Body Shaming ; ಸುಮ್ಮನಿರುವುದು ಹೇಗೆ? : ಮಸಾಜ್ ಮಾಡುವ ಆಕೆ ಆ ದೇಹವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಕೈಮುಗಿದಾಗ…

|

Updated on: Apr 14, 2021 | 3:25 PM

‘ನನ್ನ ನೀನು ಗೆಲ್ಲಲಾರೆ... ಹಾಡಿನ ಕೊನೆಯಲ್ಲಿ ಸಿನೆಮಾದ ನಾಯಕ ತನ್ನ ಶರಟನ್ನು ಬಿಚ್ಚಿದಾಗ ಅದುವರೆವಿಗೂ ಅವನ ಎಲ್ಲಾ ಸವಾಲಿಗೂ ಉತ್ತರ ಕೊಡುತ್ತಿದ್ದ ನಾಯಕಿ ಸ್ತಬ್ಧಳಾಗುತ್ತಾಳೆ. ಹಾಗಾದರೆ ನಾಯಕನಂತೆ ಅವಳೂ ಇಲ್ಲಿ ಮುಜುಗರ ಪಡದೇ ತನ್ನ ಶರಟು ಬಿಚ್ಚಬೇಕಿತ್ತೆ? ಖಂಡಿತಾ ಇಲ್ಲ. ಗಂಡಿರಲಿ ಹೆಣ್ಣಿರಲಿ ತಮ್ಮ ದೇಹ ಇರುವುದು ಪ್ರದರ್ಶನಕ್ಕಾಗಿಯಷ್ಟೇ ಅಲ್ಲ ಎಂಬುದನ್ನು ಅರಿಯಬೇಕಿದೆ. ಹೆಣ್ಣಿನ ಮುಂದೆ ಶರಟು ಬಿಚ್ಚಲು ಗಂಡೂ ಮುಜುಗರ ಪಡಬೇಕು ಆಗಲೇ ಅವನು ಹೆಣ್ಣಿನ ದೇಹವನ್ನೂ ಗೌರವಿಸುವುದು.’ ಎ. ಆರ್. ಶುಭಾ

Body Shaming ; ಸುಮ್ಮನಿರುವುದು ಹೇಗೆ? : ಮಸಾಜ್ ಮಾಡುವ ಆಕೆ ಆ ದೇಹವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಕೈಮುಗಿದಾಗ...
ಲೇಖಕಿ ಎ. ಆರ್​. ಶುಭಾ (ದೇವಯಾನಿ)
Follow us on

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘ಆ ಆತ್ಮವಿಶ್ವಾಸ ಎಷ್ಟರಮಟ್ಟಕ್ಕೆ ಬೆಳೆದಿದೆಯೆಂದರೆ ಜಗದೇಕ ಸುಂದರಿಯರ ನಡುವೆ ನಿಲ್ಲಿಸಿದರೂ ನನ್ನನ್ನು ಯಾವುದೇ ಕೀಳರಿಮೆ ಕಾಡುವುದಿಲ್ಲ ಎಂದು ಹೇಳುವಷ್ಟು!’ ಕವಿ, ಲೇಖಕಿ ಎ.ಆರ್. ಶುಭಾ (ದೇವಯಾನಿ)

ನಾನು ಮೊದಲಿನಿಂದಲೂ ಕಪ್ಪು. ಹಾಲಿನಂಥ ಮೈ ಬಣ್ಣದ ಅಮ್ಮ, ಸಾದಾಗಪ್ಪಿನ ಅಪ್ಪ ಇಬ್ಬರಿಗೂ ಎಂದೂ ನನ್ನ ಬಣ್ಣದ ಬಗ್ಗೆ ತಕರಾರಿರಲಿಲ್ಲ. ಆದರೆ ಆಶ್ಚರ್ಯವೆಂದರೆ ನನಗಿಂತಲೂ ಕಪ್ಪಗಿದ್ದ ನನ್ನ ಚಿಕ್ಕಮ್ಮ ನನ್ನನ್ನು ಏ ಕರ್ಪೀ ಎಂತಲೋ ಕಾಡುಪಾಪ ಅಂತಲೋ ಕರೆಯುತ್ತಿದ್ದುದ್ದು, ತೀರಾ ಚಿಕ್ಕ ವಯಸ್ಸಾದರೂ ಈ ಎರಡೂ ಶಬ್ದಗಳೂ ನನಗೆ ಬಹಳ ಚೆನ್ನಾಗಿ ನೆನಪಿನಲ್ಲಿದೆ. ಆದರೆ ಉಳಿದವರೆಲ್ಲ ಪುಟ್ಟಿ ಎಷ್ಟು ಲಕ್ಷಣವಾಗಿದಾಳೆ ಎನ್ನುತ್ತಿದ್ದುದೂ ಹೌದು. ನಾನು ಎಂಟನೇ ತರಗತಿಗೆ ಬರುವ ಹಿತಗತಿಗೆ ಕಷ್ಟಕಾಲದ ಪರಿಣಾಮ ನನ್ನ ದೊಡ್ಡಮ್ಮನ ಮನೆಯಲ್ಲಿ ಒಂದಷ್ಟು ತಿಂಗಳುಗಳು ಕಳೆಯಬೇಕಾಯ್ತು. ಬೆಳ್ಳಗಿದ್ದ ನನ್ನ ದೊಡ್ಡಮ್ಮನ ಮಗಳು ನನಗಿಂತ ಎರಡು ವರ್ಷ ಚಿಕ್ಕವಳು ದಿನಾ ಅರಿಶಿನ ಹಚ್ಚಿಕೋ ಬೆಳ್ಳಗಾಗ್ತೀಯ ಅಂತ ನನ್ನ ಮುಂಗೈಗೆ ಅರಿಶಿನ ಉಜ್ಜಿ ತೋರಿಸಿದ್ದಳು. ಅರೆ ಇದು ಹಳದಿ ಬಣ್ಣ ಬಿಳಿ ಅಲ್ಲ ಅಂತ ನಾನು ಕೈ ತೊಳೆದುಕೊಂಡಿದ್ದೆ.

ಬಡತನದಲ್ಲಿ ಬೆಳೆದುದಕ್ಕೋ ಅಥವಾ ಅನುವಂಶೀಯತೆಯೋ ಕಾಣೆ ನಾನು ಕಾಲೇಜು ಮೆಟ್ಟಿಲು ಹತ್ತಿದರೂ ಪರವಾಗಿಲ್ಲ ಎನಿಸುವಷ್ಟೂ ದಪ್ಪವಾಗಲಿಲ್ಲ. ಹಾಗಂತ ನಾನು ದುರ್ಬಲವಾಗೇನೂ ಇರಲಿಲ್ಲ. ಒಂದು ಕಿಮೀ ದೂರದ ಬೋರ್​ವೆಲ್​ನಿಂದ ನೀರು ಜಡಿದು ದೆವ್ವದಂತ ಎರಡು ಕೊಡಗಳನ್ನ ತಲೆಯ ಮೇಲೊಂದು ಸೊಂಟದ ಮೇಲೊಂದು ಹೊತ್ತು ತರುತ್ತಿದ್ದೆ. ಸೊಂಟದ ಮೇಲೆ ಕೊಡ ಹೊತ್ತೂ ಹೊತ್ತೂ ಎಡಭಾಗದಲ್ಲಿ ಹಳ್ಳವೇ ಬಿದ್ದು ಹೋಗಿತ್ತೇನೋ ತಿಳಿಯದು. ಮಗಳು ಬಹಳ ತೆಳ್ಳಗಿದಾಳೆ ಎಂದು ಅವರಿವರು ಆಡಿಕೊಳ್ಳುವುದು ಕೇಳಿ ಅಮ್ಮ ಹಾರ್ಮೋನ್ ಇಂಜೆಕ್ಷನ್ ಸಹಾ ಕೊಡಿಸಿದ್ದರೂ ತೂಕ ಮಾತ್ರಾ ಮೂವತ್ತಾರು ಮೂವತ್ತೇಳು ಕೇಜಿಗೆ ನಿಂತಿತ್ತು.

ನಾನು ಇಷ್ಟಪಟ್ಟು ಹಾಕುತ್ತಿದ್ದ ಮುಕ್ಕಾಲು ಕೈಯುದ್ದ ತೋಳಿನ ರವಿಕೆಗಳು ನನ್ನ ಕೆಲವು ಗೆಳತಿಯರಿಗೆ ಕೋಲಿನಂತಹ ನನ್ನ ಕೈಗಳು ಸ್ವಲ್ಪ ಮುಚ್ಚಲಿ ಎಂದು ಹಾಕುತ್ತೇನೆ ಎಂದನಿಸುತ್ತಿತ್ತು. ಡಿಗ್ರಿ ಕಾಲೇಜಿನಲ್ಲಿ ಅದೂ ಕೇವಲ ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಥರಾವರಿ ಬಣ್ಣ, ಗಾತ್ರ, ಉಡುಪಿನ ಹೆಣ್ಣುಮಕ್ಕಳ ಮಧ್ಯೆ ನಾನು ಅದೇ ಹಳೆಯ ಲಂಗ ರವಿಕೆ, ಅಪರೂಪಕ್ಕೆ ಚೂಡಿದಾರ್, ಲಂಗ ದಾವಣಿ ಹಾಕುತ್ತಾ ಓದಿನಲ್ಲಿ, ಎನ್ಎಸ್ಎಸ್​ನಲ್ಲಿ, ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಎಂದು ಸದ್ದು ಮಾಡತೊಡಗಿದಾಗ ಹೆಮ್ಮೆಯಿತ್ತು. ನನಗೆ ನಾನು ಕಪ್ಪು, ಸಣ್ಣ ಎಂದು ಎಂದೂ ಕೀಳರಿಮೆ ಬಾಧಿಸದಿದ್ದರೂ ಸುತ್ತ ಮುತ್ತಲಿನವರು ಆಗಾಗ ತಮಾಷೆ ಮಾಡುವುದನ್ನ ಕೇಳಿ ಆಗಾಗ ಮುಜುಗರವಾಗುತ್ತಿದ್ದುದು ಸುಳ್ಳಲ್ಲ.

ಓದು ಮುಗಿಸಿ ಖಾಸಗಿಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಾಗ ನನ್ನ ಸೀನಿಯರ್ ಒಬ್ಬರು ಯಾವುದೇ ದುರುದ್ದೇಶವಿಲ್ಲದೆ ‘ಎಆರ್​ಎಸ್​ ಮಿಸ್ ಯಾವಾಗ್ಲೂ ಬ್ಯಾಗ್ ತಗುಲಿ ಹಾಕ್ಕೊಳ್ಳೋದು ಯಾಕೆ ಗೊತ್ತಾ? ಫ್ಯಾನ್ ಗಾಳಿಗೆ ಹಾರಿಹೋಗಬಾರದು ಅಂತ’ ಎಂದು ಸ್ಟಾಫ್​ರೂಮ್​ನಲ್ಲಿ ಎಲ್ಲರನ್ನೂ ನಗಿಸುತ್ತಿದ್ದರು. ನನಗೇನು ಅದರಿಂದ ಸಿಟ್ಟು ಬರುತ್ತಿರಲಿಲ್ಲ ಬಿಡಿ. ಇನ್ನು ನಾಡಿಗ್ ಕೈ ಹಿಡಿದು ಮಧ್ಯಪ್ರದೇಶಕ್ಕೆ ಹೋದ ಮೊದಲ ದಿನವನ್ನಂತೂ ಮರೆಯಲೇ ಆಗದು. ನಾಗಪುರದಲ್ಲಿ ನಿಗದಿತ ರೈಲು ತಪ್ಪಿ ಹೋಗಿ ಬೇರೆ ದಾರಿಯಿಲ್ಲದೆ ಮತ್ತೊಂದು ಟ್ರೈನಿನಲ್ಲಿ ಸೀಟು ಸಿಗದಿದ್ದರೂ ಬಾಗಿಲ ಬಳಿ ಕುಳಿತು ಬಿಸಿಗಾಳಿಗೆ ಮುಖವೊಡ್ಡಿ ಚರ್ಮವನ್ನೆಲ್ಲ ಒಡೆದು ಕಪ್ಪಾಗಿಸಿಕೊಂಡು ಮಾನಾಕ್ಯಾಂಪ್ ತಲುಪಿದ್ದು, ನನ್ನನ್ನು ಆ ಅವತಾರದಲ್ಲಿ ನೋಡಿದ ಕೂಡಲೇ ನಾಡಿಗ್ ಹೆಂಡತಿ ಎಂದರೆ ತೆಳ್ಳಗೆ ಬೆಳ್ಳಗೆ ಸುಂದರವಾಗಿ ಇರಬಹುದೆಂದು ಕಲ್ಪಿಸಿಕೊಂಡಿದ್ದ ಪಡೋಸನ್ ಇಭಾ, ಅರೇ… ನಾಡಿಗ್ ಸರ್… ಎಂದು ಅವಾಕ್ಕಾಗಿ ಬಾಯ್ತೆರೆದದ್ದು. ಮರುದಿನ ಮನೆಗೆ ಬಂದ ಝಾ ಮೇಡಂ ತಾವು ತಂದಿದ್ದ ನಸ್ಯ ಬಣ್ಣದ ಸೀರೆಯನ್ನ ಅನುಮಾನಿಸುತ್ತಾ ನನ್ನ ಕೈಗಿತ್ತು, ಅಯ್ಯೋ ನನಗೆ ಮೊದಲೇ ಗೊತ್ತಿದ್ದರೆ ಬೇರೆ ಬಣ್ಣದ್ದು ತರುತ್ತಿದ್ದೆ ಎಂದು ಕಳವಳಿಸಿದ್ದು ಎಲ್ಲವೂ ನೆನಪಿದೆ.

ಸೌಜನ್ಯ : ಅಂತರ್ಜಾಲ

ಸಿಸೇರಿಯನ್ ಆದ ಮೂರನೆಯ ದಿನ ಹೊಟ್ಟೆ ನೋಡಿಕೊಂಡು ಅಯ್ಯೋ ಇದು ಹೀಗೇಕೆ ಇದ್ದಿಲಿನಂತಾಗಿ ಸುಕ್ಕಾಗಿದೆ. ಮತ್ತೆ ಸರಿಹೋಗುತ್ತೋ ಇಲ್ಲವೋ ಎಂದು ಕಳವಳಿಕೆ. ಬಚ್ಚಾ ಬಹುತ್ ಚಮ್ಕೀಲಾ ಹೈ ಶುಭಾ ಕೀ ಬಚ್ಚಾ ನಹೀ ದಿಖ್ತಾ ಎನ್ನುವ ಪಡೋಸನ್​ಗಳ ಮಾತುಗಳಲ್ಲಿ ಮೂದಲಿಕೆಯಿತ್ತೋ, ಅಸೂಯೆಯಿತ್ತೋ ಇವತ್ತಿಗೂ ತಿಳಿಯುತ್ತಿಲ್ಲ. ಆದರೆ ಒಂದಂತೂ ನಿಜ. ಯಾರೇ ಆಗಲಿ ನನ್ನ ದೇಹ, ಬಣ್ಣ, ಉಡುಗೆಯ ಬಗ್ಗೆ ವಕ್ರವಾಗಿ ಮಾತಾಡಲು ಹೊರಟಾಗ ನಾನು ಮುಲಾಜಿಲ್ಲದೆ ಅವರ ಬಾಯಿ ಮುಚ್ಚಿಸುತ್ತೇನೆ. ಎಲ್ಲರಂತೆ ಒಂದಷ್ಟು ಕಾಲ ಬೆಳ್ಳಗೆ ಕಾಣಬೇಕೆಂದು ಫೇರ್ ಅಂಡ್ ಲವ್ಲೀ, ಪಾಂಡ್ಸ್ ಎಂದೆಲ್ಲ ಪ್ರಯತ್ನಿಸಿ ಕೊನೆಗೆ ಅಮ್ಮನ ಸಲಹೆಯಂತೆ ಅಕ್ಕಿಗಂಜಿಯನ್ನು ಮುಖಕ್ಕೆ ಹಚ್ಚಿ ಮೊಡವೆಕಲೆಗಳ ತೊಲಗಿಸಿಕೊಂಡರೂ ಅಯ್ಯೋ ಬಣ್ಣ ಬದಲಾಗಲೇ ಇಲ್ಲ ಎಂದೆನಿಸಿದರೂ ಬಣ್ಣ ತಗೊಂಡು ಏನು ಅರೆದು ಕುಡೀಬೇಕಾ? ಎನ್ನುವ ಅಮ್ಮನ ಮಾತುಗಳಿಂದ ಜ್ಞಾನೋದಯವಾಗಿ ಜೊತೆಗೆ ಒಂದಷ್ಟು ಒಳ್ಳೊಳ್ಳೆಯ ಪುಸ್ತಕಗಳನ್ನ ಓದಿದ್ದರ ಪರಿಣಾಮ ದೇಹ ಸೌಂದರ್ಯಕ್ಕಿಂತಲೂ ಆತ್ಮವಿಶ್ವಾಸ ಮುಖ್ಯ ಎನ್ನುವುದು ಮನದಟ್ಟಾಗಿಹೋಗಿತ್ತು. ಹಾಗಾಗಿ ಇವತ್ತು ಆ ಆತ್ಮವಿಶ್ವಾಸ ಎಷ್ಟರಮಟ್ಟಕ್ಕೆ ಬೆಳೆದಿದೆಯೆಂದರೆ ಜಗದೇಕ ಸುಂದರಿಯರ ನಡುವೆ ನಿಲ್ಲಿಸಿದರೂ ನನ್ನನ್ನು ಯಾವುದೇ ಕೀಳಿರಿಮೆ ಕಾಡುವುದಿಲ್ಲ ಎಂದು ಹೇಳುವಷ್ಟು.

ಬಾಲಕರ ಶಾಲೆಯಲ್ಲಿ ಗಂಡಸರೇ ಹೆಚ್ಚು ತುಂಬಿದ್ದ ಸ್ಟಾಫ್​ರೂಮಿನಲ್ಲಿ ಒಂದಿಬ್ಬರು ಸದಾ ಬೇರೆ ಹೆಂಗಸರ ಬಗ್ಗೆ, ಅವರ ದಪ್ಪ ನಡು, ತೋಳುಗಳ ಬಗ್ಗೆ ಅವರ ಅಲಂಕಾರದ ಬಗ್ಗೆ ಕುಹಕವಾಡುತ್ತಿದ್ದುದನ್ನು ವಿರೋಧಿಸಿದಾಗ, ಆಯಮ್ಮ ಈಯಮ್ಮ ಎಂದು ಏಕವಚನದಲ್ಲಿ ಮಾತನಾಡಿದಾಗಲೆಲ್ಲ ಬೇರೆ ಹೆಂಗಸರ ಬಗ್ಗೆ ಹಗುರಾಗಿ ಮಾತನಾಡಬೇಡಿ ಎಂದು ಕಟುವಾಗಿ ಹೇಳಿ ಸ್ಟಾಫ್​ರೂಮಿನಲ್ಲಿರುವ ಉಳಿದಿಬ್ಬರು ಹೆಂಗಸರೂ ಸುಮ್ಮನಿರುವಾಗ ಇವಳಿಗೇನು ಉಸಾಬರಿ? ಎಂದು ಬಾಯಿ ಮುಚ್ಚಿಸಲು ನೋಡಿದರೂ ನಾನು ಸೊಪ್ಪು ಹಾಕಿರಲೇ ಇಲ್ಲ.

Body Shaming ಒಂದು ಹೆಣ್ಣಿಗೆ ಮುಜುಗರವಾಗುವಂತೆ ಮಾಡಬೇಕಾದರೆ ಅವಳದೇ ದೇಹದ ಬಗ್ಗೆ ಮಾತಾಡಬೇಕೆಂದೇನಿಲ್ಲ. ಅವಳ ಮುಂದೆ ದೇಹದ ಖಾಸಗಿ ಭಾಗಗಳ ಹೆಸರೆತ್ತಿ ಬೇರಾರನ್ನಾದರೂ ಬೈದರಾಯ್ತು. ಹೆಂಗಸರ ಮುಂದೆ ಈ ಇಂಥ ಶಬ್ದಗಳ ಬಳಸಬೇಡಿ ಎಂದು ವಿರೋಧಿಸಿದಾಗ ಒಂದಿಬ್ಬರ ಹೊರತಾಗಿ ಅಲ್ಲಿದ್ದವರೆಲ್ಲಾ ಒಂದಾಗಿ ನನ್ನ ಮೇಲೆ ಜಾತಿ ನಿಂದನೆಯಿಂದ ಆರಂಭಿಸಿ ಅದೇನೇನೋ ಆರೋಪಗಳ ಮಾಡಲು ಹೊರಟು ಕೊನೆಗೂ ‘ಹೆಣ್ಣಿನ’ ಮುಂದೆ ತಮ್ಮ ಯಾವ ಕುತಂತ್ರಗಳೂ ನಡೆಯಲಾರವು ಎಂದು ಅರಿವಾಗಿ ಸುಮ್ಮನಾಗಿದ್ದರೂ ಅಲ್ಲಿದ್ದ ಉಳಿದಿಬ್ಬರು ಹೆಂಗಸರೂ ನಾನೇ ಏನೋ ಅಪರಾಧ ಮಾಡಿದೆ ಎಂದು ನನ್ನಿಂದ ದೂರವಿದ್ದುದು ಎಲ್ಲ ನೆನಪಾದರೆ ಈಗಲು ಅವರುಗಳ ಬಗ್ಗೆ ಸಿಟ್ಟು, ಕನಿಕರ ಎರಡೂ ಬರುತ್ತದೆ.

ಹೆಣ್ಣು ಬರೀ ದೇಹ ಲಕ್ಷಣವಷ್ಟೆ. ಒಳಗಿನ ಆತ್ಮಕ್ಕಾವ ಬೇಧವೂ ಇಲ್ಲ. ದೇಹದಿಂದ ಹೆಣ್ಣನ್ನು ಅಳೆಯುವ, ಮೌಲ್ಯಮಾಪನ ಮಾಡುವ ದರಿದ್ರ ಸಂಪ್ರದಾಯಕ್ಕೆ ಸಂಪೂರ್ಣ ಇತಿಶ್ರೀ ಬಹುಶಃ ಸಾಧ್ಯವೇ ಇಲ್ಲವೇನೊ. ಆದರೆ ಹೆಣ್ಣು ಎಂದಿಗೂ ದೇಹದೊಳಗೆ ಬಂಧಿಯಾಗದೆ ಯೋಚಿಸಿದರೆ ನಡೆದುಕೊಂಡರೆ ಖಂಡಿತಾ ಒಂದಷ್ಟು ಬದಲಾವಣೆಗಳು ಸಾಧ್ಯವಿದೆ. ನನ್ನ ನೀನು ಗೆಲ್ಲಲಾರೆ… ಹಾಡಿನ ಕೊನೆಯಲ್ಲಿ ಸಿನೇಮಾದ ನಾಯಕ ತನ್ನ ಶರಟನ್ನು ಬಿಚ್ಚಿದಾಗ ಅದುವರೆವಿಗೂ ಅವನ ಎಲ್ಲಾ ಸವಾಲಿಗೂ ಉತ್ತರ ಕೊಡುತ್ತಿದ್ದ ನಾಯಕಿ ಸ್ತಬ್ಧಳಾಗುತ್ತಾಳೆ. ಹಾಗಾದರೆ ನಾಯಕನಂತೆ ಅವಳೂ ಇಲ್ಲಿ ಮುಜುಗರ ಪಡದೇ ತನ್ನ ಶರಟು ಬಿಚ್ಚಬೇಕಿತ್ತೆ? ಖಂಡಿತಾ ಇಲ್ಲ. ಗಂಡಿರಲಿ ಹೆಣ್ಣಿರಲಿ ತಮ್ಮ ದೇಹ ಇರುವುದು ಪ್ರದರ್ಶನಕ್ಕಾಗಿಯಷ್ಟೇ ಅಲ್ಲ ಎಂಬುದನ್ನು ಅರಿಯಬೇಕಿದೆ. ಹೆಣ್ಣಿನ ಮುಂದೆ ಶರಟು ಬಿಚ್ಚಲು ಗಂಡೂ ಮುಜುಗರ ಪಡಬೇಕು ಆಗಲೇ ಅವನು ಹೆಣ್ಣಿನ ದೇಹವನ್ನೂ ಗೌರವಿಸುವುದು.

ಗಂಡಿಗೂ ತನ್ನ ದೇಹದ ಬಗ್ಗೆ ಗೌರವ ಇರಬೇಕು. ಅಹಂಕಾರವಿರಬಾರದು. ಹಾಗಾದಾಗಲೇ ಹೆಣ್ಣಿನ ದೇಹದ ಮೇಲೆ, ದೇಹದ ಮೂಲಕ ಮನಸ್ಸಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ನಿಲ್ಲಬಹುದಷ್ಟೆ. ಅನಾರೋಗ್ಯಕ್ಕೆ ಸಿಲುಕಿ ಜರ್ಜರಿತರಾದವರನ್ನ ಒಮ್ಮೆ ಮಾತಾಡಿಸಿ ನೋಡಿ. ದೇಹದ ಬಗೆಗಿನ ಹಮ್ಮು ಕಿಂಚಿತ್ತೂ ಉಳಿದಿರುವುದಿಲ್ಲ ಅವರಲ್ಲಿ. ನರಗಳ ದೌರ್ಬಲ್ಯ, ಮಾಂಸಖಂಡಗಳ ನೋವು ಇತ್ಯಾದಿಗಳಿಂದ ಬಳಲುವ ಜನರಿಗೆ ದಿನವೂ ಆಯಿಲ್ ಮಸಾಜ್ ಮಾಡುತ್ತಾ ಆ ಮೂಲಕ ತನ್ನ ಸಂಸಾರ ಪೊರೆವ ಜೊತೆಗೇ ನೋವಿನಿಂದ ಮುಕ್ತಿ ನೀಡುವ ನನ್ನ ಪರಿಚಯದ ಹೆಣ್ಣೊಬ್ಬಳು ಮಸಾಜ್ ಆರಂಭಿಸುವ ಮುನ್ನ ಅವಳ ಮುಂದಿರುವ ದೇಹ ಹೆಣ್ಣಿನದೋ ಗಂಡಿನದೋ ಎಂಬುದಕ್ಕೆ ಪ್ರಾಮುಖ್ಯತೆ ಕೊಡದೇ ದೇವರೇ, ಕಾಪಾಡು ಎಂದು ಆ ದೇಹವನ್ನು ಮುಟ್ಟಿ ಮೊದಲು ಕಣ್ಣಿಗೊತ್ತಿಕೊಂಡು ನಂತರ ಮಸಾಜ್ ಆರಂಭಿಸುವುದನ್ನು ಕಂಡಾಗ ದೇಹವೆಂಬ ಅಹಂ, ದೌರ್ಬಲ್ಯ ಎಲ್ಲವೂ ಒಂದೇ ಕ್ಷಣದಲ್ಲಿ ತೊಲಗಿ ಹೋಗುತ್ತದೆ. ತೀವ್ರ ನ್ಯೂರೋ ಮಸ್ಕ್ಯೂಲರ್ ಸಮಸ್ಯೆಗೆ ಸಿಲುಕಿ ಅಡಿಯಿಂದ ಮುಡಿಯವರೆಗೆ ನೋವಿನಿಂದ ಜರ್ಜರಿತಳಾಗಿದ್ದ ನನ್ನನ್ನು ಈ ಇಷ್ಟರ ಮಟ್ಟಿಗೆ ಓಡಾಡುವಂತೆ ಮಾಡಿದ ಆಕೆಯ ಬಗ್ಗೆ ಕೃತಜ್ಞತೆ ಸದಾ ಇರುವ ಹಾಗೇ. ಈ ದೇಹ ಎನ್ನುವ ಕ್ಷಣಿಕ ವಸ್ತುವಿನ ಮೇಲಿನ ವ್ಯಾಮೋಹವೂ ತೊಲಗಿಹೋಗಿದೆ.

ಸೌಜನ್ಯ : ಅಂತರ್ಜಾಲ

ಇದು ವೈರಾಗ್ಯದ ಮಾತಲ್ಲ. ಬದುಕಿನ ಸತ್ಯದ ಮಾತು. ದೇಹ ಗಂಡಿನದ್ದಾಗಿರಲಿ, ಹೆಣ್ಣಿನದ್ದಾಗಿರಲಿ ಅದರೊಳಗಿರುವ ಆತ್ಮಕ್ಕಾವ ಲಿಂಗವೂ ಇಲ್ಲ. ಗಂಡಿರಲಿ, ಹೆಣ್ಣಿರಲಿ ದೇಹದ ಬಗ್ಗೆ ಗೌರವವಿರಲಿ, ಕಾಳಜಿಯಿರಲಿ. ಆಗ ಇತರರ ದೇಹ ಶೋಷಣೆ ಖಂಡಿತಾ ನಿಲ್ಲುತ್ತದೆ. ಮಾನವ ಮೂಳೆ ಮಾಂಸದ ತಡಿಕೆ.
ಹೆಣ್ಣುದೇಹ ಕಾಮದ ಆಟಿಕೆಯಲ್ಲ. ಜಗತ್ತಿಗೇ ಜನ್ಮ ಕೊಡುವ ದೇಹ. ಇದನ್ನ ಗಂಡೂ ಅರಿಯಬೇಕಿದೆ. ಹೆಣ್ಣೂ ಅರಿಯಬೇಕಿದೆ. ಕಣ್ಣುಗಳಿಂದ, ಕೈಗಳಿಂದ ಹೆಣ್ಣು ದೇಹವನ್ನು ಹರಿದು ಮುಕ್ಕುವ ರಕ್ಕಸ ಗಂಡುದೇಹಗಳು ಕ್ಷಣ ಕಾಲ ತಮ್ಮದೇ ತಾಯಿ, ತಂಗಿ, ಪತ್ನಿಯ ದೇಹವನ್ನ ಆ ಜಾಗದಲ್ಲಿ ಕಲ್ಪಿಸಿಕೊಳ್ಳಲಿ. ಮನಸ್ಸಿಗಿಂತಾ ದೊಡ್ಡ ನ್ಯಾಯಾಲಯ ಯಾವುದಿದೆ?
*
ಪರಿಚಯ : ದೇವಯಾನಿ ಎಂಬ ಹೆಸರಿನಡಿಯಲ್ಲಿ ಕಾಲೇಜು ದಿನಗಳಿಂದಲೂ ಕಥೆ, ಕವಿತೆಗಳನ್ನು ಬರೆಯುತ್ತಿರುವ ಶುಭಾ ಎ. ಆರ್. ಮೂಲತಃ ಸರ್ಕಾರಿ ಪ್ರೌಢಶಾಲಾ ಗಣಿತ, ವಿಜ್ಞಾನ ಶಿಕ್ಷಕಿಯಾಗಿದ್ದು ಸದ್ಯಕ್ಕೆ ಸಮಗ್ರ ಶಿಕ್ಷಣದಲ್ಲಿ ಬೆಂಗಳೂರು ಉತ್ತರ ವಲಯ-೧ ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರೌಢಶಾಲಾ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪಠ್ಯಪುಸ್ತಕ ಸಂಘದ ಸದಸ್ಯರಾಗಿದ್ದು ವಿಜ್ಞಾನ ಪಠ್ಯಪುಸ್ತಕ, ಅಭ್ಯಾಸ ಪುಸ್ತಕಗಳ ರಚನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಿ ಎಸ್ ಇ ಆರ್ ಟಿ ವತಿಯಿಂದ ಪ್ರಕಟವಾಗಿರುವ NTSE ಪರೀಕ್ಷಾ ರೆಫರೆನ್ಸ್ ಪುಸ್ತಕ, ಆದರ್ಶ ವಿದ್ಯಾಲಯ ಶಿಕ್ಷಕರಿಗಾಗಿ ವಿಜ್ಞಾನ ಸಂಪನ್ಮೂಲ ಪುಸ್ತಕ ಹೀಗೆ ಇಲಾಖೆಯ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಾಲಾ ಮಕ್ಕಳಿಗಾಗಿ ‘ಧರೆಯನುಳಿಸುವ ಬನ್ನಿರಿ’ ಮೂರು ವೈಜ್ಞಾನಿಕ ನಾಟಕಗಳು, ತುಂಡು ಭೂಮಿ- ತುಣುಕು ಆಕಾಶೆಂಬ ಕಥಾ ಸಂಕಲನ, ತುಟಿ ಬೇಲಿ ದಾಟಿದ ನಗು ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದು ಇವರ ಹಲವಾರು ಕಥೆಗಳು, ಕವಿತೆಗಳು ಮತ್ತು ಪ್ರಬಂಧಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ಗೊಬ್ಬರ ಹಾಕಿ ಬೆಳಸಿರಬೇಕಲೇ ಇಕಿ ಗ್ಯಾರಂಟೀ!

Summaniruvudu Hege series on body shaming controversial statement by Dindigul Leoni and response from writer A R Shubha