Aplastic Anemia : ಈ ಯುವ ವೈದ್ಯ ಮೊಹಮ್ಮದ್ ಅನ್ಸರ್ ಪ್ರಾಣವೀಗ ನಿಮ್ಮೆಲ್ಲರ ಕೈಯಲ್ಲಿದೆ

Bone Marrow : ‘ಎರಡು ದಿನಕ್ಕೊಮ್ಮೆ ನನ್ನನ್ನು ರಕ್ತ ವರ್ಗಾವಣೆಗೆ ನನ್ನ ಅಮ್ಮಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಳೆ. ತುರ್ತಾಗಿ ಬೋನ್ ಮ್ಯಾರೋ ಕಸಿಯನ್ನು ಮಾಡಿಸಿಕೊಳ್ಳಬೇಕಿದೆ. ಸದ್ಯ, ನನ್ನ ಸ್ವಂತ ತಮ್ಮನದೇ ಬೋನ್‌ಮ್ಯಾರೋ ಮ್ಯಾಚ್ ಆಗಿದೆ. ನನ್ನಪ್ಪ ಬಡಗಿ, ಅನಕ್ಷರಸ್ಥ. ನನ್ನ ಬೆನ್ನಿಗೆ ನಾಲ್ವರು ಒಡಹುಟ್ಟಿದವರು. ಎಲ್ಲಿಂದ ತರಲಿ 20 ಲಕ್ಷ ರೂಪಾಯಿ’ ಡಾ. ಮೊಹಮ್ಮದ್ ಅನ್ಸರ್

Aplastic Anemia : ಈ ಯುವ ವೈದ್ಯ ಮೊಹಮ್ಮದ್ ಅನ್ಸರ್ ಪ್ರಾಣವೀಗ ನಿಮ್ಮೆಲ್ಲರ ಕೈಯಲ್ಲಿದೆ
Follow us
ಶ್ರೀದೇವಿ ಕಳಸದ
|

Updated on:Dec 19, 2021 | 12:57 PM

Aplastic Anemia : ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಡಗಿಯೊಬ್ಬನ ಮಗ ವೈದ್ಯನಾಗುವ ಕನಸು ಹೊತ್ತು ನಮ್ಮ ಗದಗ ಜಿಲ್ಲೆಯ ಮುಂಡರಗಿಯ ಎಸ್​ಬಿಎಸ್​ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸೇರಿದ. ನಂತರ ಲಕ್ನೋಗೆ ಮರಳಿ ವೈದ್ಯಕೀಯ ಸೇವೆ ಶುರುಮಾಡುವ ಉತ್ಸಾಹದಲ್ಲಿರುವಾಗಲೇ ಜಗತ್ತಿಗೆ ಕೊವಿಡ್ ಅಪ್ಪಳಿಸಿತು. ಹಗಲೂ ರಾತ್ರಿ ರೋಗಿಗಳ ಚಿಕಿತ್ಸೆಯಲ್ಲಿ ಮುಳುಗಿದ. ಪದೇಪದೇ ಬರುವ ಜ್ವರದಿಂದ ಕ್ಷೀಣಿಸುತ್ತ ಹೋದ ಅವನಿಗೆ ಅಪ್ಲಾಸ್ಟಿಕ್ ಅನೀಮಿಯಾ ಎಂಬ ಮಾರಣಾಂತಿಕ ಕಾಯಿಲೆ ಬಂದೆರಗಿರುವುದು ತಿಳಿಯಿತು. ಸದ್ಯ ಲಕ್ನೋದಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಪರಿಸ್ಥಿತಿ ಗಂಭೀರವಾಗಿದೆ. ಅವನ ಅನಕ್ಷರಸ್ಥ ತಾಯಿ, ತಂದೆ ಮತ್ತು ಅವನನ್ನೇ ನಂಬಿದ ನಾಲ್ವರು ಒಡಹುಟ್ಟಿದವರು ಕಂಗಾಲಾಗಿದ್ದಾರೆ. ಬೋನ್ ಮ್ಯಾರೋ (Bone Marrow) ಚಿಕಿತ್ಸೆಗೆ ಸುಮಾರು 20 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಬೆಂಗಳೂರಿನ ವೈದ್ಯರು ತಿಳಿಸಿದ್ದಾರೆ. ದಾನಿಗಳ ಸಹಾಯದಿಂದ ಹಣ ಒಟ್ಟುಗೂಡಿದಲ್ಲಿ ಈ ಯುವಕ ಪ್ರಾಣಾಪಾಯದಿಂದ ಪಾರಾಗಲಿದ್ದಾನೆ.

ಅಮೇಥಿಯ 24 ವರ್ಷದ ಈ ಯುವ ವೈದ್ಯ ಮೊಹಮ್ಮದ್ ಅನ್ಸರ್ (Dr. Mohd Ansar) ನಿವೇದನೆಯನ್ನು ನುಡಿಯಾಗಿಸಿದ್ದಾರೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕಿ ಮೇಘಾ ಎಲಿಗಾರ

*

ನಾನು ಮೊಹಮ್ಮದ್ ಅನ್ಸರ್. ನಮ್ಮೂರು ಉತ್ತರ ಪ್ರದೇಶದ ಅಮೇಥಿ ಬಳಿಯ ಛಾತು ಅನ್ನೋ ಹಳ್ಳಿ. ನಮ್ಮ ಅಪ್ಪಾ ಅಮ್ಮನಿಗೆ ನಾವು ಐದು ಜನ‌‌ ಮಕ್ಕಳು. ನನಗೆ ಬುದ್ಧಿ ಬಂದಾಗಿನಿಂದ ಅಪ್ಪ ಬಡಗಿ ಕೆಲಸ ಮಾಡಿಕೊಂಡು ಇದ್ದಾರೆ. ತಮ್ಮ ಸಣ್ಣ ಆದಾಯದಿಂದ ನಮ್ಮ ದೊಡ್ಡ ಕುಟುಂಬವನ್ನು ನೀಗಿಸೋದು ಅಪ್ಪನಿಗೆ ಎಷ್ಟು ಕಷ್ಟ ಅಂದ್ರೆ ಅವರಿಗೆ ಇಲ್ಲಿಯವರೆಗೂ ತಮ್ಮದೇ ಸ್ವಂತ ಅಂಗಡಿ ತೆಗೆಯೋಕೆ ಸಾಧ್ಯವಾಗಿಲ್ಲ. ನಮ್ಮ ಅಪ್ಪಾ ಅಮ್ಮ ಎಂದೂ ಶಾಲೆಯ ಮುಖ ಕಂಡವರಲ್ಲ, ಅವರಿಗೆ ಓದಿನ ಶಿಕ್ಷಣದ ಮಹತ್ವಾನೂ ಗೊತ್ತಿಲ್ಲ. ನಾನು ಶಾಲೆಗೆ ಹೋಗ್ತಿದ್ದೆನಾ ಇಲ್ಲವಾ ಅಂತಾನೂ ಅವರು ತಲೆ ಕೆಡಿಸಿಕೊಂಡವರಲ್ಲ. ಪಾಪ ಅವರಿಗೆಲ್ಲ ಅರ್ಥಾನೂ ಆಗಲ್ಲ.

ಆದರೆ ಸಣ್ಣ ವಯಸ್ಸಿನಿಂದಾನೂ ನಾನು ಓದಿನಲ್ಲಿ ಚೂಟಿ, ನಮ್ಮ ಇಡೀ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರಲ್ಲಿ ನಾನೇ ಮೊದಲಿಗ. ಚೆನ್ನಾಗಿ ಓದುತ್ತಿದ್ದೆ ಎಂಬ ಕಾರಣಕ್ಕೆ ಚಿಕ್ಕಪ್ಪ ನನ್ನ ಓದಿಗೆ ನೆರವಾದರು. ದೂರದ ಕರ್ನಾಟಕಕ್ಕೆ ಕಳುಹಿಸಲು ನನ್ನ ಖರ್ಚು ವೆಚ್ಚವನ್ನು ನೀಡಲು ಒಪ್ಪಿಗೆ ಕೊಟ್ಟರು. ಆಗಲೂ ಅಮ್ಮನಿಗೆ ನಾನು ಡಾಕ್ಟರ್ ಆಗ್ತೀನಿ ಅನ್ನೋ‌ ಖುಷಿಗಿಂತ ನಾನೂ ಅಷ್ಟು ದೂರ ಹೋಗ್ತಿನಲ್ಲ‌ ಅನ್ನೋ ದುಃಖನೇ ಹೆಚ್ಚಾಗಿತ್ತು. ಆಗ ಆಕೆಗೆ ನಾನು ತಲೆ‌ ಕೆಡಸ್ಕೋಬೇಡ ಅಮ್ಮಿ ಇನ್ನಾ ಐದು ವರ್ಷದಲ್ಲಿ ನಾನು ಡಾಕ್ಟರ್ ಆಗಿ ಬರ್ತೀನಿ, ಆಗ ನೀನು ಡಾಕ್ಟರ್ ಅಮ್ಮಿ ಅಂತ ಕರೆಸಿಕೊಳ್ತಿ. ನೀನೇ ನನ್ನ ದವಾಖಾನೆಗೆ ಬಂದು ‘ದರ್ಬಾರು’ ನಡೆಸುವಿಯಂತೆ ಅಂತ ಹೇಳಿಬಂದಿದ್ದೆ.

Support Dr Mohd Ansar Recover From Aplastic Anemia

ಅಮ್ಮನಿಗೆ ಹೇಳಿದಂತೆ ಐದು ವರ್ಷದಲ್ಲಿ ‌ಡಾಕ್ಟರ್ ಕೂಡ ಆದೆ. ನಾವು ಡಿಗ್ರಿ ತಗೊಂಡು ಹೊರಗೆ ಬರ್ತಿದ್ದಂಗೆ ಕೊವಿಡ್ ಅಪ್ಪಳಿಸಿತು. ಆಗ ನಾವೆಲ್ಲ ವೈದ್ಯ ವಿದ್ಯಾರ್ಥಿಗಳು ಹಗಲು ರಾತ್ರಿ ಕೆಲಸ ಮಾಡಿ ನಮ್ಮ ಕರ್ತವ್ಯ ನಿಭಾಯಿಸಿದೆವು. ಆಗ ನಮಗೆ ಯಾವಾಗ ವೈರಸ್ ಅಂಟಿಕೊಳ್ಳುತ್ತೋ ಅನ್ನೋ ಆತಂಕದ ಮಧ್ಯೆಯೇ ಕೊವಿಡ್‌ಅನ್ನು ಗೆದ್ದೆವು. ಕೆಲವು ತಿಂಗಳ ಹಿಂದೆ ನನಗೆ ಪದೇಪದೇ ಜ್ವರ ಕಾಡಲಾರಂಭಿಸಿತು. ಆಸ್ಪತ್ರೆಯಲ್ಲೇ ಸಾಕಷ್ಟು ಸಮಯ ಇರ್ತಿದ್ದ ನಾನು ಎಲ್ಲಾ ತರಹದ ಸೋಂಕಿಗೆ ತೆರೆದುಕೊಂಡವನಾಗಿದ್ದರಿಂದ ಜ್ವರ ಎಲ್ಲಾ ಮಾಮೂಲಿ ಅಂತಾನೇ ಅಂದುಕೊಂಡಿದ್ದೆ. ಆದರೆ ಏಕಾಏಕಿ ವಿಪರೀತ ಸುಸ್ತಾಗತೊಡಗಿತು.‌

ಅನುಮಾನದಿಂದ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ ನನಗೆ ಅಪ್ಲಾಸ್ಟಿಕ್ ಅನಿಮೀಯ (Aplastic Anemia) ಇರುವುದು ಖಾತ್ರಿಯಾಯಿತು. ಅಂದರೆ ನನ್ನ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಸೆಲ್‌ಗಳು ಇಲ್ಲ. ಈಗ ಕೂಡಲೇ ನಾನು ಬೋನ್ ಮ್ಯಾರೋ (Bone Marrow) ಕಸಿ ಮಾಡಿಸಿಕೊಳ್ಳಬೇಕು. ವೈದ್ಯನಾಗಿ ನೋಡಿದಾಗ ನನಗೆ ಇದು ಅಸಂಭವಲ್ಲ ಅನ್ನುವುದು ಗೊತ್ತಿದೆ, ದೇವರ ದಯೆಯಿಂದ ನನ್ನ ಸ್ವಂತ ತಮ್ಮನದೇ ಬೋನ್‌ಮ್ಯಾರೋ ಮ್ಯಾಚ್ ಕೂಡ ಆಗುತ್ತಿದೆ. ಆದರೆ ಇದೊಂದು ಭಯಂಕರ ದುಬಾರಿ ಪ್ರಕ್ರಿಯೆ. ಸುಮಾರು ಇಪ್ಪತ್ತು ಲಕ್ಷ ಖರ್ಚಾಗುತ್ತದೆ, ನಾನೇ ದೊಡ್ಡವನಾಗಿದ್ದರಿಂದ ಇನ್ನೂ ನಾಲ್ಕು ಜನರನ್ನು ಓದಿಸುವ ಬೆಳೆಸುವ ಜವಾಬ್ದಾರಿ ನನ್ನ ಮೇಲಿದೆ. ಅಪ್ಪಾ ಕಂಗಾಲಾಗಿದ್ದಾರೆ.‌ ಈಗ ಎರಡು ದಿನಕ್ಕೊಮ್ಮೆ‌ ನನಗೆ ರಕ್ತ ಕೊಡಿಸಲು ಅಮ್ಮಿ ಆಸ್ಪತ್ರೆಗೆ ಬರುತ್ತಾಳೆ. ಅವಳ ಮುಖ ನೋಡಲು ಸಂಕವಾಗುತ್ತದೆ. ಆದರೆ ವೈದ್ಯ ವಿಜ್ಞಾನದ ಮೇಲೆ, ದೇವರ ಮೇಲೆ ನನಗೆ ನಂಬಿಕೆಯಿದೆ, ಎಲ್ಲಾ ಒಳ್ಳೆಯದೇ ಆಗುತ್ತೆ ಎಂಬ ವಿಶ್ವಾಸದಿಂದ ಕಾಯುತ್ತಿದ್ದೇನೆ.

ಬ್ಯಾಂಕ್​ ವಿವರ :

Mohd Ansar and Rajiya Bank of Baroda Branch: CHATHU-UP A/C Number : 47600100000835 IFSC Code: BARB0CHATHU Google Pay : 7054146313

*

ಇದನ್ನೂ ಓದಿ : Covid Diary : ಅಚ್ಚಿಗೂ ಮೊದಲು : ಡಾ. ಎಚ್. ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಇಂದಿನಿಂದ ನಿಮ್ಮ ಓದಿಗೆ 

Published On - 12:22 pm, Sun, 19 December 21