ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್​ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ

Intercaste Marriage : ಬಂಗಾರುಪೇಟೆಯ ನಾರಾಯಣಸ್ವಾಮಿ ಕೆಜಿಎಫ್​ನ ಶಾಂತಮ್ಮ ಬೇರೆಬೇರೆ ಜಾತಿಗೆ ಸೇರಿದ್ದರೂ ವಿಧಿ ಕ್ಯಾಸಂಬಳ್ಳಿಯಲ್ಲಿ ಒಂದುಗೂಡಿಸಿತು. ನನ್ನ ತಂದೆಯ ಮನೆಯವರು ತಾಯಿಯನ್ನು ಐದು ಮಕ್ಕಳಾಗುವವರೆಗೆ ಮನೆಗೆ ಸೇರಿಸಲಿಲ್ಲ. ಚಿಕ್ಕವಯಸ್ಸಿನಲ್ಲೇ ನಾನು ತಾರತಮ್ಯ ಅನುಭವಿಸಿದೆ.

ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್​ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ
ಶಕುಂತಲಾ ಅವರ ತಂದೆ ನಾರಾಯಣಸ್ವಾಮಿ ಮತ್ತು ತಾಯಿ ಶಾಂತಮ್ಮ
Follow us
ಶ್ರೀದೇವಿ ಕಳಸದ
|

Updated on: May 22, 2022 | 5:39 PM

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನಾನು ಸ್ವತಂತ್ರ ಭಾರತದ ಶಿಶು. ನಾನು ಜನಿಸಿದ ನಾಲ್ಕು ತಿಂಗಳ ನಂತರ ದೇಶ ಬ್ರಿಟಿಷರಿಂದ ಸ್ವತಂತ್ರಗೊಂಡಿತು. ನನ್ನ ಹಿಂದಿನ ಹಿಂದಿನ ಪೀಳಿಗೆಯ ಹೆಣ್ಣುಮಕ್ಕಳಂತೆ ನನಗೆ ಹೆಚ್ಚಿನ ನಿರ್ಬಂಧಗಳಾಗಲಿ, ಸಂಕೋಲೆಗಳಾಗಲಿ ಇರಲಿಲ್ಲ. ಅಂತೆಯೇ ಇಂದಿನ ಹೆಣ್ಣು ಮಕ್ಕಳಿಗಿರುವಷ್ಟು ಅವಕಾಶಗಳೂ, ಆರ್ಥಿಕ ಸ್ವಾತಂತ್ರ್ಯ, ಸಮಾನತೆ ಏನೊಂದೂ ಇರಲಿಲ್ಲ. 1947 ಮತ್ತು 1960ರಲ್ಲಿ ಹುಟ್ಟಿಬೆಳೆದ ಹೆಣ್ಣುಮಕ್ಕಳದು ಒಂದು ಬಗೆಯ ತ್ರಿಶಂಕು ಸ್ವರ್ಗ. ಅತ್ತ ಅವರ ಅಜ್ಜಿ ತಾಯಿಯರಿಗಿದ್ದಂಥ ಶೃಂಖಲೆಗಳಿರಲಿಲ್ಲ. ಇತ್ತ ಇಂದಿನ ಹೆಣ್ಣುಮಕ್ಕಳಿಗಿರುವಂತೆ ಧೈರ್ಯ ಸಾಹಸ ಪ್ರವೃತ್ತಿ, ಅವಕಾಶಗಳೂ ಇರಲಿಲ್ಲ. ಲಿಂಗ ತಾರತಮ್ಯವಂತೂ ಹುಟ್ಟಿನಿಂದಲೇ ಇತ್ತು. ಹೆಣ್ಣಿನ ಜೀವನವೆಂದರೆ ಒಂದಷ್ಟು ಹೈಸ್ಕೂಲ್ ಅಥವಾ ಡಿಗ್ರಿ ಓದುವುದು, ಹೆಚ್ಚಿನ ಕುಟುಂಬಗಳಲ್ಲಿ ಮದುವೆಯಾಗುವುದು ಅಥವಾ ಹೆಣ್ಣಿಗೆ ಸೇಫ್ ಎನ್ನಿಸುವಂಥ ಶಾಲಾ ಶಿಕ್ಷಕಿ, ನರ್ಸ್, ಆಫೀಸ್ ಕ್ಲರ್ಕ್ ಇಂತಹ ಕೆಲಸಗಳಿಗೆ ಹೋಗುವುದು. ಅಪವಾದವೆಂದರೆ ಸುಶಿಕ್ಷಿತ, ಶ್ರೀಮಂತ ಕುಟುಂಬದ ಹಲವು ಹೆಣ್ಣುಮಕ್ಕಳು ಹೆಚ್ಚಿನ ವ್ಯಾಸಂಗ ಅಂದರೆ ವೈದ್ಯೆ, ಕಾಲೇಜು ಲೆಕ್ಚರರ್, ತೀರಾ ಕಡಿಮೆ ಸಂಖ್ಯೆಯಲ್ಲಿ ವಿಜ್ಞಾನಿ ವೃತ್ತಿಗಿಳಿಯುತಿದ್ದರು. ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 1)

(ಬಾಲ್ಯ 1947-1956)

ಇದನ್ನೂ ಓದಿ
Image
Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ
Image
ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ
Image
ನಾನೆಂಬ ಪರಿಮಳದ ಹಾದಿಯಲಿ: ಬ್ರಹ್ಮಾಂಡಕ್ಕೇ ಕಾವು ಕೊಟ್ಟೆ!
Image
ನಾನೆಂಬ ಪರಿಮಳದ ಹಾದಿಯಲಿ: ನನ್ನನ್ನು ನಾನು ಹುಡುಕಿಕೊಂಡಿದ್ದು ಅಕ್ಷರಗಳ ಮೂಲಕ…

ನನ್ನ ತಂದೆ ನಾರಾಯಣ ಸ್ವಾಮಿ ಬಂಗಾರುಪೇಟೆಯಂಥ ಸಣ್ಣ ಊರಿನಲ್ಲಿ ಹುಟ್ಟಿದ್ದರೂ ಅವರ ಮನೆಯವರು ಅವರನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಕಾಲೇಜಿನಲ್ಲಿ ಓದಲು ಕಳುಸಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದರಿಂದ ಅಂದಿನ ಮೈಸೂರು ಸರ್ಕಾರದಲ್ಲಿ ಅಮಲ್ದಾರ್ ಆಗಿ ಸೇರಿದರು. ಅವರು ಹಲವಾರು ಹಳ್ಳಿಗಳಿಗೆ ಅಮಲ್ದಾರ್ ಅಧಿಕಾರಿ. ಅವರ ಕ್ಷೇತ್ರ ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳಾಗಿದ್ದವು. ಅವರು ತುಂಬಾ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಆಹಾರ ವಿತರಣೆ ಅವರ ಸುಪರ್ದಿಯಲ್ಲಿದ್ದರೂ ಅವರ ಮನೆಯವರಿಗೂ ಸರ್ಕಾರದ ನಿಯಮಕ್ಕಿಂತ ಒಂದು ಕಾಳು ಹೆಚ್ಚಿಗೆ ಕೊಡುತ್ತಿರಲಿಲ್ಲ. ಇದೇ ನಿಯಮಬದ್ದ ಜೀವನವನ್ನು ಅವರು ಮುಂದೆ ಆದಾಯ ತೆರಿಗೆ ಆಫೀಸಿಗೆ ಸೇರಿದಾಗಲೂ ಪಾಲಿಸಿಕೊಂಡು ಬಂದರು. ನಾನು ಮತ್ತು ಟ್ರೆಷರಿ ಆಫೀಸಿನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಂಗಿ ಇಬ್ಬರೂ ಲಂಚದಿಂದ ದೂರವಿದ್ದು ಪ್ರಾಮಾಣಿಕವಾಗಿ ಬದುಕಿದೆವು.

ನನ್ನ ತಾಯಿಯನ್ನು ಮದುವೆ ಆಗುವ ಮೊದಲೇ ನನ್ನ ತಂದೆಗೆ ಮದುವೆಯಾಗಿ, ಒಬ್ಬ ಮಗಳು ಹುಟ್ಟಿ, ಮೊದಲನೇ ಹೆಂಡತಿ ಕ್ಷಯರೋಗದಿಂದ ತೀರಿಕೊಂಡೂ ಆಗಿತ್ತು. ನನ್ನಮ್ಮ ಕೆಜಿಎಫ್​ನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ತಾಯಿಗಳ ಆರು ಮಕ್ಕಳಲ್ಲಿ ನಮ್ಮಮ್ಮನೇ ಹಿರಿಯಳು. ನಮ್ಮಜ್ಜಿ ನನ್ನ ತಾತನ ಎರಡನೇ ಹೆಂಡತಿಯಾಗಿದ್ದು, ಗಂಡನಿಂದ ಹಣಕಾಸಿನ ಸಹಾಯ ಅಷ್ಟಾಗಿ ದೊರಕದ ಕಾರಣ ಆಸ್ಪತ್ರೆಯಲ್ಲಿ ಆಯಾ ಆಗಿ ದುಡಿಯಲಾರಾಂಭಿಸಿದರು. ಆದರೆ ತಾನು ಆಯಾ ಆದರೂ ತನ್ನ ಮಕ್ಕಳು ಚೆನ್ನಾಗಿ ಓದಬೇಕೆಂದು ಆಕೆಯ ಧೃಡ ನಿರ್ಧಾರ. ಆಕೆಯ ಐವರು ಹೆಣ್ಣುಮಕ್ಕಳನ್ನು ಬೆಂಗಳೂರಿನಲ್ಲಿ ಹಾಸ್ಟೆಲ್​ನಲ್ಲಿಟ್ಟು ಹೈಸ್ಕೂಲ್​ವರೆಗೆ ಅದೂ ಸುಪ್ರಸಿದ್ದ ಕಾನ್ವೆಂಟ್​ಗಲ್ಲಿ ಓದಿಸಿದರು. ನನ್ನ ತಾಯಿ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮುಗಿದ ತಕ್ಷಣ ನರ್ಸ್ ಟ್ರೇನಿಂಗ್ ಮಾಡಿ ದಾಯಿಯಾಗಿ ಕ್ಯಾಸಂಬಳ್ಳಿಯಲ್ಲಿ ನೇಮಕಗೊಂಡು, ತನ್ನ ಸಂಪಾದನೆಯನ್ನು ಅವರ ತಾಯಿಯ ಕುಟುಂಬ ನಿರ್ವಹಣೆಗೆ ಕೊಡುತಿದ್ದರು.

ವಿಧಿ ಬಂಗಾರುಪೇಟೆಯ ನಾರಾಯಣಸ್ವಾಮಿಯನ್ನೂ ಕೆಜಿಎಫ್​ನ ಶಾಂತಮ್ಮನನ್ನೂ, ಅವರು ಬೇರೆ ಬೇರೆ ಜಾತಿಗೆ ಸೇರಿದ್ದರೂ ಕ್ಯಾಸಂಬಳ್ಳಿಯಲ್ಲಿ ಒಂದುಗೂಡಿಸಿತು. ಇದು ಸುಮಾರು 1946ರಲ್ಲಿ ಆಗಿರಬಹುದೆಂದು ನನ್ನ ಲೆಕ್ಕ. ಯಾಕೆಂದರೆ ನಾನು 1947ರಲ್ಲಿ ಇದೇ ಹಳ್ಳಿಯಲ್ಲಿ ಹುಟ್ಟಿದೆ. ಇಂಥದೊಂದು ಅಂತರ್ಜಾತಿಯ ವಿವಾಹ ಆ ಕಾಲದಲ್ಲಿ ಅತ್ಯಂತ ವಿರಳ ಹಾಗೂ ಕ್ರಾಂತಿಕಾರಿಯಾಗಿತ್ತು. ನನ್ನ ತಂದೆ ಮನೆಯವರಿಗೆ ಈ ವಿವಾಹ ಇಷ್ಟವಾಗಲಿಲ್ಲ. ಮಾತ್ರವಲ್ಲ, ನಮ್ಮ ತಾಯಿಯನ್ನು ಐದು ಮಕ್ಕಳಾಗುವವರೆಗೆ ಅವರು ಮನೆಗೆ ಸೇರಿಸಲಿಲ್ಲ. ಹೀಗೆ ಚಿಕ್ಕವಯಸ್ಸಿನಲ್ಲೇ ನಾನು ತಾರತಮ್ಯ ಅನುಭವಿಸಿದೆ. ನನ್ನ ತಾತ ಮತ್ತು ನನ್ನ ತಂದೆಯ ಸಂಬಂಧಿಕರಿಂದ ದೂರವಿಡಲ್ಪಟ್ಟೆ.

ಇದನ್ನೂ ಓದಿ : ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ

ನನ್ನ ತಂದೆ ಅವರ ಇಡೀ ಕುಟುಂಬದ ಭಾರ ಹೊತ್ತಿದ್ದರು. ಅವರ ತಾಯಿ, ಇಬ್ಬರು ತಮ್ಮಂದಿರು, ಒಬ್ಬ ಮಗಳು ಮತ್ತು ಲೆಕ್ಕವಿಲ್ಲದಿಷ್ಟು ಸಂಬಂಧಿಕರು. ಅವರ ತಮ್ಮಂದಿರಿಬ್ಬರು ಮದುವೆಯಾಗಿ ಬೇರೆಯಾದ ಮೇಲೆ, ಮಹಾರಾಯರು ನನ್ನ ತಾಯಿಯನ್ನು ಕರೆಸಿಕೊಂಡು ಕೋಲಾರದಲ್ಲಿ ಸಂಸಾರ ಹೂಡಿದರು. ಅಷ್ಟರಲ್ಲಾಗಲೇ ಅವರು ಭಾರತ ಸರ್ಕಾರದ ಆದಾಯ ತೆರಿಗೆ ಕಚೇರಿಯಲ್ಲಿ ಕೆಲಸ ಮಾಡುತಿದ್ದರು. ನನ್ನ ತಾಯಿಗೆ ನಾವು ಐದು ಮಕ್ಕಳು – ನಾಲ್ಕು ಹೆಣ್ಣು, ಒಂದು ಗಂಡು, ಆಮೇಲೆ ಇನ್ನೊಬ್ಬ ಗಂಡುಮಗುವಾಯಿತು.

ನನ್ನ ಹುಟ್ಟೂರಿನ ಬಗ್ಗೆ ಕೆಲವು ಆಸಕ್ತಿದಾಯಕ ಅಂಶಗಳಿವೆ. ಕ್ಯಾಸಂಬಳ್ಳಿ ಸುಮಾರು ದೊಡ್ಡದಾದ ಹಳ್ಳಿ. ಮಳೆ ಆಧಾರಿತ ಕೃಷಿಯೇ ಮುಖ್ಯ ಜೀವನೋಪಾಯ. ಆ ಕಾಲದಲ್ಲಿ ನಿರಾವರಿಯೇ. ಬೋರ್​ವೆಲ್​ಗಳ ಹೆಸರೇ ಗೊತ್ತಿಲ್ಲದ ಮಳೆ ಆಧಾರಿತ ವ್ಯವಸಾಯ. ರಾಗಿ, ದನಕ್ಕೆ ಜೋಳ, ಅವರೆ, ತೊಗರಿ, ಸಾಸಿವೆ ಬೆಳೆಯುತ್ತಿದ್ದರು. ಊರಿಗೆ ಹಿರಿಯರೆಂದರೆ ಜಮೀನ್ದಾರರಾದ ಕೆ.ಸಿ. ರೆಡ್ಡಿ ಅವರದು ತುಂಬು ಸಂಸಾರ. ನನ್ನ ತಾಯಿಯೇ ಅವರ ಪತ್ನಿಯಾದ ರುಕ್ಕಮ್ಮನವರ ಹೆರಿಗೆಗಳನ್ನು ಮಾಡುತ್ತಿದ್ದರು. ದೊಡ್ಡ ಬಂಗಲೆ, ತೊಟ್ಟಿಮನೆ, ಸಿನಿಮಾದಲ್ಲಿದ್ದಂತೆ ಮನೆ ಮುಂದೆ ದೊಡ್ಡ ತೋಟ. ಅದರ ಮಧ್ಯ ಮೈಸೂರು ಮಹಾರಾಜರ ವಿಗ್ರಹವಿದ್ದಂತೆ ನೆನಪು. ಅಲ್ಲಿ ತರಹೇವಾರಿ ಹೂವು, ಹಣ್ಣುಗಳು ಬೆಳೆದಿದ್ದವು. ನನಗೆ ನೆನಪಿದ್ದಂತೆ ದಾಳಿಂಬೆ, ಅಂಜೂರ, ಮಾವಿನ ಮರಗಳಿದ್ದವು. ಇದೆಲ್ಲಕ್ಕಿಂತ ಪ್ರಮುಖವಾದ ಅಂಶವೆಂದರೆ ಹಿರಿಯ ರೆಡ್ಡಿಯವರ ತಮ್ಮ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ ರಾಜ್ಯದ ಹಿರಿಯ ಕಾಂಗ್ರೆಸ್ ನೇತಾರರಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡಿದ್ದಲ್ಲದೆ ಮೈಸೂರು ಸಂಸ್ಥಾನದಲ್ಲಿ ರಾಜರ ಆಳ್ವಿಕೆ ಕಳೆದು ಪ್ರಜಾಪ್ರಭುತ್ವ ಬರುವಂತೆ ಹೋರಾಟ ಮಾಡಿದವರು. ಈ ಹಿನ್ನಲೆಯಿಂದಲೇ ಅವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಆಮೇಲೆ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆದರೆ ಅವರು ಹಳ್ಳಿಗೆ ಬರುವುದು, ವಾಸಿಸುತ್ತಿದ್ದದ್ದು ಅಪರೂಪವಾಗಿತ್ತು. ಒಮ್ಮೆ ನನ್ನ ತಾಯಿ ರೆಡ್ಡಿಯವರ ಮನೆಗೆ ಯಾವುದೊ ಕಾರಣಕ್ಕೆ ನನ್ನನ್ನು ಕಳಿಸಿದಾಗ ಅವರು ಅವರ ಬಂಗಲೆಯ ಗೇಟಿನ ಬಳಿ ನಿಂತಿದ್ದರು. ನನ್ನ ಹೆಸರು, ನಾನು ಯಾರ ಮಗಳು ಯಾವ ಕ್ಲಾಸಿನಲ್ಲಿ ಓದುತಿದ್ದೇನೆಂದು ಕೇಳಿದ್ದರು.

ಇಡೀ ಗ್ರಾಮಕ್ಕೆ ಇಬ್ಬರೇ ಸರ್ಕಾರಿ ನೌಕರರು. ಅಮಲ್ದಾರ್ ಆದ ನನ್ನ ತಂದೆ ಮತ್ತು ಸರ್ಕಾರಿ ದಾದಿಯಾದ ನನ್ನ ತಾಯಿ. ಇದು ನಮಗೊಂಥರಾ ಇಡೀ ಹಳ್ಳಿಯಲ್ಲಿ ಪ್ರಾಮುಖ್ಯ ಗಳಿಸಿಕೊಟ್ಟಿತ್ತು. ಹಳ್ಳಿಯವರು ನಾವು ಕೇಳದೆಯೇ ಬೆಳೆದ ರಾಗಿ, ಅವರೆಕಾಯಿ, ತೊಗರಿಬೇಳೆ ಮುಂತಾದವನ್ನು ಮನೆಗೆ ತಂದು ಕೊಡುತ್ತಿದ್ದರು. ನಾನು ರಜೆ ಬಂದರೆ ಕೆಜಿಎಫ್​ನಲ್ಲಿದ್ದ ಅಜ್ಜಿಮನೆಗೆ ಹೋಗುತ್ತಿದ್ದೆ. ಕ್ಯಾಸಂಬಳ್ಳಿ, ಆಂಧ್ರಕ್ಕೆ ಹೊಂದಿಕೊಂಡಿದ್ದ ಕಾರಣ ಇಡೀ ಹಳ್ಳಿ ತೆಲುಗುಮಯ ಮತ್ತು ತೆಲುಗು ಸಂಸ್ಕೃತಿಯ ಗಾಢ ಪ್ರಭಾವವಿದ್ದ ಪ್ರದೇಶ. ನನ್ನ ಮಾತೃಭಾಷೆಯೂ ಅದೇ ಇನಿದಾದ ತೆಲುಗು. ಆದರೆ ಕೆಜಿಎಫ್ ಆ ಕಾಲದಲ್ಲಿ ತಮಿಳು ಕೂಲಿಗಳೇ ಬಹುಸಂಖ್ಯಾತರಿದ್ದ ಕಾರಣ ತಮಿಳಿನಿಂದ ಸಂಪೂರ್ಣ ಆವೃತ. ನನ್ನ ಅಜ್ಜಿಮನೆ ಅಲ್ಲಿ ಇದ್ದುದರಿಂದ, ನಾನು ಪ್ರತಿ ರಜೆಯನ್ನೂ ಅಲ್ಲಿ ಕಳೆಯುತ್ತಿದ್ದರಿಂದ ಸುಲಭವಾಗಿ ತಮಿಳು ಕಲಿತೆ. ಕೆಜಿಎಫ್ ನಿಂದ ಬಸ್ಸಿಳಿದು ಹೊಲದ ನಡುವಿನ ಕಾಲುದಾರಿಯ ಮೂಲಕ ಮನೆಗೆ ಬರುವಾಗ ಚೀಲದ ತುಂಬಾ ಅವರೇಕಾಯಿ, ತೋಗರಿಕಾಯೀ ತುಂಬಿಕೊಂಡು ಬರುತ್ತಿದ್ದೆವು. ಈಗಲೂ ನೆನಸಿಕೊಂಡರೆ ಅವುಗಳ ಸೊಗಡು ಮೂಗಿಗೆ ಬಡಿಯುತ್ತದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು

ನಾನು ಒಂದನೇ ಮತ್ತು ಎರಡನೇ ತರಗತಿಗಳನ್ನು ಕ್ಯಾಸಂಬಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಊರು ತೆಲುಗುಮಯವಾಗಿದ್ದರೂ ವಿದ್ಯಾಭ್ಯಾಸ ಮಾತ್ರ ಕನ್ನಡದಲ್ಲಿ. ಸುಲಭವಾಗಿ ನಾನು ಕನ್ನಡ ಕಲಿತೆ. ಓದಿನಲ್ಲಿ ನಾನು ಜಾಣೆಯಾಗಿದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ಪಾಠಗಳು ನನಗೆ ಕಷ್ಟವಾಗಲಿಲ್ಲ. ಪಾಠಕ್ಕಿಂತ ಹೆಚ್ಚಾಗಿ ನನ್ನನ್ನು ಆಕರ್ಷಿಸುತ್ತಿದ್ದದ್ದು ಕೆಜಿಎಫ್. ಆಗಿನ ಕಾಲಕ್ಕೆ ಇಡೀ ಮೈಸೂರು ಸಂಸ್ಥಾನಕ್ಕೆ ನಾಲ್ಕು ನಗರಗಳಿದ್ದವು: ಮೈಸೂರು, ಬೆಂಗಳೂರು, ದಾವಣಗೆರೆ ಮತ್ತು ಕೆಜಿಎಫ್. ಹಳ್ಳಿಯಲ್ಲಿ ಬೆಳೆದಿದ್ದ ನನಗೆ ಆ ನಗರದ ವಿಶಾಲತೆ, ಬ್ರಿಟಿಷ್ ಅಧಿಕಾರಿಗಳ ಬಂಗಲೆಗಳು, ಸಾಲುಸಾಲು ಅಂಗಡಿಗಳು, ತರಕಾರಿ, ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ, ಚಿನ್ನದ ಗಣಿಗಳಲ್ಲಿ ಮಧ್ಯರಾತ್ರಿ ಸಿಡಿಮದ್ದು ಸಿಡಿದು ಭೂಮಿ ಗಣಿಯ ಆಳದಲ್ಲಿ ಕುಸಿದಾಗ ಕೇಳಿ ಬರುತಿದ್ದ ಸೈರನ್ ಧ್ವನಿ, ಅದರ ಹಿಂದಯೇ ಗಣಿಯ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದ ಕುಟುಂಬದವರ ಆತಂಕ, ಹೆಣಗಳು ಮನೆಗೆ ಬಂದಾಗ ಕೇಳುತಿದ್ದ ಹೃದಯವಿದ್ರಾವಕ ಆಕ್ರಂದನ, ಇವೆಲ್ಲಾ ಭಯವನ್ನು ಹುಟ್ಟಿಸುವಂಥ ಅನುಭವಗಳಾಗಿದ್ದವು. ಎಲ್ಲಕ್ಕಿಂತ ದೊಡ್ಡ ಆಕರ್ಷಣೆ ಎಂದರೆ ಕೆಜಿಎಫ್​ನಲ್ಲಿದ್ದ ಮೂರು ಸಿನಿಮಾ ಮಂದಿರಗಳು. ಅಲ್ಲಿ ಕೇವಲ ತಮಿಳು ಚಿತ್ರಗಳನ್ನು ತೋರಿಸುತಿದ್ದರು. ಎಂಜಿಆರ್, ಶಿವಾಜಿ ಗಣೇಶನ್, ಜೈಮಿನಿ ಗಣೇಶನ್ (ರೇಖಾಳ ತಂದೆ), ಅಂಜಲಿದೇವಿ, ಭಾನುಮತಿ, ಸಾವಿತ್ರಿಯರೇ ನಾನು ನೋಡುತಿದ್ದ ತಾರೆಯರು.

ನಾನು ಮೂರನೇ ತರಗತಿಗೆ ಬಂದಾಗ ನನ್ನ ತಂದೆ ನಮ್ಮನ್ನು ಅಂದರೆ ನನ್ನ ತಾಯಿ, ನಾನು, ನನ್ನ ಇಬ್ಬರು ತಂಗಿಯರಾದ ಕಸ್ತೂರಿ, ವಿಜಯ ಹಾಗೂ ತಮ್ಮ ದಯಾನಂದ ಬಾಬುವಿನೊಂದಿಗೆ ಕೋಲಾರದಲ್ಲಿ ನೆಲೆಸಿದರು. ನನ್ನ ತಾಯಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪೂರ್ಣಪ್ರಮಾಣದಲ್ಲಿ ಗೃಹಿಣಿಯಾದರು. ನಾನು ಹುಟ್ಟಿನಿಂದ ತುಂಬಾ ಸಂಕೋಚ ಪ್ರವೃತ್ತಿಯವಳಾಗಿದ್ದೆ. ಮಾತು ಕಡಿಮೆ, ನಾಚಿಕೆ ಹೆಚ್ಚು. ಓದಿನಲ್ಲಿ ಹೇಗಿದ್ದೆನೋ ಗೊತ್ತಿಲ್ಲ. ಆದರೆ ಪಾಠಗಳೇನೂ ಕಷ್ಟ ಅನ್ನಿಸಲಿಲ್ಲ. ಆದರೆ ಓದಿಗಿಂತ ಕೆಜಿಎಫ್ ಆಕರ್ಷಣೆ ಬಲವಾಗಿತ್ತು. ಕೋಲಾರಕ್ಕೆ ಹೋದ ಮೇಲೆ ನನ್ನ ನಿಜವಾದ ಸ್ವಭಾವ ಅರಳತೊಡಗಿತು. ನನ್ನ ತಂದೆಯಕಠಿಣ ಶಿಸ್ತು, ಬದಲಾದ ನೆರೆಹೊರೆ, ಕೆಜಿಎಫ್​ಗಿಂತ ಹಲವು ವಿಧದಲ್ಲಿ ಮುಂದುವರೆದಿದ್ದ ಕೋಲಾರದ ಪರಿಸರ ಇದಕ್ಕೆ ಕಾರಣವಾದವು.

(ಮುಂದಿನ ಕಥನ : 29.5.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ