ಚೆನ್ನವೀರ ಕಣವಿ | Chennaveera Kanavi: ನನ್ನೆದುರು ಅವರ ‘ಕಾಣಿಕೆ’ ಎಂಬ ಸುನೀತವಿದೆ. ನಿಸರ್ಗ ಮತ್ತು ಜೀವನದ ತಾತ್ವಿಕತೆಯನ್ನು ಇದರಲ್ಲಿ ಶೋಧಿಸುತ್ತಿದ್ದಾರೆ. ನಿಸರ್ಗದಲ್ಲಿ ಕ್ರಿಯೆ ಸಹಜವೆನ್ನುವಂತೆ ಕಾಣುತ್ತಿದ್ದರೆ, ಜೀವನದಲ್ಲಿ ನಡೆಸಬೇಕಾದದ್ದು, ಪ್ರಯತ್ನಪೂರ್ವಕವಾದದ್ದು ಎಂಬರ್ಥ ತೋರುತ್ತಿದೆ. ಕಣವಿಯವರು ವ್ಯಕ್ತಿಗಳ ಕುರಿತು ಬರೆದ ಸುನೀತಗಳನ್ನು ಗಮನಿಸಬೇಕು, ಅವರೆಲ್ಲ ಅಪಾರ ಪರಿಶ್ರಮದಿಂದ ಬದುಕನ್ನು ಮಾಗಿಸಿಕೊಂಡವರು. ಮನುಷ್ಯನ ಪ್ರಯತ್ನಶೀಲತೆಯನ್ನು ಯಾವಾಗಲೂ ಒಂದು ಆದರ್ಶವನ್ನಾಗಿ ನಂಬಿದವರು. ಅಂಥ ನಂಬಿಕೆ ಇಲ್ಲೂ ಮುಂದುವರೆದಿದೆ. ಕಾಲ ಉರುಳುತ್ತಿದೆ, ಚಿಕ್ಕೆಗಳು ಬೆಳಕು ಕಾಣಿಸುತ್ತಿವೆ, ಮಣ್ಣ ಸೇರಿದ ಬೀಜ ಮೊಳಕೆಯೊಡೆದು ಹೊರಚಾಚುವುದು, ಚಿಗುರುತ್ತಿರುವ ಮೋಟುಮರ ಕಾಲದ ಸ್ವರೂಪವನ್ನು ತಿಳಿಸುತ್ತಿದೆ. ಇದೆಲ್ಲ ತಂತಾನೇ ಸಹಜವಾಗಿ ನಡೆಯುತ್ತಿದೆ. ನಿಸರ್ಗ ತನಗೆ ತಾನೇ ರೂಪಿಸಿಕೊಂಡ ಸಹಜ ಚಲನೆಯಿದು. ಸೃಷ್ಟಿ ರಹಸ್ಯದ ಗುಣಗಳನ್ನು ಕವಿತೆ ಸೆರೆಹಿಡಿದಿದೆ.
ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ
*
(ಭಾಗ-5)
ನಾಲ್ಕು ಅಂಶಗಳ ಮೂಲಕ ಈ ರಹಸ್ಯವನ್ನು ಈ ಸುನೀತದಲ್ಲಿ ಕಾಣಿಸಲಾಗಿದೆ. ಈ ನಾಲ್ಕರಲ್ಲಿ ಕಾಲವೊಂದೇ ಅಮೂರ್ತವಾದದ್ದು. ಉಳಿದ ಚಿಕ್ಕೆ, ಬೀಜ, ಮೋಟುಮರ ಮೂರ್ತವಾದವುಗಳು. ಇಷ್ಟೆಲ್ಲ ಸ್ಪಷ್ಟಚಿತ್ರಣ ಕೊಟ್ಟ ನಂತರ ದಿಢೀರ್ ಅಂತ ಒಂದು ಪ್ರಶ್ನೆ ಸುನೀತದಲ್ಲಿ ಎದುರಾಗಿದೆ; ‘ಹೊಳೆಯ ದಾಟಿದ ಮೇಲೆ ಕೊಳೆಯ ತೊಳೆವವರಾರು?’ ತೊಳೆವವರು ಯಾರು? ಎಂಬ ಪ್ರಶ್ನೆಯೇ ಹೊಳೆಯು ಕೊಳೆಯಾಗಿರುವುದನ್ನು ತಿಳಿಸುತ್ತಿದೆ. ಇಂಥ ಕೊಳೆಯೊಂದು ಜೀವನದಲ್ಲಿ ಹೇಗೆ ಸೃಷ್ಟಿಯಾಯಿತು? ಇದಕ್ಕೆ ಜೀವನದ ಕುರಿತು ಮನುಷ್ಯ ತಾಳಿದ ಧೋರಣೆಗಳು ಕಾರಣವೆ? ಬದುಕಿನ ಗ್ರಹಿಕೆಗಳು ಯಾಕೆ ಸಂಕುಚಿತವಾದವು? ಈ ಹೊಳೆಯನ್ನು ದಾಟುವವರು ಇನ್ನೂ ಹಲವರಿದ್ದಾರಲ್ಲವೆ? ಹೊಳೆಯನ್ನು ಕೊಳೆಯಾಗಿಸುವ ಹಕ್ಕು ನಮಗೆ ಕೊಟ್ಟವರು ಯಾರು? ಹೀಗೆ ಜೀವನ ಕುರಿತು ತಾತ್ವಿಕ ಜಿಜ್ಞಾಸೆಗೆ ಕವಿತೆ ಎಳೆಯುತ್ತದೆ. ‘ಈಜಿದರೆ ಈಜುವುದು ಹರಿವ ನೀರಿನ ಎದುರು’ ಎಂಬ ಸಾಲು ಸಾಹಸವನ್ನು ಇದಿರುಗೊಳ್ಳುವ ಉತ್ಸಾಹವನ್ನು ಕಾಣಿಸುವುದರ ಜೊತೆಗೆ ಒಂದು ಇಕ್ಕಟ್ಟನ್ನೂ ಕೂಡ ಸೂಚಿಸುತ್ತಿದೆ; ಹರಿವ ನೀರಿನ ಎದುರು ಈಜುವ ಸ್ಥಿತಿ ಬದುಕಿಗೆ ಒದಗಿದೆ. ಇದನ್ನು ನಾವೇ ಸೃಷ್ಟಿಸಿಕೊಂಡದ್ದೊ, ಅಥವಾ ನಿಸರ್ಗವೇ ಕರುಣಿಸಿದ್ದೊ ತಿಳಿಯುತ್ತಿಲ್ಲ. ಒಟ್ಟಾರೆ ಇಂಥದೊಂದು ಸ್ಥಿತಿಯಂತು ನಿರ್ಮಾಣವಾಗಿದೆ.
ಭಾಗ 3 : Chennaveera Kanavi Death: ‘ವ್ಯಕ್ತಿಗೀತೆ’; ಬೇಂದ್ರೆಯವರಿಗೆ ಎಪ್ಪತ್ತು ತುಂಬಿದಾಗ ಕಣವಿಯವರು ಬರೆದ ಧೀಮಂತ ಕವಿತೆ
ಈ ಸವಾಲು ಕಣ್ಣೆದುರು ಇದ್ದಾಗಲೂ ಬದುಕನ್ನು ಭ್ರಮೆಯಾಗಿಸಿಕೊಳ್ಳುತ್ತಿದ್ದೇವೆಯೇ? ಎಂಬ ಅನುಮಾನ ಕೂಡ ಇಲ್ಲಿ ಸುಳಿದಾಡಿದೆ. ‘ಮಾವು ತಳಿತರೆ ಕೋಗಿಲೆಯ ಕುಕಿಲು ಸಾರ್ಥಕ’ ಮಾವು ಮತ್ತು ಕೋಗಿಲೆಯ ನಡುವೆ ಒಂದು ಅವಿನಾಭಾವದ ಸಂಬಂಧವಿದೆಯೆಂದು ನಾವೆಲ್ಲ ಭಾವಿಸಿದ್ದೇವೆ. ಕವಿತೆಯಲ್ಲಿ ಇವೆರಡರ ನಡುವಿನ ಈ ಸಾರ್ಥಕ ಸಂಬಂಧ ನೆಮ್ಮದಿಯ, ಸಂಭ್ರಮದ ಸೂಚನೆಯನ್ನು ನೀಡುತ್ತಿದೆ. ಎಲ್ಲ ಸಂಬಂಧಗಳು ಹೀಗೆ ಸಾರ್ಥಕವಾಗಬೇಕೆಂಬ ಅಭೀಪ್ಸೆಯು ಕವಿತೆಗಿದೆ. ನಿಸರ್ಗದಲ್ಲಿ ಈ ಸಾರ್ಥಕ ಸಂಬಂಧವು ಸಹಜವಾಗಿ ಘಟಿಸಿದರೆ, ಮನುಷ್ಯ ಜೀವನದಲ್ಲಿ ಇದು ಪ್ರಯತ್ನ ಪೂರ್ವಕವಾಗಿ ಆಗಬೇಕಾದದ್ದು ಎಂಬ ನಂಬಿಕೆಯನ್ನು ಕವಿತೆ ಸೂಚಿಸುತ್ತಿದೆ. ಈ ಸೂಚನೆಯೇ ಕವಿತೆಯ ಶಕ್ತಿ.
‘ಹೂವು-ಹಣ್ಣೂ ಗಿಡದ ಎಡೆಬಿಡದ ಕಾಣಿಕೆ
ಸಾವೂ-ನೋವೂ ನಮ್ಮ ದಿನದ ಹೊಂದಾಣಿಕೆ’
ಬಿದ್ದ ಹಣ್ಣೆಲೆಯನ್ನು ಗೊಬ್ಬರವಾಗಿ ಪರಿವರ್ತಿಸಿಕೊಳ್ಳುವ ನಿಸರ್ಗದ ಅರಿವಿನಿಂದ ಕಲಿಯದೆ ಹೋದರೆ ಸಾವು-ನೋವುಗಳೆ ನಮ್ಮ ನಿತ್ಯ ಸಂಗಾತಿಗಳಾಗಿಬಿಡುತ್ತವೇನೋ ನಿಸರ್ಗದ ಪಾಸಿಟಿವ್ ಅಂಶಗಳನ್ನು ಹೇಳುತ್ತಿರುವ ಕವಿತೆ ಬದುಕಿನ ನೆಗೆಟಿವ್ ಅಂಶಗಳನ್ನು ಯಾಕೆ ಇದುರಾಗಿ ಇಡುತ್ತಿದೆಯೋ? ಬಹುಶಃ ಬದುಕನ್ನು ಗಾಜುಗೋಪುರವಾಗಿ ಭಾವಿಸಿಕೊಂಡಿದ್ದುದರ ವ್ಯಂಗ್ಯವಿರಬಹುದೆ? ಕವಿತೆಯ ಸಾಲುಗಳ ನಡುವೆ ಕೊಂಚಮಟ್ಟಿಗೆ ಅಸಂಗತತೆಯು ಇದೆ. ಅಲ್ಲದೆ, ಸಾವು-ನೋವಿನ ಹೊಂದಾಣಿಕೆಯಲ್ಲೆ ದಿನ ದೂಡುತ್ತಿರುವ ಮನುಷ್ಯನ ಕಾಣಿಕೆ ಏನು? ಎಂಬ ಪ್ರಶ್ನೆಯೂ ಕವಿತೆಯ ಒಳಗೆ ಇರುವಂತಿದೆ. ನಿಸರ್ಗದಿಂದ ಕಲಿಯಬೇಕಾದದ್ದು ಅಪಾರವಾಗಿದೆಯೆಂಬ ಎಚ್ಚರವನ್ನು ಕಣವಿಯವರ ಸುನೀತಗಳು ಪ್ರಕಟಿಸುತ್ತಲೇ ಬಂದಿವೆ. ಈ ಎಚ್ಚರ ಪ್ರಸ್ತುತ ಸುನೀತದಲ್ಲೂ ಮುಂದುವರಿದಿದೆ.
*
(ಕೊನೆಯ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 4 : Chennaveera Kanavi Death: ಕಾವ್ಯಕುಶಲಿ ಚೆನ್ನವೀರ ಕಣವಿಯವರಿಗೆ ಸುನೀತಗಳೆಂದರೆ ಇಷ್ಟಾರ್ಥ ಸಿದ್ಧಿಯಂತೆ
ಭಾಗ 2 : Chennaveera Kanavi Death: ‘ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾವಾದಿಗಳೆ; ಹಾದಿಬೀದಿಗಳೆ ಹೇಳುತ್ತಿವೆ ಕಥೆಯ’
ಭಾಗ 1 : Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..