಒಮ್ಮೆ ಹೈಸ್ಕೂಲ್ ವಿದ್ಯಾರ್ಥಿಯಾಗಿ ನೋಡಿಕೊಳ್ಳಬೇಕೆನಿಸುತ್ತದೆ ಉಂಗ್ಟಕಿತ್ತು ಹೊಲೆಸಿಕೊಂಡಿರುವ ಚಪ್ಲಿಯ, ಅದು ಮತ್ತೂ ಕಿತ್ತೋಗುವುದರ ಆತಂಕದ ಮುನ್ಸೂಚನೆಯ, ಸಂತೆಯಲ್ಲಿ ಕೊಂಡ ಅಂಗಿಯ, ತೂತು ಬಿದ್ದ ಬ್ಯಾಗಿನಲ್ಲಿ ಮೇಲೂ ಕೆಳಗೂ ಸೋರುತ್ತಿರುವ ಅಕ್ಷರವ! ನನ್ನ ನೆನಪು ಅಲ್ಲಿಂದ ಕಾಲೇಜಿಗೆ ಜಿಗಿಯುತ್ತದೆ ಒಂದೆರಡು ಹೊಸಬಟ್ಟೆಗಳಿದ್ದರೂ ಅದರೊಳಗೆ ಎಲ್ಲೋ ಸಿಲುಕಿರುವ ದಗರಿಬಿದ್ದ ಎದೆಯ ಕಳೆಗುಂದಿದ ಕನ್ನಡಿಯ ಅದರಲ್ಲೂ ಚಿಗುರಲು ಹಾತೊರೆವ ಗಡ್ಡ ಮೀಸೆಯ! ಅಲ್ಲೆ ನಿಲ್ಲದ ಮನಸ್ಸು ಹಾಲುಗೆನ್ನೆಯ ಹುಡುಕಿ ಆರಂಭಕ್ಕೆ ಜಾರುತ್ತದೆ ಅಪ್ಪನ ಜೊತೆ ಉಣ್ಣಕೆ ಹೋಗುತ್ತಿದ್ದುದು ಅಲ್ಲಿ ಅವರು ಎರಡೂ ಬೊಗಸೆಯಲಿ ಬಾಚಿ ಅನ್ನವಿಕ್ಕುತ್ತಿದ್ದುದು ಒಂದೇ ಮುತ್ತುಗದ ಎಲೆಯಲ್ಲಿ ಇಬ್ಬರೂ ಅಪ್ಪ ಉಂಡು ನೀರುಕುಡಿಯುತ್ತಿದ್ದುದು ಈ ಎಲ್ಲಾ ಬಿಡಿ ನಾನು ಮತ್ತೆ ಮತ್ತೆ ನೆನಪಾಗುವುದು ನನ್ನ ಪಯಣದಲ್ಲೆ ಆಗಿಂದಾಗ್ಗೆ ಎದುರಾಗುವ ನನ್ನದೇ ಬಟ್ಟೆಯ ನನ್ನದೇ ಹೊಟ್ಟೆಯ ನನ್ನದೇ ಮಟ್ಟಿನ ಹಲವು ಮುಖಗಳು ಹಾಗಾಗೆ ಸಿಕ್ಕಿ ಮರೆಯಾದಾಗ
ಕವಿತೆ ಅವರದು ನೋಟ ನಿಮ್ಮದು
ಕವಿ ಕತೆಗಾರ ಗುರುಪ್ರಸಾದರು ಉದ್ವೇಗವಿಲ್ಲದೇ ಕಟ್ಟಿಕೊಡುವ ನೋವಿನ ಚಿತ್ರಗಳು ನಮ್ಮ ಮನಸ್ಸಾಕ್ಷಿಯನ್ನು ತೀವ್ರವಾಗಿ ಅಲ್ಲಾಡಿಸುತ್ತವೆ. ಅವರ ಈ ಕವಿತೆಯಲ್ಲೂ ಒಂದು ಕತೆಯಿದೆ. ಅದರ ನಾಯಕ ನಿರೂಪಕ ಇಬ್ಬರೂ ಅವರೇ ಆಗಿದ್ದರೂ ಅದು ಅವರೊಬ್ಬರೇ ಕತೆಯಲ್ಲ. ಹಸಿವು ಅಪಮಾನಗಳ ನಡುವೆಯೂ ಜೀವಚೈತನ್ಯವನ್ನು ಕುಂದದಂತೆ ಕಾಪಿಟ್ಟುಕೊಳ್ಳುವ ಅಸಂಖ್ಯ ಮುಖಗಳು ಅಲ್ಲಿ ಒಟ್ಟಾಗಿ ಕತೆ ಹೇಳುತ್ತವೆ. ಉಂಗ್ಟಕಿತ್ತ ಚಪ್ಪಲಿ, ತೂತುಬಿದ್ದ ಬ್ಯಾಗು ಇವ್ಯಾವುದೂ ದೈನ್ಯದ ಸಂಕೇತಗಳಾಗದೇ ಮೇಲೂ ಕೆಳಗೂ ಅಕ್ಷರ ಸೋರುತ್ತಿವೆ! ಎನ್ನುವಲ್ಲಿ ಅವು ಘನವಾಗುತ್ತವೆ. ಕನ್ನಡಿ ಕಳೆಗುಂದಿದ್ದರೂ ಅದು ಉಕ್ಕುವ ಯೌವ್ವನವನ್ನು ಕಾಣಿಸುತ್ತದೆ! ಹೊರಗಿನ ಜಗತ್ತು ಒಡ್ಡುವ ಎಲ್ಲ ಮಿತಿಗಳನ್ನೂ ಮೀರಿ ಹಾರುವ ಚೈತನ್ಯಕ್ಕೆ ಯಾರ ಹಂಗೂ ಇಲ್ಲ. ಅದನ್ನು ಕಾಣುವುದೇ ಕವಿತೆ! ಹಾಲುಗೆನ್ನೆಯ ಹುಡುಗ ಜಗದ ದಂದುಗದಲ್ಲಿ ಕಳೆದರೂ ಅವನ ಈ ಮುಖಗಳು ಮಾತ್ರ ಮತ್ತೆಮತ್ತೆ ಎದುರಾಗುವುದು ಈ ನೆಲದ ವಾಸ್ತವ. ನನ್ನ ಸಾಕ್ಷಾತ್ಕಾರವನ್ನು ಅನ್ಯದ ಮೂಲಕವೂ ಮಾಡಿಕೊಳ್ಳುವ ಈ ಕಾವ್ಯಪ್ರಜ್ಞೆಗೆ ಸಮೂಹದ ಚಹರೆಗಳಿವೆ. ಡಾ.ಗೀತಾ ವಸಂತ, ಕವಿ, ಲೇಖಕಿ
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 10:45 am, Sun, 5 June 22